Saturday, November 21, 2020

ಉದ್ಯೋಗ ಖಾತ್ರಿ ಯೋಜನೆಯಡಿ ಯುವಕರಿಗೆ ಕೆರೆ ಅಭಿವೃದ್ಧಿ ಕಾಮಗಾರಿ ನಡೆಸಲು ಅವಕಾಶ ಕಲ್ಪಿಸಿ ಕೊಡಿ

ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ಮತ್ತು ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಇಮ್ರಾನ್ ಆಲಿ ಮನವಿ

ಭದ್ರಾವತಿ, ನ. ೨೧: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನಿರುದ್ಯೋಗಿಗಳಿಗೆ ಕೆರೆಗಳ ಅಭಿವೃದ್ಧಿ ಕಾಮಗಾರಿ ನಡೆಸಲು ಅವಕಾಶ ಕಲ್ಪಿಸಿಕೊಡುವಂತೆ ಒತ್ತಾಯಿಸಿ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ಮತ್ತು ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಇಮ್ರಾನ್ ಆಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಜಿಲ್ಲಾ ಪಂಚಾಯಿತಿ ಮುಖ್ಯ  ಕಾರ್ಯನಿರ್ವಹಣಾಧಿಕಾರಿಗಳಿಗೆ ಮತ್ತು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮನವಿ ಸಲ್ಲಿಸಿದ್ದಾರೆ.
   ಜಿಲ್ಲಾ ಪಂಚಾಯಿತಿ ವತಿಯಿಂದ ತಾಲೂಕಿನ ದೊಣಬಘಟ್ಟ ಗ್ರಾಮದ ಸರ್ವೆ ನಂ. ೭೧ರ ಬ್ರಹ್ಮದೇವರಕಟ್ಟೆ ಕೆರೆ ಅಭಿವೃದ್ಧಿಗೆ ರು.೯ ಲಕ್ಷ,  ಸರ್ವೆ ನಂ.೨೫ರ ಎರೆಕಟ್ಟೆ ಕೆರೆ ಅಭಿವೃದ್ಧಿಗೆ ರು. ೯ ಲಕ್ಷ ಅನುದಾನ ಮಂಜೂರಾತಿಯಾಗಿದೆ. ಪ್ರಸ್ತುತ ಕೋವಿಡ್-೧೯ರ ಹಿನ್ನಲೆಯಲ್ಲಿ ಗ್ರಾಮದ ಯುವಕರು ಉದ್ಯೋಗ ವಿಲ್ಲದೆ ಪರದಾಡುತ್ತಿದ್ದಾರೆ. ಈ ನಡುವೆ ಕೆಲವರು ಬೇರೆ ಊರುಗಳಿಗೆ ವಲಸೆ ಹೋಗುತ್ತಿದ್ದು, ಈ ಹಿನ್ನಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ನೀಡುವ ಮೂಲಕ ಹಿತ ಕಾಪಾಡಬೇಕು.
   ಪ್ರಸ್ತುತ ಗ್ರಾಮದಲ್ಲಿ ಭತ್ತದ ಕಟಾವು ಮುಗಿದಿದ್ದು, ಇದೀಗ ಕೆರೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸೂಕ್ತ ಸಮಯವಾಗಿದೆ. ಕೆರೆಗಳು ಅಭಿವೃದ್ಧಿಗೊಂಡಲ್ಲಿ ಶುದ್ದ ನೀರು ಸರಬರಾಜು ಜೊತೆಗೆ ಸ್ವಚ್ಛತೆಯಿಂದ ಗ್ರಾಮದಲ್ಲಿ ರೋಗರುಜಿನ ಹರಡದಂತೆ ತಡೆಗಟ್ಟೆ ಬಹುದಾಗಿದೆ.  ಅಲ್ಲದೆ ಕೆರೆಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಯುವಕರು ಉತ್ಸುಕರಾಗಿದ್ದಾರೆ. ಈ ಹಿನ್ನಲೆಯಲ್ಲಿ ತಕ್ಷಣ ಎರಡು ಕೆರೆಗಳ ಸರ್ವೆ ಕಾರ್ಯ ಕೈಗೊಂಡು ಬೌಂಡರಿ ನಿಗದಿಪಡಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಅವಕಾಶ ಕಲ್ಪಿಸಿಕೊಡಬೇಕೆಂದು ಕೋರಿದ್ದಾರೆ.

Friday, November 20, 2020

ದೊಂಬಿದಾಸ ಸಮುದಾಯದ ಅಭಿವೃದ್ಧಿ ನಿಗಮ ಸ್ಥಾಪನೆಗೆ ಅಗ್ರಹ.

ರಾಜು ಆರ್ ದೊಂಬಿದಾಸ

ಭದ್ರಾವತಿ, ಅ. ೨೦: ರಾಜ್ಯದಲ್ಲಿರುವ ದೊಂಬಿದಾಸ ಜನಾಂಗದ ಅಭಿವೃದ್ಧಿಗಾಗಿ ದೊಂಬಿದಾಸ ಸಮುದಾಯದ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕೆಂದು ಕರ್ನಾಟಕ ರಾಜ್ಯ ಅಲೆಮಾರಿ ದೊಂಬಿದಾಸ ಯುವಸೇನೆ ರಾಜ್ಯಾಧ್ಯಕ್ಷ ರಾಜು ಅರ್ ದೊಂಬಿದಾಸ ಅಗ್ರಹಿಸಿದ್ದಾರೆ.
ದೊಂಬಿದಾಸ ಜನಾಂಗದ ಸಾಮಾಜಿಕ, ಶೈಕ್ಷಣಿಕ ಮತ್ತು ಉದ್ಯೋಗದ ದೃಷ್ಟಿಯಿಂದ ನಿಗಮ ಸ್ಥಾಪಿಸಿ ಅನುದಾನದ ಮೀಸಲಿಡಬೇಕು. ಅರ್ಥಿಕವಾಗಿ ಹಿಂದುಳಿದವರಿಗೆ ನೆರವಾಗುವಂತಹ ಯೋಜನೆಗಳನ್ನು ಜಾರಿಗೆ ತರಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಗಮನ ಹರಿಸಬೇಕೆಂದು ಮನವಿ ಮಾಡಿದ್ದಾರೆ.

ಭದ್ರಾ ನದಿಯಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

ಭದ್ರಾವತಿ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣ ಬಳಿ ಭದ್ರಾ ನದಿಯಲ್ಲಿ ಶುಕ್ರವಾರ ಬೆಳಗ್ಗೆ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷವಾಗಿದೆ.
ಭದ್ರಾವತಿ, ನ. ೨೦ : ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣ ಬಳಿ ಭದ್ರಾ ನದಿಯಲ್ಲಿ ಶುಕ್ರವಾರ ಬೆಳಗ್ಗೆ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷವಾಗಿದೆ.
      ಸುಮಾರು ೧೦ ರಿಂದ ೧೨ ಅಡಿಯಷ್ಟು ಉದ್ದವಿರುವ ಬೃಹತ್ ಗಾತ್ರದ ಮೊಸಳೆ ಕಂಡು ಬಂದಿದ್ದು,  ಸೇತುವೆ ಮೇಲೆ ಸಂಚರಿಸುತ್ತಿದ್ದ ಪಾದಚಾರಿಗಳು, ವಾಹನ ಸವಾರರು ಕೆಲ ಕ್ಷಣ ಮೊಸಳೆಯನ್ನು ಕುತೂಹಲದಿಂದ ವೀಕ್ಷಿಸಿದರು.
    ಈ ಭಾಗದಲ್ಲಿ ಮೊಸಳೆಗಳು ಹೆಚ್ಚಾಗಿದ್ದು ಆಗಾಗ ಕಂಡು ಬರುತ್ತಿವೆ. ಈ ಹಿಂದೆ ಮೊಸಳೆಗಳು ನದಿ ದಡದಲ್ಲಿ ತಿರುಗಾಡುವವರು, ಸ್ನಾನ ಮಾಡಲು, ಪಾತ್ರೆ ತೊಳೆಯಲು, ಬಟ್ಟೆ ಒಗೆಯಲು ಬರುವವರ ಮೇಲೆ  ಹಾಗು ಜಾನುವಾರುಗಳ ಮೇಲೆ ದಾಳಿ ನಡೆದಿರುವ ಘಟನೆಗಳು ನಡೆದಿವೆ. ನಗರಸಭೆ ಆಡಳಿತ ನದಿಗೆ ಯಾವುದೇ ರೀತಿಯ ತ್ಯಾಜ್ಯ ಸುರಿಯದಂತೆ ಎಚ್ಚರಿಕೆ ನೀಡಿದ್ದರೂ ಸಹ ಈ ಭಾಗದಲ್ಲಿ ರಾತ್ರಿ ವೇಳೆ ಕಣ್ತಪ್ಪಿಸಿ ಮಾಂಸದಂಗಡಿಗಳ ತ್ಯಾಜ್ಯ ತಂದು ಸುರಿಯಲಾಗುತ್ತಿದೆ.
     ಮುಂದಿನ ದಿನಗಳ ಮೊಸಳೆಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಮೊಸಳೆಗಳನ್ನು ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರಿಸುವ ಅಗತ್ಯವಿದೆ.


ಗ್ರಾಮ ಪಂಚಾಯಿತಿ ಅವ್ಯವಹಾರ ಖಂಡಿಸಿ : ಗ್ರಾಮಸ್ಥರಿಂದ ಪ್ರತಿಭಟನೆ

ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿ, ಡಾಟಾ ಎಂಟ್ರಿ ಆಪರೇಟರ್ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಹೋಬಳಿ ದೊಡ್ಡೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದ್ದು, ಈ ಹಿನ್ನಲೆಯಲ್ಲಿ ತಕ್ಷಣ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿ ಹಾಗು ಎನ್‌ಆರ್‌ಇಜಿ ಡಾಟಾ ಎಂಟ್ರಿ ಆಪರೇಟರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶುಕ್ರವಾರ ಗ್ರಾಮ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಭದ್ರಾವತಿ, ನ. ೨೦: ತಾಲೂಕಿನ ಕೂಡ್ಲಿಗೆರೆ ಹೋಬಳಿ ದೊಡ್ಡೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದ್ದು, ಈ ಹಿನ್ನಲೆಯಲ್ಲಿ ತಕ್ಷಣ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿ ಹಾಗು ಎನ್‌ಆರ್‌ಇಜಿ ಡಾಟಾ ಎಂಟ್ರಿ ಆಪರೇಟರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶುಕ್ರವಾರ ಗ್ರಾಮ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
   ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನಕಲಿ ದಾಖಲಾತಿ ಸೃಷ್ಟಿಸಿ ವೈಯಕ್ತಿಕವಾಗಿ ಹಣ ದುರುಪಯೋಗಪಡಿಸಿಕೊಳ್ಳಲಾಗಿದೆ. ಕಾಮಗಾರಿ ಅನುಷ್ಠಾನ ಆಗದೆ ಕೂಲಿ ಹಣ ಪಾವತಿಸಿರುವುದು, ಅಸ್ತಿತ್ವದಲ್ಲಿ ಇಲ್ಲದ ವ್ಯಕ್ತಿಗೆ, ಸ್ಥಳಾಂತರಗೊಂಡ ವ್ಯಕ್ತಿಗೆ,  ಕೆಲಸ ನಿರ್ವಹಿಸದ ವ್ಯಕ್ತಿಗೆ ಹಣ ಪಾವತಿಸಲಾಗಿದೆ. ಅಲ್ಲದೆ ಅಪ್ರಾಪ್ತ ವಯಸ್ಸಿನ ಶಾಲಾ ಮಕ್ಕಳಿಗೂ ಈ ಯೋಜನೆಯಡಿ ಹಣ ಪಾವತಿಸಲಾಗಿದೆ. ಆಡಳಿತ ಮಂಜೂರಾತಿ ಪಡೆಯದೆ, ತಾಂತ್ರಿಕ ಅಂದಾಜು ಪ್ರತಿ ಇಲ್ಲದೆ, ತಾಂತ್ರಿಕ ಮಂಜೂರಾತಿ ಪಡೆಯದೆ ಹಾಗು ಗ್ರಾಮಸಭೆಯಲ್ಲಿ ಆಯ್ಕೆ ಮಾಡದೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ. ಒಂದು ಕಾಮಗಾರಿಗೆ ಆಡಳಿತ ಮಂಜೂರಾತಿ ನೀಡಿ ಬೇರೊಂದು ಕಾಮಗಾರಿ ನಡೆಸಲಾಗಿದೆ. ಒಟ್ಟಾರೆ ಸಾಕಷ್ಟು ಅವ್ಯವಹಾರಗಳು ನಡೆದಿವೆ ಎಂದು ಆರೋಪಿಸಲಾಯಿತು.
   ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡೇರಿ ಗ್ರಾಮದಲ್ಲಿ ರಾಮಣ್ಣನ ಕೆರೆಗೆ ನೀರು ಹೋಗುವ ಕಾಲುವೆಯನ್ನು ಮುಚ್ಚಿ ಕೆರೆಗೆ ನೀರು ಹಾಯುವರಿಯಾಗದಂತೆ ಅಕ್ರಮವಾಗಿ ತಡೆಯಲಾಗಿದೆ. ಅಲ್ಲದೆ ಇದುವರೆಗೂ ರಾಮಣ್ಣನ ಕೆರೆಯನ್ನು ಹರಾಜು ಮಾಡದೆ ನಿರ್ಲಕ್ಷವಹಿಸಲಾಗಿದೆ. ಇತ್ತೀಚೆಗೆ ಮಳೆಯಿಂದ ಹಾನಿಯಾಗಿ ಶಿಥಿಲಗೊಂಡಿರುವ ಮನೆಗಳಿಗೆ ಮನೆ ನೀಡದೆ ಮನೆ ಇರುವವರಿಗೆ ಮನೆ ನೀಡಿದ್ದು, ಅಕ್ರಮ ವಿದ್ಯುತ್ ಬಿಲ್, ಕುಡಿಯುವ ನೀರಿನ ದುರಸ್ತಿ ಹಾಗು ಅಭಿವೃದ್ಧಿ ಕಾಮಗಾರಿಗಳಲ್ಲಿ ಸಾಕಷ್ಟು ದುರುಪಯೋಗವಾಗಿದೆ ಎಂದು ದೂರಲಾಯಿತು.
    ತಕ್ಷಣ ಪಂಚಾಯಿತಿ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿ ಹಾಗು ಡಾಟಾ ಎಂಟ್ರಿ ಆಪರೇಟರ್ ಸೇರಿದಂತೆ ಅಕ್ರಮಗಳಿಗೆ  ಕಾರಣಕರ್ತರಾಗಿರುವವರ ವಿರುದ್ಧ ಕಾನೂರು ರೀತಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು.
   ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ. ಜಿ. ಮಂಜುನಾಥ್, ಮನವಿ ಸ್ವೀಕರಿಸಿ ನಡೆದಿರುವ ಅಕ್ರಮಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಗಮನಕ್ಕೆ ಮಾಹಿತಿ ತರಲಾಗಿದೆ. ಈ ಹಿನ್ನಲೆಯಲ್ಲಿ ಅವರು ಖುದ್ದಾಗಿ ಶನಿವಾರ ಆಗಮಿಸಲಿದ್ದು, ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ವಿಶ್ವಾಸವಿದೆ ಎಂದು ಭರವಸೆ ನೀಡಿದರು.
    ಪ್ರತಿಭಟನೆಯಲ್ಲಿ ಪ್ರಮುಖರಾದ ರಾಮಚಂದ್ರ, ರವಿಕುಮಾರ್(ಗಂಗೂರು), ಮೋಹನ್, ಮಂಜು, ಕಿರಣ್ ಸೇರಿದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೧೧ ಗ್ರಾಮಗಳ ಗ್ರಾಮಸ್ಥರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಅಕ್ರಮವಾಗಿ ಆಸ್ತಿ ಕಬಳಿಸಲು ಯತ್ನ : ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹ

ವಂಚನೆಗೊಳಗಾದ ರುದ್ರೇಶ್ ಕುಟುಂಬದಿಂದ ತಾಲೂಕು ಕಛೇರಿ ಮುಂಭಾಗ ಧರಣಿ ಸತ್ಯಾಗ್ರಹ

ಭದ್ರಾವತಿ ತಾಲೂಕಿನ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಸರ್ವೆ ನಂ.೯೧/೩ರ ೦-೧೮ ಗುಂಟೆ ಆಸ್ತಿಯನ್ನು ನಕಲಿ ಖಾತೆ ಸೃಷ್ಠಿ ಮಾಡಿಕೊಂಡು ಕಬಳಿಸಲು ಯತ್ನಿಸುತ್ತಿರುವ ಎಂ.ಎಸ್ ಶಿವಕುಮಾರ್ ಎಂಬುವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ತಾಲೂಕು ಪಂಚಾಯಿತಿ ಮುಂಭಾಗ ಶುಕ್ರವಾರ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಭದ್ರಾವತಿ, ನ. ೨೦: ತಾಲೂಕಿನ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಸರ್ವೆ ನಂ.೯೧/೩ರ ೦-೧೮ ಗುಂಟೆ ಆಸ್ತಿಯನ್ನು ನಕಲಿ ಖಾತೆ ಸೃಷ್ಠಿ ಮಾಡಿಕೊಂಡು ಕಬಳಿಸಲು ಯತ್ನಿಸುತ್ತಿರುವ ಎಂ.ಎಸ್ ಶಿವಕುಮಾರ್ ಎಂಬುವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ತಾಲೂಕು ಪಂಚಾಯಿತಿ ಮುಂಭಾಗ ಶುಕ್ರವಾರ ಧರಣಿ ಸತ್ಯಾಗ್ರಹ ನಡೆಸಲಾಯಿತು.
    ದಾವಣಗೆರೆ ಜಿಲ್ಲೆ ನಿಟ್ಟುವಳ್ಳಿ ಗ್ರಾಮದ ನಿವಾಸಿ ರುದ್ರೇಶ್ ಮೂಲತಃ ಡಿ.ಬಿ ಹಳ್ಳಿ ಗ್ರಾಮದವರಾಗಿದ್ದು, ಇವರ ಕುಟುಂಬಕ್ಕೆ ಸೇರಿದ ಹಾಗು ಅವರ ಅಜ್ಜಿಯವರಿಗೆ ದತ್ತಕ ಪತ್ರದ ಮೂಲಕ ಬಂದಂತಹ ವ್ಯವಸಾಯದ ಸ್ವತ್ತುಗಳು ಮತ್ತು ನಿವೇಶನ ಹಾಗು ಮನೆಯ ಸ್ವತ್ತುಗಳನ್ನು  ಎಂ.ಎಸ್ ಶಿವಕುಮಾರ್ ಮತ್ತು ಈತನ ಪತ್ನಿ ಎಸ್. ಸುಮಾರವರು ಕಬಳಿಸಲು ಅಕ್ರಮ ದಾರಿಯಲ್ಲಿ ಸಾಗುತ್ತಿದ್ದು, ಈಗಾಗಲೇ ಈ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿ ವಿಚಾರಣೆ ನಡೆದು ಆಸ್ತಿ ಹಕ್ಕನ್ನು ಖಾತ್ರಿಪಡಿಸಲಾಗಿದೆ. ಈ ನಡುವೆ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಅರ್ಜಿ ಚಾಲ್ತಿಯಲ್ಲಿದ್ದು, ಈ ಸಂದರ್ಭದಲ್ಲಿ ಅಕ್ರಮವಾಗಿ ನಕಲಿ ಖಾತೆ ಸೃಷ್ಟಿ ಮಾಡಿಕೊಂಡು ವಂಚಿಸಲಾಗುತ್ತಿದೆ ಎಂದು ಧರಣಿ ಸತ್ಯಾಗ್ರಹ ಕೈಗೊಂಡಿರುವ ರುದ್ರೇಶ್ ಕುಟುಂಬದವರು ಆರೋಪಿಸಿದರು.
   ಶಿವಕುಮಾರ್ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಅಸೆಸ್‌ಮೆಂಟ್ ರಿಜಿಸ್ಟರ್‌ನಲ್ಲಿ ಸ್ವ ಹಸ್ತದಿಂದ ಬರೆದುಕೊಂಡು ನಕಲಿ ಖಾತೆ ಸೃಷ್ಟಿಸಿಕೊಂಡಿದ್ದು, ಇದು ತನಿಖೆಯಿಂದ ದೃಢಪಟ್ಟಿರುವುದರಿಂದ ಈ ಸಂಬಂಧ ಖಾತೆಯು ದೃಢೀಕೃತವಾದುದ್ದಲ್ಲ ಹಾಗು ಎಂ.ಆರ್.ನಂ. ದಾಖಲು ಆಗಿರುವುದಿಲ್ಲ ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಿಂಬರಹ ನೀಡಿರುತ್ತಾರೆ. ಈ ಹಿನ್ನಲೆಯಲ್ಲಿ ಸೂಕ್ತ ದಾಖಲೆಗಳೊಂದಿಗೆ ಸುಮಾರು ೨ ತಿಂಗಳ ಹಿಂದೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿತ್ತು. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
    ತಕ್ಷಣ ಸರ್ಕಾರಿ ಕಛೇರಿ ಹಾಗು ಅಧಿಕಾರಿಗಳಿಗೆ ವಂಚಿಸಿರುವ ಶಿವಕುಮಾರ್ ಮತ್ತು ಆತನ ಪತ್ನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅಕ್ರಮ ಖಾತೆ ರದ್ದುಪಡಿಸಿ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಲಾಯಿತು.
     ರೈತ ಮುಖಂಡರಾದ ಯಶವಂತರಾವ್ ಘೋರ್ಪಡೆ, ಡಿ.ವಿ ವೀರೇಶ್, ಹಿರಯಣ್ಣಯ್ಯ, ನಾಗರಾಜ್, ಬಸವರಾಜ, ರುದ್ರೇಶ್‌ರವರ ತಾಯಿ ಗಂಗಮ್ಮ, ಮುಖಂಡರಾದ ಬಿ.ಎನ್ ರಾಜು, ಬಿ.ವಿ ಗಿರೀಶ್, ಕೆ. ಮಂಜುನಾಥ್ ಹಾಗು ಡಿ.ಬಿ ಹಳ್ಳಿ ಗ್ರಾಮದ ಪ್ರಮುಖರು ಸೇರಿದಂತೆ ಇತರರು ಧರಣಿ ಸತ್ಯಾಗ್ರಹದಲ್ಲಿ ನೈತಿಕ ಬೆಂಬಲ ವ್ಯಕ್ತಪಡಿಸಿ ಪಾಲ್ಗೊಂಡಿದ್ದರು.

Thursday, November 19, 2020

ನ.೨೦ರಂದು ತಾಲೂಕು ಪಂಚಾಯಿತಿ ಮುಂಭಾಗ ಧರಣಿ ಸತ್ಯಾಗ್ರಹ

ಭದ್ರಾವತಿ, ನ. ೧೯: ತಾಲೂಕಿನ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಸರ್ವೆ ನಂ.೯೧/೩ರ ೦-೧೮ ಗುಂಟೆ ಆಸ್ತಿಯನ್ನು ನಕಲಿ ಖಾತೆ ಸೃಷ್ಠಿ ಮಾಡಿಕೊಂಡು ಕಬಳಿಸಲು ಯತ್ನಿಸುತ್ತಿರುವ ಎಂ.ಎಸ್ ಶಿವಕುಮಾರ್ ಎಂಬುವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ತಾಲೂಕು ಪಂಚಾಯಿತಿ ಮುಂಭಾಗ ನ.೨೦ರ ಬೆಳಿಗ್ಗೆ ೧೧.೩೦ಕ್ಕೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
     ದಾವಣಗೆರೆ ಜಿಲ್ಲೆ ನಿಟ್ಟುವಳ್ಳಿ ಗ್ರಾಮದ ನಿವಾಸಿ ರುದ್ರೇಶ್ ಮೂಲತಃ ಡಿ.ಬಿ ಹಳ್ಳಿ ಗ್ರಾಮದವರಾಗಿದ್ದು, ಇವರ ಕುಟುಂಬಕ್ಕೆ ಸೇರಿದ ಆಸ್ತಿಯನ್ನು ಕಬಳಿಸಲು ಹುನ್ನಾರ ನಡೆಸಲಾಗುತ್ತಿದೆ ಎಂದು ಆರೋಪಿಸಿ ಸೂಕ್ತ ದಾಖಲೆಗಳೊಂದಿಗೆ ಸುಮಾರು ೨ ತಿಂಗಳ ಹಿಂದೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿತ್ತು. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನಲೆಯಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಈ ಹೋರಾಟಕ್ಕೆ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಬಾಹ್ಯ ಬೆಂಬಲ ನೀಡಲಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ವಿ ವೀರೇಶ್ ತಿಳಿಸಿದ್ದಾರೆ.


ಆದಿದ್ರಾವಿಡ ಹಿತರಕ್ಷಣಾ ಸಮಿತಿ ಅಧ್ಯಕ್ಷರಾಗಿ ಎಸ್. ನಿತ್ಯಾನಂದನ್

ಎಸ್. ನಿತ್ಯಾನಂದನ್
ಭದ್ರಾವತಿ: ಜಿಲ್ಲಾ ಪರಿಶಿಷ್ಟ ಜಾತಿ ಆದಿದ್ರಾವಿಡ(ತಮಿಳು)ಹಿತರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷರಾಗಿ ಎಸ್. ನಿತ್ಯಾನಂದನ್ ಆಯ್ಕೆಯಾಗಿದ್ದಾರೆ.
     ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಜಿಲ್ಲಾ ಸಮಿತಿ ಗೌರವಾಧ್ಯಕ್ಷರಾಗಿ ಇ. ಚಂದ್ರಶೇಖರನ್, ತಾಲೂಕು ಅಧ್ಯಕ್ಷರಾಗಿ ಜಯಪಾಲ್‌ರವರು ಆಯ್ಕೆಯಾದರು. ನೂತನ ಪದಾಧಿಕಾರಿಗಳನ್ನು ಸಮಿತಿ ವತಿಯಿಂದ ಅಭಿನಂದಿಸಲಾಯಿತು ಎಂದು ಪ್ರಧಾನ ಕಾರ್ಯದರ್ಶಿ ಕೆ. ಪೆರುಮಾಳ್ ತಿಳಿಸಿದ್ದಾರೆ.