ಸೋಮವಾರ, ಅಕ್ಟೋಬರ್ 27, 2025

ಜಾನ್ ಸುರೇಶ್ ನಿಧನ


ಜಾನ್ ಸುರೇಶ್ 
ಭದ್ರಾವತಿ: ನಗರಸಭೆ ವ್ಯಾಪ್ತಿಯ ಹೊಸಮನೆ ಬೋವಿ ಕಾಲೋನಿ ನಿವಾಸಿ ಜಾನ್ ಸುರೇಶ್(೪೭) ಸೋಮವಾರ ನಿಧನ ಹೊಂದಿದರು. 
ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ. ಇವರ ಅಂತ್ಯಕ್ರಿಯೆ ಮಂಗಳವಾರ ನಗರದ ಬೈಪಾಸ್ ರಸ್ತೆ, ಮಿಲ್ಟ್ರಿಕ್ಯಾಂಪ್ ಸಮೀಪದ ಕ್ರೈಸ್ತ ಸಮಾಧಿಯಲ್ಲಿ ನೆರವೇರುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಇವರ ನಿಧನಕ್ಕೆ ನಗರದ ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಗಣ್ಯರು ಸಂತಾಪ ಸೂಚಿಸಿದ್ದಾರೆ.
ಕಟ್ಟಡದಿಂದ ಕೆಳಗೆ ಬಿದ್ದು ಗಾಯಗೊಂಡಿದ್ದರು: 
ಸುರೇಶ್ ಎಲೆಕ್ಟ್ರಿಷಿಯನ್ ವೃತ್ತಿ ಮಾಡುತ್ತಿದ್ದು, ಕಳೆದ ೩-೪ ದಿನಗಳ ಹಿಂದೆ ನಗರಸಭೆ ವ್ಯಾಪ್ತಿಯ ಹೆಬ್ಬಂಡಿಯಲ್ಲಿ ನಿರ್ಮಾಣ ಹಂತದಲ್ಲಿರುವ ಹೊಸ ಮನೆ ಕಟ್ಟಡದಲ್ಲಿ ವಿದ್ಯುತ್ ಕೆಲಸ ನಿರ್ವಹಿಸುತ್ತಿದ್ದಾಗ ಕೆಳಗೆ ಬಿದ್ದು ಗಾಯಗೊಂಡಿದ್ದರು. 
ಇವರನ್ನು ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಅ.೩೧ರಂದು ಇಂದಿರಾಗಾಂಧಿ ಪುಣ್ಯ ತಿಥಿ ಆಚರಣೆ : ಒಳರೋಗಿಗಳಿಗೆ ಹಣ್ಣು-ಬ್ರೆಡ್ ವಿತರಣೆ

    ಭದ್ರಾವತಿ : ಜಿಲ್ಲಾ ಕಾಂಗ್ರೆಸ್ ಸಮಿತಿ ಸೇವಾದಳ ತಾಲೂಕು ಘಟಕದಿಂದ ಅ.೩೧ರಂದು ದೇಶದ ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿಯವರ ಪುಣ್ಯ ತಿಥಿ ಆಯೋಜಿಸಲಾಗಿದೆ. 
    ಪ್ರತಿ ವರ್ಷ ಸೇವಾದಳ ಘಟಕದಿಂದ ಇಂದಿರಾಗಾಂಧಿಯವರ ಪುಣ್ಯ ತಿಥಿ ಆಚರಿಸಿಕೊಂಡು ಬರಲಾಗುತ್ತಿದ್ದು, ಈ ಬಾರಿ ಸಹ ಅಂದು ಬೆಳಿಗ್ಗೆ ೯.೩೦ಕ್ಕೆ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಹಣ್ಣು ಮತ್ತು ಬ್ರೆಡ್ ವಿತರಣೆ ನಡೆಯಲಿದೆ. 
    ಪಕ್ಷದ ಮುಖಂಡರು, ಸೇವಾದಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಸೇವಾದಳ ತಾಲೂಕು ಘಟಕದ ಅಧ್ಯಕ್ಷ ಕೆ.ಜೆ ಹನುಮಂತಯ್ಯ ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಕುಮಾರ್ ಕೋರಿದ್ದಾರೆ. 

ಅ.೨೯ರಂದು ವಿದ್ಯುತ್ ವ್ಯತ್ಯಯ

    ಭದ್ರಾವತಿ : ಮೆಸ್ಕಾಂ ಮಾಚೇನಹಳ್ಳಿ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗ ನಿರ್ವಹಣೆ ಹಾಗು ಅಭಿವೃದ್ಧಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಘಟಕ-೫ರ ಶಾಖಾ ವ್ಯಾಪ್ತಿಯ ಪ್ರದೇಶಗಳಲ್ಲಿ ಅ.೨೯ರ ಬುಧವಾರ ಬೆಳಿಗ್ಗೆ ೯.೩೦ ರಿಂದ ಸಂಜೆ ೬ ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 
    ಮಾಚೇನಹಳ್ಳಿ ಕೈಗಾರಿಕಾ ಪ್ರದೇಶ, ಡೈರಿ ವೃತ್ತ, ಶಿವರಾಮನಗರ, ವಿಶ್ವೇಶ್ವರಾಯ ನಗರ, ಜೇಡಿಕಟ್ಟೆ, ಜೇಡಿಕಟ್ಟೆ-ಹೊಸೂರು, ಸಿರಿಯೂರು, ವೀರಾಪುರ, ಕಲ್ಲಹಳ್ಳಿ, ಸಂಕ್ಲೀಪುರ, ಹಾಗಲಮನೆ, ಹುಲಿರಾಮನಕೊಪ್ಪ, ಸಿರಿಯೂರು ತಾಂಡ, ಸಿರಿಯೂರು ಕ್ಯಾಂಪ್ ಸೇರಿದಂತೆ ಇತ್ಯಾದಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.