Monday, April 26, 2021

ಅಭ್ಯರ್ಥಿಗಳಿಂದ ಕೊನೆಯ ಕಸರತ್ತು : ಮನೆ ಮನೆ ಮತಯಾಚನೆ

ಭದ್ರಾವತಿ, ಏ. ೨೬: ನಗರಸಭೆ ೩೪ ವಾರ್ಡ್‌ಗಳ ಚುನಾವಣೆ ಹಿನ್ನಲೆಯಲ್ಲಿ ಅಭ್ಯರ್ಥಿಗಳಿಂದ ಸೋಮವಾರ ಮತಯಾಚನೆಯ ಕೊನೆಯ ಕಸರತ್ತು ನಡೆಯಿತು. ಶನಿವಾರ ಮತ್ತು ಭಾನುವಾರ ವೀಕ್ ಎಂಡ್ ಲಾಕ್‌ಡೌನ್ ಹಿನ್ನಲೆಯಲ್ಲಿ ಬಹಿರಂಗ ಪ್ರಚಾರ ನಡೆಸಲು ಸಾಧ್ಯವಾಗಲಿಲ್ಲ. ಈ ನಡುವೆ ಭಾನುವಾರ ಸಂಜೆ ಬಹಿರಂಗ ಪ್ರಚಾರ ಮುಕ್ತಾಯಗೊಂಡಿತು. ಈ ಹಿನ್ನಲೆಯಲ್ಲಿ ಸೋಮವಾರ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು.
      ಬಿ.ಎಚ್ ರಸ್ತೆಗೆ ಹೊಂದಿಕೊಂಡಿರುವ  ಹೆಬ್ಬಂಡಿ ಮತ್ತು ಜೇಡಿಕಟ್ಟೆ ವ್ಯಾಪ್ತಿಯ ವಾರ್ಡ್ ನಂ.೧ರಲ್ಲಿ ಒಟ್ಟು ೩೯೨೧ ಮತದಾರರಿದ್ದು,  ಒಟ್ಟು  ೪ ಮಂದಿ  ಕಣದಲ್ಲಿದ್ದಾರೆ.  ಬಿಜೆಪಿ ಪಕ್ಷದಿಂದ  ಬಿ.ಎಸ್ ಉಮಾವತಿ,  ಕಾಂಗ್ರೆಸ್ ಪಕ್ಷದಿಂದ ಮೀನಾಕ್ಷಿ , ಜೆಡಿಎಸ್ ಪಕ್ಷದಿಂದ ಟಿ. ರೇಖಾ ಹಾಗು ಒಬ್ಬರು ಪಕ್ಷೇತರ ಅಭ್ಯರ್ಥಿ ಸ್ಪರ್ಧೆಯಲ್ಲಿದ್ದಾರೆ. ಈ ವಾರ್ಡ್‌ನಲ್ಲಿ ಕಳೆದ ೨ ಅವಧಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಅವರ ಪುತ್ರ ಎಂ.ಎ ಅಜಿತ್ ಜೆಡಿಎಸ್ ಪಕ್ಷದಿಂದ  ಆಯ್ಕೆಯಾಗಿದ್ದರು.
    ಬಿ.ಎಚ್ ರಸ್ತೆಗೆ ಹೊಂದಿಕೊಂಡಿರುವ ಲೋಯರ್‌ಹುತ್ತಾ ವ್ಯಾಪ್ತಿಯ ವಾರ್ಡ್ ನಂ.೨ರಲ್ಲಿ ಒಟ್ಟು ೩೩೧೮ ಮತದಾರರಿದ್ದು, ಈ ಬಾರಿ ೬ ಮಂದಿ ಚುನಾವಣಾ ಕಣದಲ್ಲಿದ್ದಾರೆ. ಜೆಡಿಎಸ್ ಪಕ್ಷದಿಂದ ನಗರಸಭೆ ಮಾಜಿ ಸದಸ್ಯ ಎಸ್.ಪಿ ಮೋಹನ್‌ರಾವ್ ಈ ಬಾರಿ ತಮ್ಮ ಪತ್ನಿ ಶಾಂತ ಅವರನ್ನು ಜೆಡಿಎಸ್ ಪಕ್ಷದಿಂದ ಕಣಕ್ಕಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಲಿಂಗಾಯಿತ ಸಮುದಾಯದ ಗೀತಾ ರಾಜ್‌ಕುಮಾರ್ ಅವರನ್ನು ಕಣಕ್ಕಿಳಿಸಲಾಗಿದೆ. ಬಿಜೆಪಿ ಪಕ್ಷದಿಂದ ಒಕ್ಕಲಿಗ ಸಮುದಾಯದ ಕೆ. ಲತಾ ಅವರನ್ನು ಕಣಕ್ಕಿಳಿಸಲಾಗಿದೆ. ಈ ವಾರ್ಡ್‌ನಲ್ಲಿ ಕಳೆದ ಬಾರಿ ಕೆಜೆಪಿ ಪಕ್ಷದಿಂದ ಸಹಕಾರಿ ಧುರೀಣ ಕೆ.ಎನ್ ಭೈರಪ್ಪಗೌಡ ಆಯ್ಕೆಯಾಗಿದ್ದರು.
      ವರ್ತಕರು, ತಮಿಳರು, ಗೌಳಿಗರು, ಮುಸ್ಲಿಂ ಸಮುದಾಯದವರು ಹೆಚ್ಚಾಗಿರುವ ಬಿ.ಎಚ್ ರಸ್ತೆ ಎಡ ಮತ್ತು ಮತ್ತು ಬಲಭಾಗ, ಚಾಮೇಗೌಡ ಏರಿಯಾ ವ್ಯಾಪ್ತಿಯನ್ನು ಒಳಗೊಂಡಿರುವ ವಾರ್ಡ್ ನಂ.೩ರಲ್ಲಿ ಒಟ್ಟು ೪೩೬೭ ಮತದಾರರಿದ್ದು, ಈ ಬಾರಿ ಒಟ್ಟು ೯ ಮಂದಿ ಕಣದಲ್ಲಿದ್ದಾರೆ. ಬಿಜೆಪಿ ಪಕ್ಷದ ವತಿಯಿಂದ ಯುವ ಮೋರ್ಚಾ ಕಾರ್ಯದರ್ಶಿ ನಕುಲ್ ಜೆ ರೇವಣಕರ್ ಅವರನ್ನು, ಕಾಂಗ್ರೆಸ್ ಪಕ್ಷದಿಂದ ಈ ಬಾರಿ ಕ್ರಿಶ್ಚಿಯನ್ ಸಮುದಾಯದ ಜಾರ್ಚ್ ಅವರನ್ನು ಕಣಕ್ಕಿಳಿಸಲಾಗಿದೆ. ಜೆಡಿಎಸ್ ಪಕ್ಷದ ವತಿಯಿಂದ ನಗರಸಭೆ ಮಾಜಿ ಉಪಾಧ್ಯಕ್ಷೆ ಬಿ.ಕೆ ದೇವಿಕಾ ಹಾಗು ನಗರಸಭೆ ಮಾಜಿ ಸದಸ್ಯ ರಮೇಶ್ ದಂಪತಿ ಪುತ್ರ ಬಿ.ಆರ್ ಉಮೇಶ್ ಅವರನ್ನು ಕಣಕ್ಕಿಳಿಸಲಾಗಿದೆ. ಪಕ್ಷೇತರ ಅಭ್ಯರ್ಥಿಗಳಾಗಿ ಸ್ನೇಹ ಜೀವಿ ಬಳಗದ ಸದಸ್ಯ ಯೋಗೀಶ್, ಮುಖಂಡ ಸ್ಟೀಲ್‌ಟೌನ್ ರಮೇಶ್, ನವೀನ್‌ಕುಮಾರ್ ಸೇರಿದಂತೆ ೬ ಮಂದಿ ಸ್ಪರ್ಧೆಯಲ್ಲಿದ್ದಾರೆ. ಈ ವಾರ್ಡ್‌ನಲ್ಲಿ ಕಳೆದ ಬಾರಿ ಜೆಡಿಎಸ್ ಪಕ್ಷದಿಂದ ಎಸ್. ಮೀನಾಕ್ಷಿ ಆಯ್ಕೆಯಾಗಿದ್ದರು.
     ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ,  ಗ್ರಾಮದೇವತೆ ಶ್ರೀ ಹಳದಮ್ಮ ದೇವಿ ದೇವಸ್ಥಾನ ಸೇರಿದಂತೆ ಇನ್ನಿತರ ಧಾರ್ಮಿಕ ಪುಣ್ಯ ಕ್ಷೇತ್ರಗಳನ್ನು ಹೊಂದಿರುವ ಕನಕಮಂಟಪ ಮೈದಾನ ವ್ಯಾಪ್ತಿಯ ವಾರ್ಡ್ ನಂ. ೪ರಲ್ಲಿ ಒಟ್ಟು ೪೪೦೯ ಮತದಾರರಿದ್ದು, ೬ ಮಂದಿ ಚುನಾವಣಾ ಕಣದಲ್ಲಿದ್ದಾರೆ.  ಶಾಸಕ ಬಿ ಕೆ ಸಂಗಮೇಶ್ವರ್ ಕುಟುಂಬ ಸಂಬಂಧಿ ಎಚ್. ವಿದ್ಯಾ ಕಾಂಗ್ರೆಸ್ ಪಕ್ಷದಿಂದ, ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ಚನ್ನೇಶ್ ರವರ ಪತ್ನಿ ಅನುಪಮಾ, ಜೆಡಿಎಸ್ ಪಕ್ಷದ ಮುಖಂಡ ಹರೀಶ್ ರವರ ಪತ್ನಿ ಉಷಾ ಜೆಡಿಎಸ್ ಅಭ್ಯರ್ಥಿಯಾಗಿ, ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಗೀತಾ ಬಸವರಾಜ್ ಹಾಗು ಇಬ್ಬರು ಪಕ್ಷೇತರರು ಸ್ಪರ್ಧೆಯಲ್ಲಿದ್ದಾರೆ. ಕಳೆದ ಬಾರಿ ಈ ವಾರ್ಡ್ ನಲ್ಲಿ ಜೆಡಿಎಸ್ ಪಕ್ಷದಿಂದ ಕೆ.ಎನ್ ವಿದ್ಯಾಶ್ರೀ ಆಯ್ಕೆಯಾಗಿದ್ದರು. ಈ ಬಾರಿ ಈ ವಾರ್ಡ್  ಹೆಚ್ಚು ಗಮನ ಸೆಳೆಯುತ್ತಿದ್ದು, ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಕಂಡು ಬರುತ್ತಿದೆ.
      ಮುಸ್ಲಿಂ, ಕುರುಬರು, ಮರಾಠಿಗರು ಹೆಚ್ಚಾಗಿರುವ ಕೋಟೆ ಏರಿಯಾ ವ್ಯಾಪ್ತಿಯ ವಾರ್ಡ್ ನಂ.೫ರಲ್ಲಿ ಒಟ್ಟು ೩೪೦೫ ಮತದಾರರಿದ್ದು, ಈ ಬಾರಿ ಒಟ್ಟು ೬ ಮಂದಿ ಚುನಾವಣಾ ಕಣದಲ್ಲಿದ್ದಾರೆ. ನಗರಸಭೆ ಮಾಜಿ ಅಧ್ಯಕ್ಷೆ ವೈ. ರೇಣುಕಾ ಕಾಂಗ್ರೆಸ್ ಪಕ್ಷದಿಂದ ಕಣದಲ್ಲಿದ್ದು, ಬಿಜೆಪಿ ಪಕ್ಷದಿಂದ ಮುಖಂಡ ಬಿ.ಎಸ್ ನಾರಾಯಣಪ್ಪನವರ ಪತ್ನಿ ಬಿ. ಶಶಿಕಲಾ ಅವರನ್ನು ಕಣಕ್ಕಿಳಿಸಲಾಗಿದೆ. ಹಾಲಿ ನಗರಸಭಾ ಸದಸ್ಯ ಮುರ್ತುಜಾ ಖಾನ್ ತಮ್ಮ ಪತ್ನಿ ತಬಸುಮ್ ಸುಲ್ತಾನ್ ಅವರನ್ನು ಜೆಡಿಎಸ್  ಪಕ್ಷದಿಂದ ಕಣಕ್ಕಿಳಿಸಿದ್ದು, ಆಮ್ ಆದ್ಮಿ ಪಾರ್ಟಿಯಿಂದ ರೇಷ್ಮಬಾನು, ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ವತಿಯಿಂದ ನಸೀಮಾ ಖಾನಂ ಹಾಗು ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಸಹ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ. ಕಳೆದ ಬಾರಿ ಈ ವಾರ್ಡ್‌ನಲ್ಲಿ ಕಾಂಗ್ರೆಸ್ ಪಕ್ಷದಿಂದ ಮುರ್ತುಜಾ ಖಾನ್ ಆಯ್ಕೆಯಾಗಿದ್ದರು.
     ಶ್ರೀಮಂತ ವರ್ಗದವರು ಹೆಚ್ಚಾಗಿ  ವಾಸಿಸುತ್ತಿರುವ ಸಿದ್ಧಾರೂಢ ನಗರ ವ್ಯಾಪ್ತಿಯ ವಾರ್ಡ್ ನಂ.೬ರಲ್ಲಿ  ಒಟ್ಟು ೩೮೭೫ ಮತದಾರರಿದ್ದು, ಒಟ್ಟು ೪ ಮಂದಿ ಚುನಾವಣಾ ಕಣದಲ್ಲಿದ್ದಾರೆ.  ಆರ್‌ಎಸ್‌ಎಸ್ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಎಚ್ ರಾಮಪ್ಪ ಪುತ್ರ, ಬಿಜೆಪಿ  ಮಂಡಲ   ಕಾರ್ಯದರ್ಶಿ ಕೆ.ಆರ್ ಸತೀಶ್ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ, ನಿವೃತ್ತ ಅಧಿಕಾರಿ ರಾಮಕೃಷ್ಣಪ್ಪ ಅವರ ಪುತ್ರ ಆರ್. ಶ್ರೇಯಸ್ ಕಾಂಗ್ರೆಸ್ ಅಭ್ಯರ್ಥಿಯಾಗಿ, ತಾಲೂಕು  ಪಂಚಾಯಿತಿ ಮಾಜಿ ಅಧ್ಯಕ್ಷ  ಚನ್ನಪ್ಪ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಹಾಗು  ಕುವೆಂಪು ಪ್ರವಾಸಿ ವಾಹನ ಚಾಲಕರ ಮತ್ತು ಮಾಲೀಕರ ಸಂಘದ ಡಿ. ರಾಜು  ಅವರ ಪತ್ನಿ ಸುಕನ್ಯಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಯಲ್ಲಿದ್ದಾರೆ. ಕಳೆದ ಬಾರಿ ಈ ವಾರ್ಡ್ ನಲ್ಲಿ ಜೆಡಿಎಸ್ ಪಕ್ಷದಿಂದ  ಶಿವರಾಜ್ ಆಯ್ಕೆಯಾಗಿದ್ದರು.
     ಬಹುತೇಕ ಮುಸ್ಲಿಂ ಸಮುದಾಯದವರು ಹೆಚ್ಚಾಗಿರುವ ದುರ್ಗಿಗುಡಿ ಹಾಗು ಖಲಂದರ್ ನಗರ ವ್ಯಾಪ್ತಿಯ ವಾರ್ಡ್ ನಂ.೭ರಲ್ಲಿ ಒಟ್ಟು ೩೭೦೩ ಮತದಾರರಿದ್ದು, ಈ ಬಾರಿ ೪ ಮಂದಿ ಚುನಾವಣಾ ಕಣದಲ್ಲಿದ್ದಾರೆ. ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರ, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಪುತ್ರ ಬಿ.ಎಂ ಮಂಜುನಾಥ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಸಲಾಗಿದೆ. ಈ ಹಿನ್ನಲೆಯಲ್ಲಿ ಈ ವಾರ್ಡ್ ಹೆಚ್ಚು ಗಮನ ಸೆಳೆಯುತ್ತಿದೆ. ಹಾಲಿ ನಗರಸಭಾ ಸದಸ್ಯ ಶಿವರಾಜ್ ತಮ್ಮ ಪತ್ನಿ ಎಂ. ರೇಣುಕರನ್ನು, ಬಿಜೆಪಿ ಪಕ್ಷದಿಂದ  ಆಟೋ ಮೂರ್ತಿ ಅವರನ್ನು ಹಾಗು , ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ವತಿಯಿಂದ ದೇವೇಂದ್ರ ಪಾಟೀಲ್ ಅವರನ್ನು ಕಣಕ್ಕಿಳಿಸಲಾಗಿದೆ. ಕಳೆದ ಬಾರಿ ಈ ವಾರ್ಡ್‌ನಲ್ಲಿ ಟಿಪ್ಪು ಸುಲ್ತಾನ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದರು.

ಶಾಂತಿಯುತ ಮತದಾನಕ್ಕೆ ನಾವಿದ್ದೇವೆ : ಪೊಲೀಸ್ ಇಲಾಖೆಯಿಂದ ಜಾಗೃತಿ

ನಗರದ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ


ಭದ್ರಾವತಿ ನಗರಸಭೆ ೩೪ ವಾರ್ಡ್‌ಗಳ ಚುನಾವಣೆ ಹಿನ್ನಲೆಯಲ್ಲಿ ಸೋಮವಾರ ಸಂಜೆ ಪೊಲೀಸ್ ಇಲಾಖೆ ವತಿಯಿಂದ ಶಾಂತಿಯುತ ಮತದಾನ ಕುರಿತು ಜಾಗೃತಿ ಮೂಡಿಸಲು ನಗರದ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ ನಡೆಸಲಾಯಿತು.
    ಭದ್ರಾವತಿ, ಏ. ೨೬:  ನಗರಸಭೆ ೩೪ ವಾರ್ಡ್‌ಗಳ ಚುನಾವಣೆ ಹಿನ್ನಲೆಯಲ್ಲಿ ಸೋಮವಾರ ಸಂಜೆ ಪೊಲೀಸ್ ಇಲಾಖೆ ವತಿಯಿಂದ ಶಾಂತಿಯುತ ಮತದಾನ ಕುರಿತು ಜಾಗೃತಿ ಮೂಡಿಸಲು ನಗರದ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ ನಡೆಸಲಾಯಿತು.
     ಮತಗಟ್ಟೆಗಳಿಗೆ ಮತದಾರರು ನಿರ್ಭೀತಿಯಿಂದ ಆಗಮಿಸುವ ಜೊತೆಗೆ ಮಾಸ್ಕ್, ಸ್ಯಾನಿಟೈಜರ್ ಬಳಕೆ, ಸಾಮಾಜಿಕ ಅಂತರ ಸೇರಿದಂತೆ  ಕೋವಿಡ್ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಮತದಾನ ಯಶಸ್ವಿಗೊಳಿಸುವಂತೆ ಇಲಾಖೆ ವತಿಯಿಂದ ಮನವಿ ಮಾಡಲಾಯಿತು.    
        ಚುನಾವಣಾ ಹಿನ್ನಲೆಯಲ್ಲಿ ಭದ್ರತೆಗಾಗಿ ೨-ಡಿವೈಎಸ್‌ಪಿ,  ೪-ಸರ್ಕಲ್ ಇನ್ಸ್‌ಪೆಕ್ಟರ್, ೧೬-ಸಬ್ ಇನ್ಸ್‌ಪೆಕ್ಟರ್, ೩೭-ಎಎಸ್‌ಐ ಮತ್ತು ೨೩೧-ಪೊಲೀಸ್ ಕಾನ್ಸ್‌ಟೇಬಲ್‌ಗಳನ್ನು  ನಿಯೋಜಿಸಲಾಗಿದೆ.



ಕೊರೋನಾ ೨ನೇ ಅಲೆ ಭೀತಿ ನಡುವೆ ೩೪ ವಾರ್ಡ್‌ಗಳ ಮತದಾನಕ್ಕೆ ಕ್ಷಣಗಣನೆ

ಮಸ್ಟರಿಂಗ್ ಕೇಂದ್ರಗಳಿಂದ ನಿಯೋಜನೆಗೊಂಡ ಮತಗಟ್ಟೆಗಳಿಗೆ ತೆರಳಿದ ಅಧಿಕಾರಿಗಳು-ಸಿಬ್ಬಂದಿಗಳು


ಮಂಗಳವಾರ ನಡೆಯಲಿರುವ ಭದ್ರಾವತಿ ನಗರಸಭೆ ಚುನಾವಣೆ ಹಿನ್ನಲೆಯಲ್ಲಿ ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಚುನಾವಣಾ ಮಸ್ಟರಿಂಗ್ ಕೇಂದ್ರದಲ್ಲಿ ಅಧಿಕಾರಿಗಳು-ಸಿಬ್ಬಂದಿಗಳನ್ನು ಮತಗಟ್ಟೆಗಳಿಗೆ ಕರೆದೊಯ್ಯಲು ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ನಿಯೋಜನೆಗೊಳಿಸಿರುವುದು.
     ಭದ್ರಾವತಿ, ಏ. ೨೬: ರಾಜ್ಯಾದ್ಯಂತ ಕೊರೋನಾ ೨ನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಒಂದೆಡೆ ರಾಜ್ಯ ಸರ್ಕಾರ ಏ.೨೭ರ ರಾತ್ರಿಯಿಂದ ಕರ್ಪ್ಯೂ ಜಾರಿಗೊಳಿಸಿ ಆದೇಶಿಸಿದೆ. ಮತ್ತೊಂದೆಡೆ ಚುನಾವಣಾ ಆಯೋಗ ಹಲವು ಸವಾಲುಗಳೊಂದಿಗೆ ಸ್ಥಳೀಯ ಸಂಸ್ಥೆಗಳ ಚನಾವಣೆ ಮತದಾನವನ್ನು ಯಶಸ್ವಿಯಾಗಿ ನಡೆಸಲು ಸಿದ್ದತೆಗಳನ್ನು ಕೈಗೊಂಡಿದೆ. ಈ ಬಾರಿ ನಗರಸಭೆ ೩೫ ವಾರ್ಡ್‌ಗಳ ಪೈಕಿ ೩೪ ವಾರ್ಡ್‌ಗಳಿಗೆ ಚುನಾವಣೆ ನಡೆಯುತ್ತಿದ್ದು, ಅಭ್ಯರ್ಥಿಯೊಬ್ಬರು ನಿಧನ ಹೊಂದಿರುವ ಹಿನ್ನಲೆಯಲ್ಲಿ ಒಂದು ವಾರ್ಡಿನ ಚುನಾವಣೆ ರದ್ದಾಗಿದೆ.
     ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಚುನಾವಣಾ ಮಸ್ಟರಿಂಗ್ ಕೇಂದ್ರದಲ್ಲಿ ಈ ಕುರಿತು ಮಾಹಿತಿ ನೀಡಿದ ಚುನಾವಣಾ ನೋಡಲ್ ಅಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್, ಈ ಬಾರಿ ಚುನಾವಣೆಯಲ್ಲಿ ಒಟ್ಟು ೧,೨೬,೬೧೩ ಮಂದಿ ಮತದಾನದ ಹಕ್ಕು ಹೊಂದಿದ್ದಾರೆ. ಈ ಪೈಕಿ ೬೧,೩೫೫ ಪುರುಷ ಹಾಗು ೬೫,೨೫೮ ಮಹಿಳಾ ಮತದಾರರಿದ್ದು, ೨ ಹೆಚ್ಚುವರಿ ಮತಗಟ್ಟೆಗಳು ಸೇರಿದಂತೆ ಒಟ್ಟು ೧೩೯ ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಸುಮಾರು ೬೦೦ ಮಂದಿ ಚುನಾವಣಾ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲಿದ್ದು, ಒಂದು ಮತಗಟ್ಟೆಗೆ ತಲಾ ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನು ಹಾಗು ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳಿಗೆ ಅಗತ್ಯವಿರುವಷ್ಟು ಸಿಬ್ಬಂದಿಗಳನ್ನು ನಿಯೋಜನೆಗೊಳಿಸಲಾಗಿದೆ. ವಿವಿಧ ರಾಜಕೀಯ ಪಕ್ಷಗಳು ಸೇರಿದಂತೆ ಸಾರ್ವಜನಿಕರು ಶಾಂತಿಯುತ ಮತದಾನಕ್ಕೆ ಸಹಕರಿಸುವಂತೆ ಹಾಗು ಸರ್ಕಾರದ ಆದೇಶದಂತೆ ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಮನವಿ ಮಾಡಿದರು. ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಉಪಸ್ಥಿತರಿದ್ದರು.
           ಅಭ್ಯರ್ಥಿಗಳಲ್ಲಿ ಆತಂಕ:
    ರಾಜ್ಯ ಸರ್ಕಾರ ಮಂಗಳವಾರ ರಾತ್ರಿಯಿಂದ ಕರ್ಪ್ಯೂ ಜಾರಿಗೊಳಿಸಿ ಆದೇಶ ಹೊರಡಿಸಿದ ಹಿನ್ನಲೆಯಲ್ಲಿ ಕೆಲ ಸಮಯ ಅಭ್ಯರ್ಥಿಗಳಲ್ಲಿ ಚುನಾವಣೆ ಮುಂದೂಡುವ ಆತಂಕ ಕಂಡು ಬಂದಿತು.  ಅಲ್ಲದೆ ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ಮಂಗಳವಾರ ನಡೆಯಬೇಕಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡಲಾಗಿದೆ ಎಂಬ ಸುದ್ದಿಯಿಂದಾಗಿ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದರು. ಕೆಲ ಸಮಯದ ನಂತರ ಜಿಲ್ಲಾಧಿಕಾರಿಗಳು ಚುನಾವಣೆ ನಡೆಯುವ ಬಗ್ಗೆ ಸ್ಪಷ್ಟನೆ ಹೊರಡಿಸಿದ ಹಿನ್ನಲೆಯಲ್ಲಿ ಆತಂಕದಿಂದ ಅಭ್ಯರ್ಥಿಗಳು ನಿರಾಳರಾಗಿದ್ದು, ಮತದಾರರನ್ನು ಸೆಳೆಯಲು ಕೊನೆ ಕ್ಷಣದ ತಂತ್ರಗಾರಿಕೆಗಳಿಗೆ ಮೊರೆ ಹೋಗಿದ್ದಾರೆ.
       ಚುನಾವಣಾ ಅಧಿಕಾರಿಗಳು-ಸಿಬ್ಬಂದಿಗಳಿಗೂ ಗೊಂದಲ:
    ಪ್ರಸ್ತುತ ಪರಿಸ್ಥಿತಿಯಲ್ಲಿ ಸರ್ಕಾರ ಕೈಗೊಳ್ಳುತ್ತಿರುವ ತಕ್ಷಣದ ತೀರ್ಮಾನಗಳಿಗೆ ತಕ್ಕಂತೆ ಅಧಿಕಾರಿಗಳು-ಸಿಬ್ಬಂದಿಗಳು ಬದಲಾವಣೆಗೊಂಡು ಗೊಂದಲದಲ್ಲಿ ಕರ್ತವ್ಯ ನಿರ್ವಹಿಸುವಂತಾಗಿದೆ. ಅಲ್ಲದೆ ಕೊರೋನಾ ೨ನೇ ಅಲೆ ಆತಂಕ ಸಹ ಅಧಿಕಾರಿಗಳು-ಸಿಬ್ಬಂದಿಗಳನ್ನು ಕಾಡುತ್ತಿದ್ದು, ಆದರೂ ಸಹ  ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಕರ್ತವ್ಯ ನಿರ್ವಹಿಸಲು ಮುಂದಾಗಿದ್ದಾರೆ.

Sunday, April 25, 2021

ಎಚ್.ಎಂ ಮಹೇಶ್ವರಪ್ಪ ನಿಧನ

ಎಚ್.ಎಂ ಮಹೇಶ್ವರಪ್ಪ
   ಭದ್ರಾವತಿ,  ಏ. ೨೫: ತಾಲೂಕಿನ ಅರಬಿಳಚಿ ಗ್ರಾಮದ ಹಿರಿಯ ಮುಖಂಡರಾದ ಎಚ್.ಎಂ ಮಹೇಶ್ವರಪ್ಪ(೭೮) ಭಾನುವಾರ ಮಧ್ಯಾಹ್ನ ನಿಧನ ಹೊಂದಿದರು.
   ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾಗಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು,  ಪತ್ನಿ ಹಾಗು ಅರಬಿಳಚಿ ಗ್ರಾಮ ಪಂಚಾಯಿತಿ ಸದಸ್ಯ ಎಚ್.ಎಂ ಸದಾಶಿವ ಸೇರಿದಂತೆ ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಹೊಂದಿದ್ದರು. ಮೃತರ ಅಂತ್ಯಕ್ರಿಯೆ ಏ.೨೬ರ ಮಧ್ಯಾಹ್ನ ೧೨ ಗಂಟೆಗೆ ನಡೆಯಲಿದೆ.
   ಮಹೇಶ್ವರಪ್ಪ ಮಾಜಿ ಸಚಿವ ದಿವಂಗತ ಬಸವಣ್ಯಪ್ಪನವರ ಆಪ್ತರಲ್ಲಿ ಒಬ್ಬರಾಗಿದ್ದರು. ಇವರ ನಿಧನಕ್ಕೆ ಗ್ರಾಮಸ್ಥರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಗಣ್ಯರು ಸಂತಾಪ ಸೂಚಿಸಿದ್ದಾರೆ.

ಲಾಕ್‌ಡೌನ್ ನಡುವೆಯೂ ಅಭ್ಯರ್ಥಿಗಳಿಂದ ಬಿರುಸಿನ ಮನೆ ಮನೆ ಪ್ರಚಾರ : ಪಕ್ಷೇತರ ಅಭ್ಯರ್ಥಿ ಬಿಜೆಪಿಗೆ ಸೇರ್ಪಡೆ

ನಗರಸಭೆ ವಾರ್ಡ್ ನಂ.೩ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸ್ನೇಹ ಜೀವಿ ಬಳಗದ ಸದಸ್ಯ ಎಸ್ ಯೋಗೀಶ್ ಭಾನುವಾರ ಬಿಜೆಪಿ ಪಕ್ಷಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪನವರ ಸಮ್ಮುಖದಲ್ಲಿ ಸೇರ್ಪಡೆಗೊಂಡರು.
   ಭದ್ರಾವತಿ, ಏ. ೨೫: ಕೊರೋನಾ ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ರಾಜ್ಯಾದ್ಯಂತ ಜಾರಿಗೊಳಿಸಿರುವ ವೀಕ್ ಎಂಡ್ ಲಾಕ್‌ಡೌನ್‌ಗೆ ಭಾನುವಾರ ಸಹ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಹುತೇಕ ಮಂದಿ ಹೊರಬರದೆ ಮನೆಯಲ್ಲಿಯೇ ಉಳಿದುಕೊಂಡಿರುವುದು ಕಂಡು ಬಂದಿತು. ಈ ನಡುವೆ ನಗರಸಭೆ ಚುನಾವಣೆ ಹಿನ್ನಲೆಯಲ್ಲಿ ವಿವಿಧ ವಾರ್ಡ್‌ಗಳಲ್ಲಿ ಅಭ್ಯರ್ಥಿಗಳು ಸರಳವಾಗಿ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು.
   ಎಲ್ಲಾ ಜಾತಿ ಸಮುದಾಯದವರು ನೆಲೆನಿಂತಿರುವ, ಇತ್ತೀಚಿನ ಕೆಲವು ವರ್ಷಗಳಿಂದ ವಾಣಿಜ್ಯ ಬಡಾವಣೆಯಾಗಿ ಕಂಗೊಳಿಸಿರುವ ಜನ್ನಾಪುರ ವ್ಯಾಪ್ತಿಯ ವಾರ್ಡ್ ನಂ.೩೨ರಲ್ಲಿ ಒಟ್ಟು ೪೨೫೨ ಮತದಾರರಿದ್ದು, ಈ ಬಾರಿ ಒಟ್ಟು ೫ ಮಂದಿ ಚುನಾವಣಾ ಕಣದಲ್ಲಿದ್ದಾರೆ.
    ಗುತ್ತಿಗೆದಾರ ಎಸ್. ಹರೀಶ್‌ರವರ ಅತ್ತಿಗೆ ಎಸ್.ಆರ್ ಲತಾ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಈ ಭಾಗದಲ್ಲಿ ಚಿರಪರಿಚಿತರಾಗಿದ್ದಾರೆ. ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರೊಂದಿಗೆ ಗುರುತಿಸಿಕೊಂಡಿದ್ದ ಮುಖಂಡ ಉಮೇಶ್‌ರವರು ತಮ್ಮ ಪತ್ನಿ ಸವಿತಾ ಅವರನ್ನು ಜೆಡಿಎಸ್ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದಾರೆ. ಬಿಜೆಪಿ ಸಕ್ರಿಯ ಕಾರ್ಯಕರ್ತರಾಗಿ ಪ್ರಸ್ತುತ ರೈತ ಮೋರ್ಚಾ ಜಿಲ್ಲಾ ಕಾರ್ಯದರ್ಶಿಯಾಗಿರುವ ಚಂದ್ರಪ್ಪ ತಮ್ಮ ಪತ್ನಿ ಕೆ. ಸರಸ್ವತಮ್ಮ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದಾರೆ. ವಿವಿಧ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಜನತಾದಳ(ಸಂಯುಕ್ತ) ಕರ್ನಾಟಕ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಗೌಡ ತಮ್ಮ ಪತ್ನಿ ದಿವ್ಯಶ್ರೀ ಅವರನ್ನು ಜೆಡಿಯು ಬೆಂಬಲಿತ ಪಕ್ಷೇತರ ಅಭ್ಯರ್ಥಿಯನ್ನಾಗಿ ಹಾಗು ಸ್ನೇಹಜೀವಿ ಬಳಗದ ಸದಸ್ಯೆ, ಸಮಾಜ ಸೇವಕ ಪೊಲೀಸ್ ಉಮೇಶ್‌ರವರ ಅತ್ತಿಗೆ ಲತಾ ಸತೀಶ್ ಅವರನ್ನು ಪಕ್ಷೇತರ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗಿದೆ. ಎಲ್ಲಾ ಅಭ್ಯರ್ಥಿಗಳ ನಡುವೆ ಪ್ರಬಲ ಪೈಪೋಟಿ ಕಂಡು ಬರುತ್ತಿದ್ದು, ಅಭ್ಯರ್ಥಿಗಳು ಬಿರುಸಿನ ಮತಯಾಚನೆಯಲ್ಲಿ ತೊಡಗಿದ್ದಾರೆ. ಈ ವಾರ್ಡ್‌ನಲ್ಲಿ ಈ ಹಿಂದೆ ಎರಡು ಬಾರಿ ಜೆಡಿಎಸ್ ಪಕ್ಷದಿಂದ ದಿವಂಗತ ಜಿ.ಡಿ ನಟರಾಜ್ ಆಯ್ಕೆಯಾಗಿದ್ದರು.
     ಪರಿಶಿಷ್ಟ ಜಾತಿ, ದಲಿತರು, ಒಕ್ಕಲಿಗರು, ಕುರುಬ ಸಮುದಾಯದವರು ಹೆಚ್ಚಾಗಿರುವ, ವಿಐಎಸ್‌ಎಲ್ ವಸತಿಗೃಹಗಳ ಕೊನೆಯ ಭಾಗದಲ್ಲಿರುವ ಜಿಂಕ್‌ಲೈನ್ ಕೊಳಚೆ ಪ್ರದೇಶ ಒಳಗೊಂಡಿರುವ ವಾರ್ಡ್ ನಂ.೩೧ರಲ್ಲಿ ಒಟ್ಟು ೩೭೦೪ ಮತದಾರರಿದ್ದು, ಈ ಬಾರಿ ಒಟ್ಟು ೪ ಮಂದಿ ಚುನಾವಣಾ ಕಣದಲ್ಲಿದ್ದಾರೆ.
    ತಾಲೂಕು ಒಕ್ಕಲಿಗರ ಸಂಘದ ನಿರ್ದೇಶಕ ದಿಲೀಪ್  ತಮ್ಮ ಪತ್ನಿ ಬಿ.ಇ ಪದವಿಧರೆ ಪಲ್ಲವಿ ಅವರನ್ನು ಜೆಡಿಎಸ್ ಪಕ್ಷದಿಂದ ಕಣಕ್ಕಿಳಿಸಿದ್ದು, ಬಿಜೆಪಿ ಮಹಿಳಾ ಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿ ಬಿ.ಎಂ. ಮಂಜುಳ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಭಂಡಾರಹಳ್ಳಿಯ ನಿವಾಸಿ, ತಾಲೂಕು ಆಟೋ ಚಾಲಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಲಕ್ಷ್ಮಣ ತಮ್ಮ ಪತ್ನಿ ವೀಣಾರನ್ನು ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಸಿದ್ದಾರೆ. ಕಳೆದ ಬಾರಿ ವಾರ್ಡ್ ನಂ.೨ರಲ್ಲಿ ಸ್ಪರ್ಧಿಸಿ ಅಲ್ಪ ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು.  ಸ್ನೇಹ ಜೀವಿ ಬಳಗದ ಸದಸ್ಯೆ ಜಯಮ್ಮ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.    ಕಳೆದ ಬಾರಿ ಈ ವಾರ್ಡ್‌ನಲ್ಲಿ ರಾಮಕೃಷ್ಣೇಗೌಡ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದು, ಇವರು ಅವಧಿ ಮುಕ್ತಾಯಗೊಳ್ಳುವ ಮೊದಲೇ ಅಕಾಲಿಕ ನಿಧನ ಹೊಂದಿದ ಕಾರಣ ರಾಮಶೆಟ್ಟಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು.
    ಒಕ್ಕಲಿಗರು, ಮುಸ್ಲಿಂ ಹಾಗು ಬಣಜಾರ ಸಮುದಾಯದವರು ಹೆಚ್ಚಾಗಿರುವ, ಗ್ರಾಮೀಣ ಪರಿಸರ ಹೊಂದಿರುವ ಹೊಸಸಿದ್ದಾಪುರ ವ್ಯಾಪ್ತಿಯ ವಾರ್ಡ್ ನಂ.೩೦ರಲ್ಲಿ ಒಟ್ಟು ೨೯೬೧ ಮತದಾರರಿದ್ದಾರೆ. ಈ ಒಟ್ಟು ೫ ಮಂದಿ ಚುನಾವಣಾ ಕಣದಲ್ಲಿದ್ದಾರೆ.
    ಸುಮಾರು ೨ ದಶಕಗಳಿಗೂ ಹೆಚ್ಚು ಕಾಲದಿಂದ ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ರೈತ ಮೋರ್ಚಾ ತಾಲೂಕು ಉಪಾಧ್ಯಕ್ಷ ಎಂ.ಎಲ್ ರಾಮಕೃಷ್ಣ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿಸಲಾಗಿದೆ. ಇವರು ಈ ಹಿಂದೆ ಎರಡು ಬಾರಿ ಆರ್‌ಎಂಸಿ ಹಾಗು ಒಂದು ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ಸ್ಪರ್ಧಿಸಿ ಅಲ್ಪ ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಈ ಬಾರಿ ಮುಸ್ಲಿಂ ಅಭ್ಯರ್ಥಿ ಸೈಯದ್ ರಿಯಾಜ್ ಅವರನ್ನು ಕಣಕ್ಕಿಳಿಸಲಾಗಿದೆ. ಜೆಡಿಎಸ್ ಪಕ್ಷದಿಂದ ಜೆ. ಸೋಮಶೇಖರನ್ನು ಕಣಕ್ಕಿಳಿಸಲಾಗಿದೆ. ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.  ಕಳೆದ ಬಾರಿ ಈ ವಾರ್ಡ್‌ನಲ್ಲಿ ಜೆಡಿಎಸ್ ಪಕ್ಷದಿಂದ ಲೀಲಾವತಿ ಆಯ್ಕೆಯಾಗಿದ್ದರು.
   ಪರಿಶಿಷ್ಟಜಾತಿ, ಕ್ರಿಶ್ಚಿಯನ್, ಮುಸ್ಲಿಂ ಮತ್ತು ಲಿಂಗಾಯತ ಸಮುದಾಯದವರು ಹೆಚ್ಚಾಗಿರುವ ವಿಐಎಸ್‌ಎಲ್ ಕಾರ್ಖಾನೆ ವಸತಿಗೃಹಗಳನ್ನು ಒಳಗೊಂಡಿರುವ ಗಣೇಶ್‌ಕಾಲೋನಿ-ವಿದ್ಯಾಮಂದಿರ ವ್ಯಾಪ್ತಿಯ ವಾರ್ಡ್ ನಂ. ೨೮ರಲ್ಲಿ ಒಟ್ಟು ೨೭೩೪ ಮತದಾರರಿದ್ದು, ಒಟ್ಟು ೪ ಮಂದಿ ಚುನಾವಣಾ ಕಣದಲ್ಲಿದ್ದಾರೆ.
    ಕಾಂಗ್ರೆಸ್ ಮುಖಂಡ, ಸಂಗೊಳ್ಳಿ ರಾಯಣ್ಣ ಯುವ ವೇದಿಕೆ ಅಧ್ಯಕ್ಷ ಹಾಗು ವಿವಿಧ ಸಂಘಟನೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಕಾಂತರಾಜ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಬಿಜೆಪಿ ಪಕ್ಷದಿಂದ ವಾರ್ಡ್ ಪ್ರಮುಖ್ ಎ.ಈ ಶಿವಕುಮಾರ್ ಅವರನ್ನು  ಕಣಕ್ಕಿಳಿಸಲಾಗಿದೆ. ವಿಐಎಸ್‌ಎಲ್ ನಿವೃತ್ತ ಕಾರ್ಮಿಕ ಹಾಲಪ್ಪನವರ ಪುತ್ರ ಎಚ್. ಸಂತೋಷ್ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದಾರೆ. ಸ್ನೇಹ ಜೀವಿ ಬಳಗದ ಸದಸ್ಯ ಶ್ರೀಧರ ಮೂರ್ತಿ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಕಳೆದ ಬಾರಿ ಈ ವಾರ್ಡ್‌ನಲ್ಲಿ ಕಾಂಗ್ರೆಸ್ ಪಕ್ಷದಿಂದ ಲಕ್ಷ್ಮೀದೇವಿ ಆಯ್ಕೆಯಾಗಿದ್ದರು.
        ಪಕ್ಷೇತರ ಅಭ್ಯರ್ಥಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆ:
    ನಗರಸಭೆ ವಾರ್ಡ್ ನಂ.೩ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸ್ನೇಹ ಜೀವಿ ಬಳಗದ ಸದಸ್ಯ ಎಸ್ ಯೋಗೀಶ್ ಭಾನುವಾರ ಬಿಜೆಪಿ ಪಕ್ಷಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪನವರ ಸಮ್ಮುಖದಲ್ಲಿ ಸೇರ್ಪಡೆಗೊಂಡಿದ್ದಾರೆ.
    ವಾರ್ಡ್ ನಂ.೩ರ ಬಿಜೆಪಿ ಅಧಿಕೃತ ಅಭ್ಯರ್ಥಿ ಜೆ. ನಕುಲ್ ಅವರಿಗೆ ಎಸ್. ಯೋಗೀಶ್ ಬೆಂಬಲ ಸೂಚಿಸಿದ್ದಾರೆ. ಈ ವಾರ್ಡಿನಲ್ಲಿ ಒಟ್ಟು ೯ ಮಂದಿ ಚುನಾವಣಾ ಕಣದಲ್ಲಿದ್ದು,  ಈ  ಪೈಕಿ ೬ ಮಂದಿ ಪಕ್ಷೇತರ ಅಭ್ಯರ್ಥಿಗಳಾಗಿದ್ದಾರೆ.
    ಜಿಲ್ಲಾಧ್ಯಕ್ಷ ಡಿ.ಟಿ ಮೇಘರಾಜ್, ಪ್ರಮುಖರಾದ ಗಿರೀಶ್ ಪಟೇಲ್, ಬಿ.ಕೆ ಶ್ರೀನಾಥ್, ಹರಿಕೃಷ್ಣ, ಎನ್.ಡಿ ಸತೀಶ್, ಎಂ.ಬಿ ಸುರೇಶ್, ಕೆ.ಟಿ ಶ್ರೀನಿವಾಸ್‌ರಾವ್, ಟಿ.ಎಸ್ ದುಗ್ಗೇಶ್, ಆರ್.ಡಿ ದಿನಕರ್, ಡಿ.ಅರ್ ಕಿರಣ್, ತಿಪ್ಪೇಸ್ವಾಇ, ಡಿ.ಪಿ. ನರೇಂದ್ರ, ಡಿ. ಅಮಿತ್, ಎಲ್ಲೋಜಿ ರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Saturday, April 24, 2021

ವೀಕ್ ಎಂಡ್ ಲಾಕ್‌ಡೌನ್ ನಡುವೆಯೂ ಅಭ್ಯರ್ಥಿಗಳಿಂದ ಮತಯಾಚನೆ

ಭದ್ರಾವತಿ ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ೪ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ಅನುಪಮಾ  ಚನ್ನೇಶ್ ಶನಿವಾರ ಹೊಸದುರ್ಗದ  ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿಯವರ ಆಶೀರ್ವಾದ ಪಡೆದರು.
     ಭದ್ರಾವತಿ, ಏ. ೨೪: ರಾಜ್ಯ ಸರ್ಕಾರ ಒಂದೆಡೆ ಶನಿವಾರ ಮತ್ತು ಭಾನುವಾರ ವೀಕ್ ಎಂಡ್ ಲಾಕ್‌ಡೌನ್ ಘೋಷಿಸಿದ್ದು, ಈ ನಡುವೆಯೂ ನಗರಸಭೆ ೩೫ ವಾರ್ಡ್‌ಗಳಲ್ಲಿ ಅಭ್ಯರ್ಥಿಗಳು ಮನೆ ಮನೆಗೆ ತರಳಿ ಮತಯಾಚನೆ ನಡೆಸಿದರು.
    ಬಹುತೇಕ ಗ್ರಾಮೀಣ ಪರಿಸರ ಹೊಂದಿರುವ ಭಂಡಾರಹಳ್ಳಿ ವ್ಯಾಪ್ತಿಯನ್ನು ಒಳಗೊಂಡಿರುವ ವಾರ್ಡ್ ನಂ.೩೫ರಲ್ಲಿ ಒಟ್ಟು ೩೦೩೨ ಮತದಾರರಿದ್ದು, ೫ ಜನ ಕಣದಲ್ಲಿದ್ದಾರೆ. ಬಹುತೇಕ ಒಕ್ಕಲಿಗ ಸಮುದಾಯದವರು ಹೆಚ್ಚಾಗಿರುವ ಈ ವಾರ್ಡ್‌ನಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ, ನಗರಸಭೆ ಮಾಜಿ ಸದಸ್ಯ ಗಂಗಾಧರ್‌ರವರು ತಮ್ಮ ಸೊಸೆ ಶೃತಿ ವಸಂತ್‌ಕುಮಾರನ್ನು ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಸಿದ್ದಾರೆ. ಜೆಡಿಎಸ್ ಪಕ್ಷದಿಂದ ಹಿರಿಯ ಮಹಿಳೆ ನಿಂಗಮ್ಮರನ್ನು ಕಣಕ್ಕಿಳಿಸಲಾಗಿದೆ. ಇದೆ ರೀತಿ ಬಿಜೆಪಿ ಪಕ್ಷದಿಂದ ಲಕ್ಷ್ಮಮ್ಮ ನರಸಿಂಹಗೌಡರನ್ನು ಕಣಕ್ಕಿಳಿಸಲಾಗಿದೆ. ಈ ಇಬ್ಬರು ರಾಜಕೀಯಕ್ಕೆ ಹೊಸಬರಾಗಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ನೇಹಜೀವಿ ಬಳಗದ ಸದಸ್ಯೆ ಸುಧಾ ಶಿವಪ್ಪ ಸೇರಿದಂತೆ ಇಬ್ಬರು ಸ್ಪರ್ಧಿಗಳಿದ್ದಾರೆ.
     ಈ ವಾರ್ಡ್‌ನಲ್ಲಿ ಕಳೆದ ಬಾರಿ ಜೆಡಿಎಸ್ ಪಕ್ಷದಿಂದ ಜೆ. ಭಾಗ್ಯ ಆಯ್ಕೆಯಾಗಿದ್ದರು. ಈ ಬಾರಿ ಸಹ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಕಂಡು ಬರುತ್ತಿದ್ದು, ಬಿರುಸಿನ ಮತಯಾಚನೆ ನಡೆಸುತ್ತಿದ್ದಾರೆ.
ವಿಐಎಸ್‌ಎಲ್ ಕಾರ್ಖಾನೆ ವಸತಿ ಗೃಹಗಳನ್ನು ಹೊಂದಿರುವ ಒಕ್ಕಲಿಗರು ಹೆಚ್ಚಾಗಿರುವ ಅಪ್ಪರ್ ಹುತ್ತಾ ವ್ಯಾಪ್ತಿಯನ್ನು ಒಳಗೊಂಡಿರುವ ವಾರ್ಡ್ ೩೪ರಲ್ಲಿ ಒಟ್ಟು ೩೦೩೨ ಮತದಾರರಿದ್ದು, ೪ ಜನ ಕಣದಲ್ಲಿದ್ದಾರೆ. ಮೂಲತಃ ಜೆಡಿಎಸ್‌ನವರಾದ ವಾರ್ಡ್‌ನಲ್ಲಿ ಚಿರಪರಿಚಿತರಾಗಿರುವ ಭಾಗ್ಯಮ್ಮ ಮಂಜುನಾಥ್‌ರನ್ನು ಜೆಡಿಎಸ್ ಪಕ್ಷದಿಂದ ಕಣಕ್ಕಿಳಿಸಲಾಗಿದೆ. ಹಿಂದೂಪರ ಹಾಗು ವಿವಿಧ ಮಹಿಳಾ ಸಂಘಟನೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಲತಾ ಚಂದ್ರಶೇಖರ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಹಾಗು ಬಿಜೆಪಿ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತರಾಗಿ ವಿವಿಧ ಹುದ್ದೆಗಳನ್ನು ಅಲಂಕರಿಸಿರುವ ಶ್ಯಾಮಲ ಸತ್ಯಣ್ಣರನ್ನು ಬಿಜೆಪಿ ಪಕ್ಷದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗಿದೆ.  ಒಬ್ಬರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಯಲ್ಲಿದ್ದಾರೆ.
        ಈ ವಾರ್ಡ್‌ನಲ್ಲಿ ಕಳೆದ ೨ ಬಾರಿ ಜೆಡಿಎಸ್ ಪಕ್ಷದಿಂದ ಎಚ್.ಬಿ ರವಿಕುಮಾರ್ ಆಯ್ಕೆಯಾಗಿದ್ದರು.  ೩ ಪಕ್ಷಗಳ ಅಭ್ಯರ್ಥಿಗಳ ನಡೆವೆಯೂ ಪ್ರಬಲ ಪೈಪೋಟಿ ನಡೆಯುತ್ತಿರುವುದು ಕಂಡು ಬರುತ್ತಿದ್ದು, ಅಭ್ಯರ್ಥಿಗಳು ಬಿರುಸಿನ ಮತಯಾಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
      ವಿಐಎಸ್‌ಎಲ್ ಕಾರ್ಖಾನೆ ವಸತಿ ಗೃಹಗಳನ್ನು ಹೊಂದಿರುವ ಇಲ್ಲೂ ಸಹ ಒಕ್ಕಲಿಗರು ಹೆಚ್ಚಾಗಿರುವ ಹುತ್ತಾಕಾಲೋನಿ ವ್ಯಾಪ್ತಿಯನ್ನು ಹೊಂದಿರುವ ವಾರ್ಡ್ ನಂ.೩೩ರಲ್ಲಿ ಒಟ್ಟು ೪,೩೨೦ ಮತದಾರರಿದ್ದು, ೬ ಜನ ಕಣದಲ್ಲಿದ್ದಾರೆ.  ಹಲವಾರು ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡು ಇತ್ತೀಚೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಸಮಾಜ ಸೇವಕ ಬಿ.ವಿ ಕೃಷ್ಣರಾಜ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಹಾಲಿ ನಗರಸಭಾ ಸದಸ್ಯ ಎಚ್.ಬಿ ರವಿಕುಮಾರ್ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ಶ್ರೀಧರ ಗೌಡ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಪಕ್ಷೇತರ ಅಭ್ಯರ್ಥಿಗಳಾಗಿ ಸ್ನೇಹ ಜೀವಿ ಬಳಗದ ಸದಸ್ಯೆ ಶಶಿಕಲಾ ಸೇರಿದಂತೆ ೩ ಮಂದಿ ಸ್ಪರ್ಧೆಯಲ್ಲಿದ್ದಾರೆ.
    ಈ ವಾರ್ಡ್‌ನಲ್ಲಿ ಕಳೆದ ಬಾರಿ ಜೆಡಿಎಸ್ ಪಕ್ಷದಿಂದ ಎಂ.ಎಸ್ ಸುಧಾಮಣಿ ಆಯ್ಕೆಯಾಗಿದ್ದರು. ಈ ವಾರ್ಡ್‌ನಲ್ಲೂ ಅಭ್ಯರ್ಥಿಗಳು ಬಿರುಸಿನ ಮತಯಾಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
      ಭಗೀರಥ ಗುರುಪೀಠದ ಶ್ರೀಗಳಿಂದ ಆಶೀರ್ವಾದ:
   ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ೪ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ಅನುಪಮಾ  ಚನ್ನೇಶ್ ಶನಿವಾರ ಹೊಸದುರ್ಗದ  ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿಯವರ ಆಶೀರ್ವಾದ ಪಡೆದರು.
   ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಉಪ್ಪಾರ ಸಮಾಜ ಅಧಿಕೃತವಾಗಿ ಬೆಂಬಲ ಸೂಚಿಸಿರುವ ಹಿನ್ನೆಲೆಯಲ್ಲಿ  ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ. ಕೆ ಗಿರೀಶ್ ಉಪ್ಪಾರ ಅವರ ನೇತೃತ್ವದಲ್ಲಿ ಹೊಸದುರ್ಗಕ್ಕೆ ತೆರಳಿ ಶ್ರೀಗಳ ದರ್ಶನ ಪಡೆದರು.


ನಗರಸಭೆ ಇಂಜಿನಿಯರ್ ಮೇಲೆ ಗುತ್ತಿಗೆದಾರ ಹಲ್ಲೆ

    ಭದ್ರಾವತಿ, ಏ. ೨೪: ಕಾಮಗಾರಿ ಗುಣಮಟ್ಟ ಕುರಿತು ಪ್ರಶ್ನಿಸಿದ ನಗರಸಭೆ ಇಂಜಿನಿಯರ್ ಮತ್ತು ಸಿಬ್ಬಂದಿ ಮೇಲೆ ಗುತ್ತಿಗೆದಾರನೋರ್ವ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
    ಇಂಜಿನಿಯರ್ ಎಸ್.ಆರ್ ಸತೀಶ್ ಮತ್ತು ನೀರು ಸರಬರಾಜು ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುವ ದೊಡ್ಡಯ್ಯರವರ ಮೇಲೆ ಚೌಡಪ್ಪ ಎಂಬ ಗುತ್ತಿಗೆದಾರ ಬೆಂಬಲಿಗರೊಂದಿಗೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
    ನಗರಸಭೆ ೧ನೇ ವಾರ್ಡ್ ವ್ಯಾಪ್ತಿಯ ಹೆಬ್ಬಂಡಿ ಗ್ರಾಮದ ರಸ್ತೆಯೊಂದರ ಕಾಮಗಾರಿ ಗುಣಮಟ್ಟಕ್ಕೆ  ಸಂಬಂಧಿಸಿದಂತೆ ಚೌಡಪ್ಪರನ್ನು ಪ್ರಶ್ನಿಸಿದಾಗ ಈ ಘಟನೆ ನಡೆದಿದ್ದು, ಈ ಸಂಬಂಧ ನ್ಯೂಟೌನ್ ಪೊಲೀಸ್  ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಪೌರಾಯುಕ್ತ ಮನೋಹರ್ ತಿಳಿಸಿದ್ದಾರೆ.