Wednesday, December 2, 2020

ರಾಷ್ಟ್ರೀಯ ಬಜರಂಗದಳ ಹೊಸಮನೆ ಘಟಕ ಉದ್ಘಾಟನೆ

ಹಿಂದೂ ಧರ್ಮ, ಸಂಸ್ಕೃತಿಗಾಗಿ ಹೋರಾಟ ನಡೆಸುತ್ತಿರುವ ಬಾಲವಾಗ್ಮಿ ಹರಿಕ ಮಂಜುನಾಥ್ ರಾಷ್ಟ್ರೀಯ ಬಜರಂಗದಳ ಭದ್ರಾವತಿ ಹೊಸಮನೆ ಘಟಕ ಉದ್ಘಾಟಿಸಿದರು.
ಭದ್ರಾವತಿ, ಡಿ. ೨: ಹಿಂದೂ ಧರ್ಮ, ಸಂಸ್ಕೃತಿಗಾಗಿ ಹೋರಾಟ ನಡೆಸುತ್ತಿರುವ ಬಾಲವಾಗ್ಮಿ ಹರಿಕ ಮಂಜುನಾಥ್ ರಾಷ್ಟ್ರೀಯ ಬಜರಂಗದಳ ಹೊಸಮನೆ ಘಟಕ ಉದ್ಘಾಟಿಸಿದರು.
   ಮಂಜುನಾಥ್ ಕೇಸರಿಪಡೆ ಅಧ್ಯಕ್ಷ  ಗಿರೀಶ್, ರಾಷ್ಟ್ರೀಯ ಬಜರಂಗದಳದ ಜಿಲ್ಲಾಧ್ಯಕ್ಷ ಚಂದನ್‌ರಾವ್, ಓಂ ಹಿಂದೂ ಕೋಟೆ ಅಧ್ಯಕ್ಷ ಮಂಜುನಾಥ್ , ಗೋ ಪ್ರಮುಖರಾದ ಚರಣ್ ದೇವಾಂಗ, ನಗರ ಅಧ್ಯಕ್ಷ ವಿವೇಕ್ ಹಾಗೂ ಗ್ರಾಮಾಂತರ ಅಧ್ಯಕ್ಷ ಮನುಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನಗರ ಆಶ್ರಯ ಸಮಿತಿಗೆ ೪ ಮಂದಿ ಸದಸ್ಯರು ನಾಮನಿರ್ದೇಶನ

ಸಂಪತ್ ರಾಜ್ ಬಾಂಟಿಯಾ
ಭದ್ರಾವತಿ, ಡಿ. ೨: ರಾಜ್ಯ ಸರ್ಕಾರದ ವಸತಿ ಇಲಾಖೆ ಕಾರ್ಯದರ್ಶಿಯವರು ರಾಜ್ಯಪಾಲರ ಆದೇಶದ ಮೇರೆಗೆ ನಗರದ ಆಶ್ರಯ ಸಮಿತಿಗೆ ೪ ಮಂದಿಯನ್ನು ನಾಮನಿರ್ದೇಶನ ಸದಸ್ಯರನ್ನಾಗಿ ನೇಮಕಗೊಳಿಸಿದ್ದಾರೆ.
ಹಿಂದುಳಿದ ವರ್ಗದಿಂದ ಹುತ್ತಾಕಾಲೋನಿ ನಿವಾಸಿ ಸತೀಶ್, ಸಾಮಾನ್ಯ ವರ್ಗದಿಂದ ಭಂಡಾರಹಳ್ಳಿ ನಿವಾಸಿ ದೇವರಾಜ್, ಅಲ್ಪ ಸಂಖ್ಯಾತರ ವಿಭಾಗದಿಂದ ಜೈನ ಸಮಾಜದ ಭೂತನಗುಡಿ ನಿವಾಸಿ ಸಂಪತ್ ರಾಜ್ ಬಾಂಟಿಯಾ ಹಾಗು ಮಹಿಳಾ ವರ್ಗದಿಂದ ಪರಿಶಿಷ್ಟ ಜಾತಿಯ ಬಸಲೀಕಟ್ಟೆ ಗ್ರಾಮದ ಗೌರಮ್ಮರವರನ್ನು ಅಧಿಕಾರೇತರ ಸದಸ್ಯರನ್ನಾಗಿ  ಅಧೀನ ಕಾರ್ಯದರ್ಶಿ ಜಿ. ಲಕ್ಷ್ಮಣ ನೇಮಕಗೊಳಿಸಿದ್ದಾರೆ.

ರೈಲ್ವೆ ಟರ್ಮಿನಲ್ ಕುರಿತು ತೀ.ನಾ ಶ್ರೀನಿವಾಸ್ ಹೇಳಿಕೆಗೆ ಎನ್. ವಿಶ್ವನಾಥರಾವ್ ಅಸಮಾಧಾನ

೬೦ ವರ್ಷಗಳಿಂದ ನಡೆಯದ ರೈಲ್ವೆ ಅಭಿವೃದ್ಧಿ ಕಾಮಗಾರಿಗಳು ಬಿಎಸ್‌ವೈ, ಬಿವೈಆರ್ ಅವಧಿಯಲ್ಲಿ ಅನುಷ್ಠಾನ

ಮೈಸೂರು ರೈಲ್ವೆ ವಿಭಾಗ ಸಲಹಾ ಸಮಿತಿ ಸಮಿತಿ ಸದಸ್ಯ ಎನ್. ವಿಶ್ವನಾಥರಾವ್
ಭದ್ರಾವತಿ, ಡಿ. ೨: ಕೋಟೆ ಗಂಗೂರು ರೈಲ್ವೆ ಕೋಚಿಂಗ್ ಟರ್ಮಿನಲ್ ಕುರಿತು ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ತೀ.ನಾ ಶ್ರೀನಿವಾಸ್ ನೀಡಿರುವ ಹೇಳಿಕೆ ಸರಿಯಲ್ಲ. ಜಿಲ್ಲೆಯಲ್ಲಿ ರೈಲ್ವೆ ಇಲಾಖೆಗೆ ಸಂಬಂಧಿಸಿದಂತೆ ಇದುವರೆಗೂ ನಡೆದಿರುವ ಅಭಿವೃದ್ಧಿ ಕಾರ್ಯಗಳನ್ನು ಅವರು ಸರಿಯಾಗಿ ಅರ್ಥ ಮಾಡಿಕೊಳ್ಳದಿರುವುದು ವಿಷಾದನೀಯ ಎಂದು ರೈಲ್ವೆ ಮೈಸೂರು ವಿಭಾಗದ ಸಲಹಾ ಸಮಿತಿ ಸದಸ್ಯ, ನಗರದ ನಿವಾಸಿ ಎನ್. ವಿಶ್ವನಾಥರಾವ್ ತಿಳಿಸಿದ್ದಾರೆ.
     ಅವರು ಈ ಕುರಿತು ಪತ್ರಿಕಾ ಹೇಳಿಕೆ ನೀಡಿ, ನಾನು ಕಳೆದ ೪ ವರ್ಷಗಳಿಂದ ರೈಲ್ವೆ ಸಲಹಾ ಸಮಿತಿ ಸದಸ್ಯನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಸಂಸದ ಬಿ.ವೈ ರಾಘವೇಂದ್ರರವರ ಪರಿಶ್ರಮದಿಂದಾಗಿ ಜಿಲ್ಲೆಯಲ್ಲಿ ಸುಮಾರು ೬೦ ವರ್ಷಗಳಿಂದ ನಡೆಯದಿರುವ ರೈಲ್ವೆ ಇಲಾಖೆಗೆ ಸಂಬಂಧಿಸಿದ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ.
    ಉದಾಹರಣೆಗೆ ಭದ್ರಾವತಿ ರೈಲ್ವೆ ನಿಲ್ದಾಣವನ್ನು ಯಾರು ಸಹ ನಿರೀಕ್ಷಿಸಲಾರದಷ್ಟು ಮಟ್ಟದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಜಿಲ್ಲೆಯಲ್ಲಿ ರೈಲ್ವೆ ಇಲಾಖೆಯಿಂದ ರೈಲ್ವೆ ಮೇಲ್ಸೇತುವೆಗಳು, ವರ್ತುಲ ರಸ್ತೆ, ಅರಸಾಳು ಶಂಕರ್‌ನಾಗ್‌ರವರ ಕನಸಿನ ಮಾಲ್ಗುಡಿ ನೆನಪಿನ ಮ್ಯೂಸಿಯಂ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಅಲ್ಲದೆ ಬೆಂಗಳೂರು-ಶಿವಮೊಗ್ಗ ಸಿಂಟರ್ ಸಿಟಿ, ಜನಶತಾಬ್ದಿ, ಮೈಸೂರು, ಚೆನ್ನೈ, ತಿರುಪತಿಗಳಿಗೆ ಹೊಸ ರೈಲುಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಹೀಗೆ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಇದೀಗ ರೈಲ್ವೆ ಕೋಚಿಂಗ್ ಟರ್ಮಿನಲ್ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿಸಲಾಗಿದೆ. ಇದೊಂದು ದೊಡ್ಡ ಪ್ರಮಾಣದ ಕಾರ್ಯವಾಗಿದ್ದು, ಇದರಿಂದ ಸಾವಿರಾರು ಜನರಿಗೆ ಉದ್ಯೋಗ ಲಭಿಸಲಿದೆ. ಈ ಯೋಜನೆಯನ್ನು ಅಧಿಕಾರಿಗಳ ಸೂಕ್ತ ನಿರ್ದೇಶನ ದ ಮೇರೆಗೆ ಜಿಲ್ಲೆಯ ಕೋಟೆ ಗಂಗೂರಿಗೆ ಸ್ಥಳಾಂತರಿಸಲಾಗಿದೆ. ಇದರಿಂದ ಜಿಲ್ಲೆಗೆ ಯಾವುದೇ ರೀತಿ ನಷ್ಟವಾಗಿಲ್ಲ. ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ತೀ.ನಾ ಶ್ರೀನಿವಾಸ್‌ರವರು ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
    ಮೊದಲು ಈ ಹಿಂದಿನ ಕಾಂಗ್ರೆಸ್ ಸರ್ಕಾರ ರೈಲ್ವೆ ಇಲಾಖೆಗೆ ಸಂಬಂಧಿಸಿದಂತೆ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು ಹಾಗು ಬಿ.ಎಸ್ ಯಡಿಯೂರಪ್ಪ ಮತ್ತು ಸಂಸದ ಬಿ.ವೈ ರಾಘವೇಂದ್ರರವರ ಅವಧಿಯಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ತುಲನೆ ಮಾಡಿ ನೋಡಿ. ಪ್ರಸ್ತುತ ಟರ್ಮಿನಲ್ ನಿರ್ಮಾಣಕ್ಕೆ ಹೆಚ್ಚಿನ ಸಹಕಾರ ನೀಡಿ. ಇಲ್ಲವಾದಲ್ಲಿ ಗಂಡ-ಹೆಂಡತಿ ನಡುವಿನ ಜಗಳದ ಮಧ್ಯೆ ಕೂಸು ಬಡವಾದಂತೆ ಯೋಜನೆ ಕೈತಪ್ಪಿ ಹೋಗುವುದು ಖಚಿತ ಎಂದು ಎಚ್ಚರಿಸಿದ್ದಾರೆ.  

Tuesday, December 1, 2020

ಶ್ರೀ ಮೇದಾರ ಕೇತಯ್ಯನವರ ೮೯೦ನೇ ಜಯಂತಿ ಅಚರಣೆ

ಭದ್ರಾವತಿ ಹಳೇನಗರದ ಶ್ರೀ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಶ್ರೀ ಕುಕ್ಕುವಾಡೇಶ್ವರಿ ದೇವಸ್ಥಾನದಲ್ಲಿ ತಾಲುಕು ಮೇದಾರ ಸಮಾಜದ ವತಿಯಿಂದ ಶ್ರೀ ಮೇದಾರ ಕೇತಯ್ಯನವರ ೮೯೦ನೇ ಜಯಂತಿ ಆಚರಿಸಲಾಯಿತು.
ಭದ್ರಾವತಿ, ಡಿ. ೧: ಹಳೇನಗರದ ಶ್ರೀ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಶ್ರೀ ಕುಕ್ಕುವಾಡೇಶ್ವರಿ ದೇವಸ್ಥಾನದಲ್ಲಿ ತಾಲುಕು ಮೇದಾರ ಸಮಾಜದ ವತಿಯಿಂದ ಶ್ರೀ ಮೇದಾರ ಕೇತಯ್ಯನವರ ೮೯೦ನೇ ಜಯಂತಿ ಆಚರಿಸಲಾಯಿತು.
    ಪ್ರತಿ ವರ್ಷದಂತೆ ಈ ಬಾರಿ ಸಹ ಸಮಾಜದ ವತಿಯಿಂದ ಶ್ರೀ ಮೇದಾರ ಕೇತಯ್ಯನವರ ಜನ್ಮದಿನ ಆಚರಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸರ್ಕಾರದ ವತಿಯಿಂದ ಜನ್ಮದಿನ ಆಚರಿಸುವಂತಾಗಬೇಕೆಂಬುದು ಸಮಾಜ ಬಾಂಧವರ ಆಶಯವಾಗಿದೆ. ಈ ಹಿನ್ನಲೆಯಲ್ಲಿ ತಾಲೂಕು ಆಡಳಿತದ ಮೂಲಕ ಸರ್ಕಾರಕ್ಕೆ ಒತ್ತಾಯಿಸುವುದಾಗಿ ಮುಖಂಡರು ತಿಳಿಸಿದರು.
    ಕಾರ್ಯಕ್ರಮವನ್ನು ಯುವ  ಮುಖಂಡ ಬಿ.ಎಸ್ ಗಣೇಶ್ ಉದ್ಘಾಟಿಸಿದರು. ನಗರಸಭೆ ಪೌರಾಯುಕ್ತ ಮನೋಹರ್, ಪ್ರಮುಖರಾದ ಕೂಡ್ಲಿಗೆರೆ ಎಸ್ ಮಹಾದೇವ, ಆರ್. ನಾಗರಾಜ್, ವಿಶ್ವನಾಥ್, ಮೈಲಾರಪ್ಪ, ಮಂಜುನಾಥ್ ಸೇರಿದಂತೆ ಇನ್ನಿತರ ಸಮಾಜದ ಮುಖಂಡರು ಉಪಸ್ಥಿತರಿದ್ದರು.


ಭದ್ರಾವತಿ ಹಳೇನಗರದ ಶ್ರೀ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಶ್ರೀ ಕುಕ್ಕುವಾಡೇಶ್ವರಿ ದೇವಸ್ಥಾನದಲ್ಲಿ ಮೇದಾರ ಕೇತಯ್ಯನವರ ೮೯೦ನೇ ಜಯಂತಿ ಅಂಗವಾಗಿ ಅಮ್ಮನವರಿಗೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು.

ಭದ್ರಾವತಿ 41 ಗ್ರಾಮ ಪಂಚಾಯಿತಿ ಪೈಕಿ 35 ಪಂಚಾಯಿತಿಗಳಿಗೆ ಚುನಾವಣೆ

ಭದ್ರಾವತಿ, ಡಿ. 1: ರಾಜ್ಯ ಚುನಾವಣಾ ಆಯೋಗ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ಘೋಷಿಸಿದ್ದು, ತಾಲೂಕಿನ 41 ಗ್ರಾಮ ಪಂಚಾಯಿತಿಗಳ ಪೈಕಿ 35 ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ.
    ವೀರಾಪುರ ಮತ್ತು ಕೊಮಾರನಹಳ್ಳಿ ಪಂಚಾಯಿತಿಗಳ ಅವಧಿ ಇನ್ನೂ ಉಳಿದಿದ್ದು, ಈ ಹಿನ್ನಲೆಯಲ್ಲಿ ಈ ಎರಡು ಪಂಚಾಯಿತಿಗಳಿಗೆ ಚುನಾವಣೆ ನಡೆಯುತ್ತಿಲ್ಲ. ರಾಜ್ಯ ಸರ್ಕಾರ ಹೊಳೆಹೊನ್ನೂರು ಪಂಚಾಯಿತಿಯನ್ನು ಇತ್ತೀಚೆಗೆ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಿದ್ದು, ಈ ಹಿನ್ನಲೆಯಲ್ಲಿ ಹನುಮಂತಪುರ, ಎಮ್ಮೆಹಟ್ಟಿ, ಸಿದ್ಲಿಪುರ ಮತ್ತು ಹೊಳೆಹೊನ್ನೂರು ಈ ಗ್ರಾಮ ಪಂಚಾಯಿತಿಗಳಿಗೂ  ಚುನಾವಣೆ ನಡೆಯುತ್ತಿಲ್ಲ.



Monday, November 30, 2020

ತಂಬಾಕು ಕುರಿತು ಜಾಗೃತಿಗಾಗಿ ‘ಗುಲಾಬಿ ಅಂದೋಲನ’

ಭದ್ರಾವತಿಯಲ್ಲಿ ಸೋಮವಾರ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯಾಪಾರಸ್ಥರಿಗೆ ಹಾಗು ಉತ್ಪನ್ನಗಳನ್ನು ಖರೀದಿಸುವ ಗ್ರಾಹಕರಿಗೆ ಗುಲಾಬಿ ನೀಡುವ ಮೂಲಕ ಆರೋಗ್ಯ ಅರಿವು ಮೂಡಿಸುವ ಗುಲಾಬಿ ಅಂದೋಲನ ನಡೆಯಿತು.
ಭದ್ರಾವತಿ, ನ. ೩೦: ದೇಶದಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡ ಸಂದರ್ಭದಲ್ಲಿ ಸಾರ್ವಜನಿಕರ ಆರೋಗ್ಯ ಜಾಗೃತಿಗಾಗಿ ನಡೆಸಿದ ಹಲವು ವಿಭಿನ್ನ ಬಗೆಯ ಕಾರ್ಯಕ್ರಮಗಳು ಇಂದಿಗೂ ನೆನಪಿನಲ್ಲಿ ಉಳಿದುಕೊಂಡಿವೆ. ಸಂಚಾರಿ ಪೊಲೀಸರು ಅನಗತ್ಯವಾಗಿ ಮನೆಯಿಂದ ಹೊರಬರುವ ಹಾಗು ಸರ್ಕಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ಗುಲಾಬಿ ನೀಡುವುದು, ಸಿಹಿ ಹಂಚುವುದು ಇತ್ಯಾದಿ ವಿಶಿಷ್ಟ ರೀತಿಯ ಕಾರ್ಯಕ್ರಮಗಳನ್ನು ನಡೆಸಿ ಗಮನ ಸೆಳೆದಿತ್ತು. ಇದೀಗ ಇದೆ ಮಾದರಿ ಕಾರ್ಯಕ್ರಮವನ್ನು ಆರೋಗ್ಯ ಇಲಾಖೆ ಕೈಗೊಂಡಿದೆ.
   ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯಾಪಾರಸ್ಥರಿಗೆ ಹಾಗು ಉತ್ಪನ್ನಗಳನ್ನು ಖರೀದಿಸುವ ಗ್ರಾಹಕರಿಗೆ ಗುಲಾಬಿ ನೀಡುವ ಮೂಲಕ ಆರೋಗ್ಯ ಅರಿವು ಮೂಡಿಸುವ ಗುಲಾಬಿ ಅಂದೋಲನಕ್ಕೆ ಸೋಮವಾರ ಹಳೇನಗರದ ಬಸವೇಶ್ವರ ವೃತ್ತದಲ್ಲಿ ಚಾಲನೆ ನೀಡಲಾಯಿತು.
    ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್, ನಗರಸಭೆ ಪೌರಾಯುಕ್ತ ಮನೋಹರ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ಹಳೇಪೊಲೀಸ್ ಠಾಣಾಧಿಕಾರಿ ಶ್ರೀನಿವಾಸ್, ಹಿರಿಯ ಆರೋಗ್ಯ ಸಹಾಯಕ ನಿಲೇಶ್‌ರಾಜ್ ಹಾಗು ತಂಬಾಕು ನಿಯಂತ್ರಣಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.


ಒಕ್ಕಲಿಗ ಸಮುದಾಯದ ಅಭಿವೃದ್ಧಿಗೆ ನಿಗಮ ಮಂಡಳಿ ಸ್ಥಾಪಿಸಿ : ಶಶಿಕುಮಾರ್ ಎಸ್. ಗೌಡ

ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಮನವಿ

ಒಕ್ಕಲಿಗ ಅಭಿವೃದ್ಧಿ ನಿಗಮ ಹಾಗು ರಾಜ್ಯದಲ್ಲಿರುವ ೧೫೦ಕ್ಕೂ ಹೆಚ್ಚು ಸಣ್ಣಪುಟ್ಟ ಸಮುದಾಯಗಳಿಗೂ ನಿಗಮ, ಮಂಡಳಿ ಸ್ಥಾಪಿಸಬೇಕೆಂದು ಒತ್ತಾಯಿಸಿ ಭದ್ರಾವತಿಯಲ್ಲಿ ಸೋಮವಾರ ಸಂಯುಕ್ತ ಜನಾತದಳವತಿಯಿಂದ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ನ. ೩೦: ಪ್ರಸ್ತುತ ರಾಜ್ಯದಲ್ಲಿ ಒಕ್ಕಲಿಗ ಸಮುದಾಯ ಸಾಮಾಜಿಕ, ಶೈಕ್ಷಣಿಕ ಹಾಗು ಆರ್ಥಿಕವಾಗಿ ಹಿಂದುಳಿದಿದ್ದು, ಈ ಸಮುದಾಯದ ಏಳಿಗೆಗೆ ಮುಖ್ಯಮಂತ್ರಿಗಳು ಒಕ್ಕಲಿಗ ಅಭಿವೃದ್ಧಿ ನಿಗಮ ಹಾಗು ರಾಜ್ಯದಲ್ಲಿರುವ ೧೫೦ಕ್ಕೂ ಹೆಚ್ಚು ಸಣ್ಣಪುಟ್ಟ ಸಮುದಾಯಗಳಿಗೂ ನಿಗಮ, ಮಂಡಳಿ ಸ್ಥಾಪಿಸಬೇಕೆಂದು ಸಂಯುಕ್ತ ಜನಾತದಳ ಒತ್ತಾಯಿಸುತ್ತದೆ ಎಂದು ಪಕ್ಷದ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ ತಿಳಿಸಿದರು.
   ಸೋಮವಾರ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿ ಮಾತನಾಡಿದರು. ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ, ಮೈಸೂರು ಸಂಸ್ಥಾನದ ಪಿಟೀಲ್ ವಾದಕ ಚೌಡಯ್ಯ, ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ ರೆಡ್ಡಿ, ವಿಧಾನಸೌಧ ನಿರ್ಮಾತೃ ಕೆಂಗಲ್ ಹನುಮಂತಯ್ಯ, ಕಡಿದಾಳ್ ಮಂಜಪ್ಪ, ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ, ರಾಷ್ಟ್ರಕವಿ ಕುವೆಂಪು, ಚಲನಚಿತ್ರ ನಟ ಅಂಬರೀಷ್, ಹೃದಯ ತಜ್ಞ ಡಾ. ಮಂಜುನಾಥ್ ಸೇರಿದಂತೆ ಒಕ್ಕಲಿಗ ಸಮುದಾಯದ ಅನೇಕ ಮಹಾನ್ ವ್ಯಕ್ತಿಗಳು ನಾಡಿನಲ್ಲಿ ಜಾತಿ, ಧರ್ಮ ಮೀರಿದ ಸೇವೆಯನ್ನು ಸಲ್ಲಿಸಿರುತ್ತಾರೆ. ಕೃಷಿ, ಆರೋಗ್ಯ, ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ, ರಾಜಕೀಯ, ರಂಗಭೂಮಿ, ಸಿನಿಮಾ, ಕೈಗಾರಿಕೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ.
    ರಾಜ್ಯದಲ್ಲಿ ಮೂರನೇ ಒಂದು ಭಾಗದಷ್ಟು ಜನಸಂಖ್ಯೆ ಹೊಂದಿರುವ ಒಕ್ಕಲಿಗ ಸಮಾಜ ಪ್ರಸ್ತುತ ಸಂಕಷ್ಟಕ್ಕೆ ಒಳಗಾಗಿದೆ. ನಾಡಿಗೆ ಅನ್ನಕೊಟ್ಟ ಒಕ್ಕಲಿಗ ರೈತಾಪಿ ವರ್ಗ ಅತಿವೃಷ್ಠಿ, ಅನಾವೃಷ್ಠಿ ಹಾಗು ಕೊರೋನಾದಿಂದಾಗಿ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದೆ. ಅಲ್ಲದೆ ಈ ಸಮಾಜ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದೆ. ಈ ಹಿನ್ನಲೆಯಲ್ಲಿ ಅಭಿವೃದ್ಧಿ ನಿಗಮ ಸ್ಥಾಪಿಸುವುದು ಅನಿವಾರ್ಯವಾಗಿದೆ ಎಂದರು.
    ಇದೆ ರೀತಿ ರಾಜ್ಯದಲ್ಲಿರುವ ಸುಮಾರು ೧೫೦ಕ್ಕೂ ಹೆಚ್ಚು ಸಣ್ಣಪುಟ್ಟ ಸಮುದಾಯಗಳಿಗೂ ನಿಗಮ ಮಂಡಳಿ ಸ್ಥಾಪಿಸುವ ಮೂಲಕ ಎಲ್ಲಾ ಸಮುದಾಯಗಳು ಹಂತ ಹಂತವಾಗಿ ಅಭಿವೃದ್ದಿ ಹೊಂದಲು ಸಹಕರಿಸಬೇಕೆಂದು ಮನವಿ ಮಾಡಿದರು.
     ಪಕ್ಷ ರಾಜ್ಯ ಸಂಘಟನಾ ಕಾರ್ಯದರ್ಶಿ ಬಾಬು ದೀಪಕ್ ಕುಮಾರ್, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಬಿ.ವಿ ಗಿರೀಶ್, ಬಂಜಾರ ಯುವ ಘಟಕದ ಅಧ್ಯಕ್ಷ ಕೃಷ್ಣನಾಯ್ಕ್, ಮುಖಂಡರಾದ ವೆಂಕಟೇಶ್, ಪ್ರಶಾಂತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.