Featured Post

ಪಾರ್ವತಮ್ಮ ನಿಧನ

ಗುರುವಾರ, ಮಾರ್ಚ್ 4, 2021

ರಾಜ್ಯಮಟ್ಟದಲ್ಲಿ ಸದ್ದುಮಾಡಿದ ಸಂಗಮೇಶ್ವರ್ ಪ್ರಕರಣ :

ಕ್ಷೇತ್ರದಲ್ಲೂ ವಿವಾದಕ್ಕೆ ಕಾರಣವಾಯ್ತು ಶಾಸಕರ ಒರಟುತನ


     ಭದ್ರಾವತಿ, ಮಾ. ೪: ವ್ಯಕ್ತಿ ಪ್ರತಿಷ್ಠೆಗೆ ಅಂಟಿಕೊಂಡಿರುವ ಕ್ಷೇತ್ರದ ರಾಜಕಾರಣದಲ್ಲಿ ಕಳೆದ ೪ ದಶಕಗಳಿಂದ ಒರಟುತನ ಕಂಡು ಬರುತ್ತಿದ್ದು, ಕೆಲವೊಂದು ಘಟನೆಗಳು ರಾಜಕಾರಣದಲ್ಲಿ ಯಾವುದಕ್ಕೂ ಸಿದ್ದ ಎಂಬುದನ್ನು ಸಾಬೀತು ಮಾಡಿ ತೋರಿಸುತ್ತಿವೆ.
    ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ನಡುವಿನ ರಾಜಕೀಯ ಹೋರಾಟ ಸ್ಥಳೀಯವಾಗಿ ಸಾಕಷ್ಟು ವಿವಾದಗಳಿಗೆ ಕಾರಣವಾಗಿವೆ. ಆದರೂ ಸಹ ಕ್ಷೇತ್ರದ ಮತದಾರರು ಈ ಇಬ್ಬರ ಪೈಕಿ ಒಬ್ಬರ ನಂತರ ಒಬ್ಬರನ್ನು ಆಯ್ಕೆ ಮಾಡಿಕೊಂಡು ಬಂದಿದ್ದರು. ಇದೀಗ ಅಪ್ಪಾಜಿ ನಮ್ಮೊಂದಿಗಿಲ್ಲ. ಉಳಿದಿರುವುದು ಸಂಗಮೇಶ್ವರ್ ಮಾತ್ರ. ಇದೀಗ ಅವರ ರಾಜಕೀಯ ಒರಟುತನ ರಾಜ್ಯಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಕ್ಷೇತ್ರದ ಜನರಿಗೆ ಇದು ಹೊಸದೇನಲ್ಲ. ಆದರೆ ವಿಧಾನಸಭಾಧ್ಯಕ್ಷರವರೆಗೆ ತಲುಪಿದ ಪರಿ ಹಾಗು ಸಭಾಧ್ಯಕ್ಷರು ತೆಗೆದುಕೊಂಡ ಕ್ರಮ ಕ್ಷೇತ್ರದ ಪ್ರಜ್ಞಾವಂತ ನಾಗರೀಕರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
   ಸಂಗಮೇಶ್ವರ್ ಹಾಗು ಕುಟುಂಬ ವರ್ಗದವರ ಮೇಲೆ ಪೊಲೀಸರು ಜಾತಿನಿಂದನೆ ದೂರು ದಾಖಲಿಸಿಕೊಂಡಿರುವ ಹಿನ್ನಲೆಯಲ್ಲಿ ಆಕ್ರೋಶಗೊಂಡು ವಿಧಾನಸಭೆಯಲ್ಲಿ ನಡೆದುಕೊಂಡ ಪರಿ ಹಲವು ವಿವಾದಗಳಿಗೆ ಕಾರಣವಾಗಿದೆ.
    ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಹಾಗು ಮೈಸೂರು ಕಾಗದ ಕಾರ್ಖಾನೆಗಳ ಅಭಿವೃದ್ಧಿ ವಿಚಾರದಲ್ಲಿ ಎಂದಿಗೂ ಸಂಗಮೇಶ್ವರ್ ವಿಧಾನಸಭೆಯಲ್ಲಿ ಈ ರೀತಿ ನಡೆದು ಕೊಳ್ಳಲಿಲ್ಲ. ಈ ಹಿಂದೆ ಈ ರೀತಿ ನಡೆದುಕೊಂಡಿದ್ದಲ್ಲಿ ಎರಡು ಕಾರ್ಖಾನೆಗಳು ಅಭಿವೃದ್ಧಿ ಕಾಣುತ್ತಿದ್ದವು ಎಂದು ಆಮ್ ಆದ್ಮಿ ಪಾರ್ಟಿ ಮುಖಂಡರು ವ್ಯಂಗ್ಯ ವ್ಯಕ್ತಪಡಿಸಿದ್ದಾರೆ.  
     ಶಾಸಕರ ನಡೆ ಸರಿತಪ್ಪು ಎನ್ನುವ ಬದಲು ಪ್ರತಿಯೊಬ್ಬ ಸದಸ್ಯರು ಸಂವಿಧಾನ ಹಾಗು ಸದನಕ್ಕೆ ಗೌರವ ನೀಡಬೇಕಾಗುತ್ತದೆ. ಸದನದ ಮಾನಮರ್ಯಾದೆ ಕಾಪಾಡುವುದು ಸದಸ್ಯರ ಕರ್ತವ್ಯವಾಗಿದೆ. ತಮ್ಮ ವೈಯಕ್ತಿಕ ವಿಚಾರಕ್ಕೆ ಈ ಪರಿ ನಡೆದುಕೊಂಡಿರುವುದು ಸರಿಯಲ್ಲ. ಒಂದು ವೇಳೆ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಈ ಪರಿ ವರ್ತಿಸಿದ್ದಲ್ಲಿ ಮೆಚ್ಚುವಂತಹ ವಿಚಾರವಾಗಿರುತ್ತಿತ್ತು ಎನ್ನುತ್ತಾರೆ ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್.
    ಶಾಸಕರ ಯೋಗ್ಯತೆ ಏನೆಂಬುದನ್ನು ಅವರ ವರ್ತನೆಯೇ ತೋರಿಸುತ್ತದೆ. ಶಾಸಕರ ವರ್ತನೆಯಿಂದ ಕ್ಷೇತ್ರದ ಜನರು ತಲೆ ತಗ್ಗಿಸುವಂತಾಗಿದೆ ಎಂದು ಕರ್ನಾಟಕ ನೀರು ಸರಬರಾಜು ಹಾಗು ಒಳಚರಂಡಿ ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಮುಖಂಡ ಬಾಲಕೃಷ್ಣ ವಿರುದ್ಧ ಜಾತಿನಿಂದನೆ ದೂರು

ಭದ್ರಾವತಿ, ಮಾ. ೪: ಕಾಂಗ್ರೆಸ್ ಮುಖಂಡ ಬಾಲಕೃಷ್ಣ ವಿರುದ್ಧ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಹಳೇನಗರ ಪೊಲೀಸ್ ಠಾಣೆಯಲ್ಲಿ ಜಾತಿನಿಂದನೆ ದೂರು ದಾಖಲಿಸಿದ್ದಾರೆ.
ಬಾಲಕೃಷ್ಣ ಅಲಿಯಾಸ್ ಮಟನ್ ಬಾಲು(ರೌಡಿ ಬಾಲು) ಸರ್ಕಾರದಿಂದ ಗಡಿಪಾರಿಗೆ ಆದೇಶವಾಗಿದ್ದ ರೌಡಿ ಶೀಟರ್ ಆಗಿದ್ದು, ಈತ ಮಾ.೨ರಂದು ತಾಲೂಕು ಕಛೇರಿ ಮುಂಭಾಗ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಭೋವಿ ಪರಿಶಿಷ್ಟ ಜಾತಿಗೆ ಸೇರಿದ ನನ್ನ ವಿರುದ್ಧ ವೈಯಕ್ತಿಕವಾಗಿ ಅವಾಚ್ಯ ಶಬ್ದಗಳೊಂದಿಗೆ ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾನೆ. ಈ ಹಿನ್ನಲೆಯಲ್ಲಿ ಈತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.

ಅಧ್ಯಕ್ಷರಾಗಿ ಎಚ್. ಮಂಜುನಾಥ್

ಭದ್ರಾವತಿ, ಮಾ. ೪: ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ತಾಲೂಕು ಅಧ್ಯಕ್ಷರಾಗಿ ಎಚ್. ಮಂಜುನಾಥ್ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಬಿ.ಎಚ್ ಮಹಾದೇವ್, ಆರ್. ರುದೇಶ್ ಮತ್ತು ಶ್ರೀಕಾಂತ್, ಪ್ರಧಾನಕಾರ್ಯದರ್ಶಿಯಾಗಿ ಕೆ.ಆರ್ ಆನಂದ್, ಸಹಕಾರ್ಯದರ್ಶಿಗಳಾಗಿ ತಿಪ್ಪೇಸ್ವಾಮಿ, ಬಿ.ಎಂ ಚೇತನ್ ಮತ್ತು ನವೀನ್, ಖಜಾಂಚಿಯಾಗಿ ಬಿ.ಎಂ ರಮೇಶ್, ನಿರ್ದೇಶಕರಾಗಿ ಮಂಜುನಾಥ್, ಆನಂದಸ್ವಾಮಿ, ಚಂದ್ರಶೇಖರ್, ಸತೀಶ್, ಆರ್. ನಾಗರಾಜ್, ಎಚ್. ಮಧುಸೂಧನ್, ಶೇಖರ್, ಮಧುಪಾಟೀಲ್, ಲತಾ, ಗೀತಾ, ಜಿ.ವಿ ಸವಿತ ಮತ್ತು ಬಿ.ಓ ಬಸವರಾಜ್ ಆಯ್ಕೆಯಾಗಿದ್ದಾರೆ.

ಅಧ್ಯಕ್ಷರಾಗಿ ಎಲ್.ಎಸ್ ರೂಪ

ಭದ್ರಾವತಿ, ಮಾ. ೪: ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕದ ತಾಲೂಕು ಅಧ್ಯಕ್ಷರಾಗಿ ಎಲ್.ಎಸ್ ರೂಪ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ರೂಪ ಹೆಬ್ಬಂಡಿ, ಎಚ್.ಸಿ ವಿಶಾಲ, ಪುಷ್ಪವತಿ, ಡಿ.ಆರ್ ಕಲಾವತಿ ಮತ್ತು ರಾಜೇಶ್ವರಿ, ಪ್ರಧಾನ ಕಾರ್ಯದರ್ಶಿಯಾಗಿ ಎಚ್.ಎಸ್ ಕವಿತ, ಸಹಕಾರ್ಯದರ್ಶಿಯಾಗಿ ರೂಪ, ಕೆ.ಪಿ ಪೂರ್ಣಿಮ, ಎಚ್.ಪಿ. ಸುಮಾ, ಖಜಾಂಚಿಯಾಗಿ ಶೋಭಾಪಾಟೀಲ್, ನಿರ್ದೇಶಕರಾಗಿ ಶಾಂಭವಿ, ಕವಿತ, ಪ್ರೇಮ, ಉಷಾ, ಎಚ್.ಎಸ್ ಮಂಜುಳ, ಪ್ರಿಯಾ, ಸ್ಮಿತ, ಎಸ್. ಸಹನ, ಎಂ.ಎಸ್ ಸೌಮ್ಯ ಮತ್ತು ರೂಪ ಆಯ್ಕೆಯಾಗಿದ್ದಾರೆ.

ಏ.೧ರಂದು ಪಿಯುಸಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಭದ್ರಾವತಿ, ಮಾ. ೪: ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ತುಮಕೂರು ಸಿದ್ದಗಂಗಾ ಮಠದ ಡಾ. ಶಿವಕುಮಾರಸ್ವಾಮೀಜಿಯವರ ೧೧೫ನೇ ಜಯಂತಿ, ನೂತನ ಗ್ರಾ.ಪಂ. ಸದಸ್ಯರಿಗೆ ಅಭಿನಂದನೆ ಹಾಗು ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪ್ರತಿಭಾವಂತವಿದ್ಯಾರ್ಥಿಗಳಿಗೆ ಪುರಸ್ಕಾರ ಕಾರ್ಯಕ್ರಮ ಏ.೧ರಂದು ಹಮ್ಮಿಕೊಳ್ಳಲಾಗಿದೆ.
ಹಳೇನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಹಮ್ಮಿಕೊಳ್ಳಲಾಗಿರುವ ಸಮಾರಂಭದಲ್ಲಿ ಅಖಿಲ ಭಾರತ ವೀರಶೈವ ಯುವ ವೇದಿಕೆ ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳ ಪದಗ್ರಹಣ ಸಹ ನಡೆಯಲಿದೆ.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳು ಮಾ.೧೫ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಮಹಾಸಭಾ ಅಧ್ಯಕ್ಷ ಸಿದ್ದಲಿಂಗಯ್ಯ ತಿಳಿಸಿದ್ದಾರೆ.


ದೇವಸ್ಥಾನ ಕುರಿತು ಮಾಹಿತಿ ನೀಡಲು, ಮೂಲ ಸೌಕರ್ಯ ಕಲ್ಪಿಸಲು ಮನವಿ

ಭದ್ರಾವತಿ ತಾಲೂಕಿನ ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಪುರಾಣ ಪ್ರಸಿದ್ದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡುವಂತೆ ಒತ್ತಾಯಿಸಿ ಗ್ರಾಮ ಪಂಚಾಯಿತಿ ಸದಸ್ಯ ಕೆ.ವಿ ಧನಂಜಯ್ಯ ನೇತೃತ್ವದಲ್ಲಿ ತಾಲೂಕು ಆಡಳಿತ ಹಾಗು ತಾಲೂಕು ಪಂಚಾಯಿತಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
     ಭದ್ರಾವತಿ, ಮಾ. ೪: ತಾಲೂಕಿನ ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಪುರಾಣ ಪ್ರಸಿದ್ದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡುವಂತೆ ಒತ್ತಾಯಿಸಿ ಗ್ರಾಮ ಪಂಚಾಯಿತಿ ಸದಸ್ಯ ಕೆ.ವಿ ಧನಂಜಯ್ಯ ನೇತೃತ್ವದಲ್ಲಿ ತಾಲೂಕು ಆಡಳಿತ ಹಾಗು ತಾಲೂಕು ಪಂಚಾಯಿತಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
   ಗ್ರಾಮ ಪಂಚಾಯಿತಿ ಸರ್ವೆ ನಂ. ೬೮ರ ಸಿರಿಯೂರು ಗಡಿಗೆ ಹೊಂದಿಕೊಂಡಿರುವಂತಹ ಪುರಾತನವಾದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನವಿದ್ದು, ಈ ದೇವಸ್ಥಾನಕ್ಕೆ ಹಬ್ಬಹರಿದಿನಗಳಂದು, ಸಂಕಷ್ಟಹರ ಚತುರ್ಥಿ, ಪ್ರತಿ ಶನಿವಾರ ಹಾಗು ಅಮವಾಸ್ಯೆಗಳಂದು ಹೋಮ-ಹವನ, ವಿಶೇಷ ಪೂಜೆ, ಅನ್ನದಾನ ಸಂತರ್ಪಣೆ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆದರೆ ದೇವಸ್ಥಾನಕ್ಕೆ ಸೂಕ್ತ ರಸ್ತೆಯಾಗಲಿ, ಕುಡಿಯುವ ನೀರಿನ ವ್ಯವಸ್ಥೆಯಾಗಲಿ, ವಿದ್ಯುತ್ ದೀಪವಾಗಲಿ ಯಾವುದೇ ಸೌಕರ್ಯಗಳು ಇರುವುದಿಲ್ಲ. ಸುಮಾರು ೧ ಕಿ.ಮೀ ದೂರ ಮಹಿಳೆಯರು, ಮಕ್ಕಳು, ವಯೋವೃದ್ಧರು ಕಾಲ್ನಡಿಗೆಯಲ್ಲಿ ದೇವಸ್ಥಾನಕ್ಕೆ ಬಂದು ಹೋಗುತ್ತಿದ್ದಾರೆ.
   ದೇವಸ್ಥಾನಕ್ಕೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡುವ ಜೊತೆಗೆ ಪುರತತ್ವ ಇಲಾಖೆಯವರು ದೇವಸ್ಥಾನದ ಮೂಲ ವಿಗ್ರಹ ಯಾವ ರಾಜರ ಕಾಲದ್ದು, ಶೈಲಿ ಯಾವುದು, ಶಿಲ್ಪಿ ಯಾರು ಇತ್ಯಾದಿ ಮಾಹಿತಿಗಳನ್ನು ಸಂಗ್ರಹಿಸಿ ನೀಡುವಂತೆ ಮನವಿಯಲ್ಲಿ ಕೋರಲಾಗಿದೆ.
ಗ್ರಾಮಸ್ಥರಾದ ರಂಗಸ್ವಾಮಿ, ಚೇತನ್‌ಕುಮಾರ್, ಕುಮಾರಸ್ವಾಮಿ, ಚಂದ್ರನಾಯ್ಕ, ರಂಜಿತ್, ಎಂ. ಮಂಜುನಾಥ್, ಕೃಷ್ಣಮೂರ್ತಿ ಮತ್ತು ಶಿವರಾಜ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಬುಧವಾರ, ಮಾರ್ಚ್ 3, 2021

ಅಂತರಾಷ್ಟ್ರೀಯ ಯೋಗಪಟು ಡಾ. ನಿಂಗೇಶ್‌ಗೆ ಸನ್ಮಾನ

ಭದ್ರಾವತಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ನಡೆದ ತಾಲೂಕು ಮಟ್ಟದ ಹೊನಲು ಬೆಳಕಿನ ಪ್ರೊ ಕಬಡ್ಡಿ ಪಂದ್ಯಾವಳಿಯಲ್ಲಿ ಬಿವೈಕೆ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಅಂತರಾಷ್ಟ್ರೀಯ ಯೋಗಪಟು ಡಾ. ನಿಂಗೇಶ್‌ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
   ಭದ್ರಾವತಿ, ಮಾ. ೩: ಹಳೇನಗರದ ಕನಕಮಂಟಪ ಮೈದಾನದಲ್ಲಿ ನಡೆದ ತಾಲೂಕು ಮಟ್ಟದ ಹೊನಲು ಬೆಳಕಿನ ಪ್ರೊ ಕಬಡ್ಡಿ ಪಂದ್ಯಾವಳಿಯಲ್ಲಿ ಬಿವೈಕೆ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಅಂತರಾಷ್ಟ್ರೀಯ ಯೋಗಪಟು ಡಾ. ನಿಂಗೇಶ್‌ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಡಾ. ನಿಂಗೇಶ್‌ರವರು ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು, ಯೋಗ ಕ್ಷೇತ್ರದಲ್ಲಿನ ಉತ್ತಮ ಸಾಧನೆಯನ್ನು ಗುರುತಿಸಿ ಕ್ಲಬ್ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ಇದೆ ರೀತಿ ಅಂತರಾಷ್ಟ್ರೀಯ ಖೋ ಖೋ ಕ್ರೀಡಾಪಟು ಮುನಿರ್ ಬಾಷರನ್ನು ಸಹ ಸನ್ಮಾನಿಸಿ ಅಭಿನಂದಿಸಲಾಯಿತು.
  ಅಂತರಾಷ್ಟ್ರೀಯ ಕ್ರೀಡಾಪಟು, ಕಬ್ಲ್ ಅಧ್ಯಕ್ಷ ಕೃಷ್ಣೇಗೌಡ, ಪ್ರಧಾನ ಕಾರ್ಯದರ್ಶಿ ಎಚ್.ಆರ್ ರಂಗನಾಥ್, ಕಾರ್ಯದರ್ಶಿ ಮಾರ್ಕಂಡಯ್ಯ, ಖಜಾಂಚಿ ಎಸ್. ವಿಶ್ವನಾಥ್, ಉಪಾಧ್ಯಕ್ಷರಾದ ಚನ್ನಪ್ಪ, ಉದ್ಯಮಿ ಬಿ.ಕೆ ಜಗನ್ನಾಥ್, ಮುಖಂಡರಾದ ಕೆ. ಸುದೀಪ್‌ಕುಮಾರ್, ನಗರಸಭಾ ಸದಸ್ಯ ಮಣಿ ಎಎನ್‌ಎಸ್, ಶ್ರೀನಿವಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.