Thursday, October 20, 2022

ಹೆಣ್ಣು ಮಕ್ಕಳ ಸಬಲಿಕರಣಕ್ಕೆ ಎಲ್ಲರೂ ಕೈಜೋಡಿಸಿ : ಟಿ. ಮಲ್ಲಿಕಾರ್ಜುನ್

ಭದ್ರಾವತಿ ಸಮೀಪದ ನಿದಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಮಾಚೇನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ೩೫ನೇ ಶ್ರಮದಾನ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಆಡಳಿತ ವಿಭಾಗದ ಉಪಕಾರ್ಯದರ್ಶಿ ಟಿ. ಮಲ್ಲಿಕಾರ್ಜುನ್ ಸೇರಿದಂತೆ ಇನ್ನಿತರರು ಬಣ್ಣ ಬಳಿಯುವ ಮೂಲಕ ಚಾಲನೆ ನೀಡಿದರು.
    ಭದ್ರಾವತಿ, ಅ. ೨೦: ಹೆಣ್ಣು ಮಕ್ಕಳು ಈ ದೇಶದ ಸಂಸ್ಕೃತಿಯ ಪ್ರತೀಕ ಅವರನ್ನು ಸಬಲಿಕರಣಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕೆಂದು ಜಿಲ್ಲಾ ಪಂಚಾಯಿತಿ ಆಡಳಿತ ವಿಭಾಗದ ಉಪಕಾರ್ಯದರ್ಶಿ ಟಿ. ಮಲ್ಲಿಕಾರ್ಜುನ್ ಹೇಳಿದರು.
    ಅವರು ಇಲ್ಲಿಗೆ ಸಮೀಪದ ನಿದಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಮಾಚೇನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ೩೫ನೇ ಶ್ರಮದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಹೆಣ್ಣು ಮಕ್ಕಳ ಭವಿಷ್ಯ ಉಜ್ವಲಗೊಳ್ಳಬೇಕು. ಈ ಹಿನ್ನಲೆಯಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಗಮನ ಹರಿಸಬೇಕೆಂದರು.
    ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಉತ್ತಮ ಪರಿಸರ ರೂಪಿಸಿಕೊಳ್ಳಬೇಕು. ಪರಿಸರ ಪ್ರೇಮ ತಂಡದ ವತಿಯಿಂದ ಈ ವ್ಯಾಪ್ತಿಯಲ್ಲಿ ಜನಿಸಿದ ಹೆಣ್ಣು ಮಕ್ಕಳ ಹೆಸರಿನಲ್ಲಿ ಶಾಲೆಗೆ ಸುಮಾರು ೨೫ ಸಸಿಗಳನ್ನು ನೀಡಲಾಗಿದೆ. ಪ್ರತಿಯೊಬ್ಬರು ಸರ್ಕಾರಿ ಶಾಲೆ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ಸರ್ಕಾರಿ ಶಾಲೆಯಲ್ಲಿಯೇ ತಮ್ಮ ವಿದ್ಯಾಭ್ಯಾಸ ಮುಂದುವರೆಸಬೇಕೆಂದರು.
    ಗ್ರಾಮ ಪಂಚಾಯತಿ ಅಧ್ಯಕ್ಷೆ ವಿಶಾಲ ರಮೇಶ್, ಉಪಾಧ್ಯಕ್ಷೆ ರೀನಾ ಸನತ್, ಪರಿಸರ ಪ್ರೇಮ ತಂಡದ ಅಧ್ಯಕ್ಷ ಶಿವ್ಯಾನಾಯ್ಕ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ರುದ್ರಮ್ಮ, ಪಿ.ಕೆ ಸತೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಅರಳಿಹಳ್ಳಿ ಅಣ್ಣಪ್ಪ ಉಪನ್ಯಾಸ ನಡೆಸಿಕೊಟ್ಟರು. ಶಾಲೆಯಲ್ಲಿ ಬಣ್ಣ ಬಳಿಯುವ ಹಾಗು ಸ್ವಚ್ಛತಾ ಕಾರ್ಯ ಕೈಗೊಳ್ಳುವ  ಮೂಲಕ ಶ್ರಮದಾನ ನಡೆಸಲಾಯಿತು.
 

ಭದ್ರಾವತಿ ಸಮೀಪದ ನಿದಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಮಾಚೇನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ೩೫ನೇ ಶ್ರಮದಾನ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಆಡಳಿತ ವಿಭಾಗದ ಉಪಕಾರ್ಯದರ್ಶಿ ಟಿ. ಮಲ್ಲಿಕಾರ್ಜುನ್ ಸೇರಿದಂತೆ ಇನ್ನಿತರರು ಸ್ವಚ್ಛತಾ ಕಾರ್ಯ ನಡೆಸುವ ಮೂಲಕ ಚಾಲನೆ ನೀಡಿದರು.

ಮಡಿವಳ ಸಮುದಾಯ ಪರಿಶಿಷ್ಟ ಜಾತಿಗೆ ಸೇರಿಸಿ ಸಾಮಾಜಿಕ ನ್ಯಾಯ ಒದಗಿಸಿ : ಪುರುಷೋತ್ತಮ್

ಭದ್ರಾವತಿಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಶ್ರೀ ಗುರುವೀರ ಮಡಿವಳ ಮಾಚಿದೇವ ಸಂಘದ ಅಧ್ಯಕ್ಷ ಪುರುಷೋತ್ತಮ್ ಮಾತನಾಡಿದರು. 
    ಭದ್ರಾವತಿ, ಅ. ೨೦: ಸಮಾಜದಲ್ಲಿ ಅತ್ಯಂತ ಕೆಳಸ್ಥರದಲ್ಲಿರುವ ಇಂದಿಗೂ ಶುಚಿಗೊಳಿಸುವ ಕಾಯಕನಿಷ್ಠೆಯಲ್ಲಿ ತೊಡಗಿರುವ ಮಡಿವಳ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವ ಮೂಲಕ ಸಾಮಾಜಿಕ ನ್ಯಾಯ ದೊರಕಿಸಿಕೊಡುವಂತೆ ಶ್ರೀ ಗುರುವೀರ ಮಡಿವಳ ಮಾಚಿದೇವ ಸಂಘದ ಅಧ್ಯಕ್ಷ ಪುರುಷೋತ್ತಮ್ ಆಗ್ರಹಿಸಿದರು.
  ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಮಡಿವಾಳ ಸಮುದಾಯವನ್ನು ದೇಶದ ೧೮ ರಾಜ್ಯಗಳಲ್ಲಿ ಪರಿಶಿಷ್ಟಜಾತಿಗೆ ಸೇರಿಸಲಾಗಿದೆ. ಆದರೆ ಕರ್ನಾಟಕ ರಾಜ್ಯದಲ್ಲಿ ಈ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸದೆ ಕಡೆಗಣಿಸಲಾಗಿದೆ ಎಂದು ದೂರಿದರು.
    ಎಲ್ಲಾ ರಾಜಕೀಯ ಪಕ್ಷಗಳು, ಸರ್ಕಾರಗಳು ಈ ಸಮುದಾಯವನ್ನು ನಿರ್ಲಕ್ಷ್ಯತನದಿಂದ ಕಾಣುವ ಮೂಲಕ ಮಡಿವಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ದಲಿತರ ವಿರೋಧವಿದೆ ಎಂದು ಸಚಿವ ಕೋಟ ಶ್ರಿನಿವಾಸ ಪೂಜಾರಿಯವರು
    ಲಿಖಿತ ಉತ್ತರ ನೀಡುವ ಮೂಲಕ ಬೇಜವಾಬ್ದಾರಿಯಿಂದ ವರ್ತಿಸಿದ್ದು, ಸಮಾಜವನ್ನು ಅವಹೇಳನ ಮಾಡಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಈಗಾಗಲೇ ರಾಜ್ಯ ಸರ್ಕಾರ ಎಸ್‌ಸಿ/ಎಸ್‌ಟಿ ಮೀಸಲಾತಿ ಹೆಚ್ಚಿಸಿರುವುದನ್ನು ಸಮಾಜ ಸ್ವಾಗತಿಸುತ್ತದೆ. ನಾವು ಯಾವುದೇ ಜಾತಿಯ ವಿರೋಧಿಗಳಲ್ಲ, ಪರಿಶಿಷ್ಟಜಾತಿಗೆ ಒಳಪಡುವ ಎಲ್ಲಾ ಅರ್ಹತೆಗಳನ್ನು ಮಡಿವಳ ಸಮಾಜ ಹೊಂದಿದೆ ಎಂದು ಈ ಹಿಂದೆಯೇ ಅನ್ನಪೂರ್ಣಮ್ಮ ಆಯೋಗ ವರದಿ ನೀಡಿದ್ದರೂ ಜಾರಿಗೊಳಿಸುವಲ್ಲಿ ಸರ್ಕಾರಗಳು ಮಲತಾಯಿ ಧೋರಣೆ ಅನುಸರಿಸುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಸರ್ಕಾರ ತಕ್ಷಣ ಜಾತಿವಾರು ಸಮೀಕ್ಷೆ ವರದಿ ಬಿಡುಗಡೆ ಮಾಡಬೇಕು. ಮುಂದಿನ ದಿನಗಳಲ್ಲಿ ಮೀಸಲಾತಿಗೆ ಒತ್ತಾಯಿಸಿ ಸಮುದಾಯದ ಶ್ರೀಗಳ ನೇತೃತ್ವದಲ್ಲಿ ಹೋರಾಟ ಆರಂಭಿಸಲಾಗುವುದು ಎಂದರು.
    ಉಪಾಧ್ಯಕ್ಷರಾದ ಎನ್.ಆರ್ ಮಂಜುನಾಥ್, ಸಿದ್ದಾಪುರ ಮಂಜಪ್ಪ, ಪ್ರಧಾನ ಕಾರ್ಯದರ್ಶಿ ರಮೇಶ್, ಖಜಾಂಚಿ ದಿನೇಶ್, ಸಹಕಾರ್ಯದರ್ಶಿಗಳಾದ ಚಲುವಯ್ಯ, ತಿಪ್ಪೇಶ್ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು

ಗ್ರಾಮಾಂತರ ಪೊಲೀಸರ ಕಾರ್ಯಾಚರಣೆ : ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ೧೦ ಕ್ವಿಂಟಲ್ ಅಕ್ಕಿ ವಶ


ಭದ್ರಾವತಿ ತಾಲೂಕಿನ ದೊಣಬಘಟ್ಟ ಗ್ರಾಮದಲ್ಲಿ ಮೊಹ್ಮದ್ ಯೂನಸ್ ಎಂಬಾತ ಅಕ್ರಂ ಮತ್ತು ನವೀದ್ ಎಂಬುವರ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಒಟ್ಟು ೨೨ ಸಾವಿರ ರು. ಮೌಲ್ಯದ ೧೦ ಕ್ವಿಂಟಲ್ ಅಕ್ಕಿಯನ್ನು ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡಿರುವುದು.
    ಭದ್ರಾವತಿ, ಅ. ೨೦: ಇತ್ತೀಚೆಗೆ ತಾಲೂಕಿನಾದ್ಯಂತ ಪಡಿತರ ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ರಮಗಳು ಹೆಚ್ಚಾಗುತ್ತಿರುವುದು ಬೆಳಕಿಗೆ ಬರುತ್ತಿವೆ. ಮತ್ತೊಂದೆಡೆ ಈ ಅಕ್ರಮ ನ್ಯಾಯಬೆಲೆ ಅಂಗಡಿಗಳ ವಿರುದ್ಧ ನಿರಂತರ ಹೋರಾಟ ಸಹ ನಡೆಯುತ್ತಿದೆ. ಈ ನಡುವೆ ಇದೀಗ ತಾಲೂಕಿನ ಗ್ರಾಮಾಂತರ ಭಾಗದಲ್ಲಿ ಮತ್ತೊಂದು ಹೊಸ ಪ್ರಕರಣ ಬಯಲಿಗೆ ಬಂದಿದೆ.
    ಕಳೆದ ೨ ದಿನಗಳ ಹಿಂದೆ ಪಡಿತರ ಅಕ್ಕಿಯನ್ನು ಹೋಲುವ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ತಾಲೂಕಿನ ದೊಣಬಘಟ್ಟ ಗ್ರಾಮದಲ್ಲಿ ಮೊಹ್ಮದ್ ಯೂನಸ್ ಎಂಬಾತ ಅಕ್ರಂ ಮತ್ತು ನವೀದ್ ಎಂಬುವರ ಮನೆಯಲ್ಲಿ ಒಟ್ಟು ೨೨ ಸಾವಿರ ರು. ಮೌಲ್ಯದ ೧೦ ಕ್ವಿಂಟಲ್ ಅಕ್ಕಿಯನ್ನು ಸಂಗ್ರಹಿಸಿಟ್ಟಿದ್ದು, ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ವೃತ್ತ ನಿರೀಕ್ಷಕ ಎನ್.ಎಂ ಗುರುರಾಜ್ ನೇತೃತ್ವದ ತಂಡ ದಾಳಿ ನಡೆಸಿದೆ.
    ಈ ಅಕ್ಕಿಯನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡಲು ಸಂಗ್ರಹಿಸಿಡಲಾಗಿತ್ತು ಎನ್ನಲಾಗಿದೆ. ಆದರೆ ಈ ಅಕ್ಕಿ ಕಳಪೆ ಗುಣಮಟ್ಟದ ಅಕ್ಕಿಯೋ, ಇಲ್ಲವೋ ಎಂಬುದು ಇನ್ನೂ ತಿಳಿದು ಬಂದಿಲ್ಲ. ಈ ಸಂಬಂಧ ಆಹಾರ ಇಲಾಖೆ ನಿರೀಕ್ಷಕ ಮಂಜು ದೂರು ನೀಡಿದ್ದಾರೆ. ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಕೃಷ್ಣಮೂರ್ತಿ, ಕುಮಾರನಾಯ್ಕ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಹೊಸ ಸಿದ್ದಾಪುರ ಗ್ರಾಮಕ್ಕೆ ಕಾಡಾ ಅಧ್ಯಕ್ಷೆ ಭೇಟಿ : ಸಮಸ್ಯೆಗಳಿಗೆ ಪೂರಕ ಸ್ಪಂದನೆ

    ಭದ್ರಾವತಿ, ಅ. ೨೦ : ನಗರಸಭೆ ವ್ಯಾಪ್ತಿಯ ಹೊಸ ಸಿದ್ದಾಪುರ ಗ್ರಾಮಕ್ಕೆ ಗುರುವಾರ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷೆ ಕೆ.ಬಿ ಪವಿತ್ರ ರಾಮಯ್ಯ ಭೇಟಿ ನೀಡಿ ನಿವಾಸಿಗಳ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸಿದರು.
    ಈ ಭಾಗದ ನಗರಸಭಾ ಸದಸ್ಯೆ ನಾಗರತ್ನ ಅನಿಲ್‌ಕುಮಾರ್ ಹಾಗು ಸ್ಥಳೀಯ ಪ್ರಮುಖರು ಮತ್ತು ರೈತರು ಬುಧವಾರ ಕಾಡಾ ಕಛೇರಿ ತೆರಳಿ ಅಧ್ಯಕ್ಷರನ್ನು ಭೇಟಿಯಾಗಿ ಖುದ್ದಾಗಿ ಪರಿಶೀಲನೆ ನಡೆಸಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದರು. ಈ ಹಿನ್ನಲೆಯಲ್ಲಿ ಭೇಟಿ ನೀಡಿ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸಿದರು.
    ಗ್ರಾಮದ ಶನೇಶ್ವರ ಮತ್ತು ಆದಿಶಕ್ತಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ದುರಸ್ತಿಪಡಿಸುವ ಸಂಬಂಧ  ಮನವಿ ಸ್ವೀಕರಿಸಿದರು.  ಶನೇಶ್ವರ ಮತ್ತು ಆದಿಶಕ್ತಿ ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಸದಸ್ಯರು ಮತ್ತು ಭಜನಾ ಮಂಡಳಿ ಸದಸ್ಯರುಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.


ಭದ್ರಾವತಿ ನಗರಸಭೆ ವ್ಯಾಪ್ತಿಯ ಹೊಸ ಸಿದ್ದಾಪುರ ಗ್ರಾಮಕ್ಕೆ ಗುರುವಾರ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷೆ ಕೆ.ಬಿ ಪವಿತ್ರ ರಾಮಯ್ಯ ಭೇಟಿ ನೀಡಿ ನಿವಾಸಿಗಳ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸಿದರು.

Wednesday, October 19, 2022

ಬಲಿಜ ಸಮುದಾಯಕ್ಕೆ ಪೂರ್ಣ ಪ್ರಮಾಣದ ಮೀಸಲಾತಿ ನೀಡಿ

ಬಲಿಜ ಸಮುದಾಯಕ್ಕೆ ಪೂರ್ಣ ಪ್ರಮಾಣದಲ್ಲಿ ೨ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಬುಧವಾರ ಭದ್ರಾವತಿ ತಾಲೂಕು ಬಲಜ ಸಂಘದ ವತಿಯಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಅ. ೧೯: ಬಲಿಜ ಸಮುದಾಯಕ್ಕೆ ಪೂರ್ಣ ಪ್ರಮಾಣದಲ್ಲಿ ೨ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಬುಧವಾರ ತಾಲೂಕು ಬಲಜ ಸಂಘದ ವತಿಯಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಬಲಿಜ ಸಮುದಾಯ ಈ ಹಿಂದೆ ಅಂದರೆ ೧೯೯೪ರಲ್ಲಿ ಶೈಕ್ಷಣಿಕ, ಆರ್ಥಿಕ, ಉದ್ಯೋಗ, ವಿದ್ಯಾಭ್ಯಾಸ ಸೇರಿದಂತೆ ಸರ್ಕಾರಿ ಸೌಲಭ್ಯಗಳನ್ನು ಮೀಸಲಾತಿ ಪ್ರವರ್ಗ ೨ಎ ಅಡಿಯಲ್ಲಿ ಅವಕಾಶ ಪಡೆಯಲಾಗಿತ್ತು. ಇದೆ ವರ್ಷ ಶೈಕ್ಷಣಿಕ ಕಾರಣಕ್ಕಾಗಿ ಪ್ರವರ್ಗ ೨ಎ ನಿಲಂಬನೆನೆಗೊಳಿಸಲಾಗಿದೆ. ಅಂದಿನಿಂದ ಇಂದಿನವರೆಗೆ ಕಳೆದ ಸುಮಾರು ೨೮ ವರ್ಷಗಳಿಂದ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಆದರೂ ಸಹ ನಿಬಂಧನೆಗೊಳಿಸಿರುವ ಪ್ರವರ್ಗ ೨ಎ ಸೌಲಭ್ಯಗಳನ್ನು ನೀಡಿರುವುದಿಲ್ಲ ಎಂದು ಮನವಿಯಲ್ಲಿ ಅಳಲು ತೋರ್ಪಡಿಸಲಾಗಿದೆ.
    ೨೦೧೧ರಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್ ಯಡಿಯೂರಪ್ಪನವರು ಬಲಿಜ ಸಮುದಾಯಕ್ಕೆ ಪ್ರವರ್ಗ ೨ಎ ಅಡಿಯಲ್ಲಿ ವಿದ್ಯಾಭ್ಯಾಸಕ್ಕಾಗಿ ಅನುಕೂಲ ಮಾಡಿಕೊಟ್ಟಿದ್ದು, ಆದರೆ ಉದ್ಯೋಗ, ಆರ್ಥಿಕ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಇದುವರೆಗೂ ಕಲ್ಪಿಸಿಕೊಟ್ಟಿರುವುದಿಲ್ಲ. ಈ ಹಿನ್ನಲೆಯಲ್ಲಿ ತಕ್ಷಣ ೨ಎ ಅಡಿಯಲ್ಲಿ ಪೂರ್ಣ ಪ್ರಮಾಣದ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕೆಂದು ಮನವಿ ಮಾಡಲಾಗಿದೆ.
    ಸಂಘದ ಅಧ್ಯಕಷ ಜೆ.ಎಸ್ ಸಂಜೀವಮೂರ್ತಿ ನೇತೃತ್ವದಲ್ಲಿ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಅವರಿಗೆ ಮನವಿ ಸಲ್ಲಿಸಲಾಯಿತು. ಗೌರವಾಧ್ಯಕ್ಷ ಎಸ್.ಎನ್ ಸುಬ್ರಮಣ್ಯ, ಉಪಾಧ್ಯಕ್ಷರಾದ ಎಸ್.ಬಿ ಜಂಗಮಪ್ಪ, ಶಕುಂತಲಾ, ಪ್ರಧಾನ ಕಾರ್ಯದರ್ಶಿ ಎಂ. ರಮೇಶ್, ಸಹ ಕಾರ್ಯದರ್ಶಿ ಟಿ. ರಮೇಶ್, ಖಜಾಂಚಿ ಬಿ.ಎ ನರೇಂದ್ರಬಾಬು, ಎಚ್.ಆರ್  ರಂಗನಾಥ್, ದಶರಥಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ದಾನವಾಡಿ ಗ್ರಾಮದ ರೈತರಿಗೆ ಸಾಗುವಳಿ ಚೀಟಿ ನೀಡಲು ಆಗ್ರಹಿಸಿ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ

ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಹೋಬಳಿ ಅರಕೆರೆ ವ್ಯಾಪ್ತಿಯ ದಾನವಾಡಿ ಗ್ರಾಮದ ಸರ್ವೆ ನಂ. ೩೩ರಲ್ಲಿ ಸುಮಾರು ೮೦ ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ನೀಡುವಂತೆ ಆಗ್ರಹಿಸಿ ಕರ್ನಾಟಕ ಭೂ-ಸ್ವಾಧೀನ ರೈತರ ಹೋರಾಟ ಸಮಿತಿ ವತಿಯಿಂದ ತಾಲೂಕು ಕಛೇರಿ ಮುಂಭಾಗ ಬುಧವಾರದಿಂದ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
    ಭದ್ರಾವತಿ, ಅ. ೧೯ : ತಾಲೂಕಿನ ಹೊಳೆಹೊನ್ನೂರು ಹೋಬಳಿ ಅರಕೆರೆ ವ್ಯಾಪ್ತಿಯ ದಾನವಾಡಿ ಗ್ರಾಮದ ಸರ್ವೆ ನಂ. ೩೩ರಲ್ಲಿ ಸುಮಾರು ೮೦ ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ನೀಡುವಂತೆ ಆಗ್ರಹಿಸಿ ಕರ್ನಾಟಕ ಭೂ-ಸ್ವಾಧೀನ ರೈತರ ಹೋರಾಟ ಸಮಿತಿ ವತಿಯಿಂದ ತಾಲೂಕು ಕಛೇರಿ ಮುಂಭಾಗ ಬುಧವಾರದಿಂದ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
    ಸರ್ವೆ ನಂ.೩೩ ದನಗಳ ಮುಫತ್ತು ಭೂಮಿಯಾಗಿದ್ದು, ಈ ಭೂಮಿಯಲ್ಲಿ ಕಳೆದ ಸುಮಾರು ೮೦ ವರ್ಷಗಳಿಂದ ೫೦ಕ್ಕೂ ಹೆಚ್ಚು ಕುಟುಂಬಗಳು ಸಾಗುವಳಿ ಮಾಡಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಈ ಭೂಮಿಯನ್ನು ೧೯೭೨-೭೩ರಲ್ಲಿ ಉಪವಿಭಾಗಾಧಿಕಾರಿಗಳು ಅನಧಿಕೃತವಾಗಿ ಸಾಗುವಳಿಪಟ್ಟಿ ಮಾಡಿದ್ದು, ಇದರಿಂದಾಗಿ ಕಂದಾಯ ಇಲಾಖೆಗೆ ಸೇರಿರುವ ಈ ಭೂಮಿ ಮೈನರ್ ಫಾರೆಸ್ಟ್ ಎಂದು ಪಹಣಿ ದಾಖಲೆಯಲ್ಲಿ ನಮೂದಾಗಿರುತ್ತದೆ. ಈ ಹಿನ್ನಲೆಯಲ್ಲಿ ತಕ್ಷಣ ಮೈನರ್ ಫಾರೆಸ್ಟ್ ಎಂಬುದನ್ನು ಕೈಬಿಟ್ಟು ಸಾಗುವಳಿ ಮಾಡುತ್ತಿರುವವರಿಗೆ ಸಾಗುವಳಿ ಚೀಟಿ ನೀಡಬೇಕೆಂದು ಆಗ್ರಹಿಸಲಾಯಿತು.
    ಇದೆ ರೀತಿ ಕೋಡಿ ಹೊಸೂರು ಗ್ರಾಮ ಸರ್ವೆ ನಂ.೧೨ರಲ್ಲಿ ಮತ್ತು ದಾನವಾಡಿ ಗ್ರಾಮದ ಸರ್ವೆ ನಂ.೨೯ ಹಾಗು ಕಲ್ಲಾಪುರ ಗ್ರಾಮದ ಸರ್ವೆ ನಂ.೧ ಮತ್ತು ಸರ್ವೆ ನಂ.೨೬ ಹಾಗು ಕೂಡ್ಲಿಗೆರೆ ಹೋಬಳಿ ಕೊಟ್ಟದಾಳ್ ಸರ್ವೆ ನಂ.೧ ಮತ್ತು ೨ರಲ್ಲಿ ಸಾಗುವಳಿ ಮಾಡುತ್ತಿದ್ದು, ಕೆಲವು ಕುಟುಂಬಗಳಿಗೆ ಸಾಗುವಳಿ ಚೀಟಿ ನೀಡಿದ್ದರೂ ಖಾತೆ ಪಹಣಿ ಆಗಿರುವುದಿಲ್ಲ. ಹಲವಾರು ವರ್ಷಗಳಿಂದ ದನಗಳ ಮುಫತ್ತು, ಹುಲ್ಲುಬನ್ನಿ ಹರಾಜು ಹಾಗು ಕಂದಾಯ ಇಲಾಖೆಗೆ ಸೇರಿರುವ ಭೂಮಿಯನ್ನು ೨೦೧೨-೧೩ರಲ್ಲಿ ಏಕಾಏಕಿ ಮೈನರ್ ಫಾರೆಸ್ಟ್ ಎಂದು ಪಹಣಿ ದಾಖಲೆಯಲ್ಲಿ ಅಧಿಕಾರಿಗಳು ದಾಖಲಿಸಿರುತ್ತಾರೆ. ಈ ಹಿನ್ನಲೆಯಲ್ಲಿ ಇದನ್ನು ಪುನರ್ ಪರಿಶೀಲಿಸಿ ಸಿಪಿಟಿ ಟ್ರಂಚ್‌ನಿಂದ ಹೊರಗಡೆ ಸಾಗುವಳಿ ಮಾಡಿಕೊಂಡು ಅಡಕೆ, ಜೋಳ, ಭತ್ತ, ರಾಗಿ ಮತ್ತು ಇತರೆ ಬೆಳೆಗಳನ್ನು ಬೆಳೆಯುತ್ತಿರುವ ಹಾಗು ಮನೆಗಳನ್ನು ನಿರ್ಮಿಸಿಕೊಂಡು ೯೪ಸಿ ಅಡಿಯಲ್ಲಿ  ಹಕ್ಕುಪತ್ರ ಪಡೆದು ದನಕರುಗಳು ಹಾಗು ಇತರೆ ಜಾನುವಾರುಗಳನ್ನು ಸಾಕಾಣಿಕೆ ಮಾಡಿಕೊಂಡು ಬದುಕು ಸಾಗಿಸುತ್ತಿರುವ ಕುಟುಂಬಗಳಿಗೆ ಸಾಗುವಳಿ ಚೀಟಿ ನೀಡಿ ಖಾತೆ ಪಹಣಿ ಮಾಡಿಕೊಡಬೇಕೆಂದು ಒತ್ತಾಯಿಸಲಾಯಿತು.
    ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರುವವರೆಗೂ ಹಾಗು ಬೇಡಿಕೆ ಈಡೇರುವವರೆಗೂ ಸತ್ಯಾಗ್ರಹ ಮುಂದುವರೆಸುವುದಾಗಿ ಎಚ್ಚರಿಸಲಾಯಿತು. ಸತ್ಯಾಗ್ರಹ ಗುರುವಾರ ಸಹ ಮುಂದುವರೆಯಲಿದೆ. ಸಮಿತಿ ಗೌರವಾಧ್ಯಕ್ಷ ಗೋಪಾಲಪ್ಪ, ಶಿವಮೊಗ್ಗ ಗ್ರಾಮಾಂತರ ಅಧ್ಯಕ್ಷ ಪುಟ್ಟಪ್ಪ, ಸಮಾಜ ಸೇವಕ ಹಾಗು ಕೆಆರ್‌ಎಂಎಸ್ ರಾಜ್ಯಾಧ್ಯಕ್ಷ ಎಸ್. ಮಂಜುನಾಥ್, ದಾನವಾಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಗುರುಮೂರ್ತಿ, ಜಯಣ್ಣ, ಅರಕೆರೆ ಗ್ರಾಮ ಪಂಚಾಯಿತಿ ಸದಸ್ಯ ರವಿ, ಕೆ. ಮುನಿಯಪ್ಪ, ರವಿ, ಈರೇಶ, ಪರಮೇಶಿ, ನರಸಿಂಹಪ್ಪ, ಕುಮಾರ್ ಕಾಚನಗೊಂಡನಹಳ್ಳಿ, ಕಾರ್ತಿಕ್, ಬಸವರಾಜ, ಕುಮಾರ್, ಹಾಲೇಶ್, ಕೃಷ್ಣಪ್ಪ, ಸಂತೋಷ್, ಪ್ರಕಾಶಪ್ಪ, ಲೋಹಿತ್, ಕುಮಾರ್ ದಾನವಾಡಿ ಸೇರಿದಂತೆ ಇನ್ನಿತರರು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

ಸ್ವಸಹಾಯ ಒಕ್ಕೂಟಗಳಿಂದ ಮಾತ್ರ ಸಾಲ ಪಡೆಯಿರಿ : ಡಾ.ಎಲ್.ಎಚ್ ಮಂಜುನಾಥ್

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ಭದ್ರಾವತಿ ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ  ನೂತನ ಎರಡು ಯೋಜನಾ ಕಛೇರಿಗಳ ಉದ್ಘಾಟನೆ ಹಾಗು ವಿವಿಧ ಅನುದಾನಗಳ ವಿತರಣಾ ಸಮಾರಂಭವನ್ನು ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಉದ್ಘಾಟಿಸಿದರು.
    ಭದ್ರಾವತಿ, ಅ. ೧೯: ಖಾಸಗಿ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯದೆ ಸ್ವಸಹಾಯ ಒಕ್ಕೂಟಗಳ ಮೂಲಕ ಸಾಲ ಪಡೆದು ಹಿಂದಿರುಗಿಸುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ಯಾವುದೇ ಕಾರಣಕ್ಕೂ ಅನಗತ್ಯವಾಗಿ ಸಾಲ ಮಾಡಿ ಹಿಂದಿರುಗಿಸಲು ಸಾಧ್ಯವಾಗದಂತಹ ಪರಿಸ್ಥಿತಿಗೆ ಒಳಗಾಗಬಾರದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಲ್.ಎಚ್ ಮಂಜುನಾಥ್ ಎಚ್ಚರಿಸಿದರು.
    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ನಗರದ ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ  ನೂತನ ಎರಡು ಯೋಜನಾ ಕಛೇರಿಗಳ ಉದ್ಘಾಟನೆ ಹಾಗು ವಿವಿಧ ಅನುದಾನಗಳ ವಿತರಣಾ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
    ಪರಿವರ್ತನೆಗಾಗಿ ಸ್ವಸಹಾಯ ಒಕ್ಕೂಟಗಳ ಮೂಲಕ ಸಾಲ ನೀಡಲಾಗುತ್ತಿದೆ. ಇದನ್ನು ಸರಿಯಾಗಿ ಅರ್ಥಮಾಡಿಕೊಂಡು ಸದ್ಬಳಕೆ ಮಾಡಿಕೊಳ್ಳಬೇಕು. ದೇಶದಲ್ಲಿ ಬ್ಯಾಂಕ್ ವ್ಯವಸ್ಥೆ ಸುಭದ್ರವಾಗಿದೆ ಬ್ಯಾಂಕ್ ಮೂಲಕವೇ ಎಲ್ಲಾ ವ್ಯವಹಾರ ನಡೆಸಬೇಕು. ಖಾಸಗಿ ಹಣಕಾಸು ಸಂಸ್ಥೆಗಳಿಂದ ಯಾವುದೇ ಕಾರಣಕ್ಕೂ ಸಾಲ ಸೌಲಭ್ಯ ಪಡೆಯಬಾರದು. ಸ್ವಸಹಾಯ ಒಕ್ಕೂಟ ಬ್ಯಾಂಕ್ ವ್ಯವಸ್ಥೆ ಮೇಲೆ ನಂಬಿಕೆ ಹೊಂದುವ ಜೊತೆಗೆ ಆರ್ಥಿಕ ಸೌಲಭ್ಯಗಳನ್ನು ಸುಲಭವಾಗಿ ಕಲ್ಪಿಸಿಕೊಡುತ್ತಿದೆ ಎಂದರು.
    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಸರ್ಕಾರಿ ಶಾಲೆ, ಆಸ್ಪತ್ರೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಸರ್ಕಾರಿ ಶಾಲೆ, ಆಸ್ಪತ್ರೆಗಳ ಮೇಲೆ ಜನರು ಹೊಂದಿರುವ ಧೋರಣೆ ಬದಲಿಸಿಕೊಂಡಾಗ ಮಾತ್ರ ಅವುಗಳು ಸಹ ಅಭಿವೃದ್ಧಿ ಹೊಂದಲು ಸಾಧ್ಯ. ಸರ್ಕಾರ ಗುರುತಿಸದ ಕೆಲವೊಂದು ಸೇವಾ ಕಾರ್ಯಗಳನ್ನು ಟ್ರಸ್ಟ್ ಗುರುತಿಸಿ ಅವುಗಳಲ್ಲಿ ತೊಡಗಿಸಿಕೊಂಡಿರುವುದು ವಿಶೇಷವಾಗಿದೆ ಎಂದರು.
    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಟ್ರಸ್ಟ್ ನಿಸ್ವಾರ್ಥ ಸೇವೆ ಮೂಲಕ ರಾಜ್ಯದಲ್ಲಿಯೇ ಮಾದರಿಯಾಗುವ ಮೂಲಕ ಲಕ್ಷಾಂತರ ಕುಟುಂಬಗಳ ಭವಿಷ್ಯ ಉಜ್ವಲಗೊಳಿಸಿದೆ. ಅಲ್ಲದೆ ಸಂಕಷ್ಟದಲ್ಲಿರುವ ಎಲ್ಲಾ ಜಾತಿ, ಎಲ್ಲಾ ಧರ್ಮದವರ ನೆರವಿಗೆ ಮುಂದಾಗಬೇಕೆಂಬ ಪರಿಕಲ್ಪನೆ ತೋರಿಸಿಕೊಟ್ಟಿದೆ. ಟ್ರಸ್ಟ್ ಸಾಮಾಜಿಕ ಯೋಜನೆಗಳು, ಅವುಗಳನ್ನು ಅನುಷ್ಠಾನಗೊಳಿಸುವಲ್ಲಿನ ಬದ್ಧತೆ, ಕರ್ತವ್ಯ ನಿರ್ವಹಿಸುತ್ತಿರುವವರ ಪ್ರಾಮಾಣಿಕತನ ಎಲ್ಲವೂ ಮತ್ತಷ್ಟು ಬೆಳವಣಿಗೆಗೆ ಪೂರಕವಾಗಿವೆ. ಭವಿಷ್ಯದಲ್ಲಿ ಸರ್ಕಾರಿ ಶಾಲೆಗಳು ಅಭಿವೃದ್ಧಿಗೊಳ್ಳಬೇಕು. ಈ ನಿಟ್ಟಿನಲ್ಲಿ ಟ್ರಸ್ಟ್ ಇನ್ನೂ ಹೆಚ್ಚಿನ ಗಮನ ಹರಿಸಬೇಕೆಂದು ಮನವಿ ಮಾಡಿದರು.
    ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಜಿ. ಆನಂದಕುಮಾರ್, ಸದಸ್ಯರಾದ ಜಯರಾಂ ಗೊಂದಿ, ಆರ್. ಕರುಣಾಮೂರ್ತಿ, ಪಾಲಾಕ್ಷಪ್ಪ, ಯೋಜನೆ ಪ್ರಾದೇಶಿಕ ನಿರ್ದೇಶಕಿ ಬಿ. ಗೀತಾ, ಚಂದ್ರಶೇಖರ್, ಹಿರಿಯ ಸಹಕರಿ ಧುರೀಣ ಕೆ.ಎನ್ ಭೈರಪ್ಪಗೌಡ, ತಾಲೂಕು ಯೋಜನಾಧಿಕಾರಿಗಳಾದ ವೈ. ಪ್ರಕಾಶ್ ನಾಯ್ಕ, ಮಾಧವ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ಭದ್ರಾವತಿ ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ವಿವಿಧ ಅನುದಾನಗಳನ್ನು ವಿತರಿಸಲಾಯಿತು.