Featured Post

ಪಾರ್ವತಮ್ಮ ನಿಧನ

ಗುರುವಾರ, ಜುಲೈ 17, 2025

ಜು.೧೮ರಂದು `ಭಾವಗೀತೆಗಳ ಗೀತಗಾಯನ' ಕಾರ್ಯಕ್ರಮ



    ಭದ್ರಾವತಿ : ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ದಿವಂಗತ ಡಾ. ಎಚ್.ಎಸ್ ವೆಂಕಟೇಶ್‌ಮೂರ್ತಿಯವರ ಸ್ಮರಣಾರ್ಥ ಜು.೧೮ರ ಶುಕ್ರವಾರ ಸಂಜೆ ೪.೩೦ಕ್ಕೆ ಹಳೇನಗರ ತಾಲೂಕು ಕಛೇರಿ ರಸ್ತೆಯಲ್ಲಿರುವ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ `ಭಾವಗೀತೆಗಳ ಗೀತಗಾಯನ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ತಾಲೂಕು ಅಧ್ಯಕ್ಷ ಎಚ್. ತಿಮ್ಮಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಜನ್ನಾಪುರ ಸಂಗೀತ ಶಿಕ್ಷಕಿ ಗಾಯಿತ್ರಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ನಿವೃತ್ತ ಪ್ರಾಂಶುಪಾಲ ಡಾ. ಕೆ. ನಿತ್ಯಾನಂದ ಉಪನ್ಯಾಸ ನೀಡಲಿದ್ದಾರೆ. ಕನ್ನಡ ಸಾಹಿತ್ಯ, ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಎಂ.ಆರ್ ರೇವಣಪ್ಪ ಉಪಸ್ಥಿತರಿರುವರು. 
ಸುಮತಿ ಕಾರಂತ್, ಕಮಲಾಕುಮಾರಿ, ಆರ್.ಜಿ ಭಾರ್ಗವಿ, ಎನ್.ಎಂ ಸುನಂದ, ಅನುಪಮ ಚನ್ನೇಶ್, ಎಚ್.ಸಿ ಸುನಂದ, ವಾಣಿಶ್ರೀ ನಾಗರಾಜ್, ಶ್ಯಾಮಲ, ಸುಚಿತ್ರ, ದಿವಾಕರ್, ಡಿ.ಆರ್ ಹರೀಶ್ ಮತ್ತು ರುದ್ರೇಶ್ ಸೇರಿದಂತೆ ಇನ್ನಿತರರು ಗಾಯನ ಪ್ರಸ್ತುತಪಡಿಸಲಿದ್ದಾರೆ.

ಸ್ತನ ಕ್ಯಾನ್ಸರ್ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದುಕೊಳ್ಳಿ : ಡಾ. ಅನುರಾಧ ಪಟೇಲ್

ಭದ್ರಾವತಿ ನ್ಯೂಟೌನ್ ರೋಟರಿ ಕ್ಲಬ್ ಸಭಾಂಗಣದಲ್ಲಿ ಗುರುವಾರ ರೋಟರಿ ಕ್ಲಬ್ ಸಹಯೋಗದೊಂದಿಗೆ ಶಿವಮೊಗ್ಗ ನಾರಾಯಣ ಹೃದಯಾಲಯ ವತಿಯಿಂದ ಸ್ತನ  ಕ್ಯಾನ್ಸರ್ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು.  
    ಭದ್ರಾವತಿ: ಮಹಿಳೆಯರು ಸ್ತನ ಕ್ಯಾನ್ಸರ್ ಕುರಿತು ಆತಂಕಪಡುವ ಅಗತ್ಯವಿಲ್ಲ. ಅಲ್ಲದೆ ಯಾವುದೇ ರೀತಿ ಹಿಂಜರಿಕೆಗೆ ಒಳಗಾಗದೆ ಸೂಕ್ತ ಸಮಯದಲ್ಲಿ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳುವಂತೆ ನಗರದ ಚುಂಚಾದ್ರಿ ಮಹಿಳಾ ವೇದಿಕೆ ಗೌರವಾಧ್ಯಕ್ಷೆ ಡಾ. ಅನುರಾಧ ಪಟೇಲ್ ಹೇಳಿದರು. 
    ನಗರದ ನ್ಯೂಟೌನ್ ರೋಟರಿ ಕ್ಲಬ್ ಸಭಾಂಗಣದಲ್ಲಿ ಗುರುವಾರ ರೋಟರಿ ಕ್ಲಬ್ ಸಹಯೋಗದೊಂದಿಗೆ ಶಿವಮೊಗ್ಗ ನಾರಾಯಣ ಹೃದಯಾಲಯ ವತಿಯಿಂದ ಏರ್ಪಡಿಸಲಾಗಿದ್ದ ಸ್ತನ  ಕ್ಯಾನ್ಸರ್ ತಪಾಸಣಾ ಶಿಬಿರದ ನೇತೃತ್ವವಹಿಸಿ ಮಾತನಾಡಿದರು. 
    ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇರಲಿ ಮಹಿಳೆಯರು ಮೊದಲು ತಮ್ಮ ಆರೋಗ್ಯಕ್ಕೆ ಹೆಚ್ಚಿನ ಗಮನ ನೀಡಬೇಕು. ಮಹಿಳೆಯರು ಆರೋಗ್ಯವಂತರಾಗಿದ್ದರೆ ಕುಟುಂಬ ನೆಮ್ಮೆದಿಯಿಂದ ಇರಲು ಸಾಧ್ಯ ಎಂದರು. 
    ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಅಧ್ಯಕ್ಷತೆ ವಹಿಸಿದ್ದರು. ತಜ್ಞ ವೈದ್ಯೆ ಡಾ. ಸ್ವಾತಿ ಸ್ತನ ಕ್ಯಾನ್ಸರ್ ಕುರಿತು ಮಾಹಿತಿ ನೀಡಿ, ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ಗುಣಮುಖರಾಗುವಂತೆ ಕರೆ ನೀಡಿದರು.  ರೋಟರಿ ಕ್ಲಬ್ ಅಧ್ಯಕ್ಷ ಕೆ.ಎಚ್ ಶಿವಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. 
    ಕ್ಲಬ್ ಪ್ರಮುಖರಾದ ಕೂಡ್ಲಿಗೆರೆ ಹಾಲೇಶ್, ಶ್ರೀನಿವಾಸ್, ದುಷ್ಯಂತ್‌ರಾಜ್, ಗಿರೀಶ್ ಮತ್ತು ರೋಟರಿ ಕ್ಲಬ್ ಪದಾಧಿಕಾರಿಗಳು, ನಿರ್ದೇಶಕರು, ನಾರಾಯಣ ಹೃದಯಾಲಯ ಆಸ್ಪತ್ರೆ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಗಣೇಶ್, ಶಿಬಿರದ ಸಂಯೋಜಕ ರವಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಬುಧವಾರ, ಜುಲೈ 16, 2025

ಭದ್ರಾ ನದಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತಡೆಗೋಡೆ ನಿರ್ಮಾಣಕ್ಕೆ ೫೦ ಕೋ. ರು. ಅನುದಾನ

ಜಲಸಂಪನ್ಮೂಲ ಇಲಾಖೆಯಿಂದ ಆಡಳಿತಾತ್ಮಕ ಅನುಮೋದನೆ 

ಭದ್ರಾವತಿ ನಗರದ ಹೃದಯ ಭಾಗದಲ್ಲಿ ಹರಿಯುತ್ತಿರುವ ಭದ್ರಾ ನದಿ
    ಭದ್ರಾವತಿ: ನಗರದ ಹೃದಯ ಭಾಗದಲ್ಲಿ ಹರಿಯುತ್ತಿರುವ ಭದ್ರಾ ನದಿಯ ಎಡ ಮತ್ತು ಬಲ ದಂಡೆಗಳಲ್ಲಿ ಪ್ರವಾಹ ಪೀಡಿತ ಪ್ರದೇಶಗಳನ್ನು ರಕ್ಷಿಸಲು ತಡೆಗೋಡೆ ನಿರ್ಮಿಸಲು ೫೦ ಕೋ. ರು. ಅನುದಾನ ಬಿಡುಗಡೆಗೊಳಿಸಲಾಗಿದ್ದು, ಈ ಸಂಬಂಧ ಜಲಸಂಪನ್ಮೂಲ ಇಲಾಖೆ ವಿಶೇಷ ಕರ್ತವ್ಯಾಧಿಕಾರಿ ಕೆ. ಶುಭಾ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶ ಹೊರಡಿಸಿದ್ದಾರೆ. 
ಜು.೨ರ ಸಚಿವ ಸಂಪುಟ ಸಭೆಯ ನಿರ್ಣಯದಂತೆ ೫೦ ಕೋ.ರು. ಅಂದಾಜು ಮೊತ್ತದಲ್ಲಿ (೨೦೨೩-೨೪ನೇ ಸಾಲಿನ ಏಕರೂಪ ದರಪಟ್ಟಿಯನ್ವಯ) ತಡೆಗೋಡೆ ಕಾಮಗಾರಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
    ನಗರದ ಹೃದಯ ಭಾಗದಲ್ಲಿ ಭದ್ರಾ ನದಿ ೩ ಕಿ.ಮೀ ಹರಿಯುತ್ತಿದ್ದು, ಭದ್ರಾ ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಬಿಟ್ಟಾಗ ಹಲವಾರು ವರ್ಷಗಳಿಂದ ನದಿಯ ಎಡ ಮತ್ತು ಬಲ ಭಾಗದಲ್ಲಿರುವ ಅಂಬೇಡ್ಕರ್ ಕಾಲೋನಿ, ಗೌಳಿಗರ ಬೀದಿ, ಚಾಮೇಗೌಡ ಏರಿಯಾ, ಗುಂಡೂರಾವ್ ಶೆಡ್ ಮತ್ತು ಯಕಿನ್ಸಾ ಕಾಲೋನಿಗಳಲ್ಲಿ ವಾಸಿಸುತ್ತಿರುವ ಮನೆಗಳಿಗೆ ನೀರು ನುಗ್ಗಿ ಮನೆಗಳಿಗೆ ಹಾನಿ ಉಂಟಾಗುತ್ತಿದೆ. ಈ ಹಿನ್ನಲೆಯಲ್ಲಿ ನದಿಯ ಎರಡು ಬದಿಯಲ್ಲಿ ತಡೆಗೋಡೆ ನಿರ್ಮಿಸುವಂತೆ ಬಹಳ ವರ್ಷಗಳಿಂದ ಸರ್ಕಾರಕ್ಕೆ ಒತ್ತಾಯಿಸಲಾಗುತ್ತಿದೆ. ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ರವರ ನಿರಂತರ ಪ್ರಯತ್ನದ ಫಲವಾಗಿ ಇದೀಗ ಬೇಡಿಕೆ ಈಡೇರಿದ್ದು, ಮಳೆಗಾಲ ಮುಕ್ತಾಯಗೊಂಡ ನಂತರ ಕಾಮಗಾರಿ ಆರಂಭಗೊಳ್ಳುವ ನಿರೀಕ್ಷೆ ಇದೆ. 
    ಗೌಳಿಗರ ಬೀದಿಯಲ್ಲಿ ೪೦೦ ಮೀ., ಚಾಮೇಗೌಡ ಏರಿಯಾದಲ್ಲಿ ೪೦೦ ಮೀ., ಯಕಿನ್ಸಾ ಕಾಲೋನಿಯಲ್ಲಿ ೧೨೫ ಮೀ. ಮತ್ತು ಗುಂಡೂರಾವ್ ಶೆಡ್‌ನಲ್ಲಿ ೧೯೦ ಮೀ. ಸೇರಿದಂತೆ ಒಟ್ಟು ೧೧೧೫ ಮೀ. ತಡೆಗೋಡೆ ನಿರ್ಮಿಸಲಾಗುತ್ತಿದೆ.  

ಹಳೇನಗರ ಪೊಲೀಸರಿಂದ ೧ ಕೆ.ಜಿ ೧೪೦ ಗ್ರಾಂ ಗಾಂಜಾ ವಶ

ಭದ್ರಾವತಿ ಹೊಳೆಹೊನ್ನೂರು ರಸ್ತೆ ಸೀಗೇಬಾಗಿ ಕ್ರಾಸ್ ಬಸ್ ನಿಲ್ದಾಣದ ಸಮೀಪ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ ೧ ಕೆ.ಜಿ ೧೪೦ ಗ್ರಾಂ. ತೂಕದ ಗಾಂಜಾ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳುವಲ್ಲಿ ಹಳೇನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. 
    ಭದ್ರಾವತಿ : ಬಸ್ ನಿಲ್ದಾಣದ ಸಮೀಪ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ ೧ ಕೆ.ಜಿ ೧೪೦ ಗ್ರಾಂ. ತೂಕದ ಗಾಂಜಾ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳುವಲ್ಲಿ ಹಳೇನಗರ ಠಾಣೆ ಪೊಲೀಸರು ಯಶಸ್ವಿಯಾಗಿರುವ ಘಟನೆ ನಡೆದಿದೆ. 
    ಹೊಳೆಹೊನ್ನೂರು ರಸ್ತೆ ಸೀಗೇಬಾಗಿ ಕ್ರಾಸ್ ಬಸ್ ನಿಲ್ದಾಣದ ಬಳಿ ಇಬ್ಬರು ಅಪರಿಚಿತ ವ್ಯಕ್ತಿಗಳು ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಠಾಣಾ ಉಪ ನಿರೀಕ್ಷಕ ಸುನೀಲ್ ಬಿ ತೇಲಿಯವರ ನೇತೃತ್ವದಲ್ಲಿ ಜು.೧೨ರಂದು ಮಧ್ಯಾಹ್ನ ದಾಳಿ ನಡೆಸಲಾಗಿದ್ದು, ಅಕ್ರಮವಾಗಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ನಾಗರಾಜ್ ಮತ್ತು ಕಾರ್ತಿಕ್‌ರನ್ನು ಬಂಧಿಸಿ ಇವರಿಂದ ಸುಮಾರು ೨೦ ಸಾವಿರ ರು. ಮೌಲ್ಯದ ೧ ಕೆ.ಜಿ ೧೪೦ ಗ್ರಾಂ. ತೂಕದ ಗಾಂಜಾ ಮತ್ತು ಗಾಂಜಾ ಮಾರಾಟದಿಂದ ಬಂದ ರು.೧,೫೦೦ ನಗದು ಹಾಗು ಸುಮಾರು ೬೦ ಸಾವಿರ ರು. ಮೌಲ್ಯದ ದ್ವಿಚಕ್ರ ವಾಹನ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
    ಕಾರ್ಯಾಚರಣೆಯಲ್ಲಿ ನಗರಸಭೆ ಸಿಬ್ಬಂದಿಗಳಾದ ಆಶಾಲತಾ, ರವಿ, ಜಿಲ್ಲಾ ಸಹಾಯಕ ಡ್ರಗ್ ಕಂಟ್ರೋಲರ್ ಡಾ. ವೀರೇಶ್ ಬಾಬು,  ಪೊಲೀಸ್ ಸಿಬ್ಬಂದಿಗಳಾದ ಹಾಲಪ್ಪ, ಚಿನ್ನನಾಯ್ಕ, ಚಿಕ್ಕಪ್ಪ, ಮೌನೇಶ, ಪ್ರಪ್ಪೂಲ್, ರಾಘವೇಂದ್ರ, ಚಂದ್ರು, ವೀರನಗೌಡ, ಮಂಜುನಾಥ ಮತ್ತು ಶಬ್ಬಿರ್ ಪಾಲ್ಗೊಂಡ್ಡಿದ್ದರು. 

ಧರ್ಮಸ್ಥಳ ವ್ಯಾಪ್ತಿಯಲ್ಲಿ ಕಳೆದ ೨೦-೨೫ ವರ್ಷಗಳಿಂದ ಕಾಣೆಯಾದ ಮಹಿಳೆಯರ ಮಾಹಿತಿ ನೀಡಿ : ಎಸ್. ಮಂಜುನಾಥ್

ಎಸ್. ಮಂಜುನಾಥ್   
    ಭದ್ರಾವತಿ : ನಗರದ ಜನ್ನಾಪುರ ನಿವಾಸಿ, ಕೆಪಿಸಿಸಿ ರಾಜ್ಯ ಸಂಚಾಲಕ ಎಸ್. ಮಂಜುನಾಥ್‌ರವರು ಧರ್ಮಸ್ಥಳ ವ್ಯಾಪ್ತಿಯಲ್ಲಿ ಕಳೆದ ೨೦-೨೫ ವರ್ಷಗಳಿಂದ ಕಾಣೆಯಾಗಿರುವ ಒಟ್ಟು ಮಹಿಳೆಯರು ಹಾಗು ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯರ ಅಂಕಿ-ಅಂಶ ಮಾಹಿತಿ ನೀಡುವಂತೆ ದಕ್ಷಿಣ ಕನ್ನಡ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. 
    ಧರ್ಮಸ್ಥಳ ಭಾಗದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ಹೇಳಿಕೆಯನ್ನು ದಾಖಲಿಸಿರುತ್ತಾರೆ. ಅಲ್ಲದೆ ಜು.೧೨ರಂದು ಮನುಷ್ಯರೊಬ್ಬರ ತಲೆ ಬುರುಡೆ ಕೊರಕಿದ ಬಗ್ಗೆ ಹಾಗು ನಾಪತ್ತೆಯಾಗಿರುವ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರ ಕುಟುಂಬದವರ ಹೇಳಿಕೆ ಮಾಧ್ಯಮಗಳಲ್ಲಿ ಪ್ರಸಾರವಾಗಿರುವುದು ಗಮನಕ್ಕೆ ಬಂದಿರುತ್ತದೆ.
    ಈ ಹಿನ್ನಲೆಯಲ್ಲಿ ಕಳೆದ ೨೦-೨೫ ವರ್ಷಗಳಿಂದ ಈ ವ್ಯಾಪ್ತಿಯಲ್ಲಿ ಕಾಣೆಯಾಗಿರುವ ಒಟ್ಟು ಮಹಿಳೆಯರ ಹಾಗು ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯರು ಮತ್ತು ವಿದ್ಯಾರ್ಥಿನಿಯರ ಅಂಕಿ-ಅಂಶಗಳು  ಹಾಗು ಕೈಗೊಂಡ ಕ್ರಮಗಳು, ಪತ್ತೆ ಮಾಡಲಾದ ಮತ್ತು ಪತ್ತೆ ಮಾಡಲಾಗದ ಹಾಗು ಅತ್ಯಾಚಾರ ಪ್ರಕರಣಗಳ ಮಾಹಿತಿ ನೀಡುವಂತೆ ಎಸ್. ಮಂಜುನಾಥ್ ಕೋರಿದ್ದಾರೆ.

ಮಂಗಳವಾರ, ಜುಲೈ 15, 2025

ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಜಯತೀರ್ಥರ ಆರಾಧನೆ

ಶ್ರೀ ಜಯತೀರ್ಥರ ಆರಾಧನೆ ಮೊಹೋತ್ಸವದ ಅಂಗವಾಗಿ ಮಂಗಳವಾರ ಭದ್ರಾವತಿ ಹಳೇನಗರದ ಶ್ರೀ ರಾಘವೇಂದ್ರಸ್ವಾಮಿಗಳವರ ಮಠದಲ್ಲಿ ಆರಾಧನೆ ಮೊಹೋತ್ಸವ ವಿಜೃಂಭಣೆಯಿಂದ ನಡೆಯಿತು.
    ಭದ್ರಾವತಿ : ಶ್ರೀ ಜಯತೀರ್ಥರ ಆರಾಧನೆ ಮೊಹೋತ್ಸವದ ಅಂಗವಾಗಿ ಮಂಗಳವಾರ ಹಳೇನಗರದ ಶ್ರೀ ರಾಘವೇಂದ್ರಸ್ವಾಮಿಗಳವರ ಮಠದಲ್ಲಿ ಆರಾಧನೆ ಮೊಹೋತ್ಸವ ವಿಜೃಂಭಣೆಯಿಂದ ನಡೆಯಿತು.
    ಬೆಳಗ್ಗೆ ಪಂಚಾಮೃತ ಅಭಿಷೇಕ, ಮೃತ್ಯುಕ ಗುರುರಾಜ ಅವರಿಂದ ಉಪನ್ಯಾಸ, ನಂತರ ಮಠದ ಪ್ರಕಾರದಲ್ಲಿಯೇ ರಥೋತ್ಸವ ಜರಗಿತು. ಮಧ್ಯಾಹ್ನ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಮತ್ತು ಬ್ರಾಹ್ಮಣರ ಪಾದ ತೊಳೆಯುವ ಕಾರ್ಯಕ್ರಮ ಹಾಗು ವಿವಿಧ ಭಜನಾ ಮಂಡಳಿಗಳಿಂದ ಜಯತೀರ್ಥರ ಸಂಕೀರ್ತನೆ ನಡೆಯಿತು. ಶ್ರೀ ಕೃಷ್ಣ ಚಂಡಿ ಬಳಗದಿಂದ ಚಂಡೆ ಉತ್ಸವ ವಿಜೃಂಭಣೆಯಿಂದ ಜರಗಿತು
    ವೇದಬ್ರಹ್ಮ ಶ್ರೀ ಗೋಪಾಲಕೃಷ್ಣ ಆಚಾರ್, ಸತ್ಯನಾರಾಯಣಚಾರ್, ಸಮೀರಾಚಾರ್ ಹಾಗೂ ಗುರುರಾಜ ಸೇವಾ ಸಮಿತಿ ಅಧ್ಯಕ್ಷ ಮುರಳಿಧರ ತಂತ್ರಿ, ಉಪಾಧ್ಯಕ್ಷ ಸುಮಾರ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ರಮಾಕಾಂತ, ಖಜಾಂಚಿ ನಿರಂಜನಾಚಾರ್ಯ ಮತ್ತು ಶುಭ ಗುರುರಾಜ್ ವಿದ್ಯಾನಂದ ನಾಯಕ, ಮಾಧುರಾವ್, ಗೋಪಾಲಕೃಷ್ಣ, ಸುಪ್ರೀತ ತಂತ್ರಿ ಸೇರಿದಂತೆ ಭಕ್ತ ವೃಂದದವರು ಪಾಲ್ಗೊಂಡಿದ್ದರು.

ಟೀಚರ್ ಎಲಿಸಬೆತ್ ಸಿಗಾಮಣಿ ನಿಧನ

ಎಲಿಸಬೆತ್ ಸಿಗಾಮಣಿ 
    ಭದ್ರಾವತಿ : ನಗರದ ಹೊಸಮನೆ ನಿವಾಸಿ ಸೈಂಟ್ ಚಾರ್ಲ್ಸ್ ಕನ್ನಡ ಶಾಲೆಯ ನಿವೃತ್ತ ಶಿಕ್ಷಕಿ ಎಲಿಸಬೆತ್ ಸಿಗಾಮಣಿ(೭೪)  ಸೋಮವಾರ ರಾತ್ರಿ ನಿಧನ ಹೊಂದಿದರು. 
    ಇವರಿಗೆ ಪತಿ, ಪುತ್ರ, ಪುತ್ರಿ ಮತ್ತು ಮೊಮ್ಮಕ್ಕಳು ಇದ್ದಾರೆ. ನ್ಯೂಟೌನ್ ಬೈಪಾಸ್ ರಸ್ತೆಯಲ್ಲಿರುವ ಕ್ರೈಸ್ತ ಸಮಾಧಿಯಲ್ಲಿ ಮಂಗಳವಾರ ಅಂತ್ಯಸಂಸ್ಕಾರ ನೆರವೇರಿತು. ಸಿಗಾಮಣಿಯವರು ಸುಮಾರು ೪೦ ವರ್ಷ ಸೈಂಟ್ ಚಾರ್ಲ್ಸ್ ಕನ್ನಡ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದರು. ಎಲಿಸಬೆತ್ ಟೀಚರ್ ಎಂದೆ ಖ್ಯಾತಿ ಪಡೆದಿದ್ದರು. ಅವರ ಬಳಿ  ಶಿಕ್ಷಣ ಪಡೆದ ನೂರಾರು ವಿದ್ಯಾರ್ಥಿಗಳು ವಿಷಯ ತಿಳಿದು ದೂರದ ಊರುಗಳಿಂದ ಬಂದು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡರು.