Wednesday, September 20, 2023

ಸೆ.21ರಂದು ಸಿದ್ದ ಕಣ್ಣಿನ ಹನಿ ಕಾರ್ಯಕ್ರಮ

 


    ಭದ್ರಾವತಿ : ನಗರದ ತರೀಕೆರೆ ರಸ್ತೆಯ ಶ್ರೀ ಶಿವಸುಬ್ರಹ್ಮಣ್ಯ ಸ್ವಾಮಿ ಆಶ್ರಮದ ವತಿಯಿಂದ ತಮಿಳುನಾಡು ದಿಂಡಿಕಲ್‌ನ ವಂಶಪಾರಂಪರೆ ಸಿದ್ದ ವೈದ್ಯರಾದ ಕೆ. ಮುತ್ತುಕೃಷ್ಣನ್ ಅವರಿಂದ ಜು.21ರಂದು ಉಚಿತ ಸಿದ್ದ ಕಣ್ಣಿನ ಹನಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

    ಕಾರ್ಯಕ್ರಮ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿದ್ದು, ಕಣ್ಣಿಗೆ ಹನಿ ಹಾಕುವುದರಿಂದ ಕಣ್ಣಿನಲ್ಲಿ ನೀರು ಬರುತ್ತಿರುವುದು, ಕಣ್ಣು ಉರಿ, ಕಣ್ಣು ಕೆಂಪಗಾಗುವುದು, ಕಣ್ಣಿನಲ್ಲಿ ಪೊರೆ ಬರುವ ಹಂತದಲ್ಲಿರುವವರು ಹಾಗು ದೂರ ದೃಷ್ಠಿ ಮತ್ತು ಸಮೀಪ ದೃಷ್ಠಿ ತೊಂದರೆ ಇರುವವರಿಗೆ ಹೆಚ್ಚಿನ ಅನುಕೂಲವಾಗಲಿದೆ. ಹೆಚ್ಚಿನ ಮಾಹಿತಿಗೆ ಮೊ: 9480283030 ಅಥವಾ 9448255544 ಸಂಖ್ಯೆಗೆ ಕರೆ ಮಾಡಬಹುದಾಗಿದೆ.



ಚಂದ್ರಯಾನ-3 ಸಾಧನೆಗೆ ಗಣೇಶನೂ ಮೆಚ್ಚುಗೆ

 


ಭದ್ರಾವತಿ ಉಂಬ್ಳೆಬೈಲು ರಸ್ತೆಸಂಜಯ್ ನಗರದ ಬಳಿ ಸಂಜಯ್ ಯುವಕರ ಸಂಘ ಈ ಬಾರಿ ಚಂದ್ರಯಾನ-3 ಸಾಧನೆ ಬಿಂಬಿಸುವ ವಿಶಿಷ್ಟವಾದ ಗಣೇಶ ಪ್ರತಿಷ್ಠಾಪನೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದೆ. 

    ಭದ್ರಾವತಿ: ಚಂದ್ರಯಾನ-3 ಸಾಧನೆ ಭಾರತ ದೇಶವನ್ನು ಇಡೀ ಜಗತ್ತು ತಿರುಗಿ ನೋಡುವತೆ ಮಾಡಿದೆ. ಇಂತಹ ಅದ್ಭುತ ಸಾಧನೆಯನ್ನು ಗಣೇಶ ಚತುರ್ಥಿಯಲ್ಲಿ ಯುವಕರ ತಂಡವೊಂದು ಸದ್ಬಳಕೆ ಮಾಡಿಕೊಂಡು ಗಮನ ಸೆಳೆಯುತ್ತಿದೆ.

     ನಗರದ ಉಂಬ್ಳೆಬೈಲು ರಸ್ತೆ, ಸಂಜಯ್ ನಗರದ ಬಳಿ ಸಂಜಯ್ ಯುವಕರ ಸಂಘ ಈ ಬಾರಿ ವಿಶಿಷ್ಟವಾದ ಗಣೇಶ ಪ್ರತಿಷ್ಠಾಪನೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದೆ. ಇಸ್ರೋ ವಿಜ್ಞಾನಿಗಳ ಚಂದ್ರಯಾನ-3 ಸಾಧನೆಯನ್ನು ತೆರೆದಿಡುವ ಮೂಲಕ ಪ್ರತಿಯೊಬ್ಬರಿಗೆ ಅದರ ಮಹತ್ವ ತಿಳಿಸಿಕೊಡುವಲ್ಲಿ ಯಶಸ್ವಿಯಾಗಿದೆ.

    ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಮೂಲಕ ರೋವರ್ ಇಳಿಯುತ್ತಿರುವುದು. ದೇಶದ ತ್ರಿವರ್ಣ ಧ್ವಜ ಹಿಡಿದು ಗಗನಯಾತ್ರಿ ವೇಷಧಾರಿಯಾಗಿ ಇದನ್ನು ವಿಘ್ನ ನಿವಾರಕ ಗಣೇಶ ಯಶಸ್ಸಿನ ಸಂಕೇತ ಪ್ರದರ್ಶಿಸುತ್ತಿರುವುದು. ಮತ್ತೊಂದೆಡೆ ಭವಿಷ್ಯದಲ್ಲಿ ಮಾನವ ಚಂದ್ರನ ಮೇಲೆ ನೆಲೆಸುವ ಕನಸು ನನಸಾಗಿಸುವ ಚಿತ್ರಣ ತೆರೆದಿಟ್ಟಿರುವುದು ಭಕ್ತರ ಗಮನ ಸೆಳೆಯುತ್ತಿದೆ.

    ಇಲ್ಲಿನ ಯುವಕರು ಪ್ರತಿವರ್ಷ ವಿಭಿನ್ನವಾದ, ಆಕರ್ಷಕವಾದ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ಗಮನ ಸೆಳೆಯುತ್ತಿದ್ದಾರೆ.



 

 

ವಸತಿರಹಿತರಿಗೆ ನಿವೇಶನ, ಭೂ ಮಂಜೂರಾತಿ, ಸ್ಮಶಾನಕ್ಕಾಗಿ ಪ್ರತಿಭಟನೆ

 ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಡಿಎಸ್ಎಸ್ ಮನವಿ


ಭದ್ರಾವತಿ ತಾಲೂಕಿನಲ್ಲಿ ನಿವೇಶನ ಮತ್ತು ವಸತಿ ರಹಿತರ ಬಗ್ಗೆ, ಭೂ ಮಂಜೂರಾತಿ ಬಗ್ಗೆ ಹಾಗು ಸ್ಮಶಾನ ಭೂಮಿ ಬಗ್ಗೆ ಸಾಕಷ್ಟು ಸಮಸ್ಯೆಗಳಿದ್ದು, ಈ ಎಲ್ಲಾ ಸಮಸ್ಯೆಗಳನ್ನು ಒಂದು ತಿಂಗಳೊಳಗಾಗಿ ಬಗೆಹರಿಸುವಂತೆ ಆಗ್ರಹಿಸಿ ಬುಧವಾರ ದಲಿತ ಸಂಘರ್ಷ ಸಮಿತಿ ವತಿಯಿಂದ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಗ್ರೇಡ್-2 ರಂಗಮ್ಮ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

    ಭದ್ರಾವತಿ: ತಾಲೂಕಿನಲ್ಲಿ ನಿವೇಶನ ಮತ್ತು ವಸತಿ ರಹಿತರ ಬಗ್ಗೆ, ಭೂ ಮಂಜೂರಾತಿ ಬಗ್ಗೆ ಹಾಗು ಸ್ಮಶಾನ ಭೂಮಿ ಬಗ್ಗೆ ಸಾಕಷ್ಟು ಸಮಸ್ಯೆಗಳಿದ್ದು, ಈ ಎಲ್ಲಾ ಸಮಸ್ಯೆಗಳನ್ನು ಒಂದು ತಿಂಗಳೊಳಗಾಗಿ ಬಗೆಹರಿಸುವಂತೆ ಆಗ್ರಹಿಸಿ ಬುಧವಾರ ದಲಿತ ಸಂಘರ್ಷ ಸಮಿತಿ(ಸಂಯೋಜಕ) ವತಿಯಿಂದ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಗ್ರೇಡ್-2 ರಂಗಮ್ಮ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

    ಪ್ರತಿಭಟನೆಯಲ್ಲಿ ಮಾತನಾಡಿ ಪ್ರಮುಖರು, ತಾಲೂಕು ಕಸಬಾ 2ನೇ ಹೋಬಳಿ ಎಚ್.ಕೆ ಜಂಕ್ಷನ್ ಬಿ.ಬಿ ಮೈನ್ಸ್ ಗ್ರಾಮದ ಸರ್ವೆ ನಂ.8ರಲ್ಲಿ 29 ಎಕರೆ ರೆವಿನ್ಯೂ ಜಾಗದಲ್ಲಿ ವಾಸಿಸುತ್ತಿರುವ ಸುಮಾರು 350 ಬಡ ಕುಟುಂಬಗಳಿಗೆ ಹಕ್ಕು ಪತ್ರ ನೀಡಬೇಕು. ತಕ್ಷಣ ಕುಡಿಯುವ ನೀರು, ಅಂಗನವಾಡಿ, ವಿದ್ಯುತ್, ರಸ್ತೆ ನಿರ್ಮಾಣ ಮಾಡುವುದು. ಹಿರಿಯೂರು ಗ್ರಾಮದಲ್ಲಿ ಸುಮಾರು 500 ಕುಟುಂಬಗಳು ನಿವೇಶನಕ್ಕಾಗಿ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದು, ಗೊಂದಿ ಕೈಮರದ ಹತ್ತಿರ ತಾರೀಕಟ್ಟೆ ಸರ್ವೆ ನಂ.41ರಲ್ಲಿ ಸರ್ಕಾರಿ ಭೂಮಿ ಲಭ್ಯವಿದ್ದು, ಇದನ್ನು ನಿವೇಶನಕ್ಕಾಗಿ ಕಾಯ್ದಿರಿಸಿ ಮಂಜೂರು ಮಾಡುವುದು. ಕಸಬಾ 1ನೇ ಹೋಬಳಿ ಶೆಟ್ಟಿಹಳ್ಳಿ ಅಂಚೆ, ಹಾತಿಕಟ್ಟೆ ಗ್ರಾಮದಲ್ಲಿ ಸುಮಾರು 300 ಕುಟುಂಬಗಳು ನಿವೇಶನ ರಹಿತರಾಗಿರುತ್ತಾರೆ. ಇವರಿಗೂ ಸೂಕ್ತ ಜಾಗ ಗುರುತಿಸಿ ನಿವೇಶನ ಕಲ್ಪಿಸಿಕೊಡುವಂತೆ ಒತ್ತಾಯಿಸಿದರು.

    ಕಾಳಿಂಗನಾಳ್ ಸರ್ವೆ ನಂ.1ರಲ್ಲಿ ಲಭ್ಯವಿರುವ 97 ಎಕರೆ ಸರ್ಕಾರಿ ಭೂಮಿಯಲ್ಲಿ ಹಾಲಿ ಸಾಗುವಳಿ ಮಾಡುತ್ತಿರುವವರಿಗೆ ತಕ್ಷಣ ಸಾಗುವಳಿ ನೀಡಬೇಕು. ಹಿರಿಯೂರು ಸರ್ವೆ ನಂ.37 ಮತ್ತು ಇತರೆಡೆ ಸಾಗುವಳಿ ನೀಡದೇ ಇರುವವರಿಗೆ ತಕ್ಷಣ ಸಾಗುವಳಿ ಮತ್ತು ಖಾತೆ ಮಾಡಿಕೊಡಬೇಕು. ಹೊನ್ನಟ್ಟಿ ಹೊಸೂರು ಸರ್ವೆ ನಂ.29ರ ಸರ್ಕಾರಿ ಭೂಮಿಯಲ್ಲಿ 30-40 ವರ್ಷಗಳಿಂದ ಸಾಗುವಳಿ ಮಾಡುತ್ತಿರುವವರಿಗೆ ತಕ್ಷಣ ಸಾಗುವಳಿ ನೀಡಬೇಕು. ಕೂಡ್ಲಿಗೆರೆ ಸರ್ವೆ ನಂ.66ರ ಸಾಗುವಳಿ ನೀಡಿರುವ ಕುಟುಂಬಗಳಿಗೆ ತಕ್ಷಣ ಖಾತೆ ಮಾಡಿಕೊಡಬೇಕೆಂದು ಆಗ್ರಹಿಸಿದರು.

    ಹಿರಿಯೂರು ಗ್ರಾಮದಲ್ಲಿ ಮಂಜೂರಾಗಿರುವ ಹಿಂದೂ ರುದ್ರಭೂಮಿಗೆ ತಕ್ಷಣ ಮೂಲಭೂತ ಸೌಲಭ್ಯ ಒದಗಿಸಬೇಕು. ಕೂಡ್ಲಿಗೆರೆ ಹೋಬಳಿ ಸಿದ್ದರಮಟ್ಟಿ ಗ್ರಾಮದ ಸರ್ವೆ ನಂ.34, 35ರಲ್ಲಿರುವ ಸರ್ಕಾರಿ ಭೂಮಿಯಲ್ಲಿ ಹಿಂದೂ ರುದ್ರಭೂಮಿ ಮಂಜೂರು ಮಾಡಿಕೊಡಬೇಕು. ಕಸಬಾ-1ನೇ ಹೋಬಳಿ ಶೆಟ್ಟಿಹಳ್ಳಿ ಅಂಚೆ, ಹಾತಿಕಟ್ಟೆ ಗ್ರಾಮಕ್ಕೆ ಹಿಂದೂ ರುದ್ರಭೂಮಿ ಮಂಜೂರು ಮಾಡುವುದು ಹಾಗು ಕಸಬಾ-2ನೇ ಹೋಬಳಿ ಎಚ್.ಕೆ ಜಂಕ್ಷನ್ ಸರ್ವೆ ನಂ. 42ರಲ್ಲಿ ಹಿಂದೂ ರುದ್ರಭೂಮಿ ಅವಶ್ಯಕತೆ ಇದ್ದು, 4 ಎಕರೆ ಜಮೀನು ಮಂಜೂರು ಮಾಡಬೇಕು. ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಲಾಯಿತು.

    ಪ್ರತಿಭಟನೆಯಲ್ಲಿ ಉದ್ಯಮಿ ಬಿ.ಕೆ ಜಗನ್ನಾಥ್, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ವಿರೂಪಾಕ್ಷಪ್ಪ, ಡಿಎಸ್ಎಸ್ ತಾಲೂಕು ಸಂಯೋಜಕ ಕೆ. ರಾಜು, ಸಂಘಟನಾ ಸಂಯೋಜಕರಾದ ಅಣ್ಣಾದೊರೆ, ಮೂರ್ತಿ, ರಂಗಸ್ವಾಮಿ ಸೇರಿದಂತೆ ಇನ್ನಿತರ ಮುಖಂಡರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

Tuesday, September 19, 2023

ವಿಐಎಸ್ಎಲ್ ಕಾರ್ಖಾನೆಗಾಗಿ ವಿನಾಯಕ ಮೂರ್ತಿ ಪ್ರತಿಷ್ಠಾಪನೆ

 

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಾಗಿ ಈ ಬಾರಿ ವಿನಾಯಕ ಸೇವಾ ಸಮಿತಿಯೊಂದು ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಗಮನ ಸೆಳೆದಿದೆ.

ಭದ್ರಾವತಿ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಾಗಿ ಈ ಬಾರಿ ವಿನಾಯಕ ಸೇವಾ ಸಮಿತಿಯೊಂದು ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಗಮನ ಸೆಳೆದಿದೆ.

ಸಾವಿರಾರು ಕುಟುಂಬಗಳಿಗೆ ಅನ್ನದಾತವಾಗಿರುವ ವಿಐಎಸ್ಎಲ್ ಕಾರ್ಖಾನೆ ಉಳಿವಿಗಾಗಿ ಕಳೆದ ಸುಮಾರು 9 ತಿಂಗಳಿನಿಂದ ಕಾರ್ಖಾನೆ ಮುಂಭಾಗ ಗುತ್ತಿಗೆ ಕಾರ್ಮಿಕರು ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ. ಈಗಾಗಲೇ ವಿಭಿನ್ನ ರೀತಿಯ ಹೋರಾಟಗಳು ಸಹ ನಡೆದಿವೆ. ಇದೀಗ ನ್ಯೂಕಾಲೋನಿ ಎಸ್ಎವಿ(ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ) ವೃತ್ತದಲ್ಲಿ ವಿಐಎಸ್ಎಲ್ ಕಾರ್ಖಾನೆ ಉಳಿವಿಗಾಗಿ ಗಮನ ಸೆಳೆಯಲು ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ.

ಪೆಂಡಾಲ್ ಒಳಭಾಗದಲ್ಲಿ ಕಾರ್ಖಾನೆಯ ವಿಹಂಗಮ ದೃಶ್ಯ, ಯಂತ್ರೋಪಕರಣಗಳು ಹಾಗು ಉತ್ಪಾದನೆ ಮತ್ತು ಕಚ್ಛಾ ವಸ್ತುಗಳ ಚಿತ್ರಣ ತೆರೆದಿಡಲಾಗಿದೆ. ನೋಡುಗರ ಗಮನ ಸೆಳೆಯುತ್ತಿದ್ದು, ಕಾರ್ಖಾನೆಯ ಇತಿಹಾಸದ ವೈಭವ ಮರುಕಳುಹಿಸಬೇಕೆಂಬ ಆಶಯ ಇದಾಗಿದೆ. ಪ್ರಸ್ತುತ ಎದುರಾಗಿರುವ ಸಂಕಷ್ಟಗಳನ್ನು ವಿಘ್ನ ನಿವಾರಕ ಪರಿಹರಿಸುವ ನಂಬಿಕೆ ಭಕ್ತರದ್ದಾಗಿದೆ.



ಸುರಗಿತೋಪಿನಲ್ಲಿ ಬಿಲ್ಲು-ಬಾಣದೊಂದಿಗೆ ಶಿಕಾರಿಗೆ ಮುಂದಾಗಿರುವ ಗಣೇಶ

 


ಭದ್ರಾವತಿ ನಗರಸಭೆ ವಾರ್ಡ್ ನಂ.20ರ ಸುರಗಿತೋಪಿನ 4ನೇ ತಿರುವಿನಲ್ಲಿ ಈ ಬಾರಿ ಸುರಗಿತೋಪಿನಲ್ಲಿ ಬಿಲ್ಲು-ಬಾಣದೊಂದಿಗೆ ಶಿಕಾರಿಗೆ ಮುಂದಾಗಿರುವ ಆಕರ್ಷಕವಾದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಭಕ್ತರ ಗಮನ ಸೆಳೆಯುತ್ತಿದೆ.

    ಭದ್ರಾವತಿ: ನಗರಸಭೆ ವಾರ್ಡ್ ನಂ.20ರ ಸುರಗಿತೋಪಿನ 4ನೇ ತಿರುವಿನಲ್ಲಿ ಈ ಬಾರಿ ಆಕರ್ಷಕವಾದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದೆ.

    ಶ್ರೀ ಅನ್ನಪೂರ್ಣೇಶ್ವರಿ ಯುವಕರ ಸೇವಾ ಸಮಿತಿ ವತಿಯಿಂದ ಬಿಲ್ಲು-ಬಾಣದೊಂದಿಗೆ ಶಿಕಾರಿಗೆ ಮುಂದಾಗಿರುವ ಬಾಲ ಗಣೇಶ ಮೂರ್ತಿ ಭಕ್ತರ ಗಮನ ಸೆಳೆಯುತ್ತಿದೆ. ಹಲವಾರು ವರ್ಷಗಳಿಂದ ಸಮಿತಿವತಿಯಿಂದ ವಿಭಿನ್ನ ರೀತಿಯ ಆಕರ್ಷಕವಾದ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿದ್ದು, ಅಲ್ಲದೆ ಹಲವಾರು ಧಾರ್ಮಿಕ ಆಚರಣೆಗಳನ್ನು ನೆರವೇರಿಸಿಕೊಂಡು ಬರಲಾಗುತ್ತಿದೆ.

ಚಂದ್ರಯಾನ-3 ಅದ್ಭುತ ಸಾಧನೆ, ವಿಕ್ರಮ್ ಲ್ಯಾಂಡರ್ ಪಾತ್ರ ಬಹುಮುಖ್ಯ : ಕೆ. ಅನಿಲ್ ಕುಮಾರ್

ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಶಾಖೆ ವತಿಯಿಂದ ಭದ್ರಾವತಿ ಹೊಸಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಚಂದ್ರಯಾನ-3 ಸಾಧನೆ ಮತ್ತು ಮಹತ್ವ ಕಾರ್ಯಕ್ರಮದಲ್ಲಿ ಬೆಂಗಳೂರು ಇಸ್ರೋ ಚಂದ್ರಯಾನ-3, ವಿಕ್ರಮ್ ಲ್ಯಾಂಡರ್ ಉಪ ಯೋಜನಾ ನಿರ್ದೇಶಕ ಕೆ. ಅನಿಲ್ ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

    ಭದ್ರಾವತಿ, ಸೆ. 19 : ಚಂದ್ರಯಾನ-3 ಅದ್ಭುತ ಸಾಧನೆಯಾಗಿದ್ದು, ಅದರಲ್ಲೂ ಈ ಯೋಜನೆಯಲ್ಲಿ ವಿಕ್ರಮ್ ಲ್ಯಾಂಡರ್ ಪಾತ್ರ ಬಹುಮುಖ್ಯವಾಗಿದೆ ಎಂದು ಬೆಂಗಳೂರು ಇಸ್ರೋ ಚಂದ್ರಯಾನ-3, ವಿಕ್ರಮ್ ಲ್ಯಾಂಡರ್ ಉಪ ಯೋಜನಾ ನಿರ್ದೇಶಕ ಕೆ. ಅನಿಲ್ ಕುಮಾರ್ ಹೇಳಿದರು.

    ಅವರು ಮಂಗಳವಾರ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಶಾಖೆ ವತಿಯಿಂದ ಹೊಸಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಚಂದ್ರಯಾನ-3 ಸಾಧನೆ ಮತ್ತು ಮಹತ್ವ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

    ಭೂಮಿಯಿಂದ ಯಾವುದೇ ಗ್ರಹದ ಕಕ್ಷೆಗೆ ಉಪಗ್ರಹ ಸೇರಿಸಲು ಹಾಗು ಕಾರ್ಯಾಚರಣೆ ಮಾಡಲು ಲ್ಯಾಂಡರ್ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಭೂಮಿಯ ಗುರುತ್ವಾಕರ್ಷಣ ಹಾಗು ಭೂಮಿಯಿಂದ ಇತರೆ ಗ್ರಹಗಳ ದೂರ ಮತ್ತು ಆ ಗ್ರಹ ಗಳ ವಿಸ್ತೀರ್ಣ ಹಾಗು ಗುಣ ಲಕ್ಷಣಗಳನ್ನು ಸರಿಯಾಗಿ ಅಭ್ಯಸಿಸಿ ಲ್ಯಾಂಡರ್ ಗಳನ್ನು ನಿರ್ಮಾಣ ಮಾಡಲಾಗುತ್ತದೆ. ಚಂದ್ರಯಾನ-3, ವಿಕ್ರಮ್ ಲ್ಯಾಂಡರ್ ಕಾರ್ಯ ವೈಖರಿ ಅದ್ಭುತವಾಗಿದೆ ಎಂದರು.

    ಶಿವಮೊಗ್ಗ ಖಗೋಳ ತಜ್ಞ ಡಾ. ಶೇಖರ್ ಗೌಳೇರ್ ಮಾತನಾಡಿ, ನಮ್ಮೆಲ್ಲರಿಗೂ ಭವಿಷ್ಯದಲ್ಲಿ ಚಂದ್ರನ ಅಗತ್ಯತೆ ಅನಿವಾರ್ಯವಾಗಬಹುದಾಗಿದೆ. ಈ ನಿಟ್ಟಿನಲ್ಲಿ ಚಂದ್ರಯಾನ-3 ಹೆಚ್ಚಿನ ಸಹಕಾರಿಯಾಗಲಿದೆ. ಬಾಹ್ಯಕಾಶ ಕ್ಷೇತ್ರದಲ್ಲಿ ದೇಶ ಉತ್ತಮ ಸಾಧನೆ ಮಾಡಿದ್ದು, ವಿಶ್ವದ ಗಮನ ಸೆಳೆದಿದೆ. ವಿಜ್ಞಾನ ಮತ್ತು ಧರ್ಮ ಎರಡೂ ಸಹ ಬೇರೆ ಬೇರೆಯಾಗಿದ್ದು, ಧರ್ಮದ ಆಚರಣೆ ಅವರವರ ವೈಯಕ್ತಿಕ ಹಿನ್ನಲೆಯನ್ನು ಅವಲಂಬಿಸಿದೆ. ಈ ಹಿನ್ನಲೆಯಲ್ಲಿ ಮಕ್ಕಳು ವಿಜ್ಞಾನ ಮತ್ತು ಧರ್ಮ ಎರಡನ್ನು ಹೊಂದಾಣಿಕೆ ಮಾಡಿ ನೋಡಬಾರದು ಎಂದರು.

    ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಮಾತನಾಡಿ, ಮಕ್ಕಳಿಗೆ ಪಠ್ಯೇತರ ವಿಷಯಗಳು ಕುರಿತು ಸಹ ಮಾಹಿತಿ ನೀಡಬೇಕೆಂಬ ಉದ್ದೇಶದಿಂದ ವೇದಿಕೆ ಈ ಕಾರ್ಯಕ್ರಮ ಆಯೋಜಿಸಿದೆ. ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.

    ಕಾರ್ಯಕ್ರಮ ಉದ್ಯಮಿ ಬಿ.ಕೆ ಜಗನ್ನಾಥ್ ಉದ್ಘಾಟಿಸಿದರು. ವೇದಿಕೆ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೋಡ್ಲು ಯಜ್ಞಯ್ಯ, ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಎಂ.ಆರ್ ರೇವಣಪ್ಪ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

    ವಿದ್ಯಾಸಂಸ್ಥೆ ಸಂಸ್ಥಾಪಕರು, ಕಾರ್ಯಾಧ್ಯಕ್ಷ ಬಿ.ಎಲ್ ರಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಉಮಾಪತಿ ಸ್ವಾಗತಿಸಿದರು. ಹಿರಿಯ ಸಾಹಿತಿ ಕಾಂತಪ್ಪ ಮತ್ತು ಶಿಕ್ಷಕ ಎ. ತಿಪ್ಪೇಸ್ವಾಮಿ ನಿರೂಪಿಸಿದರು.

    ವಿದ್ಯಾಸಂಸ್ಥೆ ದೈಹಿಕ ಶಿಕ್ಷಣ ನಿರ್ದೇಶಕ ಶಿವಲಿಂಗೇಗೌಡ ಹಾಗು ವೇದಿಕೆ ಪ್ರಮುಖರು, ಶಿಕ್ಷಕರು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಭದ್ರಾ ಜಲಾಶಯದಲ್ಲಿ ರಾತ್ರಿಯೊಳಗೆ ನೀರು ನಿಲ್ಲಿಸದಿದ್ದಲ್ಲಿ ಪುನಃ ಹೋರಾಟ

 

ರೈತರಿಂದ ಎಕ್ಸಿಕ್ಯುಟಿವ್ಇಂಜಿನಿಯರ್ಗೆ ಎಚ್ಚರಿಕೆ

ಭದ್ರಾ ಜಲಾಶಯದಿಂದ ನಾಲೆಗಳಿಗೆ ಹರಿಸುತ್ತಿರುವ ನೀರು ತಕ್ಷಣ ನಿಲ್ಲಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲೂಕು ಶಾಖೆ ವತಿಯಿಂದ ಮಂಗಳವಾರ ಭದ್ರಾವತಿ ಮಿಲ್ಟ್ರಿಕ್ಯಾಂಪ್ ನೀರಾವರಿ ಇಲಾಖೆ ಎಕ್ಸಿಕ್ಯುಟಿವ್ ಇಂಜಿನಿಯರ್ ಕಛೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

    ಭದ್ರಾವತಿ: ಭದ್ರಾ ಜಲಾಶಯದಿಂದ ನಾಲೆಗಳಿಗೆ ಹರಿಸುತ್ತಿರುವ ನೀರು ತಕ್ಷಣ ನಿಲ್ಲಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲೂಕು ಶಾಖೆ ವತಿಯಿಂದ ಮಂಗಳವಾರ ನಗರದ ಮಿಲ್ಟ್ರಿಕ್ಯಾಂಪ್ ನೀರಾವರಿ ಇಲಾಖೆ ಎಕ್ಸಿಕ್ಯುಟಿವ್ ಇಂಜಿನಿಯರ್ ಕಛೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

    ಈ ಹಿಂದೆ ಹೋರಾಟ ನಡೆಸಿದ ಪರಿಣಾಮ ಭದ್ರಾ ಕಾಡಾ ಸಭೆಯಲ್ಲಿ ನೀರು ಹರಿಸಲು ಆಫ್ ಅಂಡ್ ಆನ್ ಪದ್ದತಿ ಅನುಸರಿಸಲು ತೀರ್ಮಾನಿಸಲಾಗಿತ್ತು. ಈ ತೀರ್ಮಾನದ ಪ್ರಕಾರ ಸೆ. 16ರಂದು  ನೀರು ನಿಲ್ಲಿಸಬೇಕಾಗಿತ್ತು. ಆದರೆ ಇಲ್ಲಿಯವರೆಗೂ ನೀರು ನಿಲ್ಲಿಸಿಲ್ಲ. ಈಗ ನೀರು ನಿಲ್ಲಿಸದ್ದಿದ್ದಲ್ಲಿ ಬೇಸಿಗೆಯಲ್ಲಿ ಅಡಕೆ ತೋಟಗಳು ಒಣಗಿಹೋಗುತ್ತವೆ. ಈ ಹಿನ್ನೆಲೆಯಿಂದ ತಕ್ಷಣವೇ ನೀರು ಹರಿಸುವುದನ್ನು ನಿಲ್ಲಿಸಬೇಕೆಂದು ಆಗ್ರಹಿಸಲಾಯಿತು.

    ಒಂದು ವೇಳೆ ನೀರು ನಿಲ್ಲಿಸದಿದ್ದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿ ಎಕ್ಸಿಕ್ಯುಟಿವ್ ಇಂಜಿನಿಯರ್ಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ  ಇಂಜಿನಿಯರ್‌ ಬುಧವಾರದೊಳಗೆ ಸೂಕ್ತ ನಿರ್ಧಾರ  ಕೈಗೊಳ್ಳುವುದಾಗಿ ಭರವಸೆ ನೀಡಿದರು.


ಭದ್ರಾ ಜಲಾಶಯದಿಂದ ನಾಲೆಗಳಿಗೆ ಹರಿಸುತ್ತಿರುವ ನೀರು ತಕ್ಷಣ ನಿಲ್ಲಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲೂಕು ಶಾಖೆ ವತಿಯಿಂದ ಮಂಗಳವಾರ ಭದ್ರಾವತಿ ಮಿಲ್ಟ್ರಿಕ್ಯಾಂಪ್ ನೀರಾವರಿ ಇಲಾಖೆ ಎಕ್ಸಿಕ್ಯುಟಿವ್ ಇಂಜಿನಿಯರ್ ಕಛೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು.

ಇದಕ್ಕೆ ಪ್ರತಿಕ್ರಿಯಿಸಿದ ರೈತರು ಅಂತಿಮವಾಗಿ ಬುಧವಾರ ಬೆಳಿಗ್ಗೆವರೆಗೂ ಕಾದು ನೋಡಲಾಗುವುದು. ಒಂದು ವೇಳೆ ನೀರು ನಿಲ್ಲಿಸದಿದ್ದಲ್ಲಿ ಮುಂದಿನ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್‌, ಪ್ರಮುಖರಾದ ಎಸ್‌. ಕುಮಾರ್‌, ಎಚ್.ಎಲ್‌ ಷಡಾಕ್ಷರಿ, ಬಾಲಕೃಷ್ಣ, ಎಸ್.‌ ಮಣಿಶೇಖರ್‌, ಹನುಮಂತು, ಟಿ.ಡಿ ಶಶಿಕುಮಾರ್‌, ಎಚ್.‌ ರವಿಕುಮಾರ್‌, ರೈತ ಮುಖಂಡರಾದ ಎಸ್.‌ ಶಿವಮೂರ್ತಿ, ಜಿ.ಎನ್‌ ಪಂಚಾಕ್ಷರಿ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.