ಭದ್ರಾವತಿ, ಆ. ೧೮: ಅಡಕೆ ತೋಟದಲ್ಲಿ ಹಸಿ ಅಡಕೆ ಕದ್ದೊಯ್ಯುತ್ತಿದ್ದವರನ್ನು ಗ್ರಾಮಸ್ಥರು ಹಿಡಿದು ಮಾಲು ಸಮೇತ ಪೊಲೀಸರಿಗೆ ಒಪ್ಪಿಸಿರುವ ಘಟನೆ ತಾಲೂಕಿನ ಹೊಳೆಹೊನ್ನೂರಿನ ಹೊಸ ಜಂಬರಗಟ್ಟೆ ಗ್ರಾಮದಲ್ಲಿ ನಡೆದಿದೆ.
ಹೊಳೆಹೊನ್ನೂರು ಸಮೀಪದ ಕೊಪ್ಪ ಗ್ರಾಮದ ನಿವಾಸಿಗಳಾದ ಅಣ್ಣಪ್ಪ ಹಾಗೂ ಮಂಜು ಎಂಬುವರು ಬಂಧಿತ ಆರೋಪಿಗಳಾಗಿದ್ದು, ಇನ್ನೋರ್ವ ಬಾಬು ಎಂಬಾತ ತಪ್ಪಿಸಿಕೊಂಡಿದ್ದಾನೆ.
ಹೊಸ ಜಂಬರಗಟ್ಟೆ ಗ್ರಾಮದಲ್ಲಿ ಸೋಮವಾರ ರಾತ್ರಿ ನಂಜಪ್ಪ ಎಂಬುವರ ತೋಟಕ್ಕೆ ಮೂವರು ನುಗ್ಗಿದ್ದು, ತೋಟದಲ್ಲಿನ ಹಸಿ ಅಡಕೆ ಗೊನೆಯನ್ನು ಕಿತ್ತುಕೊಂಡು ಚೀಲದಲ್ಲಿ ತುಂಬಿಕೊಂಡು ಪರಾರಿಯಾಗುತ್ತಿದ್ದಾಗ ಗ್ರಾಮಸ್ಥರು ಬೆನ್ನು ಹತ್ತಿ ಇಬ್ಬರನ್ನು ಹಿಡಿದಿದ್ದಾರೆ. ನಂತರ ಕದ್ದ ಅಡಕೆ ಸಮೇತ ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕದ್ದ ಹಸಿ ಅಡಕೆಯನ್ನು ಕಡಿಮೆ ಬೆಲೆಗೆ ಖರೀದಿಸಿ ಅದನ್ನು ಸುಲಿದು, ಬೇಯಿಸಿ, ಒಣ ಅಡಕೆ ಮಾರಾಟ ಮಾಡಿ ಹಣ ಮಾಡಿಕೊಳ್ಳು ವ್ಯಕ್ತಿಗಳು ಇದ್ದಾರೆ. ಇಂತಹ ವ್ಯಕ್ತಿಗಳಿಂದ ರೈತರು ಕಷ್ಟಪಟ್ಟು ಬೆಳೆದ ಅಡಕೆ ಫಸಲನ್ನು ಸುಲಭವಾಗಿ ಕಳ್ಳತನ ಮಾಡುತ್ತಿರುವ ಪ್ರಕರಣ ಹೆಚ್ಚಾಗಿದೆ. ಆದ್ದರಿಂದ ಸಂಬಂಧಪಟ್ಟವರು ಅಡಕೆ ಕಳ್ಳರು ಹಾಗೂ ಕದ್ದ ಅಡಕೆ ಕೊಳ್ಳುವವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಬೆಳೆಗಾರರ ಹಿತ ಕಾಪಾಡಬೇಕೆಂದು ಜನರು ಆಗ್ರಹಿಸಿದ್ದಾರೆ.
No comments:
Post a Comment