ಮಂಗಳವಾರ, ಆಗಸ್ಟ್ 26, 2025

ನಿವೃತ್ತ ಇಂಜಿನಿಯರ್ ಜೆ. ಚಂದ್ರಶೇಖರಪ್ಪ ನಿಧನ

ಜೆ. ಚಂದ್ರಶೇಖರಪ್ಪ 
    ಭದ್ರಾವತಿ : ನಗರದ ಸೈಲ್-ವಿಐಎಸ್‌ಎಲ್ ಕಾರ್ಖಾನೆಯ ನಿವೃತ್ತ ಇಂಜಿನಿಯರ್ ಜೆ. ಚಂದ್ರಶೇಖರಪ್ಪ(೮೨) ವಯೋಸಹಜವಾಗಿ ನಿಧನ ಹೊಂದಿದರು.   
    ಪತ್ನಿ, ಪುತ್ರ ಹಾಗು ಪುತ್ರಿ ಇದ್ದಾರೆ. ಕಾರ್ಖಾನೆಯ ಮೆಟಲರ್ಜಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ನಿವೃತ್ತಿ ಹೊಂದಿದ ನಂತರ ನಗರದ ಚನ್ನಗಿರಿ ರಸ್ತೆಯ ರಂಗಪ್ಪ ವೃತ್ತದಲ್ಲಿ ಕಿರಣ್ ಏಜೆನ್ಸಿಸ್ ಹೆಸರಿನಲ್ಲಿ ವ್ಯಾಪಾರ, ವಹಿವಾಟು ನಡೆಸುತ್ತಿದ್ದರು. .ಉಂಬ್ಳೆಬೈಲ್ ಬೈಲ್ ಸಮೀಪದ ಕಣಗಲಸರ ಗ್ರಾಮದಲ್ಲಿರುವ ಇವರ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿತು. ಇವರ ನಿಧನಕ್ಕೆ ನಗರದ ಗಣ್ಯರು ಸಂತಾಪ ಸೂಚಿಸಿದ್ದಾರೆ. 

ಆ.೨೯ರಿಂದ ವೆಳಾಂಗಣಿ ಆರೋಗ್ಯ ಮಾತೆಯ ಪುಣ್ಯಕ್ಷೇತ್ರದಲ್ಲಿ ೪೧ನೇ ವಾರ್ಷಿಕ ಮಹೋತ್ಸವ

ಭದ್ರಾವತಿ ಗಾಂಧಿನಗರದ ವೆಳಾಂಗಣಿ ಆರೋಗ್ಯ ಮಾತೆಯ ಪುಣ್ಯಕ್ಷೇತ್ರದ ಧರ್ಮಗುರು ಪಾದರ್ ಸ್ಟೀವನ್ ಡೇಸಾರವರು ಪತ್ರಿಕಾಗೋಷ್ಠಿಯಲ್ಲಿ ೪೧ನೇ ವಾರ್ಷಿಕ ಮಹೋತ್ಸವ ಕುರಿತು ಮಾಹಿತಿ ನೀಡಿದರು. 
    ಭದ್ರಾವತಿ : ಗಾಂಧಿನಗರದ ವೆಳಾಂಗಣಿ ಆರೋಗ್ಯ ಮಾತೆಯ ಪುಣ್ಯಕ್ಷೇತ್ರದಲ್ಲಿ ಆ.೨೯ ರಿಂದ ಸೆ.೮ರವರೆಗೆ ೪೧ನೇ ವಾರ್ಷಿಕ ಮಹೋತ್ಸವ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಪುಣ್ಯಕ್ಷೇತ್ರದ ಧರ್ಮಗುರು ಪಾದರ್ ಸ್ಟೀವನ್ ಡೇಸಾ ತಿಳಿಸಿದರು. 
    ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈ ಕುರಿತು ಮಾಹಿತಿ ನೀಡಿದರು. ಆ.೨೯ರ ಸಂಜೆ ೫.೩೦ಕ್ಕೆ ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಫ್ರಾನ್ಸಿಸ್ ಎಸ್.ಜೆ ಸೆರಾವೊರವರು ಧ್ವಜಾರೋಹಣ ನೆರವೇರಿಸುವ ಮೂಲಕ ವಾರ್ಷಿಕ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಪ್ರತಿ ವರ್ಷ ವಾರ್ಷಿಕ ಮಹೋತ್ಸವ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು. 
    ಈ ಬಾರಿ ಸಹ ಪ್ರತಿದಿನ ವಿವಿಧ ಧಾರ್ಮಿಕ ಆಚರಣೆಗಳು ನಡೆಯಲಿದ್ದು, ಹಿರಿಯರ ದಿನ, ಧಾರ್ಮಿಕರ ದಿನ, ವ್ಯಾಧಿಷ್ಟರ ದಿನ, ಯುವಜನರ ದಿನ, ವೈದ್ಯ, ದಾದಿಯರ ದಿನ, ಮಕ್ಕಳ ದಿನ, ಶಿಕ್ಷಕರ ದಿನ, ಕುಟುಂಬದ ದಿನ, ಯಾತ್ರಿಕರ ದಿನ ಮತ್ತು ಕೊನೆಯದಾಗಿ ಸರ್ವರ ದಿನ ಹೀಗೆ ಒಂದೊಂದು ದಿನ ಒಂದೊಂದು ಆಚರಣೆಗಳು ನಡೆಯಲಿವೆ. ಪ್ರತಿಯೊಂದು ಆಚರಣೆಯ ಹಿಂದೆ ಒಂದೊಂದು ಮಹತ್ವವಿದೆ. ಒಂದೊಂದು ಧ್ಯೆಯ ವಾಕ್ಯದೊಂದಿಗೆ ವಿಶೇಷವಾಗಿ ಆಚರಿಸಲಾಗುತ್ತಿದೆ ಎಂದರು.
    ಕಬಳೆ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ಧರ್ಮಗುರು ಫಾ. ರೋಮನ್ ಪಿಂಟೋ ಪ್ರಬೋಧಕರಿಂದ ಆ.೩೧ರ ಭಾನುವಾರ ಬೆಳಿಗ್ಗೆ ೮.೩೦ ರಿಂದ ಸಂಜೆ ೭ ಗಂಟೆವರೆಗೆ ಆಧ್ಯಾತ್ಮಿಕ ನವೀಕರಣ ಧ್ಯಾನ ಕೂಟ & ನವೇನ ಮತ್ತು ಬಲಿಪೂಜೆ ನಡೆಯಲಿದೆ. ಸೆ.೭ರ ಭಾನುವಾರ ಸಂಜೆ ೫ ಗಂಟೆಗೆ ಜಪಸರ, ಬಲಿಪೂಜೆ, ಪ್ರಬೋಧನೆ ಮತ್ತು ನವೇನ ಸಂಜೆ ೬.೩೦ಕ್ಕೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಾತೆಯ ಅಲಂಕೃತ ತೇರಿನ ಭಕ್ತಿಯುತ ಮೆರವಣಿಗೆ ನಡೆಯಲಿದೆ. ಸೆ.೮ರ ಸೋಮವಾರ ಮಾತೆಯ ಮಹೋತ್ಸವ ನಡೆಯಲಿದ್ದು, ಬೆಳಿಗ್ಗೆ ೭ಕ್ಕೆ, ೮.೩೦ಕ್ಕೆ ಮತ್ತು ೧೦ ಗಂಟೆಗೆ ಪೂಜೆಗಳು ಮತ್ತು ೧೧ ಗಂಟೆಗೆ ಸಿರೋ ಮಲಬಾರ್ ವಿಧಿಯಲ್ಲಿ ದಿವ್ಯ ಬಲಿಪೂಜೆ, ಮಧ್ಯಾಹ್ನ ೧೨.೩೦ಕ್ಕೆ ಅನ್ನದಾನ, ಸಂಜೆ ೫.೩೦ಕ್ಕೆ ಮಹೋತ್ಸವದ ಸಾಂಭ್ರಮಿಕ ದಿವ್ಯ ಬಲಿಪೂಜೆ ಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಫ್ರಾನ್ಸಿಸ್ ಎಸ್.ಜೆ ಸೆರಾವೊರವರಿಂದ ನೆರವೇರಲಿದೆ ಎಂದರು. 
    ಪತ್ರಿಕಾಗೋಷ್ಠಿಯಲ್ಲಿ ಪುಣ್ಯಕೇತ್ರದ ಪಾಲನ ಕಾರ್ಯದರ್ಶಿ ಅಂತೋಣಿ ವಿಲ್ಸನ್, ಕ್ಯಾಥೋಲಿಕ್ ಅಸೋಯೇಷನ್‌ನ ಅಂತೋಣಿ, ನಿರ್ಮಲ ಆಸ್ಪತ್ರೆ ವ್ಯವಸ್ಥಾಪಕಿ ಸಿಸ್ಟರ್ ವಿಲ್ಮಾ, ಪುಣ್ಯಕೇತ್ರದ ಕಾರ್ಯದರ್ಶಿ ಎಲಿಜಾ ಲಾರೆನ್ಸ್, ಜೆಸ್ಸಿ ಗೋನ್ಸಾಲಿಸ್ ಮತ್ತು ಪೌಲ್ ಡಿಸೋಜಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
 

ಭದ್ರಾ ಜಲಾಶಯದಲ್ಲಿ ಪರಿವೀಕ್ಷಣಾ ಮಂದಿರ ಲೋಕಾರ್ಪಣೆ

ಭದ್ರಾವತಿ ತಾಲೂಕಿನ ಭದ್ರಾ ಜಲಾಶಯದಲ್ಲಿ ನೀರಾವರಿ ಇಲಾಖೆಯಿಂದ ನೂತನವಾಗಿ ಪರಿವೀಕ್ಷಣಾ ಮಂದಿರ ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಲೋಕಾರ್ಪಣೆಗೊಳಿಸಿದರು. 
    ಭದ್ರಾವತಿ: ತಾಲೂಕಿನ ಭದ್ರಾ ಜಲಾಶಯದಲ್ಲಿ ನೀರಾವರಿ ಇಲಾಖೆಯಿಂದ ನೂತನವಾಗಿ ಪರಿವೀಕ್ಷಣಾ ಮಂದಿರ ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಲೋಕಾರ್ಪಣೆಗೊಳಿಸಿದರು. 
    ಪ್ರತಿ ವರ್ಷ ಜಲಾಶಯಕ್ಕೆ ಸಚಿವರು, ಸಂಸದರು, ಶಾಸಕರು ಸೇರಿದಂತೆ ಜನಪ್ರತಿನಿಧಿಗಳು, ರೈತ ಮುಖಂಡರು, ಸರ್ಕಾರದ ಉನ್ನತ ಅಧಿಕಾರಿಗಳು, ಗಣ್ಯರು ಭೇಟಿ ನೀಡಿ ಭದ್ರೆಗೆ ಪೂಜೆ ಸಲ್ಲಿಸುತ್ತಿದ್ದಾರೆ. ಸುಸಜ್ಜಿತವಾದ ಪರಿವೀಕ್ಷಣಾ ಮಂದಿರ ನಿರ್ಮಾಣಗೊಂಡಿರುವುದು ಹೆಚ್ಚು ಅನುಕೂಲವಾಗಿದೆ. 
    ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ದಿವ್ಯಸಾನಿಧ್ಯದಲ್ಲಿ ವಿವಿಧ ದೇವಾಲಯಗಳ ಅರ್ಚಕರಿಂದ ಧಾರ್ಮಿಕ ಆಚರಣೆಗಳು ನೆರವೇರಿದವು. 
    ತಹಸೀಲ್ದಾರ್ ಪರುಸಪ್ಪ ಕುರುಬರ, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಪೊಲೀಸ್ ಉಪಾಧೀಕ್ಷಕ ಕೆ.ಆರ್ ನಾಗರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ನಗರ ಆಶ್ರಯ ಸಮಿತಿ ಅಧ್ಯಕ್ಷ ಗೋಪಾಲ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ಪ್ರಮುಖರಾದ ಎಸ್. ಕುಮಾರ್, ಸಿ.ಎಂ ಖಾದರ್, ಮಣಿಶೇಖರ್, ಎಚ್. ರವಿಕುಮಾರ್, ಬಿ.ಕೆ ಜಗನ್ನಾಥ್, ಸೈಯದ್ ರಿಯಾಜ್, ಬಿ.ಎಸ್ ಗಣೇಶ್, ಬಿ.ಎಂ. ರವಿಕುಮಾರ್, ಬಿ.ಎಂ ಮಂಜುನಾಥ್, ಬಸವೇಶ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಮಹಿಳಾ ಸಂಘಟನೆಗಳ ಪ್ರಮುಖರು, ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಸೋಮವಾರ, ಆಗಸ್ಟ್ 25, 2025

ಪ್ರತಿಯೊಬ್ಬರೂ ಕಲಾವಿದರಿಗೆ ನೆರವಾಗಿ : ಎಸ್. ಮಣಿಶೇಖರ್

ಸಂತೋಷ್ ಸವದತ್ತಿ ಕರ್ನಾಟಕ ಸ್ಟಾರ್ ಸಿಂಗರ್-೨೦೨೫ 

ಶಿವಮೊಗ್ಗ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಶ್ರೀ ಬಸವೇಶ್ವರ ಧರ್ಮಸಂಸ್ಥೆ ಸಹಕಾರದೊಂದಿಗೆ ಸಂಘದ ೫ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಭದ್ರಾವತಿ ಸಿದ್ದಾರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಏರ್ಪಡಿಸಲಾಗಿದ್ದ ಕರ್ನಾಟಕ ಸ್ಟಾರ್ ಸಿಂಗರ್-೨೦೨೫, ಸೀಸನ್-೨ ರಾಜ್ಯಮಟ್ಟದ ಚಲನಚಿತ್ರ ಗೀತೆಗಳ ಗಾಯನ ಸ್ಪರ್ಧೆಯ ಅಂತಿಮ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ ಬೆಳಗಾವಿ ಸವದತ್ತಿ ತಾಲೂಕಿನ ಸಂತೋಷ್ ಸವದತ್ತಿ ಅವರಿಗೆ ನಗದು, ಪ್ರಶಸ್ತಿ ಪತ್ರ ಹಾಗು ಟ್ರೋಫಿ ವಿತರಿಸಲಾಯಿತು. 


ಭದ್ರಾವತಿ: ಕಲಾವಿದರಿಗೂ ಒಂದು ಬದುಕಿದ್ದು, ಸಮಾಜದಲ್ಲಿ ಇನ್ನೂ ಹೆಚ್ಚಿನ ಪ್ರೋತ್ಸಾಹ ಲಭಿಸಿದಾಗ ಅವರು ಇನ್ನೂ ಹೆಚ್ಚಿನ ಸಾಧನೆ ಮಾಡುವ ಮೂಲಕ ಕ್ಷೇತ್ರದ ಕೀರ್ತಿ ಪತಾಕೆಯನ್ನು ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಹಾರಿಸುವರು. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಸಹ ಕಲಾವಿದರಿಗೆ ನೆರವಾಗುವಂತೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಮಣಿಶೇಖರ್ ಹೇಳಿದರು. 
     ಶಿವಮೊಗ್ಗ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಶ್ರೀ ಬಸವೇಶ್ವರ ಧರ್ಮಸಂಸ್ಥೆ ಸಹಕಾರದೊಂದಿಗೆ ಸಂಘದ ೫ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ  ಸಿದ್ದಾರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಏರ್ಪಡಿಸಲಾಗಿದ್ದ ಕರ್ನಾಟಕ ಸ್ಟಾರ್ ಸಿಂಗರ್-೨೦೨೫, ಸೀಸನ್-೨ ರಾಜ್ಯಮಟ್ಟದ ಚಲನಚಿತ್ರ ಗೀತೆಗಳ ಗಾಯನ ಸ್ಪರ್ಧೆಯ ಅಂತಿಮ ಸ್ಪರ್ಧೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 
    ಕಲಾವಿದರು ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಲು ಇಂತಹ  ಕಾರ್ಯಕ್ರಮಗಳು ಸಹಕಾರಿಯಾಗಿವೆ. ಸಂಘದ ವತಿಯಿಂದ ಯುವ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.
         ನಗರಸಭೆ ಉಪಾಧ್ಯಕ್ಷರಾದ ಮಣಿ ಎಎನ್‌ಎಸ್ ರವರು ಕಳೆದ ವರ್ಷ ನೀಡಿದ ಭರವಸೆಯಂತೆ ಸಂಘಕ್ಕೆ ತಮ್ಮ ಸ್ವಂತ ನಿವೇಶನ ಉಚಿತವಾಗಿ ಅವರ ತಾಯಿಯ ನೆನಪಿನಲ್ಲಿ ನೀಡುತ್ತಿದ್ದಾರೆ. ಈ ನಿವೇಶನದಲ್ಲಿ ಮುಂದಿನ ದಿನಗಳಲ್ಲಿ ನಿರ್ಮಾಣಗೊಳ್ಳುವ ಕಟ್ಟಡಕ್ಕೆ ಅವರ ತಾಯಿಯ ಹೆಸರನ್ನು ನಾಮಕರಣಗೊಳಿಸುವಂತೆ ಮನವಿ ಮಾಡಿದರು.
          ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್ ಮಾತನಾಡಿ, ಕ್ಷೇತ್ರದಲ್ಲಿ ಕಲಾವಿದರಿಗೆ ಶಾಸಕರು ಹಾಗೂ ಕುಟುಂಬ ವರ್ಗದವರು ಹೆಚ್ಚಿನ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಂದ ಇನ್ನು ಹೆಚ್ಚಿನ ಪ್ರೋತ್ಸಾಹ ಲಭಿಸುವ ವಿಶ್ವಾಸವಿದೆ. ನಾನು ಸಹ ಎಲ್ಲಾ ರೀತಿಯ ಪ್ರೋತ್ಸಾಹ ನೀಡಲು ಸಿದ್ಧವಿದ್ದೇನೆ. ಕಲಾವಿದರು ತಮ್ಮ ಸಂಘಟನೆಯನ್ನು ಇನ್ನು ಹೆಚ್ಚಿನ ರೀತಿಯಲ್ಲಿ ಬಲಪಡಿಸುವ ಮೂಲಕ ಯುವ ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ಮುಂದುವರಿಸಬೇಕೆಂದು ಕರೆ ನೀಡಿದರು.
ಗಾಯಕರಾದ `ಅಜಯ್ ವಾರಿಯರ್' ಮತ್ತು `ಉಷಾ ಕೋಕಿಲ' ತೀರ್ಪುಗಾರರಾಗಿ ಹಾಗು `ವಿದ್ವಾನ್ ಮಹೇಂದ್ರ ಗೋರೆ'  ಸಹ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಅಂತಿಮ ಸ್ಪರ್ಧೆಯಲ್ಲಿ ಕಿರಣ್, ಮಂಜುನಾಥ್, ಅವಿನಾಶ್, ಸಂತೋಷ್, ಜೀವಿಕಾ, ಸಂಗೀತ, ಏಳುಮಲೈ, ಸುಪ್ರಜಾ ಜಿ. ಕಾಮತ್, ವಿಶಾಲ್, ವಿಶ್ವಾ ಜೆ. ಆಚಾರ್ಯ, ಪ್ರಜ್ಞಾ ದೀಪ್ತಿ, ವರ್ಷಿಣಿ, ರಘುಪತಿ ಮತ್ತು ಮಹೇಂದ್ರ ಶೆಟ್ಟಿ ಸೇರಿದಂತೆ ಒಟ್ಟು ೧೬ ಸ್ಪರ್ಧಿಗಳು ಪೈಪೋಟಿ ನಡೆಸಿದರು. 
ಪ್ರಶಸ್ತಿ ವಿಜೇತರು : 
ಬೆಳಗಾವಿ ಸವದತ್ತಿ ತಾಲೂಕಿನ ಸಂತೋಷ್ ಸವದತ್ತಿ ಮೊದಲ ಬಹುಮಾನ ರು. ೨೫ ಸಾವಿರ ನಗದು, ಅಭಿನಂದನಾ ಪತ್ರ ಮತ್ತು ಟ್ರೋಫಿ, ಶಿವಮೊಗ್ಗ ಸುಪ್ರಜಾ ಜಿ. ಕಾಮತ್ ದ್ವಿತೀಯ ಬಹುಮಾನ ರು. ೧೫ ಸಾವಿರ ನಗದು, ಅಭಿನಂದನಾ ಪತ್ರ ಮತ್ತು ಟ್ರೋಫಿ ಹಾಗು ಭದ್ರಾವತಿ ಸಿ.ಎನ್ ಚಂದನ ತೃತೀಯ ಬಹುಮಾನ ರು. ೧೦ ಸಾವಿರ ನಗದು, ಅಭಿನಂದನಾ ಪತ್ರ ಮತ್ತು ಟ್ರೋಫಿ, ಎನ್.ಪುರ ತಾಲೂಕಿನ ವಿಶ್ರಯಾ ಜೆ. ಆಚಾರ್ ಮತ್ತು ಮಂಗಳೂರಿನ ಮಹೇಂದ್ರ ಶೆಟ್ಟಿ  ಸಮಾಧಾನಕರ ಬಹುಮಾನ ರು. ೨ ಸಾವಿರ ನಗದು ಮತ್ತು ಭಿನಂದನ ಪತ್ರ ಪಡೆದುಕೊಂಡರು. ಉಳಿದಂತೆ ತೀರ್ಥಹಳ್ಳಿ ವರ್ಷಿಣಿ ಬೆಸ್ಟ್ ಎಂಟರ್ ಟೈನರ್ ಪ್ರಶಸ್ತಿಗೆ ಭಾಜನರಾದರು. 
ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕಲಾವಿದರ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಜೀವಮಾನ ಸಾಧನೆಗಾಗಿ ಹಿರಿಯ ಕಲಾವಿದರಾದ ಬಿ. ಲೋಕನಾಥರಿಗೆ ದಿವಂಗತ ಡಾ. ಎಸ್.ಪಿ ಬಾಲಸುಬ್ರಹ್ಮಣ್ಯಂ ರಾಜ್ಯ ಪ್ರಶಸ್ತಿ, ಧನಪಾಲ್ ಸಿಂಗ್ ರಜಪೂತ್‌ರಿಗೆ ದಿವಂಗತ ಜಯಶೀಲನ್ ರಾಜ್ಯ ಪ್ರಶಸ್ತಿ ಮತ್ತು ದೀಪಕ್ ಜಯಶೀಲನ್‌ಗೆ ದಿವಂಗತ ಗೀತಾಂಜಲಿ ಶ್ರೀನಿವಾಸ್ ರಾಜ್ಯಪ್ರಶಸ್ತಿ ಪ್ರದಾನ ಮಾಡಲಾಯಿತು. ಅಲ್ಲದೆ ಹಿರಿಯ ಕಲಾವಿದರನ್ನು ಸನ್ಮಾನಿಸಿ ಗೌರವಿಸಲಾಯಿತು. 
ಸಂಘದ ಅಧ್ಯಕ್ಷ ಬಿ.ಎ ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.  ಶ್ರೀ ಬಸವೇಶ್ವರ ಧರ್ಮಸಂಸ್ಥೆ ಅಧ್ಯಕ್ಷ ಶಿವಕುಮಾರ್, ಯುವ ಕಾಂಗ್ರೆಸ್ ಮುಖಂಡ ಜನ್ನಾಪುರ ಪ್ರಭಾಕರ್, ಬೆಂಗಳೂರಿನ ಮಹಿಳಾ ಕೈಗಾರಿಕೋದ್ಯಮಿ ಪವಿತ್ರ ರಾಮಮೂರ್ತಿ, ನಿವೇಶನ ದಾನಿ ನಗರಸಭೆ ಉಪಾಧ್ಯಕ್ಷ ಮಣಿ ಎಎನ್‌ಎಸ್, ಸದಸ್ಯರಾದ ಚನ್ನಪ್ಪ, ಲತಾ ಚಂದ್ರಶೇಖರ್ ಐ.ವಿ ಸಂತೋಷ್ ಕುಮಾರ್, ಭೋವಿ ಸಮಾಜದ ಅಧ್ಯಕ್ಷ ಶಿವು ಪಾಟೀಲ್, ಗುತ್ತಿಗೆದಾರ ಎಂ.ಜಿ ರಾಮಚಂದ್ರನ್, ತರೀಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಟಿ. ಮಂಜುನಾಥ್, ಲಯನ್ಸ್ ಎಲ್. ದೇವರಾಜ್, ಸಂಘದ ಗೌರವ ಸಲಹೆಗಾರ ಬಿ. ರಾಜಾ ವಿಕ್ರಮ್, ಉಪಾಧ್ಯಕ್ಷ ವೈ.ಕೆ ಹನುಮಂತಯ್ಯ, ಪ್ರಧಾನ ಕಾರ್ಯದರ್ಶಿ ಚರಣ್ ಕವಾಡ್, ಸಹ ಕಾರ್ಯದರ್ಶಿ ಚಿದಾನಂದ, ಖಜಾಂಚಿ ಎ. ಪ್ರಶಾಂತ್, ಸಹ ಕಾರ್ಯದರ್ಶಿ ಬಿ. ಚಿದಾನಂದ್, ಸಂಘಟನಾ ಕಾರ್ಯದರ್ಶಿ ಡಿ.ವಿ ರಾಮು, ಕಾರ್ಯಕಾರಿ ಸಮಿತಿ ಸದಸ್ಯ ವಿಶ್ವನಾಥ್, ಶಂಕರ್ ಬಾಬು, ಮುರುಗೇಶ್, ದೇವರಾಜ್, ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
 
 

ಭಾನುವಾರ, ಆಗಸ್ಟ್ 24, 2025

ಭದ್ರಾವತಿ ಕ್ಷೇತ್ರದ ಅಭಿವೃದ್ಧಿ ಹರಿಕಾರ ಶಾಸಕ ಸಂಗಮೇಶ್ವರ್‌ಗೆ ಸಚಿವ ಸ್ಥಾನ ಲಭಿಸಲಿ : ಬಿಳಿಕಿ ಶ್ರೀ

ಭದ್ರೆಗೆ ಬಾಗಿನ ಅರ್ಪಣೆ, ಪರಿವೀಕ್ಷಣಾ ಮಂದಿರ ಉದ್ಘಾಟನೆ ಕಾರ್ಯಕ್ರಮ 

ಭದ್ರಾವತಿ ಜೀವ ನದಿ ಭದ್ರೆ ಈ ಬಾರಿ ಸಹ ಮೈತುಂಬಿ ಹರಿಯುತ್ತಿದ್ದು, ಭದ್ರಾ ಜಲಾಶಯ ಪೂರ್ಣಗೊಂಡಿದೆ. ಈ ಹಿನ್ನಲೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಪ್ರತಿ ವರ್ಷದಂತೆ ಈ ಬಾರಿ ಸಹ ಭಾನುವಾರ ಸರ್ವಧರ್ಮ ಗುರುಗಳ ಸಮ್ಮುಖದಲ್ಲಿ ಭದ್ರೆಗೆ ಬಾಗಿನ ಸಮರ್ಪಿಸಿದರು. 
    ಭದ್ರಾವತಿ : ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಸದಾ ಕಾಲ ಶ್ರಮಿಸುತ್ತಿದ್ದಾರೆ. ಇವರ ಕೋರಿಕೆಯಂತೆ ರಾಜ್ಯ ಸರ್ಕಾರ ಸಹ ಪೂರಕವಾಗಿ ಸ್ಪಂದಿಸುವ ಮೂಲಕ ಹೆಚ್ಚಿನ ಅನುದಾನ ಸಹ ಬಿಡುಗಡೆಗೊಳಿಸುತ್ತಿದೆ. ಮುಂದಿನ ದಿನಗಳಲ್ಲಿ ಇವರಿಗೂ ಸಚಿವ ಸ್ಥಾನ ಲಭಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. 
    ಅವರು ಭಾನುವಾರ ತಾಲೂಕಿನ ಸಿಂಗನಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭದ್ರಾ ಜಲಾಶಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಜೀವನದಿ ಭದ್ರೆಗೆ ಬಾಗಿನ ಅರ್ಪಣೆ, ಗಂಗಾ ಪೂಜೆ ಹಾಗು ನೂತನವಾಗಿ ನಿರ್ಮಾಣಗೊಂಡಿರುವ ಪರಿವೀಕ್ಷಣಾ ಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು. 
    ಜಾತಿ, ಪಂಥ, ಮತಗಳನ್ನು ಮೀರಿದ ಜಿಲ್ಲೆಯ ಏಕೈಕ ಜನಪ್ರತಿನಿಧಿ ಶಾಸಕ ಬಿ.ಕೆ ಸಂಗಮೇಶ್ವರ್ ಎಂದರೆ ತಪ್ಪಾಗಲಾರದು. ಅವರು ಕ್ಷೇತ್ರದಲ್ಲಿ ಶಾಸಕರಾದಾಗಿನಿಂದಲೂ ನಿರಂತರವಾಗಿ ಭದ್ರೆಗೆ ಬಾಗಿನ ಅರ್ಪಿಸುವ ಪುಣ್ಯದ ಕಾರ್ಯ ನೆರವೇರಿಸಿಕೊಂಡು ಬರುತ್ತಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಅಭಿವೃದ್ಧಿ ಹರಿಕಾರರಾಗಿದ್ದಾರೆ. ಅವರಿಗೆ ಇನ್ನೂ ಹೆಚ್ಚಿನ ಆಯುರಾರೋಗ್ಯ, ಅಧಿಕಾರ, ಸ್ಥಾನಮಾನಗಳು ಲಭಿಸುವಂತಾಗಲಿ. ಅಲ್ಲದೆ ಕ್ಷೇತ್ರದ ಪ್ರತಿಯೊಬ್ಬರ ಸಹಕಾರ ಬಹಳ ಮುಖ್ಯವಾಗಿದ್ದು, ಶಾಸಕರು ಮಾತ್ರವಲ್ಲ ಅವರ ಇಡೀ ಕುಟುಂಬ ಪ್ರಸ್ತುತ ಜನರ ಸೇವೆಯಲ್ಲಿ ತೊಡಗಿದೆ. ಇಂತಹ ಕುಟುಂಬಕ್ಕೆ ಮುಂದಿನ ದಿನಗಳಲ್ಲೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು. 
    ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಮಾತನಾಡಿ, ಭದ್ರೆ ಕೇವಲ ನೀರಲ್ಲ. ಇದೊಂದು ಅಮೃತವಾಗಿದ್ದು, ಇಂದು ಲಕ್ಷಾಂತರ ಜನರು ಅವಲಂಬಿಸಿದ್ದಾರೆ. ಇಂತಹ ಅಮೃತ ಮಾತೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸುತ್ತಿರುವುದು ಶಾಸಕರು ಪುಣ್ಯ ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮಳೆಯಾಗದೆ ಬರಗಾಲ ಬರುತ್ತದೆ. ಜಲಾಶಯಗಳಲ್ಲಿ ನೀರಿಲ್ಲದೆ ಜನರು ಸಂಕಷ್ಟಕ್ಕೆ ಒಳಗಾಗುತ್ತಾರೆಂದು ಕೆಲವರು ದೂರುತ್ತಾರೆ. ಆದರೆ ಇಂದು ರಾಜ್ಯದೆಲ್ಲೆಡೆ ನಿರಂತರವಾಗಿ ಮಳೆಯಾಗುತ್ತಿದೆ ಜಲಾಶಯಗಳು ಭರ್ತಿಯಾಗಿ ಜನರು ನೆಮ್ಮದಿ ಬದುಕು ಕಾಣುವಂತಾಗಿದೆ ಎಂದರು. 
    ನಗರದ ಜಾಮೀಯಾ ಮಸೀದಿ ಮೌಲಾನ ಖಾದೀರಿ ಮಾತನಾಡಿ, ಪ್ರತಿವರ್ಷ ಶಾಸಕರು ಸರ್ವಧರ್ಮ ಗುರುಗಳ ನೇತೃತ್ವದಲ್ಲಿ ಬಾಗಿನ ಅರ್ಪಿಸುವ ಕಾರ್ಯಕ್ರಮ ನೆರವೇರಿಸಿಕೊಂಡು ಬರುತ್ತಿದ್ದಾರೆ. ಕ್ಷೇತ್ರದಲ್ಲಿ ಉತ್ತಮ ಕೆಲಸಗಳನ್ನು ಮಾಡುತ್ತಿರುವ ಇವರಿಗೆ ಇನ್ನೂ ಹೆಚ್ಚಿನ ಶಕ್ತಿ ಲಭಿಸಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು. 
    ತಹಸೀಲ್ದಾರ್ ಪರುಸಪ್ಪ ಕುರುಬರ, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಪೊಲೀಸ್ ಉಪಾಧೀಕ್ಷಕ ಕೆ.ಆರ್ ನಾಗರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ನಗರ ಆಶ್ರಯ ಸಮಿತಿ ಅಧ್ಯಕ್ಷ ಗೋಪಾಲ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ಪ್ರಮುಖರಾದ ಎಸ್. ಕುಮಾರ್, ಸಿ.ಎಂ ಖಾದರ್, ಮಣಿಶೇಖರ್, ಎಚ್. ರವಿಕುಮಾರ್, ಬಿ.ಕೆ ಜಗನ್ನಾಥ್, ಸೈಯದ್ ರಿಯಾಜ್, ಬಿ.ಎಸ್ ಗಣೇಶ್, ಬಿ.ಎಂ. ರವಿಕುಮಾರ್, ಬಿ.ಎಂ ಮಂಜುನಾಥ್, ಬಸವೇಶ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಮಹಿಳಾ ಸಂಘಟನೆಗಳ ಪ್ರಮುಖರು, ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಎಚ್.ಎಲ್ ಷಡಾಕ್ಷರಿ ಸ್ವಾಗತಿಸಿ, ಲತಾ ಚಂದ್ರಶೇಖರ್ ಸಂಗಡಿಗರು ಪ್ರಾರ್ಥಿಸಿದರು. ಎಂ. ಶಿವಕುಮಾರ್, ಮುಸ್ವೀರ್ ಬಾಷಾ ನಿರೂಪಿಸಿದರು. 

ಶನಿವಾರ, ಆಗಸ್ಟ್ 23, 2025

ಅಥರ್ವ ಶಾಲೆಯಲ್ಲಿ ವೈಭವಯುತ ಶ್ರೀ ಕೃಷ್ಣ ಜನ್ಮಾಷ್ಟಮಿ : ಶ್ರೀ ಕೃಷ್ಣ-ರಾಧೆ ವೇಷದಲ್ಲಿ ಕಣ್ಮನ ಸೆಳೆದ ಮಕ್ಕಳು

ಭದ್ರಾವತಿ ನಗರದ ಹುತ್ತಾ ಕಾಲೋನಿ ಅಥರ್ವ ಕಿಡ್ಸ್ ಶಾಲೆಯಲ್ಲಿ ಶನಿವಾರ ೨ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ವಿಜೃಂಭಣೆಯಿಂದ ಆಚರಿಸಲಾಯಿತು. ಮಕ್ಕಳು ಶ್ರೀ ಕೃಷ್ಣ-ರಾಧೆ ವೇಷದಲ್ಲಿ ಕಂಗೊಳಿಸಿದರು. 
    ಭದ್ರಾವತಿ : ನಗರದ ಹುತ್ತಾ ಕಾಲೋನಿ ಅಥರ್ವ ಕಿಡ್ಸ್ ಶಾಲೆಯಲ್ಲಿ ಶನಿವಾರ ೨ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ವಿಜೃಂಭಣೆಯಿಂದ ಆಚರಿಸಲಾಯಿತು. ಮಕ್ಕಳು ಶ್ರೀ ಕೃಷ್ಣ-ರಾಧೆ ವೇಷದಲ್ಲಿ ಕಂಗೊಳಿಸಿದರು. 


    ಶ್ರೀ ಕೃಷ್ಣ-ರಾಧೆ ವೇಷದೊಂದಿಗೆ ವೇದಿಕೆ ಮೇಲೆ ಪ್ರದರ್ಶನ ನೀಡಿದ ಮಕ್ಕಳು ತಮ್ಮದೇ ಆದ ಹಾವ-ಭಾವ ಭಂಗಿಗಳಿಂದ, ಮಾತುಗಳಿಂದ ಎಲ್ಲರನ್ನು ರಂಜಿಸುವ ಮೂಲಕ ಕಣ್ಮನ ಸೆಳೆದರು. ಕಾರ್ಯಕ್ರಮಕ್ಕೆ ಪೂರಕವಾಗಿ ವೈಭವಯುತವಾದ ವೇದಿಕೆಯನ್ನು ಸಹ ಸಿದ್ದಪಡಿಸಲಾಗಿತ್ತು. 

ಭದ್ರಾವತಿ ನಗರದ ಹುತ್ತಾ ಕಾಲೋನಿ ಅಥರ್ವ ಕಿಡ್ಸ್ ಶಾಲೆಯಲ್ಲಿ ಶನಿವಾರ ೨ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ವಿಜೃಂಭಣೆಯಿಂದ ಆಚರಿಸಲಾಯಿತು. ಮಕ್ಕಳು ಬಣ್ಣದ ಮಡಿಕೆ ಒಡೆದು ಸಂಭ್ರಮಿಸಿದರು.
    ಈ ನಡುವೆ ಶಾಲೆ ಒಳ ಭಾಗದಲ್ಲಿ ಶ್ರೀ ಕೃಷ್ಣ-ರಾಧೆ ಇಬ್ಬರೂ ನಿಧಿವನದಲ್ಲಿ ವಿಹಾರಗೊಂಡಿರುವಂತೆ ಅದ್ಭುತವಾಗಿ ಅಲಂಕರಿಸಲಾಗಿತ್ತು. ಮಕ್ಕಳು, ಪೋಷಕರು ಕಣ್ತುಂಬಿಕೊಂಡರು. ಮತ್ತೊಂದೆಡೆ ಶಾಲಾ ಆವರಣದಲ್ಲಿ ಅಲಂಕೃತಗೊಂಡ ಜೋಕಾಲಿಯಲ್ಲಿ ಮಕ್ಕಳು ಕುಳಿತು ಆಟವಾಡಿ ಇನ್ನೊಂದೆಡೆ ಬಣ್ಣದ ಮಡಿಕೆ ಒಡೆದು ಸಂಭ್ರಮಿಸಿದರು. ಶ್ರೀಕೃಷ್ಣ-ರಾಧೆ ವೇಷ ಧರಿಸಿದ್ದ ತಮ್ಮ ಮಕ್ಕಳ ಹಾವ-ಭಾವ ಭಂಗಿಗಳನ್ನು ಪೋಷಕರು ತಮ್ಮ ಮೊಬೈಲ್‌ಗಳಲ್ಲಿ ಸೆರೆ ಹಿಡಿದು ಆನಂದಿಸಿದರು. 


ಭದ್ರಾವತಿ ನಗರದ ಹುತ್ತಾ ಕಾಲೋನಿ ಅಥರ್ವ ಕಿಡ್ಸ್ ಶಾಲೆಯಲ್ಲಿ ಶನಿವಾರ ೨ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ವಿಜೃಂಭಣೆಯಿಂದ ಆಚರಿಸಲಾಯಿತು. ಅಲಂಕೃತಗೊಂಡ ಜೋಕಾಲಿಯಲ್ಲಿ ಮಕ್ಕಳು ಕುಳಿತು ಆಟವಾಡಿ ಸಂಭ್ರಮಿಸಿದರು. 
    ಅಕ್ಕನ ಬಳಗದ ಕಾರ್ಯದರ್ಶಿ ಸುಧಾಮಣಿ ಮತ್ತು  ಶಿವಮೊಗ್ಗ ಪತಾಂಜಲಿ ನಾಗರಾಜ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ಮಕ್ಕಳನ್ನು ಅಭಿನಂದಿಸಿದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಬಿ.ಎಚ್ ಲಾವಣ್ಯ, ನಿರ್ವಾಹಕ ಶಿವಕುಮಾರ್ ಸೇರಿದಂತೆ ಶಾಲೆಯ ಶಿಕ್ಷಕಿಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಲಾಡು ವಿತರಿಸಲಾಯಿತು. 



ಜಾತಿ ನಿಂದನೆ, ಮಾನಹಾನಿಗೆ ಯತ್ನ ೩ ಆರೋಪಿಗಳಿಗೆ ೪ ವರ್ಷ ಶಿಕ್ಷೆ


    ಭದ್ರಾವತಿ: ಪೊಲೀಸ್ ಠಾಣೆಗೆ ದೂರು ನೀಡಿದ ಲಂಬಾಣಿ (ಪರಿಶಿಷ್ಟ ಜಾತಿ) ಜನಾಂಗಕ್ಕೆ ಸೇರಿದ ಮಹಿಳೆಯೊಬ್ಬರ ಮೇಲೆ ಜಾತಿ ನಿಂದನೆ, ಹಲ್ಲೆ ಮಾಡಿ ಮಾನಹಾನಿಗೆ ಯತ್ನಿಸಿದ್ದ ನಾಲ್ವರು ಆರೋಪಿಗಳಿಗೆ ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್‌ರವರು ಶನಿವಾರ ೪ ವರ್ಷ ಶಿಕ್ಷೆ ವಿಧಿಸಿ ತೀರ್ಪು ನೀಡಿ ಆದೇಶಿಸಿದ್ದಾರೆ. 
    ತಾಲೂಕಿನ ಸಿರಿಯೂರು ವೀರಾಪುರ ಗ್ರಾಮದ ಮನು (ಮೃತಪಟ್ಟಿದ್ದಾರೆ), ಶ್ರೀಧರ, ಮೋಹನ್ ಮತ್ತು ಹರೀಶ್ ಶಿಕ್ಷೆಗೊಳಗಾದ ಆರೋಪಿಗಳಾಗಿದ್ದಾರೆ. ೧೦ ಆಗಸ್ಟ್, ೨೦೧೮ರಂದು ಇದೆ ಗ್ರಾಮದ ಲಂಬಾಣಿ ಜನಾಂಗದ ಮಹಿಳೆಯೊಬ್ಬರ ಮನೆಗೆ ಈ ನಾಲ್ವರು ಆರೋಪಿಗಳು ನುಗ್ಗಿ ದಾಂಧಲೆ ನಡೆಸುವ ಜೊತೆಗೆ ಆಶ್ಲೀಲ ಪದಗಳಿಂದ ಜಾತಿ ನಿಂದನೆ ಮಾಡಿ ಮನೆಯ ಪೀಠೋಪಕರಣಗಳನ್ನು ಧ್ವಂಸಗೊಳಿಸಿ ಮಾನಹಾನಿಗೆ ಯತ್ನಿಸಿದ್ದರು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 
    ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಅಂದಿನ ಪೊಲೀಸ್ ಉಪಾಧೀಕ್ಷಕರಾಗಿದ್ದ ಓಂಕಾರ ನಾಯ್ಕರವರು ತನಿಖಾಧಿಕಾರಿಯಾಗಿ ಹಾಗು ಸಹಾಯಕ ಠಾಣಾ ಉಪ ನಿರೀಕ್ಷಕರಾಗಿದ್ದ ಕೆ.ಎಚ್ ಜಯಪ್ಪ ಸಹಾಯಕ ತನಿಖಾಧಿಕಾರಿಯಾಗಿ ಕಾರ್ಯನಿರ್ವಹಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. 
    ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪ ಸಾಬೀತಾದ ಹಿನ್ನಲೆಯಲ್ಲಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕರಾದ ರತ್ನಮ್ಮ ವಾದ ಮಂಡಿಸಿದ್ದರು.