೩೯ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಡಾ.ಬಿ.ಜಿ.ಧನಂಜಯ
![](https://blogger.googleusercontent.com/img/a/AVvXsEgi-M_6OPlvMnLg-I40bzENDUsmZadLyY7j3AS8jyBhmlyF27o2vz8IrSfkyF9BqxMjcgvM_E6fkvKhgAZTcEfWbNV0JW-mxS19dUPtxlN37aVnLbNRpG43Ghxh_l9DPh9YzMZn1aox_VJHvP6tZqi21dZt32zKe9JwypZJreuI1zyFv9q8xwBgu5REnw=w400-h225-rw)
ವಿಶ್ವ ಹಿಂದು ಪರಿಷದ್, ವಿಶ್ವಭಾರತಿ ವಿಶ್ವಸ್ಥ ಮ೦ಡಳಿವತಿಯಿಂದ ಭದ್ರಾವತಿ ಸಿದ್ಧಾರೂಢ ನಗರದ ಧರ್ಮಶ್ರೀ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ೩೯ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿ ಧನಂಜಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಭದ್ರಾವತಿ, ಮೇ. ೨೨ : ಭದ್ರಾವತಿ : ವಿಶ್ವದಲ್ಲಿಯೇ ತನ್ನದೇ ಆದ ವೈಶಿಷ್ಟ್ಯತೆಯಿಂದ ಜಗತ್ತಿನ ಗಮನ ಸೆಳೆದಿರುವ ಭಾರತ ದೇಶದಲ್ಲಿ ವಿವಾಹಕ್ಕೆ ಅತ್ಯಂತ ಮಹತ್ವದ ಸ್ಥಾನವಿದ್ದು, ಪರಿಣಾಮವಾಗಿ ಪಾಶ್ಚಿಮಾತ್ಯರು ಸಹ ಭಾರತೀಯರ ವಿವಾಹ ಪದ್ಧತಿ ಅನುಸರಿಸುತ್ತಿರುವುದು ಹೆಚ್ಚಾಗಿ ಕಂಡು ಬರುತ್ತಿದೆ ಎಂದು ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿ ಧನಂಜಯ ಹೇಳಿದರು.
ವಿಶ್ವ ಹಿಂದು ಪರಿಷದ್, ವಿಶ್ವಭಾರತಿ ವಿಶ್ವಸ್ಥ ಮ೦ಡಳಿವತಿಯಿಂದ ಸಿದ್ಧಾರೂಢ ನಗರದ ಧರ್ಮಶ್ರೀ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ೩೯ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಅವರು ಪಾಲ್ಗೊಂಡು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸದೃಢ ಕುಟುಂಬದಿಂದ ಮಾತ್ರ ಸಶಕ್ತರಾಷ್ಟ್ರ ನಿರ್ಮಾಣ ಸಾಧ್ಯ. ಈ ಹಿನ್ನೆಲೆಯಲ್ಲಿ ಬೆಳೆಯುವ ಹಂತದಲ್ಲಿಯೇ ಸಂಸ್ಕೃತಿ ಹಾಗೂ ಸಂಸ್ಕಾರ ಅತ್ಯಗತ್ಯ ಎಂದರು. ವಿವಾಹ ಎಂದರೆ ಕೇವಲ ಗಂಡು-ಹೆಣ್ಣಿನ ನಡುವಿನ ದೈಹಿಕ ಸಂಬಂಧ ಮಾತ್ರವಲ್ಲ ಎಂದ ಅವರು, ಈ ಕುರಿತಾಗಿ ವಿವರಣೆ ನೀಡಿದರು.
ಮದುವೆ ಎಂಬುದು ಮಧ್ಯಮ ವರ್ಗಕ್ಕೆ ದುಸ್ತರವಾಗಿದ್ದ ಕಾಲದಲ್ಲಿ ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ೭೦ರ ದಶಕದಲ್ಲಿ ಆರಂಭಿಸಿದ ಉಚಿತ ಸಾಮೂಹಿಕ ವಿವಾಹದಿಂದ ಪ್ರೇರಣೆಗೊಂಡು ವಿಶ್ವ ಹಿಂದು ಪರಿಷದ್ ವತಿಯಿಂದ ನಗರದಲ್ಲಿ ಸುಮಾರು ೩೯ ವರ್ಷಗಳಿಂದ ಉಚಿತ ಸಾಮೂಹಿಕ ವಿವಾಹ ಸಮಾರಂಭ ಆಯೋಜಿಸಿಕೊಂಡು ಬರಲಾಗುತ್ತಿದೆ. ಸಾಮೂಹಿಕ ವಿವಾಹದಲ್ಲಿ ಇದುವರೆಗೂ ಒಟ್ಟು ೭೭೪ ಜೊತೆ ವಿವಾಹ ನಡೆಸಿರುವುದು ಹೆಮ್ಮಯ ಸಂಗತಿಯಾಗಿದೆ ಎಂದರು.
ಸಮಾರಂಭದ ಸಾನಿಧ್ಯ ವಹಿಸಿದ್ದ ಅರಕೆರೆಯ ವಿರಕ್ತ ಮಠದ ಶ್ರೀ ಕರಿಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ವಿವಾಹ ಎಂಬುದು ಪವಿತ್ರ ವಾದ ಅನುಬಂಧವಾಗಿದ್ದು, ಸತಿ-ಪತಿಗಳು ಪರಸ್ಪರ ಅರಿತು ಸಮಾಜದಲ್ಲಿ ಸತ್ಪ್ರಜೆಗಳಾಗಿ ಬಾಳುವಂತೆ ಕರೆನೀಡಿದರು.
ಬಜರಂಗದಳದ ಪ್ರಾಂತ ಸ೦ಯೋಜಕ ಕೆ.ಆರ್ ಸುನಿಲ್ ಮಾತನಾಡಿ, ಹಿಂದೂ ಸಮಾಜವನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ವಿಎಚ್‌ಪಿ ಹಾಗೂ ಸಂಘ ಪರಿವಾರ ನಿರಂತರವಾಗಿ ಕೆಲಸಮಾಡುತ್ತಿವೆ ಎಂದರು.
ವಿಶ್ವ ಹಿಂದು ಪರಿಷದ್ ಅಧ್ಯಕ್ಷ ಪಿ.ವೆಂಕಟರಮಣಶೇಟ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷ ಅನುಸುಧಾ ಮೋಹನ್ ಪಳನಿ, ಸದಸ್ಯರಾದ ಬಿ.ಕೆ ಮೋಹನ್, ವಿ. ಕದಿರೇಶ್, ಜಾರ್ಜ್, ಮಾಜಿ ಅಧ್ಯಕ್ಷ ಆರ್.ಕರುಣಾಮೂರ್ತಿ, ವಿಐಎಸ್‌ಎಲ್ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕರಾದ ಬಿ.ಎಲ್ ಚಾಂದ್ವಾನಿ, ಡಾ.ಟಿ.ನರೇಂದ್ರ ಭಟ್, ಹಾ. ರಾಮಪ್ಪ, ನಾರಾಯಣ, ಜಿ.ವರ್ಣೇಕರ್, ಸುಧಾಕರ ಶೆಟ್ಟಿ, ಮುತ್ತು ರಾಮಲಿಂಗಮ್, ದಾನಿ ಶಾರದ ಟ್ರಾನ್ಸ್‌ಪೋರ್ಟ್ ಶಿವಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸಾಮೂಹಿಕ ವಿವಾಹದಲ್ಲಿ ಸಂತೋಷ್ ಜಾಧವ್ ಮತ್ತು ಎನ್. ಶಿವಲೀಲಾ ಹಾಗೂ ವಿನಯ್ ಡಿ.ಎನ್ ಮತ್ತು ನೇತ್ರಾಬಾಯಿ ಡಿ. ನವಜೀವನಕ್ಕೆ ಕಾಲಿಟ್ಟರು. ಮಂಜುನಾಥ್‌ರಾವ್ ಪವಾರ್ ಸ್ವಾಗತಿಸಿದರು. ವೈ.ಎಸ್ ರಾಮಮೂರ್ತಿ ನಿರೂಪಿಸಿ, ಡಿ.ಆರ್ ಶಿವಕುಮಾರ್ ವಂದಿಸಿದರು.