Sunday, March 5, 2023

ಭದ್ರಾವತಿ ಉಳಿಸಿ ವಿಐಎಸ್‌ಎಲ್-ಎಂಪಿಎಂ ಚಳುವಳಿಗೆ ಪೂರಕ ಸ್ಪಂದನೆ

ಹಿರಿಯ ಸಾಹಿತಿ, ಸಂಶೋಧಕ ಜೆ.ಎನ್ ಬಸವರಾಜಪ್ಪ ಕವನ ರಚನೆ


ಭದ್ರಾವತಿ, ಮಾ. ೫ : ಭದ್ರಾವತಿ ಉಳಿಸಿ ವಿಐಎಸ್‌ಎಲ್-ಎಂಪಿಎಂ ಚಳುವಳಿ ಹೆಸರಿನಲ್ಲಿ ಅಂತರ್ಜಾಲದಲ್ಲಿ ಹಮ್ಮಿಕೊಳ್ಳಲಾಗಿರುವ ಹೋರಾಟಕ್ಕೆ ಪೂರಕ ಸ್ಪಂದನೆ ವ್ಯಕ್ತವಾಗುತ್ತಿದೆ. ಇದುವರೆಗೂ ಸುಮಾರು ೩೧೫ ಮಂದಿ ಹೋರಾಟಕ್ಕೆ ಪೂರಕವಾಗಿ ಸ್ಪಂದಿಸಿದ್ದು, ಈ ಪೈಕಿ ೩೧೩ ಮಂದಿ ಬೆಂಬಲ ಹಾಗು ಇಬ್ಬರು ವಿರೋಧ ವ್ಯಕ್ತಪಡಿಸಿದ್ದಾರೆ.
೧೯೫ ನಾಗರೀಕರು, ೭೮ ಗುತ್ತಿಗೆ ಕಾರ್ಮಿಕರು, ೨೨ ಕಾಯಂ ಹಾಗು ನಿವೃತ್ತ ಕಾರ್ಮಿಕರು, ಓರ್ವ ರೈತ, ಓರ್ವ ಸರ್ಕಾರಿ ಉದ್ಯೋಗಿ, ಇಬ್ಬರು ಖಾಸಗಿ ಉದ್ಯೋಗಿ, ೫ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ೩೧೩ ಮಂದಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಬ್ಬರು ನಾಗರೀಕರು ವಿರೋಧಿಸಿದ್ದಾರೆ. ಅಂತರ್ಜಾಲದಲ್ಲಿ ನಡೆಯುತ್ತಿರುವ ಈ ಹೋರಾಟ ಮತ್ತಷ್ಟು ತೀವ್ರತೆ ಪಡೆದುಕೊಳ್ಳಬೇಕಾಗಿದೆ. ಸಮಸ್ತ ನಾಗರೀಕರು ತಮ್ಮ  ನಿಲುವು ವ್ಯಕ್ತಪಡಿಸಬೇಕಾಗಿದೆ.
ಹಿರಿಯ ಸಾಹಿತಿ ಜೆ.ಎನ್ ಬಸವರಾಜಪ್ಪ ಕವನ ರಚನೆ :
ನಗರದ ಹಿರಿಯ ಸಾಹಿತಿ, ಸಂಶೋಧಕ ಜೆ.ಎನ್ ಬಸವರಾಜಪ್ಪನವರು ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳ ಇಂದಿನ ಪರಿಸ್ಥಿತಿ ಕುರಿತು ಕವನ ರಚಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.



ಭದ್ರಾವತಿಯ ದುಃಸ್ಥಿತಿ-ಕವನ

ಬದುಕು ನಂಬಿ ಬಂದವರಿಗೆಲ್ಲ
ಬದುಕು ಕೊಟ್ಟಿದ್ದು ಭದ್ರಾವತಿ
ಆಶ್ರಯ ಬಯಸಿ ಬಂದವರಿಗೆಲ್ಲ
ಆಶ್ರಯ ನೀಡಿದ್ದು ಭದ್ರಾವತಿ
ಇಂಥಾ ಕೈಗಾರಿಕಾ ನಗರಕ್ಕೆ
ಈಗ ಬಂದೊದಗಿದೆ ದುಃಸ್ಥಿತಿ
ವಿಐಎಸ್‌ಎಲ್ - ಎಂಪಿಎಂ ಕಾರ್ಖಾನೆಗಳ ಅವನತಿ
ಕಾರ್ಮಿಕರ ಬದುಕಾಗಿದೆ ಅಧೋಗತಿ
ರಾಜಕೀಯ ನಾಯಕರಾರೂ
ವಹಿಸಲಿಲ್ಲ ಮುಂಜಾಗ್ರತಿ
ಅವರಿಗೆ ಬೇಕಿಲ್ಲ.
ಕಾರ್ಮಿಕರ ಹಿತಾಸಕ್ತಿ
ಈಗಲಾದರೂ ಸರ್ಕಾರ
ಅರಿಯಬೇಕಿದೆ ಕಾರ್ಮಿಕರ ಪರಿಸ್ಥಿತಿ
ಕಡೆಗಣಿಸಿದರೆ, ಕಾರ್ಮಿಕರ ಹೋರಾಟಕ್ಕೆ
ಇರುವುದಿಲ್ಲ ಇತಿ ಮಿತಿ
ಒಪ್ಪಿ ನಡೆದರೆ ಭದ್ರಾವತಿ
ತಪ್ಪಿ ನಡೆದರೆ ಅಧೋಗತಿ
ನಾವು ಸುಮ್ಮನಿದ್ದರೆ ವಂಕಿಪುರ
ಎದ್ದು ನಿಂತರೆ ಬೆಂಕಿಪುರ
ಎಚ್ಚರ ಎಚ್ಚರ ಎಚ್ಚರ...
      - ಜೆ.ಎನ್ ಬಸವರಾಜಪ್ಪ

--

ಜಗದ್ಗುರು ರೇಣುಕಾಚಾರ್ಯರ ಸಮಾಜಮುಖಿ ಕಾರ್ಯಗಳು ಎಂದಿಗೂ ಪ್ರಸ್ತುತ : ಸುರೇಶಾಚಾರ್ಯ

ಭದ್ರಾವತಿ ತಾಲೂಕು ಕಚೇರಿಯಲ್ಲಿ ಸರಕಾರದ ಆದೇಶದಂತೆ ಪ್ರಥಮ ವರ್ಷವಾಗಿ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತ್ಯೋತ್ಸವ ಆಚರಿಸಲಾಯಿತು.
    ಭದ್ರಾವತಿ, ಮಾ. ೫ :  ಸಾವಿರಾರು ವರ್ಷಗಳ ಇತಿಹಾಸವಿರುವ ಜಗದ್ಗುರು ಶ್ರೀ ರೇಣುಕಾಚಾರ್ಯರ ಸಮಾಜಮುಖಿ ಕಾರ್ಯಗಳು ಸೂರ್ಯ ಚಂದ್ರರಿರುವಂತೆ ಎಂದೆಂದಿಗೂ ಶಾಶ್ವತವಾಗಿರುತ್ತವೆ. ಸಮಾಜಕ್ಕೆ ನೀಡಿದ ಕೊಡುಗೆಗಳು ಅಪಾರ. ಸಮಾಜದಲ್ಲಿನ ಅನಿಷ್ಟತೆ ಜಾತಿ ವ್ಯವಸ್ಥೆಗಳು ದೂರಾಗುವಂತೆ ಶ್ರಮಿಸಿ ಮಾನವ ಧರ್ಮ ಒಂದೇ, ಮಾನವ ಧರ್ಮಕ್ಕೆ ಜಯವಾಗಲೆಂದು ಆಶಿಸಿದವರು ರೇಣುಕಾಚಾರ್ಯರು ಎಂದು ತಹಸೀಲ್ದಾರ್ ಸುರೇಶಾಚಾರ್ಯ ಹೇಳಿದರು.
    ಅವರು ಭಾನುವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ರೇಣುಕಾಚಾರ್ಯ ಜಗದ್ಗುರುಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಜನರಲ್ಲಿ ಮಾಹಿತಿ ಅಷ್ಟಾಗಿಲ್ಲದ ಕಾರಣ ಜಗದ್ಗುರುಗಳ ಕುರಿತು ಸರ್ವರಲ್ಲೂ ಮಾಹಿತಿ ಮೂಡಿಸಲು ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲು ಮುಂದಾಗಿರುವುದು ಸಂತಸ ತಂದಿದೆ. ಇದರಿಂದ ಸಮಾಜಕ್ಕೆ ಬೆಳಕು ಚೆಲ್ಲಿದಂತಾಗುತ್ತದೆ ಎಂದರು.
    ವೀರಶೈವ ಸೇವಾ ಸಮಿತಿ ಕಾರ್ಯದರ್ಶಿ ವಾಗೀಶ್ ಕೋಠಿ ಮಾತನಾಡಿ, ಸರ್ಕಾರ ಇದೇ ಮೊದಲ ಬಾರಿಗೆ ಜಗದ್ಗುರುಗಳ ಜಯಂತಿ ಆಚರಿಸುತ್ತಿರುವುದು ಶ್ಲಾಘನೀಯವಾಗಿದೆ. ಮುಂದಿನ ವರ್ಷದಿಂದ ವೀರಶೈವ ಸಮಾಜಗಳು ಸೇರಿದಂತೆ ಇತರೆ ಸಮಾಜಗಳನ್ನು ಒಗ್ಗೂಡಿಸಿಕೊಂಡು ಪೂರ್ವ ಭಾವಿ ಸಭೆ ನಡೆಸಿ ಅದ್ದೂರಿಯಾಗಿ ಸಮಾರಂಭ ಆಯೋಜಿಸಲು ಕ್ರಮ ಕೈಗೊಳ್ಳಬೇಕೆಂದರು.
ವೀರಶೈವ ಲಿಂಗಾಯತ ಮಹಿಳಾ ಸಮಾಜದ ಅಧ್ಯಕ್ಷೆ ಆರ್.ಎಸ್.ಶೋಭಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗ್ರೇಡ್-೨ ತಹಸೀಲ್ದಾರ್ ರಂಗಮ್ಮ, ನಗರಸಭಾ ಸದಸ್ಯ ಬಿ.ಕೆ ಮೋಹನ್, ಡಾ. ಜಿ.ಎಂ ನಟರಾಜ್, ಶಿವಯೋಗಿ ಮಠದ್, ಇಂಜಿನಿಯರ್ ದಯಾನಂದ್ ಮುಂತಾದವರು ಮಾತನಾಡಿದರು.
    ಉಪ ತಹಸೀಲ್ದಾರ್ ರಾಧಾಕೃಷ್ಣಭಟ್ ಸ್ವಾಗತಿಸಿದರು. ಭಾಗ್ಯ ಮೂರ್ತಿ ಸಂಗಡಿಗರು ಸಿದ್ದಾಂತ ಶಿಖಾಮಣಿಯ ಕುರಿತು ನುಡಿಗಳನ್ನಾಡಿದರು. ನಗರಸಭಾ ಸದಸ್ಯೆ ಅನುಪಮ, ಮುಖಂಡರಾದ ಬಿ.ಕೆ ಜಗನ್ನಾಥ್, ಟಿ.ಎಸ್ ಆನಂದಕುಮಾರ್, ಚನ್ನೇಶ್, ಷಣ್ಮುಖಪ್ಪ, ಬಸವರಾಜಪ್ಪ, ಮಹೇಶ್‌ಮೂರ್ತಿ, ನಾಗರಾಜ್, ನಾಗರತ್ನ ಕೋಠಿ ಮುಂತಾದವರಿದ್ದರು.

ವಿಐಎಸ್‌ಎಲ್-ಎಂಪಿಎಂ ಉಳಿವಿಗಾಗಿ ಹೋರಾಟಕ್ಕೆ ಬೆಂಬಲ ಸೂಚಿಸಲು ನಿರ್ಣಯ

ಭದ್ರಾವತಿ ಬೈಪಾಸ್ ರಸ್ತೆ ಮಿಲ್ಟ್ರಿಕ್ಯಾಂಪ್‌ನಲ್ಲಿರುವ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಭಾನುವಾರ ಡಿಎಸ್‌ಎಸ್ (ಅಂಬೇಡ್ಕರ್‌ವಾದ) ಕಾರ್ಯಕರ್ತರ ಸಭೆ ಹಾಗು ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳ ಉಳಿವಿಗಾಗಿ ಬೆಂಬಲ ಸೂಚಿಸಿ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ, ನಗರಸಭೆ ಸದಸ್ಯ ಬಸವರಾಜ್ ಬಿ ಆನೆಕೊಪ್ಪ ಮಾತನಾಡಿದರು.
    ಭದ್ರಾವತಿ, ಮಾ. ೫ : ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿವಿಗಾಗಿ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ), ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘ ಮತ್ತು ಡಾ. ಬಿ.ಆರ್ ಅಂಬೇಡ್ಕರ್ ಪಡೆ ವತಿಯಿಂದ ಬೆಂಬಲ ಸೂಚಿಸಿ ನಗರದ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಹೋರಾಟ ನಡೆಸಲು ತೀರ್ಮಾನಿಸಲಾಯಿತು.
    ಭಾನುವಾರ ನಗರದ ಬೈಪಾಸ್ ರಸ್ತೆ ಮಿಲ್ಟ್ರಿಕ್ಯಾಂಪ್‌ನಲ್ಲಿರುವ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕರ್ತರ ಸಭೆ ಹಾಗು ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳ ಉಳಿವಿಗಾಗಿ ಬೆಂಬಲ ಸೂಚಿಸಿ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಪ್ರಮುಖರು, ಪ್ರಸ್ತುತ ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳ ಉಳಿವಿಗಾಗಿ ಹೋರಾಟದ ಅಗತ್ಯವಿದೆ. ಈ ಹಿನ್ನಲೆಯಲ್ಲಿ ನಾವುಗಳು ಒಗ್ಗಟ್ಟಾಗಿ ಹೋರಾಟ ನಡೆಸಬೇಕಾಗಿದೆ. ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಬೇಕಾಗಿದೆ ಎಂದರು.
    ನಂತರ ಬೆಂಬಲ ಸೂಚಿಸುವ ನಿರ್ಣಯ ಕೈಗೊಂಡು ಹೋರಾಟದ ರೂಪುರೇಷೆಗಳ ಕುರಿತು ಚರ್ಚಿಸಲಾಯಿತು. ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಜಿಲ್ಲಾ ಸಂಘಟನಾ ಸಂಚಾಲಕ ಆರ್ ಹರೀಶ್ ಅಧ್ಯಕ್ಷತೆ ವಹಿಸಿದ್ದರು.
    ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ, ನಗರಸಭೆ ಸದಸ್ಯ ಬಸವರಾಜ್ ಬಿ ಆನೆಕೊಪ್ಪ, ಡಿಎಸ್‌ಎಸ್ ತಾಲೂಕು ಪ್ರಧಾನ ಸಂಚಾಲಕ ಎಸ್. ಪುಟ್ಟರಾಜು, ಡಾ. ಬಿ.ಆರ್ ಅಂಬೇಡರ್ ಎಸ್.ಸಿ/ಎಸ್‌ಟಿ ಪಡೆ ಅಧ್ಯಕ್ಷ ವೆಂಕಟೇಶ್ ಉಜ್ಜನಿಪುರ, ದಲಿತ ಮುಖಂಡ ಸಂಪತ್, ಜಮೀರ್ (ಕೆಂಪು ಸೇನೆ), ಹನುಮಂತಪ್ಪ, ಅಣ್ಣಪ್ಪ, ಸಂತೋಷ್, ಶಿವಕುಮಾರ್, ಶ್ರೀನಿವಾಸ್, ಮಂಜುನಾಥ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಾಗೇಶ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.

Saturday, March 4, 2023

ಎಂಪಿಎಂ ಬೊಂಬು ಸಂಗ್ರಹದಲ್ಲಿ ಬೆಂಕಿ ಅವಘಡ : ಲಕ್ಷಾಂತರ ರು. ಹಾನಿ

ರಾಜ್ಯ ಸರ್ಕಾರಿ ಸ್ವಾಮ್ಯದ ಭದ್ರಾವತಿ ಮೈಸೂರು ಕಾಗದ ಕಾರ್ಖಾನೆಯ ಸಕ್ಕರೆ ಘಟಕದ ಸಮೀಪದಲ್ಲಿರುವ ಬೊಂಬು ಸಂಗ್ರಹದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. 

    ಭದ್ರಾವತಿ, ಮಾ. ೪ : ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆಯ ಸಕ್ಕರೆ ಘಟಕದ ಸಮೀಪದಲ್ಲಿರುವ ಬೊಂಬು ಸಂಗ್ರಹದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಲಕ್ಷಾಂತರ ರು. ಹಾನಿ ಸಂಭವಿಸಿದೆ.
    ಸುಮಾರು ೮ ವರ್ಷಗಳಿಂದ ಸ್ಥಗಿತಗೊಂಡಿರುವ ಎಂಪಿಎಂ ಕಾರ್ಖಾನೆಯಲ್ಲಿ ಈಗಾಗಲೇ ಯಂತ್ರೋಪಕರಣಗಳು ತುಕ್ಕು ಹಿಡಿದಿದ್ದು, ಖಾಲಿ ಜಾಗಗಳಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ. ಈ ನಡುವೆ ಇದೀಗ ಬೆಂಕಿ ಅವಘಡ ಸಂಭವಿಸಿದ್ದು, ಸಕ್ಕರೆ ಘಟಕದ ಸಮೀಪದಲ್ಲಿರುವ ಬೊಂಬು ಸಂಗ್ರಹದಲ್ಲಿ ಬೆಂಕಿ ಅವಘಡದಿಂದ ಲಕ್ಷಾಂತರ ರು. ಮೌಲ್ಯದ ಮರಮುಟ್ಟುಗಳು ಸುಟ್ಟುಕರಕಲಾಗಿವೆ.
ಶುಕ್ರವಾರ ಮಧ್ಯಾಹ್ನ ೧೨.೩೦ರ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಸುಮಾರು ೧೦ ಗಂಟೆಗಳ ನಿರಂತರ ಕಾರ್ಯಾಚರಣೆ ನಡೆಸಿ ಅಗ್ನಿ ನಂದಿಸುವಲ್ಲಿ ಯಶಸ್ವಿಯಾದರು. ಅಲ್ಲದೆ ಇದರಿಂದಾಗಿ ಹೆಚ್ಚಿನ ಹಾನಿ ತಪ್ಪಿದೆ.
    ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಇಲಾಖೆಯ ೩, ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಯ ೧ ಅಗ್ನಿಶಾಮಕ ವಾಹನಗಳನ್ನು ಬಳಸಿಕೊಳ್ಳಲಾಗಿತ್ತು. ಅಗ್ನಿಶಾಮಕ ಇಲಾಖೆಯ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಅಶೋಕ್‌ಕುಮಾರ್, ಇಲಾಖೆಯ ಸ್ಥಳೀಯ ಸಿಬ್ಬಂದಿಗಳಾದ ಹುಲಿಯಪ್ಪ, ಬಾಬುಗೌಡ, ಅಶೋಕ್, ವಿನೂತನ್, ಮಹೇಂದ್ರ, ರಾಜಾನಾಯ್ಕ, ಹರೀಶ್, ಪ್ರಜ್ವಲ್, ವೀರೇಶ್, ಚಾಲಕರಾದ ಮಂಜುನಾಥ್, ರಾಘವೇಂದ್ರ, ರಮೇಶ್, ಎಂಪಿಎಂ ಅಗ್ನಿಶಾಮಕ ವಿಭಾಗದ ಮುರುಳಿ ಮೋಹನ್, ಉಮೇಶ್ ಸೇರಿದಂತೆ ಸುಮಾರು ೨೦ ಮಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಹೊಸಸೇತುವೆ ಕಾಮಗಾರಿ ಕಳಪೆ, ಅವೈಜ್ಞಾನಿಕ : ಪ್ರತಿಭಟನೆ

ಭದ್ರಾವತಿ ನಗರದ ಹೃದಯ ಭಾಗದಲ್ಲಿ ಭದ್ರಾ ಹಳೇಸೇತುವೆ ಪಕ್ಕದಲ್ಲಿ ನಿರ್ಮಾಣಗೊಳ್ಳುತ್ತಿರುವ ಹೊಸಸೇತುವೆ ಕಾಮಗಾರಿ ಅವೈಜ್ಞಾನಿಕವಾಗಿ, ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಆರೋಪಿಸಿ ಶನಿವಾರ ತಾಲೂಕು ಸಾರ್ವಜನಿಕ ಹಿತರಕ್ಷಣಾ ಸಮಿತಿ ವತಿಯಿಂದ ರಸ್ತೆ ತಡೆ ನಡೆಸಿ ಪ್ರತಿಭಟಿಸಲಾಯಿತು.
    ಭದ್ರಾವತಿ, ಮಾ. ೪ : ನಗರದ ಹೃದಯ ಭಾಗದಲ್ಲಿ ಭದ್ರಾ ಹಳೇಸೇತುವೆ ಪಕ್ಕದಲ್ಲಿ ನಿರ್ಮಾಣಗೊಳ್ಳುತ್ತಿರುವ ಹೊಸಸೇತುವೆ ಕಾಮಗಾರಿ ಅವೈಜ್ಞಾನಿಕವಾಗಿ, ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಆರೋಪಿಸಿ ಶನಿವಾರ ತಾಲೂಕು ಸಾರ್ವಜನಿಕ ಹಿತರಕ್ಷಣಾ ಸಮಿತಿ ವತಿಯಿಂದ ರಸ್ತೆ ತಡೆ ನಡೆಸಿ ಪ್ರತಿಭಟಿಸಲಾಯಿತು. 
ನಗರಸಭೆ ವಾರ್ಡ್ ನಂ.೩ರ ವ್ಯಾಪ್ತಿಯಲ್ಲಿ ಕಳೆದ ಸುಮಾರು ೫ ವರ್ಷಗಳಿಂದ ಸೇತುವೆ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಮಂದಗತಿಯಲ್ಲಿ ಸಾಗುವ ಜೊತೆಗೆ ಕಳಪೆಯಿಂದ ಕೂಡಿದೆ. ಅಲ್ಲದೆ ಸೇತುವೆ ಕಾಮಗಾರಿ ಮೂಲ ನೀಲನಕ್ಷೆಯಂತೆ ಕೈಗೊಳ್ಳದೆ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಒತ್ತಡಕ್ಕೆ ಮಣಿದು ತರಾತುರಿಯಲ್ಲಿ ಅವೈಜ್ಞಾನಿಕವಾಗಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಆರೋಪಿಸಿದರು. 
ಕಾಮಗಾರಿಯನ್ನು ಮೂಲ ನೀಲನಕ್ಷೆಯಂತೆ ಸೇತುವೆ ಸಮೀಪದಲ್ಲಿರುವ ಕಟ್ಟಡಗಳನ್ನು ತೆರವುಗೊಳಿಸಿ ಕೈಗೊಳ್ಳಬೇಕು. ಆದರೆ ಇದೀಗ ತರಾತುರಿಯಲ್ಲಿ ಸೇತುವೆ ರಸ್ತೆಯನ್ನು ಓರೆಯಾಗಿ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ವಾಹನಗಳ ಸಂಚಾರಕ್ಕೆ, ಪಾದಚಾರಿಗಳಿಗೆ ತೊಂದರೆಯಾಗಲಿದೆ. ತಕ್ಷಣ ಕಾಮಗಾರಿಯನ್ನು ಸ್ಥಗಿತಗೊಳಿಸಿ ಕಟ್ಟಡಗಳನ್ನು ತೆರವುಗೊಳಿಸಿ ಮೂಲ ನೀಲನಕ್ಷೆಯಂತೆ ಕೈಗೊಳ್ಳಬೇಕೆಂದು ಆಗ್ರಹಿಸಿದರು. 

    ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ನಗರಸಭಾ ಸದಸ್ಯರಾದ ಜಾರ್ಜ್, ಆರ್. ಮೋಹನ್‌ಕುಮಾರ್, ಉದಯ್‌ಕುಮಾರ್, ಬಸವರಾಜ ಬಿ. ಆನೆಕೊಪ್ಪ, ನಗರಸಭೆ ಮಾಜಿ ಅಧ್ಯಕ್ಷ ಆರ್. ಆರ್. ಕರುಣಾಮೂರ್ತಿ, ಮಾಜಿ ಉಪಾಧ್ಯಕ್ಷೆ ಸಾವಿತ್ರಮ್ಮ ಪುಟ್ಟೇಗೌಡ,  ಮಾಜಿ ಸದಸ್ಯರಾದ ಎಂ.ಎ ಅಜಿತ್, ಮೋಹನ್‌ರಾವ್, ಗುಣಶೇಖರ್, ಮಾಜಿ ಉಪಮೇಯರ್ ಮಹಮದ್ ಸನಾವುಲ್ಲಾ, ಪ್ರಮುಖರಾದ ಅಮೋಸ್, ನಕುಲ್, ಗೋಕುಲ್ ಕೃಷ್ಣ, ಪ್ರಕಾಶ್, ಸೈಯದ್ ಅಜ್ಮಲ್, ಧರ್ಮರಾಜ್, ತಬ್ರೇಸ್ ಖಾನ್, ವೆಂಕಟೇಶ್ ಉಜ್ಜನಿಪುರ, ಸೇರಿದಂತೆ ಸ್ಥಳೀಯ ಮುಖಂಡರು, ನಿವಾಸಿಗಳು ಪಾಲ್ಗೊಂಡಿದ್ದರು. 

ಎನ್‌ಡಿಪಿಎಸ್ ಪ್ರಕರಣ : ಇಬ್ಬರಿಗೆ ೬ ತಿಂಗಳ ಕಠಿಣ ಕಾರಾವಾಸ ಶಿಕ್ಷೆ


    ಭದ್ರಾವತಿ, ಮಾ. ೪ : ಎನ್‌ಡಿಪಿಎಸ್ ಪ್ರಕರಣದ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ ೬ ತಿಂಗಳ ಕಠಿಣ ಕಾರಾವಾಸ ಶಿಕ್ಷೆ ಮತ್ತು ೧೦ ಸಾವಿರ ರು. ದಂಡ ವಿಧಿಸಿ ತೀರ್ಪು ನೀಡಿದೆ.
    ಇಮ್ರಾನ್‌ಪಾಷಾ(೨೨) ಮತ್ತು ಸೈಯದ್ ರೋಷನ್(೩೮) ಶಿಕ್ಷೆಗೊಳಗಾಗಿದ್ದು, ಪೇಪರ್‌ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಠಾಣಾಧಿಕಾರಿ ಶಿಲ್ಪಾ ನಾಯನೇಗಲಿ ದೋಷಾರೋಪಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಪ್ರಧಾನ ಸಿ.ಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಆರ್. ಯತೀಶ್ ಆರೋಪ ದೃಡಪಟ್ಟ ಹಿನ್ನಲೆಯಲ್ಲಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕ ಬಿ.ಎಚ್ ರಂಗಪ್ಪ ವಾದ ಮಂಡಿಸಿದ್ದರು.

ವಾಹನದ ಬಣ್ಣ ಬದಲಿಸಿ, ಹೆಚ್ಚಿನ ಶಬ್ದದ ಸೈಲೆನ್ಸರ್ ಅಳವಡಿಸಿಕೊಂಡ ಯುವಕನಿಗೆ ದಂಡ

    ಭದ್ರಾವತಿ, ಮಾ. ೪ : ಸಾರಿಗೆ (ಆರ್‌ಟಿಓ) ಅಧಿಕಾರಿಗಳಿಗೆ ಮಾಹಿತಿ ನೀಡದೆ ವಾಹನದ ಬಣ್ಣ ಬದಲಿಸಿಕೊಂಡು, ಹೆಚ್ಚಿನ ಶಬ್ದದ ಸೈಲೆನ್ಸರ್ ಅಳವಡಿಸಿಕೊಂಡ ಹಿನ್ನಲೆಯಲ್ಲಿ ನ್ಯಾಯಾಲಯ ದಂಡ ವಿಧಿಸಿ ಶಿಕ್ಷೆ ನೀಡಿರುವ ಘಟನೆ ನಡೆದಿದೆ.
    ವಾಹನ ಖರೀದಿಸುವ ವೇಳೆ ಆರ್‌ಸಿ ದಾಖಲಾತಿಯಲ್ಲಿ ನಮೂದಾಗಿರುವ ವಾಹನದ ಬಣ್ಣ ಬಳಿಕ ಬದಲಿಸಿಕೊಳ್ಳಲು ಸಾರಿಗೆ(ಆರ್‌ಟಿಓ) ಅಧಿಕಾರಿಗಳಿಗೆ ಮಾಹಿತಿ ನೀಡಬೇಕಾಗುತ್ತದೆ. ಆದರೆ ಗಗನ್ ಎಂಬ ಯುವಕ ಯಾವುದೇ ಮಾಹಿತಿ ನೀಡದೆ ವಾಹನದ ಬಣ್ಣ ಬದಲಿಸಿಕೊಂಡಿದ್ದು, ಅಲ್ಲದೆ ಹೆಚ್ಚಿನ ಶಬ್ದದ ಸೈಲೆನ್ಸರ್ ಅಳವಡಿಸಿಕೊಂಡಿರುವುದು ಸಂಚಾರಿ ಪೊಲೀಸರ ತಪಾಸಣೆ ವೇಳೆ ತಿಳಿದುಬಂದಿದೆ. ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡುವಾಗ ಈತ ಸಿಕ್ಕಿ ಬಿದ್ದಿದ್ದು, ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
    ನ್ಯೂಟೌನ್ ಪೊಲೀಸ್ ಠಾಣಾಧಿಕಾರಿ ರಂಗನಾಥ ಅಂತರಗಟ್ಟಿ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಯತೀಶ್ ದಂಡದ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.