ಸಂವಾದ ಕಾರ್ಯಕ್ರಮದಲ್ಲಿ ಬಹುಭಾಷಾ ಚಲನಚಿತ್ರ ನಟ ಪ್ರಕಾಶ್‌ರಾಜ್
ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಕಾರುಣ್ಯ ಚಾರಿಟಬಲ್‌ಟ್ರಸ್ಟ್‌ಸಹಯೋಗದೊಂದಿಗೆ ಭದ್ರಾವತಿ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ರಂಗಭೂಮಿ, ಸಿನಿಮಾ ಮತ್ತು ಸಮಾಜ ವಿಷಯ ಕುರಿತು ಹಮ್ಮಿಕೊಳ್ಳಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಬಹುಭಾಷಾ ಚಲನಚಿತ್ರ ನಟ ಪ್ರಕಾಶ್‌ರಾಜ್ ಪಾಲ್ಗೊಂಡಿದ್ದರು. ಇದಕ್ಕೂ ಮೊದಲು ಕಾಲೇಜಿನ ಆವರಣದಲ್ಲಿರುವ ಸರ್.ಎಂ.ವಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಭದ್ರಾವತಿ, ಆ. ೮: ಪ್ರತಿಯೊಬ್ಬರು ಒಗ್ಗಟ್ಟಿನಿಂದ ಬದುಕುವ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಕೈಜೋಡಿಸಬೇಕೆಂದು ಬಹುಭಾಷಾ ಚಲನಚಿತ್ರ ನಟ ಪ್ರಕಾಶ್‌ರಾಜ್ ಹೇಳಿದರು.
ಅವರು ಮಂಗಳವಾರ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಕಾರುಣ್ಯ ಚಾರಿಟಬಲ್‌ಟ್ರಸ್ಟ್‌ಸಹಯೋಗದೊಂದಿಗೆ ನ್ಯೂಟೌನ್‌ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ರಂಗಭೂಮಿ, ಸಿನಿಮಾ ಮತ್ತು ಸಮಾಜ ವಿಷಯ ಕುರಿತು ಹಮ್ಮಿಕೊಳ್ಳಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರತಿಯೊಬ್ಬರಲ್ಲೂ ವಿಶ್ವ ಮಾನವ ಭಾವನೆಗಳು ಬೆಳೆಯಬೇಕು. ಧರ್ಮ, ಜಾತಿ ಎಲ್ಲವನ್ನು ಮೀರಿದ ಮಾನವೀಯ ಸಮಾಜ ನಿರ್ಮಾಣವಾಗಬೇಕು. ನಮ್ಮ ದೇಹಕ್ಕೆ ಗಾಯವಾದರೆ ಅದು ನಮಗೆ ಮಾತ್ರ ಸೀಮಿತವಾಗಿ ಬಿಡುತ್ತದೆ. ಆದರೆ ಸಮಾಜಕ್ಕೆ ಗಾಯವಾದರೆ ಅದು ಎಲ್ಲರಿಗೂ ವ್ಯಾಪಿಸುತ್ತದೆ. ಈ ಹಿನ್ನಲೆಯಲ್ಲಿ ಸಮಾಜಕ್ಕೆ ಗಾಯವಾದಾಗ ನಾವೆಲ್ಲರೂ ಎಚ್ಚೆತ್ತುಕೊಂಡು ಜಾಗೃತರಾಗಬೇಕೆಂದರು.
ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಆಶಯಗಳನ್ನು ನಾವೆಲ್ಲರೂ ಅರಿತುಕೊಳ್ಳಬೇಕು. ಸಮಾಜದಲ್ಲಿ ಎಲ್ಲರೂ ಒಗ್ಗಟ್ಟಾಗಿ ಬದುಕುವ ಮನೋಭಾವ ಬೆಳೆಸಿಕೊಳ್ಳಬೇಕು. ಒಬ್ಬರಿಗಾಗಿ ಎಲ್ಲರೂ ಎಲ್ಲರಿಗೂ ಒಬ್ಬರು ಎಂಬ ಭಾವನೆ ಬೆಳೆದಾಗ ಮಾತ್ರ ಎಲ್ಲವೂ ಸಾಧ್ಯ ಎಂದರು.
ನಿವೃತ್ತ ಪ್ರಾಧ್ಯಾಪಕ ಪ್ರೊ. ಎಂ. ಚಂದ್ರಶೇಖರಯ್ಯ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಜನಶಕ್ತಿ ರಾಜ್ಯ ಕಾರ್ಯದರ್ಶಿ ಕೆ.ಎಲ್‌ಅಶೋಕ್, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಚಿನ್ನಯ್ಯ, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಮಾಜಿ ಸದಸ್ಯ ಬಾಲಕೃಷ್ಣ, ಕಾರುಣ್ಯ ಚಾರಿಟಬಲ್‌ಟ್ರಸ್ಟ್‌ಅಧ್ಯಕ್ಷ ಜಿ. ರಾಜು ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಶೈಲಜಾ ಹೊಸಳ್ಳೇರ ಹಾಗು ಅಧ್ಯಾಪಕ, ಅಧ್ಯಾಪಕೇತರ ಸಿಬ್ಬಂದಿಗಳು, ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಹಾಗು ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಂಡಿದ್ದರು.
ಪ್ರಗತಿಪರ ಸಂಘಟನೆಗಳ ಮುಖಂಡ ಸುರೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎಚ್.ಎಂ ಖಾದ್ರಿ ಸ್ವಾಗತಿಸಿದರು.
ಪೊಲೀಸ್ ಬಂದೋಬಸ್ತ್ :
ಪ್ರಕಾಶ್‌ರಾಜ್ ಆಗಮನಕ್ಕೆ ನಗರದಲ್ಲಿ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ವತಿಯಿಂದ ಹೆಚ್ಚಿನ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪಾಸ್ ಹೊಂದಿರುವವರಿಗೆ ಮಾತ್ರ ಕಾಲೇಜು ಪ್ರವೇಶಿಸಲು ಅವಕಾಶ ನೀಡಲಾಗಿತ್ತು. ಅಲ್ಲದೆ ಸೂಕ್ಷ್ಮ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು.