Sunday, February 28, 2021

ಸರ್ಕಾರಿ ಶಾಲೆಗಳ ಆಧುನೀಕರಣ, ಗುಣಮಟ್ಟದ ಶಿಕ್ಷಣ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹ

ಜೆಡಿಯು ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ ಏಕಾಂಕಿ ಹೋರಾಟ


ಸರ್ಕಾರಿ ಪ್ರಾಥಮಿಕ ಹಾಗು ಪ್ರೌಢ ಶಾಲೆಗಳನ್ನು ಆಧುನೀಕರಣಗೊಳಿಸಿ ಗುಣಮಟ್ಟದ ಶಿಕ್ಷಣ ನೀಡುವಂತೆ ಹಾಗು ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರ ಸಂಯುಕ್ತ ಜನತಾದಳ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಏಕಾಂಗಿ ಹೋರಾಟ ನಡೆಸಿದರು.
   ಭದ್ರಾವತಿ, ಮಾ. ೧: ಸರ್ಕಾರಿ ಪ್ರಾಥಮಿಕ ಹಾಗು ಪ್ರೌಢ ಶಾಲೆಗಳನ್ನು ಆಧುನೀಕರಣಗೊಳಿಸಿ ಗುಣಮಟ್ಟದ ಶಿಕ್ಷಣ ನೀಡುವಂತೆ ಹಾಗು ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರ ಸಂಯುಕ್ತ ಜನತಾದಳ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ ತಾಲೂಕು ಕಛೇರಿ ಮುಂಭಾಗ ಏಕಾಂಗಿ ಹೋರಾಟ ನಡೆಸಿದರು.
    ರಾಜ್ಯಾದ್ಯಂತ ಸುಮಾರು ೫೦ ವರ್ಷಗಳಿಗೂ ಹಳೇಯದಾದ ಸುಮಾರು ೧೪ ಸಾವಿರ ಶಾಲೆಗಳಿದ್ದು, ಈ ಶಾಲೆಗಳನ್ನು ಪುನರ್ ನಿರ್ಮಾಣ ಮಾಡುವುದು. ೨೨ ಸಾವಿರ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದ್ದು, ತಕ್ಷಣ ಸೌಕರ್ಯಗಳನ್ನು ಕಲ್ಪಿಸಿಕೊಡುವುದು. ೮ ಸಾವಿರ ಶಾಲೆಗಳು ಮುಚ್ಚುವ ಹಂತದಲ್ಲಿದ್ದು, ಈ ಶಾಲೆಗಳನ್ನು ನವೀಕರಣಗೊಳಿಸಿ ಹಾಳಾಗದಂತೆ ನಿರ್ವಹಣೆ ಮಾಡುವುದು. ಪ್ರಾಥಮಿಕ ಹಂತದಿಂದಲೇ ಮಾತೃಭಾಷೆ ಜೊತೆಗೆ ಆಂಗ್ಲಭಾಷೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದು. ಎಲ್ಲಾ ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್ ಟಿ.ವಿ ವಿತರಿಸುವುದು ಹಾಗು ಅವಶ್ಯಕತೆ ಇರುವ ಕಲಿಕಾ ಮಾಧ್ಯಮದ ಭಾಷೆಯಲ್ಲಿ ಪ್ರಾವಿಣ್ಯತೆ ಹೊಂದಿರುವ ಶಿಕ್ಷಕರನ್ನು ನೇಮಿಸಿಕೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಲಾಯಿತು.
   ಫಲಕಗಳನ್ನು ಹಿಡಿದು ಏಕಾಂಗಿ ಹೋರಾಟ ನಡೆಸಿದ ಶಶಿಕುಮಾರ್ ಎಸ್ ಗೌಡ ಕೊನೆಯಲ್ಲಿ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಜಗತ್ತಿಗೆ ಆನಂದ, ಆತ್ಮತೃಪ್ತಿ ಮಾರ್ಗ ತೋರಿಸಿಕೊಟ್ಟ ದೇಶ ಭಾರತ

'ಅನನ್ಯ' ಪ್ರಾಂತೀಯ ಸಮ್ಮೇಳನದಲ್ಲಿ ವಾಗ್ಮಿ ಚಕ್ರವರ್ತಿ ಸೂಲಿಬೆಲೆ


ಭದ್ರಾವತಿಯಲ್ಲಿ ಭಾನುವಾರ ಲಯನ್ಸ್ ಕ್ಲಬ್ ಶುಗರ್ ಟೌನ್ ತನ್ನ ೩೪ನೇ ವರ್ಷದ ಸವಿ ನೆನಪಿನಲ್ಲಿ ಹಮ್ಮಿಕೊಂಡಿದ್ದ 'ಅನನ್ಯ' ಪ್ರಾಂತೀಯ ಸಮ್ಮೇಳನದಲ್ಲಿ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಪಾಲ್ಗೊಂಡು ಮಾತನಾಡಿದರು.
   ಭದ್ರಾವತಿ, ಫೆ. ೨೮: ಜಗತ್ತಿಗೆ ಆನಂದ, ಆತ್ಮತೃಪ್ತಿ ಮಾರ್ಗ ತೋರಿಸಿಕೊಟ್ಟ ದೇಶ ಭಾರತ ಎಂಬುದನ್ನು ಎಲ್ಲರಿಗೂ ಅರಿತುಕೊಳ್ಳಬೇಕು ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.
    ಅವರು ಭಾನುವಾರ ನಗರದ ಲಯನ್ಸ್ ಕ್ಲಬ್ ಶುಗರ್ ಟೌನ್ ತನ್ನ ೩೪ನೇ ವರ್ಷದ ಸವಿ ನೆನಪಿನಲ್ಲಿ ಹಮ್ಮಿಕೊಂಡಿದ್ದ 'ಅನನ್ಯ' ಪ್ರಾಂತೀಯ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರತಿಯೊಬ್ಬರು ತಮ್ಮ ಜೀವನದ ಗುರಿ ಯಾವುದು ಎಂಬುದನ್ನು ಗುರುತಿಸಿಕೊಳ್ಳಬೇಕು. ಬದುಕಿನ ವಿವಿಧ ಹಂತಗಳನ್ನು ಯಶಸ್ವಿಯಾಗಿ ತಲುಪುವುದೇ ಜೀವನದ ಮುಖ್ಯ ಗುರಿಯಲ್ಲ. ನಮಗೆ ಆನಂದ, ಆತ್ಮತೃಪ್ತಿ ಸಿಗುವ ಮಾರ್ಗದಲ್ಲಿ ಸಾಗುವುದೇ ಜೀವನದ ಗುರಿಯಾಗಬೇಕು. ಇದನ್ನು ಸ್ವಾಮಿ ವಿವೇಕಾನಂದರು ಇಡೀ ಜಗತ್ತಿಗೆ ತಿಳಿಸಿಕೊಟ್ಟಿದ್ದಾರೆ.
   ದೇವರು ನಮ್ಮಿಂದ ಯಾವುದನ್ನೂ ಸಹ ಅಪೇಕ್ಷಿಸದೆ ನಮಗೆ ಎಲ್ಲವನ್ನು ಕೊಟ್ಟಿದ್ದಾನೆ. ನಾವು ಆ ದೇವರು ಕೊಟ್ಟಿರುವುದರಲ್ಲಿ ಸ್ವಲ್ಪ ಭಾಗವನ್ನು ಮತ್ತೊಬ್ಬರಿಗೆ ನೀಡುವಲ್ಲಿ ಹಿಂದೆ ಮುಂದೆ ನೋಡುತ್ತಿದ್ದೇವೆ. ನಮ್ಮ ಪರಿಸರದಲ್ಲಿ ಅಕ್ಕಪಕ್ಕದಲ್ಲಿ ಬದುಕುತ್ತಿರುವವರ ಕಷ್ಟಸುಖಗಳಿಗೆ ಸ್ಪಂದಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಹಣವಂತರು ಬಡವರಿಗೆ ನೆರವಾಗಬೇಕು. ಅಕ್ಷರಸ್ಥರು ಅನಕ್ಷರಸ್ಥರಿಗೆ ನೆರವಾಗಬೇಕು ಹೀಗೆ ಎಲ್ಲಾ ರೀತಿಯಿಂದಲೂ ನಮ್ಮನ್ನು ತೊಡಗಿಸಿಕೊಂಡು ಆ ಮೂಲಕ ಆನಂದ, ಆತ್ಮತೃಪ್ತಿ ಕಂಡುಕೊಳ್ಳಬೇಕು. ಭಾರತ ದೇಶ ಹಲವು ವೈವಿಧ್ಯತೆಗಳಿಂದಾಗಿ ಜಗತ್ತಿನಲ್ಲಿ ವಿಶಿಷ್ಟ ರಾಷ್ಟ್ರವಾಗಿ ಗುರುತಿಸಿಕೊಂಡಿದೆ. ಇಂತಹ ನೆಲದಲ್ಲಿ ನಮ್ಮ ಬದುಕು ಸಾರ್ಥಕಗೊಳ್ಳಬೇಕು. ಈ ನಿಟ್ಟಿನಲ್ಲಿ ಲಯನ್ಸ್ ಕ್ಲಬ್ ತನ್ನ ಸೇವಾ ಕಾರ್ಯವನ್ನು ಮುನ್ನಡೆಸುತ್ತಿರುವುದು ಶ್ಲಾಘನೀಯ ಎಂದರು.
    ಪ್ರಾಂತೀಯ ಅಧ್ಯಕ್ಷ ಕೆ. ಅನಂತಕೃಷ್ಣನಾಯಕ್ ಸಮ್ಮೇಳನ ಉದ್ಘಾಟಿಸಿದರು. ವಾಗ್ಮಿ ಪ್ರೊ. ಡಾ. ಕೆ.ಪಿ ಪುತ್ತುರಾಯ ಪಿಡಿಜಿ ದಿವಾಕರ್, ವಿಡಿಜಿ-೨ ಕೆ.ಸಿ ವೀರಭದ್ರಪ್ಪ, ಪಾಲಾಕ್ಷಪ್ಪ, ಜಿ.ಎಸ್ ಕುಮಾರ್, ಕ್ಲಬ್ ಅಧ್ಯಕ್ಷ ಬಿ. ನಿತ್ಯಾನಂದ ಪೈ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
   ಕಾನ್ಫರೆನ್ಸ್ ಕಮಿಟಿ ಛೇರ್‌ಮನ್ ಡಾ. ಟಿ. ನರೇಂದ್ರಭಟ್ ಸ್ವಾಗತಿಸಿದರು. ಶುಗರ್ ಟೌನ್, ಸರ್ವೋದಯ ನಗರ, ಯಡೇಹಳ್ಳಿ, ಹೊಳೆಹೊನ್ನೂರು ಮತ್ತು ಸನ್ಯಾಸಿ ಕೋಡಮಗ್ಗೆ ಪ್ರಾಂತೀಯ ವಲಯ-೧ರ ಕ್ಲಬ್‌ಗಳ ಹಾಗು ಶಿವಮೊಗ್ಗ, ಶಿವಮೊಗ್ಗ ಕಾಸ್ಮೊಪೊಲಿಟ್ಯಾನ್, ಬಿ.ಆರ್ ಪ್ರಾಜೆಕ್ಟ್, ತೀರ್ಥಹಳ್ಳಿ, ಭದ್ರಾವತಿ, ಶಿವಮೊಗ್ಗ ಸಹ್ಯಾದ್ರಿ, ಹೊಸನಗರ ಕೊಡಚಾದ್ರಿ ಮತ್ತು ಶಿವಮೊಗ್ಗ ಶಾಂಭವಿ ಪ್ರಾಂತೀಯ ವಲಯ-೨ರ ಕ್ಲಬ್‌ಗಳ ಅಧ್ಯಕ್ಷರು, ಪದಾಧಿಕಾರಿಗಳು, ಪ್ರತಿನಿಧಿಗಳು ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

ಕೊರೋನಾ ೩ನೇ ಹಂತದ ಲಸಿಕೆ ಅಭಿಯಾನಕ್ಕೆ ತಾಲೂಕು ಆಸ್ಪತ್ರೆ ಸಿದ್ದತೆ

ಪ್ರತಿ ದಿನ ೨೦೦ ಮಂದಿಗೆ ಲಸಿಕೆ ಹಾಕುವ ಗುರಿ : ಡಾ. ಎಂ.ವಿ ಅಶೋಕ್

ಭದ್ರಾವತಿ, ಫೆ. ೨೮: ಕೊರೋನಾ ಲಸಿಕೆ ೩ನೇ ಹಂತದ ಅಭಿಯಾನಕ್ಕೆ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸಿದ್ದತೆಗಳನ್ನು ಕೈಗೊಂಡಿದ್ದು, ಪ್ರತಿ ದಿನ ೨೦೦ ಮಂದಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ತಿಳಿಸಿದರು.
    ಅವರು ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿ, ಒಟ್ಟು ೪ ವಿಭಾಗಗಳಲ್ಲಿ ಲಸಿಕೆ ಹಾಕಲಾಗುತ್ತಿದೆ. ಈ ಬಾರಿ ಮೊದಲ ವಿಭಾಗದಲ್ಲಿ ೪೯ ರಿಂದ ೫೯ ವರ್ಷದೊಳಗಿನ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಲಸಿಕೆ ಹಾಕಲಾಗುವುದು. ಲಸಿಕೆ ಹಾಕಿಸಿಕೊಳ್ಳುವವರು ಕಡ್ಡಾಯವಾಗಿ ವೈದ್ಯರಿಂದ ತಪಾಸಣೆ ದೃಢೀಕರಣ ಪತ್ರ ತರಬೇಕು. ಉಳಿದಂತೆ ೨ನೇ ವಿಭಾಗದಲ್ಲಿ ೬೦ ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲಾಗುವುದು. ೩ನೇ ವಿಭಾಗದಲ್ಲಿ ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಹಿಂದೆ ಲಸಿಕೆ ಪಡೆಯದವರಿಗೆ ಹಾಗು ೪ನೇ ವಿಭಾಗದಲ್ಲಿ ಇನ್ನಿತರರಿಗೆ ಲಸಿಕೆ ಹಾಕಲು ಸಿದ್ದತೆ ನಡೆಸಲಾಗಿದೆ ಎಂದರು.
    ಲಸಿಕೆ ಹಾಕುವ ಕಾರ್ಯದಲ್ಲಿ ಓರ್ವ ವೈದ್ಯ, ಓರ್ವ ಲಸಿಕೆ ಹಾಕುವವರು, ಸಹಾಯಕರು, ಪರಿಶೀಲನೆ ನಡೆಸುವವರು ಸೇರಿದಂತೆ ಒಟ್ಟು ೧೦ ಮಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ತಾಲೂಕು ಆಸ್ಪತ್ರೆಯಲ್ಲಿ ಮಾತ್ರ ಲಸಿಕೆ ಹಾಕಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲೂ ಲಸಿಕೆ ಹಾಕಲಾಗುವುದು. ಆದರೆ ಈ ಕುರಿತು ಸರ್ಕಾರದಿಂದ ಅಧಿಕೃತ ಆದೇಶ ಬಂದಿಲ್ಲ ಎಂದರು.

ರಾಮ್ ಸೇನಾ ಶ್ರೀ ಲಕ್ಷ್ಮೀನರಸಿಂಹ ಘಟಕ ಉದ್ಘಾಟನೆ

ಸಂಸ್ಥಾಪಕ ಅಧ್ಯಕ್ಷ ಪ್ರಸಾದ್ ಅತ್ತಾವರ್ ಉಪಸ್ಥಿತಿ

ರಾಮ್ ಸೇನಾ ಶ್ರೀ ಲಕ್ಷ್ಮೀನರಸಿಂಹ ಘಟಕದ ಉದ್ಘಾಟನೆ ಭಾನುವಾರ ನಗರದ ಬಿ.ಎಚ್ ರಸ್ತೆ ಕಡದಕಟ್ಟೆ ಐಟಿಐ ಸಮೀಪದ ವಿದ್ಯಾಧಿರಾಜ ಸಭಾಭವನದಲ್ಲಿ ನಡೆಯಿತು. ಈ ಸಂಬಂಧ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆ ಕಾರ್ಯಕ್ರಮದಲ್ಲಿ ರಾಮ್ ಸೇನಾ ಕರ್ನಾಟಕ ಸಂಸ್ಥಾಪಕ ಅಧ್ಯಕ್ಷ ಪ್ರಸಾದ್ ಅತ್ತಾವರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಭದ್ರಾವತಿ, ಫೆ. ೨೮: ರಾಮ್ ಸೇನಾ ಶ್ರೀ ಲಕ್ಷ್ಮೀನರಸಿಂಹ ಘಟಕದ ಉದ್ಘಾಟನೆ ಭಾನುವಾರ ನಗರದ ಬಿ.ಎಚ್ ರಸ್ತೆ ಕಡದಕಟ್ಟೆ ಐಟಿಐ ಸಮೀಪದ ವಿದ್ಯಾಧಿರಾಜ ಸಭಾಭವನದಲ್ಲಿ ನಡೆಯಿತು.
      ಉದ್ಘಾಟನೆ ಅಂಗವಾಗಿ ಸಾಮೂಹಿಕ ಸತ್ಯನಾರಾಯಣ ಪೂಜೆ ನೆರವೇರಿಸಲಾಯಿತು. ಸುಮಾರು ೫೦ ದಂಪತಿಗಳು ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನ ಪ್ರಸಾದ ವಿತರಣೆ ನಡೆಯಿತು.
ರಾಮ್ ಸೇನಾ ಕರ್ನಾಟಕ ಸಂಸ್ಥಾಪಕ ಅಧ್ಯಕ್ಷ ಪ್ರಸಾದ್ ಅತ್ತಾವರ್ ಶ್ರೀ ಲಕ್ಷ್ಮೀನರಸಿಂಹ ನೂತನ ಘಟಕ ಉದ್ಘಾಟಿಸಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗು ಕಾರ್ಯಕರ್ತರನ್ನು ಅಭಿನಂದಿಸುವ ಮೂಲಕ ಸಂಘಟನೆಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುವಂತೆ ಕರೆ ನೀಡಿದರು.  
    ವಿಶ್ವ ಹಿಂದೂ ಪರಿಷತ್ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಹಾ.ರಾಮಪ್ಪ, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ರಾಮ್‌ಸೇನಾ ರಾಜ್ಯ ಕಾರ್ಯದರ್ಶಿಗಳಾದ ಮಂಜುನಾಥ ಗುಲ್ಜಾರ್, ಸಂತೋಷ್‌ಶೆಟ್ಟಿ, ಜಿಲ್ಲಾಧ್ಯಕ್ಷ ಉಮೇಶ್‌ಗೌಡ, ಮುಖಂಡ ಬಾಬು ಶಶಿಕುಮಾರ್  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
           ನೂತನ ಅಧ್ಯಕ್ಷರು ಪದಾಧಿಕಾರಿಗಳು:
  ಅಧ್ಯಕ್ಷರಾಗಿ ಅವಿನಾಶ್, ಉಪಾಧ್ಯಕ್ಷರಾಗಿ ಪ್ರವೀಣ್‌ಕುಮಾರ್, ರಮೇಶ್, ಪ್ರಧಾನ ಕಾರ್ಯದರ್ಶಿಗಳಾಗಿ ಪ್ರಕಾಶ್, ಕಾರ್ತಿಕ್, ಸೋಷಿಯಲ್ ಮೀಡಿಯಾ ಮೇಲ್ವಿಚಾರಕರಾಗಿ ಪವನ್, ವಿದ್ಯಾರ್ಥಿ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್, ರೋಹಿತ್, ಕಾರ್ಯದರ್ಶಿಗಳಾಗಿ ಸುನಿಲ್, ಸಂಜಯ್, ಪ್ರಭಾಕರ್, ಆನಂದ್, ರಿತೀನ, ಅಭಿ, ಲೋಕೇಶ್ ಮತ್ತು ದರ್ಶನ್ ಪದಗ್ರಹಣ ಸ್ವೀಕರಿಸಿದರು.



Saturday, February 27, 2021

ಕ್ರಿಮಿನಲ್ ಪ್ರಕರಣಗಳಿಗೆ ಜಾಮೀನು ಕೊಡಿಸುತ್ತಿದ್ದ ದಲ್ಲಾಳಿಗೆ ಶಿಕ್ಷೆ

ದಲ್ಲಾಳಿ ಕುಮಾರ
    ಭದ್ರಾವತಿ, ಫೆ. ೨೭: ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳ ಪರವಾಗಿ ನ್ಯಾಯಾಲಯಕ್ಕೆ ಜಾಮೀನುದಾರರನ್ನು ಒದಗಿಸಿಕೊಡುತ್ತಿದ್ದ ದಲ್ಲಾಳಿಯೋರ್ವನಿಗೆ ೫ ತಿಂಗಳು ಸಾದ ಶಿಕ್ಷೆ ವಿಧಿಸಿರುವ ಘಟನೆ ನಡೆದಿದೆ.
   ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಚನಮರಡಿ ನಿವಾಸಿ ಕುಮಾರ ಎಂಬಾತ ಶಿಕ್ಷೆಗೆ ಒಳಗಾಗಿದ್ದಾನೆ. ಈತ ನ್ಯಾಯಾಲಯದ ಆವರಣದಲ್ಲಿ ಕ್ರಿಮಿನಲ್ ಪ್ರಕರಣಗಳ ಆರೋಪಿಗಳಿಗೆ ಜಾಮೀನು ಕೊಡಿಸುವುದನ್ನು ರೂಢಿಗತ ಮಾಡಿಕೊಂಡಿದ್ದು, ಈತನಿಗೆ ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರನ್ಯಾಯಲಯದ ನ್ಯಾಯಾಧೀಶರಾದ ಹೇಮಾವತಿ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.

ತಾಲೂಕು ಮಟ್ಟದ ಎರಡು ದಿನಗಳ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗೆ

ಮೊದಲ ಪಂದ್ಯ ಎಂಜೆಎ-ಮಾರುತಿ ಟೈಗರ್‍ಸ್ ತಂಡಗಳ ನಡುವೆ ಸೆಣಸಾಟ


ಬಿ.ವೈ.ಕೆ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಭದ್ರಾವತಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿರುವ ತಾಲೂಕು ಮಟ್ಟದ ಎರಡು ದಿನಗಳ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗೆ ಶನಿವಾರ ಸಂಜೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು. ಮೊದಲ ಪಂದ್ಯ ಎಂಜೆಎ-ಮಾರುತಿ ಟೈಗರ್‍ಸ್ ತಂಡಗಳ ನಡುವೆ ಸೆಣಸಾಟ ನಡೆಯಿತು.
   ಭದ್ರಾವತಿ, ಫೆ. ೨೭: ಬಿ.ವೈ.ಕೆ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಹಳೇನಗರದ ಕನಕಮಂಟಪ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿರುವ ತಾಲೂಕು ಮಟ್ಟದ ಎರಡು ದಿನಗಳ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗೆ ಶನಿವಾರ ಸಂಜೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು.
   ಪ್ರಪಥಮ ಬಾರಿಗೆ ನಗರದಲ್ಲಿ ನಡೆಯುತ್ತಿರುವ ಮ್ಯಾಟ್ ಒಳಗೊಂಡ ಪ್ರೊ ಕಬಡ್ಡಿ ಪಂದ್ಯಾವಳಿ ಇದಾಗಿದ್ದು, ಮೊದಲ ಪಂದ್ಯ ಮಾರುತಿ ಟೈಗರ್‍ಸ್ ಮತ್ತು ಎಂಜೆಎ ತಂಡಗಳ ನಡುವೆ ಸೆಣಸಾಟ ನಡೆಯಿತು. ಪಂದ್ಯಾವಳಿ ಒಟ್ಟು ೮ ತಂಡಗಳು ಸೆಣಸಾಟ ನಡೆಸಲಿವೆ. ನಗರದ ವಿವಿಧ ಭಾಗಗಳಿಂದ ಪಂದ್ಯಾವಳಿ ವೀಕ್ಷಣೆಗೆ ಕಬಡ್ಡಿ ಅಭಿಮಾನಿಗಳು, ಕ್ರೀಡಾಪಟುಗಳು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ವೀಕ್ಷಣೆಗೆ ಬೃಹತ್ ಎಲ್‌ಸಿಡಿ ವ್ಯವಸ್ಥೆ ಸಹ ಕಲ್ಪಿಸಲಾಗಿದೆ.
   ಉದ್ಘಾಟನಾ ಸಭಾರಂಭದಲ್ಲಿ ವಿವಿಧ ಕಬಡ್ಡಿ ತಂಡಗಳ ಮಾಲೀಕರಾದ ಮಾರುತಿ ಮೆಡಿಕಲ್ ಆನಂದ್, ಬಾಲಕೃಷ್ಣ, ಪೊಲೀಸ್ ಉಮೇಶ್, ಮಂಗೋಟೆ ರುದ್ರೇಶ್, ಮಣಿ ಎಎನ್‌ಎಸ್ ಹಾಗು ಹಿರಿಯ ಅಂತರಾಷ್ಟ್ರೀಯ ಕಬಡ್ಡಿ ಆಟಗಾರ, ಕ್ಲಬ್ ಅಧ್ಯಕ್ಷ ಎಚ್.ಎನ್ ಕೃಷ್ಣೇಗೌಡ, ಕಬ್ಲ್ ಪ್ರಧಾನ ಕಾರ್ಯದರ್ಶಿ ಎಚ್.ಆರ್ ರಂಗನಾಥ್, ಕಾರ್ಯದರ್ಶಿ ಮಾರ್ಕಂಡಯ್ಯ, ಖಜಾಂಚಿ ಎಸ್. ವಿಶ್ವನಾಥ್, ಉಪಾಧ್ಯಕ್ಷರಾದ ಚನ್ನಪ್ಪ, ಸಂಚಾಲಕರಾದ ಎಸ್.ಎನ್ ಸಿದ್ದಯ್ಯ, ವೈ. ವಸಂತಕುಮಾರ್, ಜಯರಾಮ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



ಲಯನ್ಸ್ ಕ್ಲಬ್ ಶುಗರ್ ಟೌನ್ ೩೪ ವರ್ಷಗಳ ಸಾರ್ಥಕ ಸೇವೆ

ಫೆ.೨೮ರಂದು 'ಅನನ್ಯ' ಪ್ರಾಂತೀಯ ಸಮ್ಮೇಳನ : ಕೆ. ಅನಂತಕೃಷ್ಣನಾಯಕ್

ಭದ್ರಾವತಿಯ ಲಯನ್ಸ್ ಕ್ಲಬ್ ಶುಗರ್‌ಟೌನ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಾಂತೀಯ ಅಧ್ಯಕ್ಷ ಕೆ. ಅನಂತಕೃಷ್ಣನಾಯಕ್ ಮಾತನಾಡಿದರು.
    ಭದ್ರಾವತಿ, ಫೆ. ೨೭: ಹಲವು ಸಮಾಜ ಮುಖಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ನಗರದ ಲಯನ್ಸ್ ಕ್ಲಬ್ ಶುಗರ್ ಟೌನ್ ತನ್ನ ೩೪ನೇ ವರ್ಷದ ಸವಿ ನೆನಪಿನಲ್ಲಿ ಫೆ.೨೮ರಂದು ಪ್ರಾಂತೀಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಲು ಸಕಲ ಸಿದ್ದತೆಗಳನ್ನು ಕೈಗೊಂಡಿದೆ ಎಂದು ಪ್ರಾಂತೀಯ ಅಧ್ಯಕ್ಷ ಕೆ. ಅನಂತಕೃಷ್ಣನಾಯಕ್ ತಿಳಿಸಿದರು.
  ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ೧೭ ಆಗಸ್ಟ್ ೧೯೮೭ರಲ್ಲಿ ಆರಂಭಗೊಂಡ ಸ್ಥಾಪನೆಗೊಂಡ ಕ್ಲಬ್ ಜನಸೇವೆಯೇ ಜನಾರ್ಧನ ಸೇವೆ ಎಂಬ ಧ್ಯೇಯೋದ್ದೇಶದೊಂದಿಗೆ ಹಲವು ಸೇವಾ ಕಾರ್ಯಗಳೊಂದಿಗೆ ಮುನ್ನಡೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ವಿಶೇಷವಾಗಿ ಸುಮಾರು ೧೫ ವರ್ಷಗಳ ಕಾಲ ನೇತ್ರ ಚಿಕಿತ್ಸಾ ಶಿಬಿರ ನಡೆಸಿಕೊಂಡು ಬರುವ ಜೊತೆಗೆ ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ ಹುಟ್ಟುಹಾಕುವಲ್ಲಿ ನಾಂದಿಯಾಗಿದೆ. ಅಲ್ಲದೆ ಲಯನ್ಸ್ ಎಜುಕೇಷನ್ ಟ್ರಸ್ಟ್ ಎಂಬ ಅಂಗಸಂಸ್ಥೆಯನ್ನು ಹುಟ್ಟುಹಾಕುವ ಮೂಲಕ ಸುಮಾರು ೩೨ ವರ್ಷಗಳಿಂದ ವಿಕಲಚೇತನ ಮಕ್ಕಳಿಗಾಗಿ 'ತರಂಗ ಕಿವುಡು, ಮೂಗ ಮಕ್ಕಳ ಶಾಲೆ' ನಡೆಸಿಕೊಂಡು ಬರಲಾಗುತ್ತಿದೆ. ಒಟ್ಟಾರೆ ಕ್ಲಬ್ ಸಮಾಜಕ್ಕೆ ತನ್ನದೇ ಆದ ಸಾರ್ಥಕ ಸೇವೆಯನ್ನು ಸಲ್ಲಿಸುತ್ತಿದೆ ಎಂದರು.
   ತಾವು ಪ್ರಾಂತೀಯ ಅಧ್ಯಕ್ಷರಾದ ನಂತರ ೧೦ ಕ್ಲಬ್‌ಗಳ ಜೊತೆಗೆ ಹೊಸದಾಗಿ ೩ ಕ್ಲಬ್‌ಗಳನ್ನು ರಚಿಸಲಾಗಿದೆ. ಪ್ರಸ್ತುತ ೪೩೫ ಸದಸ್ಯರಿದ್ದು, ಭವಿಷ್ಯದಲ್ಲಿ ಈ ಸದಸ್ಯರು ಮತ್ತಷ್ಟು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಸ್ಪೂರ್ತಿಯಾಗಬೇಕೆಂಬ ಹಾಗು ಸದಸ್ಯರ ಸಂಖ್ಯೆ ಹೆಚ್ಚಿಸುವ ಉದ್ದೇಶದಿಂದ 'ಅನನ್ಯ' ಹೆಸರಿನಲ್ಲಿ ಪ್ರಾಂತೀಯ ಸಮ್ಮೇಳನ ಫೆ.೨೮ರಂದು ಸಂಜೆ ೪ ಗಂಟೆಗೆ ನಡೆಸಲಾಗುತ್ತಿದೆ.  ಈ ಸಮ್ಮೇಳನದಲ್ಲಿ ವ್ಯಾಗ್ಮಿಗಳಾದ ಚಕ್ರವರ್ತಿ ಸೂಲಿಬೆಲೆ ಹಾಗು ಡಾ.ಕೆ.ಪಿ ಪುತ್ತುರಾಯ ಪಾಲ್ಗೊಳ್ಳಲಿದ್ದಾರೆ. ಪಿಡಿಜಿ ದಿವಾಕರ್, ವಿಡಿಜಿ-೧ ವಿಶ್ವನಾಥಶೆಟ್ಟಿ, ವಿಡಿಜಿ-೨ ಕೆ.ಸಿ ವೀರಭದ್ರಪ್ಪ, ರಿಜಿಯನ್ ಫೈಲಟ್ ಎಂ.ಎಸ್ ಜರ್ನಾಧನ ಅಯ್ಯಂಗಾರ್, ಪಾಲಾಕ್ಷಪ್ಪ, ಜಿ.ಎಸ್ ಕುಮಾರ್, ಕ್ಲಬ್ ಅಧ್ಯಕ್ಷ ಬಿ. ನಿತ್ಯಾನಂದ ಪೈ, ಕಾರ್ಯದರ್ಶಿ ತಮ್ಮೇಗೌಡ ಮತ್ತು ಖಜಾಂಚಿ ಎಂ.ಸಿ ಯೋಗೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. ಸುಮಾರು ೪೫೦ ರಿಂದ ೫೦೦ ಲಯನ್ಸ್ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.
   ಕಾನ್ಫರೆನ್ಸ್ ಕಮಿಟಿ ಛೇರ್‌ಮನ್ ಡಾ. ಟಿ. ನರೇಂದ್ರಭಟ್ ಮಾತನಾಡಿ, ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಸಮಾಜಮುಖಿ ಚಿಂತನೆಗಳು ಪ್ರತಿಯೊಬ್ಬರಲ್ಲೂ ಬೆಳೆಯಬೇಕು. ಈ ನಿಟ್ಟಿನಲ್ಲಿ ಆರಂಭಗೊಂಡ ಕ್ಲಬ್‌ಗೆ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ೧ ಎಕರೆ, ೨೦ ಗುಂಟೆ ಜಾಗವನ್ನು ಲೀಸ್ ಆಧಾರದಲ್ಲಿ ಕ್ಲಬ್‌ಗೆ ನೀಡಿದ್ದು, ೧೯೯೦ರಲ್ಲಿ ತನ್ನದೇ ಆದ ಸ್ವಂತ ಕಟ್ಟಡವನ್ನು ಕ್ಲಬ್ ನಿರ್ಮಿಸಿಕೊಂಡಿತು. ಇದರ ಜೊತೆಗೆ ಸರ್‌ಎಂವಿ ಸ್ಪೂರ್ತಿವನ ಹಾಗು ಕೋಟಾ ಶಿವರಾಮಕಾರಂತ ವನ ಎಂಬ ಎರಡು ವನಗಳನ್ನು ರೂಪಿಸಲಾಗಿದ್ದು, ಇದೀಗ ಕ್ಲಬ್ ಆವರಣದಲ್ಲಿ ಹಸಿರು ಕಂಗೊಳಿಸುತ್ತಿದೆ. ಇದು ಕ್ಲಬ್‌ನ ಮತ್ತೊಂದು ಮಹತ್ವದ ಕಾರ್ಯವಾಗಿದೆ ಎಂದರು.
   ಇತ್ತೀಚೆಗೆ ಸುಮಾರು ೧೮ ಲಕ್ಷ ರು. ವೆಚ್ಚದಲ್ಲಿ ಕ್ಲಬ್‌ನ ಕಟ್ಟಡ ಹಾಗು ತರಂಗ ಶಾಲಾ ಕಟ್ಟಡಗಳನ್ನು ಸಂಪೂರ್ಣವಾಗಿ ನವೀಕರಿಸಲಾಗಿದೆ. ಈ ಕಾರ್ಯಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
  ಕ್ಲಬ್ ಅಧ್ಯಕ್ಷ ಬಿ. ನಿತ್ಯಾನಂದಪೈ, ಕಾರ್ಯದರ್ಶಿ ತಮ್ಮೇಗೌಡ, ಜಿ.ಎಸ್ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Friday, February 26, 2021

ಎಲ್ಲರ ಮೆಚ್ಚುಗೆಗೆ ಪಾತ್ರರಾದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ

ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್

   
   ಭದ್ರಾವತಿ, ಫೆ. ೨೬: ಶಿವಮೊಗ್ಗ ಜಿಲ್ಲೆಯ ಸಮಗ್ರ ಅಭಿವೃದ್ಧಿಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪ್ರಮುಖ ಪಾತ್ರವಹಿಸಿದ್ದು, ಅಲ್ಲದೆ ನಾಡಿನ ಎಲ್ಲಾ ಧರ್ಮ, ಜಾತಿ, ಜನಾಂಗಗಳ ಏಳಿಗಾಗಿ ಶ್ರಮಿಸುವ ಜೊತೆಗೆ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರ ಮೇಲಿನ ಅಭಿಮಾನದ ಹಿನ್ನಲೆಯಲ್ಲಿ ಅವರನ್ನು ವಿಶೇಷವಾಗಿ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಅಭಿನಂದಿಸಲು ಜಿಲ್ಲೆಯ ಎಲ್ಲಾ ತಾಲೂಕಿನ ಸಮಸ್ತ ಅಭಿಮಾನ ಬಳಗ ಮುಂದಾಗಿದೆ ಎಂದು ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್ ತಿಳಿಸಿದರು.   
    ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಫೆ.೨೮ ಹಾಗು ಮಾ.೧ರಂದು ಶಿವಮೊಗ್ಗ ವಿನೋಬನಗರದ ಹಳೇ ಜೈಲು ಆವರಣದಲ್ಲಿ ಜಿಲ್ಲೆಯ ಸಮಸ್ತ ನಾಗರೀಕರ ಪರವಾಗಿ 'ನಮ್ಮೊಲುಮೆ.. ಅಭಿಮಾನದ ಅಭಿನಂದನೆ' ಭಾವಾಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಕ್ಷೇತ್ರದ ಸಮಸ್ತ ನಾಗರೀಕರು ಪಾಲ್ಗೊಳ್ಳುವಂತೆ ಮನವಿ ಮಾಡಿದರು.
      ಹುಟ್ಟುಹಬ್ಬ ವಿಶೇಷವಾಗಿ ಆಚರಣೆ :
    ತಾಲೂಕು ಪಂಚಾಯಿತಿ ಸದಸ್ಯ ಕೆ. ಮಂಜುನಾಥ್ ಮಾತನಾಡಿ, ನಗರದಲ್ಲಿ ಬಿ.ವೈ.ರಾಘವೇಂದ್ರ ಹಾಗೂ ಬಿ.ಎಸ್ ಯಡಿಯೂರಪ್ಪ ಅಭಿಮಾನಿ ಬಳಗದ ವತಿಯಿಂದ ಕಳೆದ ೧೩ ವರ್ಷಗಳಿಂದಲೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರು ಮತ್ತು ಸಂಸದ ಬಿ.ವೈ ರಾಘವೇಂದ್ರರವರ ಹುಟ್ಟುಹಬ್ಬ ವಿಶೇಷವಾಗಿ ಅಚರಿಸಿಕೊಂಡು ಬರಲಾಗುತ್ತಿದೆ. ರಕ್ತದಾನ ಶಿಬಿರ, ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ, ನೋಟ್ ಪುಸ್ತಕ ವಿತರಣೆ, ರೈತರಿಗೆ ತೆಂಗಿನ ಸಸಿ ವಿತರಣೆ, ಹಳೇನಗರ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಹಾಲು, ಹಣ್ಣು ಬ್ರೆಡ್ ವಿತರಣೆ ಸೇರಿದಂತೆ ಇನ್ನಿತರ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದರು.
    ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಸೂಡಾ ಸದಸ್ಯರಾದ ವಿ. ಕದಿರೇಶ್, ರಾಮಲಿಂಗಯ್ಯ, ಹಟ್ಟಿಚಿನ್ನದ ಗಣಿ ಆಡಳಿತ ಮಂಡಳಿ ನಿರ್ದೇಶಕ ಕೂಡ್ಲಿಗೆರೆ ಹಾಲೇಶ್, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಟಿ.ಎಸ್ ದುಗ್ಗೇಶ್, ಶ್ರೀ ಸತ್ಯಸಾಯಿ ಸೇವಾ ಕ್ಷೇತ್ರಗಳ ರಾಜ್ಯ ಸಂಯೋಜಕ ಪ್ರಭಾಕರ ಬೀರಯ್ಯ, ಪಕ್ಷದ ಪ್ರಮುಖರಾದ ಜಿ. ಆನಂದಕುಮಾರ್, ಕೃಷ್ಣ ಛಲವಾದಿ, ಅವಿನಾಶ್, ವಿವಿಧ ಸಮಾಜಗಳ ಮುಖಂಡರಾದ ಆರ್. ಮಹೇಶ್‌ಕುಮಾರ್, ಎಸ್. ಮಂಜುನಾಥ್, ಡಿ.ಕೆ ರಾಘವೇಂದ್ರರಾವ್, ಎ.ಟಿ ರವಿ, ವೀರಭದ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಆಮ್ ಆದ್ಮಿ ಪಾರ್ಟಿಯಿಂದ ದೇಶದಲ್ಲಿ ಹೊಸ ಬದಲಾವಣೆ, ಹೊಸ ರಾಜಕೀಯ ಸ್ವರೂಪ

೭ನೇ ವರ್ಷದ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷ ವಿಜಯ್ ಶರ್ಮ


ಭದ್ರಾವತಿ ಮಿಲ್ಟ್ರಿಕ್ಯಾಂಪ್‌ನ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರದಲ್ಲಿ ಆಮ್ ಆದ್ಮಿ ಪಾರ್ಟಿ ತಾಲೂಕು ಘಟಕದ ವತಿಯಿಂದ ೭ನೇ ವರ್ಷದ ಸಂಸ್ಥಾಪನಾ ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
   ಭದ್ರಾವತಿ, ಫೆ. ೨೬: ಆಮ್ ಆಮ್ ಆದ್ಮಿ ಪಾರ್ಟಿ ದೇಶದಲ್ಲಿ ಹೊಸ ಬದಲಾವಣೆ ತರಬೇಕು. ರಾಜಕೀಯ ಸ್ವರೂಪ ಬದಲಾಗಬೇಕೆಂಬ ಉದ್ದೇಶದಿಂದ ಜನ್ಮತಾಳಿದ ಪಕ್ಷವಾಗಿದೆ ಎಂದು ಪಕ್ಷದ ರಾಜ್ಯ ಉಪಾಧ್ಯಕ್ಷ ವಿಜಯ್ ಶರ್ಮ ತಿಳಿಸಿದರು.
   ಅವರು ನಗರದ ಮಿಲ್ಟ್ರಿಕ್ಯಾಂಪ್‌ನ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರದಲ್ಲಿ ಆಮ್ ಆದ್ಮಿ ಪಾರ್ಟಿ ತಾಲೂಕು ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೭ನೇ ವರ್ಷದ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
   ಪಕ್ಷದ ಹೋರಾಟ ಬಿಜೆಪಿ, ಕಾಂಗ್ರೆಸ್ ವಿರುದ್ದವಲ್ಲ ಬದಲಾಗಿ ಹಣ, ಜಾತಿ, ಧರ್ಮ ರಾಜಕಾರಣದ ವಿರುದ್ಧ ಹಾಗು ಶೀಲಕೆಟ್ಟ, ನೀತಿಕೆಟ್ಟ ರಾಜಕಾರಣ ವಿರುದ್ಧವಾಗಿದೆ. ಇವುಗಳನ್ನು ಸೋಲಿಸುವ ಮೂಲಕ ದೇಶದ ಜನರು ಆಮ್ ಆದ್ಮಿ ಪಾರ್ಟಿ ಬೆಂಬಲಿಸುತ್ತಿದ್ದಾರೆ ಎಂದರು.
   ಆಮ್ ಆದ್ಮಿ ಪಾರ್ಟಿ ದೆಹಲಿಯಲ್ಲಿ ಅಧಿಕಾರಕ್ಕೆ ಬಂದ ನಂತರ ದೆಹಲಿ ಚಿತ್ರಣವೇ ಸಂಪೂರ್ಣವಾಗಿ ಬದಲಾಗಿದೆ. ಪ್ರತಿಯೊಂದರಲ್ಲೂ ಪಾರದರ್ಶಕತೆ, ಆಡಳಿತ ವ್ಯವಸ್ಥೆ ಪ್ರತಿಯೊಬ್ಬರ ಮನೆ ಬಾಗಿಲಿಗೆ ಬಂದು ತಲುಪಿದೆ. ಸರ್ಕಾರಿ ಶಾಲಾ-ಕಾಲೇಜುಗಳು, ಸರ್ಕಾರಿ ಆಸ್ಪತ್ರೆಗಳು ಸೇರಿದಂತೆ ಎಲ್ಲಾ ಸರ್ಕಾರಿ ಕಛೇರಿಗಳು ಸಾಕಷ್ಟು ಬದಲಾವಣೆಗಳಾಗಿವೆ. ಈ ಮಾದರಿ ವ್ಯವಸ್ಥೆಯನ್ನು ದೇಶಾದ್ಯಂತ ತರಬೇಕೆಂಬುದು ಪಕ್ಷದ ಆಶಯವಾಗಿದೆ. ಈ ನಿಟ್ಟಿನಲ್ಲಿ ಮುಂಬರುವ ಸ್ಥಳೀಯ ಸಂಸ್ಥೆ ಚುನವಣೆಗಳು ಸೇರಿದಂತೆ ಸಾರ್ವಜನಿಕ ಚುನಾವಣೆಗಳಲ್ಲಿ ಆಮ್ ಆದ್ಮಿ ಪಾರ್ಟಿ ಸ್ಪರ್ಧೆ ನಡೆಸಲಿದೆ ಎಂದರು.
   ಹಿರಿಯ ಕಾರ್ಮಿಕ ಮುಖಂಡ ಡಿ.ಸಿ ಮಾಯಣ್ಣ ಮಾತನಾಡಿ, ಇಂದು ದೇಶದಲ್ಲಿ ರಾಜಕೀಯ ಆಡಳಿತ ವ್ಯವಸ್ಥೆ ಹದಗೆಟ್ಟಿದೆ. ಜನಸಾಮಾನ್ಯರ ವಿರುದ್ಧ ಹಲವಾರು ಕಾಯ್ದೆಗಳನ್ನು ರೂಪಿಸುವ ಮೂಲಕ ಶೋಷಿಸಲಾಗುತ್ತಿದೆ. ರೈತರು, ಕಾರ್ಮಿಕರ ವಿರುದ್ಧ ಮಾರಕವಾದ ಕಾಯ್ದೆಗಳನ್ನು ರೂಪಿಸಲಾಗುತ್ತಿದೆ. ಎಲ್ಲಾ ಸರ್ಕಾರಿ ಉದ್ಯಮಗಳನ್ನು ಖಾಸಗೀಕರಣಗೊಳಿಸಲಾಗುತ್ತಿದೆ. ದೇಶದ ಜನರಲ್ಲಿ ಸಮಾನತೆ ಪರಿಕಲ್ಪನೆ ಆಧಾರ ಮೇಲೆ ದೇಶದ ಅಭಿವೃದ್ಧಿ ಬಗ್ಗೆ ಚಿಂತಿಸುವ ಆಲೋಚನೆ ಬಿತ್ತುವ ಬದಲು ಜಾತಿ, ಧರ್ಮದ ಹೆಸರಿನಲ್ಲಿ ದಾರಿ ತಪ್ಪಿಸಲಾಗುತ್ತಿದೆ ಎಂದು ಆರೋಪಿಸಿದರು.
    ಪ್ರಸ್ತುತ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ವಿನಾಶದ ಅಂಚಿಗೆ ಸಾಗಿದೆ. ಸಂವಿಧಾನದ ಆಶಯದಂತೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರಕ್ಷಿಸಿಕೊಳ್ಳಬೇಕಾದ ಜವಾಬ್ದಾರಿ ಇದೀಗ ಪ್ರತಿಯೊಬ್ಬರ ಮೇಲಿದೆ. ಈ ನಿಟ್ಟಿನಲ್ಲಿ ಎಲ್ಲರೂ ಸಂಘಟಿತರಾಗಬೇಕಾಗಿದೆ ಎಂದರು.
   ಪಕ್ಷದ ರಾಜ್ಯ ಸಂಘಟನಾ ಸಂಯೋಜಕ ಗೋಪಾಲ್, ರಾಜ್ಯ ಜಂಟಿ ಕಾರ್ಯದರ್ಶಿ ಎಂ.ಪಿ ದರ್ಶನ್ ಜೈನ್, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ವಿ ವೀರೇಶ್, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸುರೇಶ್, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಸೋಮಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದು ಮಾತನಾಡಿದರು.
   ಎಂಪಿಎಂ ಕಾರ್ಮಿಕರ ಸಂಘದ ಮಾಜಿ ಅಧ್ಯಕ್ಷ ಎಸ್ ಚಂದ್ರಶೇಖರ್, ಉದ್ಯಮಿ ಶ್ರೀನಿವಾಸ್, ಪಕ್ಷದ ಮುಖಂಡರಾದ ಪರಮೇಶ್ವರಚಾರ್, ಮುಳ್ಕೆರೆ ಲೋಕೇಶ್, ಇಬ್ರಾಹಿಂ ಖಾನ್, ಜಾವಿದ್, ಪೀಟರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜೋಸೆಫ್ ನಿರೂಪಿಸಿದರು. ಬಿ.ಕೆ ರಮೇಶ್ ಸ್ವಾಗತಿಸಿದರು. ಎನ್.ಪಿ ಜೋಸೆಫ್ ವಂದಿಸಿದರು. ವಿಶೇಷವಾಗಿ ಮಕ್ಕಳಿಂದ ಪಕ್ಷದ ೭ನೇ ವರ್ಷದ ಸಂಸ್ಥಾಪನಾ ದಿನಕ್ಕೆ ಚಾಲನೆ ನೀಡಲಾಯಿತು.

Thursday, February 25, 2021

ಮಹಿಳೆಯರಿಗೆ ಮಾನಸಿಕ ಆರೋಗ್ಯ ಸಹ ಬಹಳ ಮುಖ್ಯ : ಡಾ. ಎಂ.ವಿ ಅಶೋಕ್

ಭದ್ರಾವತಿ ಜನ್ನಾಪುರ ಎನ್‌ಟಿಬಿ ಕಛೇರಿ ರಸ್ತೆಯಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ ವತಿಯಿಂದ ನೆಹರೂ ಯುವಕ ಕೇಂದ್ರದ ಪ್ರತಿನಿಧಿಗಳಿಗೆ ಆರೋಗ್ಯ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಫೆ. ೨೫: ಮಹಿಳೆಯರಿಗೆ ಕೇವಲ ದೈಹಿಕ ಆರೋಗ್ಯ ಮಾತ್ರವಲ್ಲದೆ ಮಾನಸಿಕ ಆರೋಗ್ಯ ಸಹ ಬಹಳ ಮುಖ್ಯ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ತಿಳಿಸಿದರು.
ಅವರು ಗುರುವಾರ ಜನ್ನಾಪುರ ಎನ್‌ಟಿಬಿ ಕಛೇರಿ ರಸ್ತೆಯಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ ವತಿಯಿಂದ ನೆಹರೂ ಯುವಕ ಕೇಂದ್ರದ ಪ್ರತಿನಿಧಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಮಹಿಳೆಯರು ಕುಟುಂಬದ ಆಧಾರಸ್ತಂಭಗಳಾಗಿದ್ದು, ವೈಯಕ್ತಿಕ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಹೆಚ್ಚಿನ ಮಹಿಳೆಯರು ಮಾನಸಿಕ ಒತ್ತಡಕ್ಕೆ ಒಳಗಾಗಿ ಹಲವಾರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಅಗತ್ಯವಾಗಿದೆ ಎಂದರು.
   ಶಿವಮೊಗ್ಗ ನೆಹರೂ ಯುವ ಕೇಂದ್ರದ ಜಲ್ಲಾ ಯುವ ಅಧಿಕಾರಿ ಉಲ್ಲಾಸ್ ಮಾತನಾಡಿ, ಯುವ ಸಮುದಾಯಗಳ ಎಲ್ಲಾ ಚಟುವಟಿಕೆಗಳಿಗೆ ಯುವ ಕೇಂದ್ರ ಪೂರಕವಾಗಿ ಸ್ಪಂದಿಸಲಿದೆ. ಎಲ್ಲಾ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳುವ ಜೊತೆಗೆ ಸಮುದಾಯದ ಸಂಘಟನೆಯಲ್ಲಿ ಪಾಲ್ಗೊಳ್ಳುವಿಕೆ ಹೆಚ್ಚಿಸಬೇಕೆಂದು ಕರೆ ನೀಡಿದರು.
    ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಗೌಡ, ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ರೇವತಿ, ಆಶಾ ಮೇಲ್ವಿಚಾರಕಿ ವಸಂತ ಸೇರಿದಂತೆ ಇನ್ನಿತರರು ಮಹಿಳೆಯರ ಆರೋಗ್ಯ ಕಾಳಜಿ ಕುರಿತು ಮಾಹಿತಿ ನೀಡಿದರು.
ಸ್ನೇಹ ಮಿಲನ ಮಹಿಳಾ ತಂಡದ ಅಧ್ಯಕ್ಷೆ ಕವಿತಾ ಸುರೇಶ್, ಪಿರಾಮಿಡ್ ಧ್ಯಾನಮಾಸ್ಟರ್ ಶುಭಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
     ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದ ಅಧ್ಯಕ್ಷ ತಮಟೆ ಜಗದೀಶ್ ಕಾರ್ಯಕ್ರಮ ನಿರ್ವಹಿಸಿದರು. ಯೋಗ ಶಿಕ್ಷಕಿ ಭಾರತಿ ಜಯರಾಮ್ ನಿರೂಪಿಸಿದರು. ಜನಪದ ಕಲಾವಿದ ದಿವಾಕರ್, ರಂಗಭೂಮಿ ಕಲಾವಿದ ಜಿ. ರವಿಕುಮಾರ್ ತಂಡದಿಂದ ಜಾನಪದ ಗೀತೆ ಗಾಯನ ನಡೆಯಿತು.
    ಹಿರಿಯ ಆರೋಗ್ಯ ಸಹಾಯಕ ಆನಂದಮೂರ್ತಿ, ವಿಪುಲರಾವ್, ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಬಸವರಾಜ ಜಿ. ಆನೆಕೊಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ಬಾಂಧ್ಯವ ಸ್ವಸಹಾಯ ಸಂಘದ ಧನಲಕ್ಷ್ಮಿ ಹಾಗು ನೆಹರೂ ಯುವ ಕೇಂದ್ರದ ಪ್ರತಿನಿಧಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಚಿಕ್ಕಬಳ್ಳಾಪುರ ಕಲ್ಲು ಗಣಿಗಾರಿಕೆ ಸ್ಪೋಟ ಪ್ರಕರಣ : ಜಯ ಕರ್ನಾಟಕ ಜನಪರ ವೇದಿಕೆ ಖಂಡನೆ

ಸ್ಪೋಟದಲ್ಲಿ ಮೃತಪಟ್ಟ ಬಡ ಕಾರ್ಮಿಕರ ಕುಟುಂಬಗಳಿಗೆ ತಲಾ ೨೦ ಲಕ್ಷ ರು. ಪರಿಹಾರ ನೀಡಿ

ಜಯ ಕರ್ನಾಟಕ ಜನಪರ ವೇದಿಕೆವತಿಯಿಂದ ಭದ್ರಾವತಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಕಲ್ಲು ಗಣಿಗಾರಿಕೆಯೊಂದರಲ್ಲಿ ನಡೆದಿರುವ ಸ್ಪೋಟ ಪ್ರಕರಣವನ್ನು ಖಂಡಿಸುವ ಜೊತೆಗೆ ಮೃತಪಟ್ಟಿರುವ ಬಡ ಕುಟುಂಬಗಳಿಗೆ ತಲಾ ೨೦ ಲಕ್ಷ ರು. ಪರಿಹಾರ ನೀಡುವಂತೆ ಆಗ್ರಹಿಸಿ ಗುರುವಾರ ಮುಖ್ಯಮಂತ್ರಿಗಳಿಗೆ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಮೂಲಕ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಫೆ. ೨೫: ಜಯ ಕರ್ನಾಟಕ ಜನಪರ ವೇದಿಕೆವತಿಯಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಕಲ್ಲು ಗಣಿಗಾರಿಕೆಯೊಂದರಲ್ಲಿ ನಡೆದಿರುವ ಸ್ಪೋಟ ಪ್ರಕರಣವನ್ನು ಖಂಡಿಸುವ ಜೊತೆಗೆ ಮೃತಪಟ್ಟಿರುವ ಬಡ ಕುಟುಂಬಗಳಿಗೆ ತಲಾ ೨೦ ಲಕ್ಷ ರು. ಪರಿಹಾರ ನೀಡುವಂತೆ ಆಗ್ರಹಿಸಿ ಗುರುವಾರ ಮುಖ್ಯಮಂತ್ರಿಗಳಿಗೆ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಮೂಲಕ ಮನವಿ ಸಲ್ಲಿಸಲಾಯಿತು.  
    ಸಂಘಟನೆಯ ಪ್ರಮುಖರು ಮಾತನಾಡಿ, ಇತ್ತೀಚೆಗೆ ಶಿವಮೊಗ್ಗ ಜಿಲ್ಲೆ ಹುಣಸೋಡು ಬಳಿ ಕಲ್ಲು ಗಣಿಗಾರಿಕೆಯಲ್ಲಿ ಜಿಲೆಟಿನ್ ತುಂಬಿದ್ದ ಲಾರಿ ಸ್ಪೋಟಗೊಂಡ ಪರಿಣಾಮ ಒಟ್ಟು ೮ ಜನ ಮೃತಪಟ್ಟರು. ಆದರೂ ಸಹ ಸರ್ಕಾರ ಇನ್ನೂ ಎಚ್ಚೆತ್ತುಕೊಂಡಿಲ್ಲ. ಅಕ್ರಮ ಗಣಿಗಾರಿಕೆಯೇ ಸ್ಪೋಟಕ್ಕೆ ಮುಖ್ಯ ಕಾರಣವಾಗಿದ್ದು, ಅಕ್ರಮ ಗಣಿಗಾರಿಕೆ ತಡೆಯುವಲ್ಲಿ ಸರ್ಕಾರ ಹಾಗು ಅಧಿಕಾರಿಗಳು ವಿಫಲರಾಗಿದ್ದಾರೆಂದು ಆರೋಪಿಸಿದರು.
   ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಗೆ ಬಡ ಕೂಲಿ ಕಾರ್ಮಿಕರು ಬಲಿಯಾಗುತ್ತಿದ್ದು,  ಸ್ಪೋಟ ಪ್ರಕರಣದಲ್ಲಿ ಮೃತಪಟ್ಟಿರುವ ಕುಟುಂಬಗಳಿಗೆ ಸರ್ಕಾರ ಕೇವಲ ತಲಾ ರು. ೫ ಲಕ್ಷ ಪರಿಹಾರ ನೀಡುತ್ತಿರುವುದು ಸರಿಯಲ್ಲ. Pರು. ೫ ಲಕ್ಷ ಪರಿಹಾರದಿಂದ ಬಡಕುಟುಂಬಗಳು ನೆಮ್ಮದಿ ಕಾಣಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ತಲಾ ೨೦ ಲಕ್ಷ ಪರಿಹಾರ ನೀಡುವಂತೆ ಹಾಗು ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ನಡೆದಿರುವ ಸ್ಪೋಟ ಪ್ರಕರಣಗಳನ್ನು ಉನ್ನತಮಟ್ಟದ ತನಿಖೆಗೆ ಒಳಪಡಿಸಿ ಅಕ್ರಮ ಗಣಿಗಾರಿಕೆ ತಡೆಯುವಲ್ಲಿ ವಿಫಲರಾಗಿರುವ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಯಿತು.
   ವೇದಿಕೆ ತಾಲೂಕು ಅಧ್ಯಕ್ಷ ಎಸ್.ಎಸ್ ಭೈರಪ್ಪ ನೇತೃತ್ವ ವಹಿಸಿದ್ದರು. ಜಿಲ್ಲಾ ಕಾರ್ಯಾಧ್ಯಕ್ಷ ಕೆ. ಸುದೀಪ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ಜಾರ್ಜ್, ತಾಲೂಕು ಪ್ರಧಾನ ಕಾರ್ಯದರ್ಶಿ ಡಿ. ನರಸಿಂಹಮೂರ್ತಿ, ಮಹಿಳಾ ಘಟಕದ ಅಧ್ಯಕ್ಷೆ ರೂಪ, ಪ್ರಮುಖರಾದ ಪ್ರಾನ್ಸಿಸ್, ಎಚ್.ಎಂ ಮಹಾದೇವಯ್ಯ, ಮುಕುಂದಯ್ಯ, ಜೆಬಿಟಿ ಬಾಬು, ಮುಸ್ವೀರ್ ಬಾಷಾ, ಶೋಭಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Wednesday, February 24, 2021

ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ : ಮನವಿ

ಪೆಟ್ರೋಲ್, ಡೀಸೆಲ್ ಹಾಗು ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಭದ್ರಾವತಿಯಲ್ಲಿ ಬುಧವಾರ ಭಾರತ ಕಮ್ಯುನಿಷ್ಟ್ ಪಕ್ಷ(ಮಾರ್ಕ್ಸ್‌ವಾದಿ) ಶಿವಮೊಗ್ಗ ಜಿಲ್ಲಾ ಸಮಿತಿ ವತಿಯಿಂದ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ಪ್ರಧಾನಮಂತ್ರಿಗಳಿಗೆ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಫೆ. ೨೪: ಪೆಟ್ರೋಲ್, ಡೀಸೆಲ್ ಹಾಗು ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಬುಧವಾರ ಭಾರತ ಕಮ್ಯುನಿಷ್ಟ್ ಪಕ್ಷ(ಮಾರ್ಕ್ಸ್‌ವಾದಿ) ಶಿವಮೊಗ್ಗ ಜಿಲ್ಲಾ ಸಮಿತಿ ವತಿಯಿಂದ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ಪ್ರಧಾನಮಂತ್ರಿಗಳಿಗೆ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.
    ಪೆಟ್ರೋಲ್, ಡೀಸೆಲ್ ಹಾಗು ಅಡುಗೆ ಅನಿಲ ಬೆಲೆ ಏರಿಕೆಯಿಂದಾಗಿ ಇತರೆ ಅಗತ್ಯ ವಸ್ತುಗಳ ಬೆಲೆ ಸಹ ಹೆಚ್ಚಳವಾಗಿದೆ. ಇದರಿಂದಾಗಿ ಬಡ, ಮಧ್ಯಮ ಶ್ರೀಸಾಮಾನ್ಯರ ಬದುಕು ಇನ್ನಷ್ಟು ಸಂಕಷ್ಟಕ್ಕೆ ತಳ್ಳಿದೆ ಎಂದು ಅಳಲು ವ್ಯಕ್ತಪಡಿಸಲಾಯಿತು.
   ೨೦೧೪ರಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಪೆಟ್ರೋಲ್ ದರ ರು.೭೨ ಅಸುಪಾಸಿನಲ್ಲಿದ್ದು, ಅಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಛಾತೈಲದ ಬೆಲೆ ಒಂದು ಬ್ಯಾರಲ್‌ಗೆ ೧೧೦ ಡಾಲರ್‌ಗಳ ಆಸುಪಾಸಿನಲ್ಲಿತ್ತು. ಪ್ರಸ್ತುತ ಕಚ್ಛಾತೈಲದ ಬೆಲೆ ೫೬ ಡಾಲರ್‌ಗಳಿಗೆ ಇಳಿದಿದೆ. ಶೇ.೫೦ರಷ್ಟು ಬೆಲೆ ಕಡಿಮೆಯಾಗಿದ್ದು, ಈ ಪ್ರಕಾರ ಪ್ರಸ್ತುತ ಪೆಟ್ರೋಲ್ ಬೆಲೆ ರು.೩೬ ಗಳಾಗಬೇಕಿತ್ತು. ಆದರೆ ಹೆಚ್ಚುವರಿಯಾಗಿ ಸುಮಾರು ರು.೫೪ ಪಡೆಯಲಾಗುತ್ತಿದೆ. ಇದರಿಂದಾಗಿ ರು.೧೦೦ರ ಗಡಿ ದಾಡುತ್ತಿರುವುದು ವಿಪರ್ಯಾಸದ ಸಂಗತಿಯಾಗಿದ್ದು, ಹೆಚ್ಚುವರಿಯಾಗಿ ಪಡೆಯುತ್ತಿರುವ ಹಣ ಎಲ್ಲಿಗೆ ಹೋಗುತ್ತಿದೆ ಎಂದು ಪ್ರಶ್ನಿಸಲಾಯಿತು.
   ಕೇಂದ್ರ ಸರ್ಕಾರ ಕಾರ್ಪೋರೇಟ್ ಕಂಪನಿಗಳು, ಶ್ರೀಮಂತರು ಹಾಗು ಬೆಂಬಲಿಗರ ಪರವಾಗಿದ್ದು, ಇದರಿಂದಾಗಿ ಬಡ, ಮಧ್ಯಮ ಶ್ರೀಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈಗಾಲೇ ಕೊರೋನಾ ಮಹಾಸೋಂಕು ಮತ್ತು ಆರ್ಥಿಕ ಹಿಂಜರಿತದಿಂದಾಗಿ ಬದುಕು ಮೂರಾಬಟ್ಟೆಯಾಗಿದೆ. ಈ ನಡುವೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ನರಕಯಾತನೆ ಅನುಭವಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.
    ಕೇಂದ್ರ ಸರ್ಕಾರ ತಕ್ಷಣ ಬಲೆ ಏರಿಕೆಗೆ ಕಡಿವಾಣ ಹಾಕಬೇಕು. ಬಡ, ಮಧ್ಯಮ ಶ್ರೀಸಾಮಾನ್ಯರ ಬದುಕಿನೊಂದಿಗೆ ಚೆಲ್ಲಾಟ ಆಡುವುದನ್ನು ಕೈಬಿಡಬೇಕೆಂದು ಆಗ್ರಹಿಸಲಾಯಿತು.
  ಪ್ರಧಾನ ಕಾರ್ಯದರ್ಶಿ ಎಂ. ನಾರಾಯಣ, ಹನುಮಮ್ಮ, ಕೆ. ಮಂಜಣ್ಣ, ಸೋಮಣ್ಣ, ಕೃಷ್ಣೋಜಿರಾವ್ ಸೇರಿದಂತೆ ಇನ್ನಿತರು ಪ್ರತಿಭಟನೆ ನೇತೃತ್ವ ವಹಿಸಿದ್ದರು. ಪಕ್ಷದ ಮಹಿಳಾ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ಪುನಃ ಕಬಡ್ಡಿ ಕ್ರೀಡೆ ವೈಭವ ಮರಳಲಿ, ಯುವ ಕ್ರೀಡಾಪಟುಗಳು ಪ್ರಜ್ವಲಿಸಲಿ : ಬಿ.ಕೆ ಸಂಗಮೇಶ್ವರ್

ಫೆ.೨೭, ೨೮ ಎರಡು ದಿನಗಳ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ

ಭದ್ರಾವತಿ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿದರು.
   ಭದ್ರಾವತಿ, ಫೆ. ೨೪: ರಾಜ್ಯದಲ್ಲಿ ತನ್ನದೇ ಆದ ವೈಭವದ ಪರಂಪರೆಯನ್ನು ಹೊಂದಿರುವ ಕಬಡ್ಡಿ ಕ್ರೀಡೆಗೆ ಉಕ್ಕಿನ ನಗರವೂ ಸಹ ತವರೂರಾಗಿದ್ದು, ಪುನಃ ವೈಭವದ ಇತಿಹಾಸ ಮರಳಬೇಕು ಹಾಗು ಯುವ ಕ್ರೀಡಾಪಟುಗಳಿಗೆ ಪೋತ್ಸಾಹ ನೀಡಬೇಕೆಂಬ ಉದ್ದೇಶದೊಂದಿಗೆ ತಾಲೂಕು ಮಟ್ಟದ ಎರಡು ದಿನಗಳ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಬಿ.ವೈ.ಕೆ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆಯೋಜಿಸಲಾಗಿದೆ ಎಂದು ಕ್ಲಬ್ ಗೌರವಾಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ತಿಳಿಸಿದರು.
   ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಿರಿಯರ ಮಾರ್ಗದರ್ಶನದಲ್ಲಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಕಬಡ್ಡಿ ಕ್ರೀಡಾಪಟುಗಳು ಹಾಗು ತರಬೇತಿದಾರರ ಸಹಕಾರದೊಂದಿಗೆ ಹಳೇನಗರದ ಕನಕಮಂಟಪ ಮೈದಾನದಲ್ಲಿ ಫೆ.೨೭ ಮತ್ತು ೨೮ರಂದು ಎರಡು ದಿನಗಳ ತಾಲೂಕು ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ನಡೆಯಲಿದೆ.
   ವಿಜೇತ ತಂಡಗಳಿಗೆ ಮೊದಲ ಬಹುಮಾನ ರು. ೨೫ ಸಾವಿರ, ಎರಡನೇ ಬಹುಮಾನ ರು. ೧೫ ಸಾವಿರ,  ಮೂರನೇ ಬಹುಮಾನ ರು. ೧೦ ಸಾವಿರ ಮತ್ತು ಉತ್ತಮ ದಾಳಿಗಾರ, ಹಿಡಿತಗಾರ ಹಾಗು ಆಲ್‌ರೌಂಡರ್ ಆಟಗಾರರಿಗೂ ಸೂಕ್ತ ಬಹುಮಾನಗಳನ್ನು ನೀಡಲಾಗುವುದು ಎಂದರು.
   ಹಿರಿಯ ಅಂತರಾಷ್ಟ್ರೀಯ ಕಬಡ್ಡಿ ಆಟಗಾರ, ಕ್ಲಬ್ ಅಧ್ಯಕ್ಷ ಎಚ್.ಎನ್ ಕೃಷ್ಣೇಗೌಡ ಮಾತನಾಡಿ, ಪ್ರಪಥಮ ಬಾರಿಗೆ ನಗರದಲ್ಲಿ ಮ್ಯಾಟ್ ಒಳಗೊಂಡ ಪ್ರೊ ಕಬಡ್ಡಿ ಪಂದ್ಯಾವಳಿ ನಡೆಯುತ್ತಿದೆ. ಪಂದ್ಯಾವಳಿ ೮ ಕಬಡ್ಡಿಗಳನ್ನು ಆಯ್ಕೆ ಮಾಡುವ ಜೊತೆಗೆ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್ ಅನುಮೋದನೆ ಸಹ ಪಡೆಯಲಾಗಿದೆ. ಪ್ರತಿ ತಂಡದ ಖರೀದಿ ಸಹ ನಡೆದಿದ್ದು, ಮಾಲೀಕರ ನೇತೃತ್ವದಲ್ಲಿ ಆಟಗಾರರಿಗೆ ಪ್ರತಿದಿನ ತರಬೇತಿ ನೀಡಿ ಸಜ್ಜುಗೊಳಿಸಲಾಗಿದೆ ಎಂದರು.
    ಮಾಜಿ ನಗರಸಭಾ ಸದಸ್ಯ ಬಾಲಕೃಷ್ಣ-ತುಂಗಾ ಟ್ಯಾಕರ್‍ಸ್, ಮಾರುತಿ ಮೆಡಿಕಲ್ಸ್ ಆನಂದ್-ಮಾರುತಿ ಟೈಗರ್‍ಸ್, ಮಾಜಿ ನಗರಸಭಾ ಸದಸ್ಯ ಮಣಿ ಎಎನ್‌ಎಸ್-ಜೋಗ್ ಜಾಗ್ವರ್‍ಸ್, ನ್ಯಾಯವಾದಿ ಮಂಗೋಟೆ ರುದ್ರೇಶ್-ಭದ್ರಾ ಬುಲ್ಸ್, ಪೊಲೀಸ್ ಉಮೇಶ್-ಮಲೆನಾಡು ವಾರಿಯರ್‍ಸ್, ಲೆಕ್ಕ ಪರಿಶೋಧಕ ಜಿ. ಧರ್ಮಪ್ರಸಾದ್-ಸ್ಟೀಲ್‌ಟೌನ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ವೆಂಕಟೇಶ್-ಎಂಪಿಎಂ ಬುಲ್ಡೇಜರ್‍ಸ್ ಮತ್ತು ಶ್ರೀ ಕಾಲಭೈರವೇಶ್ವರ ಚಾರಿಟಬಲ್ ಟ್ರಸ್-ನ್ಯೂಟೌನ್ ಅಟ್ಯಾಕರ್‍ಸ್ ತಂಡಗಳ ಮಾಲೀಕರಾಗಿದ್ದು, ಇವರೆಲ್ಲರ ಸಹಕಾರದಿಂದ ಪಂದ್ಯಾವಳಿ ಇನ್ನಷ್ಟು ಮೆರಗು ಪಡೆದುಕೊಂಡಿದೆ ಎಂದರು.
   ಕಬ್ಲ್ ಪ್ರಧಾನ ಕಾರ್ಯದರ್ಶಿ ಎಚ್.ಆರ್ ರಂಗನಾಥ್, ಕಾರ್ಯದರ್ಶಿ ಮಾರ್ಕಂಡಯ್ಯ, ಖಜಾಂಚಿ ಎಸ್. ವಿಶ್ವನಾಥ್, ಉಪಾಧ್ಯಕ್ಷರಾದ ಚನ್ನಪ್ಪ, ಸಂಚಾಲಕರಾದ ಎಸ್.ಎನ್ ಸಿದ್ದಯ್ಯ, ವೈ. ವಸಂತಕುಮಾರ್, ಜಯರಾಮ್, ಮಾರುತಿ ಮೆಡಿಕಲ್ ಆನಂದ್, ಬಾಲಕೃಷ್ಣ, ನಟರಾಜ್, ಯೋಗೀಶ್, ಧನುಷ್ ಬೋಸ್ಲೆ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.  

೨೮ನೇ ವರ್ಷದ ಜತ್ರಾ ವಾರ್ಷಿಕೋತ್ಸವ

ಭದ್ರಾವತಿ ಹೊಸಮನೆ ಮುಖ್ಯ ರಸ್ತೆ ಪಶು ಆಸ್ಪತ್ರೆ ಮುಂಭಾಗದಲ್ಲಿರುವ ಶ್ರೀ ಶನೈಶ್ವರ ದೇವಸ್ಥಾನದ ೨೮ನೇ ವರ್ಷದ ಜಾತ್ರಾ ವಾರ್ಷಿಕೋತ್ಸವ ಅಂಗವಾಗಿ ಸ್ವಾಮಿಗೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು.
    ಭದ್ರಾವತಿ, ಫೆ. ೨೪: ಹೊಸಮನೆ ಮುಖ್ಯ ರಸ್ತೆ ಪಶು ಆಸ್ಪತ್ರೆ ಮುಂಭಾಗದಲ್ಲಿರುವ ಶ್ರೀ ಶನೈಶ್ವರ ದೇವಸ್ಥಾನದ ೨೮ನೇ ವರ್ಷದ ಜಾತ್ರಾ ವಾರ್ಷಿಕೋತ್ಸವ ೩ ದಿನ ಕಾಲ ಅದ್ದೂರಿಯಾಗಿ ಜರುಗಿತು.
    ಬುಧವಾರ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಸಾಮೂಹಿಕ ಸತ್ಯನಾರಾಯಣ ಸ್ವಾಮಿ ಪೂಜೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಿತು.
ಅಣ್ಣಾನಗರ, ಭೋವಿಕಾಲೋನಿ, ಎನ್‌ಎಂಸಿ, ಹೊಸಮನೆ, ಭೂತನಗುಡಿ ಮತ್ತು ಹಳೇನಗರ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ಭಕ್ತಾಧಿಗಳು ಹಾಗು ದೇವಸ್ಥಾನ ದೇವಾ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
    ದೇವಸ್ಥಾನದ ಪ್ರಧಾನ ಅರ್ಚಕರಾದ ಸಂತೋಷ್ ಭಟ್ ಮತ್ತು ಶ್ರೀನಿವಾಸ್ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು.

ಪೊಗರು ಚಿತ್ರದಲ್ಲಿ ಬ್ರಾಹಣ ಸಮುದಾಯದ ಅವಹೇಳನ

ತಾಲೂಕು ಬ್ರಾಹ್ಮಣ ಸಭಾ ಖಂಡನೆ


ಎಂ.ಎಸ್ ಜನಾರ್ಧನ ಅಯ್ಯಂಗಾರ್
   ಭದ್ರಾವತಿ, ಫೆ. ೨೪: ಇತ್ತೀಚೆಗೆ ಬಿಡುಗಡೆಯಾದ ಪೊಗರು ಕನ್ನಡ ಚಲನಚಿತ್ರದಲ್ಲಿ ಬ್ರಾಹ್ಮಣ ಸಮುದಾಯವನ್ನು ಅತ್ಯಂತ ಅವಮಾನವೀಯವಾಗಿ ಚಿತ್ರಿಸಿ, ಬ್ರಾಹ್ಮಣ ಸಮಾಜಕ್ಕೆ ಹಾಗು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ. ಇದನ್ನು ತಾಲೂಕು ಬ್ರಾಹ್ಮಣ ಸಭಾ ಖಂಡಿಸುತ್ತದೆ ಎಂದು ಸಭಾ ಅಧ್ಯಕ್ಷ ಎಂ.ಎಸ್ ಜನಾರ್ಧನ ಅಯ್ಯಂಗಾರ್ ತಿಳಿಸಿದ್ದಾರೆ.
   ಈ ಸಂಬಂಧ ಸಭಾ ಕಛೇರಿಯಲ್ಲಿ ಸಭೆ ನಡೆಸಲಾಗಿದ್ದು,  ಬ್ರಾಹ್ಮಣರು ಪ್ರತಿಭಟಿಸುವುದಿಲ್ಲ ಹಾಗು ಅವರಲ್ಲಿ ಐಕ್ಯತೆ ಇಲ್ಲ ಎಂಬ ಭಾವನೆಯಿಂದ ಪೊಗರು ಚಿತ್ರದಲ್ಲಿ ಅವಮಾನವೀಯವಾಗಿ ಚಿತ್ರಿಸಿ ಕ್ರೌರ ಮೆರೆಯಲಾಗಿದೆ. ಚಲನಚಿತ್ರಗಳು ಮನೋರಂಜನೆಯೊಂದಿಗೆ ಜನರಲ್ಲಿ ಸಾಮಾಜಿಕ ಹಾಗು ಧಾರ್ಮಿಕ ಅರಿವು ಮೂಡಿಸಬೇಕೇ ಹೊರತು ಧಾರ್ಮಿಕ ಮತ್ತು ಜಾತಿ ನಿಂದನೆ ಮಾಡುವುದು, ಅವಮಾನಿಸುವುದು ಸರಿಯಲ್ಲ. ಈ ಹಿನ್ನಲೆಯಲ್ಲಿ ತಕ್ಷಣ ಚಿತ್ರದ ನಿರ್ಮಾಪಕರು, ನಿರ್ದೇಶಕರು ಚಿತ್ರದಲ್ಲಿರುವ ಅವಮಾನವೀಯ ಭಾಗವನ್ನು ತೆಗೆದು ಹಾಕಬೇಕು. ಇದೆ ರೀತಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬ್ರಾಹ್ಮಣ ಅರ್ಚಕ ಸಮುದಾಯದವರನ್ನು ಅವಮಾನಿಸಿದ್ದು, ಈ ಹಿನ್ನಲೆಯಲ್ಲಿ ಅವರು ತಕ್ಷಣ ಬಹಿರಂಗವಾಗಿ ಸಮುದಾಯದ ಕ್ಷಮೆಯಾಚಿಸಬೇಕೆಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
    ಸಭೆಯಲ್ಲಿ ಉಪಾಧ್ಯಕ್ಷ ರಮಾಕಾಂತ್, ಕಾರ್ಯದರ್ಶಿ ಜಿ. ರಮೇಶ್, ಖಜಾಂಚಿ ಮಂಜುನಾಥ್, ಇಂದ್ರಸೇನ್, ಪ್ರಭಾಕರ್ ಜೋಯ್ಸ್, ನರಸಿಂಹಸ್ವಾಮಿ, ನೀಲಕಂಠ ಜೋಯ್ಸ್, ರಾಜಶೇಖರ್, ಎನ್. ಕೃಷ್ಣಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರೆಂದು ಅಯ್ಯಂಗಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಫೆ.೨೫ರಂದು ‘ಸ್ವರ್ಣ ಬಿಂದು ಪ್ರಾಶನ’

   ಭದ್ರಾವತಿ, ಫೆ. ೨೪: ನಗರದ ತರೀಕೆರೆ ರಸ್ತೆಯಲ್ಲಿರುವ ಬಿ.ಜಿ.ಎಂ ಆಯುರ್ವೇದ ಮತ್ತು ಸಿದ್ದ ಚಿಕಿತ್ಸಾಲಯ ಹಾಗು ಶ್ರೀ ಶಿವಸುಬ್ರಮಣ್ಯ ಸ್ವಾಮಿ ಆಶ್ರಮದ ವತಿಯಿಂದ ಮಕ್ಕಳ ಆರೋಗ್ಯದ ಹಿತದೃಷ್ಟಿಯಲ್ಲಿ ಆರ್ಯುರ್ವೇದದ ಪ್ರತಿರಕ್ಷಣೆ ವಿಧಾನವಾದ 'ಸ್ವರ್ಣ ಬಿಂದು ಪ್ರಾಶನ' ಕಾರ್ಯಕ್ರಮ ಫೆ.೨೫ರಂದು ಹಮ್ಮಿಕೊಳ್ಳಲಾಗಿದೆ.
   ಬೆಳಿಗ್ಗೆ ೧೦ ಗಂಟೆಯಿಂದ ಮಧ್ಯಾಹ್ನ ೨ ಗಂಟೆವರೆಗೆ ಹಾಗು ಸಂಜೆ ೬ ಗಂಟೆಯಿಂದ ರಾತ್ರಿ ೮ ಗಂಟೆವರೆಗೆ ಕಾರ್ಯಕ್ರಮ ನಡೆಯಲಿದ್ದು, ೧೬ ವರ್ಷದೊಳಗಿನ ಎಲ್ಲಾ ಮಕ್ಕಳು ಪ್ರತಿ ತಿಂಗಳು ಸ್ವರ್ಣ ಬಿಂದು ಪ್ರಾಶನ ಹಾಕಿಸಿಕೊಳ್ಳುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವ ಜೊತೆಗೆ ಉತ್ತಮವಾದ ದೈಹಿಕ ಹಾಗು ಮಾನಸಿಕ ಬೆಳವಣಿಗೆ ಸಾಧ್ಯವಾಗಲಿದೆ. ಈ ಹಿನ್ನಲೆಯಲ್ಲಿ ಇದರ ಸದುಪಯೋಗಪಡೆದುಕೊಳ್ಳುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಡಾ. ವಿಕ್ರಮ್ ಮೊ: ೯೭೪೧೭೩೫೩೫೯ಸಂಖ್ಯೆಗೆ ಕರೆ ಮಾಡಬಹುದಾಗಿದೆ.

Tuesday, February 23, 2021

ಗ್ರಾಮ ಪಂಚಾಯಿತಿ ನೂತನ ಮಹಿಳಾ ಸದಸ್ಯರಿಗೆ ಕಾರ್ಯಾಗಾರ

ದಿ ಹಂಗರ್ ಪ್ರಾಜೆಕ್ಟ್ ಕರ್ನಾಟಕ ಮತ್ತು ತರೀಕೆರೆಯ ವಿಕಸನ ಸಂಸ್ಥೆ ವತಿಯಿಂದ ಭದ್ರಾವತಿ ಬಿ.ಎಚ್ ರಸ್ತೆ ಶ್ರೀ ದುರ್ಗಾ ಕಾಂಚನ ಹೋಟೆಲ್ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಚುನಾಯಿತ ಮಹಿಳಾ ಸದಸ್ಯರಿಗೆ ೨ ದಿನಗಳ ತರಬೇತಿ ಕಾರ್ಯಾಗಾರ ನಡೆಯಿತು.
    ಭದ್ರಾವತಿ, ಫೆ. ೨೩: ದಿ ಹಂಗರ್ ಪ್ರಾಜೆಕ್ಟ್ ಕರ್ನಾಟಕ ಮತ್ತು ತರೀಕೆರೆಯ ವಿಕಸನ ಸಂಸ್ಥೆ ವತಿಯಿಂದ ನಗರದ ಬಿ.ಎಚ್ ರಸ್ತೆ ಶ್ರೀ ದುರ್ಗಾ ಕಾಂಚನ ಹೋಟೆಲ್ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಚುನಾಯಿತ ಮಹಿಳಾ ಸದಸ್ಯರಿಗೆ ೨ ದಿನಗಳ ತರಬೇತಿ ಕಾರ್ಯಾಗಾರ ನಡೆಯಿತು.
  ಸಾಮಾಜಿಕ ನ್ಯಾಯ, ಲಿಂಗ ಅಸಮಾನತೆ, ರಾಜಕೀಯ ಮತ್ತು ನಾಗರೀಕತೆ, ಸಂವಿಧಾನ ತಿದ್ದುಪಡಿಗಳು, ಸಮಾನತೆ, ನಾಯಕತ್ವ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಮಾಹಿತಿ ನೀಡಲಾಯಿತು.
  ಕಾರ್ಯಾಗಾರದಲ್ಲಿ ತಾವರಘಟ್ಟ, ಸಿಂಗನಮನೆ, ಕಂಬದಾಳು ಹೊಸೂರು, ಕಾರೇಹಳ್ಳಿ, ಬಾರಂದೂರು ಮತ್ತು ಹಿರಿಯೂರು ಸೇರಿದಂತೆ ಒಟ್ಟು ೬ ಗ್ರಾಮ ಪಂಚಾಯಿತಿಗಳ ಸುಮಾರು ೪೨ ಮಹಿಳಾ ಸದಸ್ಯರು ಪಾಲ್ಗೊಂಡಿದ್ದರು.
  ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಜೆ ತಮ್ಮಣ್ಣಗೌಡ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀನಿವಾಸ್, ಎಂ.ಎಚ್ ಲಕ್ಷ್ಮಣ ಸೇರಿದಂತೆ ಇನ್ನಿತರರು ಪಾಲ್ಗೊಂಡು ಮಾಹಿತಿ ನೀಡಿದರು.

ವೈದ್ಯಕೀಯ ಸೀಟುಗಳ ಬ್ಲಾಕಿಂಗ್ ದಂಧೆ : ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಎಬಿವಿಪಿ ಆಗ್ರಹ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ

ವೈದ್ಯಕೀಯ ಸೀಟುಗಳ ಬ್ಲಾಕಿಂಗ್ ದಂಧೆಯಲ್ಲಿ ತೊಡಗಿರುವವರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಮಂಗಳವಾರ ಭದ್ರಾವತಿಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಫೆ. ೨೩: ವೈದ್ಯಕೀಯ ಸೀಟುಗಳ ಬ್ಲಾಕಿಂಗ್ ದಂಧೆಯಲ್ಲಿ ತೊಡಗಿರುವವರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಮಂಗಳವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
   ಶಿಕ್ಷಣ ಕ್ಷೇತ್ರದಲ್ಲಿ ಇಡೀ ದೇಶದಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಕರ್ನಾಟಕ ಎಂಬ ಹೆಗ್ಗಳಿಕೆ ನಮ್ಮೆಲರಿಗೂ ಇದೆ. ಬಡ ಮತ್ತು ಪ್ರತಿಭಾವಂತ ಮಕ್ಕಳಿಗೆ ನ್ಯಾಯವಾಗಿ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಸೀಟುಗಳು ದೊರೆಯಲಿ ಎಂಬ ಉದ್ದೇಶದಿಂದ ಸಿಇಟಿ ಪರೀಕ್ಷೆಗಳನ್ನು ಜಾರಿ ಮಾಡಲು ಈ ಹಿಂದೆ ಆಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ರಾಜ್ಯದೆಲ್ಲೆಡೆ ಹೋರಾಟ ನಡೆಸಲಾಗಿತ್ತು. ಇದರ ಪರಿಣಾಮ ರಾಜ್ಯದಲ್ಲಿ ಸಿಇಟಿ ಪರೀಕ್ಷೆಗಳನ್ನು ಜಾರಿಗೆ ತರಲಾಯಿತು. ಆದರೆ ಇದೀಗ ರಾಜ್ಯದ ಪ್ರತಿಷ್ಟಿತ ಮೆಡಿಕಲ್ ಕಾಲೇಜುಗಳಲ್ಲಿ ಮೆಡಿಕಲ್ ಸೀಟ್ ಬ್ಲಾಕಿಂಗ್ ದಂಧೆಯನ್ನು ಸಾಕ್ಷಿ ಸಮೇತವಾಗಿ ಐಟಿ ಅಧಿಕಾರಿಗಳು ಬಯಲಿಗೆ ಎಳೆದಿದ್ದಾರೆ. ಸೀಟುಗಳ ಮಾರಾಟದಿಂದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುವ ಜೊತೆಗೆ ಆದಾಯ ತೆರಿಗೆ ಇಲಾಖೆಯ ಕಾಯ್ದೆಯೂ ಕೂಡ ಇಲ್ಲಿ ಉಲ್ಲಂಘನೆ ಆಗಿದೆ. ಈ ಹಿನ್ನಲೆಯಲ್ಲಿ ವೈದ್ಯಕೀಯ ಸೀಟುಗಳ ಬ್ಲಾಕಿಂಗ್ ದಂಧೆಯಲ್ಲಿ ತೊಡಗಿರುವವರ ವಿರುದ್ದ ಸರ್ಕಾರ ಯಾವುದೇ ಒತ್ತಡಗಳಿಗೆ ಮಣಿಯದೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
  ಮನವಿ ಸಲ್ಲಿಸುವ ಸಂದರ್ಭದಲ್ಲಿ ಆಕಾಶ್, ಅವಿನಾಶ್, ಮನು, ದರ್ಶನ್, ಪುನೀತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Monday, February 22, 2021

ಎರಡು ದೇವಾಲಯಗಳಲ್ಲಿ ಚಿನ್ನಾಭರಣ, ಕಾಣಿಕೆ ಹುಂಡಿ ಹಣ ಕಳವು

    ಭದ್ರಾವತಿ, ಫೆ. ೨೨: ನಗರ ಹಾಗು ಗ್ರಾಮಾಂತರ ಪೊಲೀಸ್ ವೃತ್ತ ವ್ಯಾಪ್ತಿಯ ಎರಡು ಕಡೆ ದೇವಾಲಯಗಳಲ್ಲಿ ಹುಂಡಿ ಕಾಣಿಕೆ ಹಣ ಹಾಗು ಚಿನ್ನಾಭರಣಗಳನ್ನು ಕಳವು ಮಾಡಿರುವ ಘಟನೆಗಳು ನಡೆದಿವೆ.
    ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಬೈಪಾಸ್ ರಸ್ತೆ ಸಮೀಪದ ಹೊಸ ಸಿದ್ಧಾಪುರ ಮಾರ್ಗದಲ್ಲಿರುವ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ಬೀಗ ಮುರಿದು ದೇವರ ಚಿನ್ನಾಭರಣ ಕಳವು ಮಾಡಲಾಗಿದೆ.
    ಇದೆ ರೀತಿ ಕಾಗದನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೊಮ್ಮನಕಟ್ಟೆಯ ಶ್ರೀ ಕಾಳಿಂಗೇಶ್ವರ ಸ್ವಾಮಿ ದೇವಾಲಯದಲ್ಲೂ ಸಹ ದೇವರ ಚಿನ್ನಾಭರಣ ಹಾಗು ಕಾಣಿಕೆ ಹುಂಡಿ ಹಣ ಕಳವು ಮಾಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.


ಶೇ.೫ರಷ್ಟು ವಿನಾಯಿತಿ ಅವಧಿ ೧ ತಿಂಗಳು ವಿಸ್ತರಣೆ

   ಭದ್ರಾವತಿ, ಫೆ. ೨೨: ಸರ್ಕಾರದ ಆದೇಶದಂತೆ ನಗರಸಭೆ ಆಡಳಿತ ಆಸ್ತಿ ತೆರಿಗೆ ಪಾವತಿ ಮೇಲೆ ಶೇ.೫ರಷ್ಟು ವಿನಾಯಿತಿ ಅವಧಿಯನ್ನು ಒಂದು ತಿಂಗಳವರೆಗೆ ವಿಸ್ತರಿಸಿದೆ.
  ಫೆ.೧೯ರಿಂದ ಆದೇಶ ಜಾರಿಯಲ್ಲಿದ್ದು, ಈಗಾಗಲೇ ಆಸ್ತಿ ತೆರಿಗೆ ಪೂರ್ಣ ಪ್ರಮಾಣದಲ್ಲಿ ಪಾವತಿಸಿದ್ದಲ್ಲಿ ವಿನಾಯಿತಿಯನ್ನು ಮುಂಬರುವ ವರ್ಷದ ತೆರಿಗೆ ಪಾವತಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಾಗುವುದು. ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳುವಂತೆ ಪೌರಾಯುಕ್ತ ಮನೋಹರ್ ಕೋರಿದ್ದಾರೆ.

ಫೆ.೨೩ರಂದು ಖಾಸಗಿ ಶಾಲೆಗಳು ಬಂದ್ : ರಾಜ್ಯ ಒಕ್ಕೂಟದ ಹೋರಾಟಕ್ಕೆ ಬೆಂಬಲ

   ಭದ್ರಾವತಿ, ಫೆ. ೨೨: ಸರ್ಕಾರ ಸರ್ವೋಚ್ಛ ನ್ಯಾಯಾಲಯದ ಆದೇಶ ಪಾಲಿಸುವಂತೆ ಹಾಗು ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಫೆ.೨೩ರಂದು ನಡೆಸುತ್ತಿರುವ ಹೋರಾಟಕ್ಕೆ ತಾಲೂಕು ಶಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ಬೆಂಬಲ ವ್ಯಕ್ತಪಡಿಸಿದೆ.
   ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಶಾಲಾ ಶುಲ್ಕ ವಸೂಲಾತಿ ವಿಚಾರದಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವುದರಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಹಿನ್ನಲೆಯಲ್ಲಿ ರಾಜ್ಯಮಟ್ಟದ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಸರ್ವೋಚ್ಛ ನ್ಯಾಯಾಲಯದ ಮೊರೆಹೋದ ಹಿನ್ನಲೆಯಲ್ಲಿ ನ್ಯಾಯಾಲಯ ಶೇ.೧೦೦ರಷ್ಟು ಶುಲ್ಕ ಪಾವತಿಸಿಕೊಳ್ಳುವಂತೆ ಆದೇಶ ಹೊರಡಿಸಿದೆ. ಈ ಹಿನ್ನಲೆಯಲ್ಲಿ ಸರ್ವೋಚ್ಛ ನ್ಯಾಯಾಲಯದ ಆದೇಶ ಎತ್ತಿ ಹಿಡಿಯುವಂತೆ ಹಾಗು ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಹೋರಾಟ ನಡೆಸಲಾಗುತ್ತಿದೆ.
   ಹೋರಾಟದ ಅಂಗವಾಗಿ ಬೆಂಗಳೂರಿನ ಮುಖ್ಯ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೆ ಕಾಲುನಡಿಗೆ ನಡೆಯಲಿದ್ದು, ನಂತರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುವುದು. ಹೋರಾಟದಲ್ಲಿ ರಾಜ್ಯದ ವಿವಿಧೆಡೆಗಳಿಂದ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು, ಸಿಬ್ಬಂದಿಗಳು ಸೇರಿದಂತೆ ಸಾವಿರಾರು ಮಂದಿ ಪಾಲ್ಗೊಳ್ಳುತ್ತಿದ್ದಾರೆ.  ರಾಜ್ಯ ಒಕ್ಕೂಟದ ಕರೆ ಮೇರೆಗೆ ರಾಜ್ಯಾದ್ಯಂತ ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಶಾಲೆಗಳಿಗೆ ರಜೆ ಘೋಷಿಸುವ ಮೂಲಕ ಹೋರಾಟ ಬೆಂಬಲಿಸುತ್ತಿವೆ. ಈ ಹಿನ್ನಲೆಯಲ್ಲಿ ತಾಲೂಕಿನಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ಸಹ ಶಾಲೆಗಳಿಗೆ ರಜೆ ಘೋಷಿಸುವ ಮೂಲಕ ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಲಿವೆ ಎಂದು ತಾಲೂಕು ಶಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.    

ಬೆಲೆ ಏರಿಕೆ ಖಂಡಿಸಿ ಫೆ.೨೨ರಂದು ಎಸ್‌ಡಿಪಿಐ ಪ್ರತಿಭಟನೆ

   
ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಸೋಮವಾರ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
    ಭದ್ರಾವತಿ: ದಿನದಿಂದ ದಿನಕ್ಕೆ ಅಗತ್ಯ ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದಾಗಿ ಶ್ರೀಸಾಮಾನ್ಯರು ಬದುಕು ಸಾಗಿಸುವುದು ಕಷ್ಟಕರವಾಗಿದ್ದು, ಕೇಂದ್ರ ಸರ್ಕಾರ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ಸಂಘಟನೆ ಮುಖಂಡರು ಆರೋಪಿಸಿದರು.  
  ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಸೋಮವಾರ ತಾಲೂಕು ಕಛೇರಿ ಮುಂಭಾಗ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡರು, ಪ್ರಸ್ತುತ ದೇಶದಲ್ಲಿ ಬಡವರ್ಗದವರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕಳೆದ ಸುಮಾರು ೧೫ ವರ್ಷಗಳಿಂದ ನಿರಂತರವಾಗಿ ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ, ಅಡುಗೆ ಅನಿಲ, ಆಟೋ ಗ್ಯಾಸ್ ಸೇರಿದಂತೆ ಪೆಟ್ರೋಲಿಯಿಂ ಉತ್ಪನ್ನಗಳ ಬೆಲೆ ಏರಿಕೆಯಾಗುತ್ತಿದೆ. ಇದರ ಹಿಂದೆ ಕಾರ್ಪೊರೇಟ್ ತೈಲ ಕಂಪನಿಗಳ ದೊಡ್ಡ ಮಟ್ಟದ ಹುನ್ನಾರವಿದೆ. ಕೆಲವು ಶ್ರೀಮಂತ ಬಂಡವಾಳಶಾಹಿಗಳ ಹಿಡಿತದಲ್ಲಿ ದೇಶ ಮುನ್ನಡೆಯುತ್ತಿದೆ ಎಂದು ದೂರಿದರು.
    ದೇಶದ ಬಹುಭಾಗ ಪೆಟ್ರೋಲಿಯಂ ಉತ್ಪನ್ನಗಳು ಮುಸ್ಲಿಂ ರಾಷ್ಟ್ರಗಳಿಂದ ಆಮದಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆ ಗಣನೀಯವಾಗಿ ಇಳಿಕೆಯಾಗಿರುವುದು ಸಮಾಧಾನಕರ ಸಂಗತಿಯಾಗಿದೆ. ಆದರೆ ಕೇಂದ್ರ ಸರ್ಕಾರ ಇದರ ನೇರ ಲಾಭ ತೈಲ ಬಳಕೆದಾರರಿಗೆ ವರ್ಗಾಹಿಸುವ ಬದಲು ಬೊಕ್ಕಸ ತುಂಬಿಸುವ ಕೆಲಸ ಮಾಡುತ್ತಿದೆ. ಅಲ್ಲದೆ ಕೇಂದ್ರ ಹಾಗು ರಾಜ್ಯ ಎರಡು ಸರ್ಕಾರಗಳು ಗಣನೀಯ ಪ್ರಮಾಣದಲ್ಲಿ ತೈಲೋತ್ಪನ್ನಗಳಿಗೆ ತೆರಿಗೆ ಹಾಕುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ರಾಜ್ಯ ಸರ್ಕಾರ ದೇಶದ ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದ್ದಲ್ಲಿ ಆರ್ಥಿಕತೆಯಲ್ಲಿ ಸ್ವಲ್ಪಮಟ್ಟಿಗೆ ಮುಂದಿದೆ. ಈ ಹಿನ್ನೆಯಲ್ಲಿ ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿಯದೆ ರಾಜ್ಯದಲ್ಲಾದರೂ ತೈಲೋತ್ಪನಗಳ ಮೇಲಿನ ತೆರಿಗೆ ಸ್ವಲ್ಪ ಕಡಿಮೆ ಮಾಡಬೇಕೆಂದರು ಆಗ್ರಹಿಸಿದರು.
  ಎಸ್‌ಡಿಪಿಐ ತಾಲೂಕು ಅಧ್ಯಕ್ಷ ತಾಹಿರ್, ಕಾರ್ಯದರ್ಶಿ ಎಂ.ಡಿ ಗೌಸ್, ಪಿಎಫ್‌ಐ ತಾಲೂಕು ಅಧ್ಯಕ್ಷ ಮಹಮದ್ ಸಾಧಿಕ್‌ವುಲ್ಲಾ, ಕಾರ್ಯದರ್ಶಿ ಅರ್ಷದ್ ಖುರೇಶಿ, ಪ್ರಗತಿಪರ ಸಂಘಟನೆಗಳ ಮುಖಂಡರಾದ ಸುರೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Sunday, February 21, 2021

ಬರಡು ರಾಸುಗಳ ಉಚಿತ ಆರೋಗ್ಯ ತಪಾಸಣೆ, ಮಿಶ್ರ ತಳಿ ಹಸು, ಕರುಗಳ ಪ್ರದರ್ಶನ


ಭದ್ರಾವತಿ ತಾಲೂಕಿನ ಗೋಣಿಬೀಡು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ  ಏರ್ಪಡಿಸಲಾಗಿದ್ದ ಬರಡು ರಾಸುಗಳ ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ಮಿಶ್ರ ತಳಿ ಹಸು, ಕರುಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಆಯ್ದ ಸದಸ್ಯರಿಗೆ ಹಾಲು ಶೇಖರಣೆಗೆ ಅಗತ್ಯವಿರುವ ಹಾಲಿನ ಕ್ಯಾನ್‌ಗಳನ್ನು ವಿತರಿಸಲಾಯಿತು.
    ಭದ್ರಾವತಿ, ಫೆ. ೨೧: ತಾಲೂಕಿನ ಗೋಣಿಬೀಡು ಹಾಲು ಉತ್ಪಾದಕರ ಸಹಕಾರ ಸಂಘ ಮತ್ತು ಶಿವಮೊಗ್ಗ ಹಾಲು ಒಕ್ಕೂಟ ಹಾಗು ಪಶು ವೈದ್ಯಕೀಯ ಇಲಾಖೆ ಸಂಯುಕ್ತಾಶ್ರಯದಲ್ಲಿ ಬರಡು ರಾಸುಗಳ ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ಮಿಶ್ರ ತಳಿ ಹಸು, ಕರುಗಳ ಪ್ರದರ್ಶನ ಏರ್ಪಡಿಸಲಾಗಿತ್ತು.
    ಕಾರ್ಯಕ್ರಮದಲ್ಲಿ ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷ ಡಿ. ಆನಂದ್, ನಿರ್ದೇಶಕ ದಿನೇಶ್, ಕಾರ್ಯ ನಿರ್ವಾಹಕ ನಿರ್ದೇಶಕ ಡಾ. ಕೆ.ಎಸ್ ಬಸವರಾಜ, ಶಿವಮೊಗ್ಗ ಪಶು ವೈದ್ಯಕೀಯ ಮಹಾ ವಿದ್ಯಾಲಯದ ಮುಖ್ಯಸ್ಥ ಡಾ. ಎನ್.ಬಿ ಶ್ರೀಧರ್, ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ. ಕೆ. ಬಸವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
   ಗೋಣಿಬೀಡು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಡಿ. ಲೋಕೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಬಿ. ಪರಮೇಶ್ವರಪ್ಪ ಸ್ವಾಗತಿಸಿದರು. ಆಯ್ದ ಸದಸ್ಯರಿಗೆ ಹಾಲು ಶೇಖರಣೆಗೆ ಅಗತ್ಯವಿರುವ ಹಾಲಿನ ಕ್ಯಾನ್‌ಗಳನ್ನು ವಿತರಿಸಲಾಯಿತು.

ಮಹಿಳೆಯರು ಆರೋಗ್ಯ ರಕ್ಷಣೆ ಕುರಿತು ಹೆಚ್ಚಿನ ತಿಳುವಳಿಕೆ ಹೊಂದಿ : ಎಂ.ಎಸ್ ಸುಧಾಮಣಿ

ಭದ್ರಾವತಿಯಲ್ಲಿ ಚುಂಚಾದ್ರಿ ಮಹಿಳಾ ವೇದಿಕೆ ವತಿಯಿಂದ ಅಪ್ಪರ್ ಹುತ್ತಾದಲ್ಲಿರುವ ಒಕ್ಕಲಿಗರ ಸಮುದಾಯ ಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಉಚಿತ ಕ್ಯಾನ್ಸರ್ ರೋಗ ತಪಾಸಣೆ ಹಾಗು ಅರಿವು ಕಾರ್ಯಕ್ರಮವನ್ನು ನಗರಸಭೆ ಪೌರಾಯುಕ್ತ ಮನೋಹರ್ ಉದ್ಘಾಟಿಸಿದರು.
   ಭದ್ರಾವತಿ, ಫೆ. ೨೧: ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಈ ನಿಟ್ಟಿನಲ್ಲಿ ಆರೋಗ್ಯ ರಕ್ಷಣೆ ಕುರಿತು ಹೆಚ್ಚಿನ ತಿಳುವಳಿಕೆ ಹೊಂದುವುದು ಅಗತ್ಯವಾಗಿದೆ ಎಂದು ಚುಂಚಾದ್ರಿ ಮಹಿಳಾ ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಹೇಳಿದರು.
   ಅವರು ವೇದಿಕೆ ವತಿಯಿಂದ ಅಪ್ಪರ್ ಹುತ್ತಾದಲ್ಲಿರುವ ಒಕ್ಕಲಿಗರ ಸಮುದಾಯ ಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ  ಉಚಿತ ಕ್ಯಾನ್ಸರ್ ರೋಗ ತಪಾಸಣೆ ಹಾಗು ಅರಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
   ಕೆಮ್ಮು, ಶೀತ, ನೆಗಡಿ, ಚಳಿ ಜ್ವರ, ತಲೆ ನೋವು ಸೇರಿದಂತೆ ಇನ್ನಿತರ ಸಾಮಾನ್ಯ ಕಾಯಿಲೆಗಳ ಹೊರತಾಗಿ ಕ್ಯಾನ್ಸರ್‌ನಂತಹ ಕಾಯಿಲೆಗಳ ಕುರಿತು ಸಹ ಮಹಿಳೆಯರು ತಿಳುವಳಿಕೆ ಹೊಂದಬೇಕಾಗಿದೆ. ಈ ಹಿನ್ನಲೆಯಲ್ಲಿ ವೇದಿಕೆ ವತಿಯಿಂದ ಆರೋಗ್ಯ ಶಿಬಿರವನ್ನು ವಿಶೇಷವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಇದರ ಸದುಪಯೋಗ ಎಲ್ಲರೂ ಪಡೆದುಕೊಳ್ಳಬೇಕೆಂದರು.
   ನಗರಸಭೆ ಪೌರಾಯುಕ್ತ ಮನೋಹರ್ ಕಾರ್ಯಕ್ರಮ ಉದ್ಘಾಟಿಸಿದರು. ಶಿವಮೊಗ್ಗ ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆ ತಜ್ಞ ವೈದ್ಯರು ತಪಾಸಣೆ ನಡೆಸುವ ಜೊತೆಗೆ ಮಾಹಿತಿ ನೀಡಿದರು.
   ವೇದಿಕೆ ಉಪಾಧ್ಯಕ್ಷೆ ಸುಮಾ ಶಂಕರ್, ಕಾರ್ಯದರ್ಶಿ ಲತಾ ಪ್ರಭಾಕರ್, ಸಹ ಕಾರ್ಯದರ್ಶಿ ನಳಿನಾ, ಖಜಾಂಚಿ ಶಶಿಕಲಾ ಹಾಗು ಸದಸ್ಯರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಬೆಲೆ ಏರಿಕೆ ಖಂಡಿಸಿ ಫೆ.೨೨ರಂದು ಎಸ್‌ಡಿಪಿಐ ಪ್ರತಿಭಟನೆ

ಭದ್ರಾವತಿ, ಫೆ. ೨೧: ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಫೆ.೨೨ರಂದು ಬೆಳಿಗ್ಗೆ ೧೧.೩೦ಕ್ಕೆ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
    ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಶ್ರೀಸಾಮಾನ್ಯರು ಬದುಕು ಸಾಗಿಸುವುದು ದುಸ್ತರವಾಗಿದೆ. ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಬೆಲೆ ಏರಿಕೆ ನಿಯಂತ್ರಿಸುವಲ್ಲಿ ವಿಫಲವಾಗಿವೆ. ಈ ಹಿನ್ನಲೆಯಲ್ಲಿ ತಕ್ಷಣ ಬೆಲೆ ಏರಿಕೆಗೆ ಕಡಿವಾಣ ಹಾಕುವಂತೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.

ಮುತ್ತಪ ರೈ ಸಾಮಾಜಿಕ ಕಾಳಜಿ ಹೊಂದಿದ್ದ ಅಪರೂಪದ ವ್ಯಕ್ತಿ : ಬಿ.ಕೆ ಸಂಗಮೇಶ್ವರ್

ಭದ್ರಾವತಿ ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಜಯ ಕರ್ನಾಟಕ ತಾಲೂಕು ಘಟಕದ ಪುನರ್ ರಚನೆ ಹಾಗು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
   ಭದ್ರಾವತಿ, ಫೆ. ೨೧: ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕರಾದ ದಿವಂಗತ ಮುತ್ತಪ್ಪ ರೈ ಕುರಿತು ಸಮಾಜದಲ್ಲಿ ತಪ್ಪು ಪರಿಕಲ್ಪನೆ ಮೂಡಿಸಲಾಗಿದ್ದು, ವಾಸ್ತವವಾಗಿ ಮುತ್ತಪ್ಪ ರೈ ಸಾಮಾಜಿಕ ಕಾಳಜಿ ಹೊಂದಿದ್ದರು ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
    ಅವರು ಭಾನುವಾರ ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಜಯ ಕರ್ನಾಟಕ ತಾಲೂಕು ಘಟಕದ ಪುನರ್ ರಚನೆ ಹಾಗು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
  ಮುತ್ತಪ್ಪ ರೈ ನೆಲ, ಜಲ, ಭಾಷೆ ಅಭಿಮಾನದ ಜೊತೆಗೆ ಬಡವರು, ಶೋಷಿತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಸಮಾಜದಲ್ಲಿ ಹಣ ಹೊಂದಿರುವ ಸಾಕಷ್ಟು  ಜನರಿದ್ದಾರೆ. ಆದರೆ ಬಹುತೇಕ ಮಂದಿ ತಾವು ದುಡಿದ ಹಣ ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸುವುದಿಲ್ಲ. ಮುತ್ತಪ್ಪ ರೈ ಯಾರು ಸಹ ನಿರೀಕ್ಷಿಸಲಾರದಷ್ಟು ಸಾವಿರಾರು ಸಾಮಾಜಿಕ ಕಾರ್ಯಗಳನ್ನು ಕೈಗೊಂಡಿದ್ದಾರೆ. ಅವರು ಸಮಾಜದಲ್ಲಿ ಅಕ್ರಮ, ಅನೀತಿ ಮಾರ್ಗಗಳಲ್ಲಿ ತೊಡಗಿರುವವರ ವಿರುದ್ಧ ಹೋರಾಟ ನಡೆಸಿದರು ಹೊರತು ಅವರಿಂದ ಸಮಾಜಕ್ಕೆ ಯಾವುದೇ ರೀತಿ ಕೆಡಕು ಉಂಡಾಗಿಲ್ಲ. ಈ ಹಿನ್ನಲೆಯಲ್ಲಿ ಅವರು ತೋರಿಸಿಕೊಟ್ಟಿರುವ ಮಾರ್ಗದಲ್ಲಿ ಪ್ರತಿಯೊಬ್ಬರು ಮುನ್ನಡೆಯುವ ಜೊತೆಗೆ ಸಂಘಟನೆಯನ್ನು ಮತ್ತಷ್ಟು ಸದೃಢಗೊಳಿಸಬೇಕೆಂದರು.
   ಮುಖಂಡರಾದ ಸಿ.ಎಂ ಖಾದರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್ ಹಾಗು ಹಿರಿಯ ನಗರಸಭಾ ಸದಸ್ಯ ವಿ. ಕದಿರೇಶ್ ಮಾತನಾಡಿ,  ಜಯ ಕರ್ನಾಟಕ ಸಂಘಟನೆ ಇನ್ನೂ ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಸಂಘಟನೆ ಮುಂದಾಳತ್ವವಹಿಸಿಕೊಂಡವರು ಸಂಘಟನೆಯನ್ನು ಒಳ್ಳೆಯ ಮಾರ್ಗದಲ್ಲಿ ಕೊಂಡೊಯ್ಯಲು ಶಕ್ತಿಮೀರಿ ಶ್ರಮಿಸಬೇಕು. ಯಾವುದೇ ಕಾರಣಕ್ಕೂ ಅಕ್ರಮ, ಅನೀತಿ ಮಾರ್ಗಗಳಿಗೆ ಅವಕಾಶ ಕಲ್ಪಿಸಿಕೊಡಬಾರದು ಎಂದರು.
   ಸಂಘಟನೆ ರಾಜ್ಯಾಧ್ಯಕ್ಷ ಡಾ. ಬಿ.ಎನ್ ಜಗದೀಶ್, ರಾಜ್ಯ ಕಾರ್ಯಾಧ್ಯಕ್ಷ ಎಚ್. ರಾಮಚಂದ್ರಯ್ಯ, ರಾಜ್ಯ ಉಪಾಧ್ಯಕ್ಷರಾದ ಮುನಿಸ್ವಾಮಿ, ಹರೀಶ್, ಜಿಲ್ಲಾಧ್ಯಕ್ಷ ಡಾ. ಜೆ.ಆರ್ ದೀಪಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಅರ್ ಶಿವಕುಮಾರ್ ಅದ್ವಾನಿ, ಕಾರ್ಯಾಧ್ಯಕ್ಷ ಅಬ್ದುಲ್ ರಹೀಮ್, ಮಹಿಳಾ ಘಟಕದ ಅಧ್ಯಕ್ಷೆ ನಾಜೀಮಾ, ತ್ಯಾಗರಾಜ್, ಡಿ.ಟಿ ಶಶಿಕುಮಾರ್, ಮುಕುಂದ, ಮುಖಂಡರಾದ ಬಾಲಕೃಷ್ಣ, ಚನ್ನಪ್ಪ, ಬಿ.ಎಸ್ ಬಸವೇಶ್ವರ್, ಶೋಭ ರವಿಕುಮಾರ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
  ನೂತನ ಪದಾಧಿಕಾರಿಗಳಾಗಿ ಆರ್. ಅರುಣ್, ಪಿ. ಶರವಣ, ಜೀವನ್, ಪಿ.ಬಿ ವಿನಯ್ ಸೇರಿದಂತೆ ಇನ್ನಿತರರು ಪದಗ್ರಹಣ ಸ್ವೀಕರಿಸಿದರು.  
    ಇದಕ್ಕೂ ಮೊದಲು ತರೀಕೆರೆ ರಸ್ತೆಯ ಮಹಾತ್ಮಗಾಂಧಿ ವೃತ್ತದಿಂದ ಲಯನ್ಸ್ ಕ್ಲಬ್ ವರೆಗೂ ಬೈಕ್ ರ‍್ಯಾಲಿ ನಡೆಸಲಾಯಿತು. ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

Saturday, February 20, 2021

ರಾಮನಕೊಪ್ಪ ಸರ್ಕಾರಿ ಶಾಲೆಯಲ್ಲಿ ಗ್ರಾಮ ವಾಸ್ತವ್ಯ


ಕಂದಾಯ ಇಲಾಖೆ ವತಿಯಿಂದ ಭದ್ರಾವತಿ ತಾಲೂಕಿನ ರಾಮನಕೊಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ತಾಲೂಕು ಆಡಳಿತ ಹಾಗು ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಗ್ರಾಮ ವಾಸ್ತವ್ಯ ನಡೆಸಲಾಯಿತು.
   ಭದ್ರಾವತಿ, ಫೆ. ೨೦: ಕಂದಾಯ ಇಲಾಖೆ ವತಿಯಿಂದ ತಾಲೂಕಿನ ರಾಮನಕೊಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ತಾಲೂಕು ಆಡಳಿತ ಹಾಗು ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಗ್ರಾಮ ವಾಸ್ತವ್ಯ ನಡೆಸಲಾಯಿತು.
   ಸರ್ಕಾರದ ಆದೇಶದಂತೆ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ನೇತೃತ್ವದಲ್ಲಿ ಅಧಿಕಾರಿಗಳು ಗ್ರಾಮ ವಾಸ್ತವ್ಯದ ಉದ್ದೇಶ ವಿವರಿಸುವ ಜೊತೆಗೆ ಪಿಂಚಣಿ, ಕೆರೆ ಒತ್ತುವರಿ, ಪೋಡಿ ಹಾಗು ಸಾಗುವಳಿ ಚೀಟಿ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಗ್ರಾಮಸ್ಥರಿಂದ ಅಹವಾಲು, ಅರ್ಜಿಗಳನ್ನು ಸ್ವೀಕರಿಸಿ ಸಮಸ್ಯೆಗಳನ್ನು ಶೀಘ್ರ ಇತ್ಯರ್ಥಪಡಿಸುವ ಭರವಸೆ ನೀಡಿದರು.
ಬೆಳಿಗ್ಗೆಯಿಂದ ಸಂಜೆವರೆಗೂ ನಡೆದ ಗ್ರಾಮ ವಾಸ್ತವ್ಯದಲ್ಲಿ ಒಟ್ಟು ೨೪ ಅರ್ಜಿಗಳನ್ನು ಸ್ಥಳದಲ್ಲಿಯೇ ಸ್ವೀಕರಿಸಲಾಯಿತು.
  ಉಪತಹಸೀಲ್ದಾರ್ ಮಲ್ಲಿಕಾರ್ಜುನಯ್ಯ, ಶಿರಸ್ತೇದಾರ್ ಮಂಜನಾಯ್ಕ, ಕಂದಾಯಾಧಿಕಾರಿ ಪ್ರಶಾಂತ್ ಸೇರಿದಂತೆ ಗ್ರಾಮ ಲೆಕ್ಕಾಧಿಕಾರಿಗಳು, ತಾಲೂಕು ಕಛೇರಿ ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ತಹಸೀಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳು ಶಾಲೆಯಲ್ಲಿ ಮಧ್ಯಾಹ್ನ ಗ್ರಾಮಸ್ಥರೊಂದಿಗೆ ಭೋಜನ ಸವಿದರು.






ಬಟ್ಟೆ ಅಂಗಡಿಗೆ ನುಗ್ಗಿದ ಕಾರು : ದ್ವಿಚಕ್ರ ವಾಹನ ಜಖಂ

 ಬಟ್ಟೆ ಅಂಗಡಿಗೆ ಏಕಾಏಕಿ ಕಾರೊಂದು ನುಗ್ಗಿರುವ ಘಟನೆ ಶನಿವಾರ ಭದ್ರಾವತಿ ಹಳೇನಗರದ ತಾಲೂಕು ಕಛೇರಿ  ರಸ್ತೆಯಲ್ಲಿರುವ ಕಂಚಿಬಾಗಿಲು ವೃತ್ತದ ಬಳಿ ನಡೆದಿದೆ.  
ಭದ್ರಾವತಿ, ಫೆ. ೨೦: ಬಟ್ಟೆ ಅಂಗಡಿಗೆ ಏಕಾಏಕಿ ಕಾರೊಂದು ನುಗ್ಗಿರುವ ಘಟನೆ ಶನಿವಾರ ಹಳೇನಗರದ ತಾಲೂಕು ಕಛೇರಿ ರಸ್ತೆಯಲ್ಲಿರುವ ಕಂಚಿಬಾಗಿಲು ವೃತ್ತದ ಬಳಿ ನಡೆದಿದೆ.
    ಹಲವಾರು ತಿಂಗಳಿನಿಂದ ಈ ಭಾಗದಲ್ಲಿ ಸೀಮೆಂಟ್ ರಸ್ತೆ ಹಾಗು ಚರಂಡಿ ಕಾಮಗಾರಿ ನಡೆಯುತ್ತಿದ್ದು, ರಸ್ತೆ ಅಕ್ಕ-ಪಕ್ಕದಲ್ಲಿ ಇನ್ನೂ ತಡೆಗೋಡೆ ನಿರ್ಮಿಸದ ಕಾರು ಏಕಾಏಕಿ ಕಾರು ನುಗ್ಗಿದೆ. ಈ ಸಂದರ್ಭದಲ್ಲಿ ಅಂಗಡಿ ಮುಂಭಾಗ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನ ಜಖಂಗೊಂಡಿದೆ.
     ಈ ಕುರಿತು ಪತ್ರಿಕೆಗೆ ಪ್ರತಿಕ್ರಿಯಿಸಿದ ಆಮ್ ಆದ್ಮಿ ಪಾರ್ಟಿ ತಾಲೂಕು ಉಪಾಧ್ಯಕ್ಷ ಇಬ್ರಾಹಿಂ ಖಾನ್, ಈ  ಭಾಗದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ. ಅಲ್ಲಲ್ಲಿ ತುಂಡು ಕಾಮಗಾರಿ ನಡೆಸಲಾಗುತ್ತಿದೆ. ಸುಮಾರು ೧ ವರ್ಷ ಕಳೆದರೂ ಸಹ ಪೂರ್ಣಗೊಂಡಿಲ್ಲ. ಇದರಿಂದಾಗಿ ಸ್ಥಳೀಯ ನಿವಾಸಿಗಳು, ಪಾದಚಾರಿಗಳು, ವಾಹನ ಸವಾರರು ತೊಂದರೆ  ಅನುಭವಿಸುವಂತಾಗಿದೆ. ರಸ್ತೆ ಅಕ್ಕ-ಪಕ್ಕದಲ್ಲಿ ತಡೆಗೋಡೆ ನಿರ್ಮಿಸದೆ ನಿರ್ಲಕ್ಷ್ಯ ವಹಿಸಿರುವುದು ದುರ್ಘಟನೆಗೆ ಕಾರಣವಾಗಿದೆ ಎಂದು ಆರೋಪಿಸಿದರು.

ಫೆ.೨೧ರಂದು ಜಯ ಕರ್ನಾಟಕ ನೂತನ ಪದಾಧಿಕಾರಿಗಳ ಪದಗ್ರಹಣ

    ಭದ್ರಾವತಿ, ಫೆ. ೨೦: ಜಯ ಕರ್ನಾಟಕ ತಾಲೂಕು ಪದಾಧಿಕಾರಿಗಳ ಪುನರ್ ರಚನೆ ಹಾಗು ಅಧ್ಯಕ್ಷರು, ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಫೆ.೨೧ರ ಭಾನುವಾರ ಬೆಳಿಗ್ಗೆ ೧೧ ಗಂಟೆಗೆ ನಡೆಯಲಿದೆ.
    ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್, ಜಯ ಕರ್ನಾಟಕ ಜಿಲ್ಲಾಧ್ಯಕ್ಷ ಡಾ. ಜೆ.ಆರ್ ದೀಪಕ್, ಗೌರವಾಧ್ಯಕ್ಷ ಸುರೇಶ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಅರ್ ಶಿವಕುಮಾರ್ ಅದ್ವಾನಿ, ಕಾರ್ಯಾಧ್ಯಕ್ಷ ಅಬ್ದುಲ್ ರಹೀಮ್, ಮಹಿಳಾ ಘಟಕದ ಅಧ್ಯಕ್ಷೆ ನಾಜೀಮಾ, ಆಟೋ ಘಟಕದ ಅಧ್ಯಕ್ಷ ಎಚ್.ಬಿ ಶಿವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
ನೂತನ ಪದಾಧಿಕಾರಿಗಳಾಗಿ ಆರ್. ಅರುಣ್, ಪಿ. ಶರವಣ, ಜೀವನ್, ಪಿ.ಬಿ ವಿನಯ್ ಸೇರಿದಂತೆ ಇನ್ನಿತರರು ಪದಗ್ರಹಣ ಸ್ವೀಕರಿಸಲಿದ್ದಾರೆ.  
    ಕಾರ್ಯಕರ್ತರು, ಮುತ್ತಪ್ಪ ರೈ ಅಭಿಮಾನಿಗಳು, ವಿವಿಧ ಸಂಘಟನೆಗಳ ಮುಖಂಡರು ಸೇರಿದಂತೆ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.

ಭದ್ರಾವತಿ : ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗಳಿಗೆ ಆಕ್ರೋಶ

ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನಾ ಮೆರವಣಿಗೆ

ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳನ್ನು ಖಂಡಿಸಿ ಭದ್ರಾವತಿಯಲ್ಲಿ ಶನಿವಾರ ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
   ಭದ್ರಾವತಿ, ಫೆ. ೨೦: ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳನ್ನು ಖಂಡಿಸಿ ನಗರದಲ್ಲಿ ಶನಿವಾರ ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
   ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಹಾಗು ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಮತ್ತು ನಗರದ ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳನ್ನು ಖಾಸಗೀಕರಣಗೊಳಿಸುತ್ತಿರುವುದನ್ನು ಖಂಡಿಸಿ ನಗರ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಶಾಸಕರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಮೆರವಣಿಗೆ ಹಲವು ವಿಭಿನ್ನತೆಗಳಿಗೆ ಸಾಕ್ಷಿಯಾಯಿತು.
ಪ್ರತಿಭಟನಾ ಮೆರವಣಿಗೆಯಲ್ಲಿ ಎತ್ತಿನ ಗಾಡಿ, ಟ್ರ್ಯಾಕ್ಟರ್‌ಗಳು ಒಂದೆಡೆ ಕಂಡು ಬಂದರೆ, ಮತ್ತೊಂದೆಡೆ ಕತ್ತೆಗಳನ್ನು ಸಹ ವಿಶೇಷ ಎಂಬಂತೆ ಹೂವಿನ ಹಾರಗಳೊಂದಿಗೆ ಕರೆತರಲಾಗಿತ್ತು. ಜೊತೆಗೆ ಜಾನಪದ ತಂಡಗಳು ಸೇರಿದಂತೆ ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.

ಸರ್ಕಾರದ ಶೋಷಣೆಗಳ ವಿರುದ್ಧ ಎಂದಿಗೂ ನಾನು ಜನರ ಪರವಾಗಿ ಹೋರಾಟ ನಡೆಸುತ್ತೇನೆ. ಕ್ಷೇತ್ರದ ಜನರು ಯಾವುದೇ ರೀತಿ ಆತಂಕಕ್ಕೆ ಒಳಗಾಗದಿರಿ. ಕೇಂದ್ರ ಹಾಗು ರಾಜ್ಯ ಸರ್ಕಾರಗಳು ತಕ್ಷಣ ಜನವಿರೋಧಿ ಧೋರಣೆಗಳಿಂದ ಹೊರಬರಬೇಕು.
                                  - ಬಿ.ಕೆ ಸಂಗಮೇಶ್ವರ್, ಶಾಸಕರು, ಭದ್ರಾವತಿ.

    ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಮುಖಂಡರು ಮಾತನಾಡಿ, ಕೇಂದ್ರ ಹಾಗು ರಾಜ್ಯ ಬಿಜೆಪಿ ಸರ್ಕಾರಗಳು ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬರುವ ಮೂಲಕ ಜನಸಾಮಾನ್ಯರನ್ನು ಶೋಷಿಸುತ್ತಿವೆ. ಬಡವರು ಬದುಕುವುದು ದುಸ್ತರವಾಗಿದ್ದು, ಅಗತ್ಯ ವಸ್ತುಗಳಾದ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ದಿನ ದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದರಿಂದಾಗಿ ಶ್ರೀಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅಲ್ಲದೆ ರೈತ ಹಾಗು ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಇವರ ಬದುಕು ಸಹ ಅತಂತ್ರವನ್ನಾಗಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  
   ತಕ್ಷಣ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು. ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡಿಯಬೇಕು. ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳನ್ನು ಅಭಿವೃದ್ಧಿಪಡಿಸಬೇಕು ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.

ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಬಡವರ, ರೈತರ, ಕಾರ್ಮಿಕರ ವಿರೋಧಿಗಳಾಗಿದ್ದು, ಬಂಡವಾಳ ಶಾಹಿಗಳ ಪರವಾದ ಸರ್ಕಾರಗಳಾಗಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ಎರಡು ಸರ್ಕಾರಗಳು ಅಧಿಕಾರದಲ್ಲಿ ಮುಂದುವರೆಯುವುದರಲ್ಲಿ ಯಾವುದೇ ನೈತಿಕತೆ ಇಲ್ಲ.
                             - ಕಿಮ್ಮನೆ ರತ್ನಾಕರ, ಮಾಜಿ ಸಚಿವರು.

     ಪ್ರತಿಭಟನಾ ಮೆರವಣಿಗೆ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಿಂದ ಆರಂಭಗೊಂಡು ಬಿ.ಎಚ್ ರಸ್ತೆ ಮೂಲಕ ಅಂಬೇಡ್ಕರ್ ವೃತ್ತ, ಹಾಲಪ್ಪ ವೃತ್ತ, ಮಾಧವಚಾರ್ ವೃತ್ತ ಮತ್ತು ರಂಗಪ್ಪ ವೃತ್ತ ಮೂಲಕ ತಾಲೂಕು ಕಛೇರಿವರೆಗೂ ಸಾಗಿತು.
    ಪ್ರತಿಭಟನಾ ಮೆರವಣಿಗೆಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ವಿಧಾನಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ತಾಲೂಕು ಪಂಚಾಯಿತಿ ಹಾಗು ವಿವಿಧ ಗ್ರಾಮ ಪಂಚಾಯಿತಿಗಳ ನೂತನ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಎಚ್.ಎಸ್ ಸುಂದರೇಶ್, ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಟಿ. ಚಂದ್ರೇಗೌಡ, ಗ್ರಾಮಾಂತರ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ಮಹಿಳಾ ಘಟಕ ಅಧ್ಯಕ್ಷೆ ಶೋಭಾ ರಾಮಚಂದ್ರ, ಯುವ ಘಟಕ ಅಧ್ಯಕ್ಷ ಜಿ. ವಿನೋದ್‌ಕುಮಾರ್ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಸೇರಿದಂತೆ ಸಾವಿರಾರು ಮಂದಿ ಪಾಲ್ಗೊಂಡಿದ್ದರು.  
      ಸುಮಾರು ೩ ತಾಸು ಸಂಚಾರ ದಟ್ಟಣೆ:
  ಸುಮಾರು ೧೧ ಗಂಟೆಗೆ ಆರಂಭವಾದ ಪ್ರತಿಭಟನೆ ಮಧ್ಯಾಹ್ನ ೨ ಗಂಟೆಗೆ ಮುಕ್ತಾಯಗೊಂಡಿತು. ಪ್ರತಿಭಟನೆ ಆರಂಭಗೊಳ್ಳುತ್ತಿದ್ದಂತೆ ಬಿ.ಎಚ್ ರಸ್ತೆಯಲ್ಲಿ ವಾಹನದಟ್ಟಣೆ ಉಂಟಾಗಿದ್ದು, ಸಂಚಾರಿ ಪೊಲೀಸರು ಸಂಚಾರ ನಿಯಂತ್ರಿಸಲು ಹರಸಾಹಸಪಡುವಂತಾಯಿತು. ಹೊಸ ಸೇತುವೆ ಮೂಲಕ ಪರ್ಯಾಯ ವ್ಯವಸ್ಥೆ ಕಲ್ಪಿಸಿದ್ದರೂ ಸಹ ರಸ್ತೆ ಕಾಮಗಾರಿ ನಡೆಯುತ್ತಿರುವ ಕಾರಣ ಸುಮಾರು ೩ ತಾಸು ಸಂಚಾರ ದಟ್ಟಣೆ ಕಂಡು ಬಂದಿತು.



      ಪ್ರತಿಷ್ಠೆಯ ಮೆರವಣಿಗೆ :
   ಮಾಜಿ ಶಾಸಕ ಎಂ.ಜೆ ಅಪ್ಪಾಜಿ ನಿಧನದ ನಂತರ ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ಕೈಗೊಂಡ ಮೊದಲ ಪ್ರತಿಭಟನಾ ಮೆರವಣಿಗೆ ಇದಾಗಿದ್ದು, ಈ ಹಿನ್ನಲೆಯಲ್ಲಿ ಸ್ವತಃ ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ಕುಟುಂಬ ವರ್ಗದವರು ಮತ್ತು ಪಕ್ಷದ ಮುಖಂಡರು, ಬೆಂಬಲಿಗರು ಸುಮಾರು ೧೫ ದಿನಗಳ ಹಿಂದೆಯೇ ಪ್ರತಿಭಟನೆ ರೂಪುರೇಷೆ ಸಿದ್ದಪಡಿಸಿಕೊಂಡಿದ್ದರು. ಸಾವಿರಾರು ಮಂದಿ ಪಾಲ್ಗೊಂಡು ಯಶಸ್ವಿಗೊಳಿಸಿರುವುದು ಶಾಸಕರ ಪ್ರತಿಷ್ಠೆಯಂತೆ ಕಂಡು ಬರುತ್ತಿದೆ.  




Friday, February 19, 2021

ನಗರದ ವಿವಿಧೆಡೆ ರಥ ಸಪ್ತಮಿ : ಉತ್ಸವ ಮೆರವಣಿಗೆ, ಸೂರ್ಯ ನಮಸ್ಕಾರ

ಭದ್ರಾವತಿ ಹಳೇನಗರದ ಪುರಾಣಪ್ರಸಿದ್ಧ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಶುಕ್ರವಾರ ರಥಸಪ್ತಮಿ ಅಂಗವಾಗಿ ಪ್ರಾಂಗಣದಲ್ಲಿ ಮೂಲ ದೇವರ ಉತ್ಸವಮೂರ್ತಿ ಮೆರವಣಿಗೆ ನಡೆಸಲಾಯಿತು.
    ಭದ್ರಾವತಿ, ಫೆ. ೧೯: ಹಳೇನಗರದ ಪುರಾಣಪ್ರಸಿದ್ಧ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಶುಕ್ರವಾರ ರಥಸಪ್ತಮಿ ಅಂಗವಾಗಿ ಪ್ರಾಂಗಣದಲ್ಲಿ ಮೂಲ ದೇವರ ಉತ್ಸವಮೂರ್ತಿ ಮೆರವಣಿಗೆ ನಡೆಸಲಾಯಿತು.
   ಪ್ರತಿ ವರ್ಷದಂತೆ ಈ ಬಾರಿ ಸಹ ಮೂಲದೇವರಿಗೆ ವಿಶೇಷ ಪೂಜೆ, ಆಲಂಕಾರದೊಂದಿಗೆ ಗರುಡ ವಾಹನದಲ್ಲಿ ಉತ್ಸವ ಮೆರವಣಿಗೆ ನಡೆಯಿತು. ಕೋವಿಡ್-೧೯ರ ಹಿನ್ನಲೆಯಲ್ಲಿ ಧಾರ್ಮಿಕ ಆಚರಣೆಗಳನ್ನು ಸರಳವಾಗಿ ನೆರವೇರಿಸಲಾಯಿತು.
  ದೇವಾಲಯದ ಸಹಾಯಕ ಅರ್ಚಕ ಶ್ರೀನಿವಾಸನ್, ನಾರಾಯಣಾಚಾರ್, ಅಭಿರಾಂ, ಶ್ರೀಕಾಂತ, ರಮಾಕಾಂತ, ಕೃಷ್ಣಪ್ಪ, ಸರು, ರವಿ, ಶೋಭಾ, ಅಭಿ, ಶೇಖರಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.  
   ೧೦೮ ಸೂರ್ಯ ನಮಸ್ಕಾರ :
    ಲಯನ್ಸ್ ಕ್ಲಬ್ ಶುಗರ್ ಟೌನ್ ಮತ್ತು ಲಯನ್ಸ್ ಯೋಗ ಸಮಿತಿ ಹಾಗು ಪತಂಜಲಿ ಯೋಗ ಸಮಿತಿ ವತಿಯಿಂದ ರಥಸಪ್ತಮಿ ಅಂಗವಾಗಿ ನ್ಯೂಟೌನ್ ಲಯನ್ಸ್ ಕಣ್ಣಿನ ಆಸ್ಪತ್ರೆಯಲ್ಲಿ ೧೦೮ ಸೂರ್ಯ ನಮಸ್ಕಾರ ನಡೆಸಲಾಯಿತು.
   ಕಾರ್ಯಕ್ರಮದಲ್ಲಿ ವೈದ್ಯರಾದ ಡಾ. ನರೇಂದ್ರ ಭಟ್, ಡಾ.ಪಿ ಸೆಲ್ವರಾಜ್, ಡಾ. ವೃಂದ ಭಟ್, ನಾರಾಯಣ ಮೂರ್ತಿ, ಅನ್ನಪೂರ್ಣ ಸತೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
   ಬನಶಂಕರಿ ದೇವಾಲಯದಲ್ಲಿ ರಥ ಸಪ್ತಮಿ:
  ಹೊಸಸೇತುವೆ ರಸ್ತೆಯಲ್ಲಿರುವ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ರಥ ಸಪ್ತಮಿ ಅಂಗವಾಗಿ ವಿವಿಧ ಧಾರ್ಮಿಕ ಆಚರಣೆಗಳು ಜರುಗಿದವು.
    ಅಮ್ಮನವರಿಗೆ ವಿಶೇಷ ಪೂಜೆ, ಅಲಂಕಾರ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಹಾಗು ಅನ್ನ ಪ್ರಸಾದ ವಿತರಣೆ ಸೇರಿದಂತೆ ಇನ್ನಿತರರ ಕಾರ್ಯಕ್ರಮಗಳು ಜರುಗಿದವು. ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷರು, ಪದಾಧಿಕಾರಿ ಸೇರಿದಂತೆ ನೂರಾರು ಭಕ್ತಾಧಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಎ.ಎನ್ ಕೃಷ್ಣಸ್ವಾಮಿ

    ಭದ್ರಾವತಿ, ಫೆ. ೧೯ : ಹೊಯ್ಸಳ ಕರ್ನಾಟಕ ಸಂಘದ ನೂತನ ಅಧ್ಯಕ್ಷರಾಗಿ ಎ.ಎನ್ ಕೃಷ್ಣಸ್ವಾಮಿ ಆಯ್ಕೆಯಾಗಿದ್ದಾರೆ.
  ವಿಶೇಷ ಸಭೆಯಲ್ಲಿ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಉಪಾಧ್ಯಕ್ಷರಾಗಿ ನರಸಿಂಹಸ್ವಾಮಿ, ಕಾರ್ಯದರ್ಶಿಯಾಗಿ ಕೆ. ಮಂಜುನಾಥ್, ಸಹಕಾರ್ಯದರ್ಶಿಗಳಾಗಿ ಸಿ.ಆರ್.ನಾಗೇಶ್, ಎಸ್.ವೆಂಕಟೇಶ್, ಸಂಘಟನಾ ಕಾರ್ಯದರ್ಶಿಯಾಗಿ ಟಿ.ಎನ್,ರಮೇಶ್, ಖಜಾಂಚಿಯಾಗಿ ಎಸ್. ಶೇಷಾದ್ರಿ, ಸಂಚಾಲಕರಾಗಿ ಎಚ್.ಎನ್,ಸುಬ್ರಹ್ಮಣ್ಯ, ಎಚ್.ಎಂ.ರಮೇಶ್ ಹಾಗು ನಿರ್ದೇಶಕರಾಗಿ ಬಿ.ಪ್ರದೀಪ್, ವಿ.ಎನ್ ಪ್ರಕಾಶ್, ಎ.ಎಸ್ ಭಾಸ್ಕರ್, ಎಂ.ಆರ್.ಬಾಲಸುಬ್ರಹ್ಮಣ್ಯ, ಎನ್.ಕೆ ನಾಗರಾಜ್.ಮತ್ತು ಮಹಿಳಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಯಶೋಧ ಪ್ರಸನ್ನ, ಮಂಜುಳ ಚಂದ್ರಶೇಖರ್, ಬಿ.ಎಚ್ ಶಾರದ ವೆಂಕಟೇಶ್, ಯಶೋಧ ನಾಗರಾಜ್ ಹಾಗು ನಾಗಲಕ್ಷ್ಮಿ ಎಚ್.ಎಂ ರಮೇಶ್ ಆಯ್ಕೆಯಾಗಿದ್ದಾರೆ.

ಫೆ.೨೦ರಂದು ಕ್ಯಾನ್ಸರ್ ತಪಾಸಣೆ, ಅರಿವು ಕಾರ್ಯಕ್ರಮ

   ಭದ್ರಾವತಿ, ಫೆ. ೧೯; ಚುಂಚಾದ್ರಿ ಮಹಿಳಾ ವೇದಿಕೆ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಫೆ,೨೦ರಂದು ಮಧ್ಯಾಹ್ನ ೨ ಗಂಟೆಗೆ ಅಪ್ಪರ್‌ಹುತ್ತಾ ಕೆಂಪೇಗೌಡ ಸಮುದಾಯ ಭವನದಲ್ಲಿ ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆ ಸಹಯೋಗದೊಂದಿಗೆ ತಜ್ಞ ವೈದ್ಯರುಗಳಿಂದ ಉಚಿತ ಕ್ಯಾನ್ಸರ್ ರೋಗ ತಪಾಸಣೆ ಹಾಗೂ ಅರಿವು ಕಾರ್ಯಕ್ರಮ ಆಯೋಜಿಸಲಾಗಿದೆ.
   ಆಸಕ್ತ ಮಹಿಳೆಯರು ಶಿಬಿರದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಚುಂಚಾದ್ರಿ ಮಹಿಳಾ ವೇದಿಕೆ ಅಧ್ಯಕ್ಷರು, ಮೊ: ೮೬೬೦೨೧೯೨೫೬, ಕಾರ್ಯದರ್ಶಿ, ಮೊ: ೯೯೪೫೫೧೦೧೯೫ ಸಂಖ್ಯೆಗೆ ಕರೆ ಮಾಡಬಹುದಾಗಿದೆ.  

ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ : ಯಶಸ್ವಿಯಾಗಿ ಜರುಗಿದ ರಕ್ತದಾನ ಶಿಬಿರ

ವಿಶ್ವ ಹಿಂದೂ ಪರಿಷತ್, ಬಜರಂಗದಳ ಭದ್ರಾವತಿ ತಾಲೂಕಿನ ಅರಳಿಹಳ್ಳಿ ಮತ್ತು ಸೀತಾರಾಮಪುರ ಘಟಕಗಳ ವತಿಯಿಂದ ಶುಕ್ರವಾರ ಉಚಿತ ರಕ್ತದಾನ ಶಿಬಿರದೊಂದಿಗೆ ವಿಶೇಷವಾಗಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಿಸಲಾಯಿತು.

ಭದ್ರಾವತಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶ್ರೀ ಛತ್ರಪತಿ ಶಿವಾಜಿ ಸೇವಾ ಸಂಘದ ಸಹಯೋಗದೊಂದಿಗೆ ತಾಲೂಕು ಕಛೇರಿ ಸಭಾಂಗಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

   ಭದ್ರಾವತಿ, ಫೆ. ೧೯: ವಿಶ್ವ ಹಿಂದೂ ಪರಿಷತ್, ಬಜರಂಗದಳ ತಾಲೂಕಿನ ಅರಳಿಹಳ್ಳಿ ಮತ್ತು ಸೀತಾರಾಮಪುರ ಘಟಕಗಳ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರ ಯಶಸ್ವಿಯಾಗಿ ಮುಕ್ತಾಯಗೊಂಡಿತು.
   ರೋಟರಿ ಕ್ಲಬ್ ಮತ್ತು ರಕ್ತ ನಿಧಿ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಶಿಬಿರದಲ್ಲಿ ಸುಮಾರು ೭೦ ರಕ್ತದಾನಿಗಳು ಪಾಲ್ಗೊಂಡಿದ್ದರು.
  ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಹ ಕಾರ್ಯವಾಹ ಮಧುಕರ್ ಶಿವಾಜಿ ಮಹಾರಾಜರ ಕುರಿತು ವಿಶೇಷ ಉಪನ್ಯಾಸ ನಡೆಸಿಕೊಟ್ಟರು.
   ಬಜರಂಗದಳ ಜಿಲ್ಲಾ ಸಹ ಸಂಚಾಲಕ ರಾಘವನ್ ವಡಿವೇಲು, ಸುನಿಲ್‌ಕುಮಾರ್, ದೇವರಾಜ್, ಮಲ್ಲಿಕಾ, ಗಣಪತಿಭಟ್, ತ್ಯಾಗರಾಜ್, ಜೈಕುಮಾರ್, ಕೃಷ್ಣ, ವಿನೋದ, ಸುಬ್ರಮಣಿ, ಹಾಲೇಶ್, ಸಂತೋಷ್, ರಾಜೇಂದ್ರ, ಶಂಕರ್  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ತಾಲೂಕು ಆಡಳಿತದಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ:
   ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶ್ರೀ ಛತ್ರಪತಿ ಶಿವಾಜಿ ಸೇವಾ ಸಂಘದ ಸಹಯೋಗದೊಂದಿಗೆ ತಾಲೂಕು ಕಛೇರಿ ಸಭಾಂಗಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಪನಮನದೊಂದಿಗೆ ಗೌರವ ಸಲ್ಲಿಸಲಾಯಿತು.
   ಛತ್ರಪತಿ ಶಿವಾಜಿ ಸೇವಾ ಸಂಘದ ಅಧ್ಯಕ್ಷ, ಹಿರಿಯ ರೈತ ಮುಖಂಡ ಯಶವಂತರಾವ್ ಘೋರ್ಪಡೆ, ಪದಾಧಿಕಾರಿಗಳಾದ ಪ್ರಕಾಶ್‌ರಾವ್ ದುರೆ,ವಿಶ್ವೇಶ್ವರರಾವ್ ಗಾಯಕ್ವಾಡ್, ಮಂಜುನಾಥ್‌ರಾವ್ ಪವಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಶಿವಾಜಿರಾವ್‌ಗಾಯಕ್ವಾಡ್, ಸಚಿನ್ ಸಿಂದ್ಯಾ ಅಣ್ಣೋಜಿರಾವ್, ಸುನಿಲ್‌ಗಾರ್ಗೆ, ಮಲ್ಲೇಶ್‌ರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ, ನಾಡು-ನುಡಿಗೆ ಅವಮಾನ

ಶಾಸಕ ಹ್ಯಾರಿಸ್ ವಿರುದ್ಧ ಕಠಿಣ ಕೈಗೊಳ್ಳಿ : ಕೆ. ಮಂಜುನಾಥ್ ಆಗ್ರಹ


ವರನಟ, ನಟ ಸಾರ್ವಭೌಮ ಡಾ. ರಾಜ್‌ಕುಮಾರ್ ಪುತ್ಥಳಿ ಕುರಿತು ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಶಾಸಕ ಹ್ಯಾರಿಸ್ ವಿರುದ್ಧ ಶುಕ್ರವಾರ ಭದ್ರಾವತಿ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತದಲ್ಲಿ ಕರ್ನಾಟಕ ಜನಸೈನ್ಯ ವತಿಯಿಂದ ಪ್ರತಿಭಟನೆ ನಡೆಸಲಾಯಿತು
   ಭದ್ರಾವತಿ, ಫೆ. ೧೯: ಕನ್ನಡಿಗರ ಸ್ವಾಭಿಮಾನ ಕೆಣಕುತ್ತಿರುವ ಹಾಗು ಕನ್ನಡ ಭಾಷೆ ನಾಡು-ನುಡಿಗೆ ಅಗೌರವದಿಂದ ತೋರಿಸುತ್ತಿರುವ ಕಾಂಗ್ರೆಸ್ ಶಾಸಕ ಹ್ಯಾರಿಸ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಕರ್ನಾಟಕ ಜನಸೈನ್ಯ ಜಿಲ್ಲಾಧ್ಯಕ್ಷ ಕೆ. ಮಂಜುನಾಥ್ ಎಚ್ಚರಿಸಿದರು.
    ಅವರು ಶುಕ್ರವಾರ ನಗರದ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತದಲ್ಲಿ ವರನಟ, ನಟ ಸಾರ್ವಭೌಮ ಡಾ. ರಾಜ್‌ಕುಮಾರ್ ಪುತ್ಥಳಿ ಕುರಿತು ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಶಾಸಕ ಹ್ಯಾರಿಸ್ ವಿರುದ್ಧ ಪ್ರತಿಭಟನೆ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.
   ಕಾಂಗ್ರೆಸ್ ಶಾಸಕ ಹ್ಯಾರಿಸ್ ಹಾಗು ಅವರ ಪುತ್ರ ಮಹಮದ್ ಹ್ಯಾರಿಸ್ ನಲಪಾಡ್  ಇಬ್ಬರು ಸಹ ಪದೇ ಪದೇ ಕನ್ನಡಿಗರ ಸ್ವಾಭಿಮಾನ ಕೆಣಕುವ ಜೊತೆಗೆ ನಾಡು-ನುಡಿಗೆ ಅವಮಾನ ಮಾಡುತ್ತಿದ್ದಾರೆ. ತಕ್ಷಣ ಇವರನ್ನು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್‌ರವರು ಪಕ್ಷದಿಂದ ವಜಾಗೊಳಿಸಬೇಕು. ಇದೆ ರೀತಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸಹ ಹ್ಯಾರಿಸ್ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
   ಇದಕ್ಕೂ ಮೊದಲು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಹ್ಯಾರಿಸ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
    ಜಿಲ್ಲಾ ಗೌರವಾಧ್ಯಕ್ಷ ಅನಿಲ್(ಬಾಬು), ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ್, ಗ್ರಾಮಾಂತರ ಅಧ್ಯಕ್ಷ ಪ್ರದೀಪ್, ತಾಲೂಕು ಅಧ್ಯಕ್ಷ ರಾಜು, ಪರಮೇಶ್, ಸಂತೋಷ್‌ಕುಮಾರ್, ದೀಕ್ಷಿತ್, ಚೇತನ್, ಶಿವು, ಸುನಿಲ್, ಜಗ್ಗ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.  

Thursday, February 18, 2021

ಉತ್ತಮ ಕಾರ್ಯಕ್ಕೆ ಜನರಿಂದ ಸ್ಪಂದನೆ : ಮನೋಹರ್

ಸಿದ್ದಾರೂಢ ನಗರದ ಶಾಶ್ವತಿ ಮಹಿಳಾ ಸಮಾಜದ ವತಿಯಿಂದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾಜದ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಮಾರಂಭದಲ್ಲಿ
   ಭದ್ರಾವತಿ, ಫೆ. ೧೮: ಸಮಾಜದಲ್ಲಿ ಉತ್ತಮ ಕಾರ್ಯಗಳನ್ನು ಕೈಗೊಂಡಾಗ ಜನರು ಗುರುತಿಸುವ ಜೊತೆಗೆ ಸ್ಮರಿಸುತ್ತಾರೆಂದು ನಗರಸಭೆ ಪೌರಾಯುಕ್ತ ಮನೋಹರ್ ತಿಳಿಸಿದರು.
   ಅವರು ಸಿದ್ದಾರೂಢ ನಗರದ ಶಾಶ್ವತಿ ಮಹಿಳಾ ಸಮಾಜದ ವತಿಯಿಂದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾಜದ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಹಿಳಾ ಸಂಘ ಸಂಘಟನೆಗಳು ಸಹ ಉತ್ತಮ ಸಮಾಜ ನಿರ್ಮಾಣದಲ್ಲಿ ಪಾಲ್ಗೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ಶಾಶ್ವತಿ ಮಹಿಳಾ ಸಮಾಜ ಇತರ ಸಂಘಟನೆಗಳಿಗೆ ಮಾದರಿಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
  ನ್ಯಾಯವಾದಿ ರೂಪಾರಾವ್ ಸಮಾರಂಭದ ಅಧ್ಯಕ್ಷತೆ ಮಾತನಾಡಿ, ಕಾನೂನಿನ ಅರಿವಿನೊಂದಿಗೆ ಸಮಾಜಘಾತುಕ ಚಟುವಟಿಕೆಗಳ ವಿರುದ್ಧ ಹೋರಾಟ ನಡೆಸಿದಾಗ ಮಾತ್ರ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.
  ಸುನಂದ ತಂಡದವರು ಪ್ರಾರ್ಥಿಸಿದರು. ಮಮತ ಸ್ವಾಗತಿಸಿದರು. ಯಶೋಧ ವೀರಭದ್ರಪ್ಪ ಕಾರ್ಯಕ್ರಮ ನಿರೂಪಿಸಿದರು. ರಶ್ಮಿ ಆರಾಧ್ಯ ವಂದಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ವರ್ಷದ ಅದೃಷ್ಟದ ಮಹಿಳೆಯಾಗಿ ರೂಪಾರಾವ್ ಲಾಟರಿ ಮೂಲಕ ಆಯ್ಕೆಯಾದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಫೆ.೧೯ರಂದು ರಕ್ತದಾನ ಶಿಬಿರ

ಭದ್ರಾವತಿ, ಫೆ. ೧೮: ತಾಲೂಕಿನ ವಿಶ್ವ ಹಿಂದೂ ಪರಿಷತ್ ಬಜರಂಗದಳ ಅರಳಿಹಳ್ಳಿ ಮತ್ತು ಸೀತಾರಾಮಪುರ ಘಟಕದ ವತಿಯಿಂದ ಫೆ. ೧೯ರಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ.
ಅರಳಿಹಳ್ಳಿ ಗ್ರಾಮದ ಹಾಲಿನ ಡೈರಿ ಮುಂಭಾಗ ಶಿಬಿರ ಬೆಳಿಗ್ಗೆ ೮ ಗಂಟೆಯಿಂದ ಸಂಜೆ ೪ ಗಂಟೆವರೆಗೆ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಕೋರಲಾಗಿದೆ.

ಫೆ.೧೯ರಂದು ಶಾಸಕ ಹ್ಯಾರಿಸ್ ವಿರುದ್ಧ ಪ್ರತಿಭಟನೆ

ಭದ್ರಾವತಿ, ಫೆ. ೧೮: ಕನ್ನಡದ ವರನಟ ಡಾ. ರಾಜ್‌ಕುಮಾರ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಶಾಸಕ ಹ್ಯಾರಿಸ್ ವಿರುದ್ಧ ಫೆ.೧೯ರಂದು ಮಧ್ಯಾಹ್ನ ೧೨ ಗಂಟೆಗೆ ಬಿ.ಎಚ್ ರಸ್ತೆ ಡಾ. ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಕರ್ನಾಟಕ ಜನಸೈನ್ಯ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
    ಶಾಸಕ ಹ್ಯಾರಿಸ್ ನಟ ಸಾರ್ವಭೌಮ ಡಾ. ರಾಜ್‌ಕುಮಾರ್ ಪುತ್ಥಳಿ ಕುರಿತು ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವುದು ರಾಜ್‌ಕುಮಾರ್ ಅಭಿಮಾನಿಗಳಿಗೆ ಹಾಗು ಕನ್ನಡಿಗರಿಗೆ ಮಾಡಿರುವ ಅಪಮಾನವಾಗಿದ್ದು, ಅಲ್ಲದೆ ಅವರ ಹೇಳಿಕೆಯಿಂದ ಕನ್ನಡಿಗರ ಮನಸ್ಸಿಗೆ ನೋವುಂಟಾಗಿದೆ. ಈ ಹಿನ್ನಲೆಯಲ್ಲಿ ಅವರ ವಿರುದ್ಧ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಜನಸೈನ್ಯ ಜಿಲ್ಲಾಧ್ಯಕ್ಷ ಕೆ. ಮಂಜುನಾಥ್ ಕೋರಿದ್ದಾರೆ.

ವಿಐಎಸ್‌ಎಲ್-ಎಂಪಿಎಂ ಕಾರ್ಖಾನೆಗಳ ಅಭಿವೃದ್ಧಿಗೆ, ಮೈಕ್ರೋ ಫೈನಾನ್ಸ್ ಕಂಪನಿಗಳ ಸ್ಥಗಿತಕ್ಕೆ ಆಗ್ರಹ

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಗೆ ಜೆಡಿಯು ಶಶಿಕುಮಾರ್ ಎಸ್. ಗೌಡ ಮನವಿ


ಮೈಕ್ರೋ ಫೈನಾನ್ಸ್ ಕಂಪನಿಗಳ ವ್ಯಾಪ್ತಿಗೆ ಒಳಪಡುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಹೊರತುಪಡಿಸಿ ರಾಜ್ಯದಲ್ಲಿರುವ ಎಲ್ಲಾ ಮೈಕ್ರೋ ಫೈನಾನ್ಸ್ ಕಂಪನಿಗಳ ಚಟುವಟಿಕೆಗಳನ್ನು ಸ್ಥಗಿತಗೊಳಿಸುವಂತೆ ಹಾಗೂ ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳನ್ನು ಅಭಿವೃದ್ಧಿ ಪುನಶ್ಚೇತನಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಂಯುಕ್ತ ಜನತಾದಳ ರಾಜ್ಯ ಯುವ ಘಟಕದ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಗೆ ಮನವಿ ಸಲ್ಲಿಸಿದ್ದಾರೆ.
    ಭದ್ರಾವತಿ, ಫೆ. ೧೮: ಮೈಕ್ರೋ ಫೈನಾನ್ಸ್ ಕಂಪನಿಗಳ ವ್ಯಾಪ್ತಿಗೆ ಒಳಪಡುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಹೊರತುಪಡಿಸಿ ರಾಜ್ಯದಲ್ಲಿರುವ ಎಲ್ಲಾ ಮೈಕ್ರೋ ಫೈನಾನ್ಸ್ ಕಂಪನಿಗಳ ಚಟುವಟಿಕೆಗಳನ್ನು ಸ್ಥಗಿತಗೊಳಿಸುವಂತೆ ಹಾಗೂ ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳನ್ನು ಅಭಿವೃದ್ಧಿ ಪುನಶ್ಚೇತನಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಂಯುಕ್ತ ಜನತಾದಳ ರಾಜ್ಯ ಯುವ ಘಟಕದ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಗೆ ಮನವಿ ಸಲ್ಲಿಸಿದ್ದಾರೆ.
   ತಾಲೂಕಿನ ಆನವೇರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ವಿವಿಧೆಡೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ  ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದು, ರಾಜ್ಯದಲ್ಲಿರುವ ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಬಡ ಮಹಿಳೆಯರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಈಗಾಗಲೇ ಈ ಕುರಿತು ಹಲವು ಬಾರಿ ಜಿಲ್ಲಾಧಿಕಾರಿಗಳಿಗೆ ಹಾಗು ಲಿಡ್ ಬ್ಯಾಂಕ್ ಮುಖ್ಯಸ್ಥರಿಗೆ ಮನವಿ ಸಲ್ಲಿಸಲಾಗಿದ್ದು, ಆದರೂ ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ. ಈ ಹಿನ್ನಲೆಯಲ್ಲಿ ತಕ್ಷಣ ಕ್ರಮ ಕೈಗೊಂಡು ಮೈಕೋ ಫೈನಾನ್ಸ್ ಕಂಪನಿಗಳ ಚಟುವಟಿಕೆಗಳನ್ನು ಸ್ಥಗಿತಗೊಳಿಸುವಂತೆ ಕೋರಿದ್ದಾರೆ.
   ಅವನತಿ ದಾರಿಯಲ್ಲಿ ಸಾಗುತ್ತಿರುವ ನಗರದ ಕೇಂದ್ರ ಉಕ್ಕು ಪ್ರಾಧಿಕಾರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಹಾಗು ಕಳೆದ ಸುಮಾರು ೫ ವರ್ಷಗಳಿಂದ ಕಾರ್ಖಾನೆ ಯಂತ್ರಗಳು ಸ್ಥಗಿತಗೊಂಡಿರುವ ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆ ಈ ಎರಡು ಕಾರ್ಖಾನೆಗಳನ್ನು ಪುನಶ್ಚೇತನಗೊಳಿಸುವಂತೆ ಮನವಿ ಮಾಡಿದ್ದಾರೆ.
   ಸರ್ಕಾರಿ ಆದೇಶದ ಪ್ರಕಾರ ಪ್ರತಿ ತಿಂಗಳು ಸರ್ಕಾರಿ ರಜಾ ದಿನ ಹೊರತುಪಡಿಸಿ ಎಲ್ಲಾ ದಿನ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಬೇಕು. ಆದರೆ ನ್ಯಾಯಬೆಲೆ ಅಂಗಡಿಗಳ ಮಾಲೀಕರು ಕೇವಲ ೫ ರಿಂದ ೬ ದಿನ ಮಾತ್ರ ತೆಗೆಯುತ್ತಿದ್ದಾರೆ. ಸರ್ಕಾರಿ ಆದೇಶ ಪಾಲಿಸುತ್ತಿಲ್ಲ ತಕ್ಷಣ ಕ್ರಮ ಕೈಗೊಳ್ಳುವುದು. ಜಿಲ್ಲೆಯಲ್ಲಿ ವಂಶಪಾರಂಪರ್ಯವಾಗಿ ೨-೩ ತಲೆಮಾರುಗಳಿಂದ ಸರ್ಕಾರದ ಆದೇಶದ ವಿರುದ್ಧವಾಗಿ ನ್ಯಾಯಬೆಲೆ ಅಂಗಡಿಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ತಾಲೂಕಿನಲ್ಲಿ ಸುಮಾರು ೭೦ ನ್ಯಾಯಬೆಲೆ ಅಂಗಡಿಗಳಿದ್ದು, ಈ ಪೈಕಿ ಸುಮಾರು ೨೦ ನ್ಯಾಯಬೆಲೆ ಅಂಗಡಿಗಳಲ್ಲಿ ಆದೇಶ ಉಲ್ಲಂಘಿಸಲಾಗಿದೆ.  ಈ ಕುರಿತು ಈಗಾಗಲೇ ಹಲವು ಬಾರಿ ಆಹಾರ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕರಿಗೆ(ಎ.ಡಿ) ಮನವಿ ಸಲ್ಲಿಸಲಾಗಿದೆ. ಆದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಶಶಿಕುಮಾರ್ ಎಸ್. ಗೌಡ ಆಗ್ರಹಿಸಿದ್ದಾರೆ.  
   ಸಂಯುಕ್ತ ಜನತಾದಳ ರಾಜ್ಯ ಸಂಘಟನಾ ಕಾರ್ಯದರ್ಶಿ ಬಾಬು ದೀಪಕ್ ಕುಮಾರ್, ಮಹಿಳಾ ಘಟಕದ ರಾಜ್ಯ ಸಂಚಾಲಕಿ ಎಂ.ಡಿ ಕಲಾವತಿ ಹಾಗು ಮುಖಂಡರಾದ ಡಿ.ಕೆ ಶ್ರೀನಿವಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.