Friday, September 11, 2020

ಅರಣ್ಯ ಇಲಾಖೆಯಲ್ಲಿ ಭ್ರಷ್ಟಾಚಾರಿಗಳನ್ನು ರಕ್ಷಿಸುವ ಹುನ್ನಾರ

ಹೋರಾಟಗಾರ ಶಿವಕುಮಾರ್ ಆರೋಪ

ಸಾಮಾಜಿಕ ಹೋರಾಟಗಾರ ಶಿವಕುಮಾರ್
ಭದ್ರಾವತಿ, ಸೆ. ೧೧: ತಾಲೂಕಿನ ಅರಣ್ಯ ವಿಭಾಗದಲ್ಲಿ ನಡೆದಿರುವ ಭ್ರಷ್ಟಾಚಾರ, ಕರ್ತವ್ಯ ಲೋಪ ತನಿಖೆಯಿಂದ ಸಾಬೀತಾದರೂ ಸಹ ಇದುವರೆಗೂ ತಪ್ಪಿತಸ್ಥ ಅಧಿಕಾರಿಗಳು ಹಾಗು ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಇಲಾಖೆಯ ಮೇಲಾಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆಂದು ಸಾಮಾಜಿಕ ಹೋರಾಟಗಾರ ಶಿವಕುಮಾರ್ ಆರೋಪಿಸಿದ್ದಾರೆ.
     ಅರಣ್ಯ ವಿಭಾಗದಲ್ಲಿ ಸಾಕಷ್ಟು ಭ್ರಷ್ಟಾಚಾರಗಳು ನಡೆದಿದ್ದು, ಈ ಸಂಬಂಧ ನಿರಂತರವಾಗಿ ಹೋರಾಟ  ನಡೆಸಿಕೊಂಡು ಬರಲಾಗುತ್ತಿದೆ. ಇಲಾಖೆಯಲ್ಲಿನ ಭ್ರಷ್ಟಾಚಾರಗಳಿಗೆ ಸಂಬಂಧಿಸಿದಂತೆ ಇಲಾಖೆಯ ಉನ್ನತ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿತ್ತು. ಸುಮಾರು ೧೩ ದೂರುಗಳ ಪೈಕಿ ೩ ದೂರುಗಳು ತನಿಖೆಯಿಂದ ಸಾಬೀತಾಗಿವೆ ಎಂದು ಪತ್ರಿಕೆಗೆ ತಿಳಿಸಿದ್ದಾರೆ.
        ಪ್ರಮುಖವಾಗಿ ತಾಲೂಕಿನ ಅಂತರಗಂಗೆ ಅರಣ್ಯ ವಲಯದ ಸರ್ವೆ ನಂ.೨೯ರಲ್ಲಿ ೨೦೧೯-೨೦ನೇ ಸಾಲಿನಲ್ಲಿ ೨ ರಿಂದ ೩ ಎಕರೆ ಅರಣ್ಯ ಒತ್ತುವರಿಯಾಗಿತ್ತು. ಇದೀಗ ಸುಮಾರು ೫ ರಿಂದ ೬ ಎಕರೆ ಒತ್ತುವರಿಯಾಗಿದೆ. ಆದರೂ ಸಹ ಇದುವೆರಗೂ ಯಾವುದೇ ಕ್ರಮ ಕೈಗೊಳ್ಳದೆ ಒತ್ತುವರಿದಾರರೊಂದಿಗೆ ಇಲಾಖೆ ಅಧಿಕಾರಿಗಳು ಶಾಮೀಲಾಗಿರುವುದು ಕಂಡು ಬರುತ್ತಿದೆ.
      ಈ ಅರಣ್ಯ ವಲಯದಲ್ಲಿ ಯಾವುದೇ ಶಿಬಿರಗಳಿಲ್ಲ, ಇನ್ನು ಸಿಬ್ಬಂದಿಗಳು ಇಲ್ಲವೇ ಇಲ್ಲ. ಈ ಹಿನ್ನಲೆಯಲ್ಲಿ ೨೪*೭ ಆಹಾರ ತಯಾರಿಕೆ ನಡೆದಿರುವುದಿಲ್ಲ. ಅಲ್ಲದೆ ಅರಣ್ಯ ಗಸ್ತು ಪಡೆ ಸಹ ಕರ್ತವ್ಯ ನಿರ್ವಹಿಸಿರುವುದಿಲ್ಲ. ಆದರೂ ಸಹ ಅರಣ್ಯ ಕಾವಲುಪಡೆ ಹೆಸರಿನಲ್ಲಿ ನಕಲಿ ಬಿಲ್ ಸೃಷ್ಟಿಸಿ ಪ್ರತಿ ತಿಂಗಳು ಹಣ ಲಪಟಾಯಿಸಿದ್ದು, ಲಕ್ಷಾಂತರ ರು. ಭ್ರಷ್ಟಾಚಾರ ನಡೆದಿದೆ.


ಶಿವಮೊಗ್ಗ ಅರಣ್ಯ ಸಂರಕ್ಷಣಾಧಿಕಾರಿಗಳು ಕರಡು ದೋಷಾರೋಪಣ ಪಟ್ಟಿ ಸಲ್ಲಿಸಲು ಭದ್ರಾವತಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಪುನಃ ಆದೇಶಿಸಿರುವುದು.
           ಉಳಿದಂತೆ ಶಾಂತಿ ಸಾಗರ ವಲಯದಲ್ಲಿ ೩ ಭಾಗಗಳಲ್ಲಿ ಅರಣ್ಯೀಕರಣ ನಿರ್ಮಾಣ ಮಾಡಿದ್ದು, ಕೆಎಫ್‌ಡಿಎಫ್ ೫೦ ಹೆಕ್ಟೇರ್, ಕಾಂಪಾ ೫೦ ಹೆಕ್ಟೇರ್  ಜಾಗಗಳಲ್ಲಿ ಸಸಿಗಳನ್ನು ಪ್ಲಾಸ್ಟಿಕ್‌ಚೀಲಗಳಿಂದ ಬೇರ್ಪಡಿಸದೆ ನೆಡಲಾಗಿದೆ. ಇದರಿಂದ ಸಸಿಗಳ ಬೆಳವಣಿಗೆ ಕುಂಠಿತಗೊಂಡು ನಾಶಗೊಳ್ಳಲಿದ್ದು, ಕರ್ತವ್ಯ ಲೋಪ ನಡೆದಿದೆ ಎಂದು ಆರೋಪಿಸಿದ್ದಾರೆ.
         ನಿಖರ ಮಾಹಿತಿ ಹಾಗು ಸಾಕ್ಷಿ ಸಮೇತ  ಈ ಎಲ್ಲಾ ಆರೋಪಗಳನ್ನು ಇಲಾಖೆ ಉನ್ನತ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಈ ಹಿನ್ನಲೆಯಲ್ಲಿ ಅಪಾರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಜಾಗೃತದಳ, ಬೆಂಗಳೂರು ಇವರ ಆದೇಶದಂತೆ ಶಿವಮೊಗ್ಗ ಸಂಚಾರಿದಳ ಮತ್ತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ತನಿಖೆ ನಡೆಸಲು ಸೂಚಿಸಲಾಗಿತ್ತು. ಈ ೩ ಆರೋಪಗಳು ಸಹ ತನಿಖೆಯಿಂದ ಸಾಬೀತಾಗಿದ್ದು, ಈ ಹಿನ್ನಲೆಯಲ್ಲಿ ಎಸಿಎಫ್, ಡಿಎಫ್‌ಓ, ಆರ್‌ಎಫ್‌ಓ ಮತ್ತು ಡಿಆರ್‌ಎಫ್‌ಓ ಹಾಗು ಗಾರ್ಡ್‌ಗಳ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಲು ಆದೇಶಿಸಲಾಗಿದೆ. ಆದರೆ ಇದುವರೆಗೂ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಇಲಾಖೆಯಲ್ಲಿನ ಕೆಳಹಂತದ ಹಾಗು ಉನ್ನತ ಅಧಿಕಾರಿಗಳ ನಡುವೆ ಹಗ್ಗಜಗ್ಗಾಟ ನಡೆಯುತ್ತಿದ್ದು,  ಭ್ರಷ್ಟಾಚಾರಿಗಳನ್ನು ರಕ್ಷಿಸಿಸುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

ವಿಗಾರ್ ಜನರಲ್ ಕುರಿಯಕೋಸ್ ನಿಧನ

ಕುರಿಯಕೋಸ್
ಭದ್ರಾವತಿ, ಸೆ. ೧೧: ತಾಲೂಕಿನ ಕ್ರೈಸ್ತ ಧರ್ಮ ಕ್ಷೇತ್ರದ ವಿಗಾರ್ ಜನರಲ್ ಆಗಿ ಸೇವೆ ಸಲ್ಲಿಸುತ್ತಿದ್ದ ರೆವರೆಂಡ್ ಫಾದರ್  ಕುರಿಯಕೋಸ್(ಶಾಜಿ) ಹೃದಯಾಘಾತದಿಂದ ನಿಧನ ಹೊಂದಿದರು.
     ಧರ್ಮ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಸೇವೆ ಸಲ್ಲಿಸಿದ್ದ ಕುರಿಯಕೋಸ್ ಚಿರಪರಿಚಿತರಾಗಿದ್ದರು. ಇವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಶುಕ್ರವಾರ ಸಂಜೆ ಕೇರಳದ ಕಾಸರಗೋಡು ಜಿಲ್ಲೆಯ ಕೊನ್ನಕಾಡ್  ಧರ್ಮಕೇಂದ್ರದಲ್ಲಿ ನೆರವೇರಿತು.
      ಇವರ ನಿಧನಕ್ಕೆ ಕ್ರೈಸ್ತ ಧರ್ಮಕ್ಷೇತ್ರದ  ಧರ್ಮಾಧ್ಯಕ್ಷರಾದ ವಂದನೀಯ ಬಿಷಪ್  ಮಾರ್  ಜೋಸೆಫ್ ಅರುಮಚ್ಚಾಡತ್ ಹಾಗು ಎಲ್ಲಾ ಧರ್ಮಕೇಂದ್ರದ ಗುರುಗಳು, ಸನ್ಯಾಸಿನಿಯರು ಮತ್ತು ಧರ್ಮಕ್ಷೇತ್ರದ ಎಲ್ಲಾ ಭಕ್ತಾಧಿಗಳು ಸಂತಾಪ ಸೂಚಿಸಿ ಗೌರವ ಸಲ್ಲಿಸುವ ಮೂಲಕ ಆತ್ಮಕ್ಕೆ ಶಾಂತಿ ಕೋರಿ ದೇವರಲ್ಲಿ ಪ್ರಾರ್ಥಿಸಿದ್ದಾರೆ.

ಎಲ್ಲಾ ವರ್ಗದ ಜನರ ಶಕ್ತಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿ : ಬಿ.ಎಚ್ ಶಿವಕುಮಾರ್

ನಗರದ ವಿವಿಧೆಡೆ ಸಂಘ-ಸಂಸ್ಥೆಗಳಿಂದ ಸಂತಾಪ

ಭದ್ರಾವತಿ ಹಳೇನಗರದ ಬಲಿಜ ಸಮುದಾಯ ಭವನದಲ್ಲಿ ಕೇಬಲ್ ಅಪರೇಟರ್ ಸಂಘದ ವತಿಯಿಂದ ಶುಕ್ರವಾರ ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರ ಶ್ರದ್ದಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಭದ್ರಾವತಿ, ಸೆ. ೧೧: ಮಾಜಿ ಶಾಸಕ ಎಂ.ಜೆ ಅಪ್ಪಾಜಿ ತಾಲೂಕಿನ ಎಲ್ಲಾ ವರ್ಗದ ಜನರ ಶಕ್ತಿಯಾಗಿದ್ದರು ಎಂದು ನಗರದ ತರುಣ ಭಾರತಿ ವಿದ್ಯಾಸಂಸ್ಥೆ ಅಧ್ಯಕ್ಷ, ಕೇಬಲ್ ಅಪರೇಟರ್ ಸಂಘದ ಪ್ರಮುಖರಲ್ಲಿ ಒಬ್ಬರಾದ ಬಿ.ಎಚ್ ಶಿವಕುಮಾರ್ ತಿಳಿಸಿದರು.
         ಅವರು ಶುಕ್ರವಾರ ಹಳೇನಗರದ ಬಲಿಜ ಸಮುದಾಯ ಭವನದಲ್ಲಿ ಕೇಬಲ್ ಅಪರೇಟರ್ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
        ಅಪ್ಪಾಜಿಯವರ ಸ್ಮರಣೆ ಮಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಕ್ಷೇತ್ರದ ಜನತೆ ಹಾಗು ಕೇಬಲ್ ಅಪರೇಟರ್ ಸಂಘಟನೆಗಳ ಪರವಾಗಿ ಅವರ ಆತ್ಮಕ್ಕೆ ಶಾಂತಿ ಕೋರುವುದಾಗಿ ತಿಳಿಸಿದರು.
ನಗರಸಭಾ ಸದಸ್ಯ ಎಚ್. ರವಿಕುಮಾರ್ ಮಾತನಾಡಿ, ಅಪ್ಪಾಜಿ ಕೇವಲ ರಾಜಕಾರಣಿ ಮಾತ್ರವಲ್ಲ ಎಲ್ಲಾ ಕ್ಷೇತ್ರಗಳಲ್ಲೂ ಅನುಭವ ಹೊಂದಿದ್ದ ಮಹಾನ್ ನಾಯಕರಾಗಿದ್ದರು. ಇಂತಹ ಅಪರೂಪದ ವ್ಯಕ್ತಿಯನ್ನು ನಾವು ಕಳೆದುಕೊಂಡಿರುವುದು ವಿಷಾದನೀಯ ಬೆಳವಣಿಗೆಯಾಗಿದೆ ಎಂದರು.
     ಸಂಘದ ಖಜಾಂಚಿ ರಂಗನಾಥ್ ಮಾತನಾಡಿ, ಅಪ್ಪಾಜಿ ಎಲ್ಲಾ ಜನರ ಧ್ವನಿಯಾಗಿದ್ದರು. ಎಲ್ಲಾ ವರ್ಗದ ಜನರಲ್ಲಿ ಸಾಮಾನ್ಯ ವ್ಯಕ್ತಿಯಂತೆ ಗುರುತಿಸಿಕೊಂಡಿದ್ದರು ಎಂದರು.
       ಕೇಬಲ್ ಅಪರೇಟರ್ ಸಂಘದ ಅಧ್ಯಕ್ಷ ಸತೀಶ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಎಂ.ಎಸ್ ಸುರೇಶಪ್ಪ, ದಯಾನಂದ, ಕಾರ್ಯದರ್ಶಿ ಮೈಲಾರಿರಾವ್, ವೆಂಕಟಚಲ ಸೇರಿದಂತೆ ನಗರದ ಕೇಬಲ್ ಅಪರೇಟರ್‌ಗಳು ಪಾಲ್ಗೊಂಡಿದ್ದರು.


ಭದ್ರಾವತಿ ವಿದ್ಯಾಮಂದಿರಲ್ಲಿ ಆದಿ ದ್ರಾವಿಡ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರಿಗೆ ಸಂತಾಪ ಸೂಚಿಸಲಾಯಿತು.
         ಆದಿ ದ್ರಾವಿಡ ಕ್ಷೇಮಾಭಿವೃದ್ಧಿ ಸಂಘ ಸಂತಾಪ:
     ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಕನಸು ಕಂಡಿದ್ದ ಹುಟ್ಟು ಹೋರಾಟಗಾರ ಅಪ್ಪಾಜಿಯವರನ್ನು ಕಳೆದುಕೊಂಡು ಇದೀಗ ಕ್ಷೇತ್ರ ಬಡವಾಗಿದ್ದು, ಅವರ ಅವಧಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಎಂದಿಗೂ ಅವರೇ ನಮ್ಮ ಜೊತೆಯಲ್ಲಿ ಇರುವಂತೆ ಭಾವನೆ ಮೂಡಿಸುತ್ತಿವೆ ಎಂದು ಆದಿ ದ್ರಾವಿಡ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿ. ಗೋಪಾಲ್ ಸ್ಮರಿಸಿದರು.
      ಅವರು ನ್ಯೂಟೌನ್ ವಿದ್ಯಾಮಂದಿರದಲ್ಲಿ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರ ಶ್ರದ್ದಾಂಜಲಿ ಸಭೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಮುಖರಾದ ಪಾಂಡು, ಮುನಿಸ್ವಾಮಿ, ಸೂರಜ್, ರಾಜು, ಸೆಲ್ವಂ, ಸುಂದರ್, ಗುಣಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  


ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು-ಸಹಾಯಕಿಯರ ಸಂಘದ ವತಿಯಿಂದ ಸಂಘದ ಅಧ್ಯಕ್ಷೆ ಸುಶೀಲಾಬಾಯಿ ನೇತೃತ್ವದಲ್ಲಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
       ಅಂಗನವಾಡಿ ಕಾರ್ಯಕರ್ತೆಯರು-ಸಹಾಯಕಿಯರಿಂದ ಸಂತಾಪ:
    ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು-ಸಹಾಯಕಿಯರ ಸಂಘದ ವತಿಯಿಂದ ಸಂಘದ ಅಧ್ಯಕ್ಷೆ ಸುಶೀಲಾಬಾಯಿ ನೇತೃತ್ವದಲ್ಲಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
     ಅಪ್ಪಾಜಿ ನಿವಾಸಕ್ಕೆ ತೆರಳಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕುಟುಂಬ ವರ್ಗದವರಿಗೆ ಸಾಂತ್ವಾನ ಹೇಳುವ ಜೊತೆಗೆ ಕುಟುಂಬ ವರ್ಗದವರಿಗೆ, ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲೆಂದು ಪ್ರಾರ್ಥಿಸಲಾಯಿತು.
      ವೇದಾವತಿ, ಉಮಾ, ವಿಶಾಲಾಕ್ಷಿ, ಜಯಶ್ರೀ, ವಿನೋದಾ, ಜೆಡಿಎಸ್ ಅಧ್ಯಕ್ಷ ಆರ್. ಕರುಣಾಮೂರ್ತಿ, ಜಿ.ಪಂ. ಸದಸ್ಯ ಎಸ್. ಮಣಿಶೇಖರ್, ನೋಟರಿ ಲೋಕೇಶ್ವರರಾವ್, ಶಾರದಾ ಅಪ್ಪಾಜಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Thursday, September 10, 2020

ಕೆ.ಎಲ್ ಅಶೋಕ್ ಮೇಲೆ ಪೊಲೀಸ್ ದೌರ್ಜನ್ಯಕ್ಕೆ ಖಂಡನೆ

ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆಗೆ ನಿರ್ಧಾರ

ಭದ್ರಾವತಿ ಮಿಲ್ಟ್ರಿಕ್ಯಾಂಪ್ ಲೋಕೋಪಯೋಗಿ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಗುರುವಾರ ಪ್ರಗತಿಪರ ಸಂಘಟನೆಗಳ ಸಭೆ ನಡೆಯಿತು.
ಭದ್ರಾವತಿ, ಸೆ. ೧೦: ಕರ್ನಾಟಕ ಕೋಮು ಸೌಹಾರ್ದ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಲ್ ಅಶೋಕ್‌ರವರ ಮೇಲಿನ ಪೊಲೀಸ್ ದೌರ್ಜನ್ಯವನ್ನು ನಗರದ ಪ್ರಗತಿಪರ ಸಂಘಟನೆಗಳ ಮುಖಂಡರು ಖಂಡಿಸಿದ್ದಾರೆ.
       ಗುರುವಾರ ಮಿಲ್ಟ್ರಿಕ್ಯಾಂಪ್ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಪ್ರಮುಖರು ಅಶೋಕ್‌ರವರು ಎರಡು ದಶಕಗಳಿಗೂ ಹೆಚ್ಚು ಕಾಲ ಪ್ರಗತಿಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದು, ಸೌಹಾರ್ದತೆ ನೆಲೆಗಟ್ಟಿನಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಇವರು ಕುಟುಂಬ ಸಮೇತ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿಗೆ ತೆರಳಿದ್ದಾಗ ಅಲ್ಲಿನ ಪೊಲೀಸರು ಕ್ಷಲ್ಲಕ ಕಾರಣ ಮುಂದಿಟ್ಟುಕೊಂಡು ಅವಮಾನಿಸಿದ್ದಾರೆ. ಇದನ್ನು ಸಂಘಟನೆ ಖಂಡಿಸುತ್ತದೆ ಎಂದರು.
     ಉದ್ದೇಶಪೂರ್ವಕವಾಗಿ ಅಶೋಕ್‌ರವರನ್ನು ಅವಮಾನಿಸಿ ದರ್ಪದಿಂದ ವರ್ತಿಸಿರುವ ಪೊಲೀಸ್ ಸಿಬ್ಬಂದಿ ಹಾಗು ಠಾಣಾಧಿಕಾರಿಯನ್ನು ತಕ್ಷಣ ಅಮಾನತು ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಈಗಾಗಲೇ ಈ ಸಂಬಂಧ ವಿವಿಧ ಸಂಘಟನೆಗಳಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗಿದ್ದು, ನಗರದಲ್ಲೂ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲು ತೀರ್ಮಾನಿಸಿದರು.
     ಪ್ರಗತಿಪರ ಸಂಘಟನೆಗಳ ಪ್ರಮುಖರಾದ ಸುರೇಶ್, ಜಿ. ರಾಜು, ಜೆಬಿಟಿ ಬಾಬು, ಎಚ್. ರವಿಕುಮಾರ್, ಇಬ್ರಾಹಿಂ ಖಾನ್, ಈ.ಪಿ ಬಸವರಾಜ್, ರಾಜೇಂದ್ರ ಸೇರಿದಂತೆ ಇನ್ನಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ರೋಟರಿ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ

ಭದ್ರಾವತಿಯಲ್ಲಿ ರೋಟರಿ ಕ್ಲಬ್ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ಶಿಕ್ಷಕರ ದಿನಾಚರಣೆ ನ್ಯೂಟೌನ್ ರೋಟರಿ ಕ್ಲಬ್ ಸಭಾಂಗಣದಲ್ಲಿ ಸರಳವಾಗಿ ಜರುಗಿತು. ೫ ಜನ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಭದ್ರಾವತಿ, ಸೆ. ೧೦: ನಗರದ ರೋಟರಿ ಕ್ಲಬ್ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ಶಿಕ್ಷಕರ ದಿನಾಚರಣೆ ನ್ಯೂಟೌನ್ ರೋಟರಿ ಕ್ಲಬ್ ಸಭಾಂಗಣದಲ್ಲಿ ಸರಳವಾಗಿ ಜರುಗಿತು.
      ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಪೂರ್ವ ಪ್ರಾಥಮಿಕ ಕೇಂದ್ರದ ಶಿಕ್ಷಕಿ ಸೌಭಾಗ್ಯ, ಪ್ರಾಥಮಿಕ ಶಾಲೆ ಶಿಕ್ಷಕಿ ಮೀನಾಕ್ಷಿ, ಪ್ರೌಢಶಾಲೆ ಶಿಕ್ಷಕ ಗಣೇಶ್, ಆನಂದ ಮಾರ್ಗ ಶಾಲೆಯ ಇಬ್ಬರು ಅಚಾರ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
      ರೋಟರಿ ಕ್ಲಬ್ ಅಧ್ಯಕ್ಷ ಬಿ.ಎಂ ಶಾಂತಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜೋನಲ್ ಲೆಫ್ಟಿನೆಂಟ್ ಡಾ. ಕೆ ನಾಗರಾಜ್, ಪ್ರಮುಖರಾದ ಕೆ.ಬಿ ಪ್ರಭಾಕರ ಬೀರಯ್ಯ, ತೀರ್ಥಯ್ಯ, ಪಿ.ಸಿ ಜೈನ್, ಅಡವೀಶಯ್ಯ, ರಾಘವೇಂದ್ರ ಉಪಾಧ್ಯಾಯ, ಸುಂದರ್ ಬಾಬು, ದುಷ್ಯಂತ್‌ರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಶಾಂತಿಬಾಯಿ ನಿಧನ

ಶಾಂತಿಬಾಯಿ
ಭದ್ರಾವತಿ, ಸೆ. ೧೦: ನಗರದ ಹಾಲಪ್ಪ ವೃತ್ತದಲ್ಲಿರುವ ಗೌತಮ್ ಸೈಕಲ್ ಸ್ಟೋರ್ ಮಾಲೀಕ ಲಲಿತ್‌ಕುಮಾರ್ ಜೈನ್‌ರವರ ತಾಯಿ ಶಾಂತಿಬಾಯಿ(೮೦) ಗುರುವಾರ ನಿಧನ ಹೊಂದಿದರು.
      ೪ ಹೆಣ್ಣು, ೨ ಗಂಡು ಮಕ್ಕಳು, ಮೊಮ್ಮಕ್ಕಳು, ಸೊಸೆ ಹಾಗು ಅಳಿಯಂದಿರನ್ನು ಹೊಂದಿದ್ದರು. ಮಧ್ಯಾಹ್ನ ನಗರದ ಜೈನ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನೆರವೇರಿತು. ಹಳೇನಗರದ ಭೂತನಗುಡಿಯಲ್ಲಿ ವಾಸವಾಗಿದ್ದ ಶಾಂತಿಬಾಯಿಯವರು ಜೈನ ಧರ್ಮದ ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳುವ ಜೊತೆಗೆ ಚಾತುರ್ಮಾಸ ಅವಧಿಯಲ್ಲಿ ಉಪವಾಸ ವ್ರತ ಕೈಗೊಳ್ಳುತ್ತಿದ್ದರು.
     ಮೃತರ ನಿಧನಕ್ಕೆ ನಗರದ ಜೈನ ಸಮಾಜ, ರೋಟರಿ ಕ್ಲಬ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.

ಗವಿರಂಗಯ್ಯ ನಿಧನ

ಗವಿರಂಗಯ್ಯ
ಭದ್ರಾವತಿ, ಸೆ. ೧೦: ಹಳೇನಗರದ ಮಹಿಳಾ ಸೇವಾ ಸಮಾಜದ ಉಪಾಧ್ಯಕ್ಷೆ ಕಮಲ ಕುಮಾರಿಯವರ ಪತಿ ಗವಿರಂಗಯ್ಯ(೬೯) ನಿಧನ ಹೊಂದಿದರು.
      ಪತ್ನಿ, ಓರ್ವ ಪುತ್ರಿ, ಇಬ್ಬರು ಪುತ್ರರು, ಸೊಸೆಯಂದಿರು, ಮೊಕ್ಕಳನ್ನು ಹೊಂದಿದ್ದರು.  ಗವಿರಂಗಯ್ಯ ಸಹಾಯಕ ಕೃಷಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು. ಇವರ ಅಂತ್ಯಕ್ರಿಯೆ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಗುರುವಾರ ನೆರವೇರಿತು.
    ಇವರ ನಿಧನಕ್ಕೆ ಮಹಿಳಾ ಸೇವಾ ಸಮಾಜ ಸೇರಿದಂತೆ ಇನ್ನಿತರ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.