ಮಂಗಳವಾರ, ಅಕ್ಟೋಬರ್ 28, 2025

ಸರ್ಕಾರದ ಆದೇಶದಂತೆ ಕಾರ್ಯನಿರ್ವಹಿಸದ ನ್ಯಾಯಬೆಲೆ ಅಂಗಡಿಗಳನ್ನು ರದ್ದು ಮಾಡಿ : ಶಶಿಕುಮಾರ್ ಗೌಡ

ಭದ್ರಾವತಿಯಲ್ಲಿ ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡ ಸಾರ್ವಜನಿಕರಿಂದ ದೂರುಗಳು ಕೇಳಿಬಂದ ಹಿನ್ನಲೆಯಲ್ಲಿ ಜನ್ನಾಪುರ ಸಚ್ಚಿದಾನಂದ ಗುರುರಾಜ ನ್ಯಾಯಬೆಲೆ ಅಂಗಡಿಗೆ ಭೇಟ ನೀಡಿ ಪರಿಶೀಲನೆ ನಡೆಸಿ ಸರ್ಕಾರಕ್ಕೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. 
    ಭದ್ರಾವತಿ: ತಾಲೂಕಿನ ನಗರ ಪ್ರದೇಶದ ನ್ಯಾಯಬೆಲೆ ಅಂಗಡಿಗಳಲ್ಲಿ ಸರಿಯಾಗಿ ಪಡಿತರ ವಿತರಣೆ ಮಾಡದೆ ಸರ್ಕಾರದ ಆದೇಶದಂತೆ ಕಾರ್ಯನಿರ್ವಹಿಸದೆ ನಿರ್ಲಕ್ಷ್ಯತನದಿಂದ ವರ್ತಿಸಲಾಗುತ್ತಿದೆ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ ಎಂದು ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡ ಆರೋಪಿಸಿದ್ದಾರೆ. 
    ಸಾರ್ವಜನಿಕರಿಂದ ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ನಗರಸಭೆ ವ್ಯಾಪ್ತಿಯ ಜನ್ನಾಪುರ ಸಚ್ಚಿದಾನಂದ ಗುರುರಾಜ ನ್ಯಾಯಬೆಲೆ ಅಂಗಡಿಗೆ ಭೇಟ ನೀಡಿ ಪರಿಶೀಲನೆ ನಡೆಸಲಾಯಿತು. ಆಹಾರ ಖಾತೆ ಸಚಿವ ಕೆ.ಎಚ್ ಮುನಿಯಪ್ಪರವರು ರಾಜ್ಯದಲ್ಲಿ ಒನ್ ನೇಷನ್, ಒನ್ ಕಾರ್ಡ್ ಜಾರಿಗೆ ತರಲಾಗಿದೆ ಎಂದು ತಿಳಿಸಿದ್ದಾರೆ. ಇದರ ಪ್ರಕಾರ ದೇಶದ ಯಾವುದೇ ಮೂಲೆಯಲ್ಲಿ ವಾಸಿಸುತ್ತಿದ್ದರೂ ಸಹ ಅವರಿಗೆ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಿಸಬೇಕೆಂಬುದಾಗಿದೆ. ಆದರೆ ಇಲ್ಲಿನ ನ್ಯಾಯಬೆಲೆ ಅಂಗಡಿಗಳು ಆ ರೀತಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ದೂರಿದರು. 
    ಸರಿಯಾಗಿ ಪಡಿತರ ವಿತರಣೆ ಮಾಡದೆ ಸರ್ಕಾದ ಆದೇಶದಂತೆ ಕಾರ್ಯನಿರ್ವಹಿಸದ ನ್ಯಾಯಬೆಲೆ ಅಂಗಡಿಗಳನ್ನು ರದ್ದು ಮಾಡುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. 

ಸಂಗಮೇಶ್ವರ್ ಬೇಡಿಕೆಗಳನ್ನು ಈಡೇರಿಸಿ, ಸಚಿವ ಸ್ಥಾನ ನೀಡಿ : ವಿ. ವಿನೋದ್

ಹುಟ್ಟುಹಬ್ಬದ ಅಂಗವಾಗಿ ಪೋಷಕಾಂಶಯುಕ್ತ ಹಣ್ಣು-ಬ್ರೆಡ್ ವಿತರಣೆ 

ಬಿ.ಕೆ ಸಂಗಮೇಶ್ವರ್‌ರವರ ಹುಟ್ಟುಹಬ್ಬದ ಅಂಗವಾಗಿ ಕರ್ನಾಟಕ ದಲಿತ ಸಮನ್ವಯ ಸಮಿತಿ ಮತ್ತು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಒಕ್ಕೂಟದ ವತಿಯಿಂದ ಮಂಗಳವಾರ ಭದ್ರಾವತಿ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಪೋಷಕಾಂಶಯುಕ್ತ ಹಣ್ಣು ಹಾಗು ಬ್ರೆಡ್ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. 
    ಭದ್ರಾವತಿ: ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ  ಸಂಬಂಧಿಸಿದಂತೆ ಅವರ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಕರ್ನಾಟಕ ದಲಿತ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ವಿ. ವಿನೋದ್ ಆಗ್ರಹಿಸಿದರು. 
    ಅವರು ಮಂಗಳವಾರ ಬಿ.ಕೆ ಸಂಗಮೇಶ್ವರ್‌ರವರ ಹುಟ್ಟುಹಬ್ಬದ ಅಂಗವಾಗಿ ಕರ್ನಾಟಕ ದಲಿತ ಸಮನ್ವಯ ಸಮಿತಿ ಮತ್ತು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಒಕ್ಕೂಟದ ವತಿಯಿಂದ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ಒಳರೋಗಿಗಳಿಗೆ ಪೋಷಕಾಂಶಯುಕ್ತ ಹಣ್ಣು ಹಾಗು ಬ್ರೆಡ್ ವಿತರಣೆ ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿದರು. 
    ಸಂಗಮೇಶ್ವರ್‌ರವರು ಕ್ಷೇತ್ರದಲ್ಲಿ ೪ ಬಾರಿ ಶಾಸಕರಾಗಿ ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಈ ಹಿಂದೆ ಆಸ್ಪತ್ರೆಗೆ ಭೇಟಿ ನೀಡಿದ್ದ ಆರೋಗ್ಯ ಸಚಿವ ಗುಂಡೂರಾವ್ ಅವರಿಗೆ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೇರಿಸಿ ಅಗತ್ಯ ಸೌಲಭ್ಯಗಳು, ವೈದ್ಯರು, ಸಿಬ್ಬಂದಿಗಳನ್ನು ನೇಮಕಗೊಳಿಸುವಂತೆ ಹಾಗು ಭದ್ರಾ ಕಾಲೋನಿಯಲ್ಲಿ ನೂತನವಾಗಿ ತಾಯಿ-ಮಗು ಆಸ್ಪತ್ರೆ ನಿರ್ಮಿಸುವಂತೆ ಮನವಿ ಸಲ್ಲಿಸಿದ್ದರು. ತಕ್ಷಣ ಶಾಸಕರ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು. ಅಲ್ಲದೆ ಶಾಸಕರಿಗೆ ಸಚಿವ ಸ್ಥಾನ ನೀಡುವ ಮೂಲಕ ಅವರ ಸುದೀರ್ಘ ರಾಜಕೀಯ ಸೇವೆ ಗೌರವಿಸಬೇಕೆಂದು ಮನವಿ ಮಾಡಿದರು. 
    ಕರ್ನಾಟಕ ದಲಿತ ಸಮನ್ವಯ ಸಮಿತಿ ಮತ್ತು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಒಕ್ಕೂಟದ ಪದಾಧಿಕಾರಿಗಳಾದ ನೇತ್ರಾವತಿ, ಸುನಿಲ್ ಕೋಠಿ, ಮೋಹನ್, ಶಬರೀಶ್, ಗೋವಿಂದಪ್ಪ, ಗಣೇಶ್, ಆಶೀರ್ವಾದ್, ರಾಜು, ಅರುಳ್, ನಾಗೇಂದ್ರಪ್ಪ, ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಶಂಕ್ರಪ್ಪ ಹಾಗು ವೈದ್ಯರು, ನರ್ಸ್ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು. 

ಸಂಗಮೇಶ್ವರ್ ಹುಟ್ಟುಹಬ್ಬ ಗೆಳೆಯರ ಬಳಗದಿಂದ ಹಣ್ಣು-ಬ್ರೆಡ್ ವಿತರಣೆ

ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಹುಟ್ಟುಹಬ್ಬದ ಅಂಗವಾಗಿ ಭದ್ರಾವತಿ ಹಳೇನಗರದ ಭೂತನಗುಡಿ, ಗೆಳೆಯರ ಬಳಗದ ಬಿ.ಕೆ ಸಂಗಮೇಶ್ವರ್ ಅಭಿಮಾನಿಗಳಿಂದ ಮಂಗಳವಾರ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿ ಹಣ್ಣು ಮತ್ತು ಬ್ರೆಡ್ ವಿತರಿಸಲಾಯಿತು. 
    ಭದ್ರಾವತಿ: ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಹುಟ್ಟುಹಬ್ಬದ ಅಂಗವಾಗಿ ಹಳೇನಗರದ ಭೂತನಗುಡಿ, ಗೆಳೆಯರ ಬಳಗದ ಬಿ.ಕೆ ಸಂಗಮೇಶ್ವರ್ ಅಭಿಮಾನಿಗಳಿಂದ ಮಂಗಳವಾರ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿ ಹಣ್ಣು ಮತ್ತು ಬ್ರೆಡ್ ವಿತರಿಸಲಾಯಿತು. 
    ಅಭಿಮಾನಿಗಳ ಬಳಗದ ಪ್ರಮುಖರು ಮಾತನಾಡಿ, ಸಂಗಮೇಶ್ವರ್‌ರವರಿಗೆ ಇನ್ನೂ ಹೆಚ್ಚಿನ ಅಧಿಕಾರ, ಸ್ಥಾನಮಾನ ಹಾಗು ಆಯುರಾರೋಗ್ಯ ದೇವರು ಕರುಣಿಸಲೆಂದು ಪ್ರಾರ್ಥಿಸುವುದಾಗಿ ತಿಳಿಸಿದರು. 
    ಪ್ರಮುಖರಾದ ರಾಜೇಶ್, ಮೇಘರಾಜ್, ನಟರಾಜ್ .ವೈ, ಮಣಿ ಅಣ್ಣ, ಜಗನ್ನಾಥ್, ರಾಜು ಜೆರಾಕ್ಸ್, ಗುಂಡ ಚಕ್ಕೆ, ಮಂಜುನಾಥ್, ಧನರಾಜು, ಅನೀಶು, ವಿಜಯ್, ಕಿರಣ್, ರಮೇಶ್, ಮಂಜು, ಅರವಿಂದ್, ಲಕ್ಷ್ಮಿ, ಜಯಮಾಲ, ಗುರುರಾಜ್, ರಾಮಣ್ಣ ಮತ್ತು ಮಣಿ ಹಾಗು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಶಂಕ್ರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಅ.೨೯ರಿಂದ ಹಗಲು-ರಾತ್ರಿ ಪ್ರತಿಭಟನಾ ಧರಣಿ ಸತ್ಯಾಗ್ರಹ

ಬಿ.ಎನ್ ರಾಜು
    ಭದ್ರಾವತಿ : ನಗರದ ಹೃದಯ ಭಾಗದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ.ಆರ್ ಅಂಬೇಡ್ಕರ್ ಭವನ ನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವಂತೆ ಆಗ್ರಹಿಸಿ ಹಾಗು ಗ್ರಾಮಸಭೆ ನಿರ್ಲಕ್ಷ್ಯ ಮತ್ತು ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದೆ ಇರುವುದನ್ನು ಖಂಡಿಸಿ ಅ.೨೯ರಿಂದ ಹಗಲು-ರಾತ್ರಿ ಅಂಬೇಡ್ಕರ್ ಭವನ ಮುಂಭಾಗ ಪ್ರತಿಭಟನಾ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ತಿಳಿಸಿದ್ದಾರೆ.  
    ಹಲವು ದಶಕಗಳ ನಿರಂತರ ಹೋರಾಟದ ಫಲವಾಗಿ ನಗರದ ಹೃದಯ ಭಾಗವಾದ ಕನಕಮಂಟಪ ಮೈದಾನದ ಬಳಿ, ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಛೇರಿ ಪಕ್ಕದ ಖಾಲಿ ಜಾಗದಲ್ಲಿ ೨೦೧೮ರಲ್ಲಿ ಶಂಕುಸ್ಥಾಪನೆಗೊಂಡು ಇದೀಗ ಪೂರ್ಣ ಪ್ರಮಾಣಕ್ಕೆ ತಲುಪಿರುವ ಡಾ. ಬಿ.ಆರ್ ಅಂಬೇಡ್ಕರ್ ಭವನ ನಾಡಿನ ಎಲ್ಲಾ ಧರ್ಮದ, ಎಲ್ಲಾ ವರ್ಗದ ಜನರ ಪ್ರೀತಿಗೆ ಪಾತ್ರರಾಗಿರುವ, ಬಡವರು, ಶೋಷಿತರ ಧ್ವನಿಯಾಗಿರುವ ಧೀಮಂತ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯರವರು ನೂತನ ಭವನ ಉದ್ಘಾಟಿಸುವ ಮೂಲಕ ಅಂಬೇಡ್ಕರ್‌ರವರನ್ನು ಗೌರವಿಸಬೇಕೆಂದು ಬಿ.ಎನ್ ರಾಜು ಕೋರಿದ್ದಾರೆ. 
    ತಾಲೂಕಿನ ಎಲ್ಲಾ ೩೩ ಗ್ರಾಮ ಪಂಚಾಯಿತಿಗಳಲ್ಲಿ ಸಮರ್ಪಕವಾಗಿ ಗ್ರಾಮಸಭೆಗಳನ್ನು ನಡೆಸುತ್ತಿಲ್ಲ. ಗ್ರಾಮಸಭೆಗಳ ಕುರಿತು ಗ್ರಾಮಸ್ಥರಿಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಸರ್ಕಾರದ ಯೋಜನೆಗಳು ಬಡವರ್ಗದವರಿಗೆ ತಲುಪದೆ ಶ್ರೀಮಂತರ ಪಾಲಾಗುತ್ತಿವೆ. ಜಾತಿ, ಆದಾಯ ಪ್ರಮಾಣ ಪತ್ರ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಗ್ರಾಮಸ್ಥರಿಗೆ ಸರಿಯಾಗಿ ಕಲ್ಪಿಸಿಕೊಡದೆ ನಿರ್ಲಕ್ಷ್ಯವಹಿಸಲಾಗಿದೆ. ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಸಹ ಅರ್ಹ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಅಲ್ಲದೆ ಭ್ರಷ್ಟಾಚಾರ ಸಹ ಕಂಡು ಬರುತ್ತಿದ್ದು, ಈ ಕುರಿತು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಬಿ.ಎನ್ ದೂರಿದ್ದಾರೆ. 
    ಈ ಹಿನ್ನಲೆಯಲ್ಲಿ  ಅಂಬೇಡ್ಕರ್ ಭವನದ ಮುಂಭಾಗ ಹಗಲು-ರಾತ್ರಿ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದ್ದು, ಸಂಘ-ಸಂಸ್ಥೆಗಳು, ಮಹಿಳೆಯರು, ವಿದ್ಯಾರ್ಥಿಗಳು, ರೈತರು, ಕಾರ್ಮಿಕರು ಸೇರಿದಂತೆ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದಾರೆ.