![](https://blogger.googleusercontent.com/img/b/R29vZ2xl/AVvXsEgih0SVgJDSADq4iJc9QdWp0aK85SBF9k82a87ru05ti9YHSRx8M0VuJaqmQNlU7Dnmvmmh56RjJZYPj34vyjdJHrO9qt7-M66hLiLu6b6FyMiAUbP5e0hBb9MiWJloJIuo9I-cCkZ8zvvA/w400-h190-rw/D10-BDVT-709408.jpg)
ಭದ್ರಾವತಿ ವಿಐಎಸ್‌ಎಲ್ ಅತಿಥಿಗೃಹದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಾರತೀಯ ಮಜ್ದೂರ್ ಸಂಘದ ೨೧ನೇ ತ್ರೈವಾರ್ಷಿಕ ಅಧಿವೇಶನ(ವರ್ಚ್ಯಲ್)ದಲ್ಲಿ ಕಾರ್ಮಿಕ ಮುಖಂಡ, ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಪಾಲ್ಗೊಂಡು ಮಾತನಾಡಿದರು.
ಭದ್ರಾವತಿ, ಜು. ೧೦: ಯಾವುದೇ ಬೇಡಿಕೆಗಳು ಈಡೇರಬೇಕಾದರೇ ಅದು ಸಂಘಟನೆ ಮೂಲಕ ಮಾತ್ರ ಸಾಧ್ಯವಾಗಿದ್ದು, ಸಂಘಟನೆಗಳಿಗೆ ಸರ್ಕಾರದ ಜೊತೆ ಗುರುತಿಸಿಕೊಳ್ಳದೆ ಹೋರಾಟ ನಡೆಸುವ ಮನೋಭಾವ ಬಹಳ ಮುಖ್ಯ ಎಂದು ಕಾರ್ಮಿಕ ಮುಖಂಡ, ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.
ಅವರು ಶನಿವಾರವಾರ ನಗರದ ವಿಐಎಸ್‌ಎಲ್ ಅತಿಥಿಗೃಹದ ಸಭಾಂಮಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಾರತೀಯ ಮಜ್ದೂರ್ ಸಂಘದ ೨೧ನೇ ತ್ರೈವಾರ್ಷಿಕ ಅಧಿವೇಶನ(ವರ್ಚ್ಯಲ್)ದಲ್ಲಿ ಪಾಲ್ಗೊಂಡು ಮಾತನಾಡಿದರು.
ದೇಶದಲ್ಲಿ ಶ್ರಮಿಜೀವಿಗಳಾದ ಕಾರ್ಮಿಕ ವರ್ಗದವರ ಧ್ವನಿಯಾಗಿ ತನ್ನದೇ ಆದ ಸೈದ್ದಾಂತಿಕ ಸಿದ್ದಾಂತಗಳೊಂದಿಗೆ ಭಾರತೀಯ ಮಜ್ದೂರ್ ಸಂಘ ಬೃಹತ್ ಸಂಘಟನೆಯಾಗಿ ಬೆಳೆದು ಬಂದಿದೆ. ಈ ಸಂಘಟನೆ ಎಂದಿಗೂ ಸರ್ಕಾರದ ಜೊತೆ ಗುರುತಿಸಿಕೊಳ್ಳದೆ ಕಾರ್ಮಿಕರ ಪರವಾದ ನಿಲುವುಗಳಿಗೆ ಬದ್ಧವಾಗಿ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.
ಒಬ್ಬ ರಾಜಕಾರಣಿಯಾದರೂ ಸಹ ಈ ಸಂಘಟನೆಯೊಂದಿಗಿನ ಒಡನಾಟದಿಂದಾಗಿ ನಾನು ಸಹ ಕಾರ್ಮಿಕ ಹೋರಾಟಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಯಿತು. ಪ್ರಸ್ತುತ ದೇಶದಲ್ಲಿ ಕಾರ್ಮಿಕರು ಅನುಭವಿಸುತ್ತಿರುವ ಸಂಕಷ್ಟಗಳು ಸಾಕಷ್ಟಿವೆ. ಯಾವುದೇ ಸಂಘಟನೆಗಳ ಪದಾಧಿಕಾರಿಗಳು ಸರ್ಕಾರದ ನಿರ್ಣಯಗಳನ್ನು ಪ್ರಶ್ನಿಸುವ, ಅನ್ಯಾಯದ ವಿರುದ್ಧ ಪ್ರತಿಭಟಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಭಾರತೀಯ ಮಜ್ದೂರು ಸಂಘದ ಪದಾಧಿಕಾರಿಗಳು ಈ ನಿಟ್ಟಿನಲ್ಲಿಯೇ ಸಾಗುತ್ತಿದ್ದು, ಈ ಸಂಘಟನೆಯಲ್ಲಿನ ಬಹಳಷ್ಟು ಹೋರಾಟಗಾರರು ಇಂದಿನವರಿಗೆ ಸ್ಪೂರ್ತಿದಾಯಕರಾಗಿದ್ದಾರೆ ಎಂದರು.
ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಸಂಘದ ರಾಜ್ಯಾಧ್ಯಕ್ಷ ವಿಶ್ವನಾಥಶೆಟ್ಟಿ ಮಾತನಾಡಿ, ದೇಶ ಇದ್ದರೆ ನಾವು, ಕಾರ್ಮಿಕರು ಈ ದೇಶದ ಸೈನಿಕರಿದಂತೆ ಎಂಬ ಭಾವನೆಯೊಂದಿಗೆ ಸಂಘಟನೆ ಬೆಳೆದು ಬಂದಿದೆ. ದೇಶ ಭಕ್ತಿ ಹಾಗು ರಾಷ್ಟ್ರೀಯ ಹಿತಾಸಕ್ತಿಗಳೊಂದಿಗೆ ಕಾರ್ಮಿಕರ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ಸಂಘಟನೆಗೆ ಕಾರ್ಮಿಕರ ಸಮಸ್ಯೆ ಬಗೆಹರಿಸುವುದೇ ಮೊದಲ ಆದ್ಯತೆಯಾಗಿದೆ ಎಂದರು.
ಸಂಘಟನೆಗಳಿಗೆ ಸದಸ್ಯರ ಸಂಖ್ಯೆ ಹೆಚ್ಚಿಸುವುದು ಮುಖ್ಯವಲ್ಲ. ಗುಣಾತ್ಮಕವಾದ ಸಂಖ್ಯೆ ಹೆಚ್ಚಿಸುವುದು ಮುಖ್ಯವಾಗಿದೆ. ಹೋರಾಟಗಳು ಗುಣಾತ್ಮಕವಾದ ದಾರಿಯಲ್ಲಿಯೇ ಸಾಗಬೇಕು. ಈ ನಿಟ್ಟಿನಲ್ಲಿ ಕಾರ್ಮಿಕರ ಪರವಾದ ಹೋರಾಟಗಳಲ್ಲಿ ಸಂಘಟನೆ ಮುನ್ನಡೆಯುತ್ತಿದೆ. ಇದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕೆಂದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಕೆ ಪ್ರಕಾಶ್ ಮಾತನಾಡಿ, ೧೯೫೫ರಲ್ಲಿ ಆರಂಭವಾದ ಸಂಘಟನೆ ತನ್ನ ಆದ ಸಿದ್ದಾಂತಗಳೊಂದಿಗೆ ಕಾರ್ಮಿಕರ ಹಿತಾಸಕ್ತಿಗಳನ್ನು ಕಾಪಾಡುತ್ತಿದೆ. ಪ್ರಸ್ತುತ ದೇಶದಲ್ಲಿಯೇ ಅತಿಹೆಚ್ಚು ಸದಸ್ಯರನ್ನು ಹೊಂದಿರುವ ಸಂಘಟನೆ ಇದಾಗಿದೆ. ರಾಜ್ಯದಲ್ಲಿ ಈ ಸಂಘಟನೆಯನ್ನು ಅನೇಕ ಮಹಾನ್ ನಾಯಕರು ಕಟ್ಟಿ ಬೆಳೆಸಿದ್ದಾರೆ. ಈ ಸಂಘ ಭವಿಷ್ಯದಲ್ಲಿ ಮತ್ತಷ್ಟು ಸಂಘಟಿತಗೊಳ್ಳುವ ವಿಶ್ವಾಸವಿದೆ ಎಂದರು.
ಇದಕ್ಕೂ ಮೊದಲು ವರ್ಚ್ಯಲ್ ಕಾರ್ಯಕ್ರಮವನ್ನು ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿನಯ್ ಕುಮಾರ್ ಸಿನ್ಹ ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಕಾರ್ಯದರ್ಶಿ ಎಚ್.ಎಲ್ ವಿಶ್ವನಾಥ್ ನಿರೂಪಿಸಿದರು. ಗಾಯತ್ರಿ ವಂದೇಮಾತರಂ ಗೀತೆ ಹಾಡಿದರು. ಜಿಲ್ಲಾಧ್ಯಕ್ಷ ಯೋಗೇಶ್ ಪೈ ವಂದಿಸಿದರು. ರಾಜ್ಯದ ವಿವಿಧೆಡೆಗಳಿಂದ ಸಂಘದ ಪ್ರಮುಖರು ಪಾಲ್ಗೊಂಡಿದ್ದರು.