ಶಶಿಕುಮಾರ್ ಎಸ್ ಗೌಡ
ಭದ್ರಾವತಿ, ಮಾ. ೮: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸೋಮವಾರ ಮಂಡಿಸಿದ ೮ನೇ ಬಜೆಟ್ ತಾಲೂಕಿನ ಮಟ್ಟಿಗೆ ಶೂನ್ಯ ಬಜೆಟ್ ಆಗಿದ್ದು, ಕ್ಷೇತ್ರದ ಜನರು ಹೊಂದಿದ್ದ ಹಲವು ನಿರೀಕ್ಷೆಗಳು ಹುಸಿಯಾಗಿವೆ ಎಂದು ಬಜೆಟ್ ಕುರಿತು ವಿವಿಧ ರಾಜಕೀಯ ಪಕ್ಷಗಳ, ಸಂಘ-ಸಂಸ್ಥೆಗಳ ಪ್ರಮುಖರು ಟೀಕಿಸಿದ್ದಾರೆ.
ಉಕ್ಕಿನ ನಗರಕ್ಕೆ ಶೂನ್ಯ ಕೊಡುಗೆ ಬಜೆಟ್:
ಜೆಡಿಎಸ್ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್ ಗೌಡ ಬಜೆಟ್ ಕುರಿತು ಪತ್ರಿಕೆಗೆ ಪ್ರತಿಕ್ರಿಯಿಸಿ ಪ್ರಮುಖವಾಗಿ ಎಂಪಿಎಂ ಕಾರ್ಖಾನೆ ಕುರಿತು ಯಾವುದೇ ಪ್ರಸ್ತಾಪ ಮಾಡದಿರುವುದು ಹಾಗು ಕ್ಷೇತ್ರದ ಮಟ್ಟಿಗೆ ಯಾವುದೇ ಹೊಸ ಯೋಜನೆಗಳನ್ನು ಜಾರಿಗೊಳಿಸುವ ಸಂಬಂಧ ಘೋಷಣೆ ಮಾಡಿಲ್ಲ. ೮ನೇ ಬಜೆಟ್ ಸಹ ಕ್ಷೇತ್ರಕ್ಕೆ ಶೂನ್ಯ ಕೊಡುಗೆ ನೀಡಿದೆ ಎಂದು ಟೀಕಿಸಿದ್ದಾರೆ.
ಎಚ್. ರವಿಕುಮಾರ್
ಉದ್ಯೋಗ ಸೃಷ್ಟಿ ಇಲ್ಲದ ನಿರಾಶದಾಯಕ ಬಜೆಟ್:
ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ಪ್ರತಿಕ್ರಿಯಿಸಿ ಸುಮಾರು ೫ ವರ್ಷಗಳಿಂದ ಸ್ಥಗಿತಗೊಂಡಿರುವ ಮೈಸೂರು ಕಾಗದ ಕಾರ್ಖಾನೆಗೆ ಈ ಬಾರಿ ಬಜೆಟ್‌ನಲ್ಲಿ ಕನಿಷ್ಠ ಬಂಡವಾಳ ಹೂಡುವ ಮೂಲಕ ಆರಂಭಿಸಬಹುದೆಂಬ ನಿರೀಕ್ಷೆಯನ್ನು ಕಾರ್ಮಿಕ ಕುಟುಂಬಗಳು ಹೊಂದಿದ್ದವು. ಆದರೆ ನಿರೀಕ್ಷೆ ಹುಸಿಯಾಗಿದೆ. ಅಲ್ಲದೆ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಸುವ ಯಾವುದೇ ಯೋಜನೆಗಳನ್ನು ಘೋಷಿಸಿಲ್ಲ. ಅದರಲ್ಲೂ ಯುವ ಸಮುದಾಯದ ಪಾಲಿಗೆ ಈ ಬಾರಿ ಬಜೆಟ್ ನಿರಾಶದಾಯಕ ಬಜೆಟ್ ಆಗಿದೆ ಎಂದು ಟೀಕಿಸಿದ್ದಾರೆ.
ಬಿ.ಎನ್ ರಾಜು
ಅಂಬೇಡ್ಕರ್ ಭವನ ಕಾಮಗಾರಿಗೆ ಅನುದಾನ ನೀಡದ ಬಜೆಟ್:
ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಬಜೆಟ್ ಕುರಿತು ಪ್ರತಿಕ್ರಿಯಿಸಿ ನಗರದಲ್ಲಿ ನೆನೆಗುದಿಗೆ ಬಿದ್ದಿರುವ ಅಂಬೇಡ್ಕರ್ ಭವನ ಕಾಮಗಾರಿಗೆ ಈ ಬಜೆಟ್‌ನಲ್ಲಿ ಹಣ ಬಿಡುಗಡೆಗೊಳಿಸುವಂತೆ ಹಲವಾರು ಹೋರಾಟ ನಡೆಸಲಾಗಿತ್ತು. ಅಲ್ಲದೆ ತಾಲೂಕು ಆಡಳಿತ, ಜಿಲ್ಲಾಡಳಿತ ಹಾಗು ಮುಖ್ಯಮಂತ್ರಿಗಳಿಗೆ ಮತ್ತು ಸಂಸದರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿತ್ತು. ಆದರೂ ಸಹ ಹಣ ಬಿಡುಗಡೆಗೊಳಿಸಿಲ್ಲ. ಈ ಸಂಬಂಧ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದ್ದಾರೆ.
ಡಾ.ಬಿ.ಎಂ ನಾಸಿರ್‌ಖಾನ್
ಮಹಿಳೆಯರಿಗೆ ಹೆಚ್ಚಿನ ಆದ್ಯತೆ :
ಬಜೆಟ್ ಕುರಿತು ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಥಮಿಕ ಡಾ.ಬಿ.ಎಂ ನಾಸಿರ್‌ಖಾನ್ ಪ್ರತಿಕ್ರಿಯಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಸೋಮವಾರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಮಂಡಿಸಿರುವ ಬಜೆಟ್‌ನಲ್ಲಿ ಈ ಬಾರಿ ಮಹಿಳೆಯರಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿರುವುದು ವಿಶೇಷವಾಗಿದೆ. ಆದರೆ ರೈತರು, ಕಾರ್ಮಿಕರು, ಸರ್ಕಾರಿ ನೌಕರರು ಹಾಗು ಶ್ರೀಸಾಮಾನ್ಯರ ಹಲವು ನಿರೀಕ್ಷೆಗಳು ಬಜೆಟ್‌ನಲ್ಲಿ ಹುಸಿಯಾಗಿವೆ. ಈ ನಡುವೆಯೂ ಕೊರೋನಾ ಸಂಕಷ್ಟದಲ್ಲೂ ಎಲ್ಲರನ್ನು ಸಂತೃಪ್ತಿಪಡಿಸುವ ಬಜೆಟ್ ಮಂಡಿಸುವಲ್ಲಿ ಮುಖ್ಯಮಂತ್ರಿಗಳು ಯಶಸ್ವಿಯಾಗಿದ್ದಾರೆಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.