ರೈತನ ಮಗನಿಗೆ ೬೨೫ಕ್ಕೆ ೬೧೫ ಅಂಕ
೬೨೫ಕ್ಕೆ ೬೧೫ ಅಂಕ ಪಡೆದಿರುವ ಭದ್ರಾವತಿ ತಾಲೂಕಿನ ಹಂಚಿನ ಸಿದ್ದಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ನಿತಿನ್‌ಗೆ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕುಟುಂಬಸ್ಥರು, ಗ್ರಾಮಸ್ಥರು ನಿತಿನ್‌ಗೆ ಸಿಹಿ ತಿನಿಸಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದ್ದಾರೆ.
ಭದ್ರಾವತಿ : ಅಪ್ಪ ಕೊಟ್ಟ ಧೈರ್ಯ, ಶಿಕ್ಷಕರ ಮಾರ್ಗದರ್ಶನ, ನಿರಂತರ ಪರಿಶ್ರಮ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚಿನ ಅಂಕ ಪಡೆಯಲು ಸಾಧ್ಯವಾಯಿತು ಎಂದು ೬೨೫ಕ್ಕೆ ೬೧೫ ಅಂಕ ಪಡೆದಿರುವ ತಾಲೂಕಿನ ಹಂಚಿನ ಸಿದ್ದಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ನಿತಿನ್ ಫಲಿತಾಂಶ ಕುರಿತು ಪತ್ರಿಕೆಗೆ ಪ್ರತಿಕ್ರಿಯಿಸಿದ್ದು, ಈ ನಡುವೆ ರೈತನ ಮಗನ ಸಾಧನೆಗೆ ಪ್ರಶಂಸೆಗಳು ವ್ಯಕ್ತವಾಗುತ್ತಿವೆ.
ನಿತಿನ್ ತನ್ನ ಯಶಸ್ಸಿನ ಹಿಂದಿನ ರಹಸ್ಯ ಹಂಚಿಕೊಳ್ಳುತ್ತಾ ಪ್ರತಿದಿನ ಕನಿಷ್ಠ ೫ ರಿಂದ ೬ ಗಂಟೆ ಕಲಿಕೆಯಲ್ಲಿ ತೊಡಗಿಸಿಕೊಂಡಿದ್ದು, ಪಠ್ಯಪುಸ್ತಕಗಳ ಜೊತೆಗೆ ಹೆಚ್ಚುವರಿ ಪ್ರಶ್ನೆಪತ್ರಿಕೆಗಳು, ಶಿಕ್ಷಕರ ಮಾರ್ಗದರ್ಶನ ಹಾಗೂ ವಸತಿ ಶಾಲೆಯ ಶಾಂತಿಯುತ ಪರಿಸರ ಪ್ರತಿ ಬಾರಿ ಮಾಡುವ ಚಟುವಟಿಕೆಗೆ, ನನ್ನ ಸಾಧನೆಗೆ ಕಾರಣಗಳಾದವು. ವಿಶೇಷವಾಗಿ ಶಾಲಾ ಶಿಕ್ಷಕರ ಪ್ರೋತ್ಸಾಹ ಹಾಗೂ ಪೋಷಕರ ಬೆಂಬಲ ಅಪ್ಪನ ಧೈರ್ಯ ನನಗೆ ಪರೀಕ್ಷೆ ಸುಲಭವಾಗಿ ಎದುರಿಸಲು ಕಾರಣವಾಯಿತು. ಪರೀಕ್ಷೆಯ ಸಮಯದಲ್ಲಿ ಆತ್ಮವಿಶ್ವಾಸ ಕಳೆದುಕೊಂಡಿಲ್ಲ. ಅದರಲ್ಲೂ ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಕಲಿಕೆಯಲ್ಲಿ ಹಗಲು ರಾತ್ರಿ ಹೆಚ್ಚಿನ ಶ್ರಮವಹಿಸಿದ ಪರಿಣಾಮ ಹೆಚ್ಚಿನ ಪಡೆಯಲು ಸಾಧ್ಯವಾಯಿತು ಎಂದರು.
ನಿತಿನ್ ತಾಲೂಕಿನ ಕಲ್ಪನಹಳ್ಳಿ ತಾಂಡದ ರೈತ ಹಾಲೇಶ್ವರನಾಯ್ಕ ಮಗನಾಗಿದ್ದು, ಮಗನ ಸಾಧನೆಗೆ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕುಟುಂಬಸ್ಥರು, ಗ್ರಾಮಸ್ಥರು ನಿತಿನ್‌ಗೆ ಸಿಹಿ ತಿನಿಸಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದ್ದಾರೆ.