Featured Post

ಪಾರ್ವತಮ್ಮ ನಿಧನ

ಭಾನುವಾರ, ಅಕ್ಟೋಬರ್ 19, 2025

ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ನಿತಿನ್‌ಗೆ ಚಿನ್ನದ ಪದಕ

ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಷನ್, ಶಿವಮೊಗ್ಗ ಡಿಸ್ಟ್ರಿಕ್ಟ್ ಪವರ್ ಲಿಫ್ಟಿಂಗ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭದ್ರಾವತಿ ನಗರದ ಕಾರಂತ್ ವ್ಯಾಯಾಮ ಶಾಲೆಯ ಕೀಡಾಪಟು ಎಂ.ಬಿ ನಿತಿನ್ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದುಕೊಂಡಿದ್ದಾರೆ. 
    ಭದ್ರಾವತಿ: ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಷನ್, ಶಿವಮೊಗ್ಗ ಡಿಸ್ಟ್ರಿಕ್ಟ್ ಪವರ್ ಲಿಫ್ಟಿಂಗ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ನಗರದ ಕಾರಂತ್ ವ್ಯಾಯಾಮ ಶಾಲೆಯ ಕೀಡಾಪಟು ಎಂ.ಬಿ ನಿತಿನ್ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದುಕೊಂಡಿದ್ದಾರೆ. 
    ಸಾಗರದ ಒಕ್ಕಲಿಗರ ಸಂಘದಲ್ಲಿ ಸಾಧನಾ ಮಲ್ಟಿ ಜಿಮ್ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಸ್ಪರ್ಧೆಯ ೮೦ ಕೆ.ಜಿ ವಿಭಾಗದಲ್ಲಿ ಪ್ರಥಮ ಸ್ಥಾನದೊಂದಿಗೆ ಉತ್ತಮ ಸಾಧನೆ ಮಾಡುವ ಮೂಲಕ ಕೀರ್ತಿ ತಂದಿದ್ದಾರೆ. 
    ಚಿನ್ನದ ಪದಕ ಪಡೆದಿರುವ ನಿತಿನ್ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಗುತ್ತಿಗೆ ಕಾರ್ಮಿಕರ ಸಂಘದ ಉಪಾಧ್ಯಕ್ಷ ಮಂಜುನಾಥ್‌ರವರ ಪುತ್ರರಾಗಿದ್ದಾರೆ. ಇವರನ್ನು ಕಾರಂತ್ ವ್ಯಾಯಾಮ ಶಾಲೆಯ ಪ್ರಕಾಶ್ ಕಾರಂತ್ ಸೇರಿದಂತೆ ಪವರ್ ಲಿಫ್ಟರ್ ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು, ಗಣ್ಯರು  ಅಭಿನಂದಿಸಿದ್ದಾರೆ.   

ವೀರಶೈವ ಲಿಂಗಾಯತರಲ್ಲಿ ಧರ್ಮ ಜಾಗೃತಿ, ಪಂಚಪೀಠಗಳ ಇತಿಹಾಸ ಕುರಿತು ಜನರಲ್ಲಿ ಅರಿವು

ಬಿಳಿಕಿ ಹಿರೇಮಠದಲ್ಲಿ ನಡೆದ ೨೦ಕ್ಕೂ ಹೆಚ್ಚು ಸ್ವಾಮೀಜಿಗಳ ಸಭೆಯಲ್ಲಿ ಹಲವು ನಿರ್ಣಯ  

ಭದ್ರಾವತಿ ತಾಲೂಕಿನ ಬಿಳಿಕಿ ಗ್ರಾಮದ ಶ್ರೀಮದ್ ರಂಭಾಪುರಿ ಹಿರೇಮಠದ ಪೀಠಾಧ್ಯಕ್ಷರಾದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ಭಾನುವಾರ ಗ್ರಾಮದಲ್ಲಿ ಆಯೋಜಿಸಲಾಗಿದ್ದ ವೀರಶೈವ-ಲಿಂಗಾಯತ ಶಿವಾಚಾರ್ಯರ ಸದ್ಬೋದನಾ ಪಾದಯತ್ರೆಗೆ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಎಡೆಯೂರು ಖಾಸಾ ಶಾಖಾ ಮಠದ ಪಟ್ಟಾಧ್ಯಕ್ಷರಾದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿಯವರು ಚಾಲನೆ ನೀಡಿದರು. 
    ಭದ್ರಾವತಿ : ಅಷ್ಟಾವರಣ, ಪಂಚಾಚಾರ, ಷಟ್ ಸ್ಥಳಗಳ ಬಗ್ಗೆ ವೀರಶೈವ ಲಿಂಗಾಯತರಲ್ಲಿ ಧರ್ಮ ಜಾಗೃತಿ ಮೂಡಿಸುವುದು, ಪಂಚಪೀಠಗಳ ಇತಿಹಾಸ ಕುರಿತು ಜನರಲ್ಲಿ ಅರಿವು ಮೂಡಿಸುವುದು ಸೇರಿದಂತೆ ಹಲವು ನಿರ್ಣಯಗಳನ್ನು ಭಾನುವಾರ ತಾಲೂಕಿನ ಬಿಳಿಕಿ ಗ್ರಾಮದ ಶ್ರೀಮದ್ ರಂಭಾಪುರಿ ಶಾಖಾ ಹಿರೇಮಠದಲ್ಲಿ ನಡೆದ ಬೆಂಗಳೂರಿನ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು ಮತ್ತು ಮಂಗಳೂರು ಜಿಲ್ಲಾ ಘಟಕಗಳ ಸಭೆಯಲ್ಲಿ ಕೈಗೊಳ್ಳಲಾಯಿತು.  
    ಬೆಂಗಳೂರಿನ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಸಹ ಕಾರ್ಯದರ್ಶಿ, ಬಿಳಿಕಿ ಹಿರೇಮಠದ ಪೀಠಾಧ್ಯಕ್ಷರಾದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷರಾದ ಮಳಲಿ ಸಂಸ್ಥಾನ ಮಠದ ಶ್ರೀ ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಬಸವಾದಿ ಶಿವಶರಣರ ಕುರಿತು ಹಾಗೂ ಹಾನಗಲ್ ಶ್ರೀ ಕುಮಾರ ಶಿವಯೋಗಿಗಳ ಚಿಂತನೆಗಳನ್ನು ಸಮಾಜಕ್ಕೆ ತಿಳಿಯಪಡಿಸುವುದು. ಪ್ರತಿ ಎರಡು ತಿಂಗಳಿಗೊಮ್ಮೆ ಎಲ್ಲಾ ಜಿಲ್ಲೆಗಳಲ್ಲಿ, ಆಯಾ ಭಾಗಗಳಲ್ಲಿ ಶಿವಾಚಾರ್ಯ ಸಂಸ್ಥೆಯ ಸಭೆ ನಡೆಸಿ ಧರ್ಮ ಜಾಗೃತಿ ಮೂಡಿಸುವುದು. ನಗರ ಹಾಗು ಗ್ರಾಮಾಂತರ ಪ್ರದೇಶಗಳಲ್ಲಿ ವರ್ಷದುದ್ದಕ್ಕೂ ಧರ್ಮ ಜಾಗೃತಿ ಸಮಾವೇಶ ಸಂಘಟಿಸುವುದು ಮತ್ತು ಸಾಂದರ್ಭಿಕವಾಗಿ ಜಿಲ್ಲೆಯ ವಿವಿಧ ಮಠಗಳಲ್ಲಿ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ಕೈಂಕರ್ಯ ಸಂಘಟಿಸಿ ಇಷ್ಟಲಿಂಗ ದೀಕ್ಷೆ ನೀಡುವುದು ಹಾಗೂ ಗ್ರಾಮಗಳಿಗೆ ಹೋದಾಗ ಶ್ರೀಗಳು ಆ ಗ್ರಾಮಗಳಲ್ಲಿ ಪಾದಯಾತ್ರೆ ಮಾಡಿ ಭಕ್ತರಿಗೆ ವಿಭೂತಿ, ರುದ್ರಾಕ್ಷಿ ಧಾರಣೆ ಮಾಡಬೇಕೆಂಬ ನಿರ್ಣಯಗಳನ್ನು ಕೈಗೊಳ್ಳಲಾಯಿತು. 
    ಸಭೆಯಲ್ಲಿ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಮತ್ತು ಮಂಗಳೂರು ಜಿಲ್ಲೆಗಳ ಜಿಲ್ಲಾಧ್ಯಕ್ಷರು ಹಾಗು ಪದಾಧಿಕಾರಿಗಳು ಸೇರಿದಂತೆ ಸುಮಾರು ೨೦ಕ್ಕೂ ಹೆಚ್ಚು ಸ್ವಾಮೀಜಿಗಳು ಪಾಲ್ಗೊಂಡಿದ್ದರು. 
    ಬಿಳಿಕಿ ಗ್ರಾಮದಲ್ಲಿ ಸ್ವಾಮೀಜಿಗಳಿಂದ ಸದ್ಬೋಧನಾ ಪಾದಯಾತ್ರೆ :
    ಬಿಳಿಕಿ ಹಿರೇಮಠದ ಪೀಠಾಧ್ಯಕ್ಷರಾದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ವೀರಶೈವ-ಲಿಂಗಾಯತ ಶಿವಾಚಾರ್ಯರ ಸದ್ಬೋದನಾ ಪಾದಯತ್ರೆಗೆ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಎಡೆಯೂರು ಖಾಸಾ ಶಾಖಾ ಮಠದ ಪಟ್ಟಾಧ್ಯಕ್ಷರಾದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿಯವರು ಚಾಲನೆ ನೀಡಿದರು. 
    ಪಾದಯಾತ್ರೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಪ್ರತಿ ಮನೆ ಮನೆಗೆ ತೆರಳಿ ಭಕ್ತರಿಗೆ ವಿಭೂತಿ, ರುದ್ರಾಕ್ಷಿ ಧಾರಣೆ ಮಾಡುವ ಮೂಲಕ ಧರ್ಮ ಜಾಗೃತಿ ಮೂಡಿಸಿತು. ಪಾದಯಾತ್ರೆ ಆಗಮಿಸುತ್ತಿದ್ದಂತೆ ಪ್ರತಿ ಮನೆಗಳ ಮುಂದೆ ಹಬ್ಬದ ಸಂಭ್ರಮ ಕಂಡು ಬಂದಿತು. ಕುಟುಂಬ ಸದಸ್ಯರೆಲ್ಲರೂ ಸ್ವಾಮೀಜಿಗಳ ದರ್ಶನದೊಂದಿಗೆ ಆಶಿರ್ವಾದ ಪಡೆದುಕೊಂಡರು. 
    ಪ್ರಮುಖರಾದ ಬಿಳಿಕಿ ಹಿರೇಮಠದ ಗೌರವಾಧ್ಯಕ್ಷರಾದ ಟಿ.ವಿ ಈಶ್ವರಯ್ಯ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಷ್ ಷಡಾಕ್ಷರಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ರುದ್ರಮುನಿ ಸಜ್ಜನ್, ತಾಲೂಕು ಘಟಕದ ಮಾಜಿ ಅಧ್ಯಕ್ಷ ಸಿದ್ದಲಿಂಗಯ್ಯ, ಶಿವಮೊಗ್ಗ ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘದ ಅಧ್ಯಕ್ಷ ಬಳ್ಳೇಕೆರೆ ಸಂತೋಷ್, ಮಾಜಿ ಅಧ್ಯಕ್ಷ ಎಸ್.ಎಸ್ ಜ್ಯೋತಿ ಪ್ರಕಾಶ್, ಜಮೀನ್ದಾರ್ ಕೂಡ್ಲಿಗೆರೆ ಹಾಲೇಶ್, ವಾಗೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
 

 ಭದ್ರಾವತಿ ತಾಲೂಕಿನ ಬಿಳಿಕಿ ಗ್ರಾಮದ ಶ್ರೀಮದ್ ರಂಭಾಪುರಿ ಹಿರೇಮಠದ ಪೀಠಾಧ್ಯಕ್ಷರಾದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷರಾದ ಮಳಲಿ ಸಂಸ್ಥಾನ ಮಠದ ಶ್ರೀ ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿಯವರ ಅಧ್ಯಕ್ಷತೆಯಲ್ಲಿ ಭಾನುವಾರ ಬೆಂಗಳೂರಿನ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು ಮತ್ತು ಮಂಗಳೂರು ಜಿಲ್ಲಾ ಘಟಕಗಳ ಸಭೆ ನಡೆಯಿತು. 

ಶನಿವಾರ, ಅಕ್ಟೋಬರ್ 18, 2025

ಕಣ್ಮನ ಸೆಳೆದ ಉಕ್ಕಿನ ನಗರದ ಆರ್‌ಎಸ್‌ಎಸ್ ವಿಜಯದಶಮಿ ಪಥ ಸಂಚಲನ

ರಾಷ್ಟ್ರೀಯವಾದಿ ಚಿಂತನೆಗಳು, ವಿಚಾರಗಳ ಮೂಲಕ ದೇಶದ ಅತಿ ದೊಡ್ಡ ಸಂಘಟನೆಯಾಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್) ತನ್ನ ಶತಮಾನ ಸಂಭ್ರಮಾಚರಣೆ ಅಂಗವಾಗಿ ಶನಿವಾರ ಭದ್ರಾವತಿ ನಗರದಲ್ಲಿ ಹಮ್ಮಿಕೊಂಡಿದ್ದ ವಿಜಯದಶಮಿ ಪಥ ಸಂಚಲನ ಕಣ್ಮನ ಸೆಳೆಯಿತು. 
    ಭದ್ರಾವತಿ : ರಾಷ್ಟ್ರೀಯವಾದಿ ಚಿಂತನೆಗಳು, ವಿಚಾರಗಳ ಮೂಲಕ ದೇಶದ ಅತಿ ದೊಡ್ಡ ಸಂಘಟನೆಯಾಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್) ತನ್ನ ಶತಮಾನ ಸಂಭ್ರಮಾಚರಣೆ ಅಂಗವಾಗಿ ಶನಿವಾರ ನಗರದಲ್ಲಿ ಹಮ್ಮಿಕೊಂಡಿದ್ದ ವಿಜಯದಶಮಿ ಪಥ ಸಂಚಲನ ಕಣ್ಮನ ಸೆಳೆಯಿತು. 
    ಶತಮಾನ ಪೂರೈಸಿರುವ ಆರ್‌ಎಸ್‌ಎಸ್ ೧೦೦ನೇ ವರ್ಷದ ವಿಜಯದಶಮಿ ಪಥ ಸಂಚಲನಕ್ಕೆ ನಗರದಲ್ಲಿ ಕಳೆದ ಕೆಲವು ದಿನಗಳಿಂದ ಭರದ ಸಿದ್ದತೆಗಳನ್ನು ಕೈಗೊಂಡಿತ್ತು. 
    ಪಥ ಸಂಚಲನ ಸಾಗುವ ಪ್ರಮುಖ ರಸ್ತೆಗಳು ಕೇಸರಿಮಯವಾಗಿ ಕಂಗೊಳಿಸಿದವು. ಎಲ್ಲೆಡೆ ಫ್ಲೆಕ್ಸ್, ಬಂಟಿಂಗ್ಸ್‌ಗಳು ರಾರಾಜಿಸಿದವು. ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಜಗಜ್ಯೋತಿ ಬಸವೇಶ್ವರರು, ಶ್ರೀ ಮಹರ್ಷಿ ವಾಲ್ಮೀಕಿ, ಶ್ರೀ ಭಗೀರಥ ಮಹಿರ್ಷಿ, ದಾಸಶ್ರೇಷ್ಠ ಕನಕದಾಸರು, ಮಾಜಿ ರಾಷ್ಟ್ರಪತಿ ದಿವಂಗತ ಅಬ್ದುಲ್ ಕಲಾಮ್, ಚಂದ್ರಶೇಖರ್ ಅಜಾದ್, ಭಗತ್‌ಸಿಂಗ್, ರಾಣಾ ಪ್ರತಾಪ್, ಶಿವಾಜಿ ಮಹಾರಾಜ್, ಆರ್‌ಎಸ್‌ಎಸ್ ಸಂಸ್ಥಾಪಕರು ಸೇರಿದಂತೆ ಇನ್ನಿತರ ಮಹಾನ್ ವ್ಯಕ್ತಿಗಳ ರಸ್ತೆಯುದ್ದಕ್ಕೂ ಅಳವಡಿಸಲಾಗಿದ್ದ ಫ್ಲೆಕ್ಸ್‌ಗಳು ಗಮನ ಸೆಳೆದವು. 
    ಪಥ ಸಂಚಲನದಲ್ಲಿ ಸುಮಾರು ೬೫೦ ಗಣವೇಷಧಾರಿಗಳು, ವಿವಿಧ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ಸೇರಿದಂತೆ ಸುಮಾರು ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಗಣವೇಷಧಾರಿಗಳಿಗೆ ರಸ್ತೆಯುದ್ದಕ್ಕೂ ಪುಷ್ಪಾರ್ಚನೆ ನಡೆಯಿತು. ಅಲ್ಲದೆ ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದ ಎಲ್ಲಾ ವಾಹನಗಳಿಗೆ ಪುಷ್ಪಾಲಂಕಾರ ಕೈಗೊಳ್ಳಲಾಗಿತ್ತು.
ಪ್ರಮುಖ ರಸ್ತೆಗಳು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದವು. 
    ಭಾರತೀಯ ಜನತಾ ಪಕ್ಷ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್, ವಿಶ್ವ ಹಿಂದೂ ಪರಿಷದ್, ಸಹಕಾರಿ ಭಾರತಿ ಸೇರಿದಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸುಮಾರು ೩೩ಕ್ಕೂ ಹೆಚ್ಚು ಶಾಖೆಗಳು ಪಥ ಸಂಚಲನಕ್ಕೆ ಬೆಂಬಲ ಸೂಚಿಸಿ ಪಾಲ್ಗೊಂಡಿದ್ದವು. 
 

ರಾಷ್ಟ್ರೀಯವಾದಿ ಚಿಂತನೆಗಳು, ವಿಚಾರಗಳ ಮೂಲಕ ದೇಶದ ಅತಿ ದೊಡ್ಡ ಸಂಘಟನೆಯಾಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್) ತನ್ನ ಶತಮಾನ ಸಂಭ್ರಮಾಚರಣೆ ಅಂಗವಾಗಿ ಶನಿವಾರ ಭದ್ರಾವತಿ ನಗರದಲ್ಲಿ ಹಮ್ಮಿಕೊಂಡಿದ್ದ ವಿಜಯದಶಮಿ ಪಥ ಸಂಚಲನ ಹಿನ್ನಲೆಯಲ್ಲಿ ಪ್ರಮುಖ ರಸ್ತೆಗಳು, ವೃತ್ತಗಳು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದವು. 

ಅ.೧೯ರಂದು ಬಿಳಿಕಿ ಹಿರೇಮಠದಲ್ಲಿ ವೀರಶೈವ-ಲಿಂಗಾಯತ ಶಿವಾಚಾರ್ಯರ ಸದ್ಬೋಧನಾ ಪಾದಯಾತ್ರೆ



    ಭದ್ರಾವತಿ : ಬೆಂಗಳೂರಿನ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ವತಿಯಿಂದ ತಾಲೂಕಿನ ಬಿಳಿಕಿ ಹಿರೇಮಠದಲ್ಲಿ ಅ.೧೯ರ ಭಾನುವಾರ ವೀರಶೈವ-ಲಿಂಗಾಯತ ಶಿವಾಚಾರ್ಯರ ಸದ್ಬೋಧನಾ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. 
    ಹಿರೇಮಠದ ಪೀಠಾಧ್ಯಕ್ಷರಾದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ಪಾದಯಾತ್ರೆಯಲ್ಲಿ ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಹಾಸನ, ಕೊಡಗು ಹಾಗು ಮಂಗಳೂರು ಜಿಲ್ಲಾ ಘಟಕಗಳ ಪ್ರಮುಖರು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. 
    ಬೆಳಿಗ್ಗೆ ೧೧ ಗಂಟೆಗೆ ಲಿಂಗು-ಶಿವದಾರ-ವಿಭೂತಿ-ರುದ್ರಾಕ್ಷಿ ಧಾರಣಾ ಕಾರ್ಯಕ್ರಮ ನಡೆಯಲಿದ್ದು, ನಂತರ ಶ್ರೀ ಮಠದ ಶ್ರೀ ಷ.ಬ್ರ.ಲಿಂ. ರಾಚೋಟಿ ಶಿವಾಚಾರ್ಯ ಸ್ವಾಮಿಗಳವರ ೫೮ನೇ ವರ್ಷದ ಪುಣ್ಯ ಸಂಸ್ಮರಣೋತ್ಸವ ನಡೆಯಲಿದೆ. ಸಂಸದ ಬಿ.ವೈ ರಾಘವೇಂದ್ರ, ಕರ್ನಾಟಕ ರಾಜ್ಯ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

ಅಸಂಘಟಿತ ಕಾರ್ಮಿಕರ ಸಂಘ : ನಗರ, ಗ್ರಾಮಾಂತರ ನೂತನ ಪದಾಧಿಕಾರಿಗಳ ಪದಗ್ರಹಣ

ರಾಜ್ಯ ಅಸಂಘಟಿತ ಕಾರ್ಮಿಕರ ಸಂಘ ಭದ್ರಾವತಿ ನಗರ ಮತ್ತು ಗ್ರಾಮಾಂತರ ಘಟಕಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜಿಲ್ಲಾಧ್ಯಕ್ಷ ರಮೇಶ್ ಮಡಿವಾಳ ಬಂದಗದ್ದೆರವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು. 
    ಭದ್ರಾವತಿ : ರಾಜ್ಯ ಅಸಂಘಟಿತ ಕಾರ್ಮಿಕರ ಸಂಘ ಗ್ರಾಮಾಂತರ ಮತ್ತು ನಗರ ಘಟಕಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜಿಲ್ಲಾಧ್ಯಕ್ಷ ರಮೇಶ್ ಮಡಿವಾಳ ಬಂದಗದ್ದೆರವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು. 
    ರಾಜ್ಯಾಧ್ಯಕ್ಷ ಪ್ರದೀಪ್ ಹೊನ್ನಪ್ಪ, ರಾಜ್ಯ ಕಾರ್ಯದರ್ಶಿ ಸುರೇಖಾ ಪಾಲಾಕ್ಷಪ್ಪ, ಜಿಲ್ಲಾ ಉಪಾಧ್ಯಕ್ಷೆ ಅಶ್ವಿನಿ ಗೌಡ, ತಾಲೂಕು ನಗರ ಅಧ್ಯಕ್ಷೆ ರೂಪ ನಾಗರಾಜ್, ಗ್ರಾಮಾಂತರ ಅಧ್ಯಕ್ಷೆ ಶಕುಂತಲಾ ಪ್ರದೀಪ್ ಅರಳಿಹಳ್ಳಿ  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಡ್ರೈವರ್, ಕ್ಲೀನರ್, ಹೆಲ್ಪರ್, ಮೆಕ್ಯಾನಿಕ್, ಬ್ಯೂಟಿಷಿಯನ್, ಪೈಂಟರ್, ಹಮಾಲಿ, ಹೋಟೆಲ್ ಕೂಲಿ ಕಾರ್ಮಿಕರುಗಳು, ದಿನಗೂಲಿ ಕಾರ್ಮಿಕರು ಸೇರಿದಂತೆ ಎಲ್ಲಾ ತರಹದ ಅಸಂಘಟಿತ ಕಾರ್ಮಿಕರಿಗೆ ಇಲಾಖೆಯಿಂದ ಲಭ್ಯವಾಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಯಿತು
    ತಾಲೂಕು ನಗರ ಸಮಿತಿ ನೂತನ ಪದಾಧಿಕಾರಿಗಳು : 
    ಅಧ್ಯಕ್ಷೆ ರೂಪ ನಾಗರಾಜ್, ಪ್ರಧಾನ ಕಾರ್ಯದರ್ಶಿ ರೂಪ ಮಲ್ಲಿಕಾರ್ಜುನ್ ಹೆಬ್ಬಂಡಿ, ಉಪಾಧ್ಯಕ್ಷರು ಎಚ್. ಮಂಜುನಾಥ್ ಜನ್ನಾಪುರ, ಅನ್ನಪೂರ್ಣ ಉಜ್ಜನಿಪುರ, ಮಂಜುಳ ನಾಗರಾಜ್ ಬಿಹೆಚ್ ರಸ್ತೆ, ಸಂಘಟನಾ ಕಾರ್ಯದರ್ಶಿ ದೀಕ್ಷಿತ್ ಗೌಡ ಕಬಳಿಕಟ್ಟೆ, ಕಾರ್ಯದರ್ಶಿಗಳು ಲತಾ, ಕವಿತ, ಭಾಗ್ಯ ಮಾರುತಿ ನಗರ, ಹೇಮಾ, ರುಕ್ಮಿಣಿ ಹೊಸಮನೆ, ನಿರ್ಮಲ ಮತ್ತು ರೂಪ ಮಹೇಶ್ ಇವರುಗಳನ್ನು ಆಯ್ಕೆ ಮಾಡಲಾಯಿತು.

ಶುಕ್ರವಾರ, ಅಕ್ಟೋಬರ್ 17, 2025

ದೀಪಾವಳಿ ಸಂಭ್ರಮಕ್ಕೆ ಅಂಟಿಗೆ ಪಂಟಿಗೆ ಮಹಿಳಾ ಜಾನಪದ ತಂಡಕ್ಕೆ ಆಹ್ವಾನ

ಅ.೨೦ರ ಸಂಜೆ ೬ ಗಂಟೆಗೆ ವಿಶೇಷ ಪೂಜೆಯೊಂದಿಗೆ ಪ್ರದರ್ಶನ ಉದ್ಘಾಟನೆ 

ಎಂ.ಆರ್ ರೇವಣಪ್ಪ 
    ಭದ್ರಾವತಿ: ಕರ್ನಾಟಕ ಜಾನಪದ ಪರಿಷತ್ತು ಹಾಗು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಘಟಕದಿಂದ ಮಲೆನಾಡಿನ ವಿಶಿಷ್ಟ ಜಾನಪದ ಕಲೆಯಾದ ಅಂಟಿಗೆ ಪಂಟಿಗೆ ಕಲಾ ತಂಡಗಳನ್ನು ಆಹ್ವಾನಿಸಲಾಗಿದೆ. ದೀಪಾವಳಿ ಸಂಭ್ರಮಕ್ಕೆ ಸಡಗರ ತರುವ ಈ ವಿಶೇಷ ಜಾನಪದ ಕಲೆಯ ಕಲಾ ಪ್ರದರ್ಶನ ಇಡೀ ರಾತ್ರಿ ನಡೆಯಲಿದೆ. ಅ.೨೦ರ ಸೋಮವಾರ ಸಂಜೆ ೬ ರಿಂದ ಬೆಳಿಗ್ಗೆವರೆಗೆ ಅಪೇಕ್ಷಿತರ ಮನೆಗಳಿಗೆ ಜ್ಯೋತಿಯೊಂದಿಗೆ ಆಗಮಿಸಲಿದೆ ಎಂದು ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷ, ಜಾನಪದ ಕಲಾವಿದ ಎಂ.ಆರ್ ರೇವಣಪ್ಪ ತಿಳಿಸಿದ್ದಾರೆ. 
    ಅಂಟಿಗೆ ಪಂಟಿಗೆ ಈ ವಿಶಿಷ್ಟ ಜಾನಪದ ಕಲೆ ಪ್ರಸ್ತುತ ನಶಿಸಿ ಹೋಗುವ ಹಂತದಲ್ಲಿದ್ದು, ಇದನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡುವ ಉದ್ದೇಶದೊಂದಿಗೆ ಈ ಕಲಾ ತಂಡಗಳನ್ನು ಆಹ್ವಾನಿಸಲಾಗುತ್ತಿದೆ. ಅಲ್ಲದೆ ಕರ್ನಾಟಕ ಜಾನಪದ ಪರಿಷತ್ತು ಅಂಟಿಗೆ ಪಂಟಿಗೆ ಕಲಾವಿದರಿಗೂ ರಾಜ್ಯಮಟ್ಟದ ಪುರಸ್ಕಾರ ಲಭಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಈಗಾಗಲೇ ರಾಮನಗರದ ಜಾನಪದ ಲೋಕದಲ್ಲಿ ಅಂಟಿಗೆ ಪಂಟಿಗೆ ತಂಡವನ್ನು ಕಳುಹಿಸಿ ಕಲಾ ಪ್ರದರ್ಶನ ನೀಡಲು ಅವಕಾಶ ಕಲ್ಪಿಸಿಕೊಡುವ ಮೂಲಕ ಆಕಾಡೆಮಿ ಪ್ರಶಸ್ತಿ ಈ ಕಲಾವಿದರಿಗೆ ದೊರಕಿಸುವ ಪ್ರಯತ್ನ ಮಾಡಲಾಗಿದೆ ಎಂದರು. 
    ಈ ಬಾರಿ ಸಹ ಅಂಟಿಗೆ ಪಂಟಿಗೆ ಕಲಾ ತಂಡಗಳು ತಾಲೂಕಿನಾದ್ಯಂತ ಪ್ರದರ್ಶನ ನೀಡಲು ಎಲ್ಲಾ ರೀತಿಯ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ. ಅ.೨೦ರ ಸೋಮವಾರ ಸಂಜೆ ೬ ಗಂಟೆಗೆ ನಗರದ ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ (ಎಸ್‌ಎವಿ) ಕನ್ನಡ ಶಾಲೆ ಸಮೀಪದಲ್ಲಿರುವ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪ್ರದರ್ಶನ ಉದ್ಘಾಟನೆಗೊಳ್ಳಲಿದೆ ಎಂದರು. 
    ಈ ಬಾರಿ ವಿಶೇಷತೆ ಎಂದರೆ .ತೀರ್ಥಹಳ್ಳಿ ತಾಲೂಕಿನ ಶಕುಂತಲಮ್ಮ ಮತ್ತು ಸಂಗಡಿಗರ ಅಂಟಿಗೆ ಪಂಟಿಗೆ ಮಹಿಳಾ ತಂಡ ಆಹ್ವಾನಿಸಲಾಗಿದೆ. ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಶಾಖೆ ಉಪಾಧ್ಯಕ್ಷೆ ಹೇಮಾವತಿ ವಿಶ್ವನಾಥ್, ಪ್ರಧಾನ ಕಾರ್ಯದರ್ಶಿ ಬಿ.ಎಲ್ ಮೋಹನ್ ಕುಮಾರ್, ಸಂಘಟನಾ ಕಾರ್ಯದರ್ಶಿ ದಿವಾಕರ್, ಅನ್ನಪೂರ್ಣ ಸತೀಶ್ ಸೇರಿದಂತೆ ಇನ್ನಿತರರು ಮಹಿಳಾ ತಂಡವನ್ನು ಸ್ವಾಗತಿಸಲಿದ್ದಾರೆ. ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಶಾಖೆ ಮಾಜಿ ಅಧ್ಯಕ್ಷ ಕೋಡ್ಲುಯಜ್ಞಯ್ಯ ಸಂಚಾಲಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ತಮ್ಮ ಮನೆಗೆ ಅಂಟಿಗೆ ಪಂಟಿಗೆ ಮಹಿಳಾ ತಂಡ ಆಗಮಿಸಲಿ ಎಂದು ಅಪೇಕ್ಷೆ ಪಡುವವರು ಮೊ: ೯೪೪೮೯೪೩೭೮೩, ೯೦೩೬೬೮೧೦೯೨, ೯೯೪೫೯೧೮೦೧೪, ೯೪೪೯೭೭೮೧೬೬ ಮತ್ತು ೯೯೮೬೨೪೧೨೩೨ ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದು ಎಂ.ಆರ್ ರೇವಣಪ್ಪ ತಿಳಿಸಿದ್ದಾರೆ. 

ಶತಮಾನ ಸಂಭ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ

ಉಕ್ಕಿನ ನಗರದಲ್ಲಿ ಅ.೧೮ರಂದು ವಿಜಯದಶಮಿ ಪಥ ಸಂಚಲನ 

ರಾಷ್ಟ್ರೀಯವಾದಿ ಚಿಂತನೆಗಳು, ವಿಚಾರಗಳ ಮೂಲಕ ದೇಶದ ಅತಿ ದೊಡ್ಡ ಸಂಘಟನೆಯಾಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್) ಇದೀಗ ಶತಮಾನ ಸಂಭ್ರಮಾಚರಣೆಯಲ್ಲಿ ತೊಡಗಿಸಿಕೊಂಡಿದ್ದು,  ಈ ನಡುವೆ ಅ.೧೮ರ ಶನಿವಾರ ಭದ್ರಾವತಿ ನಗರದಲ್ಲಿ ವಿಜಯದಶಮಿ ಪಥ ಸಂಚಲನ ಆಯೋಜಿಸಲಾಗಿದೆ. ಇದಕ್ಕೆ ಪೂರಕವಾಗಿ ಭರದ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ. 
    ಭದ್ರಾವತಿ : ರಾಷ್ಟ್ರೀಯವಾದಿ ಚಿಂತನೆಗಳು, ವಿಚಾರಗಳ ಮೂಲಕ ದೇಶದ ಅತಿ ದೊಡ್ಡ ಸಂಘಟನೆಯಾಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್) ಇದೀಗ ಶತಮಾನ ಸಂಭ್ರಮಾಚರಣೆಯಲ್ಲಿ ತೊಡಗಿಸಿಕೊಂಡಿದ್ದು,  ಈ ನಡುವೆ ಅ.೧೮ರ ಶನಿವಾರ ನಗರದಲ್ಲಿ ವಿಜಯದಶಮಿ ಪಥ ಸಂಚಲನ ಆಯೋಜಿಸಲಾಗಿದೆ. ಇದಕ್ಕೆ ಪೂರಕವಾಗಿ ಭರದ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ. 
    ಶತಮಾನ ಪೂರೈಸಿರುವ ಆರ್‌ಎಸ್‌ಎಸ್ ೧೦೦ನೇ ವರ್ಷದ ವಿಜಯದಶಮಿ ಪಥ ಸಂಚಲನಕ್ಕೆ ಭರದ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ. ಶನಿವಾರ ಸಂಜೆ ೫.೩೦ಕ್ಕೆ ಹೊಸಮನೆ ಶಿವಾಜಿ ವೃತ್ತದಿಂದ ಆರಂಭಗೊಳ್ಳುವ ವಿಜಯದಶಮಿ ಪಥ ಸಂಚಲನ ರಂಗಪ್ಪ ವೃತ್ತ, ಮಾಧವಚಾರ್ ವೃತ್ತ, ಹಾಲಪ್ಪ ವೃತ್ತ ಮತ್ತು ಅಂಬೇಡ್ಕರ್ ವೃತ್ತದಿಂದ ಲೋಯರ್ ಹುತ್ತಾದವರೆಗೆ ಸಾಗಲಿದೆ. 
       ಪಥ ಸಂಚಲನ ಸಾಗುವ ಪ್ರಮುಖ ರಸ್ತೆಗಳು ಕೇಸರಿಮಯವಾಗಿವೆ. ಎಲ್ಲೆಡೆ ಫ್ಲೆಕ್ಸ್, ಬಂಟಿಂಗ್ಸ್‌ಗಳು ರಾರಾಜಿಸುತ್ತಿವೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಜಗಜ್ಯೋತಿ ಬಸವೇಶ್ವರರು, ಶ್ರೀ ಮಹರ್ಷಿ ವಾಲ್ಮೀಕಿ, ಶ್ರೀ ಭಗೀರಥ ಮಹಿರ್ಷಿ, ದಾಸಶ್ರೇಷ್ಠ ಕನಕದಾಸರು, ಮಾಜಿ ರಾಷ್ಟ್ರಪತಿ ದಿವಂಗತ ಅಬ್ದುಲ್ ಕಲಾಮ್, ಚಂದ್ರಶೇಖರ್ ಅಜಾದ್, ಭಗತ್‌ಸಿಂಗ್, ರಾಣಾ ಪ್ರತಾಪ್, ಶಿವಾಜಿ ಮಹಾರಾಜ್, ಆರ್‌ಎಸ್‌ಎಸ್ ಸಂಸ್ಥಾಪಕರು ಸೇರಿದಂತೆ ಇನ್ನಿತರ ಮಹಾನ್ ವ್ಯಕ್ತಿಗಳ ರಸ್ತೆಯುದ್ದಕ್ಕೂ ಅಳವಡಿಸಲಾಗಿರುವ ಫ್ಲೆಕ್ಸ್‌ಗಳು ಗಮನ ಸೆಳೆಯುತ್ತಿವ


    ಪ್ರಮುಖ ರಸ್ತೆಗಳು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದು, ರಾತ್ರಿ ವೇಳೆ ಕಂಗೊಳಿಸಲಿವೆ. ಗಣವೇಷಧಾರಿಯಾಗಿ ಸಾವಿರಾರು ಮಂದಿ ಸ್ವಯಂ ಸೇವಕರು ಪಥಸಂಚಲನದಲ್ಲಿ ಪಾಲ್ಗೊಳ್ಳುತ್ತಿದ್ದು, ಗಣವೇಷಧಾರಿಗಳಿಗೆ ರಸ್ತೆಯುದ್ದಕ್ಕೂ ಪುಷ್ಪಾರ್ಚನೆ ನಡೆಯಲಿದ್ದು, ಅಲ್ಲದೆ ಪಥ ಸಂಚಲನದಲ್ಲಿ ಪಾಲ್ಗೊಳ್ಳುವ ಎಲ್ಲಾ ವಾಹನಗಳಿಗೆ ಪುಷ್ಪಾಲಂಕಾರ ಸಹ ಕೈಗೊಳ್ಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ೨ ಕ್ವಿಂಟಾಲ್ ಹೂ ಖರೀದಿಸಲಾಗಿದೆ. ಈ ನಡುವೆ ಪಥ ಸಂಚಲನದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವ ಹಿರಿಯ ಸ್ವಯಂ ಸೇವಕರು ಕಿರಿಯ ಸ್ವಯಂ ಸೇವಕರು ಹಾಗು ಬಂಧು-ಬಳಗ, ಆಸಕ್ತಿಗೆ ಮನವಿ ಮಾಡುತ್ತಿದ್ದಾರೆ. 
    ಉಕ್ಕಿನ ನಗರದಲ್ಲಿ ವಿಜಯದಶಮಿ ಪಥ ಸಂಚಲನ ಕೈಗೊಳ್ಳುವ ಮೂಲಕ ಆರ್‌ಎಸ್‌ಎಸ್ ತನ್ನ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಭಾರತೀಯ ಜನತಾ ಪಕ್ಷ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್, ವಿಶ್ವ ಹಿಂದೂ ಪರಿಷದ್, ಸಹಕಾರಿ ಭಾರತಿ ಸೇರಿದಂತೆ ಸುಮಾರು ೩೩ಕ್ಕೂ ಹೆಚ್ಚು ಶಾಖೆಗಳಿಗೆ ಮಾತೃ ಸಂಸ್ಥೆಯಾಗಿರುವ ಆರ್‌ಎಸ್‌ಎಸ್ ಇದೀಗ ಶತಮಾನ ಸಂಭ್ರಮಾಚರಣೆಯಲ್ಲಿ ತನ್ನ ಭವ್ಯಪರಂಪರೆಯನ್ನು ಅನಾವರಣಗೊಳಿಸಲು ಮುಂದಾಗಿದೆ. 
 

ಭದ್ರಾವತಿ ನಗರದಲ್ಲಿ ಶನಿವಾರ ವಿಜಯದಶಮಿ ಪಥ ಸಂಚಲನ ಆಯೋಜಿಸಲಾಗಿದೆ. ಗಣವೇಷಧಾರಿಯಾಗಿ ಸಾವಿರಾರು ಮಂದಿ ಸ್ವಯಂ ಸೇವಕರು ಪಥಸಂಚಲನದಲ್ಲಿ ಪಾಲ್ಗೊಳ್ಳುತ್ತಿದ್ದು, ಗಣವೇಷಧಾರಿಗಳಿಗೆ ರಸ್ತೆಯುದ್ದಕ್ಕೂ ಪುಷ್ಪಾರ್ಚನೆ ನಡೆಯಲಿದ್ದು, ಅಲ್ಲದೆ ಪಥ ಸಂಚಲನದಲ್ಲಿ ಪಾಲ್ಗೊಳ್ಳುವ ಎಲ್ಲಾ ವಾಹನಗಳಿಗೆ ಪುಷ್ಪಾಲಂಕಾರ ಸಹ ಕೈಗೊಳ್ಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಸುಮಾರು ೨ ಕ್ವಿಂಟಾಲ್ ಹೂ ಖರೀದಿಸಿರುವುದು.