Sunday, October 4, 2020

ಕಲಾವಿದರ ನೆರವಿಗೆ ಸಂಘಟನೆ ಅಗತ್ಯ : ಬಿ.ಆರ್ ಗೋಪಾಲ್

ಅಖಿಲ ಕರ್ನಾಟಕ ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ನೂತನ ಕಛೇರಿ ಭದ್ರಾವತಿಯಲ್ಲಿ ಭಾನುವಾರ ಉದ್ಘಾಟನೆ ಗೊಂಡಿತು. ಸಂಘದ ಅಧ್ಯಕ್ಷ ಬಿ.ಆರ್ ಗೋಪಾಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಭದ್ರಾವತಿ, ಅ. ೪: ಕಲಾವಿದರ ಸಂಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಂಘಟನೆ ಅಗತ್ಯವಿದ್ದು, ಎಲ್ಲರೂ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕೈಜೋಡಿಸಬೇಕೆಂದು ಹಿರಿಯ ಕಲಾವಿದ, ಅಖಿಲ ಕರ್ನಾಟಕ ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಆರ್ ಗೋಪಾಲ್ ಮನವಿ ಮಾಡಿದರು.
      ಅವರು ಭಾನುವಾರ ನಗರದ ಸಿ.ಎನ್ ರಸ್ತೆಯಲ್ಲಿ ಸಂಘದ ನೂತನ ಕಛೇರಿ ಉದ್ಘಾಟಿಸಿ ಮಾತನಾಡಿದರು. ಕಳೆದ ೫ ವರ್ಷಗಳಿಂದ ಸಂಘಟನೆ ಅಸ್ತಿತ್ವದಲ್ಲಿದ್ದು, ಪ್ರಸ್ತುತ ಮತ್ತಷ್ಟು ಕ್ರಿಯಾಶೀಲವಾಗಿಸುವ ಅಗತ್ಯವಿದೆ. ಈ ಮೂಲಕ ಕಲಾವಿದರ ಸಂಕಷ್ಟಗಳನ್ನು ಸಾಧ್ಯವಾದಷ್ಟು ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕಾಗಿದೆ ಎಂದರು.
      ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಲಾವಿದರು ಮಾತನಾಡಿ, ರಾಜ್ಯದಲ್ಲಿ ಬೆಂಗಳೂರು ಮತ್ತು ಭದ್ರಾವತಿ ೨ ಎರಡು ನಗರಗಳು ಮಾತ್ರ ಕಲಾವಿದರ ನೆಲೆಬೀಡಾಗಿವೆ.  ಎಲ್ಲಾ ರೀತಿಯ ಕಲಾವಿದರು ಈ ಎರಡು ನಗರಗಳಲ್ಲಿ ಇದ್ದು, ಬಹಳಷ್ಟು ಕಲಾವಿದರು ಈ ನಗರಗಳಲ್ಲಿ ತಮ್ಮ ಅಸ್ತಿತ್ವ ಕಂಡುಕೊಂಡು ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಕಲಾವಿದರು ಬಹಳಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಸಂಘಟನೆ ಕಲಾವಿದರ ಸಂಕಷ್ಟಗಳಿಗೆ ಪೂರಕವಾಗಿ ಸ್ಪಂದಿಸಬೇಕೆಂದು ಮನವಿ ಮಾಡಿದರು.
       ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ಜಗನ್ನಾಥ್, ಹಿರಿಯ ಸಲಹೆಗಾರ ನೂರುಲ್ಲಾ, ಮಹಿಳಾ ಘಟಕದ ಅಧ್ಯಕ್ಷೆ ನೇತ್ರಾ ಮೋಹನ್, ಡಿಎಸ್‌ಎಸ್ ಮುಖಂಡರಾದ ಎಂ. ಪಳನಿರಾಜ್, ಎಂ. ಕುಬೇಂದ್ರಪ್ಪ, ಸಾಹಿತಿ ಜೆ.ಎನ್ ಬಸವರಾಜಪ್ಪ, ನ್ಯಾಯವಾದಿ ಅಖಿಲ್ ಅಹಮದ್, ಪ್ರಮುಖರಾದ ಮೋಹನ್, ಸಿದ್ದೇಶ್, ರಾಜು, ಅಹಮದ್ ಜಾನ್(ಬಾಬು), ಶಂಕರ್ ಬಾಬು, ನಸ್ರುಲ್ಲಾ ಷರೀಫ್, ಪ್ರವೀಣ್, ಮಂಜಣ್ಣ, ಆರ್. ರಂಗರಾಮ್, ಅವಿನಿ, ಅಂಬಿಕಾ, ಶಿಲ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
        ವೆಂಕಟೇಶ್ ಕಾರ್ಯಕ್ರಮ ನಿರೂಪಿಸಿದರು. ನಾಗರಾಜ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಡಾ.ಎಸ್.ಪಿ ಬಾಲಸುಬ್ರಮಣ್ಯಂರವರ ನಿಧನಕ್ಕೆ ಸಂತಾಪ ಸೂಚಿಸಿ ಅವರ ಭಾವಚಿತ್ರ ಪುಷ್ಪನಮನ ಸಲ್ಲಿಸಲಾಯಿತು.

ಜನಪ್ರತಿನಿಧಿಗಳಿಗೆ ಸಮಾಜವಾದಿ ಚಿಂತನೆಗಳು ಅಗತ್ಯ : ತೇಜಸ್ವಿ ವಿ. ಪಟೇಲ್


ಜೆ.ಎಚ್ ಪಟೇಲ್ ಅಭಿಮಾನಿ ಬಳಗದ ವತಿಯಿಂದ ಭದ್ರಾವತಿ ಕಾಂಚನಾ ಹೋಟೇಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಜಿ ಮುಖ್ಯಮಂತ್ರಿ, ದಿವಂಗತ ಜೆ.ಎಚ್ ಪಟೇಲ್‌ರವರ ೯೦ನೇ ಜನ್ಮದಿನ ಕಾರ್ಯಕ್ರಮವನ್ನು ರೈತ  ಮುಖಂಡ ತೇಜಸ್ವಿ ವಿ. ಪಟೇಲ್, ನಗರಸಭೆ ಪೌರಾಯುಕ್ತ ಮನೋಹರ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
ಭದ್ರಾವತಿ, ಅ. ೪: ಸಮಾಜವಾದಿ ಚಿಂತನೆಗಳು ಇದ್ದಾಗ ಮಾತ್ರ ಒಬ್ಬ ಜನಪ್ರತಿನಿಧಿ ಪ್ರಬುದ್ಧವಾಗಿ ಬೆಳೆಯಲು ಸಾಧ್ಯ ಎಂದು ರೈತ  ಮುಖಂಡ ತೇಜಸ್ವಿ ವಿ. ಪಟೇಲ್ ಹೇಳಿದರು.
        ಅವರು ಭಾನುವಾರ ಜೆ.ಎಚ್ ಪಟೇಲ್ ಅಭಿಮಾನಿ ಬಳಗದ ವತಿಯಿಂದ ನಗರದ ಕಾಂಚನಾ ಹೋಟೇಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಜಿ ಮುಖ್ಯಮಂತ್ರಿ, ದಿವಂಗತ ಜೆ.ಎಚ್ ಪಟೇಲ್‌ರವರ ೯೦ನೇ ಜನ್ಮದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
         ಜೆ.ಎಚ್ ಪಟೇಲ್‌ರವರ ಸಮಾಜವಾದಿ ಚಿಂತನೆಗಳು ಇಂದಿಗೂ ಅವರನ್ನು ಜನರ ಮನಸ್ಸಿನಲ್ಲಿ ಉಳಿದುಕೊಳ್ಳುವಂತೆ ಮಾಡಿವೆ. ನೇರ ನುಡಿ-ನಡೆ ವ್ಯಕ್ತಿತ್ವದ ಗುಣ, ಸಾಮಾನ್ಯರ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಮನೋಭಾವ, ಭವಿಷ್ಯದ ಚಿಂತನೆಗಳು ಪಟೇಲ್‌ರವರಲ್ಲಿ ಕಂಡು ಬರುವ ವಿಶೇಷತೆಗಳಾಗಿದ್ದವು ಎಂದರು.
         ದಲಿತ ಹಾಗು ರೈತ ಚಳುವಳಿಗಳು ಉದಯಿಸಿದ, ಸಮಾಜವಾದಿ ಹೋರಾಟಗಳಿಗೆ ನೆಲೆಯಾಗಿದ್ದ, ರಾಷ್ಟ್ರ ಹಾಗು ರಾಜ್ಯ ರಾಜಕಾರಣದ ಕೇಂದ್ರ ಬಿಂದುವಾಗಿದ್ದ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಸ್ತುತ ಸಮಾಜವಾದಿ ಚಿಂತನೆಗಳು ಕಣ್ಮರೆಯಾಗುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಈ ನಡುವೆ ಕೆಲವರು ಜೆ.ಎಚ್ ಪಟೇಲ್‌ರವರ ಆದರ್ಶತನಗಳನ್ನು ಮೈಗೂಡಿಸಿಕೊಂಡು ಅವರನ್ನು ನೆನಪು ಮಾಡಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ  ಎಂದರು.
        ಹಿರಿಯ ಮುಖಂಡ ಗೋವಿಂದಸ್ವಾಮಿ ಮಾತನಾಡಿ, ಜೆ.ಎಚ್ ಪಟೇಲ್‌ರವರು ಎಲ್ಲಾ ಧರ್ಮ, ಜಾತಿ, ಸಮುದಾಯಗಳ ಏಳಿಗೆಯನ್ನು ಬಯಸಿದ್ದರು. ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಎಂದಿಗೂ ಅವರು ನಮ್ಮೊಂದಿಗೆ ಶಾಶ್ವತವಾಗಿ ಉಳಿದುಕೊಳ್ಳುವಂತೆ ಮಾಡಿವೆ ಎಂದರು.
        ನಗರಸಭೆ ಪೌರಾಯುಕ್ತ ಮನೋಹರ್ ಮಾತನಾಡಿ, ಪ್ರಸ್ತುತ ನಾವೆಲ್ಲರೂ ಪಟೇಲ್‌ರವರ ಸಮಾಜವಾದಿ ಚಿಂತನೆಗಳನ್ನು ಮೈಗೂಡಿಸಿಕೊಂಡು ಅವರ ಹಾದಿಯಲ್ಲಿ ಸಾಗಬೇಕಾದ ಅಗತ್ಯವಿದೆ ಎಂದರು.
      ಶಿರಸ್ತೇದಾರ್ ಮಂಜಾನಾಯ್ಕ, ಉಪ ವಲಯ ಅರಣ್ಯಾಧಿಕಾರಿ ಬಿ.ಆರ್ ದಿನೇಶ್‌ಕುಮಾರ್, ಸಮಾಜ ಸೇವಕ ಸ್ನೇಹ ಜೀವಿ ಬಳಗದ ಪೊಲೀಸ್ ಉಮೇಶ್,  ಕಲಾವತಿ, ದಿವ್ಯಶ್ರೀ, ರವಿ ಕಿಶನ್, ಬಿ.ಗಂಗಾಧರ್, ಕೆ. ಪ್ರಸಾದ್, ಸಿದ್ದಲಿಂಗಯ್ಯ, ಎಂ.ಎಸ್ ಜನಾರ್ಧನ ಅಯ್ಯಂಗಾರ್, ಕೆ.ಎಸ್ ಸತ್ಯನಾರಾಯಣ, ನಲ್ಲೂರು ಉಸ್ಮಾನ್ ಷರೀಫ್, ಬಿ.ಎನ್ ರಾಜು ಮತ್ತು ಬಿ.ವಿ ಗಿರೀಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
    ಜೆಡಿಯು ರಾಜ್ಯ ಯುವ ಘಟಕದ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ  ಹಾಗು ಸಂಘಟನಾ ಕಾರ್ಯದರ್ಶಿ ಬಾಬು ದೀಪಕ್‌ಕುಮಾರ್ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.


Saturday, October 3, 2020

ಮಾಸ್ಕ್ ಧರಿಸದವರಿಗೆ ಅಧಿಕ ಮೊತ್ತದ ದಂಡ : ಜನಸಾಮಾನ್ಯರ ಲೂಟಿ

ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ಆರೋಪ

ಎಚ್. ರವಿಕುಮಾರ್
ಭದ್ರಾವತಿ, ಅ. ೩: ಕೊರೋನಾ ಸೋಂಕು ಹರಡುವುದನ್ನು ತಡೆಯಲು ವಿಫಲವಾಗಿರುವ ರಾಜ್ಯ ಸರ್ಕಾರ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸುವ ಜೊತೆಗೆ ಅಧಿಕ ಪ್ರಮಾಣದ ದಂಡ ವಿಧಿಸುವ ಮೂಲಕ ಲೂಟಿಗೆ ಮುಂದಾಗಿದೆ ಎಂದು ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ಆರೋಪಿಸಿದ್ದಾರೆ.
        ಈ ಹಿಂದೆ ಮಾಸ್ಕ್ ಧರಿಸದವರಿಗೆ ೨೦೦ ರು. ದಂಡ ನಿಗದಿ ಮಾಡಿತ್ತು.   ದಂಡದ ರೂಪದಲ್ಲಿ ಬೊಕ್ಕಸಕ್ಕೆ ಕೋಟ್ಯಾಂತರ ರು. ಹರಿದು ತಕ್ಷಣ ಹಣದ ಆಸೆಗೆ ಬಿದ್ದು ಇದೀಗ ನಗರ ಭಾಗದಲ್ಲಿ ದಂಡದ ಮೊತ್ತ ೧,೦೦೦ ರು.,  ಗ್ರಾಮೀಣ ಭಾಗದಲ್ಲಿ ೫೦೦ ರು. ನಿಗದಿ ಮಾಡಿ ಜನ ಸಾಮಾನ್ಯರ ಲೂಟಿಗೆ ಮುಂದಾಗಿದೆ.
       ಸರ್ಕಾರ ಜನಸಾಮಾನ್ಯರಿಗೆ ಇದುವರೆಗೂ ಒಂದೇ ಒಂದು ಮಾಸ್ಕ್ ಉಚಿತವಾಗಿ ಕೊಟ್ಟಿಲ್ಲ. ಈ ನಡುವೆ ದಂಡ ವಸೂಲಿಗೆ ನೇಮಿಸಿರುವವರು ಹಾಗು ಪೊಲೀಸರು ದಂಡ ವಸೂಲಿ ಮಾಡುವ ನೆಪದಲ್ಲಿ ಜನಸಾಮಾನ್ಯರ ಬಳಿ ಗೂಂಡಾಗಳಂತೆ ವರ್ತಿಸುತ್ತಿದ್ದಾರೆ. ಇವರು ಜನರನ್ನು ಹೆದರಿಸುತ್ತಿದ್ದಾರೆಯೇ ಹೊರತು, ಕೊರೋನಾ ಸೋಂಕು ಕುರಿತು ಅರಿವು ಮೂಡಿಸುವ ಕೆಲಸ ಮಾಡುತ್ತಿಲ್ಲ ಎಂದು ದೂರಿದ್ದಾರೆ.
       ವಲಸೆ ಕಾರ್ಮಿಕರು, ಕೂಲಿ ಕಾರ್ಮಿಕರನ್ನು ಶೋಷಣೆ ಮಾಡಲಾಗುತ್ತಿದ್ದು, ಗ್ರಾಮೀಣ ಭಾಗದಲ್ಲಿ ಒಬ್ಬ ವ್ಯಕ್ತಿಯ ದಿನದ ಕೂಲಿ ೩೫೦ ರಿಂದ ೪೦೦ ರು. ಇದೆ. ಪರಿಸ್ಥಿತಿ ಈ ರೀತಿ ಇರುವಾಗ ದಿನದ ಕೂಲಿಯನ್ನು ನಂಬಿ ಬದುಕುತ್ತಿರುವವರಿಂದ ೫೦೦ ರು. ದಂಡ ವಸೂಲಾತಿ ಮಾಡುತ್ತಿರುವುದು ಖಂಡನೀಯ. ತಕ್ಷಣ ದಂಡ ಮೊತ್ತ ಕಡಿಮೆ ಮಾಡಿ ಉಚಿತವಾಗಿ ಮಾಸ್ಕ್ ವಿತರಿಸುವ ಜೊತೆಗೆ ಅರಿವು ಮೂಡಿಸಬೇಕೆಂದು ಆಗ್ರಹಿಸಿದ್ದಾರೆ.

ಕಾಳೀರಮ್ಮ ನಿಧನ


ಕಾಳೀರಮ್ಮ 
ಭದ್ರಾವತಿ, ಅ. ೩: ಎಂಪಿಎಂ ಕಾರ್ಖಾನೆ ನಿವೃತ್ತ ಉದ್ಯೋಗಿ, ರಂಗಕಲಾವಿದ ರುದ್ರಯ್ಯರವರ ತಾಯಿ ಕಾಳೀರಮ್ಮ(೮೩) ನಿಧನ ಹೊಂದಿದರು.
      ೩ ಗಂಡು, ೨ ಹೆಣ್ಣು ಮಕ್ಕಳು, ಸೊಸೆ, ಅಳಿಯಂದಿರು ಮತ್ತು ಮೊಮ್ಮಕ್ಕಳನ್ನು ಹೊಂದಿದ್ದರು. ಮೃತರ ಅಂತ್ಯಕ್ರಿಯೆ ಮಂಡ್ಯ ಜಿಲ್ಲೆ ಮಳ್ಳವಳ್ಳಿ ತಾಲೂಕಿನ ಡಿ. ಹಲಸಹಳ್ಳಿ ಗ್ರಾಮದಲ್ಲಿ ನೆರವೇರಿತು. ಮೃತರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.


ನಿವೃತ್ತ ಮುಖ್ಯ ಶಿಕ್ಷಕ ಮೌನೇಶಚಾರ್ ನಿಧನ

ಮೌನೇಶಚಾರ್
ಭದ್ರಾವತಿ, ಅ. ೩: ನಗರದ ಹೊಸಮನೆ ನಿವಾಸಿ, ನಿವೃತ್ತ ಮುಖ್ಯ ಶಿಕ್ಷಕ ಮೌನೇಶಚಾರ್(೬೨) ಶನಿವಾರ ನಿಧನ ಹೊಂದಿದರು.
ಪತ್ನಿ, ಓರ್ವ ಪುತ್ರ ಮತ್ತು ಓರ್ವ ಪುತ್ರಿ ಹೊಂದಿದ್ದರು. ಕಳೆದ ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
     ಮೌನೇಶಚಾರ್‌ರವರು ಸರ್ಕಾರಿ ಶಾಲೆ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಕರ್ನಾಟಕ ಜಾನಪದ ಪರಿಷತ್ ತಾಲೂಕು ಶಾಖೆ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು.
     ಮೃತರ ನಿಧನಕ್ಕೆ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್, ತಾಲೂಕು ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ, ಎಲ್. ದೇವರಾಜ್, ಶಿಕ್ಷಕ ವೃಂದದವರು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಗಣ್ಯರು ಸಂತಾಪ ಸೂಚಿಸಿದ್ದಾರೆ.

ಗೊಂದಿ ಚಾನಲ್‌ನಲ್ಲಿ ಈಜಲು ಹೋದ ಇಬ್ಬರು ಯುವಕರು ನೀರು ಪಾಲು

ತುರ್ತು ಕಾರ್ಯಾಚರಣೆಯಲ್ಲಿ ಓರ್ವನ ರಕ್ಷಣೆ

ಶನಿವಾರ ಮಧ್ಯಾಹ್ನ ಭದ್ರಾವತಿ ದೊಡ್ಡಗೊಪ್ಪೇನಹಳ್ಳಿ ಬಳಿ ಗೊಂದಿ ಚಾನಲ್‌ನಲ್ಲಿ ಈಜಲು ಹೋಗಿ ಇಬ್ಬರು ಯುವಕರ ಮೃತಪಟ್ಟಿರುವುದು.  
ಭದ್ರಾವತಿ, ಅ. ೩: ನದಿಯಲ್ಲಿ ಈಜಲು ಹೋದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಶನಿವಾರ ಮಧ್ಯಾಹ್ನ ದೊಡ್ಡಗೊಪ್ಪೇನಹಳ್ಳಿ ಬಳಿ ಗೊಂದಿ ಚಾನಲ್‌ನಲ್ಲಿ ನಡೆದಿದೆ.
      ಜನ್ನಾಪುರದ ನಿವಾಸಿಗಳಾದ ರಾಜೇಶ್(೩೮) ಮತ್ತು ಮನೋಜ್(೧೭) ಎಂಬುವರು ಸಾವನ್ನಪ್ಪಿದ್ದು, ಓರ್ವನನ್ನು ರಕ್ಷಿಸಲಾಗಿದೆ. ಒಟ್ಟು ೯ ಜನರು ಚಾನಲ್‌ನ ಆಂಜನೇಯ ಬಂಡೆ ಬಳಿ ಈಜಲು ತೆರಳಿದ್ದು, ಈ ಪೈಕಿ ಈ ಇಬ್ಬರು ನೀರಿನ ಸುಳಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ತುರ್ತು ಕಾರ್ಯಾಚರಣೆ ನಡೆಸಿ ಕಾರ್ತಿಕ್(೧೩) ಎಂಬ ಬಾಲಕನನ್ನು ರಕ್ಷಿಸಲಾಗಿದೆ.
       ಘಟನಾ ಸ್ಥಳಕ್ಕೆ ಅಗ್ನಿಶಾಮಕ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಕಾಗದನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಭಾಗದಲ್ಲಿ ಈ ಹಿಂದೆ ಸಹ ಈ ರೀತಿಯ ಘಟನೆಗಳು ನಡೆದಿವೆ ಎನ್ನಲಾಗಿದೆ.

ಅ.೪ರಂದು ಪಟೇಲ್ ಜನ್ಮದಿನ

ಜೆ.ಎಚ್ ಪಟೇಲ್
ಭದ್ರಾವತಿ, ಅ. ೩: ಜೆ.ಎಚ್ ಪಟೇಲ್ ಅಭಿಮಾನಿ ಬಳಗದ ವತಿಯಿಂದ ಮಾಜಿ ಮುಖ್ಯಮಂತ್ರಿ ಜೆ.ಎಚ್ ಪಟೇಲ್‌ರವರ ೯೦ನೇ ವರ್ಷದ ಜನ್ಮ ದಿನ ಅ. ೪ರಂದು ಬೆಳಿಗ್ಗೆ ೧೧ ಗಂಟೆಗೆ ಕಾಂಚನ ಹೋಟೆಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
       ನಿರಂಜನ ದೇಶಿ ಕೇಂದ್ರ ಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಲಿದ್ದು, ತ್ರಿಶೂಲ್ ಪಾಣಿ ಪಟೇಲ್ ಉಪಸ್ಥಿತರಿರುವರು. ಕಾರಿಗನೂರು ಜಿ.ಪಂ. ಸದಸ್ಯ, ರೈತ ಮುಖಂಡ ತೇಜಸ್ವಿ ವಿ. ಪಟೇಲ್ ಅಧ್ಯಕ್ಷತೆ ವಹಿಸಲಿದ್ದು, ಶಿರಸ್ತೇದಾರ್ ಮಂಜಾನಾಯ್ಕ, ನಗರಸಭೆ ಪೌರಾಯುಕ್ತ ಮನೋಹರ್, ನ್ಯೂಟೌನ್ ಠಾಣಾಧಿಕಾರಿ ಮೋಹನ್‌ಕುಮಾರ್, ಉಪ ವಲಯ ಅರಣ್ಯಾಧಿಕಾರಿ ಬಿ.ಆರ್ ದಿನೇಶ್‌ಕುಮಾರ್, ನಗರಸಭಾ ಸದಸ್ಯ ಎಂ.ಎ ಅಜಿತ್, ಕೆ.ವಿ ಶಿವರಾಮ್, ಸುಮನ್ ದಯಾಳನ್, ಕಲಾವತಿ, ದಿವ್ಯಶ್ರೀ, ಎಸ್. ಉಮೇಶ್, ರವಿ ಕಿಶನ್, ಜಮಾನುಲ್ಲಾಖಾನ್, ಸತೀಶ್‌ಪಟೇಲ್, ಗಂಗಾಧರ್, ಶಿವಕುಮಾರ್, ಕೆ. ಪ್ರಸಾದ್, ಸಿದ್ದಲಿಂಗಯ್ಯ, ಎಂ.ಎಸ್ ಜನಾರ್ಧನ ಅಯ್ಯಂಗಾರ್, ಕೆ.ಎಸ್ ಸತ್ಯನಾರಾಯಣ, ನಲ್ಲೂರು ಉಸ್ಮಾನ್ ಷರೀಫ್, ಬಿ.ಎನ್ ರಾಜು ಮತ್ತು ಬಿ.ವಿ ಗಿರೀಶ್ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
      ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಜೆಡಿಯು ಪಕ್ಷದ ರಾಜ್ಯ ಯುವ ಘಟಕದ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ  ಹಾಗು ಸಂಘಟನಾ ಕಾರ್ಯದರ್ಶಿ ಬಾಬು ದೀಪಕ್‌ಕುಮಾರ್ ಕೋರಿದ್ದಾರೆ.