Thursday, December 26, 2024

ನವಚೇತನ ವಿದ್ಯಾಸಂಸ್ಥೆಯ ಶಾಲಾ ವಾರ್ಷಿಕೋತ್ಸವ

ಭದ್ರಾವತಿ ನಗರಸಭೆ ವ್ಯಾಪ್ತಿಯ ಕಡದಕಟ್ಟೆ ನವಚೇತನ ವಿದ್ಯಾಸಂಸ್ಥೆಯ ಶಾಲಾ ವಾರ್ಷಿಕೋತ್ಸವ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಸಿದರು.
    ಭದ್ರಾವತಿ: ನಗರಸಭೆ ವ್ಯಾಪ್ತಿಯ ಕಡದಕಟ್ಟೆ ನವಚೇತನ ವಿದ್ಯಾಸಂಸ್ಥೆಯ ಶಾಲಾ ವಾರ್ಷಿಕೋತ್ಸವ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಸಿದರು.
    ವಾರ್ಷಿಕೋತ್ಸವದಲ್ಲಿ ರೈತ ಅಶೋಕ್, ಮಾಜಿ ಸೈನಿಕ ದೇವರಾಜು ಮತ್ತು ನವಚೇತನ ಶಾಲೆಯ ನಿವೃತ್ತ ಶಿಕ್ಷಕ ಎಂ. ಚನ್ನೇಶ್ವರಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೆ ಕಳೆದ ವರ್ಷ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಅತ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
    ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ನಗರಸಭಾ ಸದಸ್ಯರಾದ ಶೃತಿ ವಸಂತ್ ಕುಮಾರ್ ಮತ್ತು ಗೀತಾ ರಾಜಕುಮಾರ್, ಶಿಮೂಲ್ ನಿರ್ದೇಶಕ ಕೆಂಚನಹಳ್ಳಿ ಎಸ್. ಕುಮಾರ್, ಜಮೀನ್ದಾರ್ ಪರಮೇಶ್ವರಪ್ಪ, ನಿವೃತ್ತ ಉಪನ್ಯಾಸಕ ನಿಂಗಪ್ಪ, ನಿವೃತ್ತ ಶಿಕ್ಷಕ ಜಿ. ಉಮೇಶ್ವರಪ್ಪ, ಸಿ.ಆರ್.ಪಿ ನಂದಿನಿ, ತಾಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ. ಪೃಥ್ವಿರಾಜ್, ಎನ್.ಪಿ.ಎಸ್ ಅಧ್ಯಕ್ಷ ಎ. ರಂಗನಾಥ್, ಕುವೆಂಪು ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಮುಸ್ವೀರ್ ಬಾಷಾ, ವಿದ್ಯಾಸಂಸ್ಥೆಯ ಸಲಹೆಗಾರರಾದ ಗೀತಾಬಾಯಿ ಸಿದ್ದೇಶ್ವರ, ಅಧ್ಯಕ್ಷ ಎಸ್. ವಿನಯ್, ಕಾರ್ಯದರ್ಶಿ ಎಸ್. ವಿವೇಕ್, ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಂಡವು. ಶಿಕ್ಷಕಿ ಎಚ್.ಡಿ ಸುವರ್ಣ ಸ್ವಾಗತಿಸಿ, ಬಿ.ಎಂ ಲಿಂಗರಾಜ್ ನಿರೂಪಿಸಿ, ಕೆ.ಎಸ್ ಮಂಜುನಾಥ್ ವಂದಿಸಿದರು.

ನಗರಸಭೆ ವ್ಯಾಪ್ತಿಯಲ್ಲಿ ಮೂಲ ಸೌಕರ್ಯ ಸಮರ್ಪಕವಾಗಿ ಕಲ್ಪಿಸುವಲ್ಲಿ ಅಧಿಕಾರಿಗಳು ವಿಫಲ : ಸದಸ್ಯರ ಆರೋಪ

ಭದ್ರಾವತಿ ನಗರಸಭೆ ಸಾಮಾನ್ಯ ಸಭೆ ಗುರುವಾರ ಅಧ್ಯಕ್ಷ ಮಣಿ ಎಎನ್‌ಎಸ್ ಅಧ್ಯಕ್ಷತೆಯಲ್ಲಿ ನಡೆಯಿತು. 
    ಭದ್ರಾವತಿ: ನಗರಸಭೆ ವ್ಯಾಪ್ತಿಯಲ್ಲಿ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸುವಲ್ಲಿ ನಗರಸಭೆ ಅಧಿಕಾರಿಗಳು ವಿಫಲರಾಗಿದ್ದು, ಇದರಿಂದಾಗಿ ವಾರ್ಡ್‌ಗಳಲ್ಲಿ ಸದಸ್ಯರು ತಲೆ ತಗ್ಗಿಸುವಂತಾಗಿದೆ ಎಂದು ಗುರುವಾರ ನಡೆದ ಸಾಮಾನ್ಯಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಲಾಯಿತು. 
    ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಮಣಿ ಎಎನ್‌ಎಸ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಕ್ಷ ಭೇದಮರೆತು ಸದಸ್ಯರು ಮೂಲ ಸೌಕರ್ಯಗಳನ್ನು ಕಲ್ಪಿಸುವಲ್ಲಿ ನಗರಸಭೆ ಅಧಿಕಾರಿಗಳು ವಿಫಲರಾಗಿದ್ದಾರೆ. ವಾರ್ಡ್‌ಗಳಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಇವುಗಳನ್ನು ನಿಯಂತ್ರಿಸುವಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ ಚರಂಡಿಗಳಲ್ಲಿ ಸ್ವಚ್ಛತೆ ಇಲ್ಲವಾಗಿದೆ ಕಸಕಡ್ಡಿಕಟ್ಟಿಕೊಂಡು ದುರ್ವಾಸನೆ ಬೀರುತ್ತಿವೆ. ಸೊಳ್ಳೆಕಾಟ ಹೆಚ್ಚಾಗಿದೆ. ರೋಗರುಜಿನಗಳು ಹರಡುವ ಭೀತಿ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 
    ಅಲ್ಲದೆ ಬಹುತೇಕ ವಾರ್ಡ್‌ಗಳಲ್ಲಿ ರಸ್ತೆ ಕಾಮಗಾರಿಗಳು ಸಮರ್ಪಕವಾಗಿ ನಡೆದಿಲ್ಲ. ಕಾಮಗಾರಿಗಳು ಅಪೂರ್ಣಗೊಂಡಿದ್ದು, ಯುಜಿಡಿ ಕಾಮಗಾರಿ ಸಹ ಸಮಪರ್ಕವಾಗಿ ನಡೆದಿಲ್ಲ. ಇದರಿಂದಾಗಿ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ. ಈ ಕುರಿತು ಹಲವಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು. ಮೂಲ ಸೌಕರ್ಯಗಳನ್ನು ಸಮಪರ್ಕವಾಗಿ ಕಲ್ಪಿಸುವ ನಿಟ್ಟಿನಲ್ಲಿ ತಕ್ಷಣ ಕ್ರಮ ಕೈಗೊಳ್ಳುವಂತೆ ಸದಸ್ಯರು ಆಗ್ರಹಿಸಿದರು. 
    ನಗರಸಭೆಯಿಂದ ಪೂರೈಕೆ ಮಾಡುತ್ತಿರುವ ಕುಡಿಯುವ ನೀರು ಕಲುಷಿತವಾಗಿದ್ದು, ಈ ಕುರಿತು ನಿವಾಸಿಗಳಿಂದ ಸಾಕಷ್ಟು ದೂರುಗಳು ಬರುತ್ತಿವೆ. ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವಂತೆ ಬಹುತೇಕ ಸದಸ್ಯರು ಆಗ್ರಹಿಸಿದರು. 
    ನಗರಸಭೆ ಸಾಮಾನ್ಯಸಭೆಗೆ  ಸರ್ಕಾರದ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮವಹಿಸುವಂತೆ ಸದಸ್ಯರು ಒತ್ತಾಯಿಸಿ ನಗರದ ಹೃದಯ ಭಾಗದಲ್ಲಿ ಹಾದು ಹೋಗಿರುವ  ಬಿ.ಎಚ್ ರಸ್ತೆಗೆ ಹುತ್ತಾ ಕಾಲೋನಿಯಿಂದ ಸಿ.ಎನ್ ರಸ್ತೆವರೆಗೂ ಹಲವು ವರ್ಷಗಳ ಹಿಂದೆಯೇ ಡಾ. ರಾಜ್‌ಕುಮಾರ್ ರಸ್ತೆ ಎಂದು ನಾಮಕರಣ ಮಾಡಲಾಗಿದ್ದರೂ ಸಹ ಎಲ್ಲೂ ಸಹ ಇದುವರೆಗೂ ನಾಮಫಲಕ ಅಳವಡಿಸಿಲ್ಲ. ಇದರಿಂದಾಗಿ ಸಾರ್ವಜನಿಕರು ಈ ರಸ್ತೆಯನ್ನು ರಾಜ್‌ಕುಮಾರ್ ರಸ್ತೆ ಎಂದು ಕರೆಯುತ್ತಿಲ್ಲ. ಇದು ಡಾ. ರಾಜ್‌ಕುಮಾರ್‌ರವರಿಗೆ ಮಾಡಿರುವ ಅಪಮಾನವಾಗಿದೆ. ಈ ಹಿನ್ನಲೆಯಲ್ಲಿ ತಕ್ಷಣ ನಾಮಫಲಕಗಳನ್ನು ಅಳವಡಿಸುವಂಗೆ ಆಗ್ರಹಿಸಿದರು.    
    ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ಪೌರಾಯುಕ್ತ ಪ್ರಕಾಶ್ ಎಂ ಚನ್ನಪ್ಪನವರ್ ಉಪಸ್ಥಿತರಿದ್ದರು. ನಗರಸಭೆ ಬಹುತೇಕ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. 
    ಬೆಳಿಗ್ಗೆ ೧೧ ಗಂಟೆಗೆ ಆರಂಭಗೊಂಡ ಸಭೆಯಲ್ಲಿ ಮಧ್ಯಾಹ್ನ ೧.೩೦ರ ವರೆಗೆ ಕೇವಲ ಸಾಮಾನ್ಯ ಚರ್ಚೆಗಳು ನಡೆದವು. ಅಜೆಂಡಾದಲ್ಲಿರುವ ಪ್ರಸ್ತಾವನೆಗಳ ಕುರಿತು ಯಾವುದೇ ಚರ್ಚೆ ನಡೆಯಲಿಲ್ಲ. 

ಮಾಡೆಲ್ ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿಗೆ ನೂತನ ನಿರ್ದೇಶಕರು

    ಭದ್ರಾವತಿ : ಹಳೇನಗರದ ಮಾಡೆಲ್ ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿಗೆ ನೂತನವಾಗಿ ೧೨ ಮಂದಿ ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. 
    ಈ ಕುರಿತು ಡಿ.೨೪ರಂದು ಚುನಾವಣಾಧಿಕಾರಿ ಅವಿರೋಧ ಆಯ್ಕೆ ಘೋಷಿಸಿದ್ದಾರೆ. ಸಾಮಾನ್ಯ ಸ್ಥಾನದಿಂದ ಸಿದ್ಧಾರೂಢನಗರದ ನಿವಾಸಿ ವಿಶ್ವನಾಥ ಕೋಠಿ, ನ್ಯೂಕಾಲೋನಿ ನಿವಾಸಿ ಜಿ.ಟಿ ಬಸವರಾಜಪ್ಪ, ಹುತ್ತಾ ಕಾಲೋನಿ, ಸಹ್ಯಾದ್ರಿ ಬಡಾವಣೆ ನಿವಾಸಿ  ಕೆ.ಎನ್ ಭೈರಪ್ಪಗೌಡ, ಜನ್ನಾಪುರ ಮರಾಠ ಬೀದಿ ನಿವಾಸಿ ಟಿ.ಎನ್ ರಮೇಶ್, ಸಿದ್ಧಾರೂಢ ನಗರದ ನಿವಾಸಿ ಬಿ.ಪಿ ಶಂಕರ್, ಜನ್ನಾಪುರ ಕೆ.ಸಿ ರಸ್ತೆ ನಿವಾಸಿ ನರಸಿಂಹಸ್ವಾಮಿ ಮತ್ತು ಹೊಸಮನೆ ಮುಖ್ಯರಸ್ತೆ ವಿನಾಯಕ ಚಿತ್ರಮಂದಿರದ ಮುಂಭಾಗದ ನಿವಾಸಿ ಎಂ.ಎನ್ ಸತೀಶ್, ಪರಿಶಿಷ್ಟ ಜಾತಿ ಸ್ಥಾನದಿಂದ ಗೋಲ್ಡನ್ ಜ್ಯೂಬಿಲಿ ನಿವಾಸಿ ಎಂ. ನಾಗರಾಜ, ಪ್ರವರ್ಗ ಎ ಸ್ಥಾನದಿಂದ ಅಪ್ಪರ್ ಹುತ್ತಾ ನಿವಾಸಿ ಸಣ್ಣಯ್ಯ, ಪ್ರವರ್ಗ ಬಿ ಸ್ಥಾನದಿಂದ ತಾಲೂಕಿನ ಗೌರಾಪುರ ಗ್ರಾಮದ ನಿವಾಸಿ ಸಿ.ಆರ್ ಶಿವರಾಮು, ಮಹಿಳಾ ಮೀಸಲು ಸ್ಥಾನದಿಂದ ನ್ಯೂಕಾಲೋನಿ ನಿವಾಸಿ ಉಮಾ ರಮೇಶ್ ಹಾಗು ಜನ್ನಾಪುರ ನಿವಾಸಿ ಟಿ.ಎಸ್ ವಿಜಯಲಕ್ಷ್ಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಜೀವ ಸಂಜೀವಿನಿ ಸ್ವಯಂಪ್ರೇರಿತ ರಕ್ತ ಕೇಂದ್ರ ಉದ್ಘಾಟನೆ

ಭದ್ರಾವತಿ ನಗರದ ಬಿ.ಎಚ್ ರಸ್ತೆ, ಎಸ್.ಎಸ್ ಕಾಂಪ್ಲೆಕ್ಸ್(ನಮ್ಮ ಬಜಾರ್) ಮೊದಲನೇ ಮಹಡಿಯಲ್ಲಿ ನೂತನವಾಗಿ ಆರಂಭಗೊಂಡಿರುವ ಜೀವ ಸಂಜೀವಿನಿ ಸ್ವಯಂಪ್ರೇರಿತ ರಕ್ತ ಕೇಂದ್ರ ಗುರುವಾರ ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಶ್ರೀ ಡಾ. ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. 
    ಭದ್ರಾವತಿ : ನಗರದ ಬಿ.ಎಚ್ ರಸ್ತೆ, ಎಸ್.ಎಸ್ ಕಾಂಪ್ಲೆಕ್ಸ್(ನಮ್ಮ ಬಜಾರ್) ಮೊದಲನೇ ಮಹಡಿಯಲ್ಲಿ ನೂತನವಾಗಿ ಆರಂಭಗೊಂಡಿರುವ ಜೀವ ಸಂಜೀವಿನಿ ಸ್ವಯಂಪ್ರೇರಿತ ರಕ್ತ ಕೇಂದ್ರ ಗುರುವಾರ ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಶ್ರೀ ಡಾ. ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. 
    ನಗರದಲ್ಲಿ ತುರ್ತು ಸಂದರ್ಭದಲ್ಲಿ ರಕ್ತ ಕೇಂದ್ರದ ಅವಶ್ಯಕತೆ ಇದ್ದು, ಪ್ರಸ್ತುತ ಶಿವಮೊಗ್ಗದಲ್ಲಿರುವ ವಿವಿಧ ರಕ್ತ ನಿಧಿ ಕೇಂದ್ರಗಳಿಂದ ತುರ್ತು ಸಂದರ್ಭದಲ್ಲಿ ರಕ್ತ ಪೂರೈಕೆ ಮಾಡಿಕೊಳ್ಳಲಾಗುತ್ತಿದೆ. ಇದೀಗ ಸಿರಿ ವೆಲ್‌ಫೇರ್ ಫೌಂಡೇಷನ್‌ರವರು ರಕ್ತ ಕೇಂದ್ರದ ಘಟಕ ಆರಂಭಿಸಿದ್ದು, ರಕ್ತ ಮತ್ತು ರಕ್ತದ ಅಂಶಗಳು ಸುಲಭವಾಗಿ ಲಭ್ಯವಾಗಲಿವೆ. 


    ಶಿವಮೊಗ್ಗ-ಚಿಕ್ಕಮಗಳೂರು ಬಸವಕೇಂದ್ರದ ಶ್ರೀ ಬಸವ ಮರುಳಸಿದ್ದಸ್ವಾಮೀಜಿ, ಮುಸ್ಲಿಂ ಧರ್ಮಗುರು ಶಾಹುಲ್ ಹಮೀದ್ ಮಡಾಡಿ, ನಗರಸಭೆ ಸದಸ್ಯರಾದ ಬಿ.ಕೆ ಮೋಹನ್, ಬಷೀರ್ ಅಹಮದ್, ತಾಲೂಕು ಬಗರ್‌ಹುಕುಂ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ಎಸ್.ಎಸ್ ಕಾಂಪ್ಲೆಕ್ಸ್ ಮಾಲೀಕ ಶಶಿಕುಮಾರ್, ಮುಖಂಡರಾದ ಜೆಬಿಟಿ ಬಾಬು, ಕೇಸರಿಪಡೆ ಗಿರೀಶ್ ಹಾಗು ರಕ್ತ ಕೇಂದ್ರದ ಪ್ರಮುಖರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  ಉದ್ಘಾಟನೆ ಅಂಗವಾಗಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. 

Wednesday, December 25, 2024

ಪ್ರೊ.ಜೆ.ಎಲ್ ಪದ್ಮನಾಭರಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ

ಇತ್ತೀಚೆಗೆ ಮಂಡ್ಯದಲ್ಲಿ ನಡೆದ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳದಲ್ಲಿ ಶಿವಮೊಗ್ಗದ ಶಿಕ್ಷಣತಜ್ಞರು ಹಾಗೂ ಕಮಲಾ ನೆಹರು ಮಹಿಳಾ ಕಾಲೇಜಿನ ಪ್ರಾಂಶುಪಾಲರಾಗಿದ್ದ ಪ್ರೊ.ಜೆ.ಎಲ್ ಪದ್ಮನಾಭರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ: ಇತ್ತೀಚೆಗೆ ಮಂಡ್ಯದಲ್ಲಿ ನಡೆದ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳದಲ್ಲಿ ಶಿವಮೊಗ್ಗದ ಶಿಕ್ಷಣತಜ್ಞರು ಹಾಗೂ ಕಮಲಾ ನೆಹರು ಮಹಿಳಾ ಕಾಲೇಜಿನ ಪ್ರಾಂಶುಪಾಲರಾಗಿದ್ದ ಪ್ರೊ.ಜೆ.ಎಲ್ ಪದ್ಮನಾಭರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಪ್ರೊ.ಪದ್ಮನಾಭ ಅವರು ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಇವರು ಕುವೆಂಪು ವಿಶ್ವವಿದ್ಯಾನಿಲಯದ ಶಿಕ್ಷಣಮಂಡಳಿ, ಸೆನೆಟ್ ಹಾಗೂ ಹಣಕಾಸು ಸಮಿತಿ ಸದಸ್ಯರಾಗಿ ಕೆಲಸ ನಿರ್ವಹಿಸಿದ್ದರಲ್ಲದೇ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿಯು ಸೇವೆ ಸಲ್ಲಿಸಿದ್ದು, ಶಿವಮೊಗ್ಗ ಜಿಲ್ಲಾ ಶೈಕ್ಷಣಿಕ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. 
    ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ೪೬ ಜನರಿಗೆ ಸನ್ಮಾನಿಸಲಾಯಿತು. ಪರಿಷತ್ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ್ ಜೋಷಿ, ಸಚಿವ ಚಲುವರಾಯಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಜ.೧ರಂದು ಕೋರೆಗಾಂವ್ ವಿಜಯೋತ್ಸವ ಆಚರಣೆ : ದಲಿತ ಸಂಘಟನೆಗಳ ಸಭೆ

ನೂತನ ವರ್ಷ ಆರಂಭದ ಮೊದಲ ದಿನ ಕೋರೆಗಾಂವ್ ವಿಜಯೋತ್ಸವ ಆಚರಿಸುವ ಸಂಬಂಧ ಭದ್ರಾವತಿ ನಗರದ ವಿವಿಧ ದಲಿತ ಸಂಘಟನೆಗಳು ಸಭೆ ನಡೆಸಿ ಚರ್ಚಿಸಿದವು. 
    ಭದ್ರಾವತಿ: ನೂತನ ವರ್ಷ ಆರಂಭದ ಮೊದಲ ದಿನ ಕೋರೆಗಾಂವ್ ವಿಜಯೋತ್ಸವ ಆಚರಿಸುವ ಸಂಬಂಧ ನಗರದ ವಿವಿಧ ದಲಿತ ಸಂಘಟನೆಗಳು ಸಭೆ ನಡೆಸಿ ಚರ್ಚಿಸಿದವು. 
    ಹೊಲಯ ಮಾದಿಗ ಸಮನ್ವಯ ಸಮಿತಿ ರಚಿಸಿಕೊಂಡು ಜ.೧ರಂದು ವಿಜಯೋತ್ಸವ ನಡೆಸುವ ಮೂಲಕ ಯಶಸ್ವಿಗೊಳಿಸಲು ಹಾಗು ಮುಂದಿನ ದಿನಗಳಲ್ಲಿ ಒಳಮೀಸಲಾತಿಗಾಗಿ ಜಂಟಿ ಹೋರಾಟ ನಡೆಸಲು ನಿರ್ಣಯ ಕೈಗೊಳ್ಳಲಾಯಿತು. 
    ಸಭೆಯಲ್ಲಿ ವಿವಿಧ ದಲಿತ ಸಂಘಟನೆಗಳ ಮುಖಂಡರುಗಳಾದ  ಶಿವಬಸಪ್ಪ, ಸತ್ಯ ಭದ್ರಾವತಿ, ಸುರೇಶ್, ಕುಬೇಂದ್ರಪ್ಪ, ಪುಟ್ಟರಾಜ, ಜಯರಾಮ್, ಧರ್ಮರಾಜ್, ಕೃಷ್ಣ, ಮಹೇಶ್, ಜಿಂಕ್‌ಲೈನ್ ಮಣಿ, ಮೂರ್ತಿ, ಸಿ. ಚನ್ನಪ್ಪ, ಜಗದೀಶ್, ಎಸ್. ಉಮಾ, ಗಂಗಾಧರ್, ಕೂಡ್ಲಿಗೆರೆ ರಮೇಶ್, ನಂಜಾಪುರ ರವಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 

ತಾಲೂಕಿನಲ್ಲಿ ಸಂಭ್ರಮದ ಕ್ರಿಸ್‌ಮಸ್ ಆಚರಣೆ

ಕ್ರೈಸ್ತ ದೇವಾಲಯಗಳಲ್ಲಿ ಸಿಹಿ ಹಂಚಿ ಪರಸ್ಪರ ಶುಭಾಶಯಗಳು  

ಜಗತ್ತಿಗೆ ತ್ಯಾಗ, ಪ್ರೀತಿಯ ಸಂದೇಶ ಸಾರಿದ ಯೇಸುಕ್ರಿಸ್ತರ ಜನ್ಮದಿನ ಬುಧವಾರ ಭದ್ರಾವತಿ ತಾಲೂಕಿನಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. 
    ಭದ್ರಾವತಿ : ಜಗತ್ತಿಗೆ ತ್ಯಾಗ, ಪ್ರೀತಿಯ ಸಂದೇಶ ಸಾರಿದ ಯೇಸುಕ್ರಿಸ್ತರ ಜನ್ಮದಿನ ಬುಧವಾರ ತಾಲೂಕಿನಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. 
    ತಾಲೂಕಿನ ಹಳೇನಗರ ಗಾಂಧಿನಗರದ ವೇಳಾಂಗಣಿ ಆರೋಗ್ಯ ಮಾತೆ ದೇವಾಲಯ, ನ್ಯೂಟೌನ್ ಅಮಲೋಧ್ಭವಿ ಮಾತೆ ದೇವಾಲಯ, ಕಾರೆಹಳ್ಳಿಯ ಸಂತ ಅಂತೋಣಿಯವರ ದೇವಾಲಯ, ಕಾಗದ ನಗರದ ಸಂತ ಜೋಸೆಫರ ದೇವಾಲಯಗಳು ಸೇರಿದಂತೆ ತಾಲೂಕಿನ ಇನ್ನಿತರ ಕ್ರೈಸ್ತ ದೇವಾಲಯಗಳಲ್ಲಿ ನಿರ್ಮಾಣ ಮಾಡಲಾದ ಕ್ರಿಸ್‌ಮಸ್ ಟ್ರೀ, ವಿವಿಧ ರೀತಿಯ ನಕ್ಷತ್ರಗಳು, ಯೇಸುವಿನ ಜನನ ಸಂದರ್ಭದ ಕ್ಷಣಗಳನ್ನು ನೆನಪಿಸುವ ಗೋದಲಿಗಳು ಗಮನ ಸೆಳೆದವು. ಮಂಗಳವಾರ ಮಧ್ಯರಾತ್ರಿ ಹಾಗೂ ಬುಧವಾರ ಮುಂಜಾನೆ ವಿಶೇಷ ಪ್ರಾರ್ಥನೆಗಳಲ್ಲಿ ಕ್ರೈಸ್ತ ಧರ್ಮೀಯರು ಪಾಲ್ಗೊಂಡಿದ್ದರು. 
    ಚರ್ಚ್‌ಗಳಲ್ಲಿ ಕೇಕ್, ಚಾಕೋಲೇಟ್, ಸಿಹಿತಿಂಡಿಗಳನ್ನು ಹಂಚಲಾಯಿತು. ಮನೆಗಳಲ್ಲಿ ವಿಶೇಷ ಖಾದ್ಯಗಳನ್ನು ತಯಾರಿಸಿ, ಹಬ್ಬಕ್ಕಾಗಿ ವಿಶೇಷ ಭೋಜನ ವ್ಯವಸ್ಥೆ ಕೈಗೊಂಡಿರುವುದು ಕಂಡು ಬಂದಿತು. ಕ್ರಿಸ್ತನ ಜನನದ ಶುಭ ಗಳಿಗೆಯ ಸ್ಮರಣೆಗೆ ಸಂಕೇತವಾಗಿ ಮೇಣದ ಬತ್ತಿಗಳನ್ನು ಬೆಳಗಿಸಲಾಯಿತು. ಪುಟ್ಟ ಮಕ್ಕಳು ಸಾಂತಾ ಕ್ಲಾಸ್ ವೇಷ ಧರಿಸಿ ಗಮನ ಸೆಳೆದರು. 
    ಶಾಂತಿ, ದೀನತೆಗಾಗಿ ಪ್ರಾರ್ಥನೆ ಸಲ್ಲಿದ ಭಕ್ತರು :  
    ಕ್ರಿಸ್‌ಮಸ್ ಬಾಹ್ಯ ಆಡಂಬರವಾಗಿರದೆ ಪರರ ಕಷ್ಟಕ್ಕೆ ಸಹಾಯ, ಸೇವೆ ಸಲ್ಲಿಸುವ ಹಬ್ಬವಾಗಿದೆ ಎಂದು ಕಾರೇಹಳ್ಳಿ ಸಂತ ಅಂತೋಣಿ ದೇವಾಲಯದ ಧರ್ಮಕೇಂದ್ರದ ಗುರುಗಳಾದ ಫಾದರ್ ಸಂತೋಷ್ ಅಲ್ಮೇಡ ತಿಳಿಸಿದರು. 
    ಪ್ರತಿಯೊಬ್ಬರ ಮನಸ್ಸು, ಹೃದಯದಲ್ಲಿ ಯೇಸು ಜನಿಸಬೇಕು. ಇರುವವರು ಇಲ್ಲದವರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಬೇಕು ಎಂದು ಮನವಿ ಮಾಡಿದರು. 
    ದೇಶಗಳ ನಡುವೆ ನಡೆಯುತ್ತಿರುವ ಯುದ್ಧಗಳು, ದೇಶದ ಭ್ರಷ್ಟಾಚಾರದ ರಾಜಕಾರಣ ದೂರವಾಗಿ ಎಲ್ಲರ ನಡುವೆ ಐಕ್ಯತೆ, ಸಮಾನತೆ ಮೂಡಲಿ, ವಿಶ್ವದಲ್ಲಿ ಶಾಂತಿ ನೆಲೆಸಲಿ. ಯುವಜನರು ಆಧುನಿಕ ಜೀವನದ ಭರಾಟೆಯಲ್ಲಿ ದಾರಿ ತಪ್ಪದೆ ಉತ್ತಮ ಜೀವನ ನಡೆಸಲು ಬೇಕಾದ ಸ್ಥೈರ್ಯ, ಮನೋಬಲವನ್ನು ದೇವರು ನೀಡಲಿ ಎಂದು ಪ್ರಾರ್ಥಿಸಲಾಯಿತು.