Sunday, May 9, 2021

ಮಾದರಿ ನಗರವನ್ನಾಗಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಪೌರಾಯುಕ್ತರ ವರ್ಗಾವಣೆ ರದ್ದುಗೊಳಿಸಿ

ಮುಖ್ಯಮಂತ್ರಿಗಳಿಗೆ  ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್ ವತಿಯಿಂದ ಮನವಿ


ಭದ್ರಾವತಿ ನಗರವನ್ನು ರಾಜ್ಯದಲ್ಲಿಯೇ ಮಾದರಿವನ್ನಾಗಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಪೌರಾಯುಕ್ತರ ವರ್ಗಾವಣೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಭಾನುವಾರ ಮುಖ್ಯಮಂತ್ರಿಗಳಿಗೆ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಮೂಲಕ ಮನವಿ ಸಲ್ಲಿಸಲಾಯಿತು.
   ಭದ್ರಾವತಿ, ಮೇ. ೯: ಮುಂದಿನ ಎರಡು ವರ್ಷಗಳಲ್ಲಿ  ಭದ್ರಾವತಿ ನಗರವನ್ನು ರಾಜ್ಯದಲ್ಲಿಯೇ ಮಾದರಿ ನಗರವನ್ನಾಗಿಸುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿರುವ ನಗರಸಭೆ ಪೌರಾಯುಕ್ತ ಮನೋಹರ್ ಅವರ ವರ್ಗಾವಣೆಯನ್ನು ತಕ್ಷಣ ರದ್ದುಗೊಳಿಸಬೇಕೆಂದು ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್ ವತಿಯಿಂದ ಭಾನುವಾರ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ.
    ನಗರಸಭೆ ವ್ಯಾಪ್ತಿಯಲ್ಲಿ ಕಳೆದ ಸುಮಾರು ೨೫ ವರ್ಷಗಳಿಂದ ಅಭಿವೃದ್ಧಿ ಕಾಣದ ಕೆರೆಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಮನೋಹರ್ ಹೆಚ್ಚಿನ ಶ್ರಮ ವಹಿಸಿದ್ದಾರೆ. ತಾಲೂಕು ಆಡಳಿತದ ಸಹಕಾರದೊಂದಿಗೆ ಸುಮಾರು ೭೦ ಕೆರೆಗಳ ಬೌಂಡರಿ ನಿಗದಿಪಡಿಸಿ ಒತ್ತುವರಿ ತೆರವುಕಾರ್ಯಾಚರಣೆ ಕೈಗೊಳ್ಳುವ ಜೊತೆಗೆ ಸರ್ಕಾರದ ಯಾವುದೇ ಅನುದಾನವಿಲ್ಲದೆ ಸ್ಥಳೀಯ ರೈತರು, ದಾನಿಗಳ ಸಹಕಾರದೊಂದಿಗೆ ಕೆರೆಗಳ ಹೂಳು ತೆಗೆಯುವ ಕಾರ್ಯ ಯಶಸ್ವಿಯಾಗಿ ಕೈಗೊಳ್ಳುತ್ತಿದ್ದಾರೆ. ನಗರಸಭೆ ವ್ಯಾಪ್ತಿಯಲ್ಲಿ ಭವಿಷ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ೩ನೇ ಹಂತದ ಕುಡಿಯುವ ನೀರಿನ ಯೋಜನೆ ಹಾಗು ೩ನೇ ಹಂತದ ಒಳಚರಂಡಿ ಕಾಮಗಾರಿ ಪ್ರಾರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ.
   ರಾಜ್ಯದಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಾಗಿನಿಂದಲೂ ಜೀವದ ಹಂಗನ್ನು ತೊರೆದು ಹಗಲಿರುಳು ಶ್ರಮಿಸುತ್ತಿದ್ದಾರೆ. ಇದೀಗ ೨ನೇ ಅಲೆ ನಿರ್ಮೂಲನೆಗಾಗಿ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದಾರೆ. ಕೊಳಚೆ ಪ್ರದೇಶದ ನಿವಾಸಿಗಳ ಹಕ್ಕುಪತ್ರಗಳಿಗೆ ಖಾತೆ ಮಾಡಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ನಗರಸಭೆ ವ್ಯಾಪ್ತಿಯಲ್ಲಿರುವ  ವಸತಿ ರಹಿತರಿಗೆ ಜಿ+೩ ಮಾದರಿ ೪೦೦೦ ಮನೆಗಳನ್ನು ನಿರ್ಮಿಸಿಕೊಡಲು ಶಕ್ತಿಮೀರಿ ಶ್ರಮಿಸುತ್ತಿದ್ದಾರೆ. ಜನರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸುವ ಜೊತೆಗೆ ಜನಸ್ಪಂದಕ ಅಧಿಕಾರಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮುಂದಿನ ೨ ವರ್ಷಗಳಲ್ಲಿ ಭದ್ರಾವತಿ ನಗರವನ್ನು ರಾಜ್ಯದಲ್ಲಿಯೇ ಮಾದರಿ ನಗರವನ್ನಾಗಿಸುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಿದ್ದಾರೆ.
    ಪೌರಾಯುಕ್ತರನ್ನು ಏಕಾಏಕಿ ವರ್ಗಾವಣೆಗೊಳಿಸಿರುವುದು ನಗರದ ಜನತೆಯನ್ನು ದಿಗ್ಭ್ರಮೆಗೊಳಿಸಿದೆ. ವಿವಿಧ ಸಂಘ-ಸಂಸ್ಥೆಗಳು ಹಾಗು ಸ್ಥಳೀಯರ ಮನವಿ ಮೇರೆಗೆ ಮುಖ್ಯಮಂತ್ರಿಗಳು ಪೌರಾಯುಕ್ತರ ವರ್ಗಾವಣೆಯನ್ನು ರದ್ದುಗೊಳಿಸಬೇಕು. ಅಲ್ಲದೆ ಸಂಸದ ಬಿ.ವೈ. ರಾಘವೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ, ವಿಧಾನ ಪರಿಷತ್ ಸದಸ್ಯರಾದ ಎಸ್. ರುದ್ರೇಗೌಡ ಮತ್ತು ಆಯನೂರು ಮಂಜುನಾಥ್‌ರವರು ಸರ್ಕಾರಕ್ಕೆ ಒತ್ತಾಯಿಸುವಂತೆ ಕೋರಲಾಗಿದೆ.
   ಟ್ರಸ್ಟ್ ಛೇರ್‍ಮನ್ ಆರ್. ವೇಣುಗೋಪಾಲ್, ಮುಖಂಡರಾದ ವಿಶ್ವೇಶ್ವರರಾವ್ ಗಾಯಕ್‌ವಾಡ್, ಜಗದೀಶ್ ಪಟೇಲ್, ಗಿರಿ ನಾಯ್ಡು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಜನಪ್ರಿಯತೆ ಸಹಿಸದ ಕೆಲವರಿಂದ ಪೌರಾಯುಕ್ತರ ವರ್ಗಾವಣೆ ಹುನ್ನಾರ


ಭದ್ರಾವತಿಯಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಗತಿಪರ ಸಂಘಟನೆಗಳ ಮುಖಂಡರು ಮಾತನಾಡಿದರು.
     ಭದ್ರಾವತಿ, ಮೇ. ೯: ನಗರಸಭೆ ಇತಿಹಾಸದಲ್ಲಿಯೇ ಒಬ್ಬ ಅದ್ಭುತ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪೌರಾಯುಕ್ತ ಮನೋಹರ್ ಪಾತ್ರರಾಗಿದ್ದಾರೆ. ಇವರ ಜನಪ್ರಿಯತೆಯನ್ನು ಸಹಿಸದ ಕೆಲವರ ಹುನ್ನಾರದಿಂದಾಗಿ ಬೇರೆಡೆಗೆ ವಾರ್ಗಾವಣೆಗೊಂಡಿದ್ದಾರೆಂದು ಪ್ರಗತಿಪರ ಸಂಘಟನೆಗಳ ಮುಖಂಡರು ಆರೋಪಿಸಿದರು.
    ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಮುಖರು, ನಗರಸಭೆಯಲ್ಲಿ ಭ್ರಷ್ಟಾಚಾರ ಮುಕ್ತ, ಪ್ರಾಮಾಣಿಕ ಆಡಳಿತಕ್ಕೆ ಒತ್ತು ನೀಡಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಿಂಭಾಗದಲ್ಲಿ ಸುಮಾರು ರು. ೫ ಕೋ. ವೆಚ್ಚದಲ್ಲಿ ನಿರ್ಮಾಣ ಹಂತದಲ್ಲಿರುವ ಅಂಬೇಡ್ಕರ್ ಭವನ, ನೂತನ ಕನಕಮಂಟಪ, ನಗರಸಭೆ ವ್ಯಾಪ್ತಿಯಲ್ಲಿರುವ ಕೆರೆಗಳ ಅಭಿವೃದ್ಧಿ, ಗೃಹ ಭಾಗ್ಯ ಯೋಜನೆಯಡಿ ಸುಮಾರು ೭೬ ಪೌರಕಾರ್ಮಿಕರಿಗೆ ವಸತಿ, ಸರ್ಕಾರದ ವಿವಿಧ ಯೋಜನೆಯಡಿ ಬಡವರಿಗೆ ಮನೆ ನಿರ್ಮಾಣ, ಪ್ರಧಾನಮಂತ್ರಿ ಆವಾಸ್  ಯೋಜನೆಯಡಿ ಜಿ+ ೪ ಮಾದರಿ ೪ ಸಾವಿರ ಮನೆಗಳ ನಿರ್ಮಾಣಕ್ಕೆ ಚಾಲನೆ, ಕನಕಮಂಟಪ ಮೈದಾನದ ಪಕ್ಕದಲ್ಲಿ ನಗರಸಭೆ ಅಧಿಕಾರಿಗಳಿಗೆ ವಸತಿ ನಿರ್ಮಾಣ, ಬಿ.ಎಚ್ ರಸ್ತೆ ಅಂಡರ್ ಬ್ರಿಡ್ಜ್ ಬಳಿ ೧೨ ಅಡಿ ಎತ್ತರ ಸುಮಾರು ೫೦ ಲಕ್ಷ ರು. ವೆಚ್ಚದಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಗ್ರೇಡ್-೧ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪೌರಾಯುಕ್ತರನ್ನು ಇದೀಗ ಯಾವುದೇ ಸ್ಥಳ, ಹುದ್ದೆ ಸೂಚಿಸದೆ ಸರ್ಕಾರ ವರ್ಗಾವಣೆಗೊಳಿಸಿರುವುದು ಖಂಡನೀಯ ಎಂದರು.
    ಒಬ್ಬ ಅಧಿಕಾರಿ ಯಾವ ರೀತಿ ಕೆಲಸ ಮಾಡಬಹುದು ಎಂಬುದನ್ನು ಮನೋಹರ್ ಅವರು ತಮ್ಮ ಆಡಳಿತಾವಧಿಯಲ್ಲಿ ತೋರಿಸಿಕೊಟ್ಟಿದ್ದಾರೆ. ಅವರ ಸೇವೆ ನಗರದಲ್ಲಿ ಇನ್ನಷ್ಟು ಲಭಿಸುವಂತಾಗಬೇಕು. ಅದರಲ್ಲೂ  ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ವರ್ಗಾವಣೆಗೊಳಿಸಿರುವುದು ಸರಿಯಲ್ಲ. ಸೋಂಕಿನ ಪ್ರಮಾಣ ಕಡಿಮೆಯಾದ ನಂತರ ಅವರನ್ನು ವರ್ಗಾವಣೆಗೊಳಿಸಲಿ ಎಂದರು.
     ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಡಿ.ಸಿ ಮಾಯಣ್ಣ, ಪ್ರೊ. ಎಂ. ಚಂದ್ರಶೇಖರಯ್ಯ, ಶಿವಬಸಪ್ಪ, ಸಿದ್ದಲಿಂಗಯ್ಯ, ಜಿ. ರಾಜು, ರಾಜೇಂದ್ರ, ಡಿಎಸ್‌ಎಸ್ ಮುಖಂಡ ರವಿನಾಯ್ಕ, ಸುರೇಶಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Saturday, May 8, 2021

ಎಂಪಿಎಂ ಬಡಾವಣೆಯಲ್ಲಿ ಮೂಲ ಸೌಲಭ್ಯಗಳ ಕೊರತೆ

ರಸ್ತೆ ಮೇಲೆ ಚರಂಡಿ ನೀರು, ಸ್ವಚ್ಛತೆ ಇಲ್ಲ, ದುರ್ವಾಸನೆ, ನಾಯಿಗಳ ಹಾವಳಿ


   ಭದ್ರಾವತಿ, ಮೇ. ೮ : ಕಾಗದನಗರ ಆನೇಕೊಪ್ಪದಲ್ಲಿರುವ ಎಂಪಿಎಂ ಬಡಾವಣೆಯಲ್ಲಿ ಮೂಲ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದ್ದು, ಹಲವು ಬಾರಿ ನಗರಸಭೆ ಆಡಳಿತದ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
   ಬಡಾವಣೆಯಲ್ಲಿರುವ ಚರಂಡಿಗಳಲ್ಲಿ ಕಡ್ಡಿಕಸ ತುಂಬಿಕೊಂಡಿದ್ದು, ಸರಾಗವಾಗಿ ನೀರು ಹರಿಯುತ್ತಿಲ್ಲ. ಅಲ್ಲಲ್ಲಿ ಚರಂಡಿ ವ್ಯವಸ್ಥೆ ಕಿತ್ತು ಹೋಗಿದೆ. ಇದರಿಂದಾಗಿ ಚರಂಡಿ ನೀರು ಮುಂದೆ ಹರಿಯದೆ ನಿಂತುಕೊಳ್ಳುತ್ತಿದ್ದು, ದುರ್ವಾಸನೆ ಬೀರುತ್ತಿದೆ. ಬಡಾವಣೆಯ  ೪ ಕಡೆ ಮ್ಯಾನ್‌ಹೋಲ್‌ಗಳು ಒಡೆದು ಹೋಗಿದ್ದು, ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ.
   ಬಡಾವಣೆಯ ಖಾಲಿ ನಿವೇಶನಗಳಲ್ಲಿ ಗಿಡಗಂಟಿಗಳು ಬೆಳೆದು ನಿಂತಿದ್ದು, ಸ್ವಚ್ಛತೆ ಇಲ್ಲವಾಗಿದೆ. ಬಡಾವಣೆಯ ರಸ್ತೆ ಅಕ್ಕಪಕ್ಕಗಳಲ್ಲಿ ನೆಡಲಾಗಿರುವ ಸಸಿಗಳು ಸೂಕ್ತ ನಿರ್ವಹಣೆ ಇಲ್ಲದೆ ಒಣಗಿ ಹೋಗುತ್ತಿವೆ. ಬೋರ್‌ವೆಲ್‌ಗಳು ಹಾಳಾಗಿದ್ದು, ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ರಾತ್ರಿ ವೇಳೆ ನೆಮ್ಮದಿಯಾಗಿ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ.  ತಕ್ಷಣ ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಸ್ಥಳೀಯರಾದ ಮಾಸ್ತಿ ಗೌಡ್ರು, ಅಂಗಡಿ ತಮ್ಮಣ್ಣ, ವೈ.ಪಿ ಮಾಸ್ಟ್ರು, ಗಣೇಶ್ ರಾವ್, ಉಮಾ, ಸುಧಾಮಣಿ, ನರಸಮ್ಮ, ಬಸವರಾಜ್ ಸೇರಿದಂತೆ ಇನ್ನಿತರರು ಮನವಿ ಮಾಡಿದ್ದಾರೆ.




ಭದ್ರಾವತಿ ಕಾಗದನಗರ ಆನೇಕೊಪ್ಪದಲ್ಲಿರುವ ಎಂಪಿಎಂ ಬಡಾವಣೆಯಲ್ಲಿ ಮೂಲ ಸೌಲಭ್ಯಗಳ ಕೊರತೆ  ಎದ್ದು ಕಾಣುತ್ತಿರುವುದು.

ಭದ್ರಾವತಿ : ಒಟ್ಟು ೩೮ ಮಂದಿಗೆ ಕೊರೋನಾ ಸೋಂಕು


ಭದ್ರಾವತಿ ಜನ್ನಾಪುರದಲ್ಲಿರುವ ನಗರ ಆರೋಗ್ಯ ಕೇಂದ್ರದಲ್ಲಿ ಕೋವಿಡ್-೧೯ ಗಂಟಲು ಮಾದರಿ ಸಂಗ್ರಹಿಸುತ್ತಿರುವುದು.
    ಭದ್ರಾವತಿ, ಮೇ. ೮: ತಾಲೂಕಿನಲ್ಲಿ ಶನಿವಾರ ಒಟ್ಟು ೩೮ ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಇದುವರೆಗೂ ಒಟ್ಟು ೪೦ ಮಂದಿ ಮೃತಪಟ್ಟಿದ್ದಾರೆ.
    ಒಟ್ಟು ೧೮೦ ಮಂದಿಯ ಗಂಟಲು ಮಾದರಿ ಸಂಗ್ರಹಿಸಲಾಗಿದ್ದು, ೪೯ ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ತೆರಳಿದ್ದಾರೆ.  ಡಿಸಿಎಚ್‌ಸಿಯಲ್ಲಿ ೨೭, ಕೋವಿಡ್ ನಿಗಾ ಘಟಕದಲ್ಲಿ ೮, ಖಾಸಗಿ ಆಸ್ಪತ್ರೆಯಲ್ಲಿ ೮ ಹಾಗು ಮನೆಗಳಲ್ಲಿ ೨೫ ಮತ್ತು ಟ್ರಾನ್‌ಸಿಟ್ ಟು ಟ್ರೈಏಜ್ ನಲ್ಲಿ ೨೦ ಸೇರಿದಂತೆ ಒಟ್ಟು ೮೮ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
   ಒಟ್ಟು ೨೫ ಕಂಟೈನ್‌ಮೆಂಟ್ ಜೋನ್‌ಗಳಿದ್ದು, ೨ ಜೋನ್‌ಗಳನ್ನು ತೆರವುಗೊಳಿಸಲಾಗಿದೆ. ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ಆತಂಕ ಕಂಡು ಬರುತ್ತಿದ್ದು, ಈ ನಡುವೆ ಕಳೆದ ೩ ದಿನಗಳ ಹಿಂದೆ ಸೋಂಕಿತರ ಸಂಖ್ಯೆ ಒಂದೇ ದಿನ ೨೬೦ಕ್ಕೆ ತಲುಪಿದ್ದು, ಪುನಃ ಏರಿಕೆ ಮತ್ತು ಇಳಿಕೆ ಕಂಡು ಬರುತ್ತಿದೆ. ಈ ನಡುವೆ ಗಂಟಲು ಮಾದರಿ ನೀಡಲು ಬರುವವರ ಸಂಖ್ಯೆಯಲ್ಲೂ ಏರಿಕೆ ಕಂಡು ಬರುತ್ತಿದೆ.

ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನರು : ಪೌರಾಯುಕ್ತರಿಂದ ತೆರವು ಕಾರ್ಯಾಚರಣೆ


ಭದ್ರಾವತಿ  ಬಿ.ಎಚ್ ರಸ್ತೆಯಲ್ಲಿ ಶನಿವಾರ ಬೆಳಿಗ್ಗೆ ಅಂಗಡಿ ಮುಂಗಟ್ಟುಗಳ ಬಳಿ ಖರೀದಿಗೆ ಬಂದವರು ಕೋವಿಡ್ ನಿಯಮಗಳನ್ನು ಪಾಲಿಸದೆ ಜಮಾಯಿಸಿದ ಹಿನ್ನಲೆಯಲ್ಲಿ ಪೌರಾಯುಕ್ತ ಮನೋಹರ್ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದರು.
    ಭದ್ರಾವತಿ, ಮೇ. ೮: ಕೊರೋನಾ ಸೋಂಕು ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಸೋಮವಾರದಿಂದ ರಾಜ್ಯಾದ್ಯಂತ ಲಾಕ್‌ಡೌನ್ ಘೋಷಿರುವ ಪರಿಣಾಮ ಜನರು ಶನಿವಾರ ಬೆಳಿಗ್ಗೆಯೇ ಅಗತ್ಯ ವಸ್ತುಗಳ ಖರೀದಿಗೆ ಜಮಾಯಿಸಿದ್ದು ಕಂಡು ಬಂದಿತು.
     ಬೆಳಿಗ್ಗೆ ೬ ಗಂಟೆಯಿಂದಲೇ ಅಂಗಡಿ ಮುಂಗಟ್ಟುಗಳ ಬಳಿ ಜನರು ಸಾಲುಗಟ್ಟಿ ನಿಂತಿರುವುದು ಕಂಡು ಬಂದಿದ್ದು, ಕೆಲವೆಡೆ ಅಂಗಡಿ  ಮುಂಗಟ್ಟುಗಳ ಬಳಿ ಗುಂಪಾಗಿ ಜಮಾಯಿಸಿರುವುದು ಕಂಡು ಬಂದಿತು. ಬಹುತೇಕ ಕಡೆ ಬೆಳಿಗ್ಗೆ ೧೧.೩೦ರ ವರೆಗೂ ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ನಂತರ ಪೊಲೀಸರು ಎಲ್ಲೆಡೆ ಬಂದ್ ಮಾಡಿಸುವ ಮೂಲಕ ಖರೀದಿಗೆ ಬಂದವರನ್ನು ವಾಪಾಸು ಕಳುಹಿಸಿದರು.
    ಜನ್ನಾಪುರದ ಪ್ರಮುಖ ರಸ್ತೆಗಳಲ್ಲಿ, ಬಿ.ಎಚ್ ರಸ್ತೆ, ಸಿ.ಎನ್ ರಸ್ತೆ, ತರೀಕೆರೆ ರಸ್ತೆ, ಹೊಸಮನೆ ಮುಖ್ಯ ರಸ್ತೆ, ಬಸವೇಶ್ವರ ವೃತ್ತದಲ್ಲಿರುವ ಮಾರುಕಟ್ಟೆ, ರೈಲ್ವೆ ನಿಲ್ದಾಣದ ಬಳಿ ಇರುವ  ಮಾರುಕಟ್ಟೆ ಬಳಿ ಅಧಿಕ ಜನಸಂದಣಿ ಕಂಡು ಬಂದಿತು.
        ಪೌರಾಯುಕ್ತರಿಂದ ತೆರವು ಕಾರ್ಯಾಚರಣೆ  :
   ನಗರದ ಬಿ.ಎಚ್ ರಸ್ತೆಯ ಅಂಗಡಿ ಮುಂಗಟ್ಟುಗಳಲ್ಲಿ ಬೆಳಿಗ್ಗೆ ಜನಸಂದಣಿ ಅಧಿಕಗೊಂಡ ಹಿನ್ನಲೆಯಲ್ಲಿ ಖರೀದಿಗೆ ಬಂದವರು ಗುಂಪು ಸೇರದಂತೆ ಸ್ವತಃ ಪೌರಾಯುಕ್ತ ಮನೋಹರ್ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸುವ ಮೂಲಕ ಗುಂಪು ಸೇರದಂತೆ ತೆರವುಗೊಳಿಸಿದರು.
   ಅಲ್ಲದೆ ಅಂಗಡಿ ಮುಂಗಟ್ಟುಗಳ ಮಾಲೀಕರಿಗೆ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಎಚ್ಚರಿಕೆ ನೀಡಿದರು. ಮಾಸ್ಕ್ ಧರಿಸದವರಿಗೆ ಹಾಗು ಸಾಮಾಜಿಕ ಅಂತರ ಕಾಯ್ದುಕೊಳ್ಳದವರಿಗೆ ಕೊರೋನಾ ಸೋಂಕು ಕುರಿತು ಕುರಿತು ಜಾಗೃತಿ ಮೂಡಿಸಿದರು.



ದಲಿತ ಮುಖಂಡ, ಹೋರಾಟಗಾರ ವೆಂಕಟೇಶ್ ಭದ್ರಾವತಿ ಸೋಮಣ್ಣ ನಿಧನ

    
ವೆಂಕಟೇಶ್ ಭದ್ರಾವತಿ ಸೋಮಣ್ಣ  
    ಭದ್ರಾವತಿ, ಮೇ. ೮: ದಲಿತ ಸಂಘರ್ಷ ಸಮಿತಿ ಮುಖಂಡ, ಹೋರಾಟಗಾರ ವೆಂಕಟೇಶ್ ಭದ್ರಾವತಿ ಸೋಮಣ್ಣ(೪೯) ಶುಕ್ರವಾರ ನಿಧನ ಹೊಂದಿದರು.
   ಪತ್ನಿಯನ್ನು ಹೊಂದಿದ್ದರು. ಹಲವಾರು ವರ್ಷಗಳಿಂದ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ಶಿವಮೊಗ್ಗ ಲೋಕಸಭಾ ಕ್ಷೇತ್ರ ಹಾಗು ಭದ್ರಾವತಿ ವಿಧಾನಸಭಾ ಕ್ಷೇತ್ರ ಚುನಾವಣೆಗಳಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಮೃತರ ನಿಧನಕ್ಕೆ ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಗಣ್ಯರು ಸಂತಾಪ ಸೂಚಿಸಿದ್ದಾರೆ.

ನಗರಸಭೆ ಪೌರಾಯುಕ್ತ ಮನೋಹರ್ ಪುನಃ ವರ್ಗಾವಣೆ


ಭದ್ರಾವತಿ ನಗರಸಭೆ ಪೌರಾಯುಕ್ತ ಮನೋಹರ್
    ಭದ್ರಾವತಿ, ಮೇ. ೮: ಪ್ರಾಮಾಣಿಕ, ದಕ್ಷ ನಗರಸಭೆ ಪೌರಾಯುಕ್ತ ಮನೋಹರ್ ಅವರನ್ನು ಪುನಃ ವರ್ಗಾವಣೆಗೊಳಿಸಲಾಗಿದ್ದು, ಕೊರೋನಾ ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಏಕಾಏಕಿ ವರ್ಗಾವಣೆಗೊಳಿಸಿರುವುದಕ್ಕೆ ನಗರದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.
    ಮನೋಹರ್ ಅವರಿಗೆ  ಸರ್ಕಾರ ಮುಂಬಡ್ತಿ ನೀಡಿ ಸುಮಾರು ೬ ತಿಂಗಳ ಹಿಂದೆಯೇ ವರ್ಗಾವಣೆಗೊಳಿಸಿತ್ತು. ಈ ವರ್ಗಾವಣೆ ಆದೇಶದ ವಿರುದ್ಧ ವಿವಿಧ ಸಂಘ-ಸಂಸ್ಥೆಗಳು ಸೇರಿದಂತೆ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಸಂಸದ ಬಿ.ವೈ ರಾಘವೇಂದ್ರ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಅವರಿಗೆ ಮನವಿ ಸಲ್ಲಿಸಿ ಇಲ್ಲಿಯೇ ಮುಂದುವರೆಸುವಂತೆ ಒತ್ತಾಯಿಸಿದ್ದರು.
    ಸಂಸದರು ಹಾಗು ಜಿಲ್ಲಾ ಉಸ್ತುವಾರಿ ಸಚಿವರು ಮುಂದುವರೆಸುವಂತೆ ಸರ್ಕಾರಕ್ಕೆ ಕೋರಿದ ಹಿನ್ನಲೆಯಲ್ಲಿ ಪುನಃ ಮುಂದುವರೆಸಲಾಗಿತ್ತು. ಮುಂದಿನ ೧ ವರ್ಷದ ವರೆಗೆ ಪೌರಾಯುಕ್ತರು ವರ್ಗಾವಣೆಗೊಳ್ಳುವುದಿಲ್ಲ ಎಂಬ ನಂಬಿಕೆಯಲ್ಲಿದ್ದ ನಗರದ ಜನತೆಗೆ ಇದೀಗ ಏಕಾಏಕಿ ವರ್ಗಾವಣೆಗೊಳಿಸುವ ಮೂಲಕ ಶಾಕ್ ನೀಡಲಾಗಿದೆ.
    ಸುಮಾರು ೨ ವರ್ಷಗಳ ವರೆಗೆ ಜನಪ್ರತಿನಿಧಿಗಳ ಆಡಳಿತವಿಲ್ಲದಿದ್ದರೂ ಸಹ ನಗರದ ಜನತೆಗೆ ಯಾವುದೇ ಸಮಸ್ಯೆಗಳು ಎದುರಾಗದಂತೆ ಅದರಲ್ಲೂ ಜನಸ್ನೇಹಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಮನೋಹರ್ ಪಾತ್ರರಾಗಿದ್ದಾರೆ. ಕೊರೋನಾ ಅವಧಿಯಲ್ಲಿ ತಮ್ಮ ಪ್ರಾಣವನ್ನು ಸಹ ಲೆಕ್ಕಿಸದೆ ಹಗಲಿರುಳು ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ನಗರಸಭೆ ಚುನಾವಣೆ ಮುಗಿದ ತಕ್ಷಣ ಇವರನ್ನು ವರ್ಗಾವಣೆಗೊಳಿಸುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
      ಈ ಹಿಂದೆ ಸಹ ಸುಮಾರು ೧ ವರ್ಷದವರೆಗೆ ಬೇರೆಡೆಗೆ ವರ್ಗಾವಣೆಗೊಳಿಸಲಾಗಿತ್ತು. ಪುನಃ ಅವರನ್ನು ಇಲ್ಲಿಯೇ ಮುಂದುವರೆಸಲಾಗಿತ್ತು. ಇದೀಗ ವರ್ಗಾವಣೆಗೊಳಿಸಿ ಸರ್ಕಾರ ಆದೇಶಿಸಿದ್ದು,  ಯಾವುದೇ ಸ್ಥಳ ಸೂಚಿಸಲಾಗಿಲ್ಲ ಎನ್ನಲಾಗಿದೆ.