Saturday, September 12, 2020

ಅಪ್ಪಾಜಿ ಎಂಬ ಆಕಾಶ... ಕತ್ತಲಿನಿಂದ ಬೆಳಕಿನೆಡೆಗೆ.

..
* ಅನಂತಕುಮಾರ್
ಹೌದು.. ಭದ್ರಾವತಿ ಕ್ಷೇತ್ರದ ಜನತೆಯ ಪಾಲಿಗೆ ಅಪ್ಪಾಜಿ ಎಂದಿಗೂ ಆಕಾಶ.  ಅಪ್ಪ ಎಂಬ ಮತ್ತೊಂದು ಹೆಸರು ಆಕಾಶ. ಮಕ್ಕಳ ಪಾಲಿಗೆ ಅಪ್ಪನಂತೆ ಕ್ಷೇತ್ರದ ಜನತೆಯ ಪಾಲಿಗೆ ಅಪ್ಪಾಜಿ ಕಂಡು ಬರುತ್ತಿದ್ದರು. ಕೇವಲ ರಾಜಕಾರಣಿಯಾಗಿ ಮಾತ್ರವಲ್ಲ, ಹೃದಯ ಶ್ರೀಮಂತಿಕೆಯ ವ್ಯಕ್ತಿಯಾಗಿ ಕಂಡು ಬರುತ್ತಿದ್ದರು. ಕ್ಷೇತ್ರದ ಜನರ ನೋವು-ನಲಿವುಗಳಿಗೆ ಸ್ಪಂದಿಸುವ ಜೊತೆಗೆ ಅವರೊಟ್ಟಿಗೆ ನಾನು ಒಬ್ಬ ಎಂಬ ನಂಬಿಕೆ ಮೇಲೆ ಬೆಳೆದು ಬಂದವರು. ಈ ಹಿನ್ನಲೆಯಲ್ಲಿ ಜನಮಾನಸದಲ್ಲಿ ಅಚ್ಚಳಿಯದಂತೆ ಉಳಿದುಕೊಂಡಿದ್ದಾರೆ.
        ಚುನಾವಣೆ ಎಂದರೆ ಕೇವಲ ಹಣ, ಜಾತಿ ಬಲದ ಮೇಲೆ ನಡೆಯುವ ಸ್ಪರ್ಧೆ ಎಂಬ ಕಾಲಘಟ್ಟದಲ್ಲಿ ಕೇವಲ ಸಾಮಾನ್ಯ ಕಾರ್ಮಿಕನಾಗಿ ದುಡಿಯುತ್ತಿದ್ದ ಅಪ್ಪಾಜಿ ಜನರ ಮೇಲೆ ವಿಶ್ವಾಸವಿಟ್ಟು ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದವರು. ಈ ಹಿನ್ನಲೆಯಲ್ಲಿ ಅವರು ಯಾವಾಗಲೂ ಸಭೆ, ಸಮಾರಂಭಗಳಲ್ಲಿ ತಮ್ಮ ಭಾಷಣದಲ್ಲಿ  'ನಾನು ಕಳೆದುಕೊಂಡಿದ್ದು ಏನು ಇಲ್ಲ, ಸಂಪಾದಿಸಿದ್ದು ಏನು ಇಲ್ಲ, ಕಳೆದು ಕೊಳ್ಳುವುದಾದರೆ ಅದು ಜನರ ವಿಶ್ವಾಸ ಮಾತ್ರ. ಆದರೆ ಕ್ಷೇತ್ರದ ಜನರು ಎಂದಿಗೂ ನನ್ನನ್ನು ಕೈಬಿಡುವುದಿಲ್ಲ' ಎಂಬ ಮಾತುಗಳನ್ನು ಹೇಳುತ್ತಿದ್ದರು. ಅಪ್ಪಾಜಿಯವರ ಮಾತು ೧೦೦ಕ್ಕೆ ೧೦೦ ಸತ್ಯ. ಅವರು ೩ ಬಾರಿ ನಿರಾಳವಾಗಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರವೂ ಚುನಾವಣೆ ಸ್ಪರ್ಧಿಸುವ ಉತ್ಸಾಹ ಹೆಚ್ಚಿಸಿಕೊಂಡಿದ್ದರು. ಸೋಲಿನಿಂದ ಎಂದಿಗೂ ಹತಾಶರಾಗಿರಲಿಲ್ಲ. ಸೋತಾಗ, ಗೆದ್ದಾಗ ಜನರ ಸಮಸ್ಯೆಗಳಿಗೆ ಒಂದೇ ರೀತಿಯಲ್ಲಿ ಸ್ಪಂದಿಸುತ್ತಿದ್ದರು. ಒಕ್ಕಲಿಗ ಸಮುದಾಯಕ್ಕೆ ಸೇರಿದ್ದರೂ ಸಹ ಹಿಂದುಳಿದ, ಅಲ್ಪಸಂಖ್ಯಾತ, ದಲಿತ ಸಮುದಾಯಗಳ ಮೇಲೆ ಹೆಚ್ಚಿನ ಪ್ರೀತಿ ಹೊಂದಿದ್ದರು. ಕ್ಷೇತ್ರದಲ್ಲಿ ತಮ್ಮದೇ ಆದ ವರ್ಚಸ್ಸು, ಮತ ಬ್ಯಾಂಕ್, ಅಭಿಮಾನಿ ಬಳಗ ಹೊಂದಿದ್ದರು.  ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಕತ್ತಲಿನಿಂದ ಕ್ಷೇತ್ರದ ಜನತೆಯನ್ನು ಬೆಳಕಿನೆಡೆಗೆ ಕೊಂಡೊಯ್ದಿದ್ದರು. ಇವರನ್ನು ಕಳೆದುಕೊಂಡಿರುವುದು ಕ್ಷೇತ್ರದ ಜನತೆಗೆ ಆಕಾಶವೇ ಕಳಚಿ ಬಿದ್ದಂತಾಗಿದೆ.
        

        ಅಪ್ಪಾಜಿಯೇ ಸ್ಟಾರ್...
      ಅಪ್ಪಾಜಿ ಅಧಿಕಾರದ ಹಿಂದೆ ಹೋದವರಲ್ಲ. ಈ ಹಿನ್ನಲೆಯಲ್ಲಿ ಎಂದಿಗೂ ಅವಕಾಶ ರಾಜಕಾರಣ ಮಾಡಲಿಲ್ಲ. ಜಿಲ್ಲಾಮಟ್ಟದಲ್ಲಿ, ರಾಜ್ಯಮಟ್ಟದಲ್ಲಿ ಹಾಗು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಬೇಕೆಂಬ ಹಂಬಲಕ್ಕೂ ಬಿದ್ದವರಲ್ಲ. ಕ್ಷೇತ್ರದ ಮಟ್ಟಿಗೆ ಅವರೊಬ್ಬರೇ ಸ್ಟಾರ್.  ಅಪ್ಪಾಜಿಗೆ ರಾಜಕೀಯವಾಗಿ ಯಾರು ಸಹ ಗಾಡ್‌ಫಾದರ್ ಇಲ್ಲ. ಇದೆ ರೀತಿ ಕ್ಷೇತ್ರದ ಜನತೆಗೂ ಅಪ್ಪಾಜಿ ಬಿಟ್ಟು ಬೇರೆ ರಾಜಕಾರಣಿಗಳ ಮೇಲೆ ಒಲವಿರಲಿಲ್ಲ. 'ಮುಖ್ಯಮಂತ್ರಿ, ಸಚಿವರು, ಸಂಸದರು ಸೇರಿದಂತೆ ಎಲ್ಲರಿಗಿಂತ ಅಪ್ಪಾಜಿಯೇ ನಮಗೆ ಮುಖ್ಯ. ಏಕೆಂದರೆ ಸ್ಥಳೀಯವಾಗಿ ನಮ್ಮ ಜೊತೆ ಸದಾ ಕಾಲ ಇದ್ದು, ನಮ್ಮ ನೋವು ನಲಿವುಗಳಿಗೆ ಸ್ಪಂದಿಸುವವರು ಅಪ್ಪಾಜಿ ಮಾತ್ರ. ಈ ಹಿನ್ನಲೆಯಲ್ಲಿ ಅವರೇ ನಮಗೆ ಸ್ಟಾರ್ ನಾಯಕ' ಎಂಬುದು ಕೆಲವರ ಅಭಿಮಾನದ ಮಾತುಗಳಾಗಿವೆ.
         ಇದಕ್ಕೆ ಪೂರಕ ಎಂಬಂತೆ ಅಪ್ಪಾಜಿ ಸಹ ಚುನಾವಣೆ ಸಂದರ್ಭದಲ್ಲಿ ಇತರೆ ರಾಜಕಾರಣಿಗಳಂತೆ ಸ್ಟಾರ್ ನಾಯಕರ ಮೊರೆ ಹೋಗಿರಲಿಲ್ಲ. ಯಾರನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸುತ್ತಿರಲಿಲ್ಲ. ಈ ಹಿನ್ನಲೆಯಲ್ಲಿ ಅಪ್ಪಾಜಿ ಕ್ಷೇತ್ರದ ಮಟ್ಟಿಗೆ ಒಬ್ಬ ವಿಶಿಷ್ಟ ರಾಜಕಾರಣಿಯಾಗಿ ಗುರುತಿಸಲ್ಪಡುತ್ತಾರೆ.  
           ೩ ದಶಕಗಳ ಪ್ರಬಲ ಪ್ರತಿಸ್ಪರ್ಧಿ:
        ಅಪ್ಪಾಜಿ ಕ್ಷೇತ್ರದ ಮಟ್ಟಿಗೆ ೩ ದಶಕಗಳ ಪ್ರಬಲ ಪ್ರತಿಸ್ಪರ್ಧಿಯಾಗಿ ಗಮನ ಸೆಳೆದಿದ್ದರು. ಪ್ರತಿಸ್ಪರ್ಧಿ ಇಲ್ಲದ ರಾಜಕಾರಣ ಎಂದಿಗೂ ರಾಜಕಾರಣವಲ್ಲ. ರಾಜಕೀಯವಾಗಿ ಶಾಸಕ ಬಿ.ಕೆ ಸಂಗಮೇಶ್ವರ್ ವಿರುದ್ಧ ಪ್ರಬಲ ಪ್ರತಿಸ್ಪರ್ಧಿಯಾಗಿದ್ದವರು ಅಪ್ಪಾಜಿ ಮಾತ್ರ. ಸದ್ಯದ ಮಟ್ಟಿಗೆ ಇವರ ಹೊರತಾಗಿ ಯಾರನ್ನು ಸಹ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಎಲ್ಲಾ ಸವಾಲುಗಳನ್ನು ಯಾವುದೇ ಸಂದರ್ಭದಲ್ಲಿ ಸ್ವೀಕರಿಸುವ ಎದೆಗಾರಿಕೆ ಅಪ್ಪಾಜಿಯವರದ್ದು. ಕ್ಷೇತ್ರದ ಅಭಿವೃದ್ಧಿ ವಿಚಾರಗಳು, ಭ್ರಷ್ಟಾಚಾರ, ದೌರ್ಜನ್ಯ, ದಬ್ಬಾಳಿಕೆ ಪರವಾಗಿ ಎಂದಿಗೂ ರಾಜಿ ಮಾಡಿಕೊಂಡವರಲ್ಲ.
       ಜೆಡಿಎಸ್ ಪಕ್ಷಕ್ಕೆ ಶಕ್ತಿ ತುಂಬಿದ ನಾಯಕ:
ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಮತಗಳೊಂದಿಗೆ ೩ನೇ ಬಾರಿಗೆ ಆಯ್ಕೆಯಾಗಿದ್ದ ಅಪ್ಪಾಜಿ ಜಿಲ್ಲೆಯಲ್ಲಿ ಪಕ್ಷಕ್ಕೆ ಶಕ್ತಿಯಾಗಿ ರೂಪುಗೊಂಡಿದ್ದರು. ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾರಣಕರ್ತರಾಗಿದ್ದರು. ಶಾಸಕರಾಗಿ ಆಯ್ಕೆಯಾಗದಿದ್ದರೂ ತಮ್ಮ ಪ್ರಭಾವ ಏನೆಂಬುದನ್ನು ಎದುರಾಳಿಗಳಿಗೆ ತೋರಿಸಿ ಕೊಟ್ಟಿದ್ದರು.
      ಕಠಿಣ ಹೋರಾಟಗಳು:
    ಅಪ್ಪಾಜಿ ಯಾವುದೇ ರೀತಿಯ ಹೋರಾಟಕ್ಕೂ ಸಿದ್ದರಾಗಿದ್ದರು. ಬಿಸಿಲು, ಮಳೆ, ಚಳಿ, ಗಾಳಿ ಯಾವುದಕ್ಕೂ ಜಗ್ಗದೆ ಕಾರ್ಮಿಕರ ಪರ, ರೈತರ ಪರ, ದಲಿತರ ಪರ, ಶೋಷಿತರ ಪರ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಹಲವು ಬಾರಿ ಅನಿಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಸೇರಿದಂತೆ ಕಠಿಣ ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ತಮ್ಮ ಆರೋಗ್ಯವನ್ನು ಸಹ ಲೆಕ್ಕಿಸುತ್ತಿರಲಿಲ್ಲ. ಇಂತಹ ಹೋರಾಟಗಾರರು ಸಿಗುವುದೇ ಅಪರೂಪ .


ವಿವಿಧೆಡೆ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಶ್ರದ್ದಾಂಜಲಿ ಸಭೆ

 ಭದ್ರಾವತಿ, ಸೆ. ೧೨:  ಇತ್ತೀಚೆಗೆ ನಿಧನ ಹೊಂದಿದ ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರಿಗೆ ನಗರದ ವಿವಿಧೆಡೆ ಶ್ರದ್ದಾಂಜಲಿ ಸಭೆ ಹಮ್ಮಿಕೊಳ್ಳುವ ಮೂಲಕ ಸಂತಾಪದೊಂದಿಗೆ ಗೌರವ ಸೂಚಿಸಲಾಯಿತು.
ತಾಲೂಕಿನ ಶಂಕರಘಟ್ಟದಲ್ಲಿ ಎಂ.ಜೆ ಅಪ್ಪಾಜಿ ಗೌಡರ ಅಭಿಮಾನಿ ಬಳಗ ಹಾಗು ಗ್ರೀನ್ ಫೌಂಡೇಷನ್ ವತಿಯಿಂದ ಸಸಿ ನೆಡುವ ಮತ್ತು ವಿತರಿಸುವ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು. ಜಿಲ್ಲಾ ಪಂಚಾಯಿತಿ ಸದಸ್ಯ ಎಸ್. ಮಣಿಶೇಖರ್ ಸೇರಿದಂತೆ ಅಭಿಮಾನಿ ಬಳಗ ಹಾಗು ಗ್ರೀನ್ ಫೌಂಡೇಷನ್‌ನ ಅಧ್ಯಕ್ಷರು, ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
ತಾಲೂಕು ಒಕ್ಕಲಿಗರ ಮಹಿಳಾ ವೇದಿಕೆ ವತಿಯಿಂದ ಅಪ್ಪರ್ ಹುತ್ತಾದಲ್ಲಿರುವ ಒಕ್ಕಲಿಗರ ಸಮುದಾಯ ಭವನದಲ್ಲಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಅಪ್ಪಾಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೌನಾಚರಣೆ ನಡೆಸುವ ಮೂಲಕ ಗೌರವ ಸೂಚಿಸಲಾಯಿತು. ವೇದಿಕೆ ಅಧ್ಯಕ್ಷೆ ಅನ್ನಪೂರ್ಣ ಸತೀಶ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಶ್ರೀ ಮೈಸೂರು ಕಾಗದ ಕಾರ್ಖಾನೆ ನೌಕರರ ಸಂಘದ ವತಿಯಿಂದ ಕಾಗದನಗರದ ವನಿತಾ ಸಮಾಜದ ಕಟ್ಟಡದಲ್ಲಿರುವ ಸಂಘದ ಕಛೇರಿಯಲ್ಲಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರ ಶ್ರದ್ದಾಂಜಲಿ ಸಭೆ ನಡೆಯಿತು.
ಸಂಘದ ಅಧ್ಯಕ್ಷ ಎಸ್. ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ನಗರದ ಹಿಂದೂ ಪಡೆ ವತಿಯಿಂದ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ನಿವಾಸಕ್ಕೆ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸೂಚಿಸಲಾಯಿತು.
ನಗರಸಭಾ ಸದಸ್ಯ, ಅಪ್ಪಾಜಿ ಪುತ್ರ ಎಂ.ಎ ಅಜಿತ್‌ರವರಿಗೆ ಸಾಂತ್ವಾನ ಹೇಳುವ ಮೂಲಕ ಕುಟುಂಬ ವರ್ಗಕ್ಕೆ, ಕಾರ್ಯಕರ್ತರಿಗೆ ಹಾಗು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲೆಂದು ಪ್ರಾರ್ಥಿಸಲಾಯಿತು.
ಚಿತ್ರ: ಡಿ೧೨-ಬಿಡಿವಿಟಿ೬
ಭದ್ರಾವತಿ ಶಂಕರಘಟ್ಟದಲ್ಲಿ ಎಂ.ಜೆ ಅಪ್ಪಾಜಿ ಸ್ಮರಣಾರ್ಥ ಸಸಿಗಳನ್ನು ನೆಡುವ ಹಾಗು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಚಿತ್ರ: ಡಿ೧೨-ಬಿಡಿವಿಟಿ೭
ಭದ್ರಾವತಿ ತಾಲೂಕು ಒಕ್ಕಲಿಗರ ಮಹಿಳಾ ವೇದಿಕೆ ವತಿಯಿಂದ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಶ್ರದ್ದಾಂಜಲಿ ಸಭೆ ಜರುಗಿತು.

ಚಿತ್ರ: ಡಿ೧೨-ಬಿಡಿವಿಟಿ೮
ಭದ್ರಾವತಿ ಶ್ರೀ ಮೈಸೂರು ಕಾಗದ ಕಾರ್ಖಾನೆ ನೌಕರರ ಸಂಘದ ವತಿಯಿಂದ ಕಾಗದನಗರದ ವನಿತಾ ಸಮಾಜದ ಕಟ್ಟಡದಲ್ಲಿರುವ ಸಂಘದ ಕಛೇರಿಯಲ್ಲಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರ ಶ್ರದ್ದಾಂಜಲಿ ಸಭೆ ನಡೆಯಿತು.

ಚಿತ್ರ: ಡಿ೧೨-ಬಿಡಿವಿಟಿ೯
ಭದ್ರಾವತಿಯಲ್ಲಿ ಹಿಂದೂ ಪಡೆ ವತಿಯಿಂದ ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸೂಚಿಸಲಾಯಿತು.


ಧನಂಜಯ ನಿಧನ

ಧನಂಜಯ
ಭದ್ರಾವತಿ, ಸೆ. ೧೨: ನಗರದ ಮೈಸೂರು ಕಾಗದ ಕಾರ್ಖಾನೆಯ ನೌಕರರ ಧನಂಜಯ(೪೨) ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.
     ಪತ್ನಿ, ಓರ್ವ ಪುತ್ರ ಹೊಂದಿದ್ದು, ಕಾಗದನಗರದ ೧ನೇ ವಾರ್ಡ್‌ನ ಕಾರ್ಖಾನೆಯ ವಸತಿ ಗೃಹದಲ್ಲಿ ವಾಸಿಸುತ್ತಿದ್ದರು. ಎಂಪಿಎಂ ಕಾರ್ಖಾನೆಯ ಟಿ.ಜಿ ಹೌಸ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಧನಂಜಯ ಅವರನ್ನು ವಾರ್ತಾ ಇಲಾಖೆಯ ಬಳ್ಳಾರಿ ಕಛೇರಿಯ ಎಂಸಿಎ(ಮಾರ್ಕೇಟಿಂಗ್ ಕನ್ಸಲ್ಟೆನ್ಸಿ ಏಜೆನ್ಸಿ) ವಿಭಾಗದಲ್ಲಿ ನಿಯೋಜನೆ ಮೇಲೆ ನೇಮಕಗೊಳಿಸಲಾಗಿತ್ತು.
    ದ್ವಿಚಕ್ರವಾಹನದಲ್ಲಿ ಭದ್ರಾವತಿ ಬರುವಾಗ ಚಿತ್ರದುರ್ಗದ ಹೊಳಲ್ಕೆರೆ ಬಳಿ ಅಘಘಾತಗೊಂಡು ಮೃತಪಟ್ಟಿದ್ದಾರೆ. ಮೃತರ ನಿಧನಕ್ಕೆ ಎಂಪಿಎಂ ಕಾರ್ಮಿಕರು ಸಂತಾಪ ಸೂಚಿಸಿದ್ದಾರೆ.

ದೇವಿರಮ್ಮ ನಿಧನ

ದೇವಿರಮ್ಮ
ಭದ್ರಾವತಿ, ಸೆ. ೯: ನ್ಯಾಯವಾದಿ ಎ.ಎಸ್ ಕುಮಾರ್‌ರವರ ತಾಯಿ, ನಗರದ ಅಪ್ಪರ್ ಹುತ್ತಾ ನಿವಾಸಿ ದೇವಿರಮ್ಮ (೭೬) ಶನಿವಾರ ಬೆಳಿಗ್ಗೆ ನಿಧನ ಹೊಂದಿದರು.
        ದೇವಿರಮ್ಮ ಎ.ಎಸ್ ಕುಮಾರ್ ಹಾಗು ೩ ಹೆಣ್ಣು ಮಕ್ಕಳು ಮತ್ತು ಮೊಕ್ಕಳನ್ನು ಹೊಂದಿದ್ದರು. ಮೃತರ ಅಂತ್ಯಕ್ರಿಯೆ ಸಂಜೆ ಲೋಯರ್ ಹುತ್ತಾದಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು.
        ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಸಿದ್ದಲಿಂಗಯ್ಯ, ಪ್ರಮುಖರಾದ ಎಸ್ ವಾಗೀಶ್, ಅಡವೀಶಯ್ಯ,  ಆರ್ ಮಹೇಶ್ ಕುಮಾರ್  ಜಿ.ಡಿ ನಟರಾಜ್,  ರವಿಕುಮಾರ್ ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.

ಸೆ.೧೪ರಂದು ಪ್ರತಿಭಟನೆ

ಭದ್ರಾವತಿ, ಸೆ. ೧೨: ಸಾಮಾಜಿಕ ಹೋರಾಟಗಾರ ಹಾಗೂ ಪ್ರಗತಿಪರ ಚಿಂತಕ ಕೆ.ಎಲ್  ಅಶೋಕ್‌ರವರನ್ನು ಕ್ಷುಲ್ಲಕ ಕಾರಣಕ್ಕೆ ಅವಮಾನಿಸಿ ಕಿರುಕುಳ ನೀಡಿದ ಕೊಪ್ಪ ಪೊಲೀಸರನ್ನು ತಕ್ಷಣ ಅಮಾನತುಗೊಳಿಸಲು ಆಗ್ರಹಿಸಿ ನಗರದ ಪ್ರಗತಿಪರ ಸಂಘನೆಗಳ ವತಿಯಿಂದ ಸೆ.೧೪ರಂದು ಬೆಳಿಗ್ಗೆ ೧೦ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
     ಅಂಡರ್‌ಬ್ರಿಡ್ಜ್ ಬಳಿ ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ನಂತರ ಮೆರವಣಿಗೆ ಮೂಲಕ ತಹಸೀಲ್ದಾರ್ ಕಛೇರಿ ತಲುಪಿ ಮನವಿ ಸಲ್ಲಿಸಲಾಗುವುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.


ಅಡುಗೆ ಅನಿಲ ಸೋರಿಕೆ : ಗೃಹ ಬಳಕೆ ವಸ್ತುಗಳು ಭಸ್ಮ


ಭದ್ರಾವತಿ, ಸೆ. ೧೨:  ಅಡುಗೆ ಮಾಡುವಾಗ ಅನಿಲ ಸೋರಿಕೆಯಾದ ಪರಿಣಾಮ ಬೆಂಕಿ ಹತ್ತಿಕೊಂಡು ಗೃಹ ಬಳಕೆ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ಹುತ್ತಾಕಾಲೋನಿ ಮನೆಯೊಂದರಲ್ಲಿ ನಡೆದಿದೆ.
       ಹುತ್ತಾಕಾಲೋನಿ ಡಿಡಬ್ಲ್ಯೂ.ಸಿ-೩೫ ರಲ್ಲಿ ವಾಸವಾಗಿರುವ ಕಾಳಯ್ಯ ಎಂಬುವರ ಮನೆಯಲ್ಲಿ ಘಟನೆ ಸಂಭವಿಸಿದ್ದು, ಏಕಾಏಕಿ ಗ್ಯಾಸ್ ಸೋರಿಕೆಯಾಗಿ ಬೆಂಕಿ ಹತ್ತಿಕೊಂಡಿದೆ. ತಕ್ಷಣ ಎಚ್ಚೆತ್ತುಕೊಂಡ ಮನೆಯಲ್ಲಿದ್ದವರು ಹೊರಗೆ ಬಂದಿದ್ದು, ಯಾವುದೇ ಜೀವ ಹಾನಿ ಸಂಭವಿಸಿಲ್ಲ.
       ಅಗ್ನಿ ಶಾಮಕ ಠಾಣಾಧಿಕಾರಿ ವಸಂತಕುಮಾರ್ ನೇತೃತ್ವದಲ್ಲಿ ಅಗ್ನಿ ಶಾಮಕ ಸಿಬ್ಬಂದಿಗಳಾದ ಯೋಗೇಂದ್ರ, ಚಾಲಕ ಸುರೇಶಾಚಾರ್, ಡಿ.ಎನ್ ಸುರೇಶ್, ಮಹೇಂದ್ರ, ರಾಜಾನಾಯ್ಕ್ ಘಟನಾ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವ ಮೂಲಕ  ಸಂಭವಿಸಬಹುದಾದ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.             ಆದರೆ  ಬೆಂಕಿಯ ಕೆನ್ನಾಲಿಗೆಗೆ ಟಿವಿ, ರೆಫ್ರಿಜರೇಟರ್ ಸೇರಿದಂತೆ  ಹಲವಾರು ವಸ್ತುಗಳು ಸುಟ್ಟು ಕರಕಲಾಗಿವೆ.  ಈ ಕುರಿತು ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೆ.೧೩ರಂದು ಅಪ್ಪಾಜಿ ಶ್ರದ್ದಾಂಜಲಿ ಕಾರ್ಯಕ್ರಮ

ಎಂ.ಜೆ ಅಪ್ಪಾಜಿ
ಭದ್ರಾವತಿ, ಸೆ. ೧೨: ಕ್ಷೇತ್ರದ ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರ ಭಾವಪೂರ್ಣ ಶ್ರದ್ದಾಂಜಲಿ ಕಾರ್ಯಕ್ರಮ ನ್ಯೂಟೌನ್ ಚರ್ಚ್ ಮೈದಾನದಲ್ಲಿ ಸೆ.೧೩ರ ಭಾನುವಾರ ಬೆಳಿಗ್ಗೆ ೧೦.೩೦ಕ್ಕೆ ಹಮ್ಮಿಕೊಳ್ಳಲಾಗಿದೆ.
        ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದು, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ.
       ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಕಾರ್ಯದರ್ಶಿ ಶ್ರೀ ಪ್ರಸನ್ನನಾಥಸ್ವಾಮೀಜಿ, ಶಿವಮೊಗ್ಗ ಬಸವಕೇಂದ್ರದ ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ, ಹೊಸದುರ್ಗ ಕನಕಪೀಠದ ಶ್ರೀ ಈಶ್ವರಾನಂದ ಸ್ವಾಮೀಜಿ, ಚಿತ್ರದುರ್ಗದ ಛಲವಾದಿ ಜಗದ್ಗುರು ಶ್ರೀ ಬಸವನಾಗಿದೇವ ಶರಣರು, ಚಿತ್ರದುರ್ಗ ಬಂಜಾರ ಪೀಠದ ಶ್ರೀ ಸರದಾರ ಸೇವಲಾಲ ಸ್ವಾಮೀಜಿ, ಹರಿಹರ ವಾಲ್ಮೀಕಿ ಗುರುಪೀಠದ ಶ್ರೀ ಮಹರ್ಷಿ ವಾಲ್ಮೀಕಿ ಪ್ರಸನ್ನಾಂದ ಸ್ವಾಮೀಜಿ, ಸಿಎಸ್‌ಐ ವೇನ್ಸ್ ಮೆಮೊರಿಯಲ್ ಚರ್ಚ್ ಶಿವಮೊಗ್ಗ ವಲಯಾಧ್ಯಕ್ಷ ರೆವರೆಂಡ್ ಜಿ. ಸ್ಟ್ಯಾನ್ಲಿ ಮತ್ತು ಶಿವಮೊಗ್ಗ ದಾರುಲ್ ಇ-ಹಸನ್ ಮದರಸ ಪ್ರಿನ್ಸಿಪಲ್ ಮೌಲಾನ ಶಾಹುಲ್ ಹಮೀದ್ ಉಪಸ್ಥಿತರಿರುವರು.
        ಚುನಾಯಿತ ಪ್ರತಿನಿಧಿಗಳು, ವಿವಿಧ ಸಮಾಜ ಹಾಗೂ ಸಂಘ-ಸಂಸ್ಥೆಗಳ ಹಾಗು ರಾಜಕೀಯ ಪಕ್ಷಗಳ ಮುಖಂಡರು ಪಾಲ್ಗೊಳ್ಳಲಿದ್ದಾರೆ.