Saturday, March 27, 2021

ಉತ್ತಮ ವ್ಯಾಯಾಮ, ದೈಹಿಕ ಶ್ರಮಗಳಿಂದ ಮೂಳೆ ಸವೆತಕ್ಕೆ ಕಡಿವಾಣ : ಡಾ. ವೀಣಾ ಎಸ್ ಭಟ್

ಹಳೇನಗರ ಮಹಿಳಾ ಸೇವಾ ಸಮಾಜ, ತಾಲೂಕು ಒಕ್ಕಲಿಗರ ಮಹಿಳಾ ವೇದಿಕೆ ವತಿಯಿಂದ ಹುಬ್ಬಳ್ಳಿಯ ಮೇಯರ್ ಆರ್ಗ್ಯಾನಿಕ್ ಪ್ರೈವೇಟ್ ಲಿ., ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಉಚಿತ ಮೂಳೆ ಸಾಂದ್ರತೆ ಚಿಕಿತ್ಸೆ ಹಾಗು ತಪಾಸಣಾ ಶಿಬಿರ ಡಾ. ವೀಣಾ ಎಸ್ ಭಟ್, ಹೇಮಾವತಿ ವಿಶ್ವನಾಥ್, ಅನ್ನಪೂರ್ಣ ಸತೀಶ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
    ಭದ್ರಾವತಿ: ಮಹಿಳೆಯರು ಉತ್ತಮ ವ್ಯಾಯಾಮ ಹಾಗು ದೈಹಿಕ ಶ್ರಮಗಳಿಂದ ೪೦ ವರ್ಷಗಳ ನಂತರ ಕಾಣಿಸಿಕೊಳ್ಳುವ ಮೂಳೆ ಸವೆತ ಹಾಗು ಇನ್ನಿತರ ಸಮಸ್ಯೆಗಳಿಂದ ಪಾರಾಗಲು ಸಾಧ್ಯ ಎಂದು ನಗರದ ಸ್ತ್ರೀ ರೋಗ ತಜ್ಞೆ ಡಾ. ವೀಣಾ ಎಸ್ ಭಟ್ ತಿಳಿಸಿದರು.
    ಅವರು ಹಳೇನಗರ ಮಹಿಳಾ ಸೇವಾ ಸಮಾಜ, ತಾಲೂಕು ಒಕ್ಕಲಿಗರ ಮಹಿಳಾ ವೇದಿಕೆ ವತಿಯಿಂದ ಹುಬ್ಬಳ್ಳಿಯ ಮೇಯರ್ ಆರ್ಗ್ಯಾನಿಕ್ ಪ್ರೈವೇಟ್ ಲಿ., ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಉಚಿತ ಮೂಳೆ ಸಾಂದ್ರತೆ ಚಿಕಿತ್ಸೆ ಹಾಗು ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಋತು ಚಕ್ರ ಆರಂಭದಿಂದ ನಿಲ್ಲುವವರೆಗೂ ಮಹಿಳೆಯರು ಹಲವಾರು ಹಂತಗಳನ್ನು ದಾಟಿ ಜೀವನ ನಡೆಸಬೇಕಿದೆ. ಈ ಹಿನ್ನಲೆಯಲ್ಲಿ ಉತ್ತಮ ಆರೋಗ್ಯ ಹೊಂದುವುದು ಅವಶ್ಯಕ.
    ೩೦ ವರ್ಷಗಳವರೆಗೆ ಮಹಿಳೆಯರು ನಿರಂತರವಾಗಿ ಮೂಳೆ ಸಾಂದ್ರತೆ ಪರೀಕ್ಷೆ ಮಾಡಿಸಿಕೊಳ್ಳುವ ಜೊತೆಗೆ ಭವಿಷ್ಯದಲ್ಲಿ ಎದುರಾಗುವ ಮೂಳೆ ಸವೆತದಿಂದ ಪಾರಾಗಲು ಅಗತ್ಯವಿರುವ ಕ್ರಮಗಳನ್ನು ರೂಢಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
    ಮಹಿಳಾ ಸೇವಾ ಸಮಾಜದ ಅಧ್ಯಕ್ಷೆ ಹೇಮಾವತಿ ವಿಶ್ವನಾಥ್, ಒಕ್ಕಲಿಗರ ಮಹಿಳಾ ವೇದಿಕೆ ಅಧ್ಯಕ್ಷೆ ಅನ್ನಪೂರ್ಣ ಸತೀಶ್ ಅಧ್ಯಕ್ಷತೆ ವಹಿಸಿದ್ದರು.
   ಪ್ರಮುಖರಾದ ಶೋಭಾ ಗಂಗರಾಜ್, ಜಯಂತಿ ಶೇಟ್, ಶಕುಂತಲ, ಲೋಹಿತಾ ನಂಜಪ್ಪ, ವಿಶ್ವೇಶ್ವರಯ್ಯ, ಪ್ರಜ್ವಲ್, ಉಮೇಶ್, ಶಾರದ ರಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ರಂಗ ಕಲೆ ಮೂಲಕ ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಲು ಸಾಧ್ಯ : ಅಪರಂಜಿ ಶಿವರಾಜ್

ಭದ್ರಾವತಿ ಜನ್ನಾಪುರದ ಅಪರಂಜಿ ಅಭಿನಯ ಶಾಲೆಯಲ್ಲಿ ಶನಿವಾರ ವಿಶ್ವ ರಂಗಭೂಮಿ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು.
   ಭದ್ರಾವತಿ, ಮಾ. ೨೭: ರಂಗ ಕಲೆ ಮೂಲಕ ಮಕ್ಕಳು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ ಎಂದು ರಂಗಕಲಾವಿದ, ಚಲನಚಿತ್ರ ನಟ ಅಪರಂಜಿ ಶಿವರಾಜ್ ಹೇಳಿದರು.
   ಅವರು ಶನಿವಾರ ಜನ್ನಾಪುರದಲ್ಲಿ ಆರಂಭಿಸಿರುವ ಅಪರಂಜಿ ಅಭಿನಯ ಶಾಲೆಯಲ್ಲಿ ವಿಶ್ವ ರಂಗಭೂಮಿ ದಿನಾಚರಣೆಯನ್ನು ಸರಳವಾಗಿ ಆಚರಿಸುವ ಮೂಲಕ ಮಾತನಾಡಿದರು.
ಬಾಲ್ಯದಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನಗೊಳ್ಳಲು ರಂಗಕಲೆ ಸಹಕಾರಿಯಾಗಿದೆ. ಉತ್ತಮ ವ್ಯಕ್ತಿತ್ವದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಈ ಹಿನ್ನಲೆಯಲ್ಲಿ ಕಳೆದ ೩ ವರ್ಷಗಳ ಹಿಂದೆ ಆರಂಭಿಸಿದ ಶಾಲೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದರು.
   ರಂಗ ಚಟುವಟಿಕೆಗಳಲ್ಲಿ ಮಕ್ಕಳು ಹೆಚ್ಚಾಗಿ ತೊಡಗಿಸಿಕೊಂಡಲ್ಲಿ ಓದಿನ ಬಗ್ಗೆ ಆಸಕ್ತಿ ಕಡಿಮೆಯಾಗಲಿದೆ ಎಂಬ ತಪ್ಪು ಕಲ್ಪನೆಯನ್ನು ಕೆಲವರು ಹೊಂದಿದ್ದಾರೆ. ಆದರೆ ರಂಗ ಕಲೆ ಮೂಲಕ ಮಕ್ಕಳು ಸುಲಲಿತವಾಗಿ ಮಾತನಾಡುವ ಜೊತೆಗೆ ತಮ್ಮ ಪ್ರತಿಭೆಗಳನ್ನು ಹೊರಹಾಕುವ  ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲಿದ್ದಾರೆ ಎಂದರು.
    ಅಭಿನಯ ಶಾಲೆಯ ಪುಷ್ಪಲತಾ ಮಾತನಾಡಿ, ಮಕ್ಕಳನ್ನು ಅಭಿನಯ ಶಾಲೆಗೆ ಸೇರಿಸುವ ಮೂಲಕ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರುವ ನಿಟ್ಟಿನಲ್ಲಿ ಪೋಷಕರು ಮುಂದಾಗಬೇಕೆಂದರು.
ಶಾಲೆಯಲ್ಲಿ ತರಬೇತಿ ಪಡೆಯುತ್ತಿರುವ ಮಕ್ಕಳು ಹಾಗು ಪೋಷಕರು ಉಪಸ್ಥಿತರಿದ್ದರು.  

ರತಿ, ಮನ್ಮಥ ಪ್ರತಿಷ್ಠಾಪನೆಯೊಂದಿಗೆ ಹೋಳಿ ಹಬ್ಬ ಆಚರಣೆಗೆ ಚಾಲನೆ

ಭದ್ರಾವತಿ ಹಳೇನಗರದ ಕುಂಬಾರರ ಬೀದಿಯಲ್ಲಿ ಹೋಳಿ ಹಬ್ಬದ ಪ್ರಯುಕ್ತ ಪ್ರತಿಷ್ಠಾಪಿಸ ಲಾಗಿರುವ ರತಿ, ಮನ್ಮಥ.
   ಭದ್ರಾವತಿ, ಮಾ. ೨೭: ರತಿ, ಮನ್ಮಥ ಪ್ರತಿಷ್ಠಾಪನೆಯೊಂದಿಗೆ ಹಳೇನಗರದ ವಿವಿಧೆಡೆ ಕಳೆದ ೩ ದಿನಗಳಿಂದ ಹೋಳಿ ಹಬ್ಬ ಆಚರಣೆಗೆ ಚಾಲನೆ ನೀಡಲಾಗಿದೆ.
   ಕೋವಿಡ್-೧೯ರ ನಡುವೆಯೂ ಪ್ರತಿವರ್ಷದಂತೆ ಈ ಬಾರಿ ಸಹ ಹಳೇನಗರದ ಕುಂಬಾರರ ಬೀದಿಯಲ್ಲಿ ಹೋಳಿ ಮಹೋತ್ಸವ ಸೇವಾ ಸಮಿತಿ ವತಿಯಿಂದ ಮತ್ತು ಪೇಟೆ ಬೀದಿಯಲ್ಲಿ ರತಿ, ಮನ್ಮಥ ಇಬ್ಬರನ್ನು ಪ್ರತಿಷ್ಠಾಪಿಸಲಾಗಿದೆ. ಆದರೆ ಬ್ರಾಹ್ಮಣರ ಬೀದಿಯಲ್ಲಿ ಶ್ರೀ ಮನ್ಮಥ ಸೇವಾ ಸಮಿತಿ ವತಿಯಿಂದ ಕೇವಲ ಮನ್ಮಥ ಮಾತ್ರ ಪ್ರತಿಷ್ಠಾಪಿಸಲಾಗಿದೆ.
   ಸಾಂಸ್ಕೃತಿಕ ಹಾಗು ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗುತ್ತಿದ್ದು, ಮಾ.೨೯ರ ಸೋಮವಾರ ಬೆಳಿಗ್ಗೆ ರತಿ ಮನ್ಮಥ ರಾಜಬೀದಿ ಉತ್ಸವ ಮೆರವಣಿಗೆಗಳೊಂದಿಗೆ ಕಾಮದಹನ ನಡೆಯಲಿದೆ.
ಈಗಾಗಲೇ ಸರ್ಕಾರ ಕೋವಿಡ್-೧೯ರ ಹಿನ್ನಲೆಯಲ್ಲಿ ಹೋಳಿ ಹಬ್ಬ ಆಚರಣೆಗೆ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದ್ದು, ಹೆಚ್ಚಿನ ಜನಸಂದಣಿ ಉಂಟಾಗದಂತೆ ಎಚ್ಚರವಹಿಸುವಂತೆ ಸೂಚಿಸಿದೆ.


ಭದ್ರಾವತಿ ಹಳೇನಗರದ ಬ್ರಾಹ್ಮಣರ ಬೀದಿಯಲ್ಲಿ ಹೋಳಿ ಹಬ್ಬದ ಪ್ರಮುಕ್ತ ಪ್ರತಿಷ್ಠಾಪಿಸಲಾಗಿರುವ ಮನ್ಮಥ.

Friday, March 26, 2021

ಮಾ.೨೭ರಂದು ಮೂಳೆ ಖನಿಜ ಸಾಂದ್ರತೆ ಚಿಕಿತ್ಸೆ, ತಪಾಸಣೆ ಶಿಬಿರ

ಭದ್ರಾವತಿ, ಮಾ. ೨೬: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಹುಬ್ಬಳ್ಳಿಯ ಮೇಯರ್ ಆರ್ಗ್ಯಾನಿಕ್ ಪ್ರೈವೇಟ್ ಲಿ., ಮಹಿಳಾ ಸೇವಾ ಸಮಾಜ ಹಾಗು ತಾಲೂಕು ಒಕ್ಕಲಿಗರ ಮಹಿಳಾ ವೇದಿಕೆ ವತಿಯಿಂದ ಮಾ.೨೭ರಂದು ಬೆಳಿಗ್ಗೆ ೧೦ ಗಂಟೆಯಿಂದ ಮಧ್ಯಾಹ್ನ ೨ ಗಂಟೆವರೆಗೆ ಹಳೇನಗರದ ಮಹಿಳಾ ಸೇವಾ ಸಮಾಜದಲ್ಲಿ ಉಚಿತ ಮೂಳೆ ಖನಿಜ ಸಾಂದ್ರತೆ ಚಿಕಿತ್ಸೆ ಹಾಗು ತಪಾಸಣಾ ಶಿಬಿರ ಆಯೋಜಿಸಲಾಗಿದೆ.
   ಸ್ತ್ರೀ ರೋಗ ತಜ್ಞೆ ಡಾ. ವೀಣಾ ಎಸ್ ಭಟ್ ಶಿಬಿರ ಉದ್ಘಾಟಿಸಲಿದ್ದು, ಮಹಿಳಾ ಸೇವಾ ಸಮಾಜದ ಅಧ್ಯಕ್ಷೆ ಹೇಮಾವತಿ ವಿಶ್ವನಾಥ್ ಮತ್ತು ಒಕ್ಕಲಿಗರ ಮಹಿಳಾ ವೇದಿಕೆ ಅಧ್ಯಕ್ಷೆ ಅನ್ನಪೂರ್ಣ ಸತೀಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಶೋಭ ಗಂಗರಾಜ್, ಕೆ. ರಾಧ, ಜಯಂತಿ ಶೇಟ್ ಮತ್ತು ರಾಧ ಶ್ರೀಗಂಧ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಕೋರಲಾಗಿದೆ.

ಪ್ರಭು ಶ್ರೀರಾಮ ಕುರಿತು ಅವಹೇಳನಕಾರಿ ಹೇಳಿಕೆ ಖಂಡಿಸಿ ಪ್ರತಿಭಟನೆ

ಸಿ.ಎಂ ಇಬ್ರಾಹಿಂ ಕ್ಷಮೆಯಾಚನೆಗೆ ಆಗ್ರಹ


ಹಿಂದೂಗಳ ಆರಾಧ್ಯ ದೈವ ಪ್ರಭು ಶ್ರೀರಾಮ ಕುರಿತು ಮಾಜಿ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಕೇಂದ್ರ ಸಚಿವ ಸಿ.ಎಂ ಇಬ್ರಾಹಿಂ ವಿರುದ್ಧ ಶುಕ್ರವಾರ ಸಂಜೆ ಬಜರಂಗದಳ ಕಾರ್ಯಕರ್ತರು ಭದ್ರಾವತಿ ರಂಗಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
   ಭದ್ರಾವತಿ, ಮಾ. ೨೬: ಹಿಂದೂಗಳ ಆರಾಧ್ಯ ದೈವ ಪ್ರಭು ಶ್ರೀರಾಮ ಕುರಿತು ಮಾಜಿ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಕೇಂದ್ರ ಸಚಿವ ಸಿ.ಎಂ ಇಬ್ರಾಹಿಂ ವಿರುದ್ಧ ಶುಕ್ರವಾರ ಸಂಜೆ ಬಜರಂಗದಳ ಕಾರ್ಯಕರ್ತರು ನಗರದ ರಂಗಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
    ಸಿ.ಎಂ ಇಬ್ರಾಹಿಂ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿದ ಕಾರ್ಯಕರ್ತರು, ಪ್ರಭು ಶ್ರೀರಾಮ ಕುರಿತ ಅವಹೇಳನಕಾರಿ ಹೇಳಿಕೆಯಿಂದಾಗಿ ಹಿಂದೂಗಳ ಭಾವನೆಗೆ ಧಕ್ಕೆಯುಂಟಾಗಿದೆ. ತಕ್ಷಣ ಹಿಂದೂಗಳ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಯಾವುದೇ ಕಾರಣಕ್ಕೂ ಕ್ಷೇತ್ರಕ್ಕೆ ಆಗಮಿಸಲು ಬಿಡುವುದಿಲ್ಲ. ಒಂದು ವೇಳೆ ಆಗಮಿಸಿದ್ದಲ್ಲಿ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.
   ಪ್ರತಿಭಟನೆಯಲ್ಲಿ ಬಜರಂಗದಳ ಜಿಲ್ಲಾ ಸಹ ಸಂಚಾಲಕ ವಡಿವೇಲು, ಸುನಿಲ್‌ಕುಮಾರ್, ದೇವರಾಜ್, ಚಂದ್ರು, ಕಿರಣ್, ಕೃಷ್ಣ, ಸವಾಯಿ ಸಿಂಗ್, ಶ್ರೀಕಾಂತ್, ಸಂಜು, ರಮೇಶ್, ಮಣಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

೧೪ ತಾಲೂಕು ಪಂಚಾಯಿತಿ, ೫ ಜಿಲ್ಲಾ ಪಂಚಾಯಿತಿ ಕ್ಷೇತ್ರ ನಿಗದಿಗೆ ಅಧಿಸೂಚನೆ

   ಭದ್ರಾವತಿ, ಮಾ. ೨೬: ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗಳ ಚುನಾವಣೆಗಳಿಗೆ ಈಗಾಗಲೇ ಚುನಾವಣಾ ಆಯೋಗ ಸಿದ್ದತೆ ಕೈಗೊಳ್ಳುತ್ತಿದ್ದು, ಕ್ಷೇತ್ರಗಳ ರಚನೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಪತ್ರದಲ್ಲಿ ಅಧಿಸೂಚನೆ ಹೊರಡಿಸಿದೆ. ಈ ಪ್ರಕಾರ ತಾಲೂಕು ಪಂಚಾಯಿತಿ ೫ ಕ್ಷೇತ್ರಗಳು ಕಡಿತಗೊಂಡಿವೆ.
    ತಾಲೂಕು ಪಂಚಾಯಿತಿ ಒಟ್ಟು ೧೯ ಕ್ಷೇತ್ರಗಳನ್ನು ಒಳಗೊಂಡಿದ್ದು, ಸರ್ಕಾರ ಹೊಳೆಹೊನ್ನೂರು ಪಟ್ಟಣಯನ್ನಾಗಿ ಮೇಲ್ದರ್ಜೆಗೇರಿಸಿರುವ ಹಿನ್ನಲೆಯಲ್ಲಿ ೫ ತಾಲೂಕು ಪಂಚಾಯಿತಿ ಕ್ಷೇತ್ರಗಳನ್ನು ಕೈಬಿಟ್ಟು ೧೪ ಕ್ಷೇತ್ರಗಳನ್ನು ನಿಗದಿಪಡಿಸಲಾಗಿದೆ. ಉಳಿದಂತೆ ತಾಲೂಕಿನಲ್ಲಿ ಆನವೇರಿ, ಹೊಳೆಹೊನ್ನೂರು, ಕೂಡ್ಲಿಗೆರೆ, ಹಿರಿಯೂರು ಮತ್ತು ಸಿಂಗನಮನೆ ಸೇರಿದಂತೆ ಒಟ್ಟು ೫ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿದ್ದು, ಈ ಕ್ಷೇತ್ರಗಳಲ್ಲಿ ಯಾವುದೇ ಇಲ್ಲ.

ರಂಗ ಚಟುವಟಿಕೆಗಳಿಗೆ ಕ್ರಿಯಾಶೀಲತೆ, ಯುವ ಸಮುದಾಯ ಆಕರ್ಷಿಸಲು ಪ್ರಯತ್ನ : ಕೊಟ್ರಪ್ಪ ಜಿ. ಹಿರೇಮಾಗಡಿ

ಭದ್ರಾವತಿ ಜನ್ನಾಪುರ ಎನ್‌ಟಿಬಿ ರಸ್ತೆಯಲ್ಲಿರುವ ಅಂಬೇಡ್ಕರ್ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ರಂಗಮಂಥನ ಸಮಾಲೋಚನಾ ಸಭೆಯಲ್ಲಿ ಹಿರಿಯ ರಂಗ ಕಲಾವಿದ ವೈ.ಕೆ ಹನುಮಂತಯ್ಯ ಮಾತನಾಡಿದರು.  
    ಭದ್ರಾವತಿ, ಮಾ. ೨೬: ಕಲಾವಿದರು, ಶಿವಮೊಗ್ಗ ಸಂಘಟನೆ ಹವ್ಯಾಸಿ ರಂಗ ತಂಡಗಳ ಕಲಾವಿದರ ಸಂಘದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಯಲ್ಲಿ ರಂಗ ಚಟುವಟಿಕೆಗಳಿಗೆ ಕ್ರಿಯಾಶೀಲತೆ ತರುವ ನಿಟ್ಟಿನಲ್ಲಿ ಮುಂದಾಗಿದೆ ಎಂದು ಸಂಘಟನೆ ಅಧ್ಯಕ್ಷ ಕೊಟ್ರಪ್ಪ ಜಿ. ಹಿರೇಮಾಗಡಿ ತಿಳಿಸಿದರು.
   ಅವರು ನಗರದ ಜನ್ನಾಪುರ ಎನ್‌ಟಿಬಿ ರಸ್ತೆಯಲ್ಲಿರುವ ಅಂಬೇಡ್ಕರ್ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ರಂಗ ಮಂಥನ ಸಮಾಲೋಚನಾ ಸಭೆಯ ನೇತೃತ್ವವಹಿಸಿ ಮಾತನಾಡಿದರು.  
    ಇತ್ತೀಚಿನ ದಿನಗಳಲ್ಲಿ ರಂಗ ಚಟುವಟಿಕೆಗಳು ಕ್ಷೀಣಿಸುತ್ತಿದ್ದು, ಯುವ ಸಮುದಾಯವನ್ನು ರಂಗ ಚಟುವಟಿಕೆಗಳ ಕಡೆ ಆಕರ್ಷಿತರನ್ನಾಸುವ ಮೂಲಕ ರಂಗ ಚಟುವಟಿಕೆಗಳಿಗೆ ಪುನಃ ಜೀವಂತಿಕೆ ತಂದುಕೊಡಬೇಕಾಗಿದೆ. ಯುವ ಸಮುದಾಯ ಹೆಚ್ಚಾಗಿ ಚಲನಚಿತ್ರ, ಟಿ.ವಿ ಚಾನಲ್‌ಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳಿಗೆ ಜೋತುಬಿದ್ದಿದ್ದು, ಭ್ರಮಾ ಲೋಕದಲ್ಲಿ ಮುಳುಗಿದೆ. ಈ ಸಮುದಾಯಕ್ಕೆ ನಟನೆಯ ಮೂಲ ಬೇರು ರಂಗಭೂಮಿ ಎಂಬುದನ್ನು ಮನದಟ್ಟು ಮಾಡಬೇಕಾಗಿದೆ ಎಂದರು.
    ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ಮಾತನಾಡಿ, ರಂಗ ಚಟುವಟಿಕೆಗಳ ಮೇಲೆ ರಾಜಕೀಯದ   ಕರಿ ನೆರಳು ಬೀಳದಂತೆ ಎಚ್ಚರವಹಿಸಬೇಕು. ರಂಗ ಕಲಾವಿದರ ಪ್ರತಿಭೆ ಅವರ ಮುಂದಿನ ಭವಿಷ್ಯವನ್ನು ನಿರ್ಧರಿಸಲಿದೆ. ಹೆಚ್ಚು ಹೆಚ್ಚು ಕಲಾವಿದರು ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಂಡಷ್ಟು ರಂಗ ಚಟುವಟಿಕೆಗಳಿಗೆ ಮಹತ್ವ ಹೆಚ್ಚಾಗಲಿದೆ. ಎಲೆಮರೆ ಕಾಯಿಯಂತಿರುವ ಕಲಾವಿದರನ್ನು ಹುಡುಕಿ ಬೆಳಕಿಗೆ ತರುವ ನಿಟ್ಟಿನಲ್ಲಿ ಪ್ರಯತ್ನಿಸಬೇಕೆಂದರು.  
ವೈ.ಕೆ ಹನುಮಂತಯ್ಯ, ಜಂಬುಸ್ವಾಮಿ, ಕೆ.ಎಸ್.ರವಿಕುಮಾರ್, ರಾಜ್‌ಕುಮಾರ್, ಕಾ.ರಾ.ನಾಗರಾಜ್, ನಾಗಪ್ಪ, ಚಂದ್ರಕಾಂತ್ ಸೇರಿದಂತೆ ವಿವಿಧ ಕಲಾ ತಂಡಗಳ ಹಿರಿಯ ಕಲಾವಿದರು, ತಂತ್ರಜ್ಞರು ಭಾಗವಹಿಸಿದ್ದರು.
  ಸುಚಿತ್ರ, ವಿಜಯಲಕ್ಷ್ಮಿ ಪ್ರಾರ್ಥನೆ ಮಾಡಿದರು. ಅಪರಂಜಿ ಶಿವರಾಜ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಜಿ.ಆರ್ ಲವ ಪ್ರ್ರಾಸ್ತಾವಿಕ ನುಡಿಗಳನ್ನಾಡಿದರು. ತಮಟೆ ಜಗದೀಶ್ ವಂದಿಸಿದರು.