Friday, March 31, 2023

ಸೈಬರ್ ಅಪರಾಧ ಕುರಿತು ತಿಳುವಳಿಕೆ ಹೊಂದಿ : ಸಂತೋಷ್ ಪಾಟೀಲ್


ಭದ್ರಾವತಿ ಬಿ.ಎಚ್ ರಸ್ತೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಹಾಗು ನ್ಯೂಟೌನ್ ವಿಐಎಸ್‌ಎಸ್‌ಜೆ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಆಯೋಜಿಸಲಾಗಿದ್ದ ವಿಶ್ವ ಗ್ರಾಹಕರ ದಿನಾಚರಣೆ ಹಾಗು ಸೈಬರ್ ಜಾಗೃತಿ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಸಿ.ಇ.ಎನ್ ಮತ್ತು ಅಪರಾಧ (ಪಿಐ)ಪೊಲೀಸ್ ಠಾಣಾಧಿಕಾರಿ ಸಂತೋಷ್ ಪಾಟೀಲ್ ಪಾಲ್ಗೊಂಡು ಮಾತನಾಡಿದರು.
    ಭದ್ರಾವತಿ, ಮಾ. ೩೧ : ವಿದ್ಯಾರ್ಥಿಗಳು ಸೈಬರ್ ಅಪರಾಧಗಳ ಕುರಿತು ಹೆಚ್ಚಿನ ತಿಳುವಳಿಕೆ ಹೊಂದಬೇಕೆಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ಸಿ.ಇ.ಎನ್ ಮತ್ತು ಅಪರಾಧ (ಪಿಐ)ಪೊಲೀಸ್ ಠಾಣಾಧಿಕಾರಿ ಸಂತೋಷ್ ಪಾಟೀಲ್ ಹೇಳಿದರು.
    ಅವರು ನಗರದ ಬಿ.ಎಚ್ ರಸ್ತೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಹಾಗು ನ್ಯೂಟೌನ್ ವಿಐಎಸ್‌ಎಸ್‌ಜೆ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಆಯೋಜಿಸಲಾಗಿದ್ದ ವಿಶ್ವ ಗ್ರಾಹಕರ ದಿನಾಚರಣೆ ಹಾಗು ಸೈಬರ್ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಇತ್ತೀಚಿಗೆ ಸೈಬರ್ ಅಪರಾಧಗಳು ಹೆಚ್ಚಾಗುತ್ತಿದ್ದು, ಇವುಗಳ ನಿಯಂತ್ರಣಕ್ಕೆ ಇಲಾಖೆ ಹೆಚ್ಚಿನ ಗಮನ ಹರಿಸುತ್ತಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ. ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಸೈಬರ್ ತಿಳುವಳಿಕೆ ಜೊತೆಗೆ ಕಾನೂನು ಅರಿವು ಹೊಂದಬೇಕೆಂದರು.
    ಕಳೆದು ಹೋದ ಮೊಬೈಲ್ ಪತ್ತೆ ಮಾಡಲು ಹಾಗು ದೂರು ನೀಡಲು ಇಲಾಖೆ ವತಿಯಿಂದ ನೂತನವಾಗಿ ಸಿದ್ದಪಡಿಸಲಾಗಿರುವ ಸಿಇಐಆರ್ ಪೋರ್ಟಲ್ ಹಾಗು ಕೆಎಸ್‌ಪಿ ಅರ್ಜಿ ಕುರಿತು ಮಾಹಿತಿ ನೀಡಲಾಯಿತು.
    ಕೈಗಾರಿಕಾ ತರಬೇತಿ ಸಂಸ್ಥೆಯ ಉಪ ಪ್ರಾಚಾರ್ಯ ಎಸ್.ಎನ್ ಚಂದ್ರಶೇಖರ್, ಡಿ. ಮಹಾಂತೇಶ್, ಸಹಾಯಕ ಪೊಲೀಸ್ ಠಾಣಾಧಿಕಾರಿ ವಿರೂಪಾಕ್ಷಪ್ಪ, ಸೂರ್ಯನಾರಾಯಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕೈಗಾರಿಕಾ ತರಬೇತಿ ಸಂಸ್ಥೆಯ ಬೋಧಕ ಹಾಗು ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಧಾನಸಭಾ ಚುನಾವಣೆ : ಬಿಜೆಪಿ ಕಾರ್ಯಾಲಯ ಉದ್ಘಾಟನೆ

ಭದ್ರಾವತಿ ಕೆಎಸ್‌ಆರ್‌ಟಿಸಿ ಬಸ್ ಘಟಕದ ಹಿಂಭಾಗದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಬಿಜೆಪಿ ತಾಲೂಕು ಮಂಡಲ ಕಛೇರಿಯಲ್ಲಿ ಸೋಮವಾರ ವಿಧಾನಸಭಾ ಚುನಾವಣಾ ಕಾರ್ಯಾಲಯ ಉದ್ಘಾಟಿಸಲಾಯಿತು.
    ಭದ್ರಾವತಿ, ಮಾ. ೩೧ : ನಗರದ ಕೆಎಸ್‌ಆರ್‌ಟಿಸಿ ಬಸ್ ಘಟಕದ ಹಿಂಭಾಗದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಬಿಜೆಪಿ ತಾಲೂಕು ಮಂಡಲ ಕಛೇರಿಯಲ್ಲಿ ಸೋಮವಾರ ವಿಧಾನಸಭಾ ಚುನಾವಣಾ ಕಾರ್ಯಾಲಯ ಉದ್ಘಾಟಿಸಲಾಯಿತು.
    ಕಾರ್ಯಾಲಯದ ಉದ್ಘಾಟನೆ ಅಂಗವಾಗಿ ಧಾರ್ಮಿಕ ಆಚರಣೆಗಳು ಜರುಗಿದವು. ಈ ಹಿಂದೆ ಬಹಳ ವರ್ಷಗಳಿಂದ ಹಳೇನಗರದ ಬಸವೇಶ್ವರ ವೃತ್ತದಲ್ಲಿ ಬಾಡಿಗೆ ಕಟ್ಟಡದಲ್ಲಿ ಬಿಜೆಪಿ ತಾಲೂಕು ಮಂಡಲ ಕಛೇರಿ ಕಾರ್ಯ ನಿರ್ವಹಿಸುತ್ತಿತ್ತು. ಕಳೆದ ಕೆಲವು ತಿಂಗಳ ಹಿಂದೆ ಪಕ್ಷದ ಸ್ವಂತ ಜಾಗದಲ್ಲಿ ನೂತನ ಕಛೇರಿ ನಿರ್ಮಾಣಗೊಂಡಿದ್ದು, ಮೊದಲ ಬಾರಿಗೆ ನೂತನ ಕಛೇರಿಯಲ್ಲಿ ಚುನಾವಣಾ ಕಾರ್ಯಾಲಯ ಆರಂಭಿಸಲಾಗಿದೆ.
    ಪಕ್ಷದ ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಚುನಾವಣಾ ಪ್ರಭಾರಿ ಅಶೋಕ್ ಮೂರ್ತಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ರಂಗಸ್ವಾಮಿ, ಚನ್ನೇಶ್, ಉಪಾಧ್ಯಕ್ಷರಾದ ಜಯರಾಮ್, ಮಣಿ,  ಅನ್ನಪೂರ್ಣ ಸಾವಂತ್,  ಗೌರಮ್ಮ, ಕಾರ್ಯದರ್ಶಿಗಳಾದ ಚಂದ್ರು ದೇವರನರಸೀಪುರ, ಸರಸ್ವತಿ, ಕವಿತಾ ಸುರೇಶ್, ನಗರಸಭಾ ಸದಸ್ಯೆ ಶಶಿಕಲಾ ನಾರಾಯಣಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ. ಮಂಜುನಾಥ್ ಕದಿರೇಶ್, ಪಕ್ಷದ ಪ್ರಮುಖರಾದ ಪವಿತ್ರ ರಾಮಯ್ಯ, ಕೂಡ್ಲಿಗೆರೆ ಹಾಲೇಶ್, ತೀರ್ಥಯ್ಯ, ಎಂ. ಮಂಜುನಾಥ್, ಮಂಗೋಟೆ ರುದ್ರೇಶ್, ಕವಿತಾ ರಾವ್, ರಾಮನಾಥ್ ಬರ್ಗೆ ಹಾಗು ಪಕ್ಷದ ವಿವಿಧ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ರಾಷ್ಟ್ರಪತಿ, ಮುಖ್ಯಮಂತ್ರಿ ಪ್ರಶಸ್ತಿ ಪುರಸ್ಕೃತ ದಾನಂ ಕರ್ತವ್ಯದಿಂದ ವಯೋನಿವೃತ್ತಿ

ಜಿಲ್ಲಾ ಪೊಲೀಸ್ ವತಿಯಿಂದ ಸನ್ಮಾನ, ಬೀಳ್ಕೊಡುಗೆ

ಭದ್ರಾವತಿ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯ ಸಹಾಯಕ ಠಾಣಾಧಿಕಾರಿ(ಎಎಸ್‌ಐ)ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ದಾನಂ ಶುಕ್ರವಾರ ನಿವೃತ್ತಿ ಹೊಂದಿದ್ದು, ಇವರನ್ನು ಜಿಲ್ಲಾ ಪೊಲೀಸ್ ವತಿಯಿಂದ ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು. 
    ಭದ್ರಾವತಿ, ಮಾ. ೩೧ : ನಗರದ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯ ಸಹಾಯಕ ಠಾಣಾಧಿಕಾರಿ(ಎಎಸ್‌ಐ)ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ದಾನಂ ಶುಕ್ರವಾರ ನಿವೃತ್ತಿ ಹೊಂದಿದ್ದು, ಇವರನ್ನು ಜಿಲ್ಲಾ ಪೊಲೀಸ್ ವತಿಯಿಂದ ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು.
    ಕಾನ್ಸ್‌ಟೇಬಲ್ ಹುದ್ದೆಗೆ ನೇಮಕಗೊಂಡು ತೀರ್ಥಹಳ್ಳಿಯಲ್ಲಿ ವೃತ್ತಿ ಆರಂಭಿಸಿದ ದಾನಂರವರು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು, ಜಿಲ್ಲಾ ರಕ್ಷಣಾಧಿಕಾರಿಗಳ ಕಛೇರಿಯಲ್ಲಿ ಹೆಚ್ಚಿನ ಅವಧಿ ೨೫ ವರ್ಷಗಳಿಂದ ಗಣಕ ಯಂತ್ರ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.
    ಇವರು ಉತ್ತಮವಾಗಿ ಕರ್ತವ್ಯ  ನಿರ್ವಹಿಸಿ ರಾಷ್ಟ್ರಪತಿ ಪದಕ ಮತ್ತು ಮುಖ್ಯಮಂತ್ರಿಗಳ ಪದಕ ಪಡೆದುಕೊಂಡಿದ್ದರು. ಕಳೆದ ಸುಮಾರು ೬ ವರ್ಷಗಳಿಂದ ಸಹಾಯಕ ಠಾಣಾಧಿಕಾರಿ ಹುದ್ದೆಗೆ ಮುಂಬಡ್ತಿ ಹೊಂದಿ ಶಿವಮೊಗ್ಗ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ಕಳೆದ ೩ ತಿಂಗಳಿನಿಂದ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದರು.
    ಇವರು ಕರ್ತವ್ಯದಿಂದ ವಯೋನಿವೃತ್ತಿ ಹೊಂದಿದ್ದು, ಇವರಿಗೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ಕುಮಾರ್‌ರವರು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಬೀಳ್ಕೊಡುಗೆ ನೀಡಿದರು.
    ದಾನಂರವರು ಮೂಲತಃ ಭದ್ರಾವತಿಯವರಾಗಿದ್ದು, ಇಲ್ಲಿಯೇ ಹುಟ್ಟಿ ಬೆಳೆದು, ವಿದ್ಯಾಭ್ಯಾಸ ಪೂರೈಸಿದ್ದಾರೆ. ವಿದ್ಯಾಮಂದಿರದಲ್ಲಿ ವಾಸವಾಗಿದ್ದಾರೆ.

ವಿಐಎಸ್ಎಲ್ ಉಳಿವಿಗಾಗಿ ಗಣ ಹೋಮ

 


ಭದ್ರಾವತಿ, ಮಾ. ೩೧: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರ ಸಂಘ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ ೭೨ನೇ ದಿನಕ್ಕೆ ಕಾಲಿಟ್ಟಿದೆ.  ಹೋರಾಟದ ಭಾಗವಾಗಿ ಶುಕ್ರವಾರ ಕಾರ್ಖಾನೆಯಲ್ಲಿರುವ ಶ್ರೀ ಚೌಡಮ್ಮ ದೇವಸ್ಥಾನದಲ್ಲಿ ಟ್ರಾಫಿಕ್ ಇಲಾಖೆ ಸಹಯೋಗದೊಂದಿಗೆ ಗುತ್ತಿಗೆ, ಕಾಯಂ ಕಾರ್ಮಿಕರು ಮತ್ತು ಅಧಿಕಾರಿಗಳಿಂದ ಗಣ ಹೋಮ ಧಾರ್ಮಿಕ ಆಚರಣೆ ನಡೆಸಲಾಯಿತು.  
    ಶ್ರೀ ಧರ್ಮಜಾಗರಣ ಅರ್ಚಕರ ಮಹಾಸಭಾ ವತಿಯಿಂದ ಗಣಹೋಮ ನಡೆಸಿಕೊಡಲಾಯಿತು. ಮಹಾಸಭಾ ಗೌರವಾಧ್ಯಕ್ಷರಾದ ವೇದಬ್ರಹ್ಮ ಶ್ರೀ ಕೃಷ್ಣಮೂರ್ತಿ ಸೋಮಯಾಜಿ ಮತ್ತು ಅಧ್ಯಕ್ಷ ಎಸ್.ವಿ ರಾಮಾನುಜ ಅಯ್ಯಂಗಾರ್ ನೇತೃತ್ವ ವಹಿಸಿದ್ದರು. 
ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಗುತ್ತಿಗೆ ಹಾಗು ಕಾಯಂ ಕಾರ್ಮಿಕರ ಮತ್ತು ಅಧಿಕಾರಿಗಳ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.



ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆಯಲ್ಲಿರುವ ಶ್ರೀ  ಚೌಡಮ್ಮ ದೇವಸ್ಥಾನದಲ್ಲಿ ಟ್ರಾಫಿಕ್ ಇಲಾಖೆ ವತಿಯಿಂದ ಗುತ್ತಿಗೆ ಕಾಯಂ ಕಾರ್ಮಿಕರು ಮತ್ತು ಅಧಿಕಾರಿಗಳಿಂದ ಕಾರ್ಖಾನೆ ಉಳಿವಿಗಾಗಿ ಗಣ ಹೋಮ ಧಾರ್ಮಿಕ ಆಚರಣೆ ನಡೆಸಲಾಯಿತು.  

Thursday, March 30, 2023

ಚುನಾವಣೆ ನೀತಿ ಸಂಹಿತೆ ನಡುವೆ ವಿಜೃಂಭಣೆಯಿಂದ ಜರುಗಿದ ಶ್ರೀ ರಾಮನವಮಿ ಉತ್ಸವ

ಭದ್ರಾವತಿ ನಗರದ ವಿವಿಧ ದೇವಾಲಯಗಳಲ್ಲಿ ಗುರುವಾರ ಶ್ರೀ ರಾಮನವಮಿ ಉತ್ಸವ ವಿಜೃಂಭಣೆಯಿಂದ ಜರುಗಿತು. ಚುನಾವಣೆ ನೀತಿ ಸಂಹಿತೆ ಧಾರ್ಮಿಕ ಆಚರಣೆಗಳ ಮೇಲೆ ಯಾವುದೇ ರೀತಿ ಪರಿಣಾಮ ಉಂಟು ಮಾಡಲಿಲ್ಲ. 
    ಭದ್ರಾವತಿ, ಮಾ. ೩೦: ನಗರದ ವಿವಿಧ ದೇವಾಲಯಗಳಲ್ಲಿ ಗುರುವಾರ ಶ್ರೀ ರಾಮನವಮಿ ಉತ್ಸವ ವಿಜೃಂಭಣೆಯಿಂದ ಜರುಗಿತು. ಚುನಾವಣೆ ನೀತಿ ಸಂಹಿತೆ ಧಾರ್ಮಿಕ ಆಚರಣೆಗಳ ಮೇಲೆ ಯಾವುದೇ ರೀತಿ ಪರಿಣಾಮ ಉಂಟು ಮಾಡಲಿಲ್ಲ.
    ಬೆಳಿಗ್ಗೆಯಿಂದಲೇ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಧಾರ್ಮಿಕ ಆಚರಣೆಗಳು ಜರುಗಿದವು. ಮಧ್ಯಾಹ್ನ ಪಾನಕ, ಕೋಸಂಬರಿ ವಿತರಣೆ ನಡೆಯಿತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾದರು.


    ಬಹುತೇಕ ದೇವಸ್ಥಾನಗಳ ಬಳಿ ಯಾವುದೇ ರೀತಿಯ ಫ್ಲೆಕ್ಸ್‌ಗಳು, ಬ್ಯಾನರ್‌ಗಳು, ಬಂಟಿಂಗ್ಸ್‌ಗಳು ಕಂಡು ಬರಲಿಲ್ಲ. ದೇವಸ್ಥಾನ ಸಮಿತಿಗಳ ಪದಾಧಿಕಾರಿಗಳು, ಸೇವಾಕರ್ತರು ಹೊರತುಪಡಿಸಿ ಯಾವುದೇ ರಾಜಕೀಯ ಪಕ್ಷಗಳ, ಜನಪ್ರತಿನಿಧಿಗಳು ಸುಳಿವು ಕಂಡು ಬರಲಿಲ್ಲ.

ವಿಐಎಸ್‌ಎಲ್ ನಿವೃತ್ತ ಉದ್ಯೋಗಿ ಪೆಂಡೆಂ ಪೊಗಲಯ್ಯ ನಿಧನ

ಪೆಂಡೆಂ ಪೊಗಲಯ್ಯ
    ಭದ್ರಾವತಿ, ಮಾ. ೩೦ : ಜನ್ನಾಪುರ ಗಣೇಶ್ ಕಾಲೋನಿ ನಿವಾಸಿ, ಜೆಡಿಎಸ್ ಜಿಲ್ಲಾ ಕ್ರೈಸ್ತ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಡಾರ್ವಿನ್‌ರವರ ತಂದೆ ಪೆಂಡೆಂ ಪೊಗಲಯ್ಯ(೭೩) ಬುಧವಾರ ನಿಧನ ಹೊಂದಿದರು.
    ಪತ್ನಿ ನಿವೃತ್ತ ಶಿಕ್ಷಕಿ ಶಾಂತಕುಮಾರಿ, ಪುತ್ರ ಡಾರ್ವಿನ್ ಹಾಗು ಇಬ್ಬರು ಪುತ್ರಿಯರು ಇದ್ದರು. ಪೆಂಡೆಂ ಪಗುಲಯ್ಯ ವಿಐಎಸ್‌ಎಲ್ ಕಾರ್ಖಾನೆ ನಿವೃತ್ತ ಉದ್ಯೋಗಿಯಾಗಿದ್ದು, ಅಲ್ಲದೆ ನ್ಯೂಟೌನ್ ಸಿಎಸ್‌ಐ ವೇನ್ಸ್ ಸ್ಮಾರಕ ದೇವಾಲಯ ಸದಸ್ಯರಾಗಿದ್ದರು. ಇವರ ಅಂತ್ಯಕ್ರಿಯೆ ನಗರದ ಬೈಪಾಸ್ ರಸ್ತೆ ಮಿಲ್ಟ್ರಿಕ್ಯಾಂಪ್ ಸಮೀಪದ ಸಂಯುಕ್ತ ಕ್ರೈಸ್ತ ಸಮಾಧಿಯಲ್ಲಿ ಗುರುವಾರ ಸಂಜೆ ನೆರವೇರಿತು.
    ಇವರ ನಿಧನಕ್ಕೆ ವಿವಿಧ ಚರ್ಚ್ ಧರ್ಮಗಳು, ಜೆಡಿಎಸ್ ಪಕ್ಷದ ಮುಖಂಡರಾದ ಶಾರದ ಅಪ್ಪಾಜಿ, ಆಲ್ ಇಂಡಿಯಾ ಕ್ಯಾಥೋಲಿಕ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಅಂತೋಣಿ ವಿಲ್ಸನ್, ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ತಾಲೂಕು ಅಧ್ಯಕ್ಷ ಸೆಲ್ವರಾಜ್, ನಗರಸಭೆ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಕ್ರೈಸ್ತ ಸಮಾಜದ ಮುಖಂಡರು, ನಿವೃತ್ತ ಕಾರ್ಮಿಕರು ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.

ಭದ್ರಾವತಿ ವಿಧಾನಸಭಾ ಕ್ಷೇತ್ರ : ಏ.೧೩ರಿಂದ ನಾಮಪತ್ರ ಸ್ವೀಕಾರ

ತಾಲುಕು ಕಛೇರಿಯಲ್ಲಿ ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ  ೩ ಗಂಟೆವರೆಗೆ

ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಸಭೆಯಲ್ಲಿ ಚುನಾವಣಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ರವಿಚಂದ್ರನಾಯಕ್ ಮಾಹಿತಿ ನೀಡಿದರು. 
    ಭದ್ರಾವತಿ, ಮಾ. ೩೦ : ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಈಗಾಗಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳು ಕಟ್ಟುನಿಟ್ಟಾಗಿ ಪಾಲಿಸಬೇಕು. ಏ.೧೩ರಿಂದ ಚುನಾವಣಾಧಿಕಾರಿಗಳ ಕಛೇರಿ ತಾಲೂಕು ಕಛೇರಿಯಲ್ಲಿ ನಾಮಪತ್ರ ಸ್ವೀಕರಿಸಲಾಗುವುದು ಎಂದು ಚುನಾವಣಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ರವಿಚಂದ್ರನಾಯಕ್ ತಿಳಿಸಿದರು.
    ಅವರು ಗುರುವಾರ ನಗರಸಭೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿ, ಏ.೧೦ರಿಂದ ಚುನಾವಣಾ ಅಧಿಸೂಚನೆ ಪ್ರಕಟವಾಗಲಿದೆ. ಅಂದಿನಿಂದ ನಾಮಪತ್ರ ಸ್ವೀಕರಿಸಲಾಗುವುದು. ವಿನಿ ವಿಧಾನಸೌಧ ತಾಲೂಕು ಕಛೇರಿಯಲ್ಲಿ ಚುನಾವಣಾಧಿಕಾರಿಗಳ ಕಛೇರಿ ತೆರೆಯಲಾಗಿದ್ದು, ಇಲ್ಲಿ ಬೆಳಿಗ್ಗೆ ೧೧ ಗಂಟೆಯಿಂದ ಮಧ್ಯಾಹ್ನ ೩ ಗಂಟೆವರೆಗೆ ಏ.೨೦ರವರೆಗೆ ನಾಮಪತ್ರ ಸ್ವೀಕರಿಸಲಾಗುವುದು.
    ಏ.೨೧ ನಾಮಪತ್ರ ಪರಿಶೀಲನೆ, ಏ.೨೪ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಮೇ.೧೦ರಂದು ಮತದಾನ ನಡೆಯಲಿದ್ದು, ಮೇ.೧೩ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ ಎಂದರು.
    ಅಭ್ಯರ್ಥಿಗಳು ಚುನಾವಣಾ ಅಕ್ರಮಗಳು ನಡೆಸದಂತೆ ಎಚ್ಚರವಹಿಸಬೇಕು. ಇಲ್ಲವಾದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ಪ್ರಚಾರ ಕಾರ್ಯ ಕೈಗೊಳ್ಳಲು, ಸಭೆ-ಸಮಾರಂಭ ನಡೆಸಲು ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು. ಕರಪತ್ರ ಸೇರಿದಂತೆ ಪ್ರಚಾರ ಸಾಮಗ್ರಿಗಳ ಕುರಿತು ಸಹ ಸಂಬಂಧಿಸಿದ ನೋಡಲ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ರೀತಿ ಗೊಂದಲಗಳು ಇದ್ದಲ್ಲಿ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದರು.
    ಈ ಸಂದರ್ಭದಲ್ಲಿ ವಿವಿಧ ಪಕ್ಷದ ಪ್ರಮುಖರು ಮಾತನಾಡಿ, ಚುನಾವಣಾ ಅಕ್ರಮಕ್ಕೆ ಕಾರಣರಾದವರ ಮೇಲೆ ಮಾತ್ರ ಕಾನೂನು ಕ್ರಮ ಕೈಗೊಳ್ಳಬೇಕು. ವಿನಾಕಾರಣ ಸಂಬಂಧವಿಲ್ಲದವರ ಮೇಲೆ ಕ್ರಮ ಕೈಗೊಳ್ಳುವುದು ಸರಿಯಲ್ಲ. ಆಯೋಗ ಚುನಾವಣೆಗೆ ನಿಗದಿಪಡಿಸಿರುವ ವೆಚ್ಚ ಮೀರಿ ಹೆಚ್ಚಿನ ವೆಚ್ಚ ಮಾಡುವ ಅಭ್ಯರ್ಥಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನಗರದ ಪ್ರಮುಖ ಸ್ಥಳಗಳಲ್ಲಿ ಅಳವಡಿಸಲಾಗಿರುವ ಸಿಸಿ ಕ್ಯಾಮೆರಾಗಳು ಹಾಳಾಗಿದ್ದು, ದುರಸ್ತಿಪಡಿಸುವ ಮೂಲಕ ಚುನಾವಣಾ ಅಕ್ರಮಗಳನ್ನು ತಡೆಯಲು ಮುಂದಾಗಬೇಕು. ಹಲವು ವರ್ಷಗಳಿಂದ ಒಂದೇ ಕಡೆ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗಳನ್ನು ಬೇರೆ ಸ್ಥಳಕ್ಕೆ ನಿಯೋಜನೆಗೊಳಿಸಬೇಕೆಂದರು.
    ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರಮುಖರಾದ ಆರ್. ಕರುಣಾಮೂರ್ತಿ, ಡಿ.ಸಿ ಮಾಯಣ್ಣ, ಆನಂದ್(ಮೆಡಿಕಲ್), ಟಿ. ಚಂದ್ರೇಗೌಡ, ಮೊಸಹಳ್ಳಿ ಸುರೇಶ್, ಲೋಕೇಶ್ವರ್ ರಾವ್, ಶಶಿಕುಮಾರ್ ಗೌಡ, ಸುರೇಶಪ್ಪ, ಪಕ್ಷೇತರ ಅಭ್ಯರ್ಥಿ ಜಾನ್‌ಬೆನ್ನಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
    ತಹಸೀಲ್ದಾರ್ ಸುರೇಶ್ ಆಚಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ನಗರಸಭೆ ಪೌರಾಯುಕ್ತ ಮನುಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಏ.೨ರಂದು ಯುಕೆಜಿ ಮಕ್ಕಳಿಗೆ ಪದವಿ ಪ್ರದಾನ ಕಾರ್ಯಕ್ರಮ

    ಭದ್ರಾವತಿ, ಮಾ. ೩೦ : ನಗರದ ಅಪ್ಪರ್ ಹುತ್ತಾ ಅನನ್ಯ ಎಜ್ಯುಕೇಷನ್ ಟ್ರಸ್ಟ್ ವತಿಯಿಂದ ಏ.೨ರ ಭಾನುವಾರ ಬೆಳಿಗ್ಗೆ ೧೧ ಗಂಟೆಗೆ ಯುಕೆಜಿ ತರಗತಿ ಮಕ್ಕಳಿಗೆ ಪೂರ್ವ ಪ್ರಾಥಮಿಕ ಪದವಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ಕೆಲವು ವರ್ಷಗಳಿಂದ ಈ ವ್ಯಾಪ್ತಿಯಲ್ಲಿ ಅನನ್ಯ ಎಜ್ಯುಕೇಷನ್ ಟ್ರಸ್ಟ್ ವಿಶಿಷ್ಟವಾಗಿ ಕಾರ್ಯನಿರ್ವಹಿಸುತ್ತಿದ್ದು, ಯುಜಿಕೆ ಮಕ್ಕಳನ್ನು ಪ್ರೋತ್ಸಾಹಿಸಿ ಅವರ ಮುಂದಿನ ಶಿಕ್ಷಣಕ್ಕೆ ಮುನ್ನುಡಿ ಬರೆಯಲು ಪದವಿ ಪ್ರದಾನ ಆಯೋಜಿಸಿಕೊಂಡು ಬರುತ್ತಿದೆ. ಡಾ.ಬಿ.ಆರ್ ಅನಿಲ್ ಕಲ್ಲೇಶ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಿದ್ದು, ಟ್ರಸ್ಟ್ ಅಧ್ಯಕ್ಷ ಡಾ. ಕೆ. ನಾಗರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ.
    ಮಾ.೩೧ರಿಂದ ಬೇಸಿಗೆ ಶಿಬಿರ :
    ಅನನ್ಯ ಎಜ್ಯುಕೇಷನ್ ಟ್ರಸ್ಟ್ ವತಿಯಿಂದ ಮಾ.೩೧ರಿಂದ ಏ.೧೪ರವರೆಗೆ ಶಾಲೆಯಲ್ಲಿ ಬೇಸಿಗೆ ಶಿಬಿರ ಆಯೋಜಿಸಲಾಗಿದೆ. ಶಿಬಿರದಲ್ಲಿ ೫ ರಿಂದ ೧೧ ವರ್ಷದೊಳಗಿನ ಮಕ್ಕಳು ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಆಡಳಿತಾಧಿಕಾರಿ ವೇಣುಗೋಪಾಲ್, ಮೊ: ೯೪೪೯೭೩೯೦೭೦ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

Wednesday, March 29, 2023

ಜನಪ್ರತಿನಿಧಿಗಳ ಭಾವಚಿತ್ರ, ನಾಮಫಲಕಗಳಿಗೆ ತಟ್ಟಿದ ಚುನಾವಣಾ ನೀತಿ ಸಂಹಿತೆ

ಕೇಂದ್ರ ಚುನಾವಣಾ ಆಯೋಗ ರಾಜ್ಯ ವಿಧಾನಸಭಾ ಚುನಾವಣೆ ಘೋಷಿಸುತ್ತಿದ್ದಂತೆ ಭದ್ರಾವತಿ ವಿಧಾನಸಭಾ ಕ್ಷೇತ್ರದಾದ್ಯಂತ ನೀತಿ ಸಂಹಿತೆ ಜಾರಿಗೆ ಬಂದಿದ್ದು, ನಗರಸಭೆ ಸಿಬ್ಬಂದಿಗಳು ನಗರದ ವಿವಿಧೆಡೆ ಸಾರ್ವಜನಿಕ ಸ್ಥಳಗಳಲ್ಲಿ ಜನಪ್ರತಿನಿಧಿಗಳ ಭಾವಚಿತ್ರಗಳು, ನಾಮಫಲಕಗಳು ಪ್ರದರ್ಶನಗೊಳ್ಳದಂತೆ ಕ್ರಮ ಕೈಗೊಳ್ಳುತ್ತಿರುವುದು ಕಂಡು ಬಂದಿತು. 
    ಭದ್ರಾವತಿ, ಮಾ. ೨೯: ಕೇಂದ್ರ ಚುನಾವಣಾ ಆಯೋಗ ರಾಜ್ಯ ವಿಧಾನಸಭಾ ಚುನಾವಣೆ ಘೋಷಿಸುತ್ತಿದ್ದಂತೆ ಕ್ಷೇತ್ರದಾದ್ಯಂತ ನೀತಿ ಸಂಹಿತೆ ಜಾರಿಗೆ ಬಂದಿದ್ದು, ನಗರಸಭೆ ಸಿಬ್ಬಂದಿಗಳು ನಗರದ ವಿವಿಧೆಡೆ ಸಾರ್ವಜನಿಕ ಸ್ಥಳಗಳಲ್ಲಿ ಜನಪ್ರತಿನಿಧಿಗಳ ಭಾವಚಿತ್ರಗಳು, ನಾಮಫಲಕಗಳು ಪ್ರದರ್ಶನಗೊಳ್ಳದಂತೆ ಕ್ರಮ ಕೈಗೊಳ್ಳುತ್ತಿರುವುದು ಕಂಡು ಬಂದಿತು.
    ಸಾರ್ವಜನಿಕ ಕಟ್ಟಡಗಳು, ಸಮುದಾಯ ಭವನಗಳು, ಆಟೋ, ಟ್ಯಾಕ್ಸಿ ನಿಲ್ದಾಣಗಳು ಸೇರಿದಂತೆ ಹಲವೆಡೆ ಜನಪ್ರತಿನಿಧಿಗಳ ಭಾವಚಿತ್ರ ಹಾಗು ನಾಮಫಲಕಗಳು ಪ್ರದರ್ಶನಗೊಳ್ಳದಂತೆ ಮುಚ್ಚುವ ಕಾರ್ಯದಲ್ಲಿ ತೊಡಗಿದ್ದು, ಈ ಬಾರಿ  ನೀತಿ ಸಂಹಿತೆ ಮತ್ತುಷ್ಟು ಬಿಗಿಗೊಳ್ಳುವ ಸಾಧ್ಯತೆ ಕಂಡು ಬರುತ್ತಿದೆ. ಈಗಾಗಲೇ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿರುವ ಅಭ್ಯರ್ಥಿಗಳು ಕ್ಷೇತ್ರದಾದ್ಯಂತ ೩-೪ ಸುತ್ತಿನ ಪ್ರಚಾರ ಕಾರ್ಯ ಮುಕ್ತಾಯಗೊಳಿಸಿದ್ದು, ಮತದಾರರನ್ನು ಸೆಳೆಯಲು ನಾನಾ ರೀತಿಯ ಕಸರತ್ತು ಸಹ ನಡೆಸಿದ್ದಾರೆ. ಮುಂದಿನ ಪ್ರಚಾರದ ಕಾರ್ಯತಂತ್ರ ಯಾವ ರೀತಿ ಕೈಗೊಳ್ಳುತ್ತಾರೆಂಬುದನ್ನು ಕಾದು ನೋಡಬೇಕಾಗಿದೆ.

ಆಕಸ್ಮಿಕವಾಗಿ ಕೆಳಗೆ ಬಿದ್ದು ನಿವೃತ್ತ ಕಾರ್ಮಿಕ ಸಾವು


ಅರಬಿಂದೊ ಮಿತ್ರ
    ಭದ್ರಾವತಿ, ಮಾ. ೨೯ : ಪಶ್ಚಿಮ ಬಂಗಾಳದ ಬರ್ನ್ಪುರ ಉಕ್ಕು ಕಾರ್ಖಾನೆಯ ನಿವೃತ್ತ ಕಾರ್ಮಿಕ ಹಾಗು ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಅರಬಿಂದೊ ಮಿತ್ರ(೬೬) ನಗರದ ವಿಐಎಸ್‌ಎಲ್ ಅತಿಥಿ ಗೃಹದಲ್ಲಿ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರುವ ಘಟನೆ ಬುಧವಾರ ನಡೆದಿದೆ.
    ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಹೋರಾಟ ನಡೆಸುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ಬೆಂಬಲ ಸೂಚಿಸಲು ಹಾಗು ವಿಐಎಸ್‌ಎಲ್ ನಿವೃತ್ತ ಕಾರ್ಮಿಕ ವಿಶೇಷ ಸಭೆಯಲ್ಲಿ ಭಾಗವಹಿಸಲು ಸೈಲ್ ನಿವೃತ್ತ ಕಾರ್ಮಿಕರ ಒಕ್ಕೂಟದ ಉನ್ನತದ ಮಟ್ಟದ ಸಮಿತಿಯೊಂದಿಗೆ ನಗರಕ್ಕೆ ಆಗಮಿಸಿದ್ದ ಅರಬಿಂದೊ ಮಿತ್ರ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಿದ್ದರು.
    ಅತಿಥಿ ಗೃಹದ ಮಹಡಿಯಲ್ಲಿ ಆಕಸ್ಮಿಕವಾಗಿ ಆಯತಪ್ಪಿ ಕೆಳಗೆ ಬಿದ್ದಿದ್ದು, ಇದರಿಂದಾಗಿ ಗಂಭೀರವಾಗಿ ಗಾಯಗೊಂಡ ಇವರನ್ನು ತಕ್ಷಣ ವಿಐಎಸ್‌ಎಲ್ ಆಸ್ಪತ್ರೆಗೆ ದಾಖಲಿಸಲಾಯಿದಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಶ್ರೀರಾಮನವಮಿ : ಮಾ.೩೦ರಂದು ಪ್ರಾಣಿವಧೆ, ಮಾಂಸ ಮಾರಾಟ ನಿಷೇಧ


ಭದ್ರಾವತಿ, ಮಾ. ೨೯: ಶ್ರೀರಾಮನವಮಿ ಹಬ್ಬದ ಪ್ರಯುಕ್ತ ಮಾ.೩೦ರ ಗುರುವಾರ ನಗರಸಭೆ ವ್ಯಾಪ್ತಿಯಲ್ಲಿ ಪ್ರಾಣಿವಧೆ ಮತ್ತು ಮಾಂಸ ಮಾರಾಟ ನಿಷೇಧಿಸಲಾಗಿದೆ.
ಬಾರ್ & ರೆಸ್ಟೋರೆಂಟ್ ಹಾಗು ಮಾಂಸಹಾರಿ ಹೋಟಲ್‌ಗಳಲ್ಲಿ ಮಾಂಸಹಾರ ತಯಾರಿಸುವುದನ್ನು ಮತ್ತು ಕುರಿ/ಕೋಳಿ ಹಾಗು ಇತರೆ ಮಾಂಸ ಮಾರಾಟಗಾರರು ಮಾಂಸ ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಒಂದು ವೇಳೆ ಆದೇಶ ಉಲ್ಲಂಘಿಸಿದ್ದಲ್ಲಿ  ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೌರಾಯುಕ್ತ ಮನುಕುಮಾರ್ ಎಚ್ಚರಿಸಿದ್ದಾರೆ.

ಮಾ.೩೧ರವರೆಗೆ ಶ್ರೀ ಉದ್ದಾಮ ಕ್ಷೇತ್ರ ವಾರ್ಷಿಕ ಜಾತ್ರಾ ಮಹೋತ್ಸವ : ಅಂತರ್ಜಾಲ ತಾಣ ಲೋಕಾರ್ಪಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯರಾದ ಡಾ. ವೀರೇಂದ್ರ ಹೆಗಡೆಯವರು ಭದ್ರಾವತಿ ತಾಲೂಕಿನ ಪುರಾಣ ಪ್ರಸಿದ್ದ ಗಂಗೂರಿನ ಶ್ರೀ ಉದ್ದಾಂಜನೇಯ ಸ್ವಾಮಿ ದೇವಸ್ಥಾನ ಶ್ರೀ ಉದ್ದಾಮ ಕ್ಷೇತ್ರದ ನೂತನ ಅಂತರ್ಜಾಲ ತಾಣ ಲೋಕಾರ್ಪಣೆಗೊಳಿಸಿದರು.
    ಭದ್ರಾವತಿ, ಮಾ. ೨೯: ತಾಲೂಕಿನ ಪುರಾಣ ಪ್ರಸಿದ್ದ ಗಂಗೂರಿನ ಶ್ರೀ ಉದ್ದಾಂಜನೇಯ ಸ್ವಾಮಿ ದೇವಸ್ಥಾನ ಶ್ರೀ ಉದ್ದಾಮ ಕ್ಷೇತ್ರ ವಾರ್ಷಿಕ ಜಾತ್ರಾ ಮಹೋತ್ಸವ ಮಾ.೩೧ರವರೆಗೆ ನಡೆಯಲಿದೆ.
    ಬುಧವಾರ ಬೆಳಿಗ್ಗೆ ಕುಡಿಪೂಜೆ, ಧ್ವಜಾರೋಹಣ, ಉದ್ದಾಮನಿಗೆ ಪಂಚಾಮೃತ-ರುದ್ರಾಭಿಷೇಕ, ಗಣಪತಿ ಪುಣ್ಯಾಹ ನಾಂದಿ, ಮಹಾಸಂಕಲ್ಪ, ಅಷ್ಟದ್ರವ್ಯ ಮಹಾ ಗಣಪತಿ ಹೋಮ, ಪುರಸ್ಸರ ರುದ್ರಹೋಮ, ೧೦೮ ದಂಪತಿಗಳಿಂದ ಸಾಮೂಹಿಕ ಸತ್ಯನಾರಾಯಣ ಸ್ವಾಮಿ ಪೂಜೆ, ಕೆಂಚಾಂಬಿಕ ಮೂಲಮಂತ್ರ ಹೋಮ, ಮಧ್ಯಾಹ್ನ ಮಹಾಮಂಗಳಾರತಿ, ಮಹಾಪ್ರಸಾದ ವಿನಿಯೋಗ ಕಾರ್ಯಕ್ರಮಗಳು ಜರುಗಿದವು. ಸ್ವಾಮಿಗೆ ವಿವಿಧ ಹಣ್ಣುಗಳಿಂದ ಅಲಂಕಾರ ಕೈಗೊಳ್ಳಲಾಗಿತ್ತು.
    ಸಂಜೆ ಮಂಡಲಪೂಜೆ, ವಾಸ್ತುರಾಕ್ಷೋಘ್ನ ಸುದರ್ಶನ ಹೋಮ, ಲಕ್ಷ್ಮೀನೃಸಿಂಹ ಹೋಮ, ದಿಗ್ಬಲಿ, ಪ್ರಾಕೋತ್ಸವ, ಅಶ್ಥಾವಧಾನ ಸೇವೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
    ಮಾ.೩೦ರಂದು ಬೆಳಿಗ್ಗೆ ೬.೩೦ಕ್ಕೆ ಕುಂಭಾಭಿಷೇಕ ನಡೆಯಲಿದೆ. ೧೦೦೮ ಕಳಶಗಳ ಗಂಗಾ ಪೂಜೆ ಮತ್ತು ಗಂಗಾ ಕಳಶಗಳ ಮೆರವಣಿಗೆ, ಕುಂಭಾಭಿಷೇಕ, ಮೋದಕ ಅಥರ್ವಶೀರ್ಷ ಗಣಪತಿ ಹೋಮ, ರಾಮತಾರಕ ಹೋಮ, ಬನ್ನಿಮಹಾಕಾಳಿ ಹೋಮ ಹಾಗು ಮಧ್ಯಾಹ್ನ ಮಹಾಮಂಗಳಾರತಿ, ಮಹಾಪ್ರಸಾದ ವಿನಿಯೋಗ ನಡೆಯಲಿದೆ.
    ಸಂಜೆ ೪ ಗಂಟೆಗೆ ಶ್ರೀ ರಾಮತಾರಕ ಜಪ, ಸಂಜೆ ೬ ಗಂಟೆಗೆ ಪಂಚದುರ್ಗಾ ದೀಪ ನಮಸ್ಕಾರ, ವನದುರ್ಗಾ ಹೋಮ, ವಿಜಯದುರ್ಗ ಹೋಮ, ಪ್ರಾಕಾರೋತ್ಸವ, ಅಷ್ಟಾವಧಾನ ಸೇವೆ, ಮಹಾಮಂಗಳಾರತಿ, ಮಹಾಪ್ರಸಾದ ವಿನಿಯೋಗ ನಡೆಯಲಿದೆ. ಸ್ವಾಮಿಗೆ ವಿವಿಧ ಹೂವುಗಳಿಂದ ಅಲಂಕಾರ ನಡೆಯಲಿದೆ.
    ಮಾ.೩೧ರಂದು ಬೆಳಿಗ್ಗೆ ಸೂರ್ಯೋದಯಕ್ಕೂ ಮುನ್ನ ಬಾಲಾರ್ಕ ಗಣಪತಿ ಹೋಮಾರಂಭ, ಶನಿ ಶಾಂತಿ ಹೋಮ, ಸೂರ್ಯೋದಯಕ್ಕೆ ಸರಿಯಾಗಿ ಪೂರ್ಣಹುತಿ, ಸ್ವಾಮಿಗೆ ಪಂಚಾಮೃತ ಅಭಿಷೇಕ, ತುಪ್ಪ, ಜೇನು ತುಪ್ಪ, ಎಳನೀರು, ಕಬ್ಬಿನ ಹಾಲು ಮತ್ತು ರುದ್ರಾಭಿಷೇಕ, ಮಾರುತಿ ಮೂಲ ಮಂತ್ರ ಹೋಮ, ಕೆಂಚರಾಯ ಮೂಲ ಮಂತ್ರ ಹೋಮ, ನವಗ್ರಹ ಹೋಮ ನಡೆಯಲಿವೆ. ಸಂಜೆ ೬ ಗಂಟೆಗೆ ಆಶ್ಲೇಷ ಬಲಿ ಪೂಜೆ, ಶ್ರೀ ವಲ್ಲಿಸಹಿತ ಸುಬ್ರಹ್ಮಣ್ಯ ಶಕ್ತಿಧರ ಹೋಮ, ಆಶ್ಲೇಷ ಬಲಿ ಪೂಜೆ, ಮಹಾ ಮಂಗಳಾರತಿ ಮತ್ತು ಮಹಾಪ್ರಸಾದ ವಿನಿಯೋಗ ಜರುಗಲಿವೆ.
    ಅಂತರ್ಜಾಲ ತಾಣ(www.uddanaanjaneya.org) ಲೋಕಾರ್ಪಣೆ :
    ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯರಾದ ಡಾ. ವೀರೇಂದ್ರ ಹೆಗಡೆಯವರು ಶ್ರೀ ಕ್ಷೇತ್ರದ ನೂತನ ಅಂತರ್ಜಾಲ ತಾಣ ಲೋಕಾರ್ಪಣೆಗೊಳಿಸಿದರು.
    ಶ್ರೀ ಉದ್ದಾಂಜನೇಯ ಸೇವಾ ಟ್ರಸ್ಟ್ ಪ್ರಮುಖರಾದ ಜಯಶಂಕರ್, ಹೊಸಹಳ್ಳಿ ತಾಂಡದ ರಮೇಶ್‌ನಾಯ್ಕ, ಮಂಜಾನಾಯ್ಕ, ಎಚ್.ಎಂ ರಾಮಚಂದ್ರಪ್ಪ, ಗಂಗೂರು ಎಸ್. ವಾಗೀಶ್‌ರಾವ್, ಶ್ರೀರಾಮನಗರ ಎಂ.ಕೆ ನಾರಾಯಣಸ್ವಾಮಿ, ಹೊಸಹಳ್ಳಿ ತಾಂಡದ ಎಸ್. ಗೋವಿಂದನಾಯ್ಕ, ಅಣ್ಣಪ್ಪನಾಯ್ಕ ಮತ್ತು ದೊಡ್ಡೇರಿ ಡಿ.ಸಿ ತಿಮ್ಮಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಏ.5ರಿಂದ ಬೇಸಿಗೆ ಶಿಬಿರ



ಭದ್ರಾವತಿ,  ಮಾ. 29: ನಗರದ ಜನ್ನಾಪುರ ಅಪರಂಜಿ ಅಭಿನಯ ಶಾಲೆ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ರಜಾ-ಮಜಾ 5 ದಿನಗಳ ಬೇಸಿಗೆ ಶಿಬಿರ ಏ.5ರಿಂದ ಆಯೋಜಿಸಲಾಗಿದೆ.
    ಮಕ್ಕಳಿಗೆ ರಂಗ ಕಲೆ ಮತ್ತು ಚಿತ್ರಕಲೆ ತರಬೇತಿ ನಡೆಯಲಿದೆ.  4 ರಿಂದ 15 ವರ್ಷದ ಮಕ್ಕಳು ಭಾಗವಹಿಸಬಹುದಾಗಿದೆ.  ಶಿಬಿರ ಬೆಳಿಗ್ಗೆ  10.30 ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿದೆ.
    ಹೆಚ್ಚಿನ ಮಾಹಿತಿಗೆ ಅಪರಂಜಿ ಶಿವರಾಜ್ ಮೊ: 9980534406 ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ಭದ್ರಗಿರಿಯಲ್ಲಿ ತಿರುಪಂಗುಣಿ ಉತ್ತರ ಜಾತ್ರಾ ಉತ್ಸವಕ್ಕೆ ಚಾಲನೆ

ಭದ್ರಾವತಿ ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಧ್ವಜಾರೋಹಣದೊಂದಿಗೆ ತಿರುಪಂಗುಣಿ ಉತ್ತರ ಜಾತ್ರಾ ಉತ್ಸವಕ್ಕೆ ಚಾಲನೆ ನೀಡಲಾಯಿತು.
    ಭದ್ರಾವತಿ, ಮಾ. ೨೯ : ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಧ್ವಜಾರೋಹಣದೊಂದಿಗೆ ತಿರುಪಂಗುಣಿ ಉತ್ತರ ಜಾತ್ರಾ ಉತ್ಸವಕ್ಕೆ ಚಾಲನೆ ನೀಡಲಾಯಿತು.
    ಶ್ರೀ ಕ್ಷೇತ್ರದ ಶ್ರೀ ಮುರುಗೇಶ್ ಸ್ವಾಮೀಜಿಯವರ ದಿವ್ಯಸಾನಿಧ್ಯದಲ್ಲಿ ಬೆಳಿಗ್ಗೆ ಹೋಮ-ಹವನ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.    ಎಂ.ಸಿ ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಬಸಪ್ಪ, ಮಾಜಿ ಅಧ್ಯಕ್ಷೆ ಪದ್ಮ ಸಂಜೀವ್ ಕುಮಾರ್,  ದೇವಸ್ಥಾನ ಮಂಡಳಿ ಅಧ್ಯಕ್ಷ ಎ. ಚಂದ್ರಘೋಷನ್, ಪದಾಧಿಕಾರಿಗಳು, ಸೇವಾಕರ್ತರು ಹಾಗೂ ಸುತ್ತಮುತ್ತಲ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.
    ಕಲ್ಲತ್ತಿಪುರದ ಆರ‍್ಮುಗಂರವರು ಶ್ರೀ ಕ್ಷೇತ್ರಕ್ಕೆ  ಗೋವು ದಾನ ನೀಡಿದರು. ಏ.೪ರಂದು ಮಹಾ ಚಂಡಿಕಾ ಯಾಗ ಮತ್ತು  ೫ ರಂದು ತಿರುಪಂಗಣಿ ಉತ್ಸವ ವಿಜೃಂಭಣೆಯಿಂದ ಜರುಗಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗಳಿಸುವಂತೆ ಕೋರಲಾಗಿದೆ.


ತರೀಕೆರೆ ತಾಲೂಕಿನ ಕಲ್ಲತ್ತಿಪುರದ ಆರ‍್ಮುಗಂರವರು ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವಸುಬ್ರಮಣ್ಯ ಸ್ವಾಮಿ ದೇವಸ್ಥಾನಕ್ಕೆ ಗೋವು ದಾನ ನೀಡಿದರು.

Tuesday, March 28, 2023

ವಿಐಎಸ್‌ಎಲ್ ಉಳಿವಿಗಾಗಿ ಗುತ್ತಿಗೆ ಕಾರ್ಮಿಕರಿಂದ ಉರುಳು ಸೇವೆ

ಭದ್ರಾವತಿ ಹಳೇನಗರ ಪುರಾಣ ಪ್ರಸಿದ್ದ, ಕ್ಷೇತ್ರ ಪಾಲಕ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ವಿಐಎಸ್‌ಎಲ್ ಕಾರ್ಖಾನೆ ಉಳಿವಿಗಾಗಿ ಗುತ್ತಿಗೆ ಕಾರ್ಮಿಕರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಉರುಳು ಸೇವೆ ನಡೆಸಿದರು.
    ಭದ್ರಾವತಿ, ಮಾ. ೨೮: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇದೀಗ ಗುತ್ತಿಗೆ ಕಾರ್ಮಿಕರು ದೇವರ ಮೊರೆ ಹೋಗಿದ್ದಾರೆ.
    ಮಂಗಳವಾರ ಸಂಜೆ ಹಳೇನಗರ ಪುರಾಣ ಪ್ರಸಿದ್ದ, ಕ್ಷೇತ್ರ ಪಾಲಕ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಉರುಳು ಸೇವೆ ನಡೆಸಿದರು. ಈಗಾಗಲೇ ಹಲವು ರೀತಿಯ ಹೋರಾಟಗಳನ್ನು ಕೈಗೊಂಡಿರುವ ಗುತ್ತಿಗೆ ಕಾರ್ಮಿಕರು ಹೋರಾಟದ ಒಂದು ಭಾಗವಾಗಿ ಧಾರ್ಮಿಕ ಆಚರಣೆಗಳನ್ನು ಸಹ ಕೈಗೊಳ್ಳುತ್ತಿದ್ದಾರೆ.
    ಈ ಹಿಂದೆ ಸಹ ಕಾಯಂ ಕಾರ್ಮಿಕರು ಹೋರಾಟದ ಸಂದರ್ಭದಲ್ಲಿ ವಿಶೇಷ ಪೂಜೆ ಸಲ್ಲಿಸಿ ಉರುಳು ಸೇವೆ ನಡೆಸಿದ್ದರು.  ಕೆಲವು ವರ್ಷಗಳ ಹಿಂದಿನ ಘಟನೆ ಇದೀಗ ಪುನಃ ಮರುಕಳುಹಿಸಿರುವುದು ವಿಶೇಷವಾಗಿದೆ.
    ಗಣಹೋಮ-ಶ್ರೀ ಚೌಡೇಶ್ವರಿ ಅಮ್ಮನವರ ಮಹಾಪೂಜೆ:
    ಮಾ.೩೧ರಂದು ವಿಐಎಸ್‌ಎಲ್ ಕಾರ್ಖಾನೆ ಆವರಣದಲ್ಲಿ ಟ್ರಾಫಿಕ್ ಇಲಾಖೆಯ ಅಧಿಕಾರಿಗಳು, ಕಾರ್ಮಿಕರು ಮತ್ತು ಗುತ್ತಿಗೆ ಕಾರ್ಮಿಕರ ವತಿಯಿಂದ ಬೆಳಿಗ್ಗೆ ೯ ಗಂಟೆಗೆ ಗಣಹೋಮ, ಶ್ರೀ ಚೌಡೇಶ್ವರಿ ಅಮ್ಮನವರ ಮಹಾಪೂಜೆ ಮತ್ತು ೧೨ ಗಂಟೆಗೆ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  

ವಿಶಾಲಾಕ್ಷಮ್ಮ ನಿಧನ

ವಿಶಾಲಾಕ್ಷಮ್ಮ 
    ಭದ್ರಾವತಿ, ಮಾ. ೨೮ : ನಗರದ ಹುತ್ತಾ ಕಾಲೋನಿ ಬಿಜೆಪಿ ಪಕ್ಷದ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸತೀಶ್‌ಕುಮಾರ್‌ರವರ ಪತ್ನಿ ವಿಶಾಲಾಕ್ಷಮ್ಮ ನಿಧನ ಹೊಂದಿದರು.
    ಪತಿ ಸತೀಶ್‌ಕುಮಾರ್ ಹಾಗು ಇಬ್ಬರು ಹೆಣ್ಣು ಮಕ್ಕಳು ಇದ್ದರು. ಅಂತ್ಯಕ್ರಿಯೆ ಬುಧವಾರ ಬೆಳಿಗ್ಗೆ ನಡೆಯಲಿದೆ. ಸತೀಶ್‌ಕುಮಾರ್ ದಂಪತಿ ವಿವೇಕಾನಂದ ಜಾಗೃತಿ ಬಳಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
    ವಿಶಾಲಾಕ್ಷಮ್ಮನವರ ನಿಧನಕ್ಕೆ ಬಿಜೆಪಿ ಪಕ್ಷದ ಪ್ರಮುಖರು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಸಂತಾಪ ಸೂಚಿಸಿದ್ದಾರೆ.

ಯಡಿಯೂರಪ್ಪ ನಿವಾಸದ ಮೇಲೆ ದಾಳಿ : ಖಂಡನೆ

ಭದ್ರಾವತಿಯಲ್ಲಿ ಮಂಗಳವಾರ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಶಿಕಾರಿಪುರದ ನಿವಾಸದ ಮೇಲೆ ಸೋಮವಾರ ಕಲ್ಲು ತೂರಾಟ ನಡೆಸಿ ದಾಳಿ ಮಾಡಿರುವ ಕೃತ್ಯವನ್ನು  ಖಂಡಿಸಿದರು.  
    ಭದ್ರಾವತಿ, ಮಾ. ೨೮: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಶಿಕಾರಿಪುರದ ನಿವಾಸದ ಮೇಲೆ ಸೋಮವಾರ ಕಲ್ಲು ತೂರಾಟ ನಡೆಸಿ ದಾಳಿ ಮಾಡಿರುವ ಕೃತ್ಯವನ್ನು ನಗರದ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಖಂಡಿಸಿದ್ದಾರೆ.
    ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಾಜದ ಪ್ರಮುಖರು ಈ ಘಟನೆ ಸಮುದಾಯದಲ್ಲಿ ದಿಗ್ಭ್ರಮೆಯನ್ನುಂಟು ಮಾಡಿದೆ. ಸುಮಾರು ೫ ದಶಕಗಳ ರಾಜಕೀಯ ಅನುಭವ ಹೊಂದಿರುವ ನಾಡು ಕಂಡ ಧೀಮಂತ ನಾಯಕ ಬಿ.ಎಸ್ ಯಡಿಯೂರಪ್ಪ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಯಡಿಯೂರಪ್ಪನವರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸದೆ ದೊಡ್ಡತನ ಪ್ರದರ್ಶಿಸಿದ್ದಾರೆ. ಈ ಕೃತಕ್ಕೆ ಸಂಬಂಧಿಸಿದಂತೆ ಯಾರನ್ನು ಬಂಧಿಸದಂತೆ ಮನವಿ ಮಾಡಿದ್ದಾರೆ.  ಈ ಕೃತ್ಯವನ್ನು ಖಂಡಿಸುವುದು ಸಮುದಾಯದ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
    ಯಡಿಯೂರಪ್ಪನವರು ಹೋರಾಟದಿಂದ ರಾಜಕೀಯಕ್ಕೆ ಬಂದವರು ಎಲ್ಲಾ ಸಮುದಾಯದ ಏಳಿಗೆಗಾಗಿ ಶ್ರಮಿಸಿದವರು. ಪ್ರಸ್ತುತ ಅವರು ರಾಜಕೀಯದಿಂದ ನಿವೃತ್ತಿ ಪಡೆದುಕೊಂಡಿದ್ದಾರೆ. ಆದರೂ ಸಹ ತನ್ನ ಪಕ್ಷಕ್ಕಾಗಿ ಶ್ರಮಿಸುತ್ತಿದ್ದಾರೆ. ದುರುದ್ದೇಶದಿಂದ ಇವರ ನಿವಾಸದ ಮೇಲೆ ದಾಳಿ ನಡೆಸಲಾಗಿದೆ ಎಂದು ಆರೋಪಿಸಿದರು.  
    ಹೋರಾಟ ನಡೆಸುವುದಕ್ಕೆ ಯಾವುದೇ ವಿರೋಧವಿಲ್ಲ. ಆದರೆ ಹೋರಾಟ ದಾರಿ ತಪ್ಪಬಾರದು. ಅದರಿಂದ ಮತ್ತೊಬ್ಬರಿಗೆ ತೊಂದರೆಯಾಗಬಾರದು. ಯಾರ ವಿರುದ್ಧ ಸಹ ಈ ರೀತಿಯ ಘಟನೆಗಳು ಸಮಾಜದಲ್ಲಿ ಮರುಕಳುಹಿಸಬಾರದು. ಈ ಹಿನ್ನಲೆಯಲ್ಲಿ ಈ ಘಟನೆ ಕುರಿತು ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
    ಪ್ರಮುಖರಾದ ತೀರ್ಥಯ್ಯ, ಜಿ. ಸುರೇಶಯ್ಯ, ಆರ್.ಎಸ್ ಶೋಭಾ, ರವಿಕುಮಾರ್, ಅನುಪಮ ಚನ್ನೇಶ್, ಶೋಭಾ ಪಾಟೀಲ್, ಕವಿತಾ ಸುರೇಶ್, ಜಗದೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Monday, March 27, 2023

ಬಡವರಿಗೆ ನಿವೇಶನ ಹಂಚಿ : ಪಿಡಿಓ ಅಮಾನತುಗೊಳಿಸಿ

ತಾಲೂಕು ಪಂಚಾಯಿತಿ ಕಚೇರಿ ಮುಂಭಾಗ ಪ್ರತಿಭಟನೆ

ಭದ್ರಾವತಿ ಹಳೇ ಹಿರಿಯೂರು ಗ್ರಾಮಠಾಣಾ ಜಾಗ ಒತ್ತುವರಿ ತೆರವುಗೊಳಿಸಿ ನಿವೇಶನ ರಹಿತರಿಗೆ ಹಂಚಿಕೆ ಮಾಡುವಂತೆ ಹಾಗೂ ಗ್ರಾಮ ಪಂಚಾಯಿತಿ ಪಿಡಿಓ ಭ್ರಷ್ಟ ಅಧಿಕಾರಿಯನ್ನು ಅಮಾನತ್ತು ಮಾಡಲು ಆಗ್ರಹಿಸಿ ಸೋಮವಾರ ತಾಲೂಕು ಪಂಚಾಯತಿ ಮುಂಭಾಗ ಹಿರಿಯೂರು ಗ್ರಾಮಾಭವೃದ್ಧಿ ಹೋರಾಟ ಸಮಿತಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ಡಾ. ರಾಜಕುಮಾರ್ ಅಭಿಮಾನಿಗಳ ಸಂಘದ ಪ್ರತಿಭಟನೆ ನಡೆಸಲಾಯಿತು.
    ಭದ್ರಾವತಿ, ಮಾ. ೨೭: ಹಳೇ ಹಿರಿಯೂರು ಗ್ರಾಮಠಾಣಾ ಜಾಗ ಒತ್ತುವರಿ ತೆರವುಗೊಳಿಸಿ ನಿವೇಶನ ರಹಿತರಿಗೆ ಹಂಚಿಕೆ ಮಾಡುವಂತೆ ಹಾಗೂ ಗ್ರಾಮ ಪಂಚಾಯಿತಿ ಪಿಡಿಓ ಭ್ರಷ್ಟ ಅಧಿಕಾರಿಯನ್ನು ಅಮಾನತ್ತು ಮಾಡಲು ಆಗ್ರಹಿಸಿ ಸೋಮವಾರ ತಾಲೂಕು ಪಂಚಾಯತಿ ಮುಂಭಾಗ ಹಿರಿಯೂರು ಗ್ರಾಮಾಭವೃದ್ಧಿ ಹೋರಾಟ ಸಮಿತಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ಡಾ. ರಾಜಕುಮಾರ್ ಅಭಿಮಾನಿಗಳ ಸಂಘದ ಪ್ರತಿಭಟನೆ ನಡೆಸಲಾಯಿತು.
    ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಮುಖರು, ಹಿರಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೇಹಿರಿಯೂರು ಗ್ರಾಮಠಾಣಾ ವಿಸ್ತೀರ್ಣ ೧೭.೦೮ ಎಕರೆ ಜಾಗದಲ್ಲಿ ಸರ್ಕಾರದ ವತಿಯಿಂದ ೧೯೯೨ರ ಅವಧಿಯಲ್ಲಿ ೧೩೯ ಕುಟುಂಬಕ್ಕೆ ನಿವೇಶನ ಪತ್ರವನ್ನು ಹಂಚಿಕೆ ಮಾಡಿದ್ದು, ಅಲ್ಲಿಂದ ಇಲ್ಲಿಯವರೆಗೆ ಇನ್ನೂ ನೂರಾರು ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡುವಷ್ಟು ಜಾಗವಿದ್ದರೂ ೩೦ ವರ್ಷಗಳಿಂದ ನಿವೇಶನ ರಹಿತ ದಲಿತ, ಹಿಂದುಳಿದ ವರ್ಗದ ಬಡಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡದೆ ಹಾಲಿ ಗ್ರಾಮಪಂಚಾಯತಿ ಸದಸ್ಯರುಗಳ ಕುಟುಂಬದವರು ಹಾಗೂ ಹಣವಂತರು ಎಕರೆಗಟ್ಟಲೇ ಜಾಗವನ್ನು ಆಕ್ರಮಿಸಿಕೊಂಡಿದ್ದು, ಇದರ ಬಗ್ಗೆ ನಮ್ಮ ಸಂಘಟನೆವತಿಯಿಂದ ೩ ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ ಎಂದರು.            
    ಹೋರಾಟದ ಫಲವಾಗಿ ದಿನಾಂಕ ೨೦-೦೮-೨೦೨೨ರಂದು ಜಿಲ್ಲಾಧಿಕಾರಿಯವರು ತಾಲೂಕು ಪಂಚಾಯಿತಿ ಅಧಿಕಾರಿಯವರಿಗೆ ಮಾಡಿದ ಆದೇಶದ ಅನ್ವಯ, ತಾಲೂಕು ಪಂಚಾಯಿತಿ ಮತ್ತು ಗ್ರಾಮಪಂಚಾಯಿತಿ ಅಧಿಕಾರಿಗಳು ಭೂಮಾಪನ ಇಲಾಖೆವತಿಯಿಂದ ಸರ್ವೆ ಕಾರ್ಯ ನಡೆಸಿ, ಗಡಿ ಗುರುತಿಸಿಕೊಟ್ಟ ನಂತರ  ಗ್ರಾಮಠಾಣಾ ತೆರುವು ಕಾರ್ಯಚರಣೆ ಮಾಡಲು ದಿನಾಂಕ ೨೬-೦೯-೨೦೨೨ರಂದು ಪೋಲಿಸ್ ಬಂದೋಬಸ್ತ್ ನೊಂದಿಗೆ  ಮುಂದಾದ ಸಂದರ್ಭದಲ್ಲಿ ರಾಜಕೀಯ ಒತ್ತಡದಿಂದ ಅಧಿಕಾರಿಗಳು ನಡೆಯಬೇಕಿದ್ದ ತೆರುವು ಕಾರ್ಯಚರಣೆಯನ್ನು ಸ್ಥಗಿತಗೊಳಿಸಿ, ಹೋರಾಟಗಾರರ ಮೇಲೆ ಉದ್ದೇಶ ಪೂರ್ವಕವಾಗಿ ಗ್ರಾಮಪಂಚಾಯತಿ ಪಿಡಿಓ ಹಾಗೂ ಸದಸ್ಯರುಗಳಿಂದ ಜಾತಿ ನಿಂದನೆ, ಮಹಿಳಾ ಸದಸ್ಯರ ಮೇಲೆ ದೌರ್ಜನ್ಯ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಪೇಪರ್ ಟೌನ್    ಪೋಲಿಸ್ ಠಾಣೆಯಲ್ಲಿ ದಿನಾಂಕ ೨೮-೦೯-೨೦೨೨ರಂದು ೨ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಆರೋಪಿಸಿದರು.
    ಹೋರಾಟಗಾರರ ಬಲವನ್ನು ಕುಗ್ಗಿಸುವ ವ್ಯರ್ಥ ಪ್ರಯತ್ನವನ್ನು ಮಾಡಿರುತ್ತಾರೆ. ಇದಕ್ಕೆ ನಮ್ಮ ಸಂಘಟನೆ ಯಾವ ಬೆದರಿಕೆಗಳಿಗೆ ಕುಗ್ಗದೆ ಕಾನೂನಿನ ರೀತಿಯಲ್ಲಿ ಹೋರಾಟ ನಡೆಸಿಕೊಂಡು ಬರುತ್ತಿದ್ದೇವೆ.  ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪರಮೇಶ್ವರಪ್ಪ ಪಂಚಾಯಿತಿಯಲ್ಲಿ ನಡೆಸಿರುವ ಹಲವಾರು ಭ್ರಷ್ಟಾಚಾರದ ಬಗ್ಗೆ ಸಂಘಟನೆ ವತಿಯಿಂದ ದಾಖಲೆ ಸಮೇತ ಮೇಲಾಧಿಕಾರಿಗಳಿಗೆ ದೂರನ್ನು ಸಲ್ಲಿಸಿದರೂ, ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಒಳಗಾಗಿ ಇಂತಹ ಭ್ರಷ್ಟ ಅಧಿಕಾರಿಗಳ ಮೇಲೆ ಇದುವರೆವಿಗೂ ಯಾವುದೇ ಕಾನೂನು ರೀತಿಯ ಕಠಿಣ ಕ್ರಮ ಕೈಗೊಳ್ಳದೆ, ಅಮಾನತುಗೊಳಿಸದೇ ರಕ್ಷಿಸುತ್ತಿರುವುದರಿಂದ ಹಾಗೂ ಹಳೇ ಹಿರಿಯೂರು ಗ್ರಾಮಾಠಾಣಾ ಜಾಗವನ್ನು ತೆರುವು ಗೊಳಿಸದೇ ಒತ್ತುವರಿ ಮಾಡಿಕೊಂಡಿರುವವರನ್ನು ರಕ್ಷಿಸುತ್ತಿರುವ ಅಧಿಕಾರಿಗಳ ವಿರುದ್ಧ, ಗ್ರಾಮದ ನಿವೇಶನ ರಹಿತ ಬಡ ಕುಟುಂಬಗಳಿಗೆ ನ್ಯಾಯ ಕೊಡಿಸುವ ಉದ್ದೇಶದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.                                        
    ನ್ಯಾಯ ಸಮ್ಮತ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಮುಂದುವರೆಸಲಿದ್ದೇವೆ. ಯಾವುದೇ ಕಾರಣಕ್ಕೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಎಚ್ಚರಿಸಿದರು.
    ಪ್ರತಿಭಟನೆಯಲ್ಲಿ ಪ್ರಮುಖರಾದ ಸಂತೋಷ್, ಸತ್ಯನಾರಾಯಣ್ ರಾವ್, ರವಿ ಬಿ., ಕುಮಾರ್ ಹೆಚ್.ವೈ  ಮತ್ತು ಕೆ.ಟಿ. ಪ್ರಸನ್ನ ಗ್ರಾಮದ ಪ್ರಮುಖರು, ಗ್ರಾಮಸ್ಥರು ಪಾಲ್ಗೊಂಡಿದ್ದರು

ವಿಐಎಸ್‌ಎಲ್-ಎಂಪಿಎಂ ಕಾರ್ಖಾನೆಗಳ ಅಭಿವೃದ್ಧಿಗೆ ಕ್ರೈಸ್ತ ಧರ್ಮಗುರುಗಳಿಂದ ಸಾಮೂಹಿಕ ಪ್ರಾರ್ಥನೆ

ಎರಡು ಕಾರ್ಖಾನೆಗಳಿಗೂ ಅಗತ್ಯವಿರುವ ಬಂಡವಾಳ ಹೂಡಿ ಪುನಶ್ಚೇತನಗೊಳಿಸಲು ಆಗ್ರಹ

ಭದ್ರಾವತಿಯಲ್ಲಿ ಸೋಮವಾರ ಅಖಿಲ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಂ ಫಾರ್ ಹ್ಯೂಮನ್ ರೈಟ್ಸ್ ತಾಲೂಕು ಶಾಖೆ ವತಿಯಿಂದ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಬೆಂಬಲ ಸೂಚಿಸಿ ವಿಐಎಸ್‌ಎಲ್-ಎಂಪಿಎಂ ಎರಡೂ ಕಾರ್ಖಾನೆಗಳ ಪುನಶ್ಚೇತನಗೊಳಿಸಲು ಆಗ್ರಹಿಸಿ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಮಾ. ೨೬ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಪ್ರಕ್ರಿಯೆ ಕೈಬಿಡಬೇಕೆಂದು ಮತ್ತು ರಾಜ್ಯ ಸರ್ಕಾರಿ ಸ್ವಾಮ್ಯದ ಎಂಪಿಎಂ ಕಾರ್ಖಾನೆ ಪುನರ್ ಆರಂಭಿಸಬೇಕೆಂದು ಕೇಂದ್ರ ಹಾಗು ರಾಜ್ಯ ಸರ್ಕಾರಗಳಿಗೆ ನಗರದ ಕ್ರೈಸ್ತ ಧರ್ಮಗುರುಗಳು ಆಗ್ರಹಿಸಿದ್ದಾರೆ.
    ಸೋಮವಾರ ಅಖಿಲ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಂ ಫಾರ್ ಹ್ಯೂಮನ್ ರೈಟ್ಸ್ ತಾಲೂಕು ಶಾಖೆ ವತಿಯಿಂದ ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಬೆಂಬಲ ಸೂಚಿಸಿ ಮಾತನಾಡಿದರು.
ಕಾರ್ಖಾನೆ ಮುಚ್ಚುವ ಆದೇಶ ಹಿಂಪಡೆದು ಅಗತ್ಯವಿರುವ ಬಂಡವಾಳ ತೊಡಗಿಸುವ ಜೊತೆಗೆ ದುಡಿಯುವ ಕೈಗಳಿಗೆ ಉದ್ಯೋಗ ನೀಡಬೇಕೆಂದು ಒತ್ತಾಯಿಸಿದರು.  ಭವಿಷ್ಯದಲ್ಲಿ ಎರಡು ಕಾರ್ಖಾನೆಗಳು ಅಭಿವೃದ್ಧಿ ಹೊಂದುವಂತಾಗಲಿ ಎಂದು ಸಾಮೂಹಿಕವಾಗಿ ಪ್ರಾರ್ಥಿಸಿದರು.
    ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಸಲ್ಲಿಸಲಾಯಿತು.
    ನ್ಯೂಟೌನ್ ಅಮಲೋದ್ಭವಿಮಾತೆ ದೇವಾಲಯದ ಧರ್ಮಗುರು ಲ್ಯಾನ್ಸಿ ಡಿಸೋಜ, ಗಾಂಧಿನಗರ ವೇಲಾಂಗಣಿ ಮಾತೆ ದೇವಾಲಯದ ಧರ್ಮಗುರು ಪಾದರ್ ಸ್ಟೀವನ್ ಡಿಸಾ, ಮಾವಿನಕೆರೆ ಕಿರಿಯ ಪುಷ್ಪ ಸಂತ ತೆರೇಸರ ದೇವಾಲಯದ ಧರ್ಮಗುರು ಪಾದರ್ ದಿವ್ಯ ಕರುಣೀಶ್ ಕ್ಯಾಪುಚಿನ್, ಕಾಗದನಗರದ ಸಂತ ಜೋಸೆಫರ ದೇವಾಲಯ ಧರ್ಮಗುರು ಡೊನೆಮಿಕ್ ಕ್ರಿಸ್ತರಾಜ್, ಹಿರಿಯೂರು ವಿನ್ನಿ ಮೈನರ್ ಸೆಮಿನರಿ ರೆಕ್ಟರ್ ಪಾದರ್ ಸಂತೋಷ್ ಪೆರೇರಾ, ಧರ್ಮಗುರು ಪಾದರ್ ಮಾರ್ಕ್ ಪೆಟ್ರಿಕ್ ಡಿಸಿಲ್ವ, ಜೇಡಿಕಟ್ಟೆ ಆಶಾಕಿರಣ ನಿರ್ದೇಶಕ ಪಾದರ್ ಪ್ರಕಾಶ್ ಪಿಂಟೋ,   ಅಖಿಲ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಂ ಫಾರ್ ಹ್ಯೂಮನ್ ರೈಟ್ಸ್ ಸಂಚಾಲಕ ಅಂತೋಣಿ ವಿಲ್ಸನ್, ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ತಾಲೂಕು ಅಧ್ಯಕ್ಷ ಸೆಲ್ವರಾಜ್, ನಗರಸಭೆ ಸದಸ್ಯ ಜಾರ್ಜ್, ಲತಾ ರಾರ್ಬಟ್, ಜೆ. ಭಾಸ್ಕರ್, ಡೇವಿಸ್, ಸ್ಟೀಫನ್,  ತಾಲೂಕಿನ ಎಲ್ಲಾ ಚರ್ಚ್‌ಗಳ ಧರ್ಮಗುರುಗಳು, ಫಾಸ್ಟರ್‌ಗಳು, ಸಭಾಪಾಲಕರು, ಧರ್ಮಭಗಿನಿಯರು, ಸಂಘ-ಸಂಸ್ಥೆಗಳ ಮುಖಂಡರು ಪಾಲ್ಗೊಂಡಿದ್ದರು. ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಕಾರ್ಮಿಕ ಮುಖಂಡರು, ಗುತ್ತಿಗೆ ಕಾರ್ಮಿಕರು ಉಪಸ್ಥಿತರಿದ್ದರು.

ಬೀದಿ ನಾಯಿ ಹಾವಳಿ ನಿಯಂತ್ರಣಕ್ಕೆ ಆಗ್ರಹಿಸಿ ಪ್ರತಿಭಟನೆ : ಮನವಿ

ಭದ್ರಾವತಿ ನಗರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸೋಮವಾರ ನಗರಸಭೆ ಮುಂಭಾಗ ಕೆಜಿಎನ್ ನೌಜವಾನ್ ಕಮಿಟಿವತಿಯಿಂದ ಪ್ರತಿಭಟನೆ ನಡೆಸಿ ಪರಿಸರ ಅಭಿಯಂತರ ಪ್ರಭಾಕರ್‌ರವರಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಮಾ. ೨೭: ನಗರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸೋಮವಾರ ನಗರಸಭೆ ಮುಂಭಾಗ ಕೆಜಿಎನ್ ನೌಜವಾನ್ ಕಮಿಟಿವತಿಯಿಂದ ಪ್ರತಿಭಟನೆ ನಡೆಸಿ ಪರಿಸರ ಅಭಿಯಂತರ ಪ್ರಭಾಕರ್‌ರವರಿಗೆ ಮನವಿ ಸಲ್ಲಿಸಲಾಯಿತು.
    ನಗರಸಭೆ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳಲ್ಲೂ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ನೆಹರು ನಗರದಲ್ಲಿ ೬ ವರ್ಷದ ಮಗುವಿನ ಮೇಲೆ ಬೀದಿನಾಯಿಗಳು ಏಕಾಏಕಿ ದಾಳಿ ನಡೆಸಿದ್ದು, ಇದರಿಂದಾಗಿ ಮಕ್ಕಳು, ಮಹಿಳೆಯರು, ವಯೋವೃದ್ದರು ಒಬ್ಬಂಟಿಯಾಗಿ ಸಂಚರಿಸಲು ಭಯಪಡುವಂತಾಗಿದೆ. ಈಗಾಗಲೇ ನಗರಸಭೆ ಹಲವು ವಾರ್ಡ್‌ಗಳಲ್ಲಿ ಬೀದಿನಾಯಿಗಳು ದಾಳಿ ನಡೆಸಿರುವ ಪ್ರಕರಣಗಳು ನಡೆದಿವೆ. ಈ ಸಂಬಂಧ ಮೌಖಿಕವಾಗಿ ನಾಯಿಗಳ ನಿಯಂತ್ರಣಕ್ಕೆ ಈ ಹಿಂದೆ ತಮ್ಮ ಗಮನಕ್ಕೆ ತರಲಾಗಿದೆ. ಆದರೂ ಸಹ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸದ ಸಂಗತಿಯಾಗಿದೆ. ತಕ್ಷಣ ಬೀದಿ ನಾಯಿಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.


    ಕೆಜಿಎನ್ ನೌಜವಾನ್ ಕಮಿಟಿ ಅಧ್ಯಕ್ಷ ಅಸದ್ ಉಲ್ಲಾ ಖಾನ್ ನೇತೃತ್ವ ವಹಿಸಿದ್ದರು. ಉಪಾಧ್ಯಕ್ಷರಾದ ಶಾಹಿದ್,  ಇಮ್ರಾನ್,  ಅಂಜುಮನ್-ಎ-ಇಸ್ಲಾಹುಲ್ ಮುಸ್ಲಿಮೀನ್ ಅಧ್ಯಕ್ಷ ಮುರ್ತುಜಾಖಾನ್, ದೇಶ ಪ್ರೇಮಿ ಟಿಪ್ಪು ಸುಲ್ತಾನ್ ಯುವಕರ ಸಂಘದ ಅಧ್ಯಕ್ಷ ಮೆಹಬೂಬ್, ಪ್ರಮುಖರಾದ ನಗರಸಭಾ ಸದಸ್ಯರಾದ ಟಿಪ್ಪು ಸುಲ್ತಾನ್, ಬಷೀರ್ ಅಹಮದ್,  ಅಬ್ದುಲ್ ಖದೀರ್, ಎ. ಮಸ್ತಾನ್, ಇಬ್ರಾಹಿಂ ಖಾನ್, ಜಾವಿದ್, ಕೇಸರಿಪಡೆ ಮಂಜುನಾಥ್ ಕೊಹ್ಲಿ,  ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Sunday, March 26, 2023

ವಿಐಎಸ್‌ಎಲ್ ಉಳಿಸಿ ಹೋರಾಟಕ್ಕೆ ಸೈಲ್ ನಿವೃತ್ತ ಕಾರ್ಮಿಕರ ಒಕ್ಕೂಟದ ಉನ್ನತ ಮಟ್ಟದ ಸಮಿತಿ ಬೆಂಬಲ


ಮಾ.೨೮ರಂದು ಸಮಿತಿ ಮುಖಂಡರು ಗುತ್ತಿಗೆ ಕಾರ್ಮಿಕರ ಹೋರಾಟದಲ್ಲಿ ಉಪಸ್ಥಿತಿ
ಭದ್ರಾವತಿ, ಮಾ. ೨೭: ಸೈಲ್ ನಿವೃತ್ತ ಕಾರ್ಮಿಕರ ಒಕ್ಕೂಟದ ಉನ್ನತ ಮಟ್ಟದ ಸಮಿತಿಯ ಸಭೆ ಮಾ.೨೮ ಮತ್ತು ೨೯ರಂದು ನಗರದಲ್ಲಿ ನಡೆಯಲಿದ್ದು, ಒಕ್ಕೂಟದ ವತಿಯಿಂದ ವಿಐಎಸ್‌ಎಲ್ ಉಳಿಸಿ ಹೋರಾಟಕ್ಕೆ ಬೆಂಬಲ ಸೂಚಿಸಲಾಗಿದೆ.
ಭಾರತರತ್ನ ಸರ್.ಎಂ ವಿಶ್ವೇಶ್ವರಾಯರವರಿಂದ ಸಂಸ್ಥಾಪಿಸಲ್ಪಟ್ಟ ಹಾಗು ಲಕ್ಷಾಂತರ ಕುಟುಂಬಗಳಿಗೆ ಅನ್ನ ನೀಡಿದ ನಗರಕ್ಕೆ ಉಸಿರಾಗಿರುವ ರಾಜ್ಯದ ಪ್ರತಿಷ್ಠಿತ ವಿಐಎಸ್‌ಎಲ್ ಕಾರ್ಖಾನೆ ಸ್ಥಗಿತಗೊಳಿಸಲು ತೆಗೆದುಕೊಂಡಿರುವ ನಿರ್ಧಾರವನ್ನು ಒಕ್ಕೂಟ ಖಂಡಿಸಿದೆ. ಸುಧೀರ್ಘವಾಗಿ ಸುಮಾರು ೨ ತಿಂಗಳಿನಿಂದ ಕಾರ್ಖಾನೆ ಮುಂಭಾಗದಲ್ಲಿ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ಮಾ.೨೮ರ ಮಧ್ಯಾಹ್ನ ೩ ಗಂಟೆಗೆ ಒಕ್ಕೂಟ ಪಾಲ್ಗೊಳ್ಳಲಿದೆ.
ಒಕ್ಕೂಟದ ಅಧ್ಯಕ್ಷ ಡಾ. ವಿ.ಎನ್ ಶರ್ಮಾ(ರಾಂಚಿ), ಉಪಾಧ್ಯಕ್ಷರಾದ ಎಸ್.ಕೆ ಘೋಷ್(ಕೋಲ್ಕತ್ತಾ), ಅಭಯ್‌ಕುಮಾರ್ ದಾಸ್(ರೊರ‍್ಕೆಲಾ), ಪ್ರಧಾನ ಕಾರ್ಯದರ್ಶಿ ರಾಮ್ ಅಗರ್ ಸಿಂಗ್(ಬೊಕಾರೋ) ಉಪಸ್ಥಿತರಿರುವರು. ಅಲ್ಲದೆ ದೇಶದ ವಿವಿಧ ಸ್ಥಳಗಳಿಂದ ಸುಮಾರು ೩೦ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ನಿವೃತ್ತ, ಕಾಯಂ ಹಾಗು ಗುತ್ತಿಗೆ ಕಾರ್ಮಿಕರು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರ ಕೋರಿದೆ.

ಏ.೪ರಂದು ಭದ್ರಗಿರಿಯಲ್ಲಿ ಸಾಮೂಹಿಕ ಶ್ರೀ ಮಹಾಚಂಡಿಕಯಾಗ


ಭದ್ರಾವತಿ, ಮಾ. ೨೭ : ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಏ.೪ರ ಮಂಗಳವಾರ ಲೋಕ ಕಲ್ಯಾಣಾರ್ಥ ಸಾಮೂಹಿಕ ಶ್ರೀ ಮಹಾಚಂಡಿಕಯಾಗ ಹಮ್ಮಿಕೊಳ್ಳಲಾಗಿದೆ.
ಶ್ರೀ ಕ್ಷೇತ್ರದಲ್ಲಿ ಶ್ರೀ ದುರ್ಗಾದೇವಿ ಪ್ರತಿಮೆ ಪ್ರತಿಷ್ಠಾಪನೆ ೧೨ ವರ್ಷದ ಅಂಗವಾಗಿ ಶ್ರೀ ಮಹಾಚಂಡಿಕಯಾಗ ಹಮ್ಮಿಕೊಳ್ಳಲಾಗಿದ್ದು, ಮಧ್ಯಾಹ್ನ ೧೨.೩೦ಕ್ಕೆ ಪೂರ್ಣಾಹುತಿ ಹಾಗು ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ಜರುಗಲಿದೆ. ಹೆಚ್ಚಿನ ಮಾಹಿತಿಗೆ ಮೊ: ೯೪೮೦೨೮೩೦೩೦ ಅಥವಾ ೯೪೮೨೬೧೪೫೪೫ ಸಂಖ್ಯೆಗೆ ಕರೆ ಮಾಡಬಹುದಾಗಿದೆ.  


ವಿಐಎಸ್‌ಎಲ್-ಎಂಪಿಎಂ ಉಳಿವಿಗಾಗಿ ಮಾ.೨೭ರಂದು ಹೋರಾಟ


    ಭದ್ರಾವತಿ, ಮಾ. ೨೬ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಪ್ರಕ್ರಿಯೆ ಕೈಬಿಡಬೇಕೆಂದು ಮತ್ತು ರಾಜ್ಯ ಸರ್ಕಾರಿ ಸ್ವಾಮ್ಯದ ಎಂಪಿಎಂ ಕಾರ್ಖಾನೆ ಪುನರ್ ಆರಂಭಿಸಬೇಕೆಂದು ಕೇಂದ್ರ ಹಾಗು ರಾಜ್ಯ ಸರ್ಕಾರಗಳಿಗೆ ಒತ್ತಾಯಿಸಿ ಮಾ.೨೭ರಂದು ಅಖಿಲ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಂ ಫಾರ್ ಹ್ಯೂಮನ್ ರೈಟ್ಸ್ ತಾಲೂಕು ಶಾಖೆ ವತಿಯಿಂದ ಮನವಿ ಸಲ್ಲಿಸುವ ಮೂಲಕ ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಬೆಂಬಲ ಸೂಚಿಸಲಾಗುತ್ತಿದೆ.
    ಕಾರ್ಖಾನೆ ಮುಂಭಾಗ ಮಧ್ಯಾಹ್ನ ೨.೩೦ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲಾ ಚರ್ಚ್‌ಗಳ ಧರ್ಮಗುರುಗಳು, ಫಾಸ್ಟರ್‌ಗಳು, ಸಭಾಪಾಲಕರು, ಧರ್ಮಭಗಿನಿಯರು, ಸಂಘ-ಸಂಸ್ಥೆಗಳ ಮುಖಂಡರು ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ. ತಹಸೀಲ್ದಾರ್ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಸಲ್ಲಿಸಲಾಗುವುದು.
    ಕೈಸ್ತ ಸಮುದಾಯದವರು ಸೇರಿದಂತೆ ಸಮಸ್ತ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ನ್ಯೂಟೌನ್ ಅಮಲೋದ್ಭವಿಮಾತೆ ದೇವಾಲಯದ ಧರ್ಮಗುರು ಲ್ಯಾನ್ಸಿ ಡಿಸೋಜ ಮತ್ತು ಅಖಿಲ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಂ ಫಾರ್ ಹ್ಯೂಮನ್ ರೈಟ್ಸ್ ಸಂಚಾಲಕ ಅಂತೋಣಿ ವಿಲ್ಸನ್ ಕೋರಿದ್ದಾರೆ.

ಮಹಿಳೆಯರ ಕೊಡುಗೆ, ಸಾಧನೆಯನ್ನು ಗುರುತಿಸಿ ಗೌರವಿಸುವಂತಾಗಲಿ : ಡಾ. ಅನುರಾಧ ಪಟೇಲ್


ಭದ್ರಾವತಿ ಅಪ್ಪರ್‌ಹುತ್ತಾದಲ್ಲಿರುವ ಕೆಂಪೇಗೌಡ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಹಿಳಾ ದಿನಾಚರಣೆಯಲ್ಲಿ , ಸಾಗರ ಮಹಿಳಾ ಖಾದಿ ಉದ್ಯಮಿ, ಸಮಾಜ ಸೇವಕಿ ಕೆ.ಬಿ ಭಾಗೀರಥಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಮಾ. ೨೬: ಸಮಾಜ ಹಾಗು ಕುಟುಂಬಕ್ಕೆ ಮಹಿಳೆಯರ ಕೊಡುಗೆ ಅನನ್ಯವಾಗಿದ್ದು, ಮಹಿಳೆಯರನ್ನು ಸಮಾಜದಲ್ಲಿ ಸಮಾನವಾಗಿ ಕಾಣುವ ಮೂಲಕ ಅವರನ್ನು ಸಹ ಗುರುತಿಸಿ ಗೌರವಿಸುವಂತಾಗಬೇಕೆಂದು ನಗರದ ಚುಂಚಾದ್ರಿ ಮಹಿಳಾ ವೇದಿಕೆ ಗೌರವಾಧ್ಯಕ್ಷೆ ಡಾ. ಅನುರಾಧ ಪಟೇಲ್ ಹೇಳಿದರು.
    ಅವರು ವೇದಿಕೆ ವತಿಯಿಂದ ಅಪ್ಪರ್‌ಹುತ್ತಾದಲ್ಲಿರುವ ಕೆಂಪೇಗೌಡ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
    ನಮ್ಮ ಇತಿಹಾಸದಲ್ಲಿನ ಅನೇಕ ಮಹಿಳೆಯರ ಕೊಡುಗೆ, ಸಾಧನೆಗಳನ್ನು ನಾವುಗಳು ತಿಳಿದುಕೊಳ್ಳಬೇಕಾಗಿದೆ. ಸ್ತ್ರೀಯರು ಪರಸ್ಪರ ನಡುವೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕಾಗಿದೆ. ಪ್ರತಿಯೊಬ್ಬರು ಪ್ರೋತ್ಸಾಹಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಸಮಾಜ ಹಾಗು ಕುಟುಂಬದಲ್ಲಿನ ನಮ್ಮ ಜವಾಬ್ದಾರಿಗಳನ್ನು ಅರಿತುಕೊಂಡು ಮುನ್ನಡೆಯಬೇಕಾಗಿದೆ ಎಂದರು.
    ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್ ಮಾತನಾಡಿ, ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಗುರುತಿಸಿಕೊಂಡು ತನ್ನ ಸಾಮರ್ಥ್ಯ ಪ್ರದರ್ಶಿಸುತ್ತಿದ್ದಾಳೆ. ಯಾವುದೇ ಕಾರ್ಯದಲ್ಲಿ ಪ್ರಾಮಾಣಿಕತೆಯಿಂದ ಮುನ್ನಡೆದಾಗ ಯಶಸ್ಸು ಖಚಿತ ಎಂದರು.
    ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಮಾತನಾಡಿ, ಹೆಣ್ಣು ಸಾಧನೆಗೆ ಸ್ಪೂರ್ತಿದಾಯಕ. ಸಮಾಜದಲ್ಲಿ ಅವಳಿಗೆ ಇನ್ನೂ ಹೆಚ್ಚಿನ ಸಲಹೆ, ಸಹಕಾರ ನೀಡಿದಾಗ ಏನು ಬೇಕಾದರೂ ಸಾಧಿಸಲು ಸಾಧ್ಯ ಎಂದರು.
    ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಘಟಕ ವ್ಯವಸ್ಥಾಪಕಿ ಅಂಬಿಕಾ ಸುಧೀರ್, ಸಾಗರ ಮಹಿಳಾ ಖಾದಿ ಉದ್ಯಮಿ, ಸಮಾಜ ಸೇವಕಿ ಕೆ.ಬಿ ಭಾಗೀರಥಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಜಾನಪದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಮಿಸ್ ಚುಂಚಾದ್ರಿ ಮಹಿಳೆಯಾಗಿ ಪ್ರೇಮ ಮಂಜುನಾಥ್, ಅದೃಷ್ಟದ ಮಹಿಳೆಯಾಗಿ ಆಯ್ಕೆಯಾದ ಪದ್ಮ ಮಂಜುನಾಥ್‌ರವರಿಗೆ ಬೆಳ್ಳಿ ದೀಪ ಉಡುಗೊರೆಯಾಗಿ ನೀಡಿಲಾಯಿತು.
    ಲತಾ ಪ್ರಭಾಕರ್ ಸ್ವಾಗತಿಸಿದರು. ಸುಮತಿ ಕಾರಂತ್ ನಿರೂಪಿಸಿ ಶೀಲಾ ರವಿ ವಂದಿಸಿದರು.  

೬೭ ದಿನ ಪೂರೈಸಿದ ವಿಐಎಸ್‌ಎಲ್ ಉಳಿಸಿ ಹೋರಾಟ : ಅಂಚೆ ಕಾರ್ಡ್‌ನಲ್ಲಿ ರಕ್ತದಲ್ಲಿ ಬರೆದ ಗುತ್ತಿಗೆ ಕಾರ್ಮಿಕರು

ಮುಚ್ಚುವ ಆದೇಶ ಹಿಂಪಡೆದು ಬಂಡವಾಳ ತೊಡಗಿಸಿ, ಇಲ್ಲವಾದಲ್ಲಿ ಜೋಳಿಗೆ ಹಿಡಿಯಲು ಸಿದ್ದ : ಶ್ರೀ ಈಶ್ವರಾನಂದಪುರಿ ಸ್ವಾಮೀಜಿ

ಭದ್ರಾವತಿಯಲ್ಲಿ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ಭಾನುವಾರ ಹೊಸದುರ್ಗ ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಬೆಂಬಲ ಸೂಚಿಸಿ ಗುತ್ತಿಗೆ ಕಾರ್ಮಿಕರು ತಮ್ಮ ತಮ್ಮ ರಕ್ತದಲ್ಲಿ ಪ್ರಧಾನಿಗೆ ಲ್ಲಿ 'ಸೇವ್ ವಿಐಎಸ್‌ಎಲ್, ಸೇವ್ ಭದ್ರಾವತಿ' ಎಂದು ಬರೆದು ಒತ್ತಾಯಿಸಿರುವ ಅಂಚೆ ಕಾರ್ಡ್‌ಗಳನ್ನು ಪ್ರದರ್ಶಿಸಿದರು.
    ಭದ್ರಾವತಿ, ಮಾ. ೨೬ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತಗೊಳ್ಳಲು ಕ್ಷಣಗಣನೆ ಎದುರಾಗುತ್ತಿದ್ದು, ಈ ನಡುವೆ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂಭಾಗ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ ಭಾನುವಾರ ೬೭ ದಿನಗಳನ್ನು ಪೂರೈಸಿದೆ. ಈ ನಡುವೆ ಹೋರಾಟದ ರೂಪುರೇಷೆಗಳು ಸಹ ಬದಲಾಗುತ್ತಿದ್ದು, ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುವ ಲಕ್ಷಣಗಳು ಕಂಡು ಬರುತ್ತಿವೆ.
    ೬೭ ದಿನ ಕಳೆದರೂ ಸಹ ಗುತ್ತಿಗೆ ಕಾರ್ಮಿಕರು ಧೈರ್ಯ ಕಳೆದುಕೊಳ್ಳದೆ ಒಗ್ಗಟ್ಟಿನಿಂದ ಹೋರಾಟ ಮುನ್ನಡೆಸುತ್ತಿದ್ದು, ಬೆಂಗಳೂರು ವಿಧಾನಸೌಧ, ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಛೇರಿವರೆಗೂ ಪಾದಯಾತ್ರೆ, ಬೈಕ್ ರ‍್ಯಾಲಿ, ದೆಹಲಿಯಲ್ಲಿ ಹೋರಾಟ, ಮೈಸೂರು ಮಹಾರಾಜರ ವಂಶಸ್ಥರ ಗಮನ ಸೆಳೆಯಲು ಮೈಸೂರಿನಲ್ಲಿ ಹೋರಾಟ, ಭದ್ರಾವತಿ ಬಂದ್, ಬೃಹತ್ ಜಾಥಾ, ರಸ್ತೆ ತಡೆ, ಸಹಿ ಅಭಿಯಾನ, ಪತ್ರ ಚಳುವಳಿ ಸೇರಿದಂತೆ ಹಲವು ಬಗೆಯ ಹೋರಾಟಗಳನ್ನು ಕೈಗೊಂಡಿದ್ದಾರೆ.
    ಹೋರಾಟದ ನಡುವೆ ರಾಜ್ಯದ ಪ್ರಮುಖ ಮಠಗಳಿಗೆ ತೆರಳಿ ಮಠಾಧೀಶರುಗಳಿಗೆ, ಮಾಜಿ ಪ್ರಧಾನಿ, ಕೇಂದ್ರ ಸಚಿವರು, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ವಿವಿಧ ರಾಜಕೀಯ ಪಕ್ಷಗಳಿಗೆ ಮನವಿ ಸಲ್ಲಿಸಿ ಕಾರ್ಖಾನೆ ಮುಚ್ಚುವ ಆದೇಶ ಹಿಂಪಡೆದು ಅಗತ್ಯವಿರುವ ಬಂಡವಾಳ ತೊಡಗಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವಂತೆ ಕೋರಿದ್ದಾರೆ.
    ವಿವಿಧ ಧರ್ಮಗಳ ಧರ್ಮಗುರುಗಳು, ಮಠಾಧೀಶರು, ರಾಜಕೀಯ ಪಕ್ಷಗಳ ಪ್ರಮುಖರು, ಗಣ್ಯರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಬೆಂಬಲ ನೀಡಿ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಮುಚ್ಚದಂತೆ ಆಗ್ರಹಿಸಿದ್ದಾರೆ. ವಿವಿಧ ಸಂಘ-ಸಂಸ್ಥೆಗಳು ಹೋರಾಟಕ್ಕೆ ಬೆಂಬಲ ಸೂಚಿಸಿ ಕೈಜೋಡಿಸಿವೆ. ಆದರೂ ಸಹ ಕೇಂದ್ರ ಸರ್ಕಾರವಾಗಲಿ, ಉಕ್ಕು ಪ್ರಾಧಿಕಾರವಾಗಲಿ ಹೋರಾಟಕ್ಕೆ ಪೂರಕವಾಗಿ ಸ್ಪಂದಿಸದಿರುವುದು ವಿಪರ್ಯಾಸದ ಸಂಗತಿಯಾಗಿದೆ.
    ಕಾರ್ಖಾನೆ ಉಳಿವಿಗಾಗಿ ಜೋಳಿಗೆ ಹಿಡಿಯಲು ಸಿದ್ದ : ಶ್ರೀ ಈಶ್ವರಾನಂದಪುರಿ ಸ್ವಾಮೀಜಿ
    ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ಭಾನುವಾರ ಹೊಸದುರ್ಗ ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಬೆಂಬಲ ಸೂಚಿಸಿ ಮಾತನಾಡಿದರು.
    ಪ್ರತಿಷ್ಠಿತ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಪ್ರಸ್ತುತ ಮುಚ್ಚುವ ಸ್ಥಿತಿ ಎದುರಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ. ಗುತ್ತಿಗೆ ಕಾರ್ಮಿಕರ ಹೋರಾಟ ಕೇಂದ್ರ ಸರ್ಕಾರದ ಗಮನ ಸೆಳೆಯುವಂತಾಗಬೇಕು. ಈ ನಿಟ್ಟಿನಲ್ಲಿ ಮಾಧ್ಯಮಗಳು ಇನ್ನೂ ಹೆಚ್ಚಿನ ಗಮನ ಹರಿಸಬೇಕಾಗಿದೆ. ಕೇಂದ್ರ ಸರ್ಕಾರ ತಕ್ಷಣ ತನ್ನ ನಿಲುವು ಬದಲಿಸಿಕೊಂಡು ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ಹೂಡಬೇಕು. ಒಂದು ವೇಳೆ ಅದು ಸಾಧ್ಯವಾಗದಿದ್ದಲ್ಲಿ ಮಠಾಧೀಶರು ಜೋಳಿಗೆ ಹಿಡಿದು ಕಾರ್ಖಾನೆ ಉಳಿಸಿಕೊಳ್ಳಲು ಮುಂದಾಗುವುದು ಸಿದ್ದ ಎಂದರು.
    ರಕ್ತದಲ್ಲಿ ಕಾರ್ಮಿಕರ ಹೋರಾಟದ ಕೂಗು :
    ಸಾವಿರಾರು ಗುತ್ತಿಗೆ ಕಾರ್ಮಿಕರು ಭಾನುವಾರ ಅಂಚೆ ಕಾರ್ಡ್‌ನಲ್ಲಿ ತಮ್ಮ ತಮ್ಮ ರಕ್ತದ ಮೂಲಕ ಆಂಗ್ಲ ಭಾಷೆಯಲ್ಲಿ 'ಸೇವ್ ವಿಐಎಸ್‌ಎಲ್, ಸೇವ್ ಭದ್ರಾವತಿ' ಎಂದು ಬರೆದು ಹೆಬ್ಬೆಟ್ಟು ಹಾಕುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಕಾರ್ಖಾನೆ ಮುಚ್ಚುವ ಆದೇಶ ಹಿಂಪಡೆಯುವಂತೆ, ಅಗತ್ಯವಿರುವ ಬಂಡವಾಳ ತೊಡಗಿಸುವಂತೆ ಆಗ್ರಹಿಸಿದ್ದಾರೆ.
ಗುತ್ತಿಗೆ ಕಾರ್ಮಿಕರು ಹೋರಾಟಕ್ಕೆ ಇದೀಗ ತಮ್ಮ ರಕ್ತ ಚೆಲ್ಲುತ್ತಿದ್ದು, ಮುಂದಿನ ದಿನಗಳಲ್ಲಿ ಹೋರಾಟ ಮತ್ತಷ್ಟು ಸ್ವರೂಪ ಪಡೆದುಕೊಳ್ಳುವ ಮೊದಲು ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳಬೇಕಾಗಿದೆ.
ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ತಾಲೂಕು ಕುರುಬರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ನಿರ್ದೇಶಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Saturday, March 25, 2023

ಶಿವಾಜಿ ಮಹಾರಾಜ ಆದರ್ಶ ಗುಣಗಳನ್ನು ರೂಢಿಸಿಕೊಳ್ಳಿ : ಶಾಸಕ ಬಿ.ಕೆ ಸಂಗಮೇಶ್ವರ್

ಭದ್ರಾವತಿ ತಾಲೂಕಿನ ಶ್ರೀ ಛತ್ರಪತಿ ಶಿವಾಜಿ ಮರಾಠ ಬಾಂಧವರು ಹಾಗು ಜೀಜಾಮಾತಾ ಮಹಿಳಾ ಮಂಡಳಿ ವತಿಯಿಂದ ಶನಿವಾರ ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ  ಹಮ್ಮಿಕೊಳ್ಳಲಾಗಿದ್ದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ೩೯೬ನೇ ಜಯಂತ್ಯೋತ್ಸವ ಮತ್ತು ಬೃಹತ್ ಭವ್ಯ ಮೆರವಣಿಗೆ ಕಾರ್ಯಕ್ರಮ ಶ್ರೀ ಮುರುಗೇಶ್ ಸ್ವಾಮೀಜಿ, ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.  
    ಭದ್ರಾವತಿ, ಮಾ. ೨೫ : ಛತ್ರಪತಿ ಶಿವಾಜಿ ಮಹಾರಾಜರ ಆದರ್ಶ ಗುಣಗಳನ್ನು ಪ್ರತಿಯೊಬ್ಬರು ರೂಢಿಸಿಕೊಳ್ಳಬೇಕಾಗಿದೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
    ತಾಲೂಕಿನ ಶ್ರೀ ಛತ್ರಪತಿ ಶಿವಾಜಿ ಮರಾಠ ಬಾಂಧವರು ಹಾಗು ಜೀಜಾಮಾತಾ ಮಹಿಳಾ ಮಂಡಳಿ ವತಿಯಿಂದ ಶನಿವಾರ ನಗರದ ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ  ಹಮ್ಮಿಕೊಳ್ಳಲಾಗಿದ್ದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ೩೯೬ನೇ ಜಯಂತ್ಯೋತ್ಸವ ಮತ್ತು ಬೃಹತ್ ಭವ್ಯ ಮೆರವಣಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಶಿವಾಜಿ ಮಹಾರಾಜರ ಆದರ್ಶ ಗುಣಗಳು ಎಲ್ಲರಿಗೂ ಮಾದರಿಯಾಗಿವೆ. ಮರಾಠ ಸಮಾಜದವರು ಇನ್ನೂ ಹೆಚ್ಚು ಸಂಘಟಿತರಾಗುವ ಮೂಲಕ ಸಮಾಜದ ಏಳಿಗೆಗೆ ಬದ್ಧರಾಗಬೇಕು. ಸಮಾಜದ ಬೆಳವಣಿಗೆಗೆ ಎಲ್ಲಾ ರೀತಿಯ ಸಹಕಾರ ನೀಡಲು ಬದ್ಧವಾಗಿದ್ದೇನೆ ಎಂದರು.
    ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಮುರುಗೇಶ್ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಮರಾಠ ಸಮಾಜದ ಪ್ರಮುಖರಾದ ರಘುನಾಥರಾವ್ ಗಿಡ್ಡೆ ಅಧ್ಯಕ್ಷತೆ ವಹಿಸಿದ್ದರು. ಚಿಕ್ಕಮಗಳೂರಿನ ತನ್‌ಮಹಿ ಸಿಂಗಾರ್ ವಿಶೇಷ ಉಪನ್ಯಾಸ ನಡೆಸಿಕೊಟ್ಟರು.
    ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಮುಖಂಡ ಡಾ. ಶ್ರೀನಿವಾಸ್ ಕರಿಯಣ್ಣ, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ವೈ.ಎಚ್ ನಾಗರಾಜ್, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಟಿ. ಚಂದ್ರೇಗೌಡ, ಸಮಾಜ ಸೇವಕ ಪೊಲೀಸ್ ಉಮೇಶ್ ಸೇರಿದಂತೆ ಮರಾಠ ಸಮಾಜದ ವಿವಿಧ ಸಂಘಟನೆಗಳ ಮುಖಂಡರು ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಹೊಸಮನೆ ಶಿವಾಜಿ ವೃತ್ತದಿಂದ ಆರಂಭಗೊಂಡು ಲೋಯರ್ ಹುತ್ತಾ ಬಸ್ ನಿಲ್ದಾಣದವರೆಗೂ ಶಿವಾಜಿ ಮಹಾರಾಜರ ಪ್ರತಿಮೆಯೊಂದಿಗೆ ಭವ್ಯ ಮೆರವಣಿಗೆ ನಡೆಯಿತು.

Friday, March 24, 2023

ಭದ್ರಾವತಿ: ಚುನಾವಣೆ ಪ್ರಕ್ರಿಯೆ ಕುರಿತು ತರಬೇತಿ

ರಾಜ್ಯ ವಿಧಾನಸಭಾ ಚುನಾವಣೆ ಪ್ರಕ್ರಿಯೆಗಳು ಆರಂಭಗೊಳ್ಳುವ ಹಿನ್ನಲೆಯಲ್ಲಿ ಚುನಾವಣಾ ಆಯೋಗದ ಸೂಚನೆ ಮೇರೆಗೆ ಶನಿವಾರ ಭದ್ರಾವತಿ ಸಿದ್ಧಾರೂಢ ನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
ಭದ್ರಾವತಿ, ಮಾ. 25: ರಾಜ್ಯ ವಿಧಾನಸಭಾ ಚುನಾವಣೆ ಪ್ರಕ್ರಿಯೆಗಳು ಆರಂಭಗೊಳ್ಳುವ ಹಿನ್ನಲೆಯಲ್ಲಿ ಚುನಾವಣಾ ಆಯೋಗದ ಸೂಚನೆ ಮೇರೆಗೆ ಶನಿವಾರ  ಸಿದ್ಧಾರೂಢ ನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮತದಾರರ ಸಾಕ್ಷರತಾ ಸಂಘಗಳ ಸಂಚಾಲಕರು, ಚುನಾವಣಾ ಜಾಗೃತ ಸಂಘಗಳ ಸಂಚಾಲಕರು ಮತ್ತು ಕ್ಯಾಂಪಸ್ ಅಂಬಾಸಿಡರ್, ಬಿಎಲ್‌ಓಗಳು ತರಬೇತಿ ಕಾರ್ಯಾಕ್ರಮದಲ್ಲಿ ಪಾಲ್ಗೊಂಡಿದ್ದರು.  
ಸಂಪನ್ಮೂಲ ವ್ಯಕ್ತಿಗಳಾದ ರಾಜ್ಯಮಟ್ಟದ ತರಬೇತುದಾರ ಬಿ.ಆರ್.ಸಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ನವೀದ್ ಅಹಮದ್ ಪರ್ವೀಜ್, ತಾಲೂಕು ಮಟ್ಟದ ಇಎಲ್‌ಸಿ ತರಬೇತುದಾರರಾದ ಸಹಾಯಕ ಪ್ರಾಧ್ಯಾಪಕ ಡಾ. ಎಚ್.ಎಸ್ ಶಿವರುದ್ರಪ್ಪ, ಸಹ ಶಿಕ್ಷಕ ಎಂ.ಜಿ ನವೀನ್‌ಕುಮಾರ್, ಮುಖ್ಯ ಶಿಕ್ಷಕ ಸಿ.ಡಿ ಮಂಜುನಾಥ್ ಮತ್ತು ಸಹ ಶಿಕ್ಷಕ ಬಿ. ಮಂಜಪ್ಪ, ಮತದಾರರ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆ, ನಿಧನ ಹೊಂದಿರುವ ಮತದಾರರನ್ನು ತೆಗೆದು ಹಾಕುವುದು ಹಾಗು ತಿದ್ದುಪಡಿ ಮಾಡುವ ಕುರಿತು ಮತ್ತು ಚುನಾವಣೆ ಪ್ರಕ್ರಿಯೆಗಳು, ಮತದಾರರ ಭಾಗವಹಿಸುವಿಕೆ, ಜಾಗೃತಿ ಮೂಡಿಸುವುದು, ಇವಿಎಂ, ವಿವಿ ಪ್ಯಾಡ್ ಬಳಕೆ ಇತ್ಯಾದಿ ವಿಷಯಗಳ ಕುರಿತು ಮಾಹಿತಿ ನೀಡಿದರು.



 ಉಪವಿಭಾಗಾಧಿಕಾರಿ ರವಿಚಂದ್ರನಾಯಕ್, ತಹಸೀಲ್ದಾರ್ ಗ್ರೇಡ್-2 ರಂಗಮ್ಮ, ಉಪತಹಸೀಲ್ದಾರ್ ಮಂಜಾನಾಯ್ಕ, ನಗರಸಭೆ ಪೌರಾಯುಕ್ತ ಮನುಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಶಿರಸ್ತೇದಾರ್ ರಾಧಾಕೃಷ್ಣಭಟ್, ಮಲ್ಲಿಕಾರ್ಜುನಯ್ಯ, ಬಸವರಾಜ್  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  
    ತಾಲೂಕಿನ 253 ಬಿಎಲ್ಓ, 128 ಪ್ರೌಢಶಾಲೆ ಹಾಗು ಕಾಲೇಜುಗಳ ಮತದಾರರ ಸಾಕ್ಷರತಾ ಸಂಘಗಳ ಸಂಚಾಲಕರು ಭಾಗವಹಿಸಿದ್ದರು.

ಮಾ.೨೫ರಂದು ಶಿವಾಜಿ ಮಹಾರಾಜರ ೩೯೬ನೇ ಜಯಂತ್ಯೋತ್ಸವ


    ಭದ್ರಾವತಿ, ಮಾ. ೨೪ : ತಾಲೂಕಿನ ಶ್ರೀ ಛತ್ರಪತಿ ಶಿವಾಜಿ ಮರಾಠ ಬಾಂಧವರು ಹಾಗು ಜೀಜಾಮಾತಾ ಮಹಿಳಾ ಮಂಡಳಿ ವತಿಯಿಂದ ಮಾ.೨೫ರಂದು ನಗರದ ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ೩೯೬ನೇ ಜಯಂತ್ಯೋತ್ಸವ ಮತ್ತು ಬೃಹತ್ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.
    ಬೆಂಗಳೂರಿನ ಶ್ರೀ ಗೋಸಾಯಿ ಮಹಾ ಸಂಸ್ಥಾನ ಮಠ ಶ್ರೀ ಭವಾನಿ ಪೀಠದ ಶ್ರೀ ಮಂಜುನಾಥ ಸ್ವಾಮೀಜಿಯವರು ದಿವ್ಯ ಸಾನಿಧ್ಯವಹಿಸಲಿದ್ದು, ಮರಾಠ ಸಮಾಜದ ಪ್ರಮುಖರಾದ ರಘುನಾಥರಾವ್ ಗಿಡ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ.
    ಬೆಳಿಗ್ಗೆ ೮.೩೦ಕ್ಕೆ ಹೊಸಮನೆ ಶಿವಾಜಿ ವೃತ್ತದಿಂದ ಆರಂಭಗೊಂಡು ಲೋಯರ್ ಹುತ್ತಾ ಬಸ್ ನಿಲ್ದಾಣದವರೆಗೂ ನಡೆಯಲಿರುವ ಭವ್ಯ ಮೆರವಣಿಗೆಯನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಲಿದ್ದಾರೆ.
    ವೇದಿಕೆ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರಿನ ತನ್‌ಮಹಿ ಸಿಂಗಾರ್ ವಿಶೇಷ ಉಪನ್ಯಾಸ ನೀಡಲಿದ್ದು, ಸಂಸದ ಬಿ.ವೈ ರಾಘವೇಂದ್ರ, ವಿಧಾನಸಭಾ ಸದಸ್ಯ ಅಶೋಕ್ ನಾಯ್ಕ, ವಿಧಾನಪರಿಷತ್ ಸದಸ್ಯರಾದ ಎಸ್. ರುದ್ರೇಗೌಡ, ಡಿ.ಎಸ್ ಅರುಣ್, ಮಾಜಿ ಶಾಸಕಿ ಶಾರದ ಪೂರ‍್ಯಾನಾಯ್ಕ, ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ, ಎಎಪಿ ಪಕ್ಷದ ಮುಖಂಡ ಮೆಡಿಕಲ್ ಆನಂದ್, ಮಾಜಿ ವಿಧಾನಪರಿಷತ್ ಸದಸ್ಯ ಆರ್.ಕೆ ಸಿದ್ದರಾಮಣ್ಣ, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ವಿವಿಧ ರಾಜಕೀಯ ಪಕ್ಷಗಳ ಅಧ್ಯಕ್ಷರಾದ ಜಿ. ಧರ್ಮಪ್ರಸಾದ್, ಟಿ. ಚಂದ್ರೇಗೌಡ, ಆರ್. ಕರುಣಾಮೂರ್ತಿ, ಕಾರ್ಯಪಾಲಕ ಅಭಿಯಂತರ ಸಂಪತ್ ಕುಮಾರ್ ಪಿಂಗ್ಳೆ, ತಹಸೀಲ್ದಾರ್ ಸುರೇಶ್ ಆಚಾರ್, ನಗರಸಭೆ ಪೌರಾಯುಕ್ತ ಮನುಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.
    ತಾಲೂಕಿನ ಮರಾಠ ಬಾಂಧವರು ಸೇರಿದಂತೆ ಸಮಸ್ತ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.

ಮಾ.೨೫ರಂದು ಚುನಾವಣಾ ತರಬೇತಿ ಕಾರ್ಯಕ್ರಮ

    ಭದ್ರಾವತಿ, ಮಾ. ೨೪: ರಾಜ್ಯ ವಿಧಾನಸಭಾ ಚುನಾವಣೆ ಪ್ರಕ್ರಿಯೆಗಳು ಆರಂಭಗೊಳ್ಳುವ ಹಿನ್ನಲೆಯಲ್ಲಿ ಚುನಾವಣಾ ಆಯೋಗದ ಸೂಚನೆ ಮೇರೆಗೆ ಮಾ.೨೫ರ ಶನಿವಾರ ಬೆಳಿಗ್ಗೆ ೯:೩೦ಕ್ಕೆ ಸಿದ್ಧಾರೂಢ ನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ಮತದಾರರ ಸಾಕ್ಷರತಾ ಸಂಘಗಳ ಸಂಚಾಲಕರು, ಚುನಾವಣಾ ಜಾಗೃತ ಸಂಘಗಳ ಸಂಚಾಲಕರು ಮತ್ತು ಕ್ಯಾಂಪಸ್ ಅಂಬಾಸಿಡರ್, ಬಿಎಲ್‌ಓಗಳು ತರಬೇತಿ ಕಾರ್ಯಾಕ್ರಮದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವುದು. ಈಗಾಗಲೇ ರಾಜ್ಯ ಅಥವಾ ಜಿಲ್ಲಾ ಮಟ್ಟದಲ್ಲಿ ಪಡೆದುಕೊಂಡಿರುವ ಇಎಲ್‌ಸಿ ಮಾಹಿತಿ ಪರಸ್ಪರ ವಿನಿಮಯ ಮಾಡಿಕೊಳ್ಳುವುದು. ಸಂಪನ್ಮೂಲ ವ್ಯಕ್ತಿಗಳೊಂದಿಗೆ ಚರ್ಚಿಸಿ ಸೂಕ್ತ ಸಲಹೆ, ಮಾರ್ಗದರ್ಶನ ಪಡೆದುಕೊಳ್ಳುವುದು.
    ಸಂಪನ್ಮೂಲ ವ್ಯಕ್ತಿಗಳಾಗಿ ರಾಜ್ಯಮಟ್ಟದ ತರಬೇತುದಾರ ಬಿ.ಆರ್.ಸಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ನವೀದ್ ಅಹಮದ್ ಪರ್ವೀಜ್, ಮೊ: ೯೮೮೬೨೧೪೧೬೦, ತಾಲೂಕು ಮಟ್ಟದ ಇಎಲ್‌ಸಿ ತರಬೇತುದಾರರಾದ ಸಹಾಯಕ ಪ್ರಾಧ್ಯಾಪಕ ಡಾ. ಎಚ್.ಎಸ್ ಶಿವರುದ್ರಪ್ಪ, ಮೊ: ೮೬೬೦೫೨೮೭೪೪,  ಸಹ ಶಿಕ್ಷಕ ಎಂ.ಜಿ ನವೀನ್‌ಕುಮಾರ್, ಮೊ: ೯೬೧೧೬೯೨೧೨೫, ಮುಖ್ಯ ಶಿಕ್ಷಕ ಸಿ.ಡಿ ಮಂಜುನಾಥ್, ಮೊ : ೯೯೪೫೧೦೨೮೩೮ ಮತ್ತು ಸಹ ಶಿಕ್ಷಕ ಬಿ. ಮಂಜಪ್ಪ, ಮೊ: ೯೭೩೧೩೦೯೩೯೮ ಪಾಲ್ಗೊಳ್ಳಲಿದ್ದಾರೆ.

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ : ೨೦ ವರ್ಷ ಕಠಿಣ ಜೈಲು ಶಿಕ್ಷೆ

    ಭದ್ರಾವತಿ, ಮಾ. ೨೪: ಸುಮಾರು ೧೩ ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಯುವಕನೋರ್ವನಿಗೆ ೨೦ ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ಶಿವಮೊಗ್ಗ ಪೋಕ್ಸೋ ನ್ಯಾಯಾಲಯ ತೀರ್ಪು ನೀಡಿದೆ.
    ತಾಲೂಕಿನ ಸುಮಾರು ೨೫ ವರ್ಷದ ಯುವಕ ಜೈಲು ಶಿಕ್ಷೆಗೆ ಗುರಿಯಾಗಿದ್ದು, ಆರೋಪ ದೃಢಪಟ್ಟ ಹಿನ್ನಲೆಯಲ್ಲಿ ಈತನಿಗೆ ೨೦ ವರ್ಷ ಕಠಿಣ ಜೈಲು ಶಿಕ್ಷೆ ಜೊತೆಗೆ ೧.೧೦ ಲಕ್ಷ ರೂ. ದಂಡ ವಿಧಿಸಲಾಗಿದೆ. ದಂಡ ಕಟ್ಟಲು ವಿಫಲವಾದಲ್ಲಿ, ಹೆಚ್ಚುವರಿಯಾಗಿ ೬ ತಿಂಗಳ ಕಾಲ ಸಾದಾ ಜೈಲು ಶಿಕ್ಷೆ ವಿಧಿಸಿ ನ್ಯಾಯಾಧೀಶರು ಆದೇಶಿಸಿದ್ದಾರೆ.  
    ಮಾ.೨೩ರಂದು ಹೆಚ್ಚುವರಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯ ಎಫ್‌ಟಿಎಸ್‌ಸಿ-FTSC-II(POCSO)  ನ್ಯಾಯಾಧೀಶರಾದ ಮೋಹನ ಜೆ.ಎಸ್ ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಹರಿಪ್ರಸಾದ್ ವಾದ ಮಂಡಿಸಿದ್ದರು.
ಘಟನೆ ಹಿನ್ನೆಲೆ:
    ಶಿಕ್ಷೆಗೊಳಗಾದ ಯುವಕ ೨೦೧೯ರಲ್ಲಿ ಸುಮಾರು ೧೩ ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದು, ನೊಂದ ಬಾಲಕಿಯ ತಂದೆ ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
    ಅಂದಿನ ತನಿಖಾಧಿಕಾರಿಯಾಗಿದ್ದ ನಗರ ಪೊಲೀಸ್ ವೃತ್ತ ನಿರೀಕ್ಷಕ ನಂಜಪ್ಪ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ವಿಜಯಕಲಾ ಎಂ.ಎಚ್.ಸಿ ತನಿಖಾ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿದ್ದರು.

ಮಾ.೨೫ರಂದು ನೂತನ ಖಾಸಗಿ ಬಸ್ ನಿಲ್ದಾಣ ಉದ್ಘಾಟನೆ

ಭದ್ರಾವತಿ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಸಮೀಪ ನೂತನವಾಗಿ ೨.೧೭ ಕೋ.ರು. ವೆಚ್ಚದಲ್ಲಿ ನಿರ್ಮಿಸಲಾಗಿರುವ ಖಾಸಗಿ ಬಸ್ ನಿಲ್ದಾಣ.
    ಭದ್ರಾವತಿ, ಮಾ. ೨೪ : ಕರ್ನಾಟಕ ನಗರ ಭೂ ಸಾರಿಗೆ ನಿರ್ದೇಶನಾಲಯ ಮತ್ತು ನಗರಸಭೆ ಉದ್ದಿಮೆ ನಿಧಿ ವತಿಯಿಂದ ನಗರದ ಹೃದಯ ಭಾಗದಲ್ಲಿ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಸಮೀಪ ನೂತನವಾಗಿ ೨.೧೭ ಕೋ.ರು. ವೆಚ್ಚದಲ್ಲಿ ನಿರ್ಮಿಸಲಾಗಿರುವ ಖಾಸಗಿ ಬಸ್ ನಿಲ್ದಾಣದ ಉದ್ಘಾಟನೆ ಮಾ.೨೫ರ ಮಧ್ಯಾಹ್ನ ೧೨ ಗಂಟೆಗೆ ನಡೆಯಲಿದೆ.
    ಚುನಾವಣೆ ಘೋಷಣೆಯಾಗುವ ಸಾಧ್ಯತೆ ಹೆಚ್ಚಾಗಿರುವ  ಹಿನ್ನಲೆಯಲ್ಲಿ ಮಾ.೨೬ರ ಭಾನುವಾರ ಆಯೋಜಿಸಲಾಗಿದ್ದ ಕಾರ್ಯಕ್ರಮ ಶನಿವಾರ ನಡೆಯುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ.ಸಿ ನಾರಾಯಣಗೌಡ, ಗೃಹ ಸಚಿವ ಆರಗ ಜ್ಞಾನೇಂದ್ರ, ನಗರಾಭಿವೃದ್ಧಿ ಇಲಾಖೆ ಸಚಿವ ಭೈರತಿ ಬಸವರಾಜ್, ಪೌರಾಡಳಿತ ಇಲಾಖೆ ಸಚಿವ ಎನ್. ನಾಗರಾಜ್(ಎಂ.ಟಿ.ಬಿ), ಮಾಜಿ ಬಿ.ಎಸ್ ಯಡಿಯೂರಪ್ಪ, ಶಾಸಕರಾದ ಆಯನೂರು ಮಂಜುನಾಥ್, ಎಸ್.ಎಲ್ ಭೋಜೇಗೌಡ, ಎಸ್. ರುದ್ರೇಗೌಡ, ಭಾರತಿ ಶೆಟ್ಟಿ, ಡಿ.ಎಸ್ ಅರುಣ್, ವಿವಿಧ ನಿಗಮ ಮಂಡಳಿ ಅಧ್ಯಕ್ಷರುಗಳಾದ ಡಾ. ರಾಜು ಎಂ. ತಲ್ಲೂರು, ಎಚ್.ಟಿ ಬಳಿಗಾರ, ಕೆ.ಎಸ್ ಗುರುಮೂರ್ತಿ, ಎಚ್.ಎಚ್ ಶ್ರೀಪಾದರಾವ್, ಕೆ.ಬಿ ಪವಿತ್ರ ರಾಮಯ್ಯ, ಎನ್.ಜಿ ನಾಗರಾಜ್, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷೆ ಬಿ.ಪಿ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್, ಸದಸ್ಯ ಜಾರ್ಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
    ಸಂಸದ ಬಿ.ವೈ ರಾಘವೇಂದ್ರ ಉದ್ಘಾಟಿಸಲಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದಾರೆ. ಸರ್ಕಾರದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ನಗರಸಭಾ ಸದಸ್ಯರು ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಪೌರಾಯುಕ್ತ ಮನುಕುಮಾರ್ ಕೋರಿದ್ದಾರೆ.

ಎಸ್. ಮಹಬೂಬ್ ಬೀ ನಿಧನ

ಭದ್ರಾವತಿ, ಮಾ. ೨೪ :  ಗುತ್ತಿಗೆದಾರ ದಿವಂಗತ ಎಸ್.ಎಚ್ ಪೀರಾನ್‌ರವರ ಪತ್ನಿ, ಬೊಮ್ಮನಕಟ್ಟೆ ನಿವಾಸಿ ಎಸ್. ಮಹಬೂಬ್ ಬೀ(೭೮) ಗುರುವಾರ ನಿಧನ ಹೊಂದಿದರು.
  ರಾಜ್ಯ ಮಾನವ ಹಕ್ಕುಗಳ ವೇದಿಕೆ ಅಧ್ಯಕ್ಷ ಎಚ್.ಎಂ ಖಾದ್ರಿ ಸೇರಿದಂತೆ ಇಬ್ಬರು ಮಕ್ಕಳು, ಮೊಮ್ಮಕ್ಕಳು ಇದ್ದರು. ಮಹಬೂಬ್ ಬೀ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಇವರ ಅಂತ್ಯಕ್ರಿಯೆ ರಾತ್ರಿ ನೆರವೇರಿತು.
 ವಿಧಾನಸಭೆ ಪ್ರತಿಪಕ್ಷ ಉಪನಾಯಕ ಯು.ಟಿ ಖಾದರ್, ಶಾಸಕರಾದ ಪ್ರಿಯಾಂಕ್ ಖರ್ಗೆ, ಬಿ.ಕೆ ಸಂಗಮೇಶ್ವರ್, ಜಾತ್ಯತೀತ ಜನತಾ ದಳ ರಾಜ್ಯಾಧ್ಯಕ್ಷ ಸಿ. ಎಂ ಇಬ್ರಾಹಿಂ, ರಾಜ್ಯ ವಕೀಲರ ಸಂಘದ ಮಾಜಿ ಅಧ್ಯಕ್ಷ ಎಲ್. ಶ್ರೀನಿವಾಸ ಬಾಬು, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಪ್ರಗತಿಪರ ಸಂಘಟನೆಗಳ ಮುಖಂಡರಾದ ಜಿ. ರಾಜು, ಸುರೇಶ್(ಪೇಪರ್), ಸುಧೀಂದ್ರ ಕಾಂಗ್ರೆಸ್ ಮುಖಂಡ ಎಚ್. ರವಿಕುಮಾರ್ ಸೇರಿಂದತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.

Thursday, March 23, 2023

ಹೊಸ ಉತ್ಸಾಹ, ಹಲವು ಭರವಸೆಗಳೊಂದಿಗೆ ಜಾನ್ ಬೆನ್ನಿ ವಿಧಾನಸಭಾ ಚುನಾವಣೆಗೆ ಸ್ಪರ್ಧೆ

ಸುಮಾರು ೧ ವರ್ಷದಿಂದ ಕ್ಷೇತ್ರದಾದ್ಯಂತ ವ್ಯಾಪಕ ಪ್ರಚಾರ

ಜಾನ್ ಬೆನ್ನಿ
    ಭದ್ರಾವತಿ, ಮಾ. ೨೩ : ಈ ಬಾರಿ ಸಹ ವಿಧಾನಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಜಾನ್ ಬೆನ್ನಿ ಹೊಸ ಉತ್ಸಾಹ ಹಾಗು ಹಲವು ಭರವಸೆಗಳೊಂದಿಗೆ ಸ್ಪರ್ಧಿಸುತ್ತಿದ್ದು, ಕಳೆದ ಸುಮಾರು ೧ ವರ್ಷದಿಂದ ಕ್ಷೇತ್ರದಾದ್ಯಂತ ವ್ಯಾಪಕ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲವು ದಿನಗಳಿಂದ ಪ್ರಚಾರ ಮತ್ತಷ್ಟು ತೀವ್ರಗೊಳಿಸಿದ್ದು, ಕ್ಷೇತ್ರದ ಪ್ರತಿಯೊಂದು ಮನೆಗೆ ತೆರಳಿ ಮತದಾರರಲ್ಲಿ ವಿಶ್ವಾಸ ಮೂಡಿಸುವ ಮೂಲಕ ಮತಯಾಚನೆ ಕೈಗೊಂಡಿದ್ದಾರೆ.
    ಸಾಮಾನ್ಯ ಕುಟುಂಬದ ವ್ಯಕ್ತಿಯಾಗಿರುವ ಜಾನ್ ಬೆನ್ನಿ ನಗರದಲ್ಲಿ ಸುಮಾರು ೩-೪ ದಶಕಗಳಿಂದ ವಾಹನ ಚಾಲನಾ ತರಬೇತಿ ಶಿಕ್ಷಕರಾಗಿ ಗುರುತಿಸಿಕೊಂಡು ಚಿರಪರಿಚಿತರಾಗಿದ್ದಾರೆ. ಕ್ಷೇತ್ರದ ಜನರ ಭವಿಷ್ಯದ ಬದುಕಿಗೆ ಹೊಸ ಮುನ್ನುಡಿ ಬರೆಯಬೇಕೆಂಬ ಹಂಬಲದೊಂದಿಗೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ವಿಶೇಷ ಎಂದರೆ ಇವರು ಯಾವುದೇ ರಾಜಕೀಯಗಳ ಪಕ್ಷಗಳಿಗೆ ಜೋತು ಬೀಳದೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.   ತಿಂಗಳಿನಿಂದ
    ನಗರದ ಜನರ ಜೀವನಾಡಿಯಾಗಿರುವ ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳು ಅವನತಿ ದಾರಿ ಹಿಡಿದು ಸಾವಿರಾರು ಕಾರ್ಮಿಕರು, ಲಕ್ಷಾಂತರ ಕುಟುಂಬಗಳು ಬೀದಿ ಪಾಲಾಗಿದ್ದು, ನಿರುದ್ಯೋಗ ಸಮಸ್ಯೆ ಉಲ್ಬಣಗೊಂಡಿದೆ, ಬೇರೆಡೆಗೆ ವಲಸೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ, ಆರ್ಥಿಕ ಮಟ್ಟ ಕುಸಿತವಾಗಿದೆ ಹಾಗು ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಎದುರಾಗುತ್ತಿರುವ ಚುನಾವಣೆ ನಮ್ಮೆಲ್ಲರ ಪಾಲಿಗೆ ಮಹತ್ವದ್ದಾಗಿದೆ. ನಿಮ್ಮ ಅಧಿಕಾರ ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ. "ನಿಂತಿರುವುದು ನಾನಲ್ಲ ನೀವೇ" ಅಭ್ಯರ್ಥಿ ಎಂದು ಪರಿಗಣಿಸಿ ನನಗೆ ಒಂದು ಅವಕಾಶ ಕೊಡಿ. ಅವಕಾಶ ನೀಡಿ ಎಂಬ ಮನವಿ ಇವರದ್ದಾಗಿದೆ. ಅಲ್ಲದೆ ಸುಮಾರು ೧೧ ಭರವಸೆಗಳೊಂದಿಗೆ ಮತಯಾಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಮಾ.೨೫ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

    ಭದ್ರಾವತಿ, ಮಾ. ೨೩ : ತಾಲೂಕು ವೀರಶೈವ ಲಿಂಗಾಯತ ಮಹಿಳಾ ಸಮಾಜದ ವತಿಯಿಂದ ಮಾ.೨೫ರ ಮಧ್ಯಾಹ್ನ ೩ ಗಂಟೆಗೆ ಹಳೇನಗರದ ತಾಲೂಕು ಕಛೇರಿ ರಸ್ತೆಯಲ್ಲಿರುವ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಸರ್ವಮಂಗಳಮ್ಮ ಶಿವಶಂಕರಯ್ಯ ಪ್ರಶಸ್ತಿ ಪ್ರಧಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.
    ಪ್ರಶಸ್ತಿ ಪುರಸ್ಕೃತರಾದ ಬೆಂಗಳೂರಿನ ಸುಮಂಗಲಿ ಸೇವಾ ಆಶ್ರಮದ ಅಧ್ಯಕ್ಷೆ ಡಾ.ಎಸ್.ಜಿ ಸುಶೀಲಮ್ಮ ಸಮರಂಭ ಉದ್ಘಾಟಿಸುವರು. ತಾಲೂಕು ವೀರಶೈವ ಲಿಂಗಾಯತ ಮಹಿಳಾ ಸಮಾಜದ ಅಧ್ಯಕ್ಷೆ ಆರ್.ಎಸ್ ಶೋಭ ಅಧ್ಯಕ್ಷತೆ ವಹಿಸಲಿದ್ದಾರೆ.
    ಪ್ರಶಸ್ತಿ ಸ್ಥಾಪಕರಾದ ಎಮೆರಿಟಸ್ ಪ್ರಾಧ್ಯಾಪಕಿ ಡಾ. ವಿಜಯದೇವಿ ಉಪಸ್ಥಿತರಿರುವರು. ಬೆಂಗಳೂರಿನ ವಕೀಲರಾದ ಶ್ರೀದೇವಿ ಅಂಚಿ ಚೀಟಿ ಮತ್ತು ಮಹಿಳೆ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದು, ಸಮಾಜದ ಉಪಾಧ್ಯಕ್ಷೆ ಬಿ.ಎಸ್ ಭಾಗ್ಯಲಕ್ಷ್ಮಿ, ರಾಜ್ಯಮಟ್ಟದ ಕರಾಟೆಪಟು ಸಿಂಚನ ಅವರಿಗೆ ಸನ್ಮಾನ ನಡೆಯಲಿದೆ.
    ಸಮಾಜದ ಗೌರವಾಧ್ಯಕ್ಷೆ ಗೌರಮ್ಮ ಶಂಕರಯ್ಯ, ಸಲಹೆಗಾರರಾದ ಯಶೋಧ ವೀರಭದ್ರಪ್ಪ, ಪ್ರಧಾನ ಕಾರ್ಯದರ್ಶಿ ನಾಗರತ್ನ ವಾಗೀಶ್ ಕೋಠಿ ಮತ್ತು ವೀರಶೈವ ಸೇವಾಸಮಿತಿ ಅಧ್ಯಕ್ಷ ಆರ್. ಮಹೇಶ್‌ಕುಮಾರ್ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಸಮಾಜದ ಅಧ್ಯಕ್ಷೆ ಆರ್.ಎಸ್ ಶೋಭ ಕೋರಿದ್ದಾರೆ.

ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಗೌರಮ್ಮ ಮಾಹಾದೇವ ಅವಿರೋಧ ಆಯ್ಕೆ

ಗ್ರಾಮ ಪಂಚಾಯಿತಿ ಸದಸ್ಯೆ ಕಾಂಗ್ರೆಸ್ ಸೇರ್ಪಡೆ 

ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಗೌರಮ್ಮ ಮಹಾದೇವ ಗುರುವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
    ಭದ್ರಾವತಿ, ಮಾ. ೨೩ : ತಾಲೂಕಿನ ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಗೌರಮ್ಮ ಮಹಾದೇವ ಗುರುವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
    ಸಾಮಾನ್ಯ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಗೌರಮ್ಮ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಚುನಾವಣಾಧಿಕಾರಿಯಾದ ತಾಲೂಕು ಕಾರ್ಯನಿರ್ವಹಣಾಧಿಕಾರಿ ರಮೇರ್ಶರವರು ಅವಿರೋಧ ಆಯ್ಕೆ ಘೋಷಿಸಿದರು.
    ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಒಟ್ಟು ೧೩ ಸದಸ್ಯ ಬಲಹೊಂದಿದ್ದು, ಕಾಂಗ್ರೆಸ್ ಪಕ್ಷದ ಬೆಂಬಲಿತರು ಅಧಿಕಾರದ ಚುಕ್ಕಾಣಿ ಹಿಡಿದ್ದಾರೆ. ಒಪ್ಪಂದ ಮಾಡಿಕೊಂಡು ಅಧಿಕಾರ ಹಂಚಿಕೆ ಮಾಡಿಕೊಳ್ಳಲಾಗಿದೆ. ಅದರಂತೆ ಅಧ್ಯಕ್ಷರಾಗಿದ್ದ ಪಾರ್ವತಿ ಬಾಯಿಯವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ನಡೆದ ಚುನಾವಣೆಯಲ್ಲಿ ಗೌರಮ್ಮ ಆಯ್ಕೆಯಾಗಿದ್ದಾರೆ.
   ಗ್ರಾಮ ಪಂಚಾಯಿತಿ ಸದಸ್ಯೆ ಕಾಂಗ್ರೆಸ್ ಸೇರ್ಪಡೆ  :
    ಗ್ರಾಮ ಪಂಚಾಯ್ತಿ ಸದಸ್ಯೆ ನೀಲಾ ಬಾಯಿ ಹಾಗೂ ಅವರ ಪತಿ ಚಂದ್ರನಾಯ್ಕರವರು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಮಣಿಶೇಖರ್‌ರವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಪಕ್ಷಕ್ಕೆ ಸೇರ್ಪಡೆಯಾದರು.
    ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಆರ್.ಎನ್ ರುದ್ರೇಶ್, ಸದಸ್ಯರಾದ ಎಂ. ಜಯಣ್ಣ, ಕುಬೇರ ನಾಯ್ಕ, ಸಿ. ವಿಶ್ವನಾಥ್, ಮಲಕ್ ಬಿ ವೀರಪ್ಪನ್, ಸ್ವಾಮಿನಾಥನ್, ಜಿ.ಆರ್ ನಾಗರಾಜಪ್ಪ, ಭಾಗ್ಯ, ಉಮಾದೇವಿ ತಿಪ್ಪೇಶ್, ಪಾರ್ವತಿ ಬಾಯಿ, ಸಿದ್ದಮ್ಮ ನಾಗೇಶ್, ಕೂಡ್ಲಿಗೆರೆ ವಿಎಸ್‌ಎಸ್‌ಎನ್ ಅಧ್ಯಕ್ಷ ಎನ್.ಎಚ್ ಮಹೇಶ್, ಬ್ಲಾಕ್ ಕಾಂಗ್ರೆಸ್ ಸಮಿತಿ ಗ್ರಾಮಾಂತರ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಸದಸ್ಯರಾದ ಮಣಿ ಎಎನ್‌ಎಸ್, ಅನಿತಾ ಮಲ್ಲೇಶ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪರಮೇಶ್ವರಪ್ಪ, ಮುಖಂಡರಾದ ಎಸ್. ಮಹಾದೇವ, ಕಲ್ಪನಹಳ್ಳಿ ಕಿರ್ಯಾನಾಯ್ಕ, ಪ್ರವೀಣ್ ನಾಯ್ಕ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು, ಗ್ರಾಮದ ಪ್ರಮುಖರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಭದ್ರಾವತಿ ಕೂಡ್ಲಿಗೆರೆ ಗ್ರಾಮ ಪಂಚಾಯ್ತಿ ಸದಸ್ಯೆ ನೀಲಾ ಬಾಯಿ ಹಾಗೂ ಅವರ ಪತಿ ಚಂದ್ರನಾಯ್ಕರವರು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಮಣಿಶೇಖರ್‌ರವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಪಕ್ಷಕ್ಕೆ ಸೇರ್ಪಡೆಯಾದರು.

Wednesday, March 22, 2023

ಮೇ. ೨೧ರಂದು ೩೯ನೇ ವರ್ಷದ ಉಚಿತ ಸಾಮೂಹಿಕ ವಿವಾಹ


    ಭದ್ರಾವತಿ, ಮಾ. ೨೩ : ವಿಶ್ವ ಹಿಂದೂ ಪರಿಷತ್, ವಿಶ್ವ ಭಾರತಿ ವಿಶ್ವಸ್ಥ ಮಂಡಳಿ ತಾಲೂಕು ಶಾಖೆ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ೩೯ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮೇ. ೨೧ರ ಭಾನುವಾರ ಸಿದ್ಧಾರೂಢ ನಗರದ ಕಾಳಿದಾಸ ಬಡಾವಣೆಯಲ್ಲಿರುವ ಧರ್ಮಶ್ರೀ ಸಭಾಭವನದಲ್ಲಿ ಏರ್ಪಡಿಸಲಾಗಿದೆ.
    ಸಾಮೂಹಿಕ ವಿವಾಹದ ಸದುಪಯೋಗ ಪಡೆದುಕೊಳ್ಳಲು ಇಚ್ಛಿಸುವವರು ಪರಿಷತ್ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸ ತಕ್ಕದ್ದಾಗಿದೆ.  ವರನಿಗೆ ೨೧ ಮತ್ತು ವಧುವಿಗೆ ೧೮ ವರ್ಷ ತುಂಬಿರಬೇಕು. ಈ ಸಂಬಂಧ ದೃಢೀಕರಣ ಪತ್ರ ನೀಡುವುದು. ಮೊದಲನೇ ಮದುವೆಗೆ ಮಾತ್ರ ಅವಕಾಶವಿದೆ (ಆದರೆ ವಿಧವಾ ವಿವಾಹಕ್ಕೆ ಅವಕಾಶ ಇದೆ).
    ಸಾಮೂಹಿಕ ವಿವಾಹದಲ್ಲಿ ಮದುವೆ ಆದವರು ಸರ್ಕಾರದ ಪ್ರೋತ್ಸಾಹಕ ಸೌಲಭ್ಯಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಸಾಮೂಹಿಕ ವಿವಾಹದ ಸದುಪಯೋಗ ಪಡೆದುಕೊಳ್ಳಲು ಇಚ್ಛಿಸುವವರು ವಿವಾಹ ಕೋರಿಕೆ ಪತ್ರ ಪಡೆದು ಭರ್ತಿ ಮಾಡಿ ಅಗತ್ಯ ಮಾಹಿತಿಯೊಂದಿಗೆ ಏ.೧೦ರೊಳಗೆ ಸಲ್ಲಿಸತಕ್ಕದ್ದು.
    ಹೆಚ್ಚಿನ ಮಾಹಿತಿಗೆ ಹಾ. ರಾಮಪ್ಪ-೯೮೮೦೭೭೯೨೯೩, ಡಿ.ಆರ್.ಶಿವಕುಮಾರ್-೯೯೬೪೨೩೭೦೭೮, ಮಂಜುನಾಥ ರಾವ್ ಪವಾರ್-೭೪೧೧೧೨೫೭೪೩, ಎನ್. ಎಸ್. ಮಹೇಶ್ವರಪ್ಪ -೯೪೪೮೯೩೩೧೨೫ ಮತ್ತು ಯಶೋಧ ಡಾ. ವೀರಭದ್ರಪ್ಪ -೯೮೪೪೪೮೭೪೭೯ ಅವರನ್ನು ಸಂಪರ್ಕಿಸಬಹುದಾಗಿದೆ.  ಕೆ. ನಿರಂಜನ, ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪ, ಬಿ.ಹೆಚ್. ರಸ್ತೆ, ಭದ್ರಾವತಿ, ಮೊ:೮೭೬೨೨೮೭೦೧೮ ವಿಳಾಸದಲ್ಲಿ ವಿವಾಹ ಕೋರಿಕೆ ಪತ್ರ ಪಡೆಯಬಹುದಾಗಿದೆ.

ಅಮಲೋದ್ಭವಿ ಮಾತೆ ದೇವಾಲಯದಲ್ಲಿ ಮಹಿಳಾ ದಿನಾಚರಣೆ : ಪತ್ರಕರ್ತೆ ಆರ್. ಫಿಲೋಮಿನಾಗೆ ಸನ್ಮಾನ

ಭದ್ರಾವತಿ ನ್ಯೂಟೌನ್ ಅಮಲೋದ್ಭವಿ ಮಾತೆ ದೇವಾಲಯದಲ್ಲಿ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಕರ್ನಾಟಕ ರಾಜ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹ ಕಾರ್ಯದರ್ಶಿ, ಪತ್ರಕರ್ತೆ ಆರ್. ಫಿಲೋಮಿನಾ ಅಂತೋಣಿ ಅವರ ಸುಮಾರು ೨೫ ವರ್ಷಗಳ ಸೇವೆಯನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಮಾ. ೨೩ : ನ್ಯೂಟೌನ್ ಅಮಲೋದ್ಭವಿ ಮಾತೆ ದೇವಾಲಯದಲ್ಲಿ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಕರ್ನಾಟಕ ರಾಜ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹ ಕಾರ್ಯದರ್ಶಿ, ಪತ್ರಕರ್ತೆ ಆರ್. ಫಿಲೋಮಿನಾ ಅಂತೋಣಿ ಅವರ ಸುಮಾರು ೨೫ ವರ್ಷಗಳ ಸೇವೆಯನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು.
    ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ದೇವಾಲಯದ ಧರ್ಮಗುರು ಲಾನ್ಸಿ ಡಿಸೋಜಾ, ಪೋಷಕರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಗಮನ ನೀಡಬೇಕು. ಮಹಿಳೆಯರು ಮೊಬೈಲ್ ವ್ಯಸನಕ್ಕೆ ಬಲಿಯಾಗದೆ ತಮ್ಮ ಪರಿಮಿತಿಯೊಳಗೆ ಅಗತ್ಯಕ್ಕೆ ತಕ್ಕಂತೆ ಸದ್ಬಳಕೆ ಮಾಡಿಕೊಳ್ಳಬೇಕು. ಪ್ರತಿಯೊಂದು ಕುಟುಂಬದ ಆಧಾರ ಸ್ತಂಬಗಳಾಗಿರುವ ಮಹಿಳೆಯರು ತಮ್ಮ ಆರೋಗ್ಯಕ್ಕೆ ಹೆಚ್ಚಿನ ಗಮನ ಹರಿಸಬೇಕೆಂದರು.
    ಆಲ್ ಇಂಡಿಯಾ ಕ್ಯಾಥೋಲಿಕ್ ಯೂನಿಯನ್(ಎಐಸಿಯು) ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಂತೋಣಿ ವಿಲ್ಸನ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಮಹಿಳೆಯರಿಂದ ಪ್ರದರ್ಶನಗೊಂಡ ರೂತ್ ರೂಪಕ ಗಮನ ಸೆಳೆಯಿತು. ಗ್ಲಾಡಿಸ್ ಹಾಗು ಸಂಗಡಿಗರು ಪ್ರಾರ್ಥಿಸಿದರು. ರೋಜಿ ಸ್ವಾಗತಿಸಿ ನಿರ್ಮಲಾ ದಿವ್ಯರಾಜ್ ವರದಿ ಮಂಡಿಸಿದರು. ಅಗ್ನೇಸ್ ವಂದಿಸಿದರು. ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.

Tuesday, March 21, 2023

ಕೋಮು ಸಂಘರ್ಷಕ್ಕೆ ಕಾರಣರಾಗಿರುವ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಬಂಧಿಸಿ

ರಾಜ್ಯಪಾಲರಿಗೆ ಆಗ್ರಹಿಸಿ ತಹಸೀಲ್ದಾರ್ ಮೂಲಕ ಮನವಿ

ಮಾಜಿ ಸಚಿವ ಕೆ.ಎಸ್ ಈಶ್ವರಪ್ಪರವರು ಮುಸ್ಲಿಂ ಧರ್ಮ ಹಾಗು ದೇವರ ಕುರಿತು ಬಾಯಿಗೆ ಬಂದಂತೆ ಅವಹೇಳನಕಾರಿಯಾಗಿ ಮಾತನಾಡುವ ಮೂಲಕ ಕೋಮು ಸೌಹಾರ್ದತೆಗೆ ಧಕ್ಕೆ ಉಂಟು ಮಾಡುತ್ತಿದ್ದು, ಇವರನ್ನು ತಕ್ಷಣ ಬಂಧಿಸಿ ಕಾರಾಗೃಹದಲ್ಲಿಸಬೇಕೆಂದು ಆಗ್ರಹಿಸಿ ಮರ್ಕರ್ಜಿ ಇದಾರ ಅಂಜುಮನ್-ಎ-ಇಸ್ಲಾಹುಲ್ ಮುಸ್ಲಿಮೀನ್, ಅಹಲೆ ಸುನ್ನತ್-ಉಲ್-ಜಮಾತೆ ಭದ್ರಾವತಿ ತಾಲೂಕು ಶಾಖೆವತಿಯಿಂದ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಮಾ. ೨೧ : ಮಾಜಿ ಸಚಿವ ಕೆ.ಎಸ್ ಈಶ್ವರಪ್ಪರವರು ಮುಸ್ಲಿಂ ಧರ್ಮ ಹಾಗು ದೇವರ ಕುರಿತು ಬಾಯಿಗೆ ಬಂದಂತೆ ಅವಹೇಳನಕಾರಿಯಾಗಿ ಮಾತನಾಡುವ ಮೂಲಕ ಕೋಮು ಸೌಹಾರ್ದತೆಗೆ ಧಕ್ಕೆ ಉಂಟು ಮಾಡುತ್ತಿದ್ದು, ಇವರನ್ನು ತಕ್ಷಣ ಬಂಧಿಸಿ ಕಾರಾಗೃಹದಲ್ಲಿಸಬೇಕೆಂದು ಆಗ್ರಹಿಸಿ ಮರ್ಕರ್ಜಿ ಇದಾರ ಅಂಜುಮನ್-ಎ-ಇಸ್ಲಾಹುಲ್ ಮುಸ್ಲಿಮೀನ್, ಅಹಲೆ ಸುನ್ನತ್-ಉಲ್-ಜಮಾತೆ ತಾಲೂಕು ಶಾಖೆವತಿಯಿಂದ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.
    ಪ್ರಮುಖರು ಮಾತನಾಡಿ, ದೇಶದಲ್ಲಿ ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಸೇರಿದಂತೆ ಎಲ್ಲಾ ಧರ್ಮದವರು ಒಗ್ಗಟ್ಟಾಗಿ ಸಮಾನತೆ, ಸೌಹಾರ್ದತೆ ಭಾರತೀಯ ಸಂಸ್ಕೃತಿ ಮೈಗೂಡಿಸಿಕೊಂಡು ಬದುಕುತ್ತಿದ್ದು, ಈ ನಡುವೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪರವರು ಮುಸ್ಲಿಂ ಧರ್ಮ ಹಾಗು ದೇವರ ಕುರಿತು ಬಾಯಿಗೆ ಬಂದಂತೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದು, ಇವರು ಕೋಮುವಾದಿ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದ್ದಾರೆಯೋ ಅಥವಾ ಭಾರತೀಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದ್ದಾರೆಯೋ ಎಂಬುದು ತಿಳಿಯುತ್ತಿಲ್ಲ. ನೆಮ್ಮದಿಯಿಂದ ಬದುಕುತ್ತಿರುವ ನಮ್ಮ ನಡುವೆ ಕೋಮು ಸಂಘರ್ಷ ಉಂಟಾಗಲು ಕಾರಣರಾಗಿರುತ್ತಾರೆಂದು ಆರೋಪಿಸಿದರು.
ತಮ್ಮ ಸ್ವಾರ್ಥಕ್ಕಾಗಿ ಇವರು ಹಿಂದುತ್ವ ಹೆಸರಿನಲ್ಲಿ ಬಾಯಿ ಬಂದಂತೆ ಮಾತನಾಡುತ್ತಿದ್ದು,  ಈ ಹಿನ್ನಲೆಯಲ್ಲಿ ಇವರನ್ನು ತಕ್ಷಣ ಬಂಧಿಸಿ ಕಾರಾಗೃಹದಲ್ಲಿಸಿ ಎಲ್ಲರೂ ನೆಮ್ಮದಿಯಾಗಿ ಬದುಕು ವಾತಾವರಣ ಕಲ್ಪಿಸಿಕೊಡುವಂತೆ ಕೋರಿದರು.
    ಇದಕ್ಕೂ ಮೊದಲು ನಗರದ ರಂಗಪ್ಪ ವೃತ್ತದಿಂದ ತಾಲೂಕು ಕಛೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.  ಮರ್ಕರ್ಜಿ ಇದಾರ ಅಂಜುಮನ್-ಎ-ಇಸ್ಲಾಹುಲ್ ಮುಸ್ಲಿಮೀನ್, ಅಹಲೆ ಸುನ್ನತ್-ಉಲ್-ಜಮಾತೆ ತಾಲೂಕು ಶಾಖೆ ಅಧ್ಯಕ್ಷ ಮುರ್ತುಜಾ ಖಾನ್ ನೇತೃತ್ವ ವಹಿಸಿದ್ದರು.     ಪ್ರಮುಖರಾದ ಮಹಮದ್ ಸನ್ನಾವುಲ್ಲಾ, ಅಮೀರ್‌ಜಾನ್, ಬಾಬಾ ಜಾನ್, ದಿಲ್‌ದಾರ್, ಎ. ಮಸ್ತಾನ್, ಮುಕ್ರಮ್ ಖಾನ್, ಇಬ್ರಾಹಿಂ ಖಾನ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಡಾ. ಬಿ.ಆರ್ ಅಂಬೇಡ್ಕರ್‌ಗೆ ಕನಿಷ್ಠ ಮಟ್ಟದ ಗೌರವ ನೀಡದ ಕಾಂಗ್ರೆಸ್ ಪಕ್ಷಕ್ಕೆ ಮತ ಕೇಳುವ ನೈತಿಕತೆ ಇಲ್ಲ : ಮೋನಪ್ಪ ಭಂಡಾರಿ

ಜಿಲ್ಲಾ ಬಿಜೆಪಿ ಎಸ್.ಸಿ ಮೋರ್ಚಾ ವತಿಯಿಂದ ಭದ್ರಾವತಿಯಲ್ಲಿ ಪಕ್ಷದ ಮಂಡಲ ಕಛೇರಿ ಮುಂಭಾಗ ಹಮ್ಮಿಕೊಳ್ಳಲಾಗಿದ್ದ 'ನಮ್ಮ ನಡೆ ಭೀಮ ನಡೆ' ಸಮಾವೇಶ ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾ ಪ್ರಭಾರಿ, ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.  
    ಭದ್ರಾವತಿ, ಮಾ. ೨೧ : ದೇಶದ ಸಂವಿಧಾನ ನಿರ್ಮಾತೃ, ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಬದುಕಿರುವಾಗ ಕಾಂಗ್ರೆಸ್ ಪಕ್ಷ ಅವರಿಗೆ ಕನಿಷ್ಠ ಮಟ್ಟದ ಗೌರವ ಸಹ ನೀಡಲಿಲ್ಲ. ಸಾವಿನ ನಂತರವೂ ಅವರನ್ನು ಅವಮಾನಿಸಿತು. ಇಂತಹ ಪಕ್ಷಕ್ಕೆ ಅಂಬೇಡ್ಕರ್ ಹೆಸರು ಹೇಳುವ ಹಾಗು ದೇಶದ ಜನರ ಮತ ಕೇಳುವ ಯಾವುದೇ ನೈತಿಕತೆ ಇಲ್ಲವಾಗಿದೆ ಎಂದು ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾ ಪ್ರಭಾರಿ, ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ ಹೇಳಿದರು.
    ಅವರು ಜಿಲ್ಲಾ ಬಿಜೆಪಿ ಎಸ್.ಸಿ ಮೋರ್ಚಾ ವತಿಯಿಂದ ಪಕ್ಷದ ಮಂಡಲ ಕಛೇರಿ ಮುಂಭಾಗ ಹಮ್ಮಿಕೊಳ್ಳಲಾಗಿದ್ದ 'ನಮ್ಮ ನಡೆ ಭೀಮ ನಡೆ' ಸಮಾವೇಶ ಉದ್ಘಾಟಿಸಿ ಮಾತನಾಡಿದರು.
    ಕಾಂಗ್ರೆಸ್ ಪಕ್ಷ ಅಂಬೇಡ್ಕರ್‌ರವರನ್ನು ಹೆಸರಿಗೆ ಮಾತ್ರ ಮೀಸಲು ಮಾಡಿತು ಹೊರತು ಅವರಿಗೆ ಯಾವುದೇ ಕನಿಷ್ಠ ಮಟ್ಟದ ಗೌರವ ನೀಡಲಿಲ್ಲ. ಚುನಾವಣೆಯಲ್ಲಿ ಅವರನ್ನು ಸೋಲಿಸುವ ಹುನ್ನಾರ ನಡೆಸಿತು. ಅಂಬೇಡ್ಕರ್‌ರವರಿಗೆ ಅಂದು ಬಿಜೆಪಿ ಪಕ್ಷದ ಮಾತೃ ಸಂಘಟನೆ ಜನಸಂಘ ಬೆಂಬಲ ನೀಡಿತು. ದೆಹಲಿಯಲ್ಲಿ ಅಂಬೇಡ್ಕರ್‌ರವರ ಕೊನೆಯ ಅವಧಿಯಲ್ಲಿ ಅವರ ಅಂತ್ಯ ಸಂಸ್ಕಾರಕ್ಕೂ ಕಾಂಗ್ರೆಸ್ ಅವಕಾಶ ನೀಡಲಿಲ್ಲ. ಈ ಪಕ್ಷಕ್ಕೆ ದಲಿತರು, ಪರಿಶಿಷ್ಟರು ಕೇವಲ ೫ ವರ್ಷಗಳಿಗೆ ಒಮ್ಮೆ ಮಾತ್ರ ಕಾಣಿಸುತ್ತಾರೆ. ನಮ್ಮನ್ನು ಮತ ಬ್ಯಾಂಕ್ ರೀತಿಯಲ್ಲಿ ನೋಡುತ್ತಿದ್ದಾರೆ. ನಮ್ಮ ಮೇಲೆ ಯಾವುದೇ ರೀತಿ ಕಾಳಜಿ, ಬದ್ಧತೆ ಇಲ್ಲವಾಗಿದೆ. ನಮ್ಮ ಶಕ್ತಿ ತೋರಿಸುವ ದಿನಗಳು ಇಂದು ಎದುರಾಗಿವೆ ಎಂದರು.
    ಎಸ್.ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕಾಸರವಳ್ಳಿ ಶ್ರೀನಿವಾಸ್ ಮಾತನಾಡಿ, ದೇಶದ ಪ್ರಧಾನಿ ನರೇಂದ್ರ ಮೋದಿಯವರು ಮೊದಲು ದೇಶದ ಸಂವಿಧಾನಕ್ಕೆ ನಮಸ್ಕರಿಸಿದರು. ಆ ಮೂಲಕ ಅವರು ಬಾಬಾ ಸಾಹೇಬ್ ಅಂಬೇಡ್ಕರ್‌ರವರನ್ನು ಗೌರವದಿಂದ ಕಂಡಿದ್ದಾರೆ. ಅಲ್ಲದೆ ಅಂಬೇಡ್ಕರ್‌ರವರ ಜನ್ಮಸ್ಥಳ, ವಿದ್ಯಾಭ್ಯಾಸ ನಡೆಸಿದ ಸ್ಥಳ, ಅವರು ಮರಣ ಹೊಂದಿದ ಸ್ಥಳ ಹಾಗು ಸಮಾದಿ ಸ್ಥಳ ಒಟ್ಟು ೫ ಪಂಚ ಸ್ಥಳಗಳ ಅಭಿವೃದ್ಧಿ ಕೈಗೊಂಡಿದ್ದಾರೆ. ಕೇಂದ್ರ ಹಾಗು ರಾಜ್ಯದಲ್ಲಿ ಪರಿಶಿಷ್ಟರು, ದಲಿತರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಈ ಹಿಂದಿನ ಕಾಂಗ್ರೆಸ್ ಪಕ್ಷ ಮಾಡದಿರುವ ಕೆಲಸಗಳನ್ನು ಬಿಜೆಪಿ ಪಕ್ಷ ತನ್ನ ಅಧಿಕಾರದ ಅವಧಿಯಲ್ಲಿ ಮಾಡಿ ತೋರಿಸಿದೆ.  ಈ ಹಿನ್ನಲೆಯಲ್ಲಿ ನಾವೆಲ್ಲರೂ ಸಹ ಬಿಜೆಪಿ ಪಕ್ಷವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಘಟಿಸುವ ಮೂಲಕ ಪುನಃ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಶ್ರಮಿಸಬೇಕಾಗಿದೆ ಎಂದರು.  
    ಪಕ್ಷದ ರಾಜ್ಯ ನಾಯಕ ಪಟಾಪಟ್ ಶ್ರೀನಿವಾಸ್, ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಕೆ ಸಿದ್ದರಾಮಣ್ಣ, ಓಬಿಸಿ ಮೋರ್ಚಾ ಉಪಾಧ್ಯಕ್ಷ ಅಶೋಕ್ ಮೂರ್ತಿ, ಕಾಡಾ ಅಧ್ಯಕ್ಷೆ ಕೆ.ಬಿ ಪವಿತ್ರ ರಾಮಯ್ಯ, ದೇವರಾಜ್ ಮಂಡೇನ್ ಕೊಪ್ಪ, ಜಯರಾಮ್ ನಾಯ್ಕ್, ಎಂ. ರಾಜು, ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಎಸ್.ಸಿ ಮೋರ್ಚಾ ತಾಲೂಕು ಅಧ್ಯಕ್ಷ ಗಣೇಶ್‌ರಾವ್, ಪ್ರಮುಖರಾದ ಕೂಡ್ಲಿಗೆರೆ ಹಾಲೇಶ್, ಎಸ್. ಕುಮಾರ್, ತೀರ್ಥಯ್ಯ, ಜಿ. ಆನಂದಕುಮಾರ್, ಕೆ. ಮಂಜುನಾಥ್, ಎಂ. ಪ್ರಭಾಕರ್, ಚಂದ್ರು ದೇವರನರಸೀಪುರ, ವಿವಿಧ ತಾಲೂಕುಗಳ ಎಸ್.ಸಿ ಮೋರ್ಚಾ ಅಧ್ಯಕ್ಷರುಗಳಾದ ಚಂದ್ರಶೇಖರ್, ತಿಪ್ಪೇಶ್ ಆನವೇರಿ, ಯೋಗೇಶ್, ಮಂಜುನಾಥ್, ರುಕ್ಮಿಣಿ ರಾಜ್, ರವಿಕುಮಾರ್, ಆನಂದಪ್ಪ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಜಿಲ್ಲೆಯ ವಿವಿಧ ತಾಲೂಕುಗಳಿಂದ ಪಕ್ಷದ ಎಸ್.ಸಿ ಮೋರ್ಚಾ ಮುಖಂಡರು, ಕಾರ್ಯಕರ್ತರು ಸೇರಿದಂತೆ ವಿವಿಧ ಮೋರ್ಚಾಗಳ ಪ್ರಮುಖರು ಪಾಲ್ಗೊಂಡಿದ್ದರು.

ಮಾ.೨೨ರಂದು ಐತಿಹಾಸಿಕ ಮಾವಿನಕೆರೆ ಶಿಲುಬೆ ಬೆಟ್ಟದ ಮಹೋತ್ಸವ : ದಿವ್ಯ ಕರುಣೇಶ್ ಕ್ಯಾಪುಚಿನ್

ಭಕ್ತಿಯುತ ಜೀವಂತ ಶಿಲುಬೆ ಹಾದಿಯ ಪ್ರದರ್ಶನ, ವಿಐಎಸ್‌ಎಲ್-ಎಂಪಿಎಂ ಉಳಿವಿಗಾಗಿ ಪ್ರಾರ್ಥನೆ

ಭದ್ರಾವತಿ ತಾಲೂಕಿನ ಮಾವಿನಕೆರೆ ಗ್ರಾಮದ ಕಿರಿಯ ಪುಷ್ಪ ಸಂತ ತೆರೇಸರ ದೇವಾಲಯದಲ್ಲಿ ಮಾ.೨೨ ರಂದು ಐತಿಹಾಸಿಕ ಮಾವಿನಕೆರೆ ಶಿಲುಬೆ ಬೆಟ್ಟದ ಮಹೋತ್ಸವ ಹಾಗೂ ಭಕ್ತಿಯುತ ಜೀವಂತ ಶಿಲುಬೆ ಹಾದಿಯ ಪ್ರದರ್ಶನ ಏರ್ಪಡಿಸಲಾಗಿದೆ. ಈ ಹಿನ್ನಲೆಯಲ್ಲಿ ಸೋಮವಾರ ದೇವಾಲಯದ ಧರ್ಮಗುರು ಪಾದರ್ ದಿವ್ಯ ಕರುಣೀಶ್ ಕ್ಯಾಪುಚಿನ್ ಸೇರಿದಂತೆ ಭಕ್ತರು ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಬೆಂಬಲ ಸೂಚಿಸುವ ಮೂಲಕ ಬುಧವಾರ ನಡೆಯಲಿರುವ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.
    ಭದ್ರಾವತಿ, ಮಾ. ೨೧: ತಾಲೂಕಿನ ಮಾವಿನಕೆರೆ ಗ್ರಾಮದ ಕಿರಿಯ ಪುಷ್ಪ ಸಂತ ತೆರೇಸರ ದೇವಾಲಯದಲ್ಲಿ ಮಾ.೨೨ ರಂದು ಐತಿಹಾಸಿಕ ಮಾವಿನಕೆರೆ ಶಿಲುಬೆ ಬೆಟ್ಟದ ಮಹೋತ್ಸವ ಹಾಗೂ ಭಕ್ತಿಯುತ ಜೀವಂತ ಶಿಲುಬೆ ಹಾದಿಯ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ದೇವಾಲಯದ ಧರ್ಮಗುರು ಪಾದರ್ ದಿವ್ಯ ಕರುಣೀಶ್ ಕ್ಯಾಪುಚಿನ್ ಹೇಳಿದರು.
    ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ ೪ ವರ್ಷಗಳಿಂದ ನ್ಯೂಟೌನ್, ಹಳೇನಗರ, ಕಾಗದನಗರ ಹಾಗೂ ಕಾರೇಹಳ್ಳಿ ಧರ್ಮಕೇಂದ್ರದ ಭಕ್ತರು ಜೀವಂತ ಶಿಲುಬೆ ಹಾದಿಯ ಪ್ರದರ್ಶನ ತ್ಯಾಗ ಮತ್ತು ಭಕ್ತಿಯಿಂದ ನಡೆಸುತ್ತಿದ್ದಾರೆ.
     ೨ ಸಾವಿರ ವರ್ಷಗಳ ಹಿಂದಿನ ದಿನಗಳಲ್ಲಿ ಯೇಸುವಿನ ಪಾಡು, ಯಾತನೆ ಹಾಗೂ ಮರಣವನ್ನು ಅಭಿನಯದಿಂದ ಮರುಕಳುಹಿಸುವುದೇ ಜೀವಂತ ಶಿಲುಬೆಯ ಹಾದಿಯಾಗಿದೆ. ಅಂದು ಬೆಳಿಗ್ಗೆ ೧೦ ಗಂಟೆಯಿಂದ ಸುಮಾರು ೨ ಗಂಟೆವರೆಗೆ  ಪ್ರದರ್ಶನ ನಡೆಯಲಿದ್ದು, ನೈಜತೆ ಅನಾವರಣಗೊಳ್ಳಲಿದೆ ಎಂದರು.  
      ೧೨ ಗಂಟೆಗೆ ದಿವ್ಯ ಬಲಿಪೂಜೆ. ಮಧ್ಯಾಹ್ನ ೧ ಗಂಟೆಗೆ ಅನ್ನಸಂತರ್ಪಣೆ ಕಾರ್ಯ ನೆರವೇರಲಿದೆ. ತಾಲೂಕಿನ ವಿವಿಧ ಕ್ರೈಸ್ತ ದೇವಾಲಯಗಳ ೨ ಸಾವಿರಕ್ಕೂ
ಹೆಚ್ಚು ಭಕ್ತರು ಶಿಲುಬೆ ಬೆಟ್ಟದ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
      ಆಲ್ ಇಂಡಿಯಾ ಕ್ಯಾಥೋಲಿಕ್ ಯೂನಿಯನ್(ಎಐಸಿಯು) ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಂತೋಣಿ ವಿಲ್ಸನ್ ಮಾತನಾಡಿ, ಐತಿಹಾಸಿಕ ಮಾವಿನಕೆರೆ ಶಿಲುಬೆ ಬೆಟ್ಟದ ಮಹೋತ್ಸವಕ್ಕೆ ವರ್ಷದಿಂದ ವರ್ಷಕ್ಕೆ ಭಕ್ತಾಧಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಜೀವಂತ ಶಿಲುಬೆ ಹಾದಿಯ ಪ್ರದರ್ಶನ ಭಕ್ತರಲ್ಲಿ ಒಂದು ಅದ್ಭುತ ಶಕ್ತಿ, ಚೈತನ್ಯ ತಂದು ಕೊಡಲಿದೆ. ಇಂತಹ ಪವಿತ್ರ ಕಾರ್ಯಕ್ರಮದಲ್ಲಿ ಈ ಬಾರಿ ವಿಐಎಸ್‌ಎಲ್ ಹಾಗೂ ಎಂಪಿಎಂ ಕಾರ್ಖಾನೆಗಳ ಪುನರ್ ಆರಂಭ ಹಾಗೂ ಅಭಿವೃದ್ಧಿ ಕುರಿತು, ದೇಶದಲ್ಲಿರುವ ಎಲ್ಲರ ಏಳಿಗೆಗಾಗಿ ಪ್ರಾರ್ಥನೆ ಸಲ್ಲಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ೮೯೭೧೭೦೯೨೮೧ಕ್ಕೆ ಸಂಪರ್ಕಿಸಬಹುದಾಗಿದೆ ಎಂದರು. ನ್ಯೂಟೌನ್ ಅಮಲೋದ್ಭವಿ ಮಾತೆ ದೇವಾಲಯದ ಧರ್ಮಗುರು ಪಾದರ್ ಲಾನ್ಸಿ ಡಿಸೋಜಾ ಮಾತನಾಡಿ,  ನಾವು ಸೇವಿಸುವ ಆಹಾರ ಯಾವುದಾದರೂ ಇರಲಿ ಉತ್ತಮ ದೇಹ, ಪರಿಶುದ್ಧ ಮನಸ್ಸು, ಭಾವನೆಗಳನ್ನು ಹೊಂದುವ ನಿಟ್ಟಿನಲ್ಲಿ ಅನುಸರಿಸುವ ಆಚರಣೆಗಳಿಗೆ ಹೆಚ್ಚಿನ ಗಮನ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದರು.
    ಗಾಂಧಿನಗರ ವೇಲಾಂಗಣಿ ಮಾತೆ ದೇವಾಲಯಗಳ ಧರ್ಮಗುರು ಪಾದರ್ ಸ್ಟೀವನ್ ಡೇಸಾ ಮಾತನಾಡಿ, ಬಲಿಪೂಜೆ ಮಹತ್ವ ಹಾಗು ಕ್ರೈಸ್ತ ಧರ್ಮದ ಆಚರಣೆಯಲ್ಲಿ ಅನುಸರಿಸುವ ಕ್ರಮಗಳನ್ನು ವಿವರಿಸಿದರು.
    ಕಾಗದನಗರದ ಸಂತ ಜೋಸೆಫರ ದೇವಾಲಯ ಧರ್ಮಗುರು ಡೊನೆಮಿಕ್ ಕ್ರಿಸ್ತರಾಜ್, ಡಾನ್ ಬೋಸ್ಕೋ ಕೈಗಾರಿಕಾ ತರಬೇತಿ ಸಂಸ್ಥೆ ನಿರ್ದೇಶಕ ಪಾದರ್ ಆರೋಗ್ಯ ರಾಜ್, ಪ್ರಮುಖರಾದ ದೇವಾಲಯದ ಪಾಲನ ಪರಿಷತ್ ಕಾರ್ಯದರ್ಶಿ ಅಂತೋಣಿ ಡಿಕಾಸ್ಟ, ಸೆಲ್ವರಾಜ್, ಡೇವಿಸ್, ನಗರಸಭಾ ಸದಸ್ಯ ಜಾರ್ಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.