ಬುಧವಾರ, ಆಗಸ್ಟ್ 6, 2025

ಸಂದೀಪ್‌ಗೆ ಪಿಎಚ್‌ಡಿ ಪದವಿ


ಆರ್. ಸಂದೀಪ್
ಭದ್ರಾವತಿ: `ಪಂಚಮಸಾಲಿ ಸಮುದಾಯ : ಒಂದು ಸಮಾಜಶಾಸ್ತ್ರ ಅಧ್ಯಯನ' ಎಂಬ ವಿಷಯದ ಮೇಲೆ ನಡೆಸಿದ ಸಂಶೋಧನೆಗೆ ಆರ್. ಸಂದೀಪ್‌ರವರಿಗೆ ಕುವೆಂಪು ವಿಶ್ವವಿದ್ಯಾಲಯದ ಪಿಎಚ್‌ಡಿ ಪದವಿ ಲಭಿಸಿದೆ. 
ಶಿವಮೊಗ್ಗ ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಎಂ. ಪೂರ್ವಾಚಾರ್‌ರವರ ಮಾರ್ಗದರ್ಶನದಲ್ಲಿ ಸಂಶೋಧನಾ ವರದಿ ಮಂಡಿಸಿದ್ದರು.  ಸಂದೀಪ್ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಚಿಕ್ಕಬನ್ನಿಹಟ್ಟಿ ಗ್ರಾಮದ ಪ್ರಗತಿಪರ ರೈತ ಕೆ.ಜಿ ರೇವಣಸಿದ್ದಪ್ಪ-ನಾಗರತ್ನಮ್ಮ ದಂಪತಿ ಪುತ್ರರಾಗಿದ್ದಾರೆ.  ಇವರ ಸಾಧನೆಯನ್ನು ಸ್ನಾತಕೋತ್ತರ ಸಮಾಜಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷರು, ಪ್ರಾಧ್ಯಾಪಕರು ಹಾಗೂ ಸಿಬ್ಬಂದಿವರ್ಗ ಅಭಿನಂದಿಸಿದ್ದಾರೆ. 
 

ಅಗ್ನಿವೀರ್ ಯುವಕರಿಗೆ ಉಚಿತ ತರಬೇತಿ

ಅಗ್ನಿವೀರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ತಾಲೂಕಿನ ನಗರ ಹಾಗು ಗ್ರಾಮೀಣ ಪ್ರದೇಶದ ಯುವಕರಿಗೆ ಭಾರತೀಯ ಸೈನ್ಯಕ್ಕೆ ಸೇರ್ಪಡೆಗೊಳ್ಳಲು ಭದ್ರಾವತಿ ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಉಚಿತ ತರಬೇತಿ ನೀಡಲಾಗುತ್ತಿದೆ.
    ಭದ್ರಾವತಿ : ಅಗ್ನಿವೀರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ತಾಲೂಕಿನ ನಗರ ಹಾಗು ಗ್ರಾಮೀಣ ಪ್ರದೇಶದ ಯುವಕರಿಗೆ ಭಾರತೀಯ ಸೈನ್ಯಕ್ಕೆ ಸೇರ್ಪಡೆಗೊಳ್ಳಲು ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಉಚಿತ ತರಬೇತಿ ನೀಡಲಾಗುತ್ತಿದೆ. 
    ನಗರದ ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಆ.೪ರಿಂದ ತರಬೇತಿ ನೀಡಲಾಗುತ್ತಿದ್ದು, ಸಂಘದ ಅಧ್ಯಕ್ಷ ಸುಬೇದಾರ್ ಗುಲ್ಗುಲೆ, ಕಾರ್ಯದರ್ಶಿ ವೆಂಕಟಗಿರಿ, ಉಪಾಧ್ಯಕ್ಷ ಮಹೇಶ್, ತರಬೇತಿ ಶಿಬಿರದ ಶಿಕ್ಷಕರಾದ ಕಮಾಂಡೋ ಗಿರಿ, ಸುರೇಶ್, ಪ್ರಸಾದ್ ಮತ್ತು ರಮೇಶ್ ಸೇರಿದಂತೆ ಇನ್ನಿತರರ ಸಮ್ಮುಖದಲ್ಲಿ ಶಿಬಿರಕ್ಕೆ ಚಾಲನೆ ನೀಡಲಾಗಿದೆ. 


    ಪ್ರಸ್ತುತ ಶಿಬಿರದಲ್ಲಿ ೮ ರಿಂದ ೧೦ ಯುವಕರು ಪಾಲ್ಗೊಂಡಿದ್ದು, ಆಸಕ್ತರು ತರಬೇತಿ ಪಡೆಯಲು ಹಾಗು ಹೆಚ್ಚಿನ ಮಾಹಿತಿಗಾಗಿ ಸುಬೇದಾರ್ ಗುಲ್ಗುಲೆ, ಮೊ: ೯೪೪೯೪೨೩೨೬೭, ವೆಂಕಟಗಿರಿ, ಮೊ: ೯೯೦೦೧೮೮೫೩೪, ಪಿ.ಕೆ ಹರೀಶ್, ಮೊ: ೯೬೧೧೭೬೩೬೦೩ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ. 

ನಿವೃತ್ತ ಕಾರ್ಮಿಕರ ವಸತಿಗೃಹ ಬಾಡಿಗೆ ದರ ಕಡಿತಕ್ಕೆ ಪೂರಕ ಸ್ಪಂದನೆ

ದೆಹಲಿಗೆ ತೆರಳಿದ ನಿಯೋಗಕ್ಕೆ ಸಂಸದರ ನೇತೃತ್ವ

ಭದ್ರಾವತಿ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ನಿಯೋಗವನ್ನು ಸಂಸದ ಬಿ.ವೈ ರಾಘವೇಂದ್ರರವರು ದೆಹಲಿಗೆ ಬರಮಾಡಿಕೊಂಡು ಖುದ್ದಾಗಿ ಕೇಂದ್ರ ಬೃಹತ್ ಕೈಗಾರಿಕೆ ಹಾಗು ಉಕ್ಕು ಖಾತೆ ಸಚಿವರ ಆಪ್ತ ಕಾರ್ಯದರ್ಶಿ, ಐಎಎಸ್ ಅಧಿಕಾರಿ ತೆಕಾತ್ ಸಿಂಗ್‌ರವರನ್ನು ಭೇಟಿಮಾಡಿಸಿ ವಸತಿಗೃಹಗಳ ಬಾಡಿಗೆ ಕಡಿತಗೊಳಿಸುವ ಸಂಬಂಧ ಚರ್ಚಿಸಿದ್ದಾರೆ. 
    ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಿವೃತ್ತ ಕಾರ್ಮಿಕರ ವಸತಿಗೃಹಗಳ ಬಾಡಿಗೆ ದರ ಕಡಿಮೆಗೊಳಿಸುವುದು ಹಾಗು ಕಾರ್ಮಿಕರು ನಿವೃತ್ತಿ ಹೊಂದಿದ ೧ ವರ್ಷದ ನಂತರ ವಸತಿ ಗೃಹಗಳ ಬಾಡಿಗೆ ದರದಲ್ಲಿ ವ್ಯತ್ಯಸ ಮಾಡುವ(ರೆಟೆನ್ಷನ್ ಸ್ಕೀಮ್) ಪ್ರಕ್ರಿಯೆ ಕೈಬಿಟ್ಟು ಬಾಡಿಗೆ ದರದಲ್ಲಿ ಸ್ಥಿರತೆ ಕಾಯ್ದುಕೊಳ್ಳುವಂತೆ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದಿಂದ ಸಲ್ಲಿಸಲಾಗಿದ್ದ ಮನವಿಗೆ ಕೇಂದ್ರ ಬೃಹತ್ ಕೈಗಾರಿಕೆ ಹಾಗು ಉಕ್ಕು ಖಾತೆ ಸಚಿವಾಲಯದಿಂದ ಪೂರಕ ಸ್ಪಂದನೆ ವ್ಯಕ್ತವಾಗಿದೆ.
    ನಿವೃತ್ತ ಕಾರ್ಮಿಕರ ವಸತಿಗೃಹಗಳಿಗೆ ಪ್ರತಿ ೧೧ ತಿಂಗಳಿಗೆ ಸ್ವಯಂಚಾಲಿತವಾಗಿ ಬಾಡಿಗೆದರ ಏರಿಕೆಯಾಗುತ್ತಿದ್ದು, ಅದರಲ್ಲೂ ಹೆಚ್ಚಿನ ಬಾಡಿಗೆ ದರ ವಿಧಿಸಲಾಗುತ್ತಿದೆ. ಇದನ್ನು ಕಡಿಮೆಗೊಳಿಸುವುದು. ಪ್ರಸ್ತುತ ೧೧ ತಿಂಗಳ ಬಾಡಿಗೆ ಪರಿಷ್ಕರಣೆಯನ್ನು ಪ್ರತಿ ೫ ವರ್ಷಗಳಿಗೆ ನಿಗದಿಪಡಿಸುವಂತೆ ಮತ್ತು  ಕಾರ್ಮಿಕರು ನಿವೃತ್ತಿ ಹೊಂದಿದ ೧ ವರ್ಷದ ನಂತರ ವಸತಿ ಗೃಹಗಳ ಬಾಡಿಗೆ ದರದಲ್ಲಿ ವ್ಯತ್ಯಸ ಮಾಡುವ(ರೆಟೆನ್ಷನ್ ಸ್ಕೀಮ್) ಪ್ರಕ್ರಿಯೆ ಕೈಬಿಡುವಂತೆ ಕೋರಿ ಈ ಹಿಂದೆ ಸಂಸದ ಬಿ.ವೈ ರಾಘವೇಂದ್ರ ಅವರಿಗೆ ಮನವಿ ಸಲ್ಲಿಸಲಾಗಿತ್ತು. 
    ಮನವಿಗೆ ಸ್ಪಂದಿಸಿದ್ದ ಸಂಸದರು ಕೇಂದ್ರ ಬೃಹತ್ ಕೈಗಾರಿಕೆ ಹಾಗು ಉಕ್ಕು ಖಾತೆ ಸಚಿವರ ಆಪ್ತ ಕಾರ್ಯದರ್ಶಿ, ಐಎಎಸ್ ಅಧಿಕಾರಿ ತೆಕಾತ್ ಸಿಂಗ್‌ರವರಿಗೆ ಪತ್ರ ಬರೆದು ಕೋರಿದ್ದರು. ಈ ನಡುವೆ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ನಿಯೋಗವನ್ನು ಸಂಸದರು ದೆಹಲಿಗೆ ಬರಮಾಡಿಕೊಂಡು ಖುದ್ದಾಗಿ ತೆಕಾತ್ ಸಿಂಗ್ ಅವರನ್ನು ಭೇಟಿಮಾಡಿಸಿ ಚರ್ಚಿಸಿದ್ದಾರೆ. ಇದಕ್ಕೆ ಪೂರಕವಾಗಿ ಸ್ಪಂದನೆ ವ್ಯಕ್ತವಾಗಿದ್ದು, ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಲಾಗಿದೆ.  
    ಈ ಕುರಿತು ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಅಧ್ಯಕ್ಷ ಬಿ.ಜಿ ರಾಮಲಿಂಗಯ್ಯ ಪತ್ರಿಕೆಗೆ ಮಾಹಿತಿ ನೀಡಿ, ಕೇಂದ್ರ ಬೃಹತ್ ಕೈಗಾರಿಕೆ ಹಾಗು ಉಕ್ಕು ಖಾತೆ ಸಚಿವ ಎಚ್.ಡಿ ಕುಮಾರಸ್ವಾಮಿ ಹಾಗು ಸಂಸದ ಬಿ.ವೈ ರಾಘವೇಂದ್ರರವರಿಗೆ ನಿವೃತ್ತ ಕಾರ್ಮಿಕರು ಕೃತಜ್ಞತೆ ಸಲ್ಲಿಸಿದ್ದಾರೆ. ನಿವೃತ್ತ ಕಾರ್ಮಿಕರ ಮತ್ತಷ್ಟು ಬೇಡಿಕೆಗಳಿದ್ದು, ಮುಂದಿನ ದಿನಗಳಲ್ಲಿ ಬಗೆಹರಿಯುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ. 
    ನಿಯೋಗದಲ್ಲಿ ಕಲ್ಯಾಣ ಕೇಂದ್ರದ ಅಧ್ಯಕ್ಷ ಬಿ.ಜಿ ರಾಮಲಿಂಗಯ್ಯ, ಉಪಾಧ್ಯಕ್ಷ ಅಡವೀಶಯ್ಯ, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಉಪಸ್ಥಿತರಿದ್ದರು. 

ಮಂಗಳವಾರ, ಆಗಸ್ಟ್ 5, 2025

ಮುಷ್ಕರದ ನಡುವೆಯೂ ಕೆಲವು ಬಸ್‌ಗಳ ಸಂಚಾರ : ಕೆಲವು ನೌಕರರು ಕರ್ತವ್ಯಕ್ಕೆ ಹಾಜರು

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮುಷ್ಕರದ ನಡುವೆಯೂ ಭದ್ರಾವತಿಯಲ್ಲಿ  ಮಂಗಳವಾರ ಬಸ್‌ಗಳ ಸಂಚಾರ ಕಂಡು ಬಂದಿತು. ಈ ನಡುವೆ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಹೆಚ್ಚಾಗಿ ಕಂಡು ಬಂದರು. 
    ಭದ್ರಾವತಿ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮುಷ್ಕರದ ನಡುವೆಯೂ ನಗರದಲ್ಲಿ ಮಂಗಳವಾರ ಬಸ್‌ಗಳ ಸಂಚಾರ ಕಂಡು ಬಂದಿತು. ಈ ನಡುವೆ ಕೆಲವು ನೌಕರರು ಕರ್ತವ್ಯ ಹಾಜರಾಗಿದ್ದು, ಉಳಿದಂತೆ ಬಹುತೇಕ ನೌಕರರು ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. 
    ಶಿವಮೊಗ್ಗ-ಭದ್ರಾವತಿ ನಡುವಿನ ಬಸ್ ಸಂಚಾರ ಎಂದಿನಂತೆ ಕಂಡು ಬಂದಿತು. ಆದರೆ ವೇಗದೂತ ಬಸ್‌ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಸೋಮವಾರ ದೂರದ ಊರುಗಳಿಂದ ಪ್ರಯಾಣ ಬೆಳೆಸಿದ್ದ ಪ್ರಯಾಣಿಕರು ಮಾತ್ರ ನಿಲ್ದಾಣಗಳಲ್ಲಿ ಕಂಡು ಬಂದರು. 
    ನಗರದ ಸಾರಿಗೆ ಘಟಕದಲ್ಲಿ ಸುಮಾರು ೫೦ ರಿಂದ ೬೦ ಬಸ್‌ಗಳಿದ್ದು, ಪ್ರತಿದಿನ ಸುಮಾರು ೪೦-೪೫ ಬಸ್‌ಗಳು ಸೂಚಿತ ಮಾರ್ಗಗಳಲ್ಲಿ ಸಂಚರಿಸುತ್ತವೆ. ಮುಷ್ಕರದಿಂದಾಗಿ ಕೆಲವೇ ಕೆಲವು ಬಸ್‌ಗಳು ಸಂಚಾರ ಆರಂಭಿಸಿವೆ. ಉಳಿದಂತೆ ಖಾಸಗಿ ಬಸ್‌ಗಳ ಸಂಚಾರ ಎಂದಿನಂತೆ ಕಂಡು ಬಂದಿತು. ಬುಧವಾರ ಮುಷ್ಕರದಿಂದ ಪ್ರಯಾಣಿಕರ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಕಂಡು ಬರುತ್ತಿದೆ.

ಬಿಜೆಪಿ ನಗರ, ಗ್ರಾಮಾಂತರ ಮಂಡಲಗಳಿಗೆ ನೂತನ ಪದಾಧಿಕಾರಿಗಳ ನೇಮಕ

ಭದ್ರಾವತಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್
    ಭದ್ರಾವತಿ: ವಿಧಾನಸಭಾ ಕ್ಷೇತ್ರದ ಬಿಜೆಪಿ ನಗರ ಮತ್ತು ಗ್ರಾಮಾಂತರ ಮಂಡಲಗಳಿಗೆ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ.  
       ನಗರ ಮಂಡಲ ಅಧ್ಯಕ್ಷರಾಗಿ ೪ನೇ ಬಾರಿಗೆ ಜಿ. ಧರ್ಮಪ್ರಸಾದ್ ಮುಂದುವರೆದಿದ್ದಾರೆ. ಉಳಿದಂತೆ ಉಪಾಧ್ಯಕ್ಷರಾಗಿ ಸುಲೋಚನ ಪ್ರಕಾಶ್, ಎಚ್.ಎಸ್ ಸುಬ್ರಮಣ್ಯ, ರವಿಚಂದ್ರನ್, ಶ್ರೀನಾಥ್ ಆಚಾರಿ, ಕೃಷ್ಣಮೂರ್ತಿ(ಕಿಟ್ಟಿ) ಮತ್ತು ಯೋಗೇಶ್ ಗುಜ್ಜಾರ್, ಪ್ರಧಾನ ಕಾರ್ಯದರ್ಶಿಗಳಾಗಿ ಎಸ್. ಚನ್ನೇಶ್ ೩ನೇ ಬಾರಿಗೆ ಮುಂದುವರೆದಿದ್ದು, ಹೊಸದಾಗಿ ರಘುರಾವ್ ಸೇರ್ಪಡೆಗೊಂಡಿದ್ದಾರೆ. 
    ಕಾರ್ಯದರ್ಶಿಗಳಾಗಿ ಸಾಗರ್, ಆರ್.ಪಿ ವೆಂಕಟೇಶ್, ಕವಿತಾ ರಾವ್, ಲತಾ ಪ್ರಭಾಕರ್, ಆಶಾ ಪುಟ್ಟಸ್ವಾಮಿ ಮತ್ತು ಧನುಷ್ ಬೋಸ್ಲೆ ಹಾಗು ಖಜಾಂಚಿಯಾಗಿ ಸಂಪತ್ ರಾಜ್ ಬಾಂಟಿಯ ೯ನೇ ಬಾರಿಗೆ ನೇಮಕಗೊಂಡಿದ್ದು, ಮಾಧ್ಯಮ್ ಪ್ರಮುಖರಾಗಿ ಕಾ.ರಾ ನಾಗರಾಜ್, ಸಾಮಾಜಿಕ ಜಾಲ ತಾಣಕ್ಕೆ ಪ್ರೇಮ ಮಂಜುನಾಥ್ ನೇಮಿಸಲಾಗಿದೆ. 


ಭದ್ರಾವತಿ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಕೆ.ಎಚ್ ತೀರ್ಥಯ್ಯ. 
    ಗ್ರಾಮಾಂತರ ಮಂಡಲ ಅಧ್ಯಕ್ಷರಾಗಿ ಮೊದಲ ಬಾರಿಗೆ ಕೆ.ಎಚ್ ತೀರ್ಥಯ್ಯ ನೇಮಕಗೊಂಡಿದ್ದು, ಉಪಾಧ್ಯಕ್ಷರಾಗಿ ಶಿವಾನಂದ ಮೂರ್ತಿ, ಕೆ.ಟಿ ಪ್ರಸನ್ನ, ಪಿ. ರಂಗಸ್ವಾಮಿ, ಗಣಪತಿಭಟ್ಟರು, ಗೌರಮ್ಮ ಮತ್ತು ಕೆ.ಎಚ್ ರವಿಕುಮಾರ್, ಪ್ರಧಾನ ಕಾರ್ಯದರ್ಶಿಗಳಾಗಿ ಬಿ. ಅಣ್ಣಪ್ಪ ಮತ್ತು ಹನುಂತನಾಯ್ಕ ಎರಡನೇ ಬಾರಿಗೆ ಮುಂದುವರೆದಿದ್ದಾರೆ. ಕಾರ್ಯದರ್ಶಿಗಳಾಗಿ ಎಂ.ಬಿ ವಿಶ್ವನಾಥ್, ಲೋಲಾಕ್ಷಿ ರಾಜಗುರು, ಎನ್. ದಿವ್ಯಾದರ್ಶ, ಟಿ.ಜೆ ರಾಕೇಶ್, ಆರ್. ದೀಪಕ್ ಮತ್ತು ಜೆ.ಬಿ ರುದ್ರೇಶ್, ಖಜಾಂಚಿಯಾಗಿ ಸಚಿನ್ ಛಾಯಾಪತಿ ನೇಮಕವಾಗಿದ್ದಾರೆ.

ಪ್ರತಿ ತಿಂಗಳು ೫ರೊಳಗೆ ಪಡಿತರ ಹಂಚಿಕೆ ನೀಡಿ, ಕಮಿಷನ್ ಹಣ ಪಾವತಿಸಿ : ಟಿ. ಕೃಷ್ಣಪ್ಪ

ಭದ್ರಾವತಿಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ. ಕೃಷ್ಣಪ್ಪ ಮಾತನಾಡಿದರು. 
    ಭದ್ರಾವತಿ:  ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳಿಗೆ ೫ನೇ ದಿನಾಂಕದೊಳಗೆ ಪಡಿತರ ಹಂಚಿಕೆ ನೀಡಬೇಕು. ಪಡಿತರ ವಿತರಕರಿಗೆ ಕಮಿಷನ್ ಹಣ ಪ್ರತಿ ತಿಂಗಳು ನೀಡಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ. ಕೃಷ್ಣಪ್ಪ ಮನವಿ ಮಾಡಿದರು. 
    ಅವರು ಈ ಕುರಿತು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಸ್ತುತ ಆಹಾರ ಭದ್ರತೆ ಯೋಜನೆಯಡಿ ಪಡಿತರದಾರರಿಗೆ ಕೇಂದ್ರ ಸರ್ಕಾರದ ೫ ಕೆ.ಜಿ ಹಾಗೂ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ೫ ಕೆ.ಜಿ ಅಕ್ಕಿ ನೀಡಲಾಗುತ್ತಿದೆ. ಪಡಿತರ ದಾಸ್ತಾನು ವಿವಿಧ ಕಾರಣಗಳಿಂದ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ೧೫ನೇ ದಿನಾಂಕದಿಂದ ಎತ್ತುವಳಿ ನೀಡಲಾಗುತ್ತಿದೆ. ಇದರಿಂದಾಗಿ ಪಡಿತರದಾರರಿಗೆ ಪ್ರತಿ ತಿಂಗಳು ೨೦ನೇ ದಿನಾಂಕದ ನಂತರ ಪಡಿತರ ವಿತರಣೆ ಮಾಡಲಾಗುತ್ತಿರುತ್ತದೆ. ಇದರಿಂದಾಗಿ ಎತ್ತುವಳಿಗೂ ಸಹ ವಿಳಂಬವಾಗಿ ಪಡಿತರದಾರರು ನ್ಯಾಯಬೆಲೆ ಅಂಗಡಿ ಮುಂದೆ ಸರತಿ ಸಾಲಿನಲ್ಲಿ ನಿಲ್ಲುತ್ತಿರುತ್ತಾರೆ. ಈ ಹಿನ್ನಲೆಯಲ್ಲಿ ನ್ಯಾಯಬೆಲೆ ಅಂಗಡಿಗಳಿಗೆ ಈ ಹಿಂದಿನ ಪದ್ಧತಿಯಂತೆ ೫ನೇ ದಿನಾಂಕದೊಳಗೆ ಪಡಿತರ ಹಂಚಿಕಿ ನೀಡಬೇಕೆಂದು ಕೋರಿದರು.  ಮಾಲೀಕರಿಗೆ ಬರಬೇಕಾದ ಕಮೀಷನ್ ಹಣ ಆಯಾ ಆಯಾ ತಿಂಗಳಲ್ಲೇ ಪಾವತಿಗೆ ಕ್ರಮವಹಿಸಬೇಕು. ಸುಮಾರು ೭ ವರ್ಷಗಳಿಂದ ಇ.ಕೆ.ವೈ.ಸಿ ಮಾಡಿರುವ ಹಣ ಸಹ ಬಂದಿರುವುದಿಲ್ಲ. ಈ ಕೂಡಲೇ ಇ.ಕೆ.ವೈ.ಸಿ. ಹಣವನ್ನು ಬಿಡುಗಡೆ ಮಾಡಿಕೊಡಬೇಕೆಂದು ಆಗ್ರಹಿಸಿದರು. 
    ಪ್ರಸ್ತುತ ನ್ಯಾಯಬೆಲೆ ಅಂಗಡಿಗಳಿಗೆ ಬಿಲ್ಲಿಂಗ್ ಮಾಡಿದ ೨೪ ಗಂಟೆಗಳ ನಂತರ ಬಿಲ್ ಆಪ್ ಡೇಟ್ ಆಗುತ್ತಿರುತ್ತದೆ. ಆದುದರಿಂದ ಕೂಡಲೇ ಈ ತಾಂತ್ರಿಕ ಸಮಸ್ಯೆಗಳು ಬಗೆಹರಿಸಿ ಬಿಲ್ ಹಾಕಿದ ಕೂಡಲೇ ವಿತರಣೆ ಅವಕಾಶ ಮಾಡಿಕೊಡಬೇಕು. ಮಾರ್ಚ್‌ನಿಂದ ಜುಲೈವರೆಗೆ ಕೆಲವು ಜಿಲ್ಲೆಗಳಲ್ಲಿ ಅನ್ನಭಾಗ್ಯದ ೫ ಕೆ.ಜಿ. ಕಮೀಷನ್ ಹಣ ಬಿಡುಗಡೆಯಾಗಿದೆ. ಎನ್.ಎಫ್.ಎಸ್.ಐ. ಕಮೀಷನ್ ಹಣ ಏಪ್ರಿಲ್ ತಿಂಗಳು ಒಂದು ತಿಂಗಳು ಮಾತ್ರ ಬಿಡುಗಡೆಯಾಗಿದ್ದು, ಮೇ-ಜೂನ್-ಜುಲೈ ಕಮಿಷನ್ ಹಣ ಬಿಡುಗಡೆಯಾಗಿರುವುದಿಲ್ಲ. ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.  
    ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಚನ್ನಕೇಶವೇಗೌಡ, ರಾಜ್ಯ ಕಾರ್ಯಾಧ್ಯಕ್ಷ ಡಿ.ತಾಯಣ್ಣ, ರಾಜ್ಯ ಸಂಘಟನಾ ಕಾರ್ಯದರ್ಶಿ ಸಿದ್ದಲಿಂಗಯ್ಯ, ತಾಲೂಕು ನಗರ ಘಟಕದ ಅಧ್ಯಕ್ಷ ಆರ್. ನಾಗೇಶ್, ರಾಜೇಂದ್ರ, ಮಣಿ, ಸಚ್ಚಿದಾನಂದ, ಲಕ್ಷ್ಮೀಕಾಂತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಕಡದಕಟ್ಟೆಯಲ್ಲಿ ಬಸ್ ತಂಗುದಾಣ ನಿರ್ಮಾಣಕ್ಕೆ ಮನವಿ

ಭದ್ರಾವತಿ ನಗರಸಭೆ ವಾರ್ಡ್ ನಂ.೧ರ ವ್ಯಾಪ್ತಿಯ ಬಿ.ಎಚ್ ರಸ್ತೆ, ಕಡದಕಟ್ಟೆಯಲ್ಲಿ ಬಸ್ ತಂಗುದಾಣ ನಿರ್ಮಿಸಬೇಕೆಂದು ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಎಸ್. ಗೌಡ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.  
ಭದ್ರಾವತಿ : ನಗರಸಭೆ ವಾರ್ಡ್ ನಂ.೧ರ ವ್ಯಾಪ್ತಿಯ ಬಿ.ಎಚ್ ರಸ್ತೆ, ಕಡದಕಟ್ಟೆಯಲ್ಲಿ ಬಸ್ ತಂಗುದಾಣ ನಿರ್ಮಿಸಬೇಕೆಂದು ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಎಸ್. ಗೌಡ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ. 
  ರೈಲ್ವೆ ಮೇಲ್ಸೇತುವೆ ನಿರ್ಮಿಸಲು ಈ ಹಿಂದೆ ಬಸ್ ತಂಗುದಾಣ ನೆಲಸಮಗೊಳಿಸಿದ್ದು, ಕೆಲವು ತಿಂಗಳ ಹಿಂದೆ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರ ಬಳಕೆಗೆ ಸಮರ್ಪಿಸಲಾಗಿದೆ. ಸೇತುವೆ ಮೇಲೆ ವಾಹನಗಳು ಸಂಚರಿಸುತ್ತಿವೆ. ಆದರೆ ಈ ಭಾಗದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ವಿದ್ಯಾರ್ಥಿಗಳಿಗೆ ಮತ್ತು ಸ್ಥಳೀಯರಿಗೆ ಬಸ್ ತಂಗುದಾಣವಿಲ್ಲದೆ ಪರದಾಡುವಂತಾಗಿದೆ. ಈ ಹಿನ್ನಲೆಯಲ್ಲಿ ತಾಲೂಕು ಆಡಳಿತ ಬಸ್ ತಂಗುದಾಣ ನಿರ್ಮಿಸಿ ಅನುಕೂಲ ಕಲ್ಪಿಸಿಕೊಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. 
    ವೈ. ಶಶಿಕುಮಾರ್, ಜಿಟ್ಟೋಜಿ, ಹನುಮಂತಪ್ಪ ಮತ್ತು ಶ್ರೀನಿವಾಸ್ ಉಪಸ್ಥಿತರಿದ್ದರು. ಗ್ರೇಡ್-೨ ತಹಸೀಲ್ದಾರ್ ಮಂಜಾನಾಯ್ಕರವರು ಮನವಿ ಸ್ವೀಕರಿಸಿದರು.