ಷೇರುದಾರರ ಸಭೆಯಲ್ಲಿ ಮಾಮ್ಕೋಸ್ ಉಪಾಧ್ಯಕ್ಷ ಮಹೇಶ್ ಎಚ್.ಎಸ್ ಹುಲ್ಕುಳಿ
ಮಲೆನಾಡು ಅಡಕೆ ಮಾರಾಟದ ಸಹಕಾರ ಸಂಘದ ಭದ್ರಾವತಿ ಶಾಖೆಯಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಷೇರುದಾರರ ಸಭೆಯಲ್ಲಿ ಸಹಕಾರ ಸಂಘದ ಉಪಾಧ್ಯಕ್ಷ, ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಮಹೇಶ್ ಎಚ್. ಎಸ್ ಹುಲ್ಕುಳಿ ಮಾತನಾಡಿದರು.
ಭದ್ರಾವತಿ, ಆ. ೧೯: ಅಡಕೆ ಬೆಳೆಗಾರರು ಭೂತಾನ್ ಅಡಕೆ ಕುರಿತು ಆತಂಕಪಡುವ ಅಗತ್ಯವಿಲ್ಲ. ನಮ್ಮ ಅಡಕೆ ಮಾರುಕಟ್ಟೆಯಲ್ಲಿ ಎಲ್ಲಾ ರೀತಿಯ ಪೈಪೋಟಿ ನೀಡಲು ಸಿದ್ದವಿದೆ ಎಂದು ಮಲೆನಾಡು ಅಡಕೆ ಮಾರಾಟದ ಸಹಕಾರ ಸಂಘದ ಉಪಾಧ್ಯಕ್ಷ, ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಮಹೇಶ್ ಎಚ್. ಎಸ್ ಹುಲ್ಕುಳಿ ಹೇಳಿದರು.
ಅವರು ಶನಿವಾರ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿರುವ ಸಂಘದ ಶಾಖೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಷೇರುದಾರರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ವಿದೇಶದಿಂದ ಆಮದು ಮಾಡಿಕೊಳ್ಳುವ ಅಡಕೆಯಿಂದ ಯಾವುದೇ ರೀತಿ ಆತಂಕ ಬೇಡ. ಈ ಸಂಬಂಧ ಅಡಕೆ ಬೆಳೆಗಾರರ ಹಿತಕಾಪಾಡುವಂತೆ ಸಂಘದ ವತಿಯಿಂದ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ಫೆ.೧೪ರಿಂದ ಆಮದು ದರ ಕೆ.ಜಿ ಒಂದಕ್ಕೆ ೨೫೧ ರಿಂದ ೩೫೧ಕ್ಕೆ ಹೆಚ್ಚಿಸಲಾಗಿದೆ. ಅಲ್ಲದೆ ನಮ್ಮ ಅಡಕೆಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ ಎಂದರು.
ಪ್ರಸ್ತುತ ಸಂಘದಲ್ಲಿ ೨೯,೮೬೨ ಸದಸ್ಯರಿದ್ದು, ಸದೃಢ ಆರ್ಥಿಕ ತಳಹದಿಯನ್ನು ಹೊಂದಿದೆ. ಮುಖ್ಯವಾಗಿ ಪ್ರಾರಂಭದಿಂದಲ್ಲೂ ಲಾಭದಲ್ಲಿಯೇ ಮುನ್ನಡೆಯುತ್ತಿದೆ. ಪ್ರಸ್ತುತ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ದಾವಣಗೆರೆ ಜಿಲ್ಲೆಗಳ ಒಟ್ಟು ೧೭ ತಾಲೂಕುಗಳ ಆಡಳಿತ ವ್ಯಾಪ್ತಿಯನ್ನು ಹೊಂದಿದೆ. ೧೨ ಶಾಖೆಗಳನ್ನು ಹಾಗು ೧೮ ಅಡಕೆ ಸಂಗ್ರಹಣ ಏಜೆನ್ಸಿಗಳನ್ನು ಹೊಂದಿರುತ್ತದೆ. ೨೦೨೨-೨೩ನೇ ಸಾಲಿನಲ್ಲಿ ರು.೪೪೧ ಲಕ್ಷ ನಿವ್ವಳ ಲಾಭ ಗಳಿಸಿದ್ದು, ಕಳೆದ ಸಾಲಿಗಿಂತ ರು.೪೯.೬೧ ಲಕ್ಷ ಹೆಚ್ಚು ಲಾಭ ಗಳಿಸಿದೆ. ಒಟ್ಟು ವ್ಯವಹಾರ ರು.೧೨೭೭.೭೧ ಕೋಟಿಗಳಾಗಿದ್ದು, ಕಳೆದ ಸಾಲಿಗಿಂತ ರು.೪೦೪.೩೭ ಕೋಟಿ ಹೆಚ್ಚಿಗೆ ವ್ಯವಹಾರ ನಡೆದಿದೆ ಎಂದರು.
ಸಂಘದ ಎಲ್ಲಾ ವ್ಯವಹಾರ ಸಂಪೂರ್ಣವಾಗಿ ಗಣಕೀಕರಣಗೊಳಿಸಲಾಗಿದೆ. ಅಡಕೆ ತಂತ್ರಜ್ಞಾನ ಮತ್ತು ಮಾರುಕಟ್ಟೆ ಮಾಹಿತಿ ಕೇಂದ್ರ ಸ್ಥಾಪಿಸಲಾಗಿದೆ. ಮ್ಯಾಮ್‌ಕೋಸ್ ಎಂಬ ಮೊಬೈಲ್ ಆಪ್ ಮತ್ತು ಅಂತರ್ಜಾಲ(ವೆಬ್‌ಸೈಟ್) ಹೊಂದಿದೆ. ಇದರ ಮೂಲಕ ಸದಸ್ಯರು ಸದಾಕಾಲ ಸಂಘದ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ ಎಂದರು.
ಸಂಘದ ಸದಸ್ಯರ ಹಿತಕಾಪಾಡುವ ನಿಟ್ಟಿನಲ್ಲಿ ಸದಸ್ಯರ ಬಹುದಿನಗಳ ಬೇಡಿಕೆಯಂತೆ ಅಡಕೆ ಆಧಾರ ಸಾಲ, ಕಟಾವು ಸಾಲ, ಕೊಳೆ ಔಷಧಿ ಸಾಲ, ನಿಗದಿತ ಠೇವಣಿ ಆಧಾರ ಸಾಲ, ವಿವಿಧ ಠೇವಣಿ ಯೋಜನೆಗಳು, ಸದಸ್ಯರ ಕ್ಷೇಮಾಭಿವೃದ್ಧಿ ನಿಧಿ, ಅಡಕೆ ಸಂಶೋಧನಾ ನಿಧಿ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ.
ಅಲ್ಲದೆ ಸದಸ್ಯರಿಗೆ ವೈದ್ಯಕೀಯ ಸೌಲಭ್ಯಗಳು, ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪಾರಿತೋಷಕ ಬಹುಮಾನ, ಗುಂಪು ವಿಮಾ ಯೋಜನೆ, ಆರೋಗ್ಯ ವಿಮೆ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು.
ನಿರ್ದೇಶಕರಾದ ಈಶ್ವರಪ್ಪ ಸಿ.ಬಿ ಚಂದವಳ್ಳಿ, ಕೃಷ್ಣಮೂರ್ತಿ ಕೆ.ವಿ ಕಿರುಗುಳಿಗೆ, ಕೆ. ರತ್ನಾಕರ, ತಿಮ್ಮಪ್ಪ ಎಸ್.ಎಂ ಶ್ರೀಧರಪುರ ಗ್ರಾಮ, ವೈ.ಎಸ್ ಸುಬ್ರಹ್ಮಣ್ಯ, ಎಚ್.ಟಿ ಸುಬ್ರಹ್ಮಣ್ಯ ವಡ್ಡಿನಬೈಲು, ಸುರೇಶಚಂದ್ರ .ಎ, ಅಂಬ್ಲೂರು, ಬಡಿಯಣ್ಣ ಎಚ್.ಎಂ ಹೊಲಗೋಡು ಮತ್ತು ವಿಜಯಲಕ್ಷ್ಮಿ ಸೇರಿದಂತೆ ಶಾಖೆ ವ್ಯವಸ್ಥಾಪಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಉಪಾಧ್ಯಕ್ಷ ಮಹೇಶ್ ಎಚ್. ಎಸ್ ಹುಲ್ಕುಳಿ ಮತ್ತು ನೂತನ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ ಬರುವೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಭೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಷೇರುದಾರರು ಪ್ರತಿವರ್ಷ ಷೇರುದಾರರ ಸಭೆ ನಡೆಸಬೇಕು. ಯಾವುದೇ ಕಾರಣಕ್ಕೂ ವ್ಯತ್ಯಾಸವಾಗದಂತೆ ನೋಡಿಕೊಳ್ಳಬೇಕೆಂದು ಮನವಿ ಮಾಡಿದರು.
ನಿರ್ದೇಶಕರಾದ ಜಿ.ಈ ವಿರುಪಾಕ್ಷಪ್ಪ ಸ್ವಾಗತಿಸಿ, ಕೆ.ಕೆ ಜಯಶ್ರೀ ಸಂಗಡಿಗರು ಪ್ರಾರ್ಥಿಸಿದರು. ಟಿ.ಆರ್ ಭೀಮರಾವ್ ನಿರೂಪಿಸಿ, ಆರ್. ದೇವಾನಂದ್ ವಂದಿಸಿದರು. ಇನ್ನಿತರರು ಉಪಸ್ಥಿತರಿದ್ದರು.