![](https://blogger.googleusercontent.com/img/b/R29vZ2xl/AVvXsEj_oLAAOwQzOKq4mAwz_UB0dTLeMBjt4FaLHWBtx7Lg0tQ9IZ3eAlXbs_ysfmGe4FZE9e3MWFPu16igRK-QZjk5M0gMmSi38yut_4h6zSjklaWq43jPNq1JeSAQjO1Gz_p481QZe_UDtfyU/w248-h400-rw/D20-BDVT2-737242.jpg)
ಭದ್ರಾವತಿ ತಾಲೂಕಿನ ಗೋಣಿಬೀಡಿನಲ್ಲಿ ಅಪ್ಪಾಜಿ ಅವರ ಅಂತ್ಯಕ್ರಿಯೆ ಸ್ಥಳದಲ್ಲಿ ನಿರ್ಮಿಸಲಾಗಿರುವ ಶಕ್ತಿಧಾಮದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಅಪ್ಪಾಜಿ ಅವರ ಪ್ರತಿಮೆ.
ಭದ್ರಾವತಿ, ಸೆ. ೨೦: ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಅವರ ಮೊದಲ ವರ್ಷದ ಪುಣ್ಯಸ್ಮರಣೆ, ಶಕ್ತಿಧಾಮ ಹಾಗು ಪ್ರತಿಮೆ ಅನಾವರಣ ಸಮಾರಂಭ ಸೆ.೨೧ರಂದು ಬೆಳಿಗ್ಗೆ ೧೦ ಗಂಟೆಗೆ ತಾಲೂಕಿನ ಗೋಣಿಬೀಡಿನ ಶಾಲಾ ಆವರಣದಲ್ಲಿ ನಡೆಯಲಿದೆ.
ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಸಮಾರಂಭದ ದಿವ್ಯ ಸಾನಿಧ್ಯ ವಹಿಸಲಿದ್ದು, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಶಕ್ತಿಧಾಮ ಹಾಗು ಪ್ರತಿಮೆ ಅನಾವರಣ ನೆರವೇರಿಸುವರು.
ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಶಿವಮೊಗ್ಗ ಬಸವ ಕೇಂದ್ರದ ಶ್ರೀ ಡಾ. ಬಸವ ಮರುಳಸಿದ್ದ ಸ್ವಾಮೀಜಿ, ಕನಕ ಗುರುಪೀಠ ಹೊಸದುರ್ಗ ಶಾಖೆಯ ಶ್ರೀ ಈಶ್ವರಾನಂದ ಸ್ವಾಮೀಜಿ, ಚಿತ್ರದುರ್ಗ ಛಲವಾದಿ ಜಗದ್ಗುರು ಪೀಠದ ಶ್ರೀ ಬಸವನಾಗಿದೇವ ಶರಣರು, ಚಿತ್ರದುರ್ಗ ಬಂಜಾರ ಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಹರಿಹರ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಮಹರ್ಷಿ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಹಿರಿಯೂರು ಕೋಡಿಹಳ್ಳಿ ಬೃಹನ್ಮಠ ಮಾದಾರ ಪೀಠದ ಶ್ರೀ ಆದಿಜಾಂಭವ ಮಾರ್ಕಾಂಡಮುನಿ ಸ್ವಾಮೀಜಿ, ಅರಕೆರೆ ವಿರಕ್ತಮಠದ ಶ್ರೀ ಕರಿಸಿದ್ದೇಶ್ವರ ಸ್ವಾಮೀಜಿ, ಶ್ರೀ ಕ್ಷೇತ್ರ ಭದ್ರಗಿರಿಯ ಶ್ರೀ ಮುರುಗೇಶ್ ಸ್ವಾಮೀಜಿ, ಸಿಎಸ್‌ಐ ವೇನ್ಸ್ ಮೆಮೋರಿಯಲ್ ಚರ್ಚ್‌ನ ಶಿವಮೊಗ್ಗ ವಲಯಾಧ್ಯಕ್ಷ ರೆವರೆಂಡ್ ಜಿ. ಸ್ಟ್ಯಾನ್ಲಿ ಮತ್ತು ಶಿವಮೊಗ್ಗ ದಾರುಲ್ ಇ-ಹಸನ್ ಮದರಸ ಪ್ರಿನ್ಸಿಪಾಲ್ ಶ್ರೀ ಮೌಲಾನ ಶಾಹುಲ್ ಹಮೀದ್ ಉಪಸ್ಥಿತರಿರುವರು.
ಕಡೂರು ಮಾಜಿ ಶಾಸಕ ವೈಎಸ್‌ವಿ ದತ್ತ, ಅರಸೀಕೆರೆ ಶಾಸಕ ಶಿವಲಿಂಗೇಗೌಡ್ರು, ಜೆಡಿಎಸ್ ಮುಖಂಡ ಎಂ. ಶ್ರೀಕಾಂತ್, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಶಾರದಪೂರ್‍ಯ ನಾಯ್ಕ ಮತ್ತು ಜೆಡಿಎಸ್ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರಮುಖರು, ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಗಣ್ಯರು ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.
ಅಪ್ಪಾಜಿ ಸೆ.೨ರಂದು ನಿಧನ:
ಕಳೆದ ವರ್ಷ ಸೆ.೨ರಂದು ಮಧ್ಯ ರಾತ್ರಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಅವರು ಏಕಾಏಕಿ ನಿಧನ ಹೊಂದಿದ್ದರು. ಪ್ರಥಮ ವರ್ಷದ ಪುಣ್ಯಸ್ಮರಣೆ ಸೆ.೨ರಂದು ನಡೆಯಬೇಕಿತ್ತು. ಆದರೆ ಸಂಪ್ರದಾಯದ ಪ್ರಕಾರ ಅಂದು ದಿನ ಸರಿ ಇಲ್ಲದ ಕಾರಣ ಏ.೨೧ರಂದು ನಡೆಸಲಾಗುತ್ತಿದೆ. ಅಪ್ಪಾಜಿ ಅವರು ಕ್ಷೇತ್ರದಲ್ಲಿ ತಮ್ಮದೇ ಆದ ವರ್ಚಸ್ಸು, ಮತ ಬ್ಯಾಂಕ್ ಹಾಗು ಅಭಿಮಾನಿ ಬಳಗವನ್ನು ಹೊಂದಿದ್ದರು. ಪ್ರಥಮ ಪುಣ್ಯಸ್ಮರಣೆಯಲ್ಲಿ ಕ್ಷೇತ್ರದ ವಿವಿಧೆಡೆಗಳಿಂದ, ಅಕ್ಕಪಕ್ಕದ ಜಿಲ್ಲೆಗಳಿಂದ ಹಾಗು ರಾಜ್ಯದ ವಿವಿಧ ಮೂಲೆಗಳಿಂದ ಸಾವಿರಾರು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ತಾಲೂಕಿನಾದ್ಯಂತ ಪ್ಲೆಕ್ಸ್ ಅಳವಡಿಕೆ :
ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ, ನಗರಸಭೆ ೩೫ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಪ್ರಮುಖ ರಸ್ತೆಗಳಲ್ಲಿ, ವೃತ್ತಗಳಲ್ಲಿ ಕಳೆದ ಕೆಲವು ದಿನಗಳಿಂದಲೇ ಪ್ರಥಮ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಫ್ಲೆಕ್ಸ್ ಅಳವಡಿಸಲಾಗಿದೆ.
ಅಪ್ಪಾಜಿ ಕುಟುಂಬ ವರ್ಗದವರು, ಸ್ಥಳೀಯ ಮುಖಂಡರು, ಅಪ್ಪಾಜಿ ಅಭಿಮಾನಿಗಳು, ಕಾರ್ಯಕರ್ತರು ಪುಣ್ಯಸ್ಮರಣೆಯನ್ನು ಅವಿಸ್ಮರಣೀಯವಾಗಿಸುವ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲಾ ರೀತಿಯ ಸಿದ್ದತೆಗಳನ್ನು ಕೈಗೊಂಡಿದ್ದಾರೆ. ಕೋವಿಡ್-೧೯ರ ನಡುವೆಯೂ ಪುಣ್ಯಸ್ಮರಣೆ ಗಮನ ಸೆಳೆಯುತ್ತಿದೆ.
ಪ್ರತಿಮೆ ಪ್ರತಿಷ್ಠಾಪನೆ, ಶಕ್ತಿಧಾಮ ನಿರ್ಮಾಣ:
ತಾಲೂಕಿನ ಗೋಣಿಬೀಡಿನ ಅಪ್ಪಾಜಿಯವರ ಅಂತ್ಯಕ್ರಿಯೆ ಸ್ಥಳವನ್ನು ಲಕ್ಷಾಂತರ ರು. ವೆಚ್ಚದಲ್ಲಿ ಶಕ್ತಿಧಾಮವನ್ನಾಗಿಸಿ ಅಭಿವೃದ್ಧಿಪಡಿಸಲಾಗಿದ್ದು, ಜೊತೆಗೆ ಅಪ್ಪಾಜಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಾಗುತ್ತಿದೆ. ಇದೊಂದು ಸ್ಪೂರ್ತಿದಾಯಕ ಸ್ಥಳವಾಗಿ ರೂಪಿಸಬೇಕೆಂಬ ಅಭಿಮಾನಿಗಳ, ಕಾರ್ಯಕರ್ತರ ಬಯಕೆಯನ್ನು ಕುಟುಂಬ ವರ್ಗ ಈಡೇರಿಸಿದೆ.