Saturday, July 30, 2022

ಕುರುಬರ ಸಂಘದ ಅಧ್ಯಕ್ಷರಾಗಿ ಬಿ.ಎಂ ಸಂತೋಷ್ ೨ನೇ ಬಾರಿಗೆ ಪುನರ್ ಆಯ್ಕೆ

ಭದ್ರಾವತಿ ತಾಲೂಕು ಕುರುಬರ ಸಂಘದ ಅಧ್ಯಕ್ಷರಾಗಿ ಶನಿವಾರ ನಡೆದ ಚುನಾವಣೆಯಲ್ಲಿ ೨ನೇ ಬಾರಿಗೆ ಬಿ.ಎಂ ಸಂತೋಷ್ ಪುನರ್ ಆಯ್ಕೆಯಾಗಿದ್ದಾರೆ.
    ಭದ್ರಾವತಿ, ಜು. ೩೦: ತಾಲೂಕು ಕುರುಬರ ಸಂಘದ ಅಧ್ಯಕ್ಷರಾಗಿ ೨ನೇ ಬಾರಿಗೆ ಬಿ.ಎಂ ಸಂತೋಷ್ ಪುನರ್ ಆಯ್ಕೆಯಾಗಿದ್ದಾರೆ.
ಶನಿವಾರ ನಡೆದ ಚುನಾವಣೆಯಲ್ಲಿ ಬಿ.ಎಂ ಸಂತೋಷ್ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಸತೀಶ್ ಹೊಳೆಹೊನ್ನೂರು ಮತ್ತು ಬಿ.ಎಸ್ ಮಂಜುನಾಥ್, ಕಾರ್ಯದರ್ಶಿಯಾಗಿ ಬಿ.ಎ ರಾಜೇಶ್, ಸಹಕಾರ್ಯದರ್ಶಿಯಾಗಿ ಜೆ. ಕುಮಾರ್, ಖಜಾಂಚಿಯಾಗಿ ಬಿ.ಎಚ್ ವಸಂತ, ಲೆಕ್ಕಪರಿಶೋಧಕರಾಗಿ ಕೆ. ಕೇಶವ, ಕಾನೂನು ಸಲಹೆಗಾರರಾಗಿ ಎಲ್. ಪ್ರವೀಣ್ ಹಾಗು ನಿರ್ದೇಶಕರಾಗಿ ಸಣ್ಣಯ್ಯ, ನಾಗರಾಜ್, ಲೋಕೇಶ್, ವಿನೋದ್‌ಕುಮಾರ್, ಹೇಮಾವತಿ, ಬಿ.ಎಸ್ ನಾರಾಯಣಪ್ಪ ಮತ್ತು ಮಂಜುನಾಥ್(ಕೊಯ್ಲಿ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
    ತಾಲೂಕು ಕುರುಬರ ಸಂಘದ ಆಡಳಿತ ಮಂಡಳಿ ಒಟ್ಟು ೧೫ ನಿರ್ದೇಶಕ ಸ್ಥಾನಗಳನ್ನು ಒಳಗೊಂಡಿದ್ದು, ಚುನಾವಣಾಧಿಕಾರಿಯಾಗಿ ನವೀನ್ ಕರ್ತವ್ಯ ನಿರ್ವಹಿಸಿದರು.

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕುವೆಂಪು ಕೇಂದ್ರ ಕಛೇರಿ ಮುಂಭಾಗ ಅನಿರ್ಧಿಷ್ಟಾವಧಿ ಮುಷ್ಕರ

ಕುವೆಂಪು ವಿಶ್ವ ವಿದ್ಯಾಲಯ ಅಧ್ಯಾಪಕೇತರ ನೌಕರರ ಸಂಘದ ವತಿಯಿಂದ ಹಲವು ತಿಂಗಳುಗಳಿಂದ ಬಾಕಿ ಇರುವ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶನಿವಾರದಿಂದ ಭದ್ರಾವತಿ ತಾಲೂಕಿನ ಶಂಕರಘಟ್ಟದಲ್ಲಿರುವ ವಿಶ್ವ ವಿದ್ಯಾಲಯದ ಕೇಂದ್ರ ಕಛೇರಿ ಮುಂಭಾಗ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಾಯಿತು.
    ಭದ್ರಾವತಿ, ಜು. ೩೦: ಕುವೆಂಪು ವಿಶ್ವ ವಿದ್ಯಾಲಯ ಅಧ್ಯಾಪಕೇತರ ನೌಕರರ ಸಂಘದ ವತಿಯಿಂದ ಹಲವು ತಿಂಗಳುಗಳಿಂದ ಬಾಕಿ ಇರುವ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶನಿವಾರದಿಂದ ತಾಲೂಕಿನ ಶಂಕರಘಟ್ಟದಲ್ಲಿರುವ ವಿಶ್ವ ವಿದ್ಯಾಲಯದ ಕೇಂದ್ರ ಕಛೇರಿ ಮುಂಭಾಗ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಾಯಿತು.
    ಸರ್ವೋಚ್ಛ ನ್ಯಾಯಾಲಯದ ತೀರ್ಪು ಮತ್ತು ರಾಜ್ಯ ಸರ್ಕಾರದ ಆದೇಶದ ಮೇಲೆ ಜು.೯, ೨೦೨೦ರಂದು ಸಿಂಡಿಕೇಟ್ ಸಭೆ ನಡೆದಿದ್ದು, ಈ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಇದುವರೆಗೂ ಸಂಪೂರ್ಣವಾಗಿ ಅನುಷ್ಠಾನಗೊಳಿಸಿಲ್ಲ. ಬಡ್ತಿ ಹೊಂದಿರುವ ನೌಕರರಿಗೆ ವೇತನ ನಿಗದಿಕರಣ, ಉಪ ಕುಲಸಚಿವ ಹುದ್ದೆಗಳಿಗೆ ಮತ್ತು ಇತರೆ ಖಾಲಿ ಹುದ್ದೆಗಳಿಗೆ ಬಡ್ತಿ ಕೈಗೊಂಡಿರುವುದಿಲ್ಲ. ಅಲ್ಲದೆ ಉಳಿದ ವಿಲೀಕರಣ ನೌವಕರರಿಗೆ ಸೌಲಭ್ಯ ವಿಸ್ತರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದು ಆರೋಪಿಸಲಾಯಿತು.
    ತಕ್ಷಣ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರೆಯಲಿದೆ ಎಂದು ಎಚ್ಚರಿಸಲಾಯಿತು.
    ಸಂಘದ ಅಧ್ಯಕ್ಷ ಶ್ರೀನಿವಾಸ್ ಮುಷ್ಕರದ ನೇತೃತ್ವ ವಹಿಸಿದ್ದರು. ಸಂಘದ ಪದಾಧಿಕಾರಿಗಳು, ಅಧ್ಯಾಪಕೇತರ ನೌಕರರು ಪಾಲ್ಗೊಂಡಿದ್ದರು.

ಪತ್ರಕರ್ತರ ಮೇಲೆ ಹಲ್ಲೆ : ಮನವಿ

ಕರ್ನಾಟಕ ರಾಜ್ಯ ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಆರ್ ರಮೇಶ್‌ಕುಮಾರ್ ಅವರು ಮಾಧ್ಯಮದವರ ಮೇಲೆ ನಡೆಸಿರುವ ಹಲ್ಲೆಯನ್ನು ಖಂಡಿಸಿ ಭದ್ರಾವತಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಶನಿವಾರ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಅವರಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಜು. ೩೦ : ಕರ್ನಾಟಕ ರಾಜ್ಯ ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಆರ್ ರಮೇಶ್‌ಕುಮಾರ್ ಅವರು ಮಾಧ್ಯಮದವರ ಮೇಲೆ ನಡೆಸಿರುವ ಹಲ್ಲೆಯನ್ನು ಖಂಡಿಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಶನಿವಾರ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಅವರಿಗೆ ಮನವಿ ಸಲ್ಲಿಸಲಾಯಿತು.
    ತಹಸೀಲ್ದಾರ್ ಕಛೇರಿ ಮಿನಿವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿ ಕೆ.ಆರ್ ರಮೇಶ್‌ಕುಮಾರ್ ಅವರು ಕೋಲಾರದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಪತ್ರಕರ್ತರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯವಾಗಿದ್ದು, ತಕ್ಷಣ ಪತ್ರಕರ್ತರ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.
    ಸಂಘದ ಅಧ್ಯಕ್ಷ ಕೆ.ಆರ್ ಶ್ರೀಹರ್ಷ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಹಿರಿಯ ಪತ್ರಕರ್ತರಾದ ಕಟ್ಟಡ ಭವನ ಟ್ರಸ್ಟ್ ಅಧ್ಯಕ್ಷ ಕಣ್ಣಪ್ಪ, ಸಂಘದ ಮಾಜಿ ಅಧ್ಯಕ್ಷ ಎನ್. ಬಾಬು ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.

Friday, July 29, 2022

ಎಸ್. ಗೋವಿಂದರಾಜ ಶ್ರೇಷ್ಠಿ ನಿಧನ

ಎಸ್. ಗೋವಿಂದರಾಜ ಶ್ರೇಷ್ಠಿ
ಭದ್ರಾವತಿ, ಜು. ೨೯: ನಗರದ ಕೇಶವಪುರ ನಿವಾಸಿ, ಆರ್ಯವೈಶ್ಯ ಸಮಾಜದ ಪ್ರಮುಖರಾದ ಎಸ್. ಗೋವಿಂದರಾಜ ಶ್ರೇಷ್ಠಿ (೯೦) ಶುಕ್ರವಾರ ನಿಧನ ಹೊಂದಿದರು.
ಮೂರು ಪುತ್ರರು, ಇಬ್ಬರು ಪುತ್ರಿಯರನ್ನು ಹೊಂದಿದ್ದರು. ಇವರ ಅಂತ್ಯಕ್ರಿಯೆ ಜು.೩೦ರ ಶನಿವಾರ ಬೆಳಿಗ್ಗೆ ೧೧ ಘಂಟೆಗೆ  ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದು ರುದ್ರಭೂಮಿಯಲ್ಲಿ ನೆರವೇರಲಿದೆ.
ಆರ್ಯವೈಶ್ಯ ಸಮಾಜ ಸಂತಾಪ ವ್ಯಕ್ತಪಡಿಸುತ್ತದೆ.

ಪ್ರೌಢಶಾಲಾ ಶಿಕ್ಷಕರಿಗೆ ಸಮಾಜ ವಿಜ್ಞಾನ ವಿಷಯ ಕಾರ್ಯಾಗಾರ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಸಮಾಜ ವಿಜ್ಞಾನ ವಿಷಯ ವೇದಿಕೆ ಸಹಯೋಗದೊಂದಿಗೆ ಭದ್ರಾವತಿ ಹುತ್ತಾ ಕಾಲೋನಿ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಲಾಗಿದ್ದ ಸಮಾಜ ವಿಜ್ಞಾನ ವಿಷಯದ ಕಾರ್ಯಾಗಾರ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಉದ್ಘಾಟಿಸಿದರು.
    ಭದ್ರಾವತಿ, ಜು. ೨೯: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಸಮಾಜ ವಿಜ್ಞಾನ ಶಿಕ್ಷಕರ ವೇದಿಕೆ ಸಹಯೋಗದೊಂದಿಗೆ ನಗರದ ಹುತ್ತಾ ಕಾಲೋನಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸಮಾಜ ವಿಜ್ಞಾನ ವಿಷಯ ಕುರಿತ ಕಾರ್ಯಾಗಾರ ಏರ್ಪಡಿಸಲಾಗಿತ್ತು.
    ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಕಾರ್ಯಾಗಾರ ಉದ್ಘಾಟಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಗೀತಾಂಜಲಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ. ಬಸವರಾಜಪ್ಪ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಪಂಚಾಕ್ಷರಿ,  ಸಮಾಜ ವಿಜ್ಞಾನ ಶಿಕ್ಷಕರ ವೇದಿಕೆ ಅಧ್ಯಕ್ಷ ಸಿ.ಡಿ ಮಂಜುನಾಥ್, ಶಿಕ್ಷಣ ಸಂಯೋಜಕ ರವಿಕುಮಾರ್, ಸಂಪನ್ಮೂಲ ವ್ಯಕ್ತಿ ಪ್ರಭಾಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
         ಕಾರ್ಯಾಗಾರದಲ್ಲಿ ಕಲಿಕಾ ಚೇತರಿಕೆ ಕುರಿತು ಸಂಪನ್ಮೂಲ ವ್ಯಕ್ತಿಗಳಾದ ನವೀನ್ ಕುಮಾರ್, ಶ್ರೀಧರ್, ಮೌಲ್ಯಮಾಪನ ಕುರಿತು ಮಂಜಪ್ಪ, ೧೦ನೇ ತರಗತಿ ಸಮಾಜ ವಿಜ್ಞಾನ ಪಠ್ಯದಲ್ಲಿ ಹೊಸ ವಿಷಯಗಳ ಸೇರ್ಪಡೆ ಕುರಿತು ಸತೀಶ್, ಸಿ.ಡಿ ಮಂಜುನಾಥ್ ವಿಷಯ ಮಂಡಿಸಿದರು.
ತಾಲೂಕಿನ ಪ್ರೌಢಶಾಲಾ ಸಮಾಜ ವಿಜ್ಞಾನ ಶಿಕ್ಷಕರು, ಸಮಾಜ ವಿಜ್ಞಾನ ವೇದಿಕೆಯ ಸದಸ್ಯರು ಭಾಗವಹಿಸಿದ್ದರು. ಹೇಮಾ ಮಾಲಿನಿ  ಸ್ವಾಗತಿಸಿ,  ಸಹ ಶಿಕ್ಷಕ ತಿಮ್ಮಣ್ಣ ಗೌಡ ವಂದಿಸಿದರು. ನವೀನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Thursday, July 28, 2022

ವಿಕಲಚೇತನರಿಗೆ ದ್ವಿಚಕ್ರ ವಾಹನ ವಿತರಣೆ

 ಭದ್ರಾವತಿ, ಜು. 28: ವಿಕಲಚೇತನ ಐದು ಮಂದಿ ಫಲಾನುಭವಿಗಳಿಗೆ ದ್ವಿಚಕ್ರ  ವಾಹನಗಳನ್ನು ಶಾಸಕರ ಗೃಹ ಕಚೇರಿಯಲ್ಲಿ ವಿತರಿಸಲಾಯಿತು. 
       ವಾಹನಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಶಾಸಕ ಬಿ.ಕೆ ಸಂಗಮೇಶ್ವರ ಕರೆ ನೀಡಿದರು. ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್, ಸದಸ್ಯ ರಿಯಾಜ್ ಅಹ್ಮದ್, ವೈ. ನಟರಾಜ, ಮೋಹನ್, ಎಸ್.ಎನ್ ಶಿವಪ್ಪ, ಬಿ.ಎಂ ರವಿ ಕುಮಾರ್, ರತ್ನಪ್ಪ ನಾಯ್ಕ,  ಉಮೇಶ್, ರಾಮಣ್ಣ, ಮಂಜು, ಶೇಖರ್, ಅಯ್ಯಪ್ಪ, ಸೆಲ್ವಂ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಜನಸಂಖ್ಯೆ ನಿಯಂತ್ರಣ ಕುರಿತು ಜ್ಞಾನ ಹೊಂದಿ : ಡಾ. ಬಿ.ಜಿ ಧನಂಜಯ

ಭದ್ರಾವತಿ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಉದ್ಘಾಟಿಸಿದರು.
    ಭದ್ರಾವತಿ, ಜು. ೨೮: ಜನಸಂಖ್ಯೆ ನಿಯಂತ್ರಣದಲ್ಲಿ ದೇಶದ ಹಾಗು ಕುಟುಂಬದ ಬೆಳವಣಿಗೆ ಕುರಿತು ಜ್ಞಾನ ಹೊಂದಿರಬೇಕು ಎಂದು ಹೊಸಮನೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಹೇಳಿದರು.
    ಅವರು ಗುರುವಾರ ನಗರದ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಜನಸಂಖ್ಯೆ ಹೆಚ್ಚಳ ಎಲ್ಲಾ ಕ್ಷೇತ್ರಗಳು ಕುಂಠಿತಗೊಳ್ಳಲು ಕಾರಣವಾಗಲಿದ್ದು, ಅಭಿವೃದ್ಧಿ ಯೋಜನೆಗಳಿಗೆ ಹಿನ್ನಡೆಯಾಗಲಿದೆ. ದೇಶದ ಹಾಗು ಕುಟುಂಬದ ವಾಸ್ತಾವಿಕ ಸ್ಥಿತಿಗತಿಗಳನ್ನು ಅರಿಯುವ ಮೂಲಕ ಜನಸಂಖ್ಯೆ ನಿಯಂತ್ರಣದಲ್ಲಿ ನಮ್ಮ ಪಾತ್ರ ಅರ್ಥ ಮಾಡಿಕೊಳ್ಳಬೇಕು. ಭವಿಷ್ಯದಲ್ಲಿ ಪ್ರಪಂಚದಾದ್ಯಂತ ಜನಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಆತಂಕ ಕಂಡು ಬಂದ ಹಿನ್ನಲೆಯಲ್ಲಿ ಜನಸಂಖ್ಯೆ ನಿಯಂತ್ರಣ ಕುರಿತು ಜಾಗೃತಿ ಮೂಡಿಸುವ ಅನಿವಾರ್ಯತೆ ಎದುರಾಯಿತು. ಈ ಹಿನ್ನಲೆಯಲ್ಲಿ ಜನಸಂಖ್ಯಾ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.
    ಜನಸಂಖ್ಯೆ ನಿಯಂತ್ರಣದಲ್ಲಿ ಶಿಕ್ಷಣವಂತರ ಪಾತ್ರ ಅತಿ ಮುಖ್ಯವಾಗಿದ್ದು, ದೇಶ ಹಾಗು ಕುಟುಂಬದ ಕಾಳಜಿ ಹಿನ್ನಲೆಯಲ್ಲಿ  ಪ್ರತಿಯೊಬ್ಬರು ಸಹ ತಮ್ಮ ಸುತ್ತಮುತ್ತಲಿನ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಾಗ ಮಾತ್ರ ಜನಸಂಖ್ಯಾ ದಿನಾಚರಣೆ ಸಾರ್ಥಕಗೊಳ್ಳುತ್ತದೆ ಎಂದರು.
    ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಜನಸಂಖ್ಯಾ ನಿಯಂತ್ರಣದ ಅಗತ್ಯತೆ ಹಾಗು ಪ್ರಸ್ತುತ ಅಂಕಿ-ಅಂಶಗಳನ್ನು ವಿವರಿಸಿದರು.
    ನಗರಸಭೆ ಅಧ್ಯಕ್ಷೆ ಗೀತಾರಾಜ್‌ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಸದಸ್ಯೆ ಸರ್ವಮಂಗಳ ಭೈರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಸಹಾಯಕ ಪ್ರಾಧ್ಯಾಪಕ ಮಹಮದ್ ನಜೀಬ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಕಾಲೇಜಿನ ಪ್ರಾಂಶುಪಾಲ ಡಾ. ಧನಂಜಯ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಪ್ರಾಧ್ಯಾಪಕ ಡಾ. ವರದರಾಜ ಸ್ವಾಗತಿಸಿ, ಆರೋಗ್ಯ ಶಿಕ್ಷಣಾಧಿಕಾರಿ ಕೆ. ಸುಶೀಲಾ ಬಾಯಿ ನಿರೂಪಿಸಿ, ಸಹಾಯಕ ಪ್ರಾಧ್ಯಾಪಕ ಗುರುಪ್ರಸಾದ್ ವಂದಿಸಿದರು.
    ಇದಕ್ಕೂ ಮೊದಲು ಜನಸಂಖ್ಯಾ ನಿಯಂತ್ರ ಸಂಬಂಧ ಏರ್ಪಡಿಸಲಾಗಿದ್ದ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು. ಕೊರೋನಾ ಮುಂಜಾಗ್ರತೆ ಹಿನ್ನಲೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಬೂಸ್ಟರ್ ಡೋಸ್ ಚುಚ್ಚುಮದ್ದು ನೀಡಲಾಯಿತು.   ಕಾಲೇಜಿನ ವಿದ್ಯಾರ್ಥಿಗಳು, ಅಧ್ಯಾಪಕ, ಅಧ್ಯಾಪಕೇತರ ವರ್ಗದವರು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು.