Thursday, October 21, 2021

ಶಿಮೂಲ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಷಡ್ಯಂತ್ರ : ಡಿ. ಆನಂದ್ ಆರೋಪ

ಶಿಮೂಲ್ ಅಧ್ಯಕ್ಷ ಡಿ. ಆನಂದ್  
    ಭದ್ರಾವತಿ, ಅ. ೨೧: ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷ, ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ಬೆಂಬಲಿಗ ಡಿ. ಆನಂದ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ ಶುಕ್ರವಾರ ನಡೆಯಲಿದ್ದು, ಈ ನಡುವೆ ನನ್ನನ್ನು ಅಧಿಕಾರದಿಂದ ಕೆಳಗಿಸಲು ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಡಿ. ಆನಂದ್ ಆರೋಪಿಸಿದ್ದಾರೆ.
    ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಆನಂದ್, ೫ ವರ್ಷ ಅವಧಿಯನ್ನು ಹೊಂದಿರುವ ಶಿಮೂಲ್ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗುವ ಮೂಲಕ ಎಲ್ಲಾ ನಿರ್ದೇಶಕರ ಸಹಕಾರ ಪಡೆದು ಯಾವುದೇ ಷರತ್ತು ಇಲ್ಲದೆ ಅಧ್ಯಕ್ಷನಾಗಿದ್ದೇನೆ. ನಾನು ಅಧಿಕಾರಕ್ಕೆ ಬರುವ ಮೊದಲು ಹಾಲು ಉತ್ಪಾದಕರಿಂದ ಕೇವಲ ಸುಮಾರು ೩.೫ ಲಕ್ಷ ಲೀಟರ್ ಹಾಲನ್ನು ಮಾತ್ರ ಖರೀದಿಸಲಾಗುತ್ತಿತ್ತು. ಉತ್ಪಾದಕರಿಗೆ ನೀಡುವ ಪ್ರೋತ್ಸಾಹ ಧನ ಹೆಚ್ಚು ಮಾಡುವ ಮೂಲಕ ಸುಮಾರು ೬ ಲಕ್ಷಕ್ಕೂ ಅಧಿಕ ಹಾಲನ್ನು ಖರೀದಿಸುವಂತೆ ಮಾಡಿದ್ದೇನೆ. ಉತ್ಪಾದಕರ ಹಿತ ಕಾಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೇನೆ. ಈ ರೀತಿಯ ಪ್ರಯತ್ನ ರಾಜ್ಯದಲ್ಲಿ ಈ ಒಕ್ಕೂಟದಲ್ಲಿ ಮಾತ್ರ ನಡೆದಿದ್ದು, ಕೊರೋನಾ ಕಾಲದಲ್ಲೂ ಯಾವುದೇ ಬಾಕಿ ಉಳಿಸಿಕೊಂಡಿಲ್ಲ. ಅಲ್ಲದೆ ಯಾವುದೇ ಭಷ್ಟಾಚಾರಗಳು ಸಹ ನಡೆದಿಲ್ಲ. ಆದರೂ ಸಹ ನನ್ನನ್ನು ಅಧಿಕಾರದಿಂದ ಕೆಳಗಿಸಲು ಷಡ್ಯಂತ್ರ ನಡೆಸಲಾಗುತ್ತಿದೆ ಎಂದರು.
    ನಾನು ಅಧಿಕಾರ ವಹಿಸಿಕೊಳ್ಳುವಾಗ ಯಾವುದೇ ರೀತಿಯ ಒಳಒಪ್ಪಂದಗಳು ನಡೆದಿರುವುದಿಲ್ಲ. ಕೆಲವರು ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದು, ಬಹಿರಂಗವಾಗಿ ಚರ್ಚೆಗೆ ಬರಲಿ, ದೇವರ ಮುಂದೆ ಪ್ರಮಾಣ ಮಾಡಲಿ. ನಾನು ಅಧಿಕಾರಕ್ಕೆ ಅಂಟಿಕೊಂಡಿಲ್ಲ ಅಥವಾ ದುಡ್ಡು ಮಾಡಲು ಅಧಿಕಾರದಲ್ಲಿ ಉಳಿದುಕೊಂಡಿಲ್ಲ. ನನಗೆ ನನ್ನದೆ ಆದ ಸ್ವಾಭಿಮಾನವಿದ್ದು, ನಾನು ಸಹ ಒಬ್ಬ ರೈತನ ಮಗನಾಗಿ ಹಾಲು ಉತ್ಪಾದಕರ ಕಷ್ಟಗಳನ್ನು ಅರಿತುಕೊಂಡಿದ್ದೇನೆ. ಇದೀಗ ಹಾಲು ಉತ್ಪಾದಕರ ಹಿತಕ್ಕಿಂತ ಜಾತಿ ರಾಜಕಾರಣ ಹೆಚ್ಚಾಗಿದೆ. ಅಧಿಕಾರದ ವ್ಯಾಮೋಹದಿಂದ ಒಕ್ಕೂಟ ಹಾಗು ಸರ್ಕಾರದ ಕಾನೂನುಗಳನ್ನು ಗಾಳಿಗೆ ತೂರಿ ನನ್ನನ್ನು ಅಧಿಕಾರದಿಂದ ಕೆಳಗಿಸಲು ಹುನ್ನಾರ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
    ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ಅವರು ತಮ್ಮ ಬೆಂಬಲಿಗ ಆನಂದ್ ಅವರನ್ನು ನಿರ್ದೇಶಕರ ಚುನಾವಣೆಯಲ್ಲಿ ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಅಪ್ಪಾಜಿಯವರ ಮತ್ತೊಬ್ಬ ಬೆಂಬಲಿಗ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್ ಸೋಲು ಅನುಭವಿಸಿದ್ದರು. ಈ ನಡುವೆ ಆನಂದ್ ಅವರನ್ನು ಒಕ್ಕೂಟದ ಅಧ್ಯಕ್ಷರನ್ನಾಗಿ ಮಾಡುವಲ್ಲಿ ಸಹ ಯಶಸ್ವಿಯಾಗಿದ್ದರು. ಅಲ್ಲದೆ ಆನಂದ್ ಅಧ್ಯಕ್ಷರಾಗುವಲ್ಲಿ ಸಹಕಾರಿ ಧುರೀಣ ಆರ್.ಎಂ ಮಂಜುನಾಥಗೌಡರವರು ಸಹ ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾಗಿದೆ. ಒಕ್ಕೂಟದಲ್ಲಿ ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ೩ ಪಕ್ಷದ ನಿರ್ದೇಶಕರುಗಳಿದ್ದು, ಬದಲಾದ ಕಾಲಘಟ್ಟದಲ್ಲಿ ಅಪ್ಪಾಜಿ ಇಲ್ಲದಿರುವುದು ಹೊಸದೊಂದು ತಿರುವಿಗೆ ದಾರಿ ಮಾಡಿಕೊಟ್ಟಿದೆ.

ವಿವಿಧ ಬೇಡಿಕೆ ಈಡೇರಿಕೆ ಒತ್ತಾಯಿಸಿ ಶಿಕ್ಷಕರಿಂದ ಕಪ್ಪುಪಟ್ಟಿ ಧರಿಸಿ ಹೋರಾಟ : ಶಿಕ್ಷಣ ಸಚಿವರಿಗೆ ಮನವಿ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭದ್ರಾವತಿಯಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ  ಗುರುವಾರ ಕಪ್ಪುಪಟ್ಟಿ ಧರಿಸಿ ಹೋರಾಟ ನಡೆಸುವ ಮೂಲಕ  ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ  ಗುರುವಾರ ಕಪ್ಪುಪಟ್ಟಿ ಧರಿಸಿ ಹೋರಾಟ ನಡೆಸುವ ಮೂಲಕ  ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು.
    ಪದವೀಧರ ಶಿಕ್ಷಕರ ಸಮಸ್ಯೆ, ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ, ಅವರ ಸೇವಾವಧಿಯಲ್ಲಿ ಶಿಕ್ಷಕರು ಬಯಸುವ ಜಿಲ್ಲೆಗೆ ೧ ಬಾರಿ ವರ್ಗಾವಣೆ ಮಾಡುವುದು. ಮುಖ್ಯ ಶಿಕ್ಷಕರಿಗೆ ೧೫, ೨೦ ಮತ್ತು ೨೫ ವರ್ಷಗಳ ವೇತನ ಬಡ್ತಿ ನೀಡುವುದು, ನೂತನ ಪಿಂಚಣಿ ಯೋಜನೆ ರದ್ದುಗೊಳಿಸುವುದು ಹಾಗು ಗ್ರಾಮೀಣ ಕೃಪಾಂಕ ಶಿಕ್ಷಕರ ಸಮಸ್ಯೆ ಮತ್ತು  ದೈಹಿಕ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವುದು ಸೇರಿದಂತೆ ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಯಿತು.
ಶೈಕ್ಷಣಿಕ ಕಾರ್ಯ ಚಟುವಟಿಕೆಗಳ ನಡುವೆಯೂ ಹೋರಾಟ ನಡೆಸುತ್ತಿದ್ದು, ಒಂದು ವೇಳೆ ಸರ್ಕಾರ ಬೇಡಿಕೆಗಳಿಗೆ  ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮತ್ತಷ್ಟು  ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.    
    ಕ್ಷೇತ್ರ ಶಿಕ್ಷಣಾಧಿಕಾರಿ ಟಿ. ಎನ್ ಸೋಮಶೇಖರಯ್ಯ ಮೂಲಕ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ  ಎಂ. ಎಸ್ ಬಸವರಾಜ್, ಪ್ರಧಾನ ಕಾರ್ಯದರ್ಶಿ ಎಸ್. ಕೆ ಮೋಹನ್,   ಜಿಲ್ಲಾ ಪ್ರಧಾನಕಾರ್ಯದರ್ಶಿ ಶ್ರೀಧರಗೌಡ ವೈ ಎನ್,  ಜಿಲ್ಲಾ ಉಪಾಧ್ಯಕ್ಷರಾದ ಚಿತ್ರ,  ಜೈಕುಮಾರ್ ಎಂ. ಬಿ, ತಾಲ್ಲೂಕು ಉಪಾಧ್ಯಕ್ಷರಾದ ಸುಮತಿ, ರಾಜು, ದೈಹಿಕ ಶಿಕ್ಷಣಾಧಿಕಾರಿ ಪ್ರಭು, ಪದಾಧಿಕಾರಿಗಳಾದ ನಿರ್ಮಲ, ಮಾಯಮ್ಮ, ಶಾರದಮ್ಮ, ಆನಂದ್ ಎಂ. ಸಿ, ಪೃಥ್ವಿರಾಜ್, ಮಲ್ಲಿಕಾರ್ಜುನ್, ಕೋಕಿಲ, ಧಾರತಿ, ನಂಜನಾಯ್ಕ, ಶಿವಕುಮಾರ್, ಪಾಲಾಕ್ಷಪ್ಪ ಇನ್ನಿತರರು ಪಾಲ್ಗೊಂಡಿದ್ದರು.

ನಗರಸಭೆ ನೂತನ ಉಪಾಧ್ಯಕ್ಷ ಚನ್ನಪ್ಪರಿಗೆ ವಿವಿಧ ಸಂಘಟನೆಗಳಿಂದ ಸನ್ಮಾನ, ಅಭಿನಂದನೆ

ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ದಲಿತ ನೌಕರರ ಒಕ್ಕೂಟ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕರ್ನಾಟಕ ರಾಜ್ಯ ವೈಚಾರಿಕ ಸಂಶೋದನಾ ಪರಿಷತ್ತು ಹಾಗು ತಾಲ್ಲೂಕು ಬಡ್ತಿ ಮುಖ್ಯ ಶಿಕ್ಷಕರ ಸಂಘದ ವತಿಯಿಂದ ಭದ್ರಾವತಿ ನೂತನ ನಗರಸಭೆ ಉಪಾಧ್ಯಕ್ಷೆ ಚನ್ನಪ್ಪ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
    ಭದ್ರಾವತಿ, ಅ. ೨೧:  ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ದಲಿತ ನೌಕರರ ಒಕ್ಕೂಟ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕರ್ನಾಟಕ ರಾಜ್ಯ ವೈಚಾರಿಕ ಸಂಶೋದನಾ ಪರಿಷತ್ತು ಹಾಗು ತಾಲ್ಲೂಕು ಬಡ್ತಿ ಮುಖ್ಯ ಶಿಕ್ಷಕರ ಸಂಘದ ವತಿಯಿಂದ ನೂತನ ನಗರಸಭೆ ಉಪಾಧ್ಯಕ್ಷೆ ಚನ್ನಪ್ಪ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
    ನಗರಸಭೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ದಲಿತ ನೌಕರರ ಒಕ್ಕೂಟದ ಅಧ್ಯಕ್ಷೆ ಎಸ್. ಉಮಾ ಅಧ್ಯಕ್ಷತೆ ವಹಿಸಿದ್ದರು. ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ, ಜಿಲ್ಲಾ ಸಂಚಾಲಕ ಚಿನ್ನಯ್ಯ,  ದಲಿತ ನೌಕರರ ಒಕ್ಕೂಟದ ರಾಜ್ಯ ಕಾರ್ಯಾಧ್ಯಕ್ಷ ಸಿ. ಜಯಪ್ಪ, ನಗರಸಭೆ ಪೌರಾಯುಕ್ತ ಕೆ. ಪರಮೇಶ್, ಪರಿಸರ ಅಭಿಯಂತರ ಪ್ರಭಾಕರ್, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ತಾಲ್ಲೂಕು ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ, ಹಳೆನಗರದ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಇಂದಿರಾ, ಎ. ತಿಪ್ಪೇಸ್ವಾಮಿ, ಪ್ರಸನ್ನ, ನರಸಿಂಹ, ಮಾಯಮ್ಮ, ಶಿವಲಿಂಗಮ್ಮ, ರಾಜಾನಾಯ್ಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಮುಖರು ಮಾತನಾಡಿ, ನೂತನ ಉಪಾಧ್ಯಕ್ಷ ಚನ್ನಪ್ಪನವರು ನಡೆದುಕೊಂಡು ಬಂದ ಹೋರಾಟದ ದಾರಿ, ಜನರ ಬಗೆಗಿನ ಅವರಲ್ಲಿನ ಕಾಳಜಿಯನ್ನು ವಿವರಿಸಿ ಪ್ರಶಂಸೆ ವ್ಯಕ್ತಪಡಿಸಿದರು.  ನರಸಿಂಹಮೂರ್ತಿ ಸ್ವಾಗತಿಸಿದರು. ಲೋಕೇಶ್ ವಂದಿಸಿದರು. ಈಶ್ವರಪ್ಪ ನಿರೂಪಿಸಿದರು.

Wednesday, October 20, 2021

ಸರ್ಕಾರಿ ಕಾರ್ಯಕ್ರಮಗಳ ಅರಿವು ಮೂಡಿಸಲು ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಸಹಕಾರಿ : ಆರ್. ಪ್ರದೀಪ್

ಭದ್ರಾವತಿ ತಾಲೂಕಿನ ಸೈದರಕಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೈದರಕಲ್ಲಹಳ್ಳಿ ಗ್ರಾಮದಲ್ಲಿ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಸಮುದಾಯಭವನದಲ್ಲಿ ಕಂದಾಯ ಇಲಾಖೆ ಹಾಗೂ ಇತರ ಇಲಾಖೆಗಳ ಸಹಯೋಗದೊಂದಿಗೆ ತಾಲೂಕು ಆಡಳಿತದಿಂದ 'ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ' ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಗ್ರಾಮ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ತಹಸೀಲ್ದಾರ್ ಆರ್. ಪ್ರದೀಪ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
    ಭದ್ರಾವತಿ, ಅ. ೨೦: ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸಲು ಹಾಗೂ ಅವುಗಳ ಅನುಷ್ಠಾನಕ್ಕೆ ಸರ್ಕಾರವೇ ಜನರ ಮನೆಬಾಗಿಲಿಗೆ ಬರುತ್ತಿದ್ದು, ಈ ನಿಟ್ಟಿನಲ್ಲಿ 'ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ' ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ತಹಸೀಲ್ದಾರ್ ಆರ್. ಪ್ರದೀಪ್ ಹೇಳಿದರು.
  ತಾಲೂಕಿನ ಸೈದರಕಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೈದರಕಲ್ಲಹಳ್ಳಿ ಗ್ರಾಮದಲ್ಲಿ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಸಮುದಾಯಭವನದಲ್ಲಿ ಕಂದಾಯ ಇಲಾಖೆ ಹಾಗೂ ಇತರ ಇಲಾಖೆಗಳ ಸಹಯೋಗದೊಂದಿಗೆ ತಾಲೂಕು ಆಡಳಿತದಿಂದ 'ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ' ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಗ್ರಾಮ ವಾಸ್ತವ್ಯದಲ್ಲಿ ಪಾಲ್ಗೊಂಡು ಮಾತನಾಡಿದರು.
    ಸರ್ಕಾರ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ಇವುಗಳ ಬಗ್ಗೆ ಗ್ರಾಮೀಣ ಜನರಿಗೆ ಸರಿಯಾದ ಮಾಹಿತಿ ಇರುವುದಿಲ್ಲ. ಇವುಗಳ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ವೈಯಕ್ತಿಕ ಹಾಗು ಸಮುದಾಯದ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಸಾಧ್ಯವಾದಷ್ಟು ಸ್ಥಳದಲ್ಲಿಯೇ ಬಗಹರಿಸಲು ಪ್ರಯತ್ನಿಸಲಾಗುವುದು. ಅಗತ್ಯವಿದ್ದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಪ್ರಮುಖವಾಗಿ ರೈತರು, ಅಂಗವಿಕಲರು, ವೃದ್ಧರು, ಮಹಿಳೆಯರು, ಮಕ್ಕಳು ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಜಿಲ್ಲಾ ಹಾಗು ತಾಲೂಕು ಕೇಂದ್ರಗಳಿಗೆ ಅಲೆದಾಡುವುದನ್ನು ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಈ ಹಿನ್ನಲೆಯಲ್ಲಿ ಇದರ ಸದುಪಯೋಗ ಪಡೆದುಕೊಳ್ಳುವ ಜೊತೆಗೆ ಕಾರ್ಯಕ್ರಮ ಯಶಸ್ವಿಗೊಳಿಸಲು ಮುಂದಾಗಬೇಕೆಂದರು.
    ಗ್ರಾಮದ ಸರ್ಕಾರಿ ಶಾಲೆ,  ಅಂಗನವಾಡಿ ಕೇಂದ್ರ, ಆಸ್ಪತ್ರೆ, ಸ್ಮಶಾನ ಭೂಮಿ, ಘನತ್ಯಾಜ್ಯ ವಿಲೇವಾರಿ ಘಟಕ, ಪಶುವೈದ್ಯ ಆಸ್ಪತ್ರೆ ಸೇರಿದಂತೆ ಇನ್ನಿತರ ಸ್ಥಳಗಳಿಗೆ ಭೇಟಿ ನೀಡಿ ಸ್ಥಳೀಯರಿಂದ ಅಹವಾಲುಗಳನ್ನು ಸ್ವೀಕರಿಸಿದರು.  ರಾತ್ರಿ ಸರ್ಕಾರಿ ಶಾಲೆಯಲ್ಲಿಯೇ ಊಟ ಮಾಡಿ ಕಂದಾಯ ಅಧಿಕಾರಿಗಳು ಹಾಗು ಸಿಬ್ಬಂದಿಗಳೊಂದಿಗೆ ಅಲ್ಲಿಯೇ ತಂಗಿದ್ದರು.
    ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಪ್ರೀತಾ, ಉಪಾಧ್ಯಕ್ಷ ಮಲ್ಲೇಶಪ್ಪ, ಪಂಚಾಯತಿ ಎಲ್ಲಾ ಸದಸ್ಯರುಗಳು ಮತ್ತು ದೇವಸ್ಥಾನ ಸಮಿತಿ ಸದಸ್ಯರು ಹಾಗೂ ಊರಿನ ಮುಖಂಡರುಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಪಶುಸಂಗೋಪನಾ ಇಲಾಖೆ ಅಧಿಕಾರಿಗಳು, ಕಂದಾಯ ಇಲಾಖೆ ಶಿರಸ್ತೇದಾರ್ ರಾಜ್ ಅರಸ್, ಮಂಜನಾಯ್ಕ್, ನಾರಾಯಣಗೌಡ, ಬಸವರಾಜ್, ಕಂದಾಯ ನಿರೀಕ್ಷಕ ವಿಜಯಕುಮಾರ್, ಪ್ರಶಾಂತ್, ಜಗದೀಶ್, ಅಭಿವೃದ್ಧಿ ಅಧಿಕಾರಿ, ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರುಗಳು ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.  ಒಟ್ಟು ೪೯ ಅರ್ಜಿಗಳನ್ನು ಸ್ಥಳದಲ್ಲಿಯೇ ಸ್ವೀಕರಿಸಲಾಯಿತು.  

ಶ್ರೀ ಮಹರ್ಷಿ ವಾಲ್ಮೀಕಿ ಭಾರತೀಯ ಬದುಕಿಗೆ ಪರಿಕಲ್ಪನೆ ತಂದು ಕೊಟ್ಟವರು : ಡಾ. ಮೋಹನ್ ಚಂದ್ರಗುತ್ತಿ

ಭದ್ರಾವತಿಯಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ನಗರಸಭೆ ಹಾಗು ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಮಾಜ ಮತ್ತು ವಿವಿಧ ಸಂಘಟನೆಗಳ ವತಿಯಿಂದ ಹಳೇನಗರದ ಶ್ರೀ ವೀರಶೈವ ಸಭಾ ಭವನದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪ್ರತಿಭಾವಂತೆ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಅ. ೨೦:  ಭಾರತೀಯರ ಬದುಕಿನ ಭವ್ಯ ಪರಂಪರೆ ಬಿಂಬಿಸುವ ರಾಮಾಯಣ ಮಹಾಕಾವ್ಯ ರಚಿಸುವ ಮೂಲಕ  ಶ್ರೀ ಮಹರ್ಷಿ ವಾಲ್ಮೀಕಿಯವರು ಈ ದೇಶದ ಇತಿಹಾಸದಲ್ಲಿ ಅಚ್ಚಳಿಯದಂತೆ ಉಳಿದುಕೊಂಡಿದ್ದಾರೆಂದು ಶಿವಮೊಗ್ಗ ಸಹ್ಯಾದ್ರಿ ಕಲಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಮೋಹನ್ ಚಂದ್ರಗುತ್ತಿ ಹೇಳಿದರು.
    ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ನಗರಸಭೆ ಹಾಗು ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಮಾಜ ಮತ್ತು ವಿವಿಧ ಸಂಘಟನೆಗಳ ವತಿಯಿಂದ ಹಳೇನಗರದ ಶ್ರೀ ವೀರಶೈವ ಸಭಾ ಭವನದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
    ಆದರ್ಶ ಪುರುಷ ಶ್ರೀರಾಮನ ಪರಿಕಲ್ಪನೆಯಲ್ಲಿ ನಾವೆಲ್ಲರೂ ನ್ಯಾಯ, ನೀತಿ, ಸಂಸ್ಕೃತಿಯ ನೆಲೆಕಟ್ಟಿನಲ್ಲಿ ಬದುಕು ಸಾಗಿಸುತ್ತಿದ್ದೇವೆ. ರಾಮಾಯಣ ಮಹಕಾವ್ಯವನ್ನು ಪವಿತ್ರ ಗ್ರಂಥವಾಗಿ ಒಪ್ಪಿಕೊಂಡಿದ್ದೇವೆ. ಇದಕ್ಕೆ ಕಾರಣಕರ್ತರಾಗಿರುವ ಶ್ರೀ ಮಹರ್ಷಿ ವಾಲ್ಮೀಕಿಯರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
    ತಹಸೀಲ್ದಾರ್ ಆರ್. ಪ್ರದೀಪ್ ಕಾರ್ಯಕ್ರಮ ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಹಿರಿಯ ಸದಸ್ಯರಾದ ಬಿ.ಕೆ ಮೋಹನ್, ಟಿಪ್ಪು ಸುಲ್ತಾನ್, ಪೌರಾಯುಕ್ತ ಕೆ. ಪರಮೇಶ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿದ್ದಬಸಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ಕಾಗದನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಇ.ಓ ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಸ್. ಗೋಪಿನಾಥ್, ಮಹರ್ಷಿ ವಾಲ್ಮೀಕಿ ನಾಯಕ ಸಮಾಜದ ಗ್ರಾಮಾಂತರ ಅಧ್ಯಕ್ಷ ಎಲ್. ರಂಗಪ್ಪ, ನಗರಸಭೆ ಮಾಜಿ ಸದಸ್ಯೆ ಲಕ್ಷ್ಮೀದೇವಿ, ಬಸವರಾಜಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಅತಿಹೆಚ್ಚು ಅಂಕಗಳಿಸಿದ ವಾಲ್ಮೀಕಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ವಿಐಎಸ್‌ಎಲ್-ಎಂಪಿಎಂ ಉಳಿಸಿ, ಕಾರ್ಮಿಕರಿಗೆ ಸೇವಾ ಭದ್ರತೆ ನೀಡಿ : ಶಾರದ ಅಪ್ಪಾಜಿ ಮನವಿ

ಭದ್ರಾವತಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಾರದ ಅಪ್ಪಾಜಿ ಮಾತನಾಡಿದರು.
    ಭದ್ರಾವತಿ, ಅ. ೨೦: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಹಾಗು ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆ ಈ ಎರಡು ಕಾರ್ಖಾನೆಗಳನ್ನು ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಪುನಃ ಅಭಿವೃದ್ದಿಪಡಿಸಿ ಕ್ಷೇತ್ರದ ನಾಗರೀಕರಿಗೆ ಉದ್ಯೋಗ ಒದಗಿಸಿಕೊಡುವಂತೆ ಮುಂಬರುವ ವಿಧಾನಸಭಾ ಚುನಾವಣೆಯ ನಿಯೋಜಿತ ಜೆಡಿಎಸ್ ಅಭ್ಯರ್ಥಿ ಶಾರದ ಅಪ್ಪಾಜಿ ಮನವಿ ಮಾಡಿದರು.
    ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾರ್ಮಿಕ ಇಲಾಖೆ ಕಾರ್ಯದರ್ಶಿಗಳು ರಾಜ್ಯ ಸರ್ಕಾರಿ ಸ್ವಾಮ್ಯದ ಎಂಪಿಎಂ ಕಾರ್ಖಾನೆಯನ್ನು ಸಂಪೂರ್ಣವಾಗಿ ಮುಚ್ಚಲು ಆದೇಶಿಸಿರುವ ಮಾಹಿತಿ ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಪ್ರಸ್ತುತ ಕಾರ್ಖಾನೆಯಲ್ಲಿ ಉದ್ಯೋಗವಿಲ್ಲದೆ ಉಳಿದುಕೊಂಡಿರುವ ಕಾರ್ಮಿಕರಿಗೆ ಸೇವಾ ಭದ್ರತೆ ಒದಗಿಸಿಕೊಡಬೇಕು. ಸರ್ಕಾರ ಕಾರ್ಖಾನೆ ಅಧೀನದಲ್ಲಿರುವ ಅರಣ್ಯ ಭೂಮಿಯನ್ನು ಸುಮಾರು ೪೦ ವರ್ಷಗಳ ಅವಧಿಗೆ ಈಗಾಗಲೇ ಗುತ್ತಿಗೆ ನೀಡಿದೆ. ಈ ಹಿನ್ನಲೆಯಲ್ಲಿ ಉದ್ಯೋಗವಿಲ್ಲದೆ ಉಳಿದುಕೊಂಡಿರುವ ಕಾರ್ಮಿಕರನ್ನು ಇಲ್ಲಿಗೆ ನಿಯೋಜನೆಗೊಳಿಸಬೇಕು. ಅಲ್ಲದೆ ಈಗಾಗಲೇ ಸರ್ಕಾರದ ವಿವಿಧ ನಿಗಮ ಮಂಡಳಿಗಳಲ್ಲಿ ನಿಯೋಜನೆ ಮೇಲೆ ತೆರಳಿರುವ ನೌಕರರನ್ನು ಅಲ್ಲಿಯೇ ಕಾಯಂಗೊಳಿಸಿ ಅವರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು. ಸರ್.ಎಂ ವಿಶ್ವೇಶ್ವರಾಯ ಅವರ ಪರಿಶ್ರಮದ ಫಲವಾಗಿ ಆರಂಭಗೊಂಡಿರುವ ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳು ಉಳಿಯಬೇಕು. ಈ ನಿಟ್ಟಿನಲ್ಲಿ ಓರ್ವ ಕಾರ್ಮಿಕನ ಪತ್ನಿಯಾಗಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳಿಗೆ ಮನವಿ ಮಾಡುತ್ತೇನೆ ಎಂದರು.
    ಮೈಸೂರು ಕಾಗದ ಕಾರ್ಖಾನೆ ನೌಕರರ ಸಂಘದ ಅಧ್ಯಕ್ಷ ಎಸ್. ಚಂದ್ರಶೇಖರ್ ಮಾತನಾಡಿ, ಕಾರ್ಮಿಕ ಇಲಾಖೆ ಇದೀಗ ಕಾರ್ಖಾನೆಯನ್ನು ಸಂಪೂರ್ಣವಾಗಿ ಮುಚ್ಚಲು ಆದೇಶಿಸಿದೆ. ಇದರಿಂದಾಗಿ ಯಾವುದೇ ಉದ್ಯೋಗವಿಲ್ಲದೆ ಉಳಿದುಕೊಂಡಿರುವ ಕಾರ್ಮಿಕರು ಹಾಗು ಕುಟುಂಬ ವರ್ಗದವರಿಗೆ ಆತಂಕ ಉಂಟಾಗಿದೆ. ಈ ನಡುವೆ ಶಾರದ ಅಪ್ಪಾಜಿ ಅವರು ಕಾರ್ಮಿಕರು ಮತ್ತು ಕುಟುಂಬ ವರ್ಗದವರಿಗೆ ಆತ್ಮಸ್ಥೈರ್ಯ ತುಂಬುವ ಮೂಲಕ ನಿಮ್ಮ ಮುಂದಿನ ಹೋರಾಟಗಳಿಗೆ ನಿಮ್ಮ ಜೊತೆ ಇರುವುದಾಗಿ ಭರವಸೆ ನೀಡಿದ್ದಾರೆ. ಅದರಂತೆ ನಡೆದುಕೊಳ್ಳುತ್ತಿದ್ದು, ಈ ಹಿನ್ನಲೆಯಲ್ಲಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
    ಎಂಪಿಎಂ ಕಾರ್ಖಾನೆಯನ್ನು ಸಂಪೂರ್ಣವಾಗಿ ಮುಚ್ಚಲು ಅಥವಾ ಖಾಸಗಿಕರಣಗೊಳಿಸಲು ಯಾವುದೇ ರೀತಿ ಅಭ್ಯಂತರವಿಲ್ಲ. ಈ ಕುರಿತು ಉಚ್ಛನ್ಯಾಯಾಲಯದಲ್ಲೂ ಸ್ಪಷ್ಟಪಡಿಸಲಾಗಿದ್ದು, ಆದರೆ ಕಾರ್ಖಾನೆಯಲ್ಲಿ ಪ್ರಸ್ತುತ ಉಳಿದುಕೊಂಡಿರುವ ಕಾರ್ಮಿಕರಿಗೆ ಉದ್ಯೋಗ ಭದ್ರತೆ ಒದಗಿಸಬೇಕೆಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ. ಸರ್ಕಾರ ನ್ಯಾಯಾಲಯದಲ್ಲಿ ಉಳಿದ ಕಾರ್ಮಿಕರಿಗೆ ಉದ್ಯೋಗ ಭದ್ರತೆ ಒದಗಿಸುವುದಾಗಿ ಭರವಸೆ ನೀಡಿದೆ.  ಅದರಂತೆ ಸರ್ಕಾರದ ವಿವಿಧ ನಿಗಮ ಮಂಡಳಿಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಗೊಳಿಸುವಂತೆ ಕೋರಲಾಗಿದೆ. ಈಗಾಗಲೇ ಕೆಲವು ಕಾರ್ಮಿಕರನ್ನು ನಿಯೋಜನೆ ಮೇಲೆ ಕಳುಹಿಸಲಾಗಿದೆ. ಇವರನ್ನು ಆಯಾ ನಿಗಮ-ಮಂಡಳಿಗಳಲ್ಲಿ ವಿಲೀನ ಮಾಡಿಕೊಂಡು ಸೂಕ್ತ ವೇತನ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು. ಉಳಿದಂತೆ ಯಾವುದೇ ಉದ್ಯೋಗವಿಲ್ಲದೆ ಉಳಿದುಕೊಂಡಿರುವ ಕಾರ್ಮಿಕರಿಗೆ ತಕ್ಷಣ ಉದ್ಯೋಗ ನೀಡುವಂತೆ ಒತ್ತಾಯಿಸಲಾಗಿದೆ. ಆ ನಂತರ ಸರ್ಕಾರ ಕಾರ್ಖಾನೆಯನ್ನು ಮುಚ್ಚುವ ಮುಂದಿನ ಪ್ರಕ್ರಿಯೆ ಆರಂಭಿಸಲಿ ಎಂದರು.
    ಪ್ರಸ್ತುತ ಕಾರ್ಮಿಕ ಇಲಾಖೆ ಹೊರಡಿಸಿರುವ ಆದೇಶವನ್ನು ಉಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು. ಈ ಸಂಬಂಧ ಈಗಾಗಲೇ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಈ ನಡುವೆ ಕಾರ್ಖಾನೆ ಆಡಳಿತ ಮಂಡಳಿ ಕಾರ್ಯದರ್ಶಿ ನ್ಯಾಯಾಲಯದಲ್ಲಿ ಈ ಸಂಬಂಧ ತಡೆಯಾಜ್ಞೆ ತಂದಿದ್ದಾರೆ. ಇದನ್ನು ಗಮನಿಸಿದಾಗ ಆಡಳಿತ ಮಂಡಳಿ ತರಾತರಿಯಲ್ಲಿ ಕಾರ್ಖಾನೆಯನ್ನು ಮುಚ್ಚಲು ಮುಂದಾಗಿರುವುದರ ಹಿಂದೆ ಹಲವು ಅನುಮಾನಗಳು ಮೂಡುತ್ತಿವೆ.  ಈಗಲೂ ಕಾರ್ಖಾನೆಯನ್ನು ಮುಚ್ಚಲು ವಿರೋಧವಿಲ್ಲ. ಆದರೆ ಕಾರ್ಮಿಕರ ಹಿತಾಸಕ್ತಿ ಕಾಪಾಡುವುದು ನಮ್ಮ ಉದ್ದೇಶವಾಗಿದೆ ಎಂದು ಸ್ಪಷ್ಟಪಡಿಸಿದರು.
ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ ಮಾತನಾಡಿ, ಕಾರ್ಮಿಕರ ಹಿತಾಸಕ್ತಿಯಿಂದ ಅವರ ಹೋರಾಟಕ್ಕೆ ಬೆಂಬಲ ನೀಡಲಿದೆ. ಇಲ್ಲಿ ಯಾವುದೇ ವೈಯಕ್ತಿಕ ಹಿತಾಸಕ್ತಿ ಇಲ್ಲ ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಸ್. ಕುಮಾರ್, ಜೆ.ಪಿ ಯೋಗೇಶ್, ಕರಿಯಪ್ಪ, ಬದರಿನಾರಾಯಣ ಸೇರಿದಂತೆ  ಇನ್ನಿತರರು ಉಪಸ್ಥಿತರಿದ್ದರು.

Tuesday, October 19, 2021

ಕುವೆಂಪು ವಿ.ವಿ ಎಂಎಸ್‌ಡಬ್ಲ್ಯೂವತಿಯಿಂದ ಯಶಸ್ವಿಯಾಗಿ ಜರುಗಿದ ಆರೋಗ್ಯ ಶಿಬಿರ

ಭದ್ರಾವತಿ ತಾಲೂಕಿನ ಕುವೆಂಪು ವಿಶ್ವ ವಿದ್ಯಾಯದ ಸ್ನಾತಕೋತ್ತರ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ (ಎಂಎಸ್‌ಡಬ್ಲ್ಯೂ)  ವತಿಯಿಂದ ಸಮೀಪದ ತರೀಕೆರೆ ಲಕ್ಕವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು.
    ಭದ್ರಾವತಿ, ಆ. ೧೯ : ತಾಲೂಕಿನ ಕುವೆಂಪು ವಿಶ್ವ ವಿದ್ಯಾಯದ ಸ್ನಾತಕೋತ್ತರ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ (ಎಂಎಸ್‌ಡಬ್ಲ್ಯೂ)  ವತಿಯಿಂದ ಸಮೀಪದ ತರೀಕೆರೆ ಲಕ್ಕವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು.
    ಶಿವಮೊಗ್ಗ ಮೆಟ್ರೋ ಯುನೈಟೆಡ್ ಹೆಲ್ತ್ ಕೇರ್ ಹಾಗು ಲಕ್ಕವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ ನಡೆದ ಶಿಬಿರದಲ್ಲಿ ಕೆಸರಕೊಪ್ಪ, ಗುಂಡೇನಹಳ್ಳಿ ಹಾಗೂ ಸೋಮಪುರ ಗ್ರಾಮಗಳ ಗ್ರಾಮಸ್ಥರಿಗೆ ಆರೋಗ್ಯ ತಪಾಸಣೆ ಜೊತೆಗೆ ಅರೋಗ್ಯ ಸುಧಾರಣೆ ಹಾಗೂ ಸ್ವಚ್ಛತೆ ಕುರಿತು ಅರಿವು ಮೂಡಿಸಲಾಯಿತು.
    ಶಿವಮೊಗ್ಗ ಮೆಟ್ರೋ ಯುನೈಟೆಡ್ ಹೆಲ್ತ್ ಕೇರ್ ವೈದ್ಯ ಡಾ. ದಿಲೀಪ್ ಕುಮಾರ್, ಡಾ. ಟಿ.ಡಿ ಸುನಿತಾ ಹಾಗು ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯರು  ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು. ಹಲಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಎಸ್ ಗಂಗಾಧರ್, ಸದಸ್ಯರಾದ ಮಹಮ್ಮದ್, ಇಬ್ರಾಹಿಂ, ಸರ್ಕಾರಿ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಶಾಲೆಯ ಸಿಬ್ಬಂದಿವರ್ಗದವರು, ಕುವೆಂಪು ವಿವಿ ಸ್ನಾತಕೋತ್ತರ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗು ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.


ಭದ್ರಾವತಿ ತಾಲೂಕಿನ ಕುವೆಂಪು ವಿಶ್ವ ವಿದ್ಯಾಯದ ಸ್ನಾತಕೋತ್ತರ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ (ಎಂಎಸ್‌ಡಬ್ಲ್ಯೂ)  ವತಿಯಿಂದ ಸಮೀಪದ ತರೀಕೆರೆ ಲಕ್ಕವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆರೋಗ್ಯ ಶಿಬಿರದಲ್ಲಿ ಕೆಸರಕೊಪ್ಪ, ಗುಂಡೇನಹಳ್ಳಿ ಹಾಗೂ ಸೋಮಪುರ ಗ್ರಾಮಗಳ ಗ್ರಾಮಸ್ಥರಿಗೆ ಕೆಸರಕೊಪ್ಪ, ಗುಂಡೇನಹಳ್ಳಿ ಹಾಗೂ ಸೋಮಪುರ ಗ್ರಾಮಗಳ ಗ್ರಾಮಸ್ಥರಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು.