Friday, August 18, 2023

ಮನುಷ್ಯರನ್ನು ಹೆಚ್ಚು ಮಾನವೀಯಗೊಳಿಸುವ ಶಕ್ತಿ ಸಾಹಿತ್ಯಕ್ಕಿದೆ : ಎನ್. ಕುಮಾರ್

ಭದ್ರಾವತಿ ಹೊಳೆಹೊನ್ನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದಿಂದ `ಕನ್ನಡ ಮಹಿಳಾ ಸಾಹಿತ್ಯ ಮತ್ತು ಜನಪದ ಮಹಾಕಾವ್ಯಗಳ ಸ್ತ್ರೀ ಓದು' ವಿಷಯ ಕುರಿತು ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮ ಪ್ರಾಂಶುಪಾಲ ಎನ್.ಆರ್ ಶಂಕರ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.  
    ಭದ್ರಾವತಿ:  ಸಾಹಿತ್ಯ ಮನುಷ್ಯರನ್ನು ಹೆಚ್ಚು ಮಾನವೀಯಗೊಳಿಸುತ್ತದೆ. ನಮ್ಮನ್ನು ಇನ್ನಷ್ಟು ಸೂಕ್ಷ್ಮಗೊಳಿಸುತ್ತದೆ ಎಂದು ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಎನ್. ಕುಮಾರ್ ಹೇಳಿದರು.
    ಅವರು ಹೊಳೆಹೊನ್ನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದಿಂದ ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು `ಕನ್ನಡ ಮಹಿಳಾ ಸಾಹಿತ್ಯ ಮತ್ತು ಜನಪದ ಮಹಾಕಾವ್ಯಗಳ ಸ್ತ್ರೀ ಓದು' ವಿಷಯ ಕುರಿತು ಮಾತನಾಡಿದರು.
    ಕನ್ನಡ ಸಾಹಿತ್ಯದ ಅನೇಕ ಘಟ್ಟಗಳಲ್ಲಿ ವಚನ ಸಾಹಿತ್ಯ ಹೊರತುಪಡಿಸಿ ಹೆಣ್ಣನ್ನು ವಸ್ತುವಾಗಿಯೇ ನೋಡುತ್ತಾ ಬರಲಾಗಿದೆ. ಇದಕ್ಕಿಂತ ಭಿನ್ನವಾಗಿ ಜನಪದ ಸಾಹಿತ್ಯ ಮಹಿಳೆಯ ದನಿಗೆ ಅವಕಾಶ ನೀಡಿದೆ. ಗೊಂಡ ರಾಮಾಯಣ, ಮಲೆಮಹದೇಶ್ವರ ಕಾವ್ಯಗಳಲ್ಲಿ ಇದಕ್ಕೆ ನಿದರ್ಶನಗಳನ್ನು ಕಾಣಬಹುದು. ಇಂದಿಗೂ ಹೆಣ್ಣನ್ನು ಭೋಗವಸ್ತುವಾಗಿಯೇ ನೋಡುತ್ತಿರುವ ಸಂದರ್ಭದಲ್ಲಿ ಈ ವಿಚಾರವನ್ನು ಅರಿತುಕೊಳ್ಳುವ ಅಗತ್ಯವಿದೆ ಎಂದರು.
  ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಪಿ. ಭಾರತಿ ದೇವಿ,  ಸಾಹಿತ್ಯ ಅರ್ಥೈಸಿಕೊಳ್ಳುವ ನಿಟ್ಟಿನಲ್ಲಿ ಅನೇಕ ದಾರಿಗಳಿವೆ. ಸ್ತ್ರೀ ಓದು ಹೆಣ್ಣಿನ ಕಣ್ಣೋಟದಲ್ಲಿ ಕೃತಿಯನ್ನು ನೋಡುತ್ತದೆ. ಕನ್ನಡ ಜನಪದ ಮಹಾಕಾವ್ಯಗಳ ಸ್ತ್ರೀಪಾತ್ರಗಳು ಅತ್ಯಂತ ಚೈತನ್ಯಮಯವಾಗಿ ಅನಾವರಣಗೊಳ್ಳುತ್ತವೆ ಎಂದರು.
ಪ್ರಾಂಶುಪಾಲ ಎನ್.ಆರ್ ಶಂಕರ್ ಅಧ್ಯಕ್ಷತೆ ವಹಿಸಿದ್ದರು.  ಪ್ರಮುಖರಾದ ಎಂ.ರಾಜಪ್ಪ, ಕಾಲೇಜಿನ ಪ್ರಾಧ್ಯಾಪಕರಾದ ಡಾ ನಾಗರಾಜ ನಾಯ್ಕ್ ಮತ್ತು ರವಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಯನೂರು ದೈಹಿಕ ನಿರ್ದೇಶಕ ಡಾ. ರೋಹನ್ ಡಿ ಕಾಸ್ಟ, ಕಾಲೇಜಿನ ಐಕ್ಯೂಎಸಿ ಸಂಚಾಲ ಡಾ.ಟಿ ಚಂದ್ರಶೇಖರ್ ಹಾಗೂ ಕಾಲೇಜಿನ ಗ್ರಂಥಪಾಲಕ ಡಾ. ಎಸ್. ರಾಜು ನಾಯ್ಕ  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಕನ್ನಡ ಐಚ್ಛಿಕ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿ ಸಿಮ್ರಾನ್ ಖಾನಂ ಅವರನ್ನು  ಸನ್ಮಾನಿಸಲಾಯಿತು. ಸಹಾಯಕ ಪ್ರಾಧ್ಯಾಪಕ ಎಚ್. ರುದ್ರಮುನಿ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ವಿಭಾಗದ ಉಪನ್ಯಾಸಕಿ ಸಿ.ಎಚ್  ಶ್ವೇತಾ  ವಂದಿಸಿದರು.

No comments:

Post a Comment