ಪೂರ್ವಭಾವಿ ಸಭೆಯಲ್ಲಿ ವಿವಿಧ-ಸಂಸ್ಥೆಗಳ ಮುಖಂಡರಿಂದ ಸಲಹೆ-ಸೂಚನೆ
ಭದ್ರಾವತಿ, ಫೆ. ೨: ನಗರಸಭೆಯಲ್ಲಿ ಆದಾಯ ಬರುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು. ನಗರವನ್ನು ಎಲ್ಲಾ ರೀತಿಯಿಂದಲೂ ಅಭಿವೃದ್ಧಿಗೊಳಿಸಲು ಪೂರಕವಾದ ಬಜೆಟ್ ಈ ಬಾರಿ ಸಿದ್ದಪಡಿಸಬೇಕೆಂದು ಮಂಗಳವಾರ ನಗರಸಭೆ ಸಭಾಂಗಣದಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಸಲಹೆ ವ್ಯಕ್ತಪಡಿಸಿದರು.
ಸಭೆ ಆರಂಭದಲ್ಲಿ ಮಾತನಾಡಿದ ನಗರಸಭೆ ಲೆಕ್ಕಾಧೀಕ್ಷಕ ಸೈಯದ್ ಮಹಮೂದ್ ಆಲಿ ಮಾತನಾಡಿ, ಪ್ರತಿ ಬಾರಿ ಸಭೆಯಲ್ಲಿ ನಗರದ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಸೂಕ್ತ-ಸಲಹೆಗಳನ್ನು ನೀಡುವ ಬಜೆಟ್ ಯಶಸ್ವಿಗೆ ಸಹಕರಿಸಿಕೊಂಡು ಬರುತ್ತಿದ್ದಾರೆ. ಈ ಬಾರಿ ಸಹ ಸರ್ಕಾರ ಹಲವು ಅನುದಾನಗಳನ್ನು ಹಾಗು ನಗರಸಭೆ ಆದಾಯಗಳನ್ನು ನಿರೀಕ್ಷಿಸಿ ಬಜೆಟ್ ಸಿದ್ದಪಡಿಸಬೇಕಾಗಿದೆ. ಪ್ರಸ್ತುತ ನಗರಸಭೆಗೆ ಬರುತ್ತಿರುವ ಆದಾಯಗಳಲ್ಲಿ ಇಳಿಮುಖವಾಗುತ್ತಿದೆ. ಪ್ರಮುಖವಾಗಿ ನೀರಿನ ಶುಲ್ಕ ವಸೂಲಾತಿ ಈ ಬಾರಿ ಶೇ.೫೦ರಷ್ಟು ಮಾತ್ರ ನಡೆದಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರು ಸಹ ಸಹಕರಿಸುವ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಬೇಕೆಂದರು.
ನಂತರ ಮಾತನಾಡಿದ ಪುರಸಭೆ ಮಾಜಿ ಉಪಾಧ್ಯಕ್ಷ ಟಿ. ವೆಂಕಟೇಶ್, ಜನಸಂಖ್ಯೆಗೆ ತಕ್ಕಂತೆ ೧೯೯೫ರಲ್ಲಿ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲಾಯಿತು. ಆದರೆ ನಿರೀಕ್ಷೆಯಂತೆ ಪ್ರಸ್ತುತ ನಗರಸಭೆ ಬೆಳವಣಿಗೆ ಹೊಂದಿಲ್ಲದಿರುವುದು ವಿಷಾದನೀಯ ಸಂಗತಿಯಾಗಿದೆ. ನಗರಸಭೆ ವತಿಯಿಂದ ಕೇವಲ ವೆಚ್ಚ ಮಾಡಲಾಗುತ್ತಿದೆ ಹೊರತು ಆದಾಯ ಬರುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿಕೊಂಡಿಲ್ಲ. ನಗರಸಭೆಗೆ ಯಾವುದೇ ರೀತಿ ಆದಾಯ ಬರದಿರುವ ಪ್ರದೇಶಗಳನ್ನು ಸಹ ಚುನಾವಣೆಯನ್ನು ಆಧಾರವಾಗಿಟ್ಟುಕೊಂಡು ಅನಗತ್ಯವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಮುಖ್ಯವಾಗಿ ಎಂಪಿಎಂ ಕಾರ್ಖಾನೆ ಸ್ಥಗಿತಗೊಂಡು ೫ ವರ್ಷಗಳು ಕಳೆದಿವೆ. ಕಾರ್ಮಿಕ ಕುಟುಂಬಗಳು ಸಹ ಬೇರೆಡೆಗೆ ಸ್ಥಳಾಂತರಗೊಂಡಿವೆ. ಕಾರ್ಖಾನೆ ಪುನಃ ಆರಂಭಗೊಳ್ಳುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಅಲ್ಲಿನ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದರಿಂದ ಯಾವುದೇ ಪ್ರಯೋಜನವಾಗುದಿಲ್ಲ. ಅಲ್ಲದೆ ನಗರಸಭೆಗೆ ಯಾವುದೇ ಆದಾಯ ಸಹ ಬರುವುದಿಲ್ಲ ಎಂದರು.
ನಗರಸಭೆ ಹೊಂದಿರುವ ಆಸ್ತಿಗಳಿಂದ ಆದಾಯ ಹೆಚ್ಚಿಸಿಕೊಳ್ಳಬೇಕಾಗಿದೆ. ನಗರಸಭೆ ವ್ಯಾಪ್ತಿಯಲ್ಲಿ ಹಲವೆಡೆ ಖಾಲಿ ನಿವೇಶನಗಳು ಸುಮಾರು ೫೦-೬೦ ವರ್ಷಗಳಿಂದ ಪಾಳುಬಿದ್ದಿವೆ. ಈ ಜಾಗಗಳನ್ನು ಖಾಲಿ ಬಿಡುವ ಬದಲು ಯಾವುದಾದರೂ ಕಟ್ಟಡಗಳನ್ನು ನಿರ್ಮಿಸಿದ್ದಲ್ಲಿ ಆದಾಯ ಬರಲಿದೆ. ನಗರದಲ್ಲಿ ಸುಮಾರು ೧೦ವರ್ಷಗಳ ಹಿಂದೆ ಆರಂಭಗೊಂಡಿರುವ ಒಳಚರಂಡಿ ಕಾಮಗಾರಿ ಇಂದಿಗೂ ಮುಕ್ತಾಯಗೊಂಡಿಲ್ಲ. ಕಳೆದ ೧೦ ವರ್ಷಗಳಿಂದ ಈ ಯೋಜನೆಯಲ್ಲಿ ಯಾವುದೇ ಆದಾಯ ನಿರೀಕ್ಷಿಸದೆ ಕೇವಲ ವೆಚ್ಚವನ್ನು ಮಾತ್ರ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ತಕ್ಷಣ ಕಾಮಗಾರಿ ಮುಕ್ತಾಯಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಸಲಹೆ ನೀಡಿದರು.
ಭದ್ರಾವತಿ ನಗರಸಭೆ ಬಜೆಟ್ ಪೂರ್ವಭಾವಿ ಸಭೆ ಮಂಗಳವಾರ ಪೌರಾಯುಕ್ತ ಮನೋಹರ್ ನೇತೃತ್ವದಲ್ಲಿ ನಡೆಯಿತು.
ಪುರಸಭೆ ಮಾಜಿ ಸದಸ್ಯ, ಪತ್ರಕರ್ತ ಎನ್. ಬಾಬು ಮಾತನಾಡಿ, ನಗರಸಭೆ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕು. ನಗರಸಭೆಯಲ್ಲಿ ನೀರಿನ ಕರ ವಸೂಲಿ ಹಾಗು ಕಂದಾಯ ಪಾವತಿಗೆ ಸೂಕ್ತ ವ್ಯವಸ್ಥೆ ರೂಪಿಸಿಕೊಳ್ಳಬೇಕು. ಜನರು ಶುಲ್ಕ ಪಾವತಿಸಿ ರಶೀದಿ ಪಡೆದಿದ್ದರೂ ಸಹ ಪಾವತಿ ಮಾಹಿತಿ ಖಾತೆಯಲ್ಲಿ ಜಮಾ ಆಗುತ್ತಿಲ್ಲ. ಇದರಿಂದಾಗಿ ಸಮಸ್ಯೆ ಎದುರಾಗುತ್ತಿದೆ. ಖಾತೆಗೆ ಹಣ ಜಮಾ ಮಾಡುವುದು ಅಧಿಕಾರಿಗಳ ಕರ್ತವ್ಯವಾಗಿದೆ. ಈ ಹಿನ್ನಲೆಯಲ್ಲಿ ಸ್ವೀಕೃತಗೊಂಡ ಹಣದ ಪಾವತಿಗಾಗಿ ಪ್ರತ್ಯೇಕ ವಿಭಾಗ ತೆರೆಯುವುದು ಸೂಕ್ತವಾಗಿದೆ ಎಂದು ಸಲಹೆ ನೀಡಿದರು.
ನ್ಯಾಯವಾದಿ ಕೆ.ಎಸ್ ಸುಧೀಂದ್ರ ಮಾತನಾಡಿ, ತಾಲೂಕು ಕಛೇರಿ ರಸ್ತೆ ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಅನಗ್ಯತವಾಗಿ ಈ ರಸ್ತೆಯಲ್ಲಿದ್ದ ಮರಗಳನ್ನು ಕಡಿತಲೆ ಮಾಡಲಾಗಿದೆ. ಯಾರನ್ನೋ ರಕ್ಷಿಸಲು ಮತ್ತ್ಯಾರನ್ನೋ ಬಲಿಕೊಡಲು ಹುನ್ನಾರ ನಡೆಸಲಾಗುತ್ತಿದೆ. ಈ ಕುರಿತು ನಗರಸಭೆಗೆ ಹಲವು ಬಾರಿ ಒತ್ತಾಯಿಸಲಾಗಿದೆ. ಆದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ರಸ್ತೆ ಅಭಿವೃದ್ಧಿಯಲ್ಲಿ ತಾರತಮ್ಯ ಮಾಡದಿರುವುದು ಒಳ್ಳೆಯದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನರಸಿಂಹಚಾರ್ ಮಾತನಾಡಿ, ಸಿದ್ದರೂಢನಗರದಲ್ಲಿ ಹಲವಾರು ವರ್ಷಗಳಿಂದ ಕುಡಿಯುವ ನೀರಿ ಸಮಸ್ಯೆ ಎದುರಾಗುತ್ತಿದೆ. ಈ ಹಿನ್ನಲೆಯಲ್ಲಿ ಈ ಬಗ್ಗೆ ಗಮನ ಹರಿಸಬೇಕೆಂದರು. ಇದೆ ರೀತಿ ಹಳೇನಗರ ಮನೆ ಮಾಲೀಕರ ಸಂಘದ ಅಧ್ಯಕ್ಷ ಎಲ್.ವಿ ರುದ್ರಪ್ಪ, ಜಹೀರ್ ಜಾನ್, ಬಿ. ಗಂಗಾಧರ್, ಬಸವರಾಜಯ್ಯ, ಹರೀಶ್ ಬಾಬು ಸೇರಿದಂತೆ ಇನ್ನಿತರರು ಸಲಹೆ ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ನಗರಸಭೆ ಪೌರಾಯುಕ್ತ ಮನೋಹರ್, ಇಂಜಿನಿಯರ್ ರಂಗರಾಜಪುರೆ, ಪರಿಸರ ಅಭಿಯಂತರ ಪ್ರಭಾಕರ್, ಕಂದಾಯಾಧಿಕಾರಿ ರಾಜ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.