Monday, September 20, 2021

ಸಣ್ಣಪುಟ್ಟ ಸಮುದಾಯಗಳನ್ನು ಗುರುತಿಸಿದ ಧೀಮಂತ ನಾಯಕ

    ಮಾಜಿ ಶಾಸಕರಾದ ಅಪ್ಪಾಜಿ ಅವರೊಂದಿಗೆ ನನ್ನದು ಸುಮಾರು  ಇಪ್ಪತ್ತೈದು ವರ್ಷಗಳ ಒಡನಾಟ. ಅಪ್ಪಾಜಿ ಅವರಲ್ಲಿನ ಬಡವರ ಬಗೆಗಿನ ಕಾಳಜಿ, ಹೋರಾಟದ ಗುಣಗಳಿಂದ ಆಕರ್ಷಿತನಾಗಿ  ಅವರ  ಒಡನಾಟ ಬಯಸಿದೆ ಎಂದು ನೆನಪು ಮಾಡಿಕೊಳ್ಳುತ್ತಾರೆ ನಗರಸಭೆ ವಾರ್ಡ್ ನಂ.೧೯ರ ನಗರಸಭಾ ಸದಸ್ಯ ಬಸವರಾಜ ಬಿ ಆನೆಕೊಪ್ಪ.
    ಅಪ್ಪಾಜಿಯವರ ಮೊದಲನೇ ವರ್ಷದ ಪುಣ್ಯ ಸ್ಮರಣೆ ಸಂದರ್ಭದಲ್ಲಿ ಮನದಾಳದ ಮಾತುಗಳನ್ನು ಹಂಚಿಕೊಂಡಿರುವ ಬಸವರಾಜ್ ಬಿ ಆನೆಕೊಪ್ಪ ಅವರು, ನಾನು ಎಂದಿಗೂ ವೈಯಕ್ತಿಕವಾಗಿ ಅವರೊಂದಿಗೆ ಅಧಿಕಾರಕ್ಕಾಗಿ  ಇರಲಿಲ್ಲ.  ಅವರ ಅಭಿಮಾನಿಯಾಗಿ,  ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಅವರೊಂದಿಗಿದ್ದೆ. ಎಲ್ಲಾ ತಳ ಸಮುದಾಯದ ಬಡ ವರ್ಗದವರನ್ನು ಗುರುತಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತಂದ ಧೀಮಂತ ನಾಯಕ ಅಪ್ಪಾಜಿ ಅವರು ಎಂಬುದು ಹೆಮ್ಮೆಯ ವಿಚಾರವಾಗಿದೆ.  ನಾನು ವಾಲ್ಮೀಕಿ ನಾಯಕ ಸಮಾಜದ ತಾಲ್ಲೂಕು ಅಧ್ಯಕ್ಷನಾದ ನಂತರ   ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಸುಮಾರು ೨ ಕೋ. ರು. ಅನುದಾನ ಬಿಡುಗಡೆ ಮಾಡಿಸಿದ್ದರು. ಅಲ್ಲದೆ ಗ್ರಾಮಾಂತರ ಭಾಗದಲ್ಲಿ ಸಮಾಜದ ಸುಮಾರು ೫-೬ ಸಮುದಾಯ ಭವನಗಳ ನಿರ್ಮಾಣಕ್ಕೆ ಸುಮಾರು ಹನ್ನೆರಡು ಲಕ್ಷ ರು. ಮಂಜೂರಾತಿ ಮಾಡಿಸಿದ್ದರು. ಕೇವಲ ನನ್ನ ಸಮಾಜಕ್ಕೆ ಮಾತ್ರವಲ್ಲ ಇದೇ ರೀತಿ ಎಲ್ಲಾ  ಸಮಾಜಕ್ಕೂ ಅಪ್ಪಾಜಿಯವರು ನೆರವಾಗಿದ್ದರು.
    ಅವರಿಂದ ನಾನು ಎಂದಿಗೂ ವೈಯಕ್ತಿಕ ಲಾಭವನ್ನು ಬಯಸಲಿಲ್ಲ. ಕೊನೆ ಘಳಿಗೆಯಲ್ಲಿ ಅವರ ನಿಧನದ ನಂತರ  ಅವರ ಆಶೀರ್ವಾದದಿಂದ ನಾನೂ ಸಹ ನಗರಸಭಾ ಸದಸ್ಯನಾಗಿ ಆಯ್ಕೆಯಾಗುವ ಮೂಲಕ ಜನಸೇವೆ ಮಾಡಲು ಅವಕಾಶ ಲಭಿಸಿದೆ. ನನಗೆ ಲಭಿಸಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಅಪ್ಪಾಜಿಯವರ ಹೋರಾಟದ ಗುಣಗಳನ್ನು, ಆದರ್ಶಗಳನ್ನು ಮೈಗೂಡಿಸಿಕೊಂಡು ಪ್ರಾಮಾಣಿಕವಾಗಿ ಜನ ಸೇವೆಯಲ್ಲಿ ತೊಡಗುತ್ತೇನೆ ಎಂದರು.

ಜಿಂಕ್‌ಲೈನ್ ಜನರ ಪ್ರೀತಿಯ ನಾಯಕ ಎಂ.ಜೆ ಅಪ್ಪಾಜಿ

    ನಾನು ಹುಟ್ಟಿದ್ದು ಜಿಂಕ್‌ಲೈನ್‌ನಲ್ಲಿ, ಬಾಲ್ಯದಿಂದಲೂ ಪ್ರೀತಿಯ ಒಡನಾಟ ಹೊಂದಿರುವ ಹಾಗು ಈಗಲೂ ನನ್ನ ನೆಚ್ಚಿನ ನಾಯಕರಾಗಿ ಉಳಿದುಕೊಂಡಿರುವ  ಏಕೈಕ ನಾಯಕ ಎಂದರೆ ಮಾಜಿ ಶಾಸಕರಾದ ಎಂ.ಜೆ ಅಪ್ಪಾಜಿ ಅವರು ಮಾತ್ರ ಎಂದು ನೆನಪು ಮಾಡಿಕೊಳ್ಳುತ್ತಾರೆ ಜಿಂಕ್ ನಿವಾಸಿ, ದಿವಂಗತ ಮಂಜುನಾಥ್ ಹಾಗು ಹೇಮಾವತಿ ಅವರ ಪುತ್ರ ದಿಲೀಪ್.
    ಅಪ್ಪಾಜಿ ಅವರ ಮೊದಲ ಪುಣ್ಯಸ್ಮರಣೆ ಹಿನ್ನಲೆಯಲ್ಲಿ ದಿಲೀಪ್ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಅಪ್ಪಾಜಿ ಹಾಗು ನಮ್ಮ ಕುಟುಂಟಕ್ಕೆ ತುಂಬಾ ಹಳೇಯದಾದ ಆತ್ಮೀಯ ಒಡನಾಟವಿದ್ದು, ಅಪ್ಪಾಜಿ ಅವರಲ್ಲಿನ ಜಾತ್ಯಾತೀತ ಮನೋಭಾವ, ಬಡವರ ಬಗೆಗಿನ ಕಾಳಜಿ ಇಂದಿಗೂ ನಮ್ಮನ್ನು ಆಕರ್ಷಿಸುತ್ತಿದೆ. ಈ ಕಾರಣಕ್ಕಾಗಿ ಅವರೊಂದಿಗೆ ನಮ್ಮ ಕುಟುಂಬ ಗುರುತಿಸಿಕೊಂಡಿದೆ. ಇದೆ ರೀತಿ ಅಪ್ಪಾಜಿ ಅವರು ನಮ್ಮ ಕುಟುಂಬಕ್ಕೆ ಎಲ್ಲಾ ರೀತಿಯಿಂದಲೂ ನೆರವಾಗಿದ್ದರು.
    ಅಪ್ಪಾಜಿ ಹಾಗು ಜೆಡಿಎಸ್ ಪಕ್ಷ ಎರಡು ಒಂದೇ ನಾಣ್ಯದ ಮುಖಗಳಿದ್ದಂತೆ ಈ ಕಾರಣಕ್ಕಾಗಿ ನಾನು ಜೆಡಿಎಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಅಪ್ಪಾಜಿ ಅವರಿಂದ ಯಾವುದೇ ಫಲಾಪೇಕ್ಷೆ ಇಲ್ಲದೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ. ಇದರ ಫಲವಾಗಿ ಈ ಬಾರಿ ನಗರಸಭೆ ಚುನಾವಣೆಯಲ್ಲಿ ನನ್ನ ಪತ್ನಿ ಪಲ್ಲವಿ ಅವರಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡುವ ಮೂಲಕ ಅವರು ಹೆಚ್ಚಿನ ಮತಗಳಿಂದ ಗೆಲುವು ಸಾಧಿಸಿ ನಗರಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಅಪ್ಪಾಜಿ ಅವರನ್ನು ಎಂದಿಗೂ ನಾನು ಹಾಗು ನನ್ನ ಕುಟುಂಬ ಮರೆಯಲು ಸಾಧ್ಯವಿಲ್ಲ.

ಏನು ಇಲ್ಲದವರನ್ನು ಗುರುತಿಸಿ ಸಮಾಜದ ಮುಖ್ಯ ವಾಹಿನಿಗೆ ತಂದ ಧೀಮಂತ ನಾಯಕ

    ಮಾಜಿ ಶಾಸಕರಾದ ಎಂ.ಜೆ ಅಪ್ಪಾಜಿ ಅವರೊಂದಿಗೆ ನನ್ನದು ಸುಮಾರು ೨೦ ವರ್ಷಗಳ ಒಡನಾಟ. ಸಾಮಾನ್ಯ ಕಾರ್ಯಕರ್ತನಾಗಿದ್ದರೂ ಸಹ ನನ್ನನ್ನು ಗುರುತಿಸಿ ನೆಲೆ ಕಲ್ಪಿಸಿಕೊಟ್ಟರು. ಅಪ್ಪಾಜಿ ಅವರು ಇಂದಿಗೂ, ಮುಂದೆಯೂ ಅವರೇ ನನ್ನ ರಾಜಕೀಯ ಗುರುಗಳು ಎಂದು ಸಿದ್ದಾಪುರ ನಿವಾಸಿ, ನಗರಸಭೆ ಮಾಜಿ ಸದಸ್ಯ ಅನಿಲ್‌ಕುಮಾರ್ ನೆನಪಿಸಿಕೊಳ್ಳುತ್ತಾರೆ.
    ಅಪ್ಪಾಜಿ ಅವರ ಮೊದಲ ವರ್ಷದ ಪುಣ್ಯಸ್ಮರಣೆಯಂದು ಮನದಾಳದ ಮಾತುಗಳನ್ನು ಹಂಚಿಕೊಂಡಿರುವ ಅನಿಲ್‌ಕುಮಾರ್ ಅವರು, ಅಪ್ಪಾಜಿ ಅವರು ಹೊಂದಿದ್ದ ವಿಶಿಷ್ಟವಾದ ತಮದೇ ಆದ ಹೋರಾಟದ ಗುಣಗಳು, ಬಡವರು ಮತ್ತು ದೀನದಲಿತರ ಬಗೆಗಿನ ಕಾಳಜಿ, ಅಭಿವೃದ್ಧಿ ಪರವಾದ ಚಿಂತನೆಗಳಿಗೆ ಮಾರುಹೋಗಿ ನಾನು ಅವರೊಂದಿಗೆ ಯಾವುದೇ ಸ್ವಾರ್ಥವಿಲ್ಲದೆ ಗುರುತಿಸಿಕೊಂಡಿದ್ದೇನೆ. ಅಪ್ಪಾಜಿ ಅವರೇ ನನಗೆ ನಗರಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಡುವ ಮೂಲಕ ನಾನು ಸಹ ಜನರ ಸೇವೆಯಲ್ಲಿ ತೊಡಗಿಸಿಕೊಳ್ಳಲು ಕಾರಣಕರ್ತರಾಗಿದ್ದರು.
    ಅಲ್ಲದೆ ಅವರ ನಿಧನದ ನಂತರವೂ ನಾನು ರಾಜಕೀಯವಾಗಿ ಭವಿಷ್ಯದಲ್ಲಿ ಗುರುತಿಸಿಕೊಳ್ಳುವಂತೆ ನನ್ನ ಪತ್ನಿ ಆರ್. ನಾಗರತ್ನ ಅವರಿಗೂ ಈ ಬಾರಿ ಚುನಾವಣೆಯಲ್ಲಿ ಅಪ್ಪಾಜಿ ಕುಟುಂಬದವರು ಅವಕಾಶ ಮಾಡಿಕೊಡುವ ಮೂಲಕ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಲು ಕಾರಣಕರ್ತರಾಗಿದ್ದಾರೆ. ನಮಗೆ ಲಭಿಸಿರುವ ಅವಕಾಶ ಸದ್ಬಳಕೆ ಮಾಡಿಕೊಂಡು ಅಪ್ಪಾಜಿ ಅವರ ಆದರ್ಶತನಗಳನ್ನು ಮೈಗೂಡಿಸಿಕೊಂಡು ಜನರ ಸೇವೆಯಲ್ಲಿ ತೊಡಗುತ್ತೇವೆ ಎಂದರು.

ಎರಡು ದಶಕಗಳಿಗೂ ಹೆಚ್ಚಿನ ಕಾಲದ ನಂಟು, ಅಪ್ಪಾಜಿ ಎಂಬ ಬಡವರ ಧ್ವನಿ

    ಹೀಗೆ ಎರಡು ದಶಕಗಳ ಹಿಂದೆ ಹೋರಾಟ ಒಂದರ ಮೂಲಕ ಪರಿಚಿತರಾದ ಮಾಜಿ ಶಾಸಕರಾದ ಎಂ.ಜೆ ಅಪ್ಪಾಜಿ ಅವರು ಇಂದಿಗೂ ನನ್ನ ನೆಚ್ಚಿನ ನಾಯಕರಾಗಿ ಉಳಿದುಕೊಂಡಿದ್ದಾರೆ. ಕೇವಲ ನನಗೆ ಮಾತ್ರವಲ್ಲ ಇಡೀ ಕುಟುಂಬಕ್ಕೆ ಅಪ್ಪಾಜಿಯೇ ನಾಯಕರಾಗಿದ್ದಾರೆಂದು ಯುವ ಮುಖಂಡ ಅಶೋಕ್‌ಕುಮಾರ್ ನೆನಪು ಮಾಡಿಕೊಳ್ಳುತ್ತಾರೆ.
    ಅಪ್ಪಾಜಿಯವರ ಮೊದಲ ಪುಣ್ಯ ಸ್ಮರಣೆಯಂದು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿರುವ ಅಶೋಕ್‌ಕುಮಾರ್, ಅಪ್ಪಾಜಿ ಅವರು ಹೊಂದಿದ್ದ ನೇರ ನುಡಿಯ ಹೋರಾಟದ ಗುಣಗಳು, ನಿಗರ್ತಿಕರು, ದೀನದಲಿತರ ಪರವಾದ ಗುಣಗಳು ಅಪ್ಪಾಜಿ ಅವರನ್ನು ನಮ್ಮ ಕುಟುಂಬ ಇಷ್ಟಪಡಲು ಕಾರಣವಾಗಿದೆ. ಇದೀಗ ಅಪ್ಪಾಜಿ ಅವರು ನಮ್ಮೊಂದಿಗೆ ಇಲ್ಲದಿರಬಹುದು. ಆದರೂ ಈಗಲೂ ಅವರೇ ನಮ್ಮ ನಾಯಕರು.
    ನನ್ನ ತಾಯಿಯವರಾದ, ನಗರಸಭಾ ಸದಸ್ಯರಾದ ವಿಜಯರವರು ಸುಮಾರು ೩೦-೪೦ ವರ್ಷಗಳಿಂದ ಹೋರಾಟದ ಗುಣಗಳನ್ನು ಮೈಗೂಡಿಸಿಕೊಂಡು ಬಂದಿದ್ದಾರೆ. ತಮ್ಮದೇ ಆದ ರೀತಿಯಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ನಗರಸಭೆಯೊಂದಿಗೆ ತುಂಬಾ ಹಳೇಯ ಬಾಂಧವ್ಯವನ್ನು ಹೊಂದಿದ್ದಾರೆ. ಹೋರಾಟಕ್ಕೆ ನೆರವಾಗುವ ನಿಟ್ಟಿನಲ್ಲಿ ಅಪ್ಪಾಜಿ ಅವರೊಂದಿಗೆ ಗುರುತಿಸಿಕೊಂಡಿದ್ದರು. ಅಪ್ಪಾಜಿ ಅವರಂತೆ ನನ್ನ ತಾಯಿಯವರು ಸಹ ನೇರನುಡಿಯ ಮಾತುಗಾರಿಕೆ ಹೊಂದಿದ್ದರು. ಈ ನೇರನುಡಿ ಮಾತುಗಾರಿಕೆ ಗುಣವೇ ಅಪ್ಪಾಜಿ ಮತ್ತು ನನ್ನ ತಾಯಿ ಅವರ ನಡುವೆ ಇನ್ನೂ ಹೆಚ್ಚಿನ ನಂಟು ಬೆಳೆಯುವಂತೆ ಮಾಡಿತ್ತು.
    ಅಪ್ಪಾಜಿ ಅವರನ್ನು ನಾವು ನಮ್ಮ ಕುಟುಂಬದ ಸದಸ್ಯರು ಎಂದು ಭಾವಿಸಿದ್ದೆವು ಹೊರತು ಅವರನ್ನು ಎಂದಿಗೂ ಶಾಸಕರಂತೆ ಕಂಡಿರಲಿಲ್ಲ.  ಅವರ ಜೊತೆ ಮುನಿಸಿಕೊಳ್ಳುತ್ತಿದ್ದೆವು, ಜಗಳವಾಡುತ್ತಿದ್ದೆವು, ಆಮೇಲೆ ಒಂದಾಗುತ್ತಿದ್ದೆವು.  ಹಾಗೆ ಅವರು ಕೂಡ ಅವರ ಬಿಡುವಿನ ಸಮಯದಲ್ಲಿ ನಮ್ಮ ಜೊತೆ ಮಾತನಾಡುತ್ತಿದ್ದರು ಮತ್ತು ನಮ್ಮನ್ನು ಭೇಟಿಯಾಗುತ್ತಿದ್ದರು. ಅಲ್ಲದೆ ಕುಟುಂಬದ ಸದಸ್ಯರ ಹಾಗೆ ನಮ್ಮನ್ನು ಕಾಣುತ್ತಿದ್ದರು. ಈ ಹಿನ್ನಲೆಯಲ್ಲಿ ಅವರ ಮೇಲೆ ಅತಿ ಹೆಚ್ಚು ಪ್ರೀತಿ ಬರಲು ಕಾರಣವಾಗಿದೆ.
    ನನ್ನ ಸಹೋದರ ಸಹ ಅಪ್ಪಾಜಿ ಅವರ ಹೋರಾಟದ ಗುಣಗಳಿಂದ ಪ್ರಭಾವಿತನಾಗಿ ಅವರೊಂದಿಗೆ ಗುರುತಿಸಿಕೊಂಡಿದ್ದು, ಜೊತೆಗೆ ಜೆಡಿಎಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಜೆಡಿಎಸ್ ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಹ ಕಾರ್ಯ ನಿರ್ವಹಿಸುತ್ತಿದ್ದು, ಒಟ್ಟಾರೆ ಅಪ್ಪಾಜಿ ಅವರೊಂದಿಗಿನ ಸಂಬಂಧ ಹಾಗು ಜೆಡಿಎಸ್ ಪಕ್ಷದ ನಂಟು ನಮ್ಮ ಕುಟುಂಬಕ್ಕೆ ರಾಜಕೀಯ ಅಸ್ತಿತ್ವವನ್ನು ತಂದುಕೊಟ್ಟಿದೆ. ಅಪ್ಪಾಜಿ ಅವರ ಒಡನಾಟವನ್ನು ನಮ್ಮ ಕುಟುಂಬ ಎಂದಿಗೂ ದುರುಪಯೋಗಪಡಿಸಿಕೊಳ್ಳಲಿಲ್ಲ. ಜೊತೆಗೆ ವೈಯಕ್ತಿಕವಾಗಿ ಅವರಿಂದ ಏನನ್ನು ಸಹ ಬಯಸಲಿಲ್ಲ. ಅವರ ಮೇಲಿನ ಅಭಿಮಾನ ನಮ್ಮನ್ನು ಸಾಮಾನ್ಯ ಕಾರ್ಯಕರ್ತರಂತೆ ಅವರೊಂದಿಗೆ ಹಾಗು ಪಕ್ಷದೊಂದಿಗೆ ಇಂದಿಗೂ ಸೇವೆ ಸಲ್ಲಿಸುವಂತೆ ಮಾಡಿದೆ ಎಂದರು.

ಸೆ.೨೧ರಂದು ಉಚಿತ ಸಿದ್ದ ಕಣ್ಣಿನ ಹನಿ ಕಾರ್ಯಕ್ರಮ

    ಭದ್ರಾವತಿ, ಸೆ. ೨೦: ನಗರದ ತರೀಕೆರೆ ರಸ್ತೆಯ ಶ್ರೀ ಶಿವಸುಬ್ರಮಣ್ಯ ಸ್ವಾಮಿ ಆಶ್ರಮದಲ್ಲಿ ಸೆ.೨೧ರಂದು ಬೆಳಿಗ್ಗೆ ೯.೩೦ ರಿಂದ ಮಧ್ಯಾಹ್ನ ೧.೩೦ರ ವರೆಗೆ ತಮಿಳುನಾಡಿನ ವಂಶಪಾರಂಪರೆಯ ಸಿದ್ದ ವೈದ್ಯರಾದ ಕೆ. ಮುತ್ತುಕೃಷ್ಣನ್ ದಿಂಡಿಕಲ್ ಅವರಿಂದ ಉಚಿತ ಸಿದ್ದ ಕಣ್ಣಿನ ಹನಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ಕಣ್ಣಿಗೆ ಹನಿ ಹಾಕುವುದರಿಂದ ಕಣ್ಣಿನಲ್ಲಿ ನೀರು ಬರುತ್ತಿರುವುದು, ಕಣ್ಣು ಉರಿ, ಕಣ್ಣು ಕೆಂಪಾಗುವುದು, ಕಣ್ಣಿನಲ್ಲಿ ಪೊರೆ ಬರುವ ಹಂತದಲ್ಲಿರುವವರು ಹಾಗು ದೂರ ದೃಷ್ಠಿ  ಮತ್ತು ಸಮೀಪ ದೃಷ್ಠಿ ತೊಂದರೆ ಇರುವವರಿಗೆ ಹೆಚ್ಚಿನ ಅನುಕೂಲವಾಗಲಿದೆ. ಹೆಚ್ಚಿನ ಮಾಹಿತಿಗೆ ಮೊ: ೯೪೮೦೨೮೩೦೩೦ ಅಥವಾ ೯೪೪೮೨೫೫೫೪೪ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.

ಸೆ.೨೧ರಂದು ಎಂ.ಜೆ ಅಪ್ಪಾಜಿ ಮೊದಲ ವರ್ಷದ ಪುಣ್ಯಸ್ಮರಣೆ, ಶಕ್ತಿಧಾಮ, ಪ್ರತಿಮೆ ಆನಾವರಣ


ಭದ್ರಾವತಿ ತಾಲೂಕಿನ ಗೋಣಿಬೀಡಿನಲ್ಲಿ ಅಪ್ಪಾಜಿ ಅವರ ಅಂತ್ಯಕ್ರಿಯೆ ಸ್ಥಳದಲ್ಲಿ ನಿರ್ಮಿಸಲಾಗಿರುವ ಶಕ್ತಿಧಾಮದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಅಪ್ಪಾಜಿ ಅವರ ಪ್ರತಿಮೆ.
    ಭದ್ರಾವತಿ, ಸೆ. ೨೦: ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಅವರ ಮೊದಲ ವರ್ಷದ ಪುಣ್ಯಸ್ಮರಣೆ, ಶಕ್ತಿಧಾಮ ಹಾಗು ಪ್ರತಿಮೆ ಅನಾವರಣ ಸಮಾರಂಭ ಸೆ.೨೧ರಂದು ಬೆಳಿಗ್ಗೆ ೧೦ ಗಂಟೆಗೆ ತಾಲೂಕಿನ ಗೋಣಿಬೀಡಿನ ಶಾಲಾ ಆವರಣದಲ್ಲಿ ನಡೆಯಲಿದೆ.
    ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಸಮಾರಂಭದ ದಿವ್ಯ ಸಾನಿಧ್ಯ ವಹಿಸಲಿದ್ದು, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಶಕ್ತಿಧಾಮ ಹಾಗು ಪ್ರತಿಮೆ ಅನಾವರಣ ನೆರವೇರಿಸುವರು.
    ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಶಿವಮೊಗ್ಗ ಬಸವ ಕೇಂದ್ರದ  ಶ್ರೀ ಡಾ. ಬಸವ ಮರುಳಸಿದ್ದ ಸ್ವಾಮೀಜಿ, ಕನಕ ಗುರುಪೀಠ ಹೊಸದುರ್ಗ ಶಾಖೆಯ ಶ್ರೀ ಈಶ್ವರಾನಂದ ಸ್ವಾಮೀಜಿ, ಚಿತ್ರದುರ್ಗ ಛಲವಾದಿ ಜಗದ್ಗುರು ಪೀಠದ ಶ್ರೀ ಬಸವನಾಗಿದೇವ ಶರಣರು, ಚಿತ್ರದುರ್ಗ ಬಂಜಾರ ಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಹರಿಹರ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಮಹರ್ಷಿ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಹಿರಿಯೂರು ಕೋಡಿಹಳ್ಳಿ ಬೃಹನ್ಮಠ ಮಾದಾರ ಪೀಠದ ಶ್ರೀ ಆದಿಜಾಂಭವ ಮಾರ್ಕಾಂಡಮುನಿ ಸ್ವಾಮೀಜಿ, ಅರಕೆರೆ ವಿರಕ್ತಮಠದ ಶ್ರೀ ಕರಿಸಿದ್ದೇಶ್ವರ ಸ್ವಾಮೀಜಿ, ಶ್ರೀ ಕ್ಷೇತ್ರ ಭದ್ರಗಿರಿಯ ಶ್ರೀ ಮುರುಗೇಶ್ ಸ್ವಾಮೀಜಿ, ಸಿಎಸ್‌ಐ ವೇನ್ಸ್ ಮೆಮೋರಿಯಲ್ ಚರ್ಚ್‌ನ ಶಿವಮೊಗ್ಗ ವಲಯಾಧ್ಯಕ್ಷ ರೆವರೆಂಡ್ ಜಿ. ಸ್ಟ್ಯಾನ್ಲಿ ಮತ್ತು ಶಿವಮೊಗ್ಗ ದಾರುಲ್ ಇ-ಹಸನ್ ಮದರಸ ಪ್ರಿನ್ಸಿಪಾಲ್ ಶ್ರೀ ಮೌಲಾನ ಶಾಹುಲ್ ಹಮೀದ್ ಉಪಸ್ಥಿತರಿರುವರು.
    ಕಡೂರು ಮಾಜಿ ಶಾಸಕ ವೈಎಸ್‌ವಿ ದತ್ತ, ಅರಸೀಕೆರೆ ಶಾಸಕ ಶಿವಲಿಂಗೇಗೌಡ್ರು, ಜೆಡಿಎಸ್ ಮುಖಂಡ ಎಂ. ಶ್ರೀಕಾಂತ್, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಶಾರದಪೂರ್‍ಯ ನಾಯ್ಕ ಮತ್ತು ಜೆಡಿಎಸ್ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರಮುಖರು, ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಗಣ್ಯರು ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.
       ಅಪ್ಪಾಜಿ ಸೆ.೨ರಂದು ನಿಧನ:
    ಕಳೆದ ವರ್ಷ ಸೆ.೨ರಂದು ಮಧ್ಯ ರಾತ್ರಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಅವರು ಏಕಾಏಕಿ ನಿಧನ ಹೊಂದಿದ್ದರು. ಪ್ರಥಮ ವರ್ಷದ ಪುಣ್ಯಸ್ಮರಣೆ ಸೆ.೨ರಂದು ನಡೆಯಬೇಕಿತ್ತು. ಆದರೆ ಸಂಪ್ರದಾಯದ ಪ್ರಕಾರ ಅಂದು ದಿನ ಸರಿ ಇಲ್ಲದ ಕಾರಣ ಏ.೨೧ರಂದು ನಡೆಸಲಾಗುತ್ತಿದೆ. ಅಪ್ಪಾಜಿ ಅವರು ಕ್ಷೇತ್ರದಲ್ಲಿ ತಮ್ಮದೇ ಆದ ವರ್ಚಸ್ಸು, ಮತ ಬ್ಯಾಂಕ್ ಹಾಗು ಅಭಿಮಾನಿ ಬಳಗವನ್ನು ಹೊಂದಿದ್ದರು. ಪ್ರಥಮ ಪುಣ್ಯಸ್ಮರಣೆಯಲ್ಲಿ ಕ್ಷೇತ್ರದ ವಿವಿಧೆಡೆಗಳಿಂದ, ಅಕ್ಕಪಕ್ಕದ ಜಿಲ್ಲೆಗಳಿಂದ ಹಾಗು ರಾಜ್ಯದ ವಿವಿಧ ಮೂಲೆಗಳಿಂದ ಸಾವಿರಾರು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
      ತಾಲೂಕಿನಾದ್ಯಂತ ಪ್ಲೆಕ್ಸ್ ಅಳವಡಿಕೆ :
    ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ, ನಗರಸಭೆ ೩೫ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಪ್ರಮುಖ ರಸ್ತೆಗಳಲ್ಲಿ, ವೃತ್ತಗಳಲ್ಲಿ ಕಳೆದ ಕೆಲವು ದಿನಗಳಿಂದಲೇ ಪ್ರಥಮ ವರ್ಷದ  ಪುಣ್ಯಸ್ಮರಣೆ ಅಂಗವಾಗಿ ಫ್ಲೆಕ್ಸ್ ಅಳವಡಿಸಲಾಗಿದೆ.
ಅಪ್ಪಾಜಿ ಕುಟುಂಬ ವರ್ಗದವರು, ಸ್ಥಳೀಯ ಮುಖಂಡರು, ಅಪ್ಪಾಜಿ ಅಭಿಮಾನಿಗಳು, ಕಾರ್ಯಕರ್ತರು ಪುಣ್ಯಸ್ಮರಣೆಯನ್ನು ಅವಿಸ್ಮರಣೀಯವಾಗಿಸುವ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲಾ ರೀತಿಯ ಸಿದ್ದತೆಗಳನ್ನು ಕೈಗೊಂಡಿದ್ದಾರೆ. ಕೋವಿಡ್-೧೯ರ ನಡುವೆಯೂ ಪುಣ್ಯಸ್ಮರಣೆ ಗಮನ ಸೆಳೆಯುತ್ತಿದೆ.
       ಪ್ರತಿಮೆ ಪ್ರತಿಷ್ಠಾಪನೆ, ಶಕ್ತಿಧಾಮ ನಿರ್ಮಾಣ:
    ತಾಲೂಕಿನ ಗೋಣಿಬೀಡಿನ ಅಪ್ಪಾಜಿಯವರ ಅಂತ್ಯಕ್ರಿಯೆ ಸ್ಥಳವನ್ನು ಲಕ್ಷಾಂತರ ರು. ವೆಚ್ಚದಲ್ಲಿ ಶಕ್ತಿಧಾಮವನ್ನಾಗಿಸಿ ಅಭಿವೃದ್ಧಿಪಡಿಸಲಾಗಿದ್ದು, ಜೊತೆಗೆ ಅಪ್ಪಾಜಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಾಗುತ್ತಿದೆ. ಇದೊಂದು ಸ್ಪೂರ್ತಿದಾಯಕ ಸ್ಥಳವಾಗಿ ರೂಪಿಸಬೇಕೆಂಬ ಅಭಿಮಾನಿಗಳ, ಕಾರ್ಯಕರ್ತರ ಬಯಕೆಯನ್ನು ಕುಟುಂಬ ವರ್ಗ ಈಡೇರಿಸಿದೆ.


ಮಾಧ್ಯಮ ಆಕಾಡೆಮಿಯಿಂದ ವಾರ್ಷಿಕ ೪೦ ಲಕ್ಷ ರು. ಆರ್ಥಿಕ ನೆರವು : ಕೆ.ವಿ ಶಿವಕುಮಾರ್

ಭದ್ರಾವತಿಯಲ್ಲಿ ರಾಜ್ಯ ಮಾಧ್ಯಮ ಆಕಾಡೆಮಿ ಸದಸ್ಯ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ ಶಿವಕುಮಾರ್ ಅವರನ್ನು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
    ಭದ್ರಾವತಿ, ಸೆ. ೨೦: ರಾಜ್ಯ ಮಾಧ್ಯಮ ಆಕಾಡೆಮಿಗೆ ರಾಜ್ಯ ಸರ್ಕಾರ ೩ ಕೋ. ರು. ಅನುದಾನ ಮೀಸಲಿಟ್ಟಿದ್ದು, ಈ ಅನುದಾನದಲ್ಲಿ ದತ್ತಿ ಉಪನ್ಯಾಸ ಸೇರಿದಂತೆ ಇತರೆ ಕಾರ್ಯಕ್ರಮಗಳಿಗೆ ವರ್ಷಕ್ಕೆ ೪೦ ಲಕ್ಷ ರು. ಗಳನ್ನು ನೀಡಲು ಆಕಾಡೆಮಿ ತೀರ್ಮಾನಿಸಿದೆ ಎಂದು ರಾಜ್ಯ ಮಾಧ್ಯಮ ಆಕಾಡೆಮಿ ಸದಸ್ಯ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ ಶಿವಕುಮಾರ್ ತಿಳಿಸಿದರು.
    ಅವರು ರಾಜ್ಯ ಮಾಧ್ಯಮ ಆಕಾಡೆಮಿ ಸದಸ್ಯರಾಗಿ ನೇಮಕಗೊಂಡ ಹಿನ್ನಲೆಯಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ವಿಐಎಸ್‌ಎಲ್ ಅತಿಥಿಗೃಹದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
    ಮುಂದಿನ ದಿನಗಳಲ್ಲಿ ಈ ಅನುದಾನ ಬಳಸಿಕೊಂಡು ಸಂಘದ ಕ್ರಿಯಾಶೀಲ ಚಟುವಟಿಕೆಗಳನ್ನು ನಡೆಸಲು ಉದ್ದೇಶಿಸಲಾಗಿದ್ದು,  ಕಳೆದ ಎರಡು ವರ್ಷಗಳಿಂದ ಸಂಘದ ಚಟುವಟಿಕೆಗಳು ಕೆಲ ಕಾರಣಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ನಡೆಸಲು ಆಗದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು. ಮಾಧ್ಯಮ ಆಕಾಡೆಮಿ ಸದಸ್ಯರಾಗಿರುವುದು ಮತ್ತಷ್ಟು ಜವಾಬ್ದಾರಿಯನ್ನು ಹೆಚ್ಚಿಸಿದೆ. ಪತ್ರಕರ್ತರ ಹಿತ ಕಾಪಾಡುವುದು ನನ್ನ ಕರ್ತವ್ಯವಾಗಿದೆ. ಅಕ್ಟೋಬರ್ ತಿಂಗಳಿನಲ್ಲಿ ಶಿವಮೊಗ್ಗದಲ್ಲಿ ಬೃಹತ್ ದತ್ತಿ ಪ್ರಶಸ್ತಿ ವಿತರಣೆ ಸಮಾರಂಭ ಆಯೋಜಿಸಲಾಗಿದೆ ಎಂದರು.
    ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ಅಧ್ಯಕ್ಷತೆ ವಹಿಸಿದ್ದರು. ಪತ್ರಿಕಾಭವನ ಕಟ್ಟಡ ಸಮಿತಿ ಅಧ್ಯಕ್ಷರಾದ ಕಣ್ಣಪ್ಪ, ರಾಜ್ಯ ಸಂಘದ ಸದಸ್ಯ ಎನ್.ರವಿಕುಮಾರ್, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ವೈದ್ಯ, ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ್, ಕಾರ್ಯದರ್ಶಿ ಫಿಲೋಮಿನಾ, ಖಜಾಂಚಿ ಅನಂತ ಕುಮಾರ್, ಹಿರಿಯ ಪತ್ರಕರ್ತರಾದ ಎನ್.ಬಾಬು, ಬಿ.ಆರ್.ಬದರಿನಾಯಣ ಶೆಟ್ಟಿ, ಟಿ.ಎಸ್.ಆನಂದ ಕುಮಾರ್, ಹೆಚ್.ಕೆ. ಶಿವಶಂಕರ್, ಕೆ.ಎನ್.ರವೀದ್ರನಾಥ್, ಗಂಗಾನಾಯ್ಕ್, ಸುಭಾಷ್‌ರಾವ್ ಸಿಂದ್ಯಾ, ಸುದರ್ಶನ್, ಶೈಲೇಶ್‌ಕೋಠಿ, ಪ್ರಶಾಂತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.