Tuesday, September 21, 2021

ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಗೆ ಅದ್ದೂರಿ ಸ್ವಾಗತ

ಭದ್ರಾವತಿಗೆ ಮಂಗಳವಾರ ಆಗಮಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರನ್ನು ಸನ್ಮಾನಿಸಿ ಸ್ವಾಗತಿಸಲಾಯಿತು.
    ಭದ್ರಾವತಿ, ಸೆ. ೨೧: ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಅವರ ಮೊದಲ ವರ್ಷದ ಪುಣ್ಯಸ್ಮರಣೆ, ಶಕ್ತಿಧಾಮ ಉದ್ಘಾಟನೆ ಹಾಗು ಪ್ರತಿಮೆ ಅನಾವರಣ ಕಾರ್ಯಕ್ರಮ ನಿಮಿತ್ತ ಮಂಗಳವಾರ ನಗರಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಗೆ ಅದ್ದೂರಿ ಸ್ವಾಗತ ಕೋರಲಾಯಿತು.
    ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಕುಮಾರಸ್ವಾಮಿಯವರು ನಗರಕ್ಕೆ ಆಗಮಿಸುತ್ತಿದ್ದಂತೆ ಘೋಷಣೆಗಳನ್ನು ಕೂಗಿ ಜೈಕಾರ ಹಾಕುವ ಮೂಲಕ ಪಟಾಕಿ ಸಿಡಿಸಿ ಸಂಭ್ರಮಿಸಿದರು.
    ನಗರಸಭಾ ಸದಸ್ಯೆ ವಿಜಯ ಹಾಗು ಜೆಡಿಎಸ್ ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಧುಕುಮಾರ್ ನೇತೃತ್ವದಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕುಮಾರಸ್ವಾಮಿ ಅವರನ್ನು ಸನ್ಮಾನಿಸಲಾಯಿತು.


ಕಬಡ್ಡಿ ತರಬೇತಿದಾರ ಚಿನ್ನರಾಜು ನಿಧನ

ಚಿನ್ನರಾಜು
    ಭದ್ರಾವತಿ, ಸೆ. ೨೧: ನಗರದ ಬುಳ್ಳಾಪುರ ನಿವಾಸಿ, ಕಬಡ್ಡಿ ತರಬೇತಿದಾರ ಚಿನ್ನರಾಜು(೫೫) ಹೃದಯಾಘಾತದಿಂದ ಮಂಗಳವಾರ ನಿಧನ ಹೊಂದಿದರು.
    ಪತ್ನಿ, ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿದ್ದರು. ಫೆ.೨೭ ಮತ್ತು ೨೮ರಂದು ಹಳೇನಗರದ ಕನಕಮಂಟಪ ಮೈದಾನದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಹೊನಲು ಬೆಳಕಿನ ಪ್ರೊ. ಕಬಡ್ಡಿ(ಮಾಟ್) ಪಂದ್ಯಾವಳಿಯಲ್ಲಿ ಸ್ನೇಹಜೀವಿ ಬಳಗದ ತಂಡ ಮೊದಲ ಬಹುಮಾನ ಪಡೆದುಕೊಳ್ಳಲು ಕಾರಣಕರ್ತರಾಗಿದ್ದರು.
    ಇವರ ನಿಧನಕ್ಕೆ ಸ್ನೇಹ ಬಳಗದ ಪೊಲೀಸ್ ಉಮೇಶ್, ಕರ್ನಾಟಕ ರಾಜ್ಯ ಅಮೆಚೂರ್ ಅಸೋಸಿಯೇಷನ್ ಹಾಗು ಕಬಡ್ಡಿ ಕ್ರೀಡಾಪಟುಗಳು ಮತ್ತು ಇನ್ನಿತರ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಅಪ್ಪಾಜಿ ಆದರ್ಶತನ ಇಂದಿನ ರಾಜಕಾರಣಿಗಳಿಗೆ ಅವಶ್ಯಕ : ಎಚ್.ಡಿ ಕುಮಾರಸ್ವಾಮಿ

ಭದ್ರಾವತಿ ತಾಲೂಕಿನ ಗೋಣಿಬೀಡು ಗ್ರಾಮದಲ್ಲಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಅವರ ಮೊದಲ ವರ್ಷದ ಪುಣ್ಯಸ್ಮರಣೆ, ಶಕ್ತಿಧಾಮ ಉದ್ಘಾಟನೆ ಹಾಗು ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಉದ್ಘಾಟಿಸಿ ಮಾತನಾಡಿದರು.    
    ಭದ್ರಾವತಿ, ಸೆ. ೨೧: ಮಾಜಿ ಶಾಸಕರಾದ ದಿವಂಗತ ಎಂ.ಜೆ ಅಪ್ಪಾಜಿ ಅವರು ನೇರ ನುಡಿ ವ್ಯಕ್ತಿತ್ವದ ಧೀಮಂತ ರಾಜಕಾರಣಿಯಾಗಿದ್ದು, ನಾಡಿನ ಸಜ್ಜನ ರಾಜಕಾರಣಿಗಳಲ್ಲಿ ಒಬ್ಬರಾಗಿ ನಮ್ಮಿಂದ ಕಣ್ಮರೆಯಾಗಿರುವುದು ನೋವುಂಟು ಮಾಡಿದೆ. ಇಂತಹ ನಾಯಕನ ಆದರ್ಶತನ ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಬಣ್ಣಿಸಿದರು.
    ಅವರು ಮಂಗಳವಾರ ತಾಲೂಕಿನ ಗೋಣಿಬೀಡು ಗ್ರಾಮದಲ್ಲಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಅವರ ಮೊದಲ ವರ್ಷದ ಪುಣ್ಯಸ್ಮರಣೆ, ಶಕ್ತಿಧಾಮ ಉದ್ಘಾಟನೆ ಹಾಗು ಪ್ರತಿಮೆ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಪ್ಪಾಜಿಯವರು ಹಿರಿಯ ರಾಜಕಾರಣಿಯಾಗಿದ್ದು, ದೇವೇಗೌಡರ ಅಭಿಮಾನಿಯಾಗಿ, ಜೆಡಿಎಸ್ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ನಂತರ ಶಾಸಕರಾಗಿ ಆಯ್ಕೆಯಾದವರು. ಅವರು ಶ್ರೀಮಂತ ಕುಟುಂಬದಿಂದ ಬಂದವರಲ್ಲ. ಹಣ ಸಂಪಾದನೆಗಾಗಿ ರಾಜಕಾರಣ ಮಾಡಲಿಲ್ಲ. ಬದಲಿಗೆ ಬಡವರ ಧ್ವನಿಯಾಗಿ ನಿಂತವರು. ಅವರು ನಮ್ಮಿಂದ ದೂರವಾಗಿ ೧ ವರ್ಷ ಕಳೆದರೂ ಸಹ ಕ್ಷೇತ್ರದಲ್ಲಿ ಅವರ ಮೇಲಿನ ಅಭಿಮಾನ ಕಡಿಮೆಯಾಗಿಲ್ಲದಿರುವುದು ಅಪ್ಪಾಜಿಯವರು ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆಗೆ ಸಾಕ್ಷಿಯಾಗಿದೆ ಎಂದರು.
    ಎಚ್.ಡಿ ದೇವೇಗೌಡರವರು ದೇಶದ ಪ್ರಧಾನಿಯಾಗಿದ್ದಾಗ ವಿಐಎಸ್‌ಎಲ್ ಕಾರ್ಖಾನೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅಪ್ಪಾಜಿ ಅವರು ನಡೆಸಿದ ಪ್ರಯತ್ನ ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಅಲ್ಲದೆ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಜನಮೆಚ್ಚಿದ ನಾಯಕರಾಗಿದ್ದಾರೆ. ಇಂತಹ ನಾಯಕನಿಗೆ ಗೌರವ ನೀಡುವ ನಿಟ್ಟಿನಲ್ಲಿ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಸರ್ಕಾರ ಅಪ್ಪಾಜಿ ಹೆಸರನ್ನು ನಾಮಕರಣಗೊಳಿಸಬೇಕೆಂದು ಆಗ್ರಹಿಸಿದರು.
      ೨೦೨೩ರಲ್ಲಿ ರಾಜ್ಯದಲ್ಲಿ ಜೆಡಿಎಸ್ ಸರ್ಕಾರ :
    ಜೆಡಿಎಸ್ ಬಲವರ್ಧನೆಗೆ ಅಂದು ಭದ್ರಾವತಿ ನಗರದಲ್ಲಿ ಎಚ್.ಡಿ ದೇವೇಗೌಡರು, ವೀರೇಂದ್ರ ಪಾಟೀಲ್ ಹಾಗು ಸಿಂ.ಎಂ ಇಬ್ರಾಹಿಂ ಸೇರಿದಂತೆ ಹಿರಿಯರು ಕೈಗೊಂಡ ಸಂಕಲ್ಪದಿಂದಾಗಿ ದೇವೇಗೌಡರು ಈ ದೇಶದ ಪ್ರಧಾನಿಯಾಗಲು ನಾಂದಿಯಾಯಿತು. ಇಂತಹ ನೆಲದಲ್ಲಿ ಇದೀಗ ಮತ್ತೊಮ್ಮೆ ರಾಜಕೀಯದ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಸಮ್ಮಿಶ್ರ ಸರ್ಕಾರದ ಮೂಲಕ ರಾಜ್ಯದ ಅಭಿವೃದ್ಧಿ, ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಲು ಸಾಧ್ಯವಿಲ್ಲ. ಜೆಡಿಎಸ್ ಪಕ್ಷಕ್ಕೆ ಜನರ ಬೆಂಬಲವಿದೆ. ಪಕ್ಷವನ್ನು ಮುಳುಗಿಸಲು ಯಾರಿಂದಲೂ ಸಾಧ್ಯವಿಲ್ಲ. ರಾಜ್ಯದಲ್ಲಿ ೨೦೨೩ರಲ್ಲಿ ಜೆಡಿಎಸ್ ಸರ್ಕಾರ ಅಸ್ತಿತ್ವಕ್ಕೆ ಬರುವ ವಿಶ್ವಾಸ ನನಗಿದೆ ಎಂದರು.
    ಶಾರದ ಅಪ್ಪಾಜಿ ಬೆಂಬಲಿಸಿ :
    ಮಾಜಿ ಶಾಸಕರಾದ ಎಂ.ಜೆ ಅಪ್ಪಾಜಿ ಅವರ ಸ್ಥಾನ ತುಂಬಲು ಮುಂದಿನ ವಿಧಾನಸಭಾ ಚುನಾವಣೆಗೆ ಅವರ ಪತ್ನಿ ಶಾರದ ಅಪ್ಪಾಜಿ ಅವರನ್ನು ಎಲ್ಲರೂ ಬೆಂಬಲಿಸಬೇಕು. ಈ ನಿಟ್ಟಿನಲ್ಲಿ ರಾಜ್ಯಮಟ್ಟದಲ್ಲಿ ಜೆಡಿಎಸ್ ಬಲವರ್ಧನೆಗೆ ಕ್ಷೇತ್ರದ ಮತದಾರರು ಕಾರಣಕರ್ತರಾಗಬೇಕೆಂದು ಮನವಿ ಮಾಡಿದರು.
    ಅಕ್ಟೋಬರ್ ೨ರಂದು ರಾಜಕೀಯ ಪ್ರವೇಶ:
    ಶಾರದ ಅಪ್ಪಾಜಿ ಮಾತನಾಡಿ, ಜನರ ಅಪೇಕ್ಷೆಯಂತೆ ಅಪ್ಪಾಜಿ ಅವರ ಸ್ಥಾನ ತುಂಬಲು ನಾನು ಸಿದ್ದವಾಗಿದ್ದೇನೆ. ನಾನು ಯಾರಿಗೂ ಹೆದರಬೇಕಾದ ಅವಶ್ಯಕತೆ ಇಲ್ಲ. ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಮುಖ್ಯವಾಗಿ ಕ್ಷೇತ್ರದ ಮತದಾರರು ನನ್ನ ಪರವಾಗಿದ್ದಾರೆ. ಈ ಹಿನ್ನಲೆಯಲ್ಲಿ ಅಕ್ಟೋಬರ್ ೨ ರಂದು ಗಾಂಧಿ ಜಯಂತಿಯಂದು ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ನನ್ನ ರಾಜಕೀಯ ಜೀವನ ಆರಂಭಿಸುವುದಾಗಿ ಘೋಷಿಸಿದರು.
    ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ,  ಕಡೂರು ಮಾಜಿ ಶಾಸಕ ವೈಎಸ್‌ವಿ ದತ್ತ, ಜೆಡಿಎಸ್ ಮುಖಂಡ ಎಂ. ಶ್ರೀಕಾಂತ್, ಅಪ್ಪಾಜಿ ಪತ್ನಿ ಶಾರದ ಅಪ್ಪಾಜಿ, ಪುತ್ರ ಎಂ.ಎ ಅಜಿತ್ ಮತ್ತು ಜೆಡಿಎಸ್ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರಮುಖರು, ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಗಣ್ಯರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಮೊದಲ ವರ್ಷದ ಪುಣ್ಯಸ್ಮರಣೆ, ಶಕ್ತಿಧಾಮ ಹಾಗು ಪ್ರತಿಮೆ ಅನಾವರಣ


ಭದ್ರಾವತಿ, ಸೆ. 21:  ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಅವರ ಮೊದಲ ವರ್ಷದ ಪುಣ್ಯಸ್ಮರಣೆ, ಶಕ್ತಿಧಾಮ ಹಾಗು ಪ್ರತಿಮೆ ಅನಾವರಣ ಸಮಾರಂಭ ಮಂಗಳವಾರ ತಾಲೂಕಿನ ಗೋಣಿಬೀಡಿನ ಶಾಲಾ ಆವರಣದಲ್ಲಿ ನಡೆಯಿತು.

ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಶಕ್ತಿಧಾಮ ಹಾಗು ಪ್ರತಿಮೆ ಅನಾವರಣ ನೆರವೇರಿಸಿದರು.  ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಶಿವಮೊಗ್ಗ ಬಸವ ಕೇಂದ್ರದ  ಶ್ರೀ ಡಾ. ಬಸವ ಮರುಳಸಿದ್ದ ಸ್ವಾಮೀಜಿ, ಕನಕ ಗುರುಪೀಠ ಹೊಸದುರ್ಗ ಶಾಖೆಯ ಶ್ರೀ ಈಶ್ವರಾನಂದ ಸ್ವಾಮೀಜಿ, ಚಿತ್ರದುರ್ಗ ಛಲವಾದಿ ಜಗದ್ಗುರು ಪೀಠದ ಶ್ರೀ ಬಸವನಾಗಿದೇವ ಶರಣರು, ಚಿತ್ರದುರ್ಗ ಬಂಜಾರ ಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಹರಿಹರ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಮಹರ್ಷಿ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಹಿರಿಯೂರು ಕೋಡಿಹಳ್ಳಿ ಬೃಹನ್ಮಠ ಮಾದಾರ ಪೀಠದ ಶ್ರೀ ಆದಿಜಾಂಭವ ಮಾರ್ಕಾಂಡಮುನಿ ಸ್ವಾಮೀಜಿ, ಅರಕೆರೆ ವಿರಕ್ತಮಠದ ಶ್ರೀ ಕರಿಸಿದ್ದೇಶ್ವರ ಸ್ವಾಮೀಜಿ, ಶ್ರೀ ಕ್ಷೇತ್ರ ಭದ್ರಗಿರಿಯ ಶ್ರೀ ಮುರುಗೇಶ್ ಸ್ವಾಮೀಜಿ, ಸಿಎಸ್‌ಐ ವೇನ್ಸ್ ಮೆಮೋರಿಯಲ್ ಚರ್ಚ್‌ನ ಶಿವಮೊಗ್ಗ ವಲಯಾಧ್ಯಕ್ಷ ರೆವರೆಂಡ್ ಜಿ. ಸ್ಟ್ಯಾನ್ಲಿ ಮತ್ತು ಶಿವಮೊಗ್ಗ ದಾರುಲ್ ಇ-ಹಸನ್ ಮದರಸ ಪ್ರಿನ್ಸಿಪಾಲ್ ಶ್ರೀ ಮೌಲಾನ ಶಾಹುಲ್ ಹಮೀದ್ ಉಪಸ್ಥಿತರಿದ್ದರು..

 ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ,  ಕಡೂರು ಮಾಜಿ ಶಾಸಕ ವೈಎಸ್‌ವಿ ದತ್ತ, ಜೆಡಿಎಸ್ ಮುಖಂಡ ಎಂ. ಶ್ರೀಕಾಂತ್ ಮತ್ತು ಜೆಡಿಎಸ್ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರಮುಖರು, ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಗಣ್ಯರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Monday, September 20, 2021

ಜನಸೇವೆಗೆ ಅವಕಾಶ ಮಾಡಿಕೊಟ್ಟ ಧೀಮಂತ ನಾಯಕ

    ಮಾಜಿ ಶಾಸಕರಾದ ಎಂ.ಜೆ ಅಪ್ಪಾಜಿ ಅವರೊಂದಿಗೆ ಸುಮಾರು ೧೫ ವರ್ಷಗಳ ಒಡನಾಟ ನನ್ನದು. ಅಪ್ಪಾಜಿಯವರ ಹೋರಾಟದ ಗುಣಗಳು, ಬಡವರ ಬಗೆಗಿನ ಕಾಳಜಿಯಿಂದಾಗಿ ಆರಂಭದಿಂದಲೂ ಅವರೊಂದಿಗೆ  ಸಾಮಾನ್ಯ ಕಾರ್ಯಕರ್ತನಾಗಿಯೇ ಇರಬೇಕೆಂದು ಬಯಸಿದ್ದೆ. ಕೊನೆ ಘಳಿಗೆಯಲ್ಲಿ  ಅವರ ನಿಧನದ ನಂತರ ನಗರಸಭೆ ಸದಸ್ಯನಾಗಿ ಜನರ ಸೇವೆ ಮಾಡಲು ಅವಕಾಶ ಲಭಿಸಿದೆ ಎಂದು ನಗರಸಭೆ ವಾರ್ಡ್  ನಂ.೨೪ರ  ಸದಸ್ಯ ಕೋಟೇಶ್ವರ್ ರಾವ್ ನೆನಪು ಮಾಡಿ ಕೊಳ್ಳುತ್ತಾರೆ.
      ಅಪ್ಪಾಜಿಯವರ  ಮೊದಲ ವರ್ಷದ ಪುಣ್ಯ ಸ್ಮರಣೆ ಸಂದರ್ಭದಲ್ಲಿ ಮನದಾಳದ ಮಾತುಗಳನ್ನು ಹಂಚಿಕೊಂಡಿರುವ ಕೋಟೇಶ್ವರ ರಾವ್  ಅವರು, ಅಪ್ಪಾಜಿಯವರು ನನ್ನ ರಾಜಕೀಯ ಗುರುಗಳು. ಅವರೊಂದಿಗೆ ನಾನು ಕೊನೆಯವರೆಗೂ ಸಾಮಾನ್ಯ ಕಾರ್ಯಕರ್ತನಾಗಿಯೇ ಇದ್ದೆ. ಅವರೊಂದಿಗಿನ ಒಡನಾಟ,  ನಾನು ಸಹ  ಜನರ ಸೇವೆ ಮಾಡಬೇಕೆಂಬ ಬಯಕೆ ಮೂಡಲು ಕಾರಣವಾಯಿತು.  ಆದರೂ ಸಹ ಅಪ್ಪಾಜಿ ಅವರಿಂದ ವೈಯಕ್ತಿಕವಾಗಿ ನಾನು ಏನನ್ನು  ಬಯಸಲಿಲ್ಲ. ಅವರು ಎಂದಿಗೂ ಕ್ಷೇತ್ರದ ಶಾಸಕರಾಗಿರಬೇಕೆಂಬ ಆಸೆ ನನ್ನದಾಗಿತ್ತು. ಈ ಹಿನ್ನೆಲೆಯಲ್ಲಿ ನಾನು ಕೊನೆಯವರೆಗೂ ಸಾಮಾನ್ಯ ಕಾರ್ಯಕರ್ತನಾಗಿರಲು ಬಯಸಿದ್ದೆ. ಆದರೂ ಅವರ ನಿಧನದ ನಂತರ ಅಪ್ಪಾಜಿ ಅವರ ಆಶೀರ್ವಾದದಿಂದ ನನಗೂ ಸಹ ಜನರ ಸೇವೆ ಮಾಡುವ ಅವಕಾಶ ಲಭಿಸಿತು.  ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಅಪ್ಪಾಜಿಯವರ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡು ಮುನ್ನಡೆಯುತ್ತೇನೆ ಎಂದರು.

ಸಣ್ಣಪುಟ್ಟ ಸಮುದಾಯಗಳನ್ನು ಗುರುತಿಸಿದ ಧೀಮಂತ ನಾಯಕ

    ಮಾಜಿ ಶಾಸಕರಾದ ಅಪ್ಪಾಜಿ ಅವರೊಂದಿಗೆ ನನ್ನದು ಸುಮಾರು  ಇಪ್ಪತ್ತೈದು ವರ್ಷಗಳ ಒಡನಾಟ. ಅಪ್ಪಾಜಿ ಅವರಲ್ಲಿನ ಬಡವರ ಬಗೆಗಿನ ಕಾಳಜಿ, ಹೋರಾಟದ ಗುಣಗಳಿಂದ ಆಕರ್ಷಿತನಾಗಿ  ಅವರ  ಒಡನಾಟ ಬಯಸಿದೆ ಎಂದು ನೆನಪು ಮಾಡಿಕೊಳ್ಳುತ್ತಾರೆ ನಗರಸಭೆ ವಾರ್ಡ್ ನಂ.೧೯ರ ನಗರಸಭಾ ಸದಸ್ಯ ಬಸವರಾಜ ಬಿ ಆನೆಕೊಪ್ಪ.
    ಅಪ್ಪಾಜಿಯವರ ಮೊದಲನೇ ವರ್ಷದ ಪುಣ್ಯ ಸ್ಮರಣೆ ಸಂದರ್ಭದಲ್ಲಿ ಮನದಾಳದ ಮಾತುಗಳನ್ನು ಹಂಚಿಕೊಂಡಿರುವ ಬಸವರಾಜ್ ಬಿ ಆನೆಕೊಪ್ಪ ಅವರು, ನಾನು ಎಂದಿಗೂ ವೈಯಕ್ತಿಕವಾಗಿ ಅವರೊಂದಿಗೆ ಅಧಿಕಾರಕ್ಕಾಗಿ  ಇರಲಿಲ್ಲ.  ಅವರ ಅಭಿಮಾನಿಯಾಗಿ,  ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಅವರೊಂದಿಗಿದ್ದೆ. ಎಲ್ಲಾ ತಳ ಸಮುದಾಯದ ಬಡ ವರ್ಗದವರನ್ನು ಗುರುತಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತಂದ ಧೀಮಂತ ನಾಯಕ ಅಪ್ಪಾಜಿ ಅವರು ಎಂಬುದು ಹೆಮ್ಮೆಯ ವಿಚಾರವಾಗಿದೆ.  ನಾನು ವಾಲ್ಮೀಕಿ ನಾಯಕ ಸಮಾಜದ ತಾಲ್ಲೂಕು ಅಧ್ಯಕ್ಷನಾದ ನಂತರ   ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಸುಮಾರು ೨ ಕೋ. ರು. ಅನುದಾನ ಬಿಡುಗಡೆ ಮಾಡಿಸಿದ್ದರು. ಅಲ್ಲದೆ ಗ್ರಾಮಾಂತರ ಭಾಗದಲ್ಲಿ ಸಮಾಜದ ಸುಮಾರು ೫-೬ ಸಮುದಾಯ ಭವನಗಳ ನಿರ್ಮಾಣಕ್ಕೆ ಸುಮಾರು ಹನ್ನೆರಡು ಲಕ್ಷ ರು. ಮಂಜೂರಾತಿ ಮಾಡಿಸಿದ್ದರು. ಕೇವಲ ನನ್ನ ಸಮಾಜಕ್ಕೆ ಮಾತ್ರವಲ್ಲ ಇದೇ ರೀತಿ ಎಲ್ಲಾ  ಸಮಾಜಕ್ಕೂ ಅಪ್ಪಾಜಿಯವರು ನೆರವಾಗಿದ್ದರು.
    ಅವರಿಂದ ನಾನು ಎಂದಿಗೂ ವೈಯಕ್ತಿಕ ಲಾಭವನ್ನು ಬಯಸಲಿಲ್ಲ. ಕೊನೆ ಘಳಿಗೆಯಲ್ಲಿ ಅವರ ನಿಧನದ ನಂತರ  ಅವರ ಆಶೀರ್ವಾದದಿಂದ ನಾನೂ ಸಹ ನಗರಸಭಾ ಸದಸ್ಯನಾಗಿ ಆಯ್ಕೆಯಾಗುವ ಮೂಲಕ ಜನಸೇವೆ ಮಾಡಲು ಅವಕಾಶ ಲಭಿಸಿದೆ. ನನಗೆ ಲಭಿಸಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಅಪ್ಪಾಜಿಯವರ ಹೋರಾಟದ ಗುಣಗಳನ್ನು, ಆದರ್ಶಗಳನ್ನು ಮೈಗೂಡಿಸಿಕೊಂಡು ಪ್ರಾಮಾಣಿಕವಾಗಿ ಜನ ಸೇವೆಯಲ್ಲಿ ತೊಡಗುತ್ತೇನೆ ಎಂದರು.

ಜಿಂಕ್‌ಲೈನ್ ಜನರ ಪ್ರೀತಿಯ ನಾಯಕ ಎಂ.ಜೆ ಅಪ್ಪಾಜಿ

    ನಾನು ಹುಟ್ಟಿದ್ದು ಜಿಂಕ್‌ಲೈನ್‌ನಲ್ಲಿ, ಬಾಲ್ಯದಿಂದಲೂ ಪ್ರೀತಿಯ ಒಡನಾಟ ಹೊಂದಿರುವ ಹಾಗು ಈಗಲೂ ನನ್ನ ನೆಚ್ಚಿನ ನಾಯಕರಾಗಿ ಉಳಿದುಕೊಂಡಿರುವ  ಏಕೈಕ ನಾಯಕ ಎಂದರೆ ಮಾಜಿ ಶಾಸಕರಾದ ಎಂ.ಜೆ ಅಪ್ಪಾಜಿ ಅವರು ಮಾತ್ರ ಎಂದು ನೆನಪು ಮಾಡಿಕೊಳ್ಳುತ್ತಾರೆ ಜಿಂಕ್ ನಿವಾಸಿ, ದಿವಂಗತ ಮಂಜುನಾಥ್ ಹಾಗು ಹೇಮಾವತಿ ಅವರ ಪುತ್ರ ದಿಲೀಪ್.
    ಅಪ್ಪಾಜಿ ಅವರ ಮೊದಲ ಪುಣ್ಯಸ್ಮರಣೆ ಹಿನ್ನಲೆಯಲ್ಲಿ ದಿಲೀಪ್ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಅಪ್ಪಾಜಿ ಹಾಗು ನಮ್ಮ ಕುಟುಂಟಕ್ಕೆ ತುಂಬಾ ಹಳೇಯದಾದ ಆತ್ಮೀಯ ಒಡನಾಟವಿದ್ದು, ಅಪ್ಪಾಜಿ ಅವರಲ್ಲಿನ ಜಾತ್ಯಾತೀತ ಮನೋಭಾವ, ಬಡವರ ಬಗೆಗಿನ ಕಾಳಜಿ ಇಂದಿಗೂ ನಮ್ಮನ್ನು ಆಕರ್ಷಿಸುತ್ತಿದೆ. ಈ ಕಾರಣಕ್ಕಾಗಿ ಅವರೊಂದಿಗೆ ನಮ್ಮ ಕುಟುಂಬ ಗುರುತಿಸಿಕೊಂಡಿದೆ. ಇದೆ ರೀತಿ ಅಪ್ಪಾಜಿ ಅವರು ನಮ್ಮ ಕುಟುಂಬಕ್ಕೆ ಎಲ್ಲಾ ರೀತಿಯಿಂದಲೂ ನೆರವಾಗಿದ್ದರು.
    ಅಪ್ಪಾಜಿ ಹಾಗು ಜೆಡಿಎಸ್ ಪಕ್ಷ ಎರಡು ಒಂದೇ ನಾಣ್ಯದ ಮುಖಗಳಿದ್ದಂತೆ ಈ ಕಾರಣಕ್ಕಾಗಿ ನಾನು ಜೆಡಿಎಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಅಪ್ಪಾಜಿ ಅವರಿಂದ ಯಾವುದೇ ಫಲಾಪೇಕ್ಷೆ ಇಲ್ಲದೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ. ಇದರ ಫಲವಾಗಿ ಈ ಬಾರಿ ನಗರಸಭೆ ಚುನಾವಣೆಯಲ್ಲಿ ನನ್ನ ಪತ್ನಿ ಪಲ್ಲವಿ ಅವರಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡುವ ಮೂಲಕ ಅವರು ಹೆಚ್ಚಿನ ಮತಗಳಿಂದ ಗೆಲುವು ಸಾಧಿಸಿ ನಗರಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಅಪ್ಪಾಜಿ ಅವರನ್ನು ಎಂದಿಗೂ ನಾನು ಹಾಗು ನನ್ನ ಕುಟುಂಬ ಮರೆಯಲು ಸಾಧ್ಯವಿಲ್ಲ.