Tuesday, January 5, 2021

ಶಾಸಕರಿಂದ ಹಿಂದೂ ರುದ್ರಭೂಮಿ ಕಬಳಿಸಿ ಬಡಾವಣೆ ನಿರ್ಮಾಣ ಆರೋಪ

ಬಿಜೆಪಿ ನೇತೃತ್ವದಲ್ಲಿ ಗ್ರಾಮಸ್ಥರ ಪ್ರತಿಭಟನೆ : ತೆರವು ಕಾರ್ಯಾಚರಣೆ ಯಶಸ್ವಿ



ಭದ್ರಾವತಿ ಬೊಮ್ಮನಕಟ್ಟೆ ಗ್ರಾಮದಲ್ಲಿ ಹಿಂದೂಗಳಿಗೆ ಮತ್ತು ಕ್ರಿಶ್ಚಿಯನ್ ಸಮುದಾಯದವರಿಗೆ ಸೇರಿದ ಸ್ಮಶಾನ ಜಾಗ ಹಾಗೂ ಲೋಕೋಪಯೋಗಿ ಇಲಾಖೆಗೆ ಸೇರಿದ ಖಾಲಿ ಜಾಗದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಅಕ್ರಮವಾಗಿ ಬಡವಾಣೆ ನಿರ್ಮಿಸಿ ಮುಸ್ಲಿಂ ಸಮುದಾಯದವರಿಗೆ ವಿತರಿಸಲು ಹುನ್ನಾರ ನಡೆಸುತ್ತಿದ್ದಾರೆಂದು ಆರೋಪಿಸಿ ಮಂಗಳವಾರ ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಗು ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.
    ಭದ್ರಾವತಿ, ಜ. ೫: ಹಿಂದೂಗಳಿಗೆ ಮತ್ತು ಕ್ರಿಶ್ಚಿಯನ್ ಸಮುದಾಯದವರಿಗೆ ಸೇರಿದ ಸ್ಮಶಾನ ಜಾಗ ಹಾಗೂ ಲೋಕೋಪಯೋಗಿ ಇಲಾಖೆಗೆ ಸೇರಿದ ಖಾಲಿ ಜಾಗದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಅಕ್ರಮವಾಗಿ ಬಡವಾಣೆ ನಿರ್ಮಿಸಿ ಮುಸ್ಲಿಂ ಸಮುದಾಯದವರಿಗೆ ವಿತರಿಸಲು ಹುನ್ನಾರ ನಡೆಸುತ್ತಿದ್ದಾರೆಂದು ಆರೋಪಿಸಿ ಮಂಗಳವಾರ ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಗು ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
    ಮುಸ್ಲಿಂ ಸಮುದಾಯದವರು ಹೆಚ್ಚಾಗಿರುವ ನಗರಸಭೆ ವ್ಯಾಪ್ತಿಯ ಬೊಮ್ಮನಕಟ್ಟೆಯಲ್ಲಿ ಶಾಸಕರ ಹೆಸರಿನಲ್ಲಿ ಬಡಾವಣೆ ನಿರ್ಮಿಸಲಾಗುತ್ತಿದ್ದು, ಹಿಂದೂಗಳಿಗೆ ಸೇರಿದ ೧ ಎಕರೆ ೨೦ ಗುಂಟೆ ವಿಸ್ತೀರ್ಣ ಹೊಂದಿರುವ ರುದ್ರಭೂಮಿ ಹಾಗು ಕ್ರಿಶ್ಚಿಯನ್ ಸಮುದಾಯದವರಿಗೆ ಸೇರಿದ ಸ್ಮಶಾನ ಭೂಮಿ ಮತ್ತು ಲೋಕೋಪಯೋಗಿ ಇಲಾಖೆಗೆ ಸೇರಿದ ಖಾಲಿ ಜಾಗ ಸುಮಾರು ೨ ರಿಂದ ೩ ಎಕರೆ ಜಾಗವನ್ನು ಕಬಳಿಸಲಾಗಿದೆ. ಈ ಬಡಾವಣೆಯಲ್ಲಿ ಮುಸ್ಲಿಂ ಸಮುದಾಯದವರಿಗೆ ನಿವೇಶನ ಹಂಚಲು ಹುನ್ನಾರ ನಡೆಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.


     ಪ್ರತಿಭಟನೆ ತೀವ್ರಗೊಂಡ ಹಿನ್ನಲೆಯಲ್ಲಿ ಸ್ಥಳಕ್ಕೆ ಉಪ ತಹಸೀಲ್ದಾರ್ ಮಲ್ಲಿಕಾರ್ಜುನಯ್ಯ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಬಡಾವಣೆಗಾಗಿ ಕಬಳಿಸಿರುವ ಜಾಗವನ್ನು ತೆರವುಗೊಳಿಸಲಾಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನಚ್ಚರಿಕೆ ಕ್ರಮವಾಗಿ ಹೆಚ್ಚಿನ ಪೊಲೀಸರು ಜಮಾಯಿಸಿದ್ದರು.
    ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಹಿರಿಯೂರು ಹಾಗು  ಬೊಮ್ಮನಕಟ್ಟೆ ಗ್ರಾಮಸ್ಥರು ಭಾಗವಹಿಸಿದ್ದರು.

Monday, January 4, 2021

ಜೈನ ಮುನಿಗಳ ತಂಡ ಅಗಮನ : ಭವ್ಯ ಸ್ವಾಗತ

ಜೈನ ಧರ್ಮ ಗುರುಗಳಾದ ಆಚಾರ್ಯ ಶ್ರೀ ಹೀರಾಚಂದ್ರ ವಿಜಯ್ ಜೀ ನೇತೃತ್ವದ ಜೈನ ಮುನಿಗಳ ತಂಡ ಸೋಮವಾರ ಭದ್ರವತಿ ನಗರಕ್ಕೆ ಆಗಮಿಸಿತು.
      ಭದ್ರಾವತಿ, ಜ. ೪: ಜೈನ ಧರ್ಮ ಗುರುಗಳಾದ ಆಚಾರ್ಯ ಶ್ರೀ ಹೀರಾಚಂದ್ರ ವಿಜಯ್ ಜೀ ನೇತೃತ್ವದ ಜೈನ ಮುನಿಗಳ ತಂಡ ಸೋಮವಾರ ನಗರಕ್ಕೆ ಆಗಮಿಸಿತು.
     ತರೀಕೆರೆ ರಸ್ತೆ ಮಾರ್ಗವಾಗಿ ಆಗಮಿಸಿದ ತಂಡವನ್ನು ಬೆಳಿಗ್ಗೆ ೮ ಗಂಟೆಗೆ ನಗರದ ತರೀಕೆರೆ ರಸ್ತೆಯ ಗಾಂಧಿ ವೃತ್ತದ ಬಳಿ   ಜೈನ ಸಮಾಜದ ವತಿಯಿಂದ ಪ್ರಮುಖರ ನೇತೃತ್ವದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.  ನಂತರ ಹಳೇನಗರದ ರಾಜಬೀದಿಗಳಲ್ಲಿ ಮೆರವಣಿಗೆ ನಡೆದು ಜೈನ ಮಂದಿರಕ್ಕೆ ತಂಡವನ್ನು ಬರಮಾಡಿಕೊಳ್ಳಲಾಯಿತು. ಒಂದು ವಾರಗಳ ಕಾಲ ಧಾರ್ಮಿಕ ಪ್ರವಚನಗಳು ಹಾಗು ಶಿಬಿರಗಳಲ್ಲಿ ಪಾಲ್ಗೊಳ್ಳಲಿದೆ.
    ಮೂಲತಃ ನಗರದ ಪೂರ್ವಶ್ರಮದ ನಿವಾಸಿಗಳಾದ ಮುನಿಶ್ರೀ ರುಷಿಪಾಲ್ ವಿಜಯ್ ಜೀ ಮತ್ತು ಮುನಿಶ್ರೀ ಖಿಮಾರತ್ನ ವಿಜಯ್ ಜೀ ಸಹ ತಂಡದಲ್ಲಿ ಆಗಮಿಸಿದ್ದು, ಈ ಇಬ್ಬರು ನಗರದ ನಿವಾಸಿಗಳಾದ ದಿನೇಶ್ ಕುಮಾರ್ ಜೈನ್ ಹಾಗು ರಾಚೋಲ್ ಜೈನ್ ದಂಪತಿ ಪುತ್ರರಾಗಿದ್ದು, ಈ ಹಿಂದೆ ನಗರಕ್ಕೆ ಆಗಮಿಸಿದ್ದ ಆಚಾರ್ಯ ಶ್ರೀ ಹೀರಾಚಂದ್ರ ವಿಜಯ್ ಜೀ ರವರ ಧಾರ್ಮಿಕ ಪ್ರವಚನದಿಂದ ಪ್ರಭಾವಿತರಾಗಿ ಸನ್ಯಾಸ ಧೀಕ್ಷೆ ಪಡೆದು ದೇಶದಾದ್ಯಂತ ಧರ್ಮ ಪ್ರಚಾರ ಕೈಗೊಂಡು ಇದೇ ಪ್ರಥಮ ಬಾರಿಗೆ ನಗರಕ್ಕೆ ಆಗಮಿಸಿರುವುದು ವಿಶೇಷವಾಗಿದೆ.



ಮದ್ಯದಂಗಡಿಯೊಂದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ : ನಗರಸಭೆ ಮುಂಭಾಗ ಅನಿಧಿಷ್ಟಾವಧಿ ಧರಣಿ ಸತ್ಯಾಗ್ರಹ

ಕರ್ನಾಟಕ ಜನಸೈನ ವತಿಯಿಂದ ಭದ್ರಾವತಿ ನಗರಸಭೆ ಮುಂಭಾಗ ಸೋಮವಾರದಿಂದ ಅನಿಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ.
    ಭದ್ರಾವತಿ, ಜ. ೪: ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಮದ್ಯದಂಗಡಿಯೊಂದರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವುದು, ನಗರದ ಚನ್ನಗಿರಿ ರಸ್ತೆಯಲ್ಲಿ ಅನಧಿಕೃತವಾಗಿ ಬಸ್ ನಿಲ್ದಾಣಗಳನ್ನು ನೆಲಸಮಗೊಳಿಸಿರುವುದು ಹಾಗು ಹಿರೇಕೆರೆ ಜಾಗದಲ್ಲಿ ಸೆಪ್ ಟ್ಯಾಂಕ್ ನಿರ್ಮಾಣ ಮಾಡಿರುವುದನ್ನು ವಿರೋಧಿಸಿ ಕರ್ನಾಟಕ ಜನಸೈನ ವತಿಯಿಂದ ನಗರಸಭೆ ಮುಂಭಾಗ ಸೋಮವಾರದಿಂದ ಅನಿಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ.
     ಜನ್ನಾಪುರ ಶ್ರೀ ಅಂತರಘಟ್ಟಮ್ಮ ದೇವಸ್ಥಾನದ ಸಮೀಪದಲ್ಲಿರುವ ಶ್ರೀ ಅನ್ನಪೂರ್ಣೇಶ್ವರಿ ವೈನ್ ಸ್ಟೋರ್ ಕಾನೂನು ನಿಯಮಗಳನ್ನು ಉಲ್ಲಂಘಿಸಿ ಮದ್ಯ ಮಾರಾಟದಲ್ಲಿ ತೊಡಗಿದೆ. ಇದರಿಂದಾಗಿ ದೇವಸ್ಥಾನಕ್ಕೆ ಬರುವ ಭಕ್ತಾಧಿಗಳಿಗೆ, ಮುಂಭಾಗದ ರಸ್ತೆಯಲ್ಲಿ ಸಂಚರಿಸುವ ಮಕ್ಕಳು, ಮಹಿಳೆಯರು, ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಿಗೆ ಹಾಗೂ ಸುತ್ತಮುತ್ತಲಿನ ನಿವಾಸಿಗಳಿಗೆ ತೊಂದರೆಯಾಗಿದೆ. ಈ ಹಿನ್ನಲೆಯಲ್ಲಿ ಈ ಮದ್ಯದಂಗಡಿಯನ್ನು ಸ್ಥಳಾಂತರಿಸುವಂತೆ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಮದ್ಯದಂಗಡಿ ಪಕ್ಕದಲ್ಲಿರುವ ಕಟ್ಟಡದಲ್ಲಿ ಯಾವುದೇ ಪರವಾನಗಿ ಇಲ್ಲದೆ ಕುಡಿಯಲು ಅವಕಾಶ ಕಲ್ಪಿಸಿಕೊಡಲಾಗಿದೆ. ಅಲ್ಲದೆ ಅಕ್ರಮವಾಗಿ ನಲ್ಲಿಗಳ ವ್ಯವಸ್ಥೆ ಮಾಡಲಾಗಿದೆ. ಈ ಕಟ್ಟಡ ಮಾಲೀಕರ ವಿರುದ್ಧ ನಗರಸಭೆ ಆಡಳಿತ ಯಾವುದೇ ಸೂಕ್ತ ಕಾನೂನು ಕ್ರಮ ಕೈಗೊಳ್ಳದೆ ರಾಜಕೀಯ ಒತ್ತಡಕ್ಕೆ ಮಣಿದು ಮೌನವಾಗಿದೆ ಎಂದು ಆರೋಪಿಸಲಾಯಿತು.
    ಸುಮಾರು ೩೦ ವರ್ಷದಿಂದ ನಗರದ ಚನ್ನಗಿರಿ ರಸ್ತೆಯಲ್ಲಿ ೨ ಬಸ್ ನಿಲ್ದಾಣಗಳಿದ್ದು, ಈ ನಿಲ್ದಾಣಗಳಿಂದ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಿದೆ. ಲೋಕೋಪಯೋಗಿ ಇಲಾಖೆಯವರು ರಸ್ತೆ ಅಗಲೀಕರಣ ನೆಪದಲ್ಲಿ ಯಾವುದೇ ಟೆಂಡರ್ ಪ್ರಕ್ರಿಯೆ ನಡೆಸದೆ ಏಕಾಏಕಿ ಈ ಎರಡು ನಿಲ್ದಾಣಗಳನ್ನು ನೆಲಸಮಗೊಳಿಸಿದ್ದಾರೆ. ಈ ಹಿನ್ನಲೆಯಲ್ಲಿ ತಕ್ಷಣ ಬಸ್ ನಿಲ್ದಾಣಗಳನ್ನು ಮರು ನಿರ್ಮಾಣ ಮಾಡಬೇಕು. ತಾಲೂಕಿನ ಹಿರೇಕೆರೆ ಜಾಗದಲ್ಲಿ ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿ ನಿರ್ಮಿಸಲಾಗಿರುವ ಸೆಪ್ ಟ್ಯಾಂಕ್ ತಕ್ಷಣ ತೆರವುಗೊಳಿಸಬೇಕೆಂದು ಆಗ್ರಹಿಸಲಾಯಿತು.
    ಜನಸೈನ್ಯ ಜಿಲ್ಲಾಧ್ಯಕ್ಷ ಕೆ. ಮಂಜುನಾಥ್, ಗೌರವಾಧ್ಯಕ್ಷ ಅನಿಲ್(ಬಾಬು), ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ. ಅನಂತರಾಮು, ತಾಲೂಕು ಅಧ್ಯಕ್ಷ ಪರಮೇಶ್, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಮಹಿಳಾ ಮುಖಂಡರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ನೈಜ ಆರೋಪಿಗಳನ್ನು ಬಂಧಿಸಿ ಅಮಾಯಕರನ್ನು ತಕ್ಷಣ ಬಿಡುಗಡೆಗೊಳಿಸಿ

ಪಾಕಿಸ್ತಾನದ ಪರ ಘೋಷಣೆ ಕೂಗಿದ ನೈಜ ಆರೋಪಿಗಳನ್ನು ಬಂಧಿಸಿ ಅಮಾಯಕರನ್ನು ತಕ್ಷಣ ಬಿಡುಗಡೆಗೊಳಿಸುವ ಜೊತೆಗೆ ಪ್ರಕರಣ ಹಿಂಪಡೆಯುವಂತೆ ಆಗ್ರಹಿಸಿ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಸೋಮವಾರ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
   ಭದ್ರಾವತಿ, ಜ. ೪: ಪಾಕಿಸ್ತಾನದ ಪರ ಘೋಷಣೆ ಕೂಗಿದ ನೈಜ ಆರೋಪಿಗಳನ್ನು ಬಂಧಿಸಿ ಅಮಾಯಕರನ್ನು ತಕ್ಷಣ ಬಿಡುಗಡೆಗೊಳಿಸುವ ಜೊತೆಗೆ ಪ್ರಕರಣ ಹಿಂಪಡೆಯುವಂತೆ ಆಗ್ರಹಿಸಿ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಸೋಮವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
     ಡಿ.೩೦ರಂದು ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶದಂದು ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ ಮತ ಎಣಿಕೆ ಕೇಂದ್ರದ ಹೊರಭಾಗದಲ್ಲಿ ಅಂದು ಎಸ್‌ಡಿಪಿಐ ಕಾರ್ಯಕರ್ತರು ತಮ್ಮ ಪಕ್ಷದ ಪರ ಘೋಷಣೆಗಳನ್ನು ಕೂಗಿದ್ದಾರೆ ಹೊರತು ಪಾಕಿಸ್ತಾನದ ಪರವಾಗಿ ಘೋಷಣೆಗಳನ್ನು ಕೂಗಿಲ್ಲ. ಆದರೂ ಪಾಕಿಸ್ತಾನದ ಪರ ಘೋಷಣೆಯನ್ನು ಕೂಗಲಾಗಿದೆ ಎಂಬ ಆರೋಪದ ಮೇರೆಗೆ ೩ ಮಂದಿ ಅಮಾಯಕರನ್ನು ಬಂಧಿಸಿ ಅವರ ವಿರುದ್ಧ ದೇಶದ್ರೋಹದ ಪ್ರಕರಣ ಹಾಕುವ ಜೊತೆಗೆ ರಾತ್ರೋರಾತ್ರಿ ಮನೆಗಳಿಗೆ ನುಗ್ಗಿ ಬಂಧಿಸಲಾಗಿದೆ. ಇದೀಗ ಬಿಜೆಪಿ ಪಕ್ಷದ ಕಾರ್ಯಕರ್ತರು ಪಾಕಿಸ್ತಾನದ ಪರ ಘೋಷಣೆಳನ್ನು ಕೂಗುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಹಿನ್ನಲೆಯಲ್ಲಿ ನೈಜ ಆರೋಪಿಳನ್ನು ತಕ್ಷಣ ಬಂಧಿಸಬೇಕೆಂದು ಆಗ್ರಹಿಸಲಾಯಿತು.
    ತಕ್ಷಣ ಬಂಧಿಸಿರುವ ಅಮಾಯಕರನ್ನು ಬಿಡುಗಡೆಗೊಳಿಸಿ ಪ್ರಕರಣ ರದ್ದುಗೊಳಿಸಬೇಕು. ಸರ್ಕಾರ ನೊಂದ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಲಾಯಿತು.
   ಎಸ್‌ಡಿಪಿಐ ಜಿಲ್ಲಾ ಸಮಿತಿ ಅಧ್ಯಕ್ಷ ಸಲೀಂ ಖಾನ್, ತಾಲೂಕು ಸಮಿತಿ ಅಧ್ಯಕ್ಷ ಮೊಹಮ್ಮದ್ ತಾಹೀರ್, ಪ್ರಧಾನ ಕಾರ್ಯದರ್ಶಿ ಮೊಹಮದ್ ಗೌಸ್, ಪಾಪುಲರ್ ಫ್ರಂಟ್ ಆಫ್ ಇಂಡಿಯಾ ತಾಲೂಕು ಶಾಖೆ ಅಧ್ಯಕ್ಷ ಸಾಧಿಕ್ ಉಲ್ಲಾ ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.  

ಕೈಗಾರಿಕಾ ಉದ್ದೇಶಕ್ಕೆ ಮೀಸಲಿಟ್ಟ ಕೆರೆ ಜಾಗದಲ್ಲಿ ಅಕ್ರಮ ಬಡಾವಣೆ ನಿರ್ಮಾಣ

ನೈಜತೆ ತಿಳಿಯಲು ಸೂಕ್ತ ತನಿಖೆಗೆ ಆಗ್ರಹಿಸಿ ಮನವಿ

ಭದ್ರಾವತಿ ಸರ್ವೆ ನಂ.೫೭ರ ಸೀಗೆಬಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮುಂಭಾಗದಲ್ಲಿರುವ ಬೆಂಡಿಕಟ್ಟೆ ಕೆರೆ ಜಾಗದಲ್ಲಿ ಹೊಸದಾಗಿ ಬಡಾವಣೆ ನಿರ್ಮಿಸಿರುವುದು.
    ಭದ್ರಾವತಿ, ಜ. ೪: ಕೈಗಾರಿಕಾ ಉದ್ದೇಶಕ್ಕೆ ಬಳಸಿಕೊಳ್ಳಲು ಮಂಜೂರಾತಿಯಾಗಿರುವ ಕೆರೆ ಜಾಗದಲ್ಲಿ ಅಕ್ರಮವಾಗಿ ಬಡಾವಣೆ ನಿರ್ಮಿಸಿ ನಿವೇಶನಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದು, ಈ ಹಿನ್ನಲೆಯಲ್ಲಿ ಇದರ ನೈಜತೆ ಕಂಡುಕೊಳ್ಳಲು ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ವತಿಯಿಂದ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಕೆ.ಸಿ ಪುರಷೋತ್ತಮ್‌ರವರಿಗೆ ಮನವಿ ಸಲ್ಲಿಸಲಾಗಿದೆ.
    ನಗರಸಭೆ ವ್ಯಾಪ್ತಿಯಲ್ಲಿ ಸುಮಾರು ೭೦ ಕೆರೆಗಳಿದ್ದು, ಬಹಳ ವರ್ಷಗಳ ನಂತರ ನಗರಸಭೆ ಪೌರಾಯುಕ್ತ ಮನೋಹರ್‌ರವರು ಕೆರೆಗಳನ್ನು ಅಭಿವೃದ್ಧಿಪಡಿಸುವ ಹಿನ್ನಲೆಯಲ್ಲಿ ತಾಲೂಕು ಆಡಳಿತದೊಂದಿಗೆ ಬೌಂಡರಿ ನಿಗದಿಪಡಿಸುತ್ತಿದ್ದು, ಕೆರೆಗಳ ಪಹಣಿ ಪರಿಶೀಲನೆ ಸಂದರ್ಭದಲ್ಲಿ ಸರ್ವೆ ನಂ.೫೭ರ ಸೀಗೆಬಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮುಂಭಾಗದಲ್ಲಿರುವ ಬೆಂಡಿಕಟ್ಟೆ ಕೆರೆ ಸುಮಾರು ೫ ಎಕರೆ ೧ ಗುಂಟೆ ವಿಸ್ತೀರ್ಣ ಹೊಂದಿರುವುದು ತಿಳಿದು ಬಂದಿದೆ. ಈ ನಡುವೆ ಸುಮಾರು ೩ ಎಕರೆ ಜಾಗವನ್ನು ಕೈಗಾರಿಕಾ ಉದ್ದೇಶಕ್ಕೆ ಬಿಟ್ಟುಕೊಡಲಾಗಿದೆ. ಆದರೆ ಈ ಜಾಗದಲ್ಲಿ ಖಾಸಗಿಯವರು ಬಡಾವಣೆ ನಿರ್ಮಿಸಿ ವಿತರಿಸಲು ಮುಂದಾಗಿದ್ದಾರೆ. ಈ ಹಿನ್ನಲೆಯಲ್ಲಿ ಈ ಜಾಗದ ಕುರಿತು ಸಾರ್ವಜನಿಕರಿಗೆ ದಿಗ್ಬ್ರಮೆ ಉಂಟಾಗಿದೆ. ತಕ್ಷಣ ಸಾರ್ವಜನಿಕರಿಗೆ ಉಂಟಾಗಿರುವ ದಿಗ್ಬ್ರಮೆ ದೂರ ಮಾಡಲು ಸೂಕ್ತ ತನಿಖೆ ಕೈಗೊಂಡು ನೈಜತೆ ತಿಳಿಸಬೇಕಾಗಿದೆ ಎಂದು ಮನವಿ ಮಾಡಲಾಗಿದೆ.
     ಇದೆ ರೀತಿ ಶಿವಮೊಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದು, ಬಡಾವಣೆ ನಿರ್ಮಾಣದ ಬಗ್ಗೆ ನೈಜತೆ ತಿಳಿಯಲು ಸೂಕ್ತ ತನಿಖೆಗೆ ಆಗ್ರಹಿಸಿ ಮನವಿ ಸಲ್ಲಿಸಲಾಗಿದೆ. ಈ ಹಿನ್ನಲೆಯಲ್ಲಿ ಪ್ರಾಧಿಕಾರ ಬಡಾವಣೆ ಮಾಲೀಕರಿಗೆ ನೀಡಿರುವ ತತ್ಕಾಲಿಕ ನಕ್ಷೆ ಅನುಮೋದನೆ ತಡೆಹಿಡಿಯುವಂತೆ ಟ್ರಸ್ಟ್ ಛೇರ‍್ಮನ್, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ಕೋರಿದ್ದಾರೆ.

Sunday, January 3, 2021

ಜ.೪ರಂದು ಜೈನ ಮುನಿಗಳ ತಂಡ ಅಗಮನ

ಮುನಿಶ್ರೀ ರುಷಿಪಾಲ್ ವಿಜಯ್ ಜೀ ಮತ್ತು ಮುನಿಶ್ರೀ ಖಿಮಾರತ್ನ ವಿಜಯ್ ಜೀ
ಭದ್ರಾವತಿ, ಜ. ೩: ಜೈನ ಧರ್ಮ ಗುರುಗಳಾದ ಆಚಾರ್ಯ ಶ್ರೀ ಹೀರಾಚಂದ್ರ ವಿಜಯ್ ಜೀ ನೇತೃತ್ವದ ಜೈನ ಮುನಿಗಳ ತಂಡ ಜ. ೪ ರಂದು ಬೆಳಿಗ್ಗೆ ೮ ಗಂಟೆಗೆ ನಗರಕ್ಕೆ ಆಗಮಿಸಲಿದೆ.
     ತರೀಕೆರೆ ರಸ್ತೆ ಮಾರ್ಗವಾಗಿ ಆಗಮಿಸುತ್ತಿರುವ ತಂಡವನ್ನು ನಗರದ ತರೀಕೆರೆ ರಸ್ತೆಯ ಗಾಂಧಿ ವೃತ್ತದ ಬಳಿ ಜೈನ ಸಮಾಜದ ವತಿಯಿಂದ ಪ್ರಮುಖರ ನೇತೃತ್ವದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಿದ್ದು, ಮೂಲತಃ ನಗರದ ಪೂರ್ವಶ್ರಮದ ನಿವಾಸಿಗಳಾದ ಮುನಿಶ್ರೀ ರುಷಿಪಾಲ್ ವಿಜಯ್ ಜೀ ಮತ್ತು ಮುನಿಶ್ರೀ ಖಿಮಾರತ್ನ ವಿಜಯ್ ಜೀ ಸಹ ತಂಡದಲ್ಲಿ ಆಗಮಿಸುತ್ತಿದ್ದಾರೆ.
    ಈ ಇಬ್ಬರು ನಗರದ ನಿವಾಸಿಗಳಾದ ದಿನೇಶ್ ಕುಮಾರ್ ಜೈನ್ ಹಾಗು ರಾಚೋಲ್ ಜೈನ್ ದಂಪತಿ ಪುತ್ರರಾಗಿದ್ದು, ಈ ಹಿಂದೆ ನಗರಕ್ಕೆ ಆಗಮಿಸಿದ್ದ ಆಚಾರ್ಯ ಶ್ರೀ ಹೀರಾಚಂದ್ರ ವಿಜಯ್ ಜೀ ರವರ ಧಾರ್ಮಿಕ ಪ್ರವಚನದಿಂದ ಪ್ರಭಾವಿತರಾಗಿ ಸನ್ಯಾಸ ಧೀಕ್ಷೆ ಪಡೆದು ದೇಶದಾದ್ಯಂತ ಧರ್ಮ ಪ್ರಚಾರ ಕೈಗೊಂಡು ಇದೇ ಪ್ರಥಮ ಬಾರಿಗೆ ನಗರಕ್ಕೆ ಆಗಮಿಸುತ್ತಿರುವುದು ವಿಶೇಷವಾಗಿದೆ.
     ಹಳೇನಗರದ ರಾಜಬೀದಿಗಳಲ್ಲಿ ಮೆರವಣಿಗೆ ನಡೆಯಲಿದ್ದು, ನಂತರ ಜೈನ ಮಂದಿರಕ್ಕೆ ತಂಡವನ್ನು ಬರಮಾಡಿಕೊಳ್ಳಲಾಗುವುದು.  ಒಂದು ವಾರಗಳ ಕಾಲ ವಾಸ್ತವ್ಯ ಹೂಡುವ ತಂಡ ಧಾರ್ಮಿಕ ಪ್ರವಚನಗಳು ಹಾಗು ಧಾರ್ಮಿಕ ಶಿಬಿರಗಳಲ್ಲಿ ಭಾಗವಹಿಸಲಿದೆ.

ಜ.೧೭ರಂದು ಕ್ಷಿಪ್ರ ಕಾರ್ಯ ಪಡೆ ಘಟಕ ಶಿಲಾನ್ಯಾಸಕ್ಕೆ ಗೃಹ ಸಚಿವ ಅಮಿತ್ ಶಾ

ಸಂಸದ ಬಿ.ವೈ ರಾಘವೇಂದ್ರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ

ಭಾನುವಾರ ಸಂಸದ ಬಿ.ವೈ ರಾಘವೇಂದ್ರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಭದ್ರಾವತಿಯಲ್ಲಿ ಕಾರ್ಯಾರಂಭಗೊಳ್ಳಲಿರುವ ಆರ್‌ಎಎಫ್ ಘಟಕದ ಸ್ಥಳ ಪರಿಶೀಲನೆ ನಡೆಸಿತು.
     ಭದ್ರಾವತಿ, ಜ. ೩: ಶಿವಮೊಗ್ಗ ಜಿಲ್ಲೆಗೆ ಮಂಜೂರಾತಿಯಾಗಿರುವ ಕೇಂದ್ರ ಮೀಸಲು ಪೊಲೀಸ್ ಪಡೆ ವಲಯದ ಕ್ಷಿಪ್ರ ಕಾರ್ಯ ಪಡೆ (ರ‍್ಯಾಪಿಡ್ ಆಕ್ಷನ್ ಪೋರ್ಸ್-ಆರ್‌ಎಎಫ್) ಘಟಕ ನಗರದ ಮಿಲ್ಟ್ರಿಕ್ಯಾಂಪ್ ಹೊಸ ಬುಳ್ಳಾಪುರದಲ್ಲಿ  ಕಾರ್ಯಾರಂಭಗೊಳ್ಳುತ್ತಿದ್ದು, ಈ ಹಿನ್ನಲೆಯಲ್ಲಿ ಜ.೧೭ರಂದು ಘಟಕದ ಶಿಲಾನ್ಯಾಸ ಸಮಾರಂಭ ಹಮ್ಮಿಕೊಳ್ಳಲಾಗಿದೆ.
    ಕೇಂದ್ರ ಗೃಹ ಸಚಿವ ಅಮಿತ್ ಶಾ ಶಿಲಾನ್ಯಾಸ ನೆರವೇರಿಸಲಿದ್ದು, ಈ ಹಿನ್ನಲೆಯಲ್ಲಿ ಭಾನುವಾರ ಸಂಸದ ಬಿ.ವೈ ರಾಘವೇಂದ್ರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿತು. ಈಗಾಗಲೇ ಅನುಮೋದನೆಗೊಂಡಿರುವ ನಕ್ಷೆಯಲ್ಲಿನ ಸ್ಥಳದ ಸುತ್ತಮುತ್ತಲಿನ ಪ್ರದೇಶ ಪರಿಶೀಲನೆ ನಡೆಸಿದ ತಂಡ ಸಮಾರಂಭಕ್ಕೆ ಕೈಗೊಳ್ಳಬೇಕಾಗಿರುವ ಸಿದ್ದತೆಗಳನ್ನು ರೂಪಿಸುವ ಸಂಬಂಧ ಚರ್ಚೆ ನಡೆಸಿತು.
    ಕೇಂದ್ರ ಮೀಸಲು ಪೊಲೀಸ್ ಪಡೆ ಮಹಾನಿರ್ದೇಶಕರಾದ ಮೀನಾ ಮತ್ತು ಸಂಜಯ್, ರಾಜ್ಯ ಪೊಲೀಸ್ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಮಹಾನಿರ್ದೇಶಕ ಪ್ರತಾಪ್‌ರೆಡ್ಡಿ, ಗುಪ್ತದಳ ಇಲಾಖೆ ಮಹಾನಿರ್ದೇಶಕ ದಯಾನಂದ್, ದಾವಣಗೆರೆ ಪೂರ್ವವಲಯ ಪೊಲೀಸ್ ಮಹಾನಿರ್ದೇಶಕ ರವಿ, ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ ಶಾಂತರಾಜು, ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್, ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ, ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಸ್ ಜ್ಯೋತಿ ಪ್ರಕಾಶ್, ಕರ್ನಾಟಕ ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್, ಬಿಜೆಪಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಜಿ. ಧರ್ಮಪ್ರಸಾದ್, ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.