Friday, September 3, 2021

ಪುನಃ ಕೋವಿಡ್-೧೯ ಸೋಂಕು ಏರಿಕೆ

    ಭದ್ರಾವತಿ, ಸೆ. ೩: ತಾಲೂಕಿನಲ್ಲಿ ಕೋವಿಡ್-೧೯ ಸೋಂಕು ಪುನಃ ಹೆಚ್ಚಳವಾಗುತ್ತಿದ್ದು, ಶುಕ್ರವಾರ ಸೋಂಕಿನ ಪ್ರಮಾಣ ೫ಕ್ಕೆ ಏರಿಕೆಯಾಗಿದೆ.
    ಗುರುವಾರ ಕೇವಲ ೨ ಸೋಂಕು ಪತ್ತೆಯಾಗಿತ್ತು. ಒಂದೇ ದಿನ ೩ಕ್ಕೆ ಏರಿಕೆಯಾಗಿದೆ. ಗ್ರಾಮಾಂತರ ಭಾಗದಲ್ಲಿ ೩ ಹಾಗು ನಗರ ಭಾಗದಲ್ಲಿ ೨ ಸೋಂಕು ಪತ್ತೆಯಾಗಿದೆ. ಸೆ.೧ರಂದು ದಾಖಲೆಯ ೧೦೧೦ ಮಂದಿಯ ಮಾದರಿ ಸಂಗ್ರಹಿಸಲಾಗಿದ್ದು, ಇದುವರೆಗೂ ೨೬೦ ಮಂದಿ  ಮೃತಪಟ್ಟಿದ್ದಾರೆ.

ನಗರಸಭೆ ವಾರ್ಡ್ ನಂ.೨೯ರ ಚುನಾವಣೆ : ಶೇ.೬೪.೨೭ರಷ್ಟು ಮತದಾನ

ಜೆಡಿಎಸ್‌ಗೆ ಕಾಂಗ್ರೆಸ್ ತೀವ್ರ ಪೈಪೋಟಿ : ಸಂಗಮೇಶ್ವರ್ ಕುಟುಂಬ ವರ್ಗದವರ ತಂತ್ರಗಾರಿಕೆ ಫಲಿಸುವುದೇ?


ಭದ್ರಾವತಿ, ಸೆ. ೩: ನಗರಸಭೆ ವಾರ್ಡ್ ನಂ.೨೯ರ ಮತದಾನ ಶುಕ್ರವಾರ ಸಂಜೆ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಶೇ.೬೪.೨೭ರಷ್ಟು ಮತದಾನ ನಡೆದಿದೆ.
    ಒಟ್ಟು ೩೪೨೩ ಮತದಾರರ ಪೈಕಿ ೧೧೦೭ ಪುರುಷ ಹಾಗು ೧೦೯೩ ಮಹಿಳಾ ಮತದಾರರು ಹಕ್ಕು ಚಲಾಯಿಸಿದ್ದಾರೆ. ಮತಗಟ್ಟೆ ಭಾಗ ಸಂಖ್ಯೆ ೧೧೧ರಲ್ಲಿ ೪೦೨, ೧೧೨ರಲ್ಲಿ ೪೨೦, ೧೧೩ರಲ್ಲಿ ೭೩೭ ಮತ್ತು ೧೧೪ರಲ್ಲಿ ೬೪೧ ಒಟ್ಟು ೨೨೦೦ ಮತಗಳು ಚಲಾವಣೆಯಾಗಿವೆ. ಸೆ.೬ರಂದು ಮತ ಎಣಿಕೆ ನಡೆಯಲಿದೆ.
    ಈ ನಡುವೆ ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ. ಈ ಬಾರಿ ಚುನಾವಣೆಯಲ್ಲೂ ಜೆಡಿಎಸ್ ಪಕ್ಷಕ್ಕೆ ಹೆಚ್ಚಿನ ಮತ ಲಭಿಸುವ ಸಾಧ್ಯತೆ ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಮತ್ತೊಂದೆಡೆ ಕಾಂಗ್ರೆಸ್ ಸಹ ಹೆಚ್ಚಿನ ಮತ ಪಡೆದುಕೊಳ್ಳುವ ಲಕ್ಷಣಗಳು ಎದ್ದು ಕಾಣುತ್ತಿದೆ.
    ಜೆಡಿಎಸ್ ಪ್ರಾಬಲ್ಯವಿರುವ ವಾರ್ಡನ್ನು ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳಲೇಬೇಕೆಂಬ ಪ್ರತಿಷ್ಠೆಯೊಂದಿಗೆ ಸ್ವತಃ ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ಕುಟುಂಬ ವರ್ಗದವರು ಅಖಾಡಕ್ಕೆ ಇಳಿದು ಹಲವು ತಂತ್ರಗಾರಿಕೆಯನ್ನು ನಡೆಸಿರುವುದು ಜೆಡಿಎಸ್ ಮತ ಗಳಿಕೆ ಪ್ರಮಾಣಕ್ಕೆ ಹಿನ್ನಡೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಮತ್ತೊಂದೆಡೆ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಇಲ್ಲದಿರುವುದು ಸಹ ಜೆಡಿಎಸ್‌ಗೆ ಹಿನ್ನಡೆಯನ್ನುಂಟು ಮಾಡಿದೆ. ಇವೆಲ್ಲದರ ನಡುವೆ ಈ ಬಾರಿ ಸಹ ನಾವೇ ಗೆಲ್ಲುತ್ತೇವೆ ಎನ್ನುವ ಅತಿಯಾದ ಆತ್ಮವಿಶ್ವಾಸ ಸಹ ಜೆಡಿಎಸ್ ಸೋಲಿಗೆ ಕಾರಣವಾಗಲಿವೆ ಎನ್ನುವ ಲೆಕ್ಕಾಚಾರಗಳು ನಡೆಯುತ್ತಿವೆ.
    ಮತ್ತೊಂದೆಡೆ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಜನರಿಗೆ ಹೆಚ್ಚಿನ ಒಲವಿಲ್ಲ. ಈ ಹಿನ್ನಲೆಯಲ್ಲಿ ಚುನಾವಣೆಯಲ್ಲಿ ಯಾವುದೇ ತಂತ್ರಗಾರಿಕೆ ನಡೆಸಿದ್ದರೂ ಸಹ ಫಲ ನೀಡಿಲ್ಲ. ಜೆಡಿಎಸ್‌ಗೆ ಹೆಚ್ಚಿನ ಮತಗಳು ಲಭಿಸಲಿವೆ. ಹೆಚ್ಚಿನ ಅಂತರದಿಂದ ಗೆಲುವು ಸಾಧಿಸಲಿದೆ ಎಂಬ ಲೆಕ್ಕಾಚಾರ ಸಹ ನಡೆಯುತ್ತಿದೆ.  ಈ ನಡುವೆ ಬಿಜೆಪಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದು, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಮತಗಳನ್ನು ಸೆಳೆದಿರುವ ಸಾಧ್ಯತೆ ಹೆಚ್ಚಾಗಿದೆ.


ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಬಡವರ್ಗದವರ ಬೆಳಕು : ಆರ್. ಕರುಣಾಮೂರ್ತಿ

ಭದ್ರಾವತಿ ನಗರದ ಬಿ.ಎಚ್ ರಸ್ತೆ ಖಾಸಗಿ ಬಸ್ ನಿಲ್ದಾಣದಲ್ಲಿ ಅಪ್ಪಾಜಿ ಅಭಿಮಾನಿಗಳ ಬಳಗದ ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಎಂ.ಜೆ ಅಪ್ಪಾಜಿಯವರ ಮೊದಲ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಶಾರದ ಅಪ್ಪಾಜಿ ಉದ್ಘಾಟಿಸಿದರು.
    ಭದ್ರಾವತಿ, ಸೆ. ೩: ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಬಡವರ ಬಾಳಿನ ಬೆಳಕಾಗಿದ್ದರು. ಎಲ್ಲಾ ಜಾತಿ, ಜನಾಂಗದವರೊಂದಿಗೆ ಗುರುತಿಸಿಕೊಂಡಿದ್ದರು. ಈ ಹಿನ್ನಲೆಯಲ್ಲಿ ಅವರು ನಮ್ಮೆಲ್ಲರ ನೆನಪಿನಲ್ಲಿ ಇಂದಿಗೂ ಉಳಿದುಕೊಂಡಿದ್ದಾರೆಂದು ನಗರಸಭೆ ಮಾಜಿ ಅಧ್ಯಕ್ಷ ಆರ್. ಕರುಣಾಮೂರ್ತಿ ಹೇಳಿದರು.
    ಅವರು ಶುಕ್ರವಾರ ನಗರದ ಬಿ.ಎಚ್ ರಸ್ತೆ ಖಾಸಗಿ ಬಸ್ ನಿಲ್ದಾಣದಲ್ಲಿ ಅಪ್ಪಾಜಿ ಅಭಿಮಾನಿಗಳ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮೊದಲ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಅಪ್ಪಾಜಿ ಅವರು ರಾಜಕೀಯ ಕುಟುಂಬದ ಹಿನ್ನಲೆಯಲ್ಲಿ ಬಂದವರಲ್ಲ. ಕಾರ್ಮಿಕನಾಗಿ ಬಡವರ ಕಷ್ಟಗಳನ್ನು ಅರಿತುಕೊಂಡವರು. ಈ ಹಿನ್ನಲೆಯಲ್ಲಿ ಕೊನೆಯವರೆಗೂ ಬಡವರಿಗಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಅಲ್ಲದೆ ರಾಜಕೀಯ ನೆಲೆ ಇಲ್ಲದ ನೂರಾರು ಜನರಿಗೆ ನೆಲೆ ಕಲ್ಪಿಸಿಕೊಟ್ಟಿದ್ದರು. ಕ್ಷೇತ್ರದ ಬಡ ವರ್ಗದವರು ಇವರ ಸ್ಥಾನದಲ್ಲಿ ಬೇರೆ ಯಾರನ್ನು ಕಾಣಲು ಸಾಧ್ಯವಿಲ್ಲ ಎಂದರು.
    ಕಾರ್ಯಕ್ರಮವನ್ನು ಶಾರದ ಅಪ್ಪಾಜಿ ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಎಸ್. ಮಣಿಶೇಖರ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡ ಧರ್ಮರಾಜ್ ನಿರೂಪಿಸಿದರು.
    ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ನಂಜುಂಡೇಗೌಡ, ನಗರಸಭಾ ಸದಸ್ಯರಾದ ಮಂಜುಳ ಸುಬ್ಬಣ್ಣ, ಬಸವರಾಜ ಬಿ. ಆನೇಕೊಪ್ಪ, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ರಾಧಾ, ಅನ್ನಪೂರ್ಣ ಸತೀಶ್, ಫೀರ್ ಷರೀಫ್,  ರಾಜು ಎಸ್ ಹೋಬಳಿದಾರ್, ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನಗರಸಭೆ ವಾರ್ಡ್ ನಂ.೨೯ರ ಚುನಾವಣೆ ಮತದಾನ ಶಾಂತಿಯುತ : ಮಧ್ಯಾಹ್ನದ ವರೆಗೂ ಬಿರುಸಿನ ಮತದಾನ

ಭದ್ರಾವತಿ ನಗರಸಭೆ ವಾರ್ಡ್ ನಂ.೨೯ರ ಜಯಶ್ರೀ ವೃತ್ತದಲ್ಲಿರುವ ಮತಗಟ್ಟೆಯಲ್ಲಿ ವಯೋವೃದ್ಧರೊಬ್ಬರು ಕುಟುಂಬಸ್ಥರ ನೆರವಿನೊಂದಿಗೆ ಮತ ಚಲಾಯಿಸಿ ತೆರಳುತ್ತಿರುವುದು.
    ಭದ್ರಾವತಿ, ಸೆ. ೩: ನಗರಸಭೆ ವಾರ್ಡ್ ನಂ.೨೯ರ ಚುನಾವಣೆ ಮತದಾನ ಶುಕ್ರವಾರ ಶಾಂತಿಯುತವಾಗಿ ನಡೆದಿದ್ದು, ಮಧ್ಯಾಹ್ನದವರೆಗೂ ಬಿರುಸಿನಿಂದ ಕೂಡಿರುವುದು ಕಂಡು ಬಂದಿತು.
    ಬೆಳಿಗ್ಗೆ ೭ ಗಂಟೆಗೆ ೪ ಮತಗಟ್ಟೆಗಳಲ್ಲಿ ಮತದಾನ ಆರಂಭಗೊಂಡಿದ್ದು, ಕಣದಲ್ಲಿರುವ ೩ ಅಭ್ಯರ್ಥಿಗಳಿಗೂ ವಾರ್ಡ್ ವ್ಯಾಪ್ತಿಯಲ್ಲಿ ಮತದಾನ ಮಾಡುವ ಹಕ್ಕು ಇಲ್ಲದಿರುವುದು ಈ ಚುನಾವಣೆಯ ವಿಶೇಷಗಳಲ್ಲಿ ಒಂದಾಗಿದೆ. ಕಾಂಗ್ರೆಸ್ ಅಭ್ಯರ್ಥಿ ವಾರ್ಡ್ ನಂ.೩೩ರ ವ್ಯಾಪ್ತಿಯಲ್ಲಿ, ಬಿಜೆಪಿ ಅಭ್ಯರ್ಥಿ ವಾರ್ಡ್ ನಂ.೩೨ರ ವ್ಯಾಪ್ತಿಯಲ್ಲಿ ಹಾಗು ಜೆಡಿಎಸ್ ಅಭ್ಯರ್ಥಿ ವಾರ್ಡ್ ೩೦ರ ವ್ಯಾಪ್ತಿಯಲ್ಲಿ ಮತದಾನದ ಹಕ್ಕು ಹೊಂದಿದ್ದಾರೆ.
    ಎಲ್ಲಾ ೪ ಮತಗಟ್ಟೆಗಳ ಬಳಿ ೩ ಪಕ್ಷಗಳ ಮುಖಂಡರು, ಕಾರ್ಯಕರ್ತರು, ಜಮಾಯಿಸಿರುವುದು ಕಂಡು ಬಂದಿತು. ಮತಗಟ್ಟೆ ಸಮೀಪದಲ್ಲಿ ಅಭ್ಯರ್ಥಿಗಳ ಪರವಾಗಿ ಭರ್ಜರಿಯಾಗಿ ಮತಯಾಚನೆ ನಡೆಯಿತು. ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ  ಕೋವಿಡ್-೧೯ ನಿಯಮ ಉಲ್ಲಂಘಿಸಿರುವುದು ಕಂಡು ಬಂದಿತು.
    ಮತಗಟ್ಟೆಗಳ ಬಳಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಈ ನಡುವೆ ಮತದಾರರನ್ನು ಸೆಳೆಯಲು ತೆರೆಮರೆಯಲ್ಲಿ ನಾನಾ ರೀತಿಯ ಕಸರಸ್ತುಗಳನ್ನು ನಡೆಸುತ್ತಿರುವುದು ಕಂಡು ಬಂದಿತು. ಜೆಡಿಎಸ್ ಪ್ರಾಬಲ್ಯಿವಿರುವ ಕ್ಷೇತ್ರವನ್ನು ಹೇಗಾದರೂ ಮಾಡಿ ಹಿಡಿತಕ್ಕೆ ಪಡೆದುಕೊಳ್ಳುವ ತವಕ ಕಾಂಗ್ರೆಸ್ ಹೊಂದಿದ್ದು, ಈ ಬಾರಿ ಸಹ ಜೆಡಿಎಸ್ ಪ್ರಬಲ ಪ್ರತಿಸ್ಪರ್ಧಿಯಾಗಿರುವುದು ಕಂಡು ಬಂದಿತು.


ಭದ್ರಾವತಿ ನಗರಸಭೆ ವಾರ್ಡ್ ನಂ.೨೯ರ ಚುನಾವಣೆಯ ಮತದಾನದಂದು ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ಮುಖಂಡರು, ಕಾರ್ಯಕರ್ತರು ಮತ್ತು ಅಭಿಮಾನಿಗಳು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಪರವಾಗಿ ಮತಯಾಚನೆ ನಡೆಸಿದರು.


Thursday, September 2, 2021

ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟಕ್ಕೆ ಬೆಂಬಲ : ಬಿ.ಕೆ ಸಂಗಮೇಶ್ವರ್

ಭದ್ರಾವತಿ ನಗರಕ್ಕೆ ಆಗಮಿಸಿದ ಶ್ರೀ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿಯವರಿಗೆ ಗೌರವ ಸಮರ್ಪಣೆ ಸಲ್ಲಿಸಲಾಯಿತು.  
    ಭದ್ರಾವತಿ, ಸೆ. ೨: ವೀರಶೈವ ಲಿಂಗಾಯಿತ ಪಂಚಮಸಾಲಿ ಸಮಾಜದ ಪರವಾಗಿ ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವ ಕೂಡಲ ಸಂಗಮದ ಶ್ರೀ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿಯವರಿಗೆ ಬೆಂಬಲ ನೀಡುವುದಾಗಿ ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
    ಅವರು ಗುರುವಾರ ನಗರಕ್ಕೆ ಆಗಮಿಸಿದ ಶ್ರೀ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿಯವರಿಗೆ ಗೌರವ ಸಮರ್ಪಣೆ ಸಲ್ಲಿಸಿ ಮಾತನಾಡಿದರು.
    ಸ್ವಾಮೀಜಿಯವರು ಯಾವುದೇ ಸ್ವಾರ್ಥಕ್ಕಾಗಿ ಹೋರಾಟ ನಡೆಸುತ್ತಿಲ್ಲ. ಪಂಚಮಸಾಲಿ ಸಮಾಜದ ಏಳಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಸಮಾಜದ ಮುಖ್ಯ ವಾಹಿನಿಯಲ್ಲಿ ಎಲ್ಲರೂ ಸಮಾನವಾಗಿ ಗುರುತಿಸಿಕೊಳ್ಳಬೇಕೆಂಬುದು ಹೋರಾಟದ ಉದ್ದೇಶವಾಗಿದೆ. ಇದನ್ನು ಎಲ್ಲರೂ ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ನ್ಯಾಯಬದ್ಧವಾದ ಹೋರಾಟಕ್ಕೆ ಸದಾ ಕಾಲ ಬೆಂಬಲ ನೀಡುತ್ತೇನೆ. ಸ್ವಾಮೀಜಿಯವರ ಹೋರಾಟಕ್ಕೆ ಕೈ ಜೋಡಿಸುತ್ತೇನೆ ಎಂದರು.
    ಶ್ರೀ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ನಮ್ಮ ಹೋರಾಟಕ್ಕೆ ಎಲ್ಲೆಡೆ ವ್ಯಾಪಕವಾಗಿ ಬೆಂಬಲ ಲಭಿಸುತ್ತಿರುವುದು ಸಂತೋಷದ ವಿಚಾರವಾಗಿದೆ. ಶಾಸಕ ಸಂಗಮೇಶ್ವರ್ ಸಹ ಬೆಂಬಲ ಸೂಚಿಸಿರುವುದು ಹೋರಾಟಕ್ಕೆ ಮತ್ತಷ್ಟು ಶಕ್ತಿ ತುಂಬಿದಂತಾಗಿದೆ. ಎಲ್ಲರೂ ನಮ್ಮ ಹೋರಾಟಕ್ಕೆ ಕೈಜೋಡಿಸಬೇಕೆಂದರು.
    ಪಂಚಮಸಾಲಿ ಸಮಾಜದ ಚಾಮರಾಜನಗರ ಜಿಲ್ಲಾಧ್ಯಕ್ಷ ಮಲ್ಲೇಶ್, ಹಳೇನಗರದ ವೀರಶೈವ ಸೇವಾ ಸಮಿತಿ ಅಧ್ಯಕ್ಷ ಆರ್.
ಮಹೇಶ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸಮಾಜದ ತಾಲೂಕು ಅಧ್ಯಕ್ಷ ಎಸ್. ಸತೀಶ್ ಅಧ್ಯಕ್ಷತೆ ವಹಿಸಿದ್ದರು.

ವಿವಿಧೆಡೆ ಅಭಿಮಾನಿಗಳು, ಕಾರ್ಯಕರ್ತರಿಂದ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಮೊದಲ ಪುಣ್ಯಸ್ಮರಣೆ ಆಚರಣೆ

ಉಚಿತ ಆರೋಗ್ಯ ತಪಾಸಣಾ ಶಿಬಿರ, ವಿಕಲಚೇತನರು, ನಿರಾಶ್ರಿತರಿಗೆ ಉಚಿತ ಕ್ಷೌರ, ಅನ್ನ ಸಂತರ್ಪಣೆ


ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಮೊದಲ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಭದ್ರಾವತಿ ನಗರಸಭೆ ವಾರ್ಡ್ ನಂ.೩೧ರ ಜಿಂಕ್‌ಲೈನ್ ಸಮುದಾಯ ಭವನದಲ್ಲಿ ವಾರ್ಡ್ ನಗರಸಭಾ ಸದಸ್ಯೆ ಪಲ್ಲವಿ ಎಸ್ ದಿಲೀಪ್ ನೇತೃತ್ವದಲ್ಲಿ ಶಿವಮೊಗ್ಗ ಸುಬ್ಬಯ್ಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಹಾಗು ತಾಲೂಕು ಸರ್ಕಾರಿ ಆಸ್ಪತ್ರೆ ಸಹಕಾರದೊಂದಿಗೆ ಆಯೋಜಿಸಲಾಗಿತ್ತು.  
    ಭದ್ರಾವತಿ, ಸೆ. ೨: ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಅವರ ಮೊದಲ ವರ್ಷದ ಪುಣ್ಯ ಸ್ಮರಣೆಯನ್ನು ಗುರುವಾರ ನಗರದ ವಿವಿಧೆಡೆ ಅಭಿಮಾನಿಗಳು, ಕಾರ್ಯಕರ್ತರು ಆಚರಿಸಿದರು.
    ಉಚಿತ ಆರೋಗ್ಯ ತಪಾಸಣಾ ಶಿಬಿರ ನಗರಸಭೆ ವಾರ್ಡ್ ನಂ.೩೧ರ ಜಿಂಕ್‌ಲೈನ್ ಸಮುದಾಯ ಭವನದಲ್ಲಿ ವಾರ್ಡ್ ನಗರಸಭಾ ಸದಸ್ಯೆ ಪಲ್ಲವಿ ಎಸ್ ದಿಲೀಪ್ ನೇತೃತ್ವದಲ್ಲಿ ಶಿವಮೊಗ್ಗ ಸುಬ್ಬಯ್ಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಹಾಗು ತಾಲೂಕು ಸರ್ಕಾರಿ ಆಸ್ಪತ್ರೆ ಸಹಕಾರದೊಂದಿಗೆ ಆಯೋಜಿಸಲಾಗಿತ್ತು.  
    ಚರ್ಮ ವೈದ್ಯರು, ದಂತ ತಜ್ಞರು, ಸರ್ಜನ್, ಕಿವಿ, ಮೂಗು, ಗಂಟಲು, ಮಕ್ಕಳ ತಜ್ಞರು ಮತ್ತು ಕಣ್ಣಿನ ತಜ್ಞರು ಶಿಬಿರದಲ್ಲಿ ತಪಾಸಣೆ ನಡೆಸಿದರು. ಜೊತೆಗೆ ಉಚಿತವಾಗಿ ಇಸಿಜಿ, ರಕ್ತದೊತ್ತಡ ಮತ್ತು ಮಧುಮೇಹ ಪರೀಕ್ಷೆ ನಡೆಸಲಾಯಿತು. ಸುಮಾರು ೪೫೦ಕ್ಕೂ ಹೆಚ್ಚು ಮಂದಿ ಶಿಬಿರದಲ್ಲಿ ಪಾಲ್ಗೊಂಡು ಸದುಪಯೋಗ ಪಡೆದುಕೊಂಡರು.
    ಜೆಡಿಎಸ್ ಪಕ್ಷದ ವರಿಷ್ಠರಾದ ಶಾರದ ಅಪ್ಪಾಜಿ ಶಿಬಿರಕ್ಕೆ ಚಾಲನೆ ನೀಡಿದರು. ಸದಸ್ಯೆ ಪಲ್ಲವಿ ಎಸ್ ದಿಲೀಪ್, ಜೆಡಿಎಸ್ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ, ಜಿ.ಪಂ. ಮಾಜಿ ಸದಸ್ಯ ಎಸ್. ಕುಮಾರ್, ಮುಖಂಡರಾದ ಕ್ಲಬ್ ಸುರೇಶ್, ಶ್ರೀನಿವಾಸ್, ಯೋಗೇಶ್‌ಕುಮಾರ್ ಹಾಗು ಅಪ್ಪಾಜಿ ಅಭಿಮಾನಿ ಬಳಗದವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
       ವಿಕಲಚೇತನರು, ನಿರಾಶ್ರಿತರಿಗೆ ಉಚಿತ ಕ್ಷೌರ:
    ತಾಲೂಕು ಸವಿತಾ ಸಮಾಜ ಹಾಗು ನ್ಯೂಟೌನ್ ದಯಾಸಾಗರ್ ಟ್ರಸ್ಟ್ ವತಿಯಿಂದ ಎಂ.ಜೆ ಅಪ್ಪಾಜಿ ಸ್ಮರಣಾರ್ಥ ವಿಕಲಚೇತನರು, ನಿರಾಶ್ರಿತರಿಗೆ ಉಚಿತ ಕ್ಷೌರ ನೆರವೇರಿಸಲಾಯಿತು.
    ದಯಾಸಾಗರ್ ಟ್ರಸ್ಟ್ ಅಧ್ಯಕ್ಷ ಮೋಸಸ್ ರೋಸಯ್ಯ, ಸವಿತಾ ಸಮಾಜದ ಶಿವಶಂಕರ್, ಕೆ. ಗೋಪಾಲಕೃಷ್ಣ, ನರಸಿಂಹಮೂರ್ತಿ, ಬಿ.ಎನ್ ಮಹೇಶ್‌ಕುಮಾರ್, ರವಿಕುಮಾರ್, ಚಂದ್ರು, ಶಿವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಗೋಣಿಬೀಡಿನ ಅಪ್ಪಾಜಿ ಸಮಾದಿಗೆ ಪೂಜೆ :
    ಅಪ್ಪಾಜಿ ಕುಟುಂಬ ಅಧಿಕೃತವಾಗಿ ಸೆ.೨೧ರಂದು ಮೊದಲ ಪುಣ್ಯ ಸ್ಮರಣೆ ಆಚರಿಸಲಿದ್ದು, ಗುರುವಾರ ಅಭಿಮಾನಿಗಳು ಹಾಗು ಕಾರ್ಯಕರ್ತರೊಂದಿಗೆ ಗೋಣಿಬೀಡಿನ ಅಪ್ಪಾಜಿ ಸಮಾದಿಗೆ ವಿಶೇಷ ಪೂಜೆ ಸಲ್ಲಿಸುವ ಜೊತೆಗೆ ಅನ್ನಸಂತರ್ಪಣೆ ನೆರವೇರಿಸಿದರು. ಶಾರದ ಅಪ್ಪಾಜಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


ಭದ್ರಾವತಿ ತಾಲೂಕು ಸವಿತಾ ಸಮಾಜ ಹಾಗು ನ್ಯೂಟೌನ್ ದಯಾಸಾಗರ್ ಟ್ರಸ್ಟ್ ವತಿಯಿಂದ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಮೊದಲ ಪುಣ್ಯಸ್ಮರಣೆ ನಡೆಯಿತು.

ನಗರಸಭೆ ವಾರ್ಡ್ ನಂ.೨೯ರ ಚುನಾವಣೆ ಮತದಾನಕ್ಕೆ ಸಕಲ ಸಿದ್ದತೆ

ಒಟ್ಟು ೩೪೨೩ ಮತದಾರರು, ೪ ಮತಗಟ್ಟೆಗಳು, ೩ ಅಭ್ಯರ್ಥಿಗಳು


ಭದ್ರಾವತಿ, ಸೆ. ೨: ನಗರಸಭೆ ವಾರ್ಡ್ ನಂ.೨೯ರ ಚುನಾವಣೆಯ ಮತದಾನ ಸೆ.೩ರಂದು ಬೆಳಿಗ್ಗೆ ೭ ಗಂಟೆಯಿಂದ ಸಂಜೆ ೫ ಗಂಟೆವರೆಗೆ ನಡೆಯಲಿದ್ದು, ಚುನಾವಣಾ ಆಯೋಗ ಈಗಾಗಲೇ ಮತದಾನಕ್ಕೆ ಅಗತ್ಯವಿರುವ ಎಲ್ಲಾ ಸಿದ್ದತೆಗಳನ್ನು ಕೈಗೊಂಡಿದೆ.
    ೧೭೦೭ ಪುರುಷ ಹಾಗು ೧೭೧೬ ಮಹಿಳಾ ಮತದಾರರು ಸೇರಿ ಒಟ್ಟು ೩೪೨೩ ಮತದಾರನ್ನು ಒಳಗೊಂಡಿದೆ. ಜಯಶ್ರೀ ವೃತ್ತದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಉರ್ದು ಸರ್ಕಾರಿ ಶಾಲೆ, ನ್ಯೂಟೌನ್ ನಗರಸಭೆ ಶಾಖಾ ಕಛೇರಿ ಹಾಗು ಸಿದ್ದಾಪುರ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮತದಾನ ಕೇಂದ್ರಗಳನ್ನು ತೆರೆಯಲಾಗಿದ್ದು, ಒಂದು ಮತದಾನ ಕೇಂದ್ರದಲ್ಲಿ ೪ ಸಿಬ್ಬಂದಿಗಳು, ಇಬ್ಬರು ಪೊಲೀಸರು ಕರ್ತವ್ಯ ನಿರ್ವಹಿಸಲಿದ್ದಾರೆ.
    ಹೆಚ್ಚಿನ ಪ್ರಮಾಣದಲ್ಲಿ ಶ್ರೀಮಂತ ವರ್ಗದವರು ವಾಸಿಸುತ್ತಿರುವ ಈ ವಾರ್ಡ್ ಜನ್ನಾಪುರ ಭಾಗದಲ್ಲಿದ್ದು, ಕಿತ್ತೂರು ರಾಣಿ ಚನ್ನಮ್ಮ ಬಡಾವಣೆ(ಕೆ.ಸಿ ಬ್ಲಾಕ್), ರಾಜಪ್ಪ ಬಡಾವಣೆ ಹಾಗು ಸಿದ್ದಾಪುರ ಎನ್‌ಟಿಬಿ ಬಡಾವಣೆಯನ್ನು ಈ ವಾರ್ಡ್ ಒಳಗೊಂಡಿದೆ. ಮೂಲ ನಿವಾಸಿಗಳು ಕಡಿಮೆ ಸಂಖ್ಯೆಯಲ್ಲಿದ್ದು, ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
    ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ.ಜಿ ಲೋಹಿತಾ ನಂಜಪ್ಪ, ಜೆಡಿಎಸ್ ಅಭ್ಯರ್ಥಿಯಾಗಿ ಆರ್. ನಾಗರತ್ನ ಮತ್ತು ಬಿಜೆಪಿ ಅಭ್ಯರ್ಥಿಯಾಗಿ ರಮಾ ವೆಂಕಟೇಶ್ ಕಣದಲ್ಲಿದ್ದು, ಸೆ.೬ರಂದು ಎಣಿಕೆ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ. ಈಗಾಗಲೇ ಒಟ್ಟು ೩೫ ವಾರ್ಡ್‌ಗಳ ಪೈಕಿ ೧ ಪಕ್ಷೇತರ, ೧೮ ಕಾಂಗ್ರೆಸ್, ೧೧ ಜೆಡಿಎಸ್ ಮತ್ತು ೪ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.