ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಚಿನ್ನಯ್ಯ ಪತ್ರಿಕಾಗೋಷ್ಠಿಯಲ್ಲಿ ಆರೋಪ
ಭದ್ರಾವತಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಚಿನ್ನಯ್ಯ ಸೇರಿದಂತೆ ಇನ್ನಿತರರು ಮಾತನಾಡಿದರು.
ಭದ್ರಾವತಿ, ಅ. ೧೭: ಪ್ರೊ. ಬಿ. ಕೃಷ್ಣಪ್ಪ ಅವರು ೭೦ರ ದಶಕದಲ್ಲಿ ರಾಜ್ಯಾದ್ಯಂತ ಹುಟ್ಟುಹಾಕಿರುವ ಕರ್ನಾಟಕ ದಲಿತ ಸಂಘರ್ಷ ಸಮಿತಿಗೆ ಸಂಬಂಧಿಸಿದಂತೆ ಕಿರಿಯ ನ್ಯಾಯಾಲಯ ನೀಡಿರುವ ತೀರ್ಪನ್ನು ಪ್ರಶ್ನಿಸಿ ಹಿರಿಯ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲಾಗಿದೆ. ಈ ಹಂತದಲ್ಲಿ ಎಂ. ಗುರುಮೂರ್ತಿ ಎಂಬುವರು ಸಮಿತಿಗೆ ಸಂಬಂಧಿಸಿದ ವಿಚಾರದಲ್ಲಿ ಸಮಾಜದಲ್ಲಿ ಗೊಂದಲ ಮೂಡಿಸುತ್ತಿದ್ದಾರೆಂದು ಸಮಿತಿ ಜಿಲ್ಲಾ ಸಂಚಾಲಕ ಚಿನ್ನಯ್ಯ ಆರೋಪಿಸಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಧಿಕೃತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಎಂದು ಎಂ. ಗುರುಮೂರ್ತಿ ಸ್ವಯಂ ಘೋಷಣೆ ಮಾಡಿಕೊಳ್ಳುವ ಮೂಲಕ ಸಮಿತಿಯ ಹೆಸರನ್ನು ನನ್ನ ಹೊರತುಪಡಿಸಿ ಬೇರೆ ಯಾರೂ ಬಳಸಬಾರದು, ಬಳಸಿದರೆ ಕೇಸು ದಾಖಲಿಸುತ್ತೇನೆ. ಭದ್ರಾವತಿ ಜೆಎಂಎಫ್‌ಸಿ ಕಿರಿಯ ನ್ಯಾಯಾಲಯದಲ್ಲಿ ನನ್ನ ಹೊರತುಪಡಿಸಿ ರಾಜ್ಯದಲ್ಲಿ ಬೇರೆ ಯಾರೂ ಸಮಿತಿಯ ಹೆಸರನ್ನು ಬಳಸಕೂಡದು ಎಂದು ನ್ಯಾಯಾಲಯದ ಆದೇಶವಾಗಿರುತ್ತದೆ ಎಂದು ಹೇಳಿಕೊಂಡು ಗೊಂದಲ ಮೂಡಿಸುತ್ತಿದ್ದಾನೆ. ಈಗಾಗಲೇ ಈ ವಿಚಾರಕ್ಕೆ ಸಂಬಂಧಿಸಿದಂತೆ ಹಿರಿಯ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಾಗಿದ್ದು, ವಿಚಾರಣೆ ಬಾಕಿ ಇರುವಾಗ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
೨೦೦೪ ರಿಂದ ೨೦೦೮ರವರೆಗಿನ ಅವಧಿಯಲ್ಲಿ ಚಿಂತಾಮಣಿಯ ಎನ್. ಶಿವಣ್ಣನವರು ಅಧಿಕೃತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾಗಿದ್ದರು. ಈ ಅವಧಿಯಲ್ಲಿ ಅವರು ಅನಾರೋಗ್ಯದ ನಿಮಿತ್ತ ಸಮಿತಿಯ ನವೀಕರಣ ಮಾಡಲು ಸಾಧ್ಯವಾಗಲಿಲ್ಲ. ಇದೆ ಸಮಯವನ್ನು ಬಳಸಿಕೊಂಡು ಶಿವಮೊಗ್ಗ ತಾಲೂಕಿಗೆ ಸೀಮಿತವಾದಂತೆ ಕೆಲ ಸ್ಥಳೀಯರನ್ನು ಸೇರಿಸಿಕೊಂಡು ರಾಜ್ಯ ಪದಾಧಿಕಾರಿಗಳೆಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಾನೂನಿನಲ್ಲಿ ಅವಕಾಶವಿಲ್ಲದಿದ್ದರೂ ಯಾರಿಗೂ ತಿಳಿಯದಂತೆ ಸಮಿತಿಗೆ ದ್ರೋಹ ಮಾಡಿ ಎನ್. ಗಿರಿಯಪ್ಪನವರನ್ನು ರಾಜ್ಯ ಸಂಚಾಲಕರೆಂದು ೪ ವರ್ಷಗಳ ನವೀಕರಣವನ್ನು ಏಕಕಾಲದಲ್ಲಿ ಒಂದೇ ದಿನಾಂಕದಂದು ನವೀಕರಿಸಿಕೊಂಡಿರುತ್ತಾರೆಂದು ಆರೋಪಿಸಿದರು.
ಅಧಿಕೃತ ಸಮಿತಿಯ ಅಂದಿನ ರಾಜ್ಯ ಸಂಚಾಲಕರಾಗಿದ್ದ ಎನ್. ಶಿವಣ್ಣರವರು ೨೦೦೭ರಲ್ಲಿ ಮರಣ ಹೊಂದಿದ ನಂತರ ಹಂಗಾಮಿ ರಾಜ್ಯ ಸಂಚಾಲಕರಾಗಿ ನೇಮಕಗೊಂಡಿದ್ದ ವೆಂಕಟಗಿರಿಯಯ್ಯನವರ ನಾಯಕತ್ವದಲ್ಲಿ ೨೦೦೯ರಲ್ಲಿ ಮುಂದಿನ ಅವಧಿಗೆ ನವೀಕರಣ ಮಾಡಿಕೊಡಲು ಜಿಲ್ಲಾ ನೋಂದಣಾಧಿಕಾರಿಗಳಿಗೆ ಮನವಿ ಸಲ್ಲಿಸಿರುತ್ತಾರೆ. ಈ ಹಂತದಲ್ಲಿ ಜಿಲ್ಲಾ ನೋಂದಣಾಧಿಕಾರಿಗಳು ನವೀಕರಣ ಮಾಡಲು ವಿಳಂಬ ಮಾಡಿದಾಗ ರಾಜ್ಯ ನೋಂದಣಾಧಿಕಾರಿಗಳಿಗೆ ದೂರು ಸಲ್ಲಿಸಲಾಯಿತು. ದೂರಿಗೆ ಸ್ಪಂದಿಸಿದ ರಾಜ್ಯ ನೋಂದಣಾಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ನವೀಕರಣ ಮಾಡಲು ಜಿಲ್ಲಾ ನೋಂದಣಾಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ಜಿಲ್ಲಾ ನೋಂದಣಾಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸದೆ ಎನ್. ಗಿರಿಯಪ್ಪನವರಿಗೆ ಸಿವಿಲ್ ನ್ಯಾಯಾಲಯದಲ್ಲಿ ಇತ್ಯರ್ಥಪಡಿಸಿಕೊಳ್ಳುವಂತೆ ಹಿಂಬರಹ ನೀಡಿರುತ್ತಾರೆ. ೨೦೦೯ ರಿಂದ ೨೦೨೧ರ ವರೆಗೆ ಸಮಿತಿ ನವೀಕರಣವನ್ನು ಯಾರಿಗೂ ನೀಡದೆ ತಡೆ ಹಿಡಿಯಲಾಗಿದೆ. ಇಲ್ಲಿಯವರೆಗೂ ಯಾರಿಗೂ ಕೂಡ ನವೀಕರಣವನ್ನು ಜಿಲ್ಲಾ ನೋಂದಣಾಧಿಕಾರಿಗಳು ನೀಡಿರುವುದಿಲ್ಲ. ಈ ನಡುವೆ ಎನ್. ಗಿರಿಯಪ್ಪನವರು ನಗರದ ಜೆಎಂಎಫ್‌ಸಿ ಕಿರಿಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ ಹಿನ್ನಲೆಯಲ್ಲಿ ವಿಚಾರಣೆ ನಡೆದು ತೀರ್ಪು ಸಹ ಪ್ರಕಟಗೊಂಡಿದೆ. ಈ ತೀರ್ಪನ್ನು ಪ್ರಶ್ನಿಸಿ ಹಿರಿಯ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಈ ನಡುವೆ ಎಂ. ಗುರುಮೂರ್ತಿ ಸಮಾಜದಲ್ಲಿ ಎಲ್ಲರ ದಿಕ್ಕು ತಪ್ಪಿಸುವ ಕಾರ್ಯದಲ್ಲಿ ತೊಡಗಿದ್ದು, ಇವರ ವಿರುದ್ಧ ನಕಲಿ ಜಾತಿ ಪ್ರಮಾಣಪತ್ರ ಕೊಡಿಸಿರುವ ಆರೋಪ, ಪರಿಶಿಷ್ಟ ಜಾತಿಯವರನ್ನು ವಂಚಿಸಿರುವ ಆರೋಪಗಳಿವೆ. ಸಮಿತಿಯು ಸಾಮಾಜಿಕ ಚಳುವಳಿ ಆಗಿರುವುದರಿಂದ ದಲಿತರ ಮೇಲೆ ದೌರ್ಜನ್ಯ, ದಬ್ಬಾಳಿಕೆಗಳು ನಡೆದಂತಹ ಸಂದರ್ಭದಲ್ಲಿ ಅನ್ಯಾಯ ಪ್ರಶ್ನಿಸುವ, ಹೋರಾಟ ಮಾಡುವ ಹಕ್ಕು ಪ್ರತಿಯೊಬ್ಬರದಾಗಿದೆ. ಸಮಿತಿ ಹೆಸರನ್ನು ಬಳಸಬಾರದು ಎಂಬುದಕ್ಕೆ ಯಾರಿಗೂ ಅಧಿಕಾರವಿರುವುದಿಲ್ಲ. ಈ ವಿಚಾರವಾಗಿ ಎಂ. ಗುರುಮೂರ್ತಿ ವಿರುದ್ಧ ಎ.ಡಿ.ಜಿ.ಪಿ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ದೂರು ಸಲ್ಲಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಸಂಚಾಲಕ ಕೆ. ರಂಗನಾಥ್, ಜಿಲ್ಲಾ ಸಂಘಟನಾ ಸಂಚಾಲಕ ಈಶ್ವರಪ್ಪ, ಜಿಲ್ಲಾ ಸಮಿತಿ ಸದಸ್ಯರಾದ ಏಳುಮಲೈ, ವಿ. ವಿನೋದ್ ಮತ್ತು ತಾಲೂಕು ಸಂಘಟನಾ ಸಂಚಾಲಕ ಸಂದೀಪ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.