ರಸ್ತೆ ಮೇಲೆ ಚರಂಡಿ ನೀರು, ಸ್ವಚ್ಛತೆ ಇಲ್ಲ, ದುರ್ವಾಸನೆ, ನಾಯಿಗಳ ಹಾವಳಿ
ಭದ್ರಾವತಿ, ಮೇ. ೮ : ಕಾಗದನಗರ ಆನೇಕೊಪ್ಪದಲ್ಲಿರುವ ಎಂಪಿಎಂ ಬಡಾವಣೆಯಲ್ಲಿ ಮೂಲ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದ್ದು, ಹಲವು ಬಾರಿ ನಗರಸಭೆ ಆಡಳಿತದ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಬಡಾವಣೆಯಲ್ಲಿರುವ ಚರಂಡಿಗಳಲ್ಲಿ ಕಡ್ಡಿಕಸ ತುಂಬಿಕೊಂಡಿದ್ದು, ಸರಾಗವಾಗಿ ನೀರು ಹರಿಯುತ್ತಿಲ್ಲ. ಅಲ್ಲಲ್ಲಿ ಚರಂಡಿ ವ್ಯವಸ್ಥೆ ಕಿತ್ತು ಹೋಗಿದೆ. ಇದರಿಂದಾಗಿ ಚರಂಡಿ ನೀರು ಮುಂದೆ ಹರಿಯದೆ ನಿಂತುಕೊಳ್ಳುತ್ತಿದ್ದು, ದುರ್ವಾಸನೆ ಬೀರುತ್ತಿದೆ. ಬಡಾವಣೆಯ ೪ ಕಡೆ ಮ್ಯಾನ್‌ಹೋಲ್‌ಗಳು ಒಡೆದು ಹೋಗಿದ್ದು, ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ.
ಬಡಾವಣೆಯ ಖಾಲಿ ನಿವೇಶನಗಳಲ್ಲಿ ಗಿಡಗಂಟಿಗಳು ಬೆಳೆದು ನಿಂತಿದ್ದು, ಸ್ವಚ್ಛತೆ ಇಲ್ಲವಾಗಿದೆ. ಬಡಾವಣೆಯ ರಸ್ತೆ ಅಕ್ಕಪಕ್ಕಗಳಲ್ಲಿ ನೆಡಲಾಗಿರುವ ಸಸಿಗಳು ಸೂಕ್ತ ನಿರ್ವಹಣೆ ಇಲ್ಲದೆ ಒಣಗಿ ಹೋಗುತ್ತಿವೆ. ಬೋರ್‌ವೆಲ್‌ಗಳು ಹಾಳಾಗಿದ್ದು, ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ರಾತ್ರಿ ವೇಳೆ ನೆಮ್ಮದಿಯಾಗಿ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ. ತಕ್ಷಣ ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಸ್ಥಳೀಯರಾದ ಮಾಸ್ತಿ ಗೌಡ್ರು, ಅಂಗಡಿ ತಮ್ಮಣ್ಣ, ವೈ.ಪಿ ಮಾಸ್ಟ್ರು, ಗಣೇಶ್ ರಾವ್, ಉಮಾ, ಸುಧಾಮಣಿ, ನರಸಮ್ಮ, ಬಸವರಾಜ್ ಸೇರಿದಂತೆ ಇನ್ನಿತರರು ಮನವಿ ಮಾಡಿದ್ದಾರೆ.
ಭದ್ರಾವತಿ ಕಾಗದನಗರ ಆನೇಕೊಪ್ಪದಲ್ಲಿರುವ ಎಂಪಿಎಂ ಬಡಾವಣೆಯಲ್ಲಿ ಮೂಲ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿರುವುದು.