Saturday, October 16, 2021

ನಾಡಹಬ್ಬ ದಸರಾ ಮೆರವಣಿಗೆ : ಶ್ರೀ ಕುಕ್ಕುವಾಡೇಶ್ವರಿ ದೇವಸ್ಥಾನಕ್ಕೆ ೨ನೇ ಬಹುಮಾನ

ನಾಡಹಬ್ಬ ದಸರಾ ಅಂಗವಾಗಿ ಭದ್ರಾವತಿ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಲಂಕೃತಗೊಂಡ ದೇವಾನುದೇವತೆಗಳಲ್ಲಿ ಹಳೇನಗರದ ಬಸವೇಶ್ವರ ವೃತ್ತ ಸಮೀಪದಲ್ಲಿರುವ ಶ್ರೀ ಕುಕ್ಕುವಾಡೇಶ್ವರಿ ದೇವಸ್ಥಾನ ೨ನೇ ಬಹುಮಾನ ಪಡೆದುಕೊಂಡಿದೆ.
    ಭದ್ರಾವತಿ, ಅ. ೧೬: ನಾಡಹಬ್ಬ ದಸರಾ ಅಂಗವಾಗಿ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಲಂಕೃತಗೊಂಡ ದೇವಾನುದೇವತೆಗಳಲ್ಲಿ ಹಳೇನಗರದ ಬಸವೇಶ್ವರ ವೃತ್ತ ಸಮೀಪದಲ್ಲಿರುವ ಶ್ರೀ ಕುಕ್ಕುವಾಡೇಶ್ವರಿ ದೇವಸ್ಥಾನ ೨ನೇ ಬಹುಮಾನ ಪಡೆದುಕೊಂಡಿದೆ.
    ನಗರದ ವಿವಿಧೆಡೆಗಳಿಂದ ಸುಮಾರು ೩೦ಕ್ಕೂ ಅಧಿಕ ಅಲಂಕೃತಗೊಂಡ ದೇವಾನುದೇವತೆಗಳು ಪಾಲ್ಗೊಂಡಿದ್ದವು. ಈ ಪೈಕಿ ಶ್ರೀ ಕುಕ್ಕುವಾಡೇಶ್ವರಿ ದೇವಸ್ಥಾನ ೨ನೇ ಬಹುಮಾನ ಪಡೆದುಕೊಂಡಿದ್ದು, ದೇವಸ್ಥಾನ ಸಮಿತಿ ಉಪಾಧ್ಯಕ್ಷ ಕೂಡ್ಲಿಗೆರೆ ಎಸ್ ಮಹಾದೇವ ಹಾಗು ಖಜಾಂಚಿ ಎಚ್. ವಿಶ್ವನಾಥ್ ಬಹುಮಾನ ಪಡೆದುಕೊಂಡರು. ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಸದಸ್ಯೆ ಗೌರಮ್ಮ ಉಪಸ್ಥಿತರಿದ್ದರು.

ಶಾಲೆಯ ಅಭಿವೃದ್ಧಿಯಲ್ಲಿ ಹಳೇಯ ವಿದ್ಯಾರ್ಥಿಗಳ ಪಾತ್ರ ಗಮನಾರ್ಹ : ಟಿ.ಎನ್ ಸೋಮಶೇಖರಯ್ಯ

ಭದ್ರಾವತಿ ಕಾಗದನಗರ ಆಂಗ್ಲ ಶಾಲೆಯಲ್ಲಿ ಶನಿವಾರ ೪೦ನೇ ವರ್ಷದ ಸವಿನೆನಪಿನಲ್ಲಿ ೧೯೮೮ ರಿಂದ ೨೦೨೦ರ ವರೆಗೆ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಸುಮಾರು ೬೦೦ ರಿಂದ ೭೦೦ ಮಂದಿ ಹಳೇಯ ವಿದ್ಯಾರ್ಥಿಗಳು ಸಂಘಟಿತರಾಗಿ ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮವನ್ನು ಶಾಲೆಯ ಹಿರಿಯ ನಿವೃತ್ತ ಪ್ರಾಂಶುಪಾಲ ವೈ. ಶೇಷಾಚಲ ಉದ್ಘಾಟಿಸಿದರು.
    ಭದ್ರಾವತಿ, ಅ. ೧೬: ಶಾಲಾ ಅಭಿವೃದ್ಧಿಯಲ್ಲಿ ಕಾಗದನಗರ ಆಂಗ್ಲ ಶಾಲೆಯ ಹಳೇಯ ವಿದ್ಯಾರ್ಥಿಗಳ ಪಾತ್ರ ಗಮನಾರ್ಹವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ಪ್ರಶಂಸೆ ವ್ಯಕ್ತಪಡಿಸಿದರು.
    ಅವರು ಶನಿವಾರ ಶಾಲೆಯಲ್ಲಿ ೪೦ನೇ ವರ್ಷದ ಸವಿನೆನಪಿನಲ್ಲಿ ೧೯೮೮ ರಿಂದ ೨೦೨೦ರ ವರೆಗೆ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಸುಮಾರು ೬೦೦ ರಿಂದ ೭೦೦ ಮಂದಿ ಹಳೇಯ ವಿದ್ಯಾರ್ಥಿಗಳು ಸಂಘಟಿತರಾಗಿ ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಹಳೇಯ ವಿದ್ಯಾರ್ಥಿಗಳು ಸಂಘಟಿತರಾಗಿ ಶಾಲೆಯನ್ನು ಅಭಿವೃದ್ಧಿಪಡಿಸುವ ಮೂಲಕ ಮುಂದಿನ ಪೀಳಿಗೆಯವರಿಗೆ ಮಾದರಿಯಾಗಿರುವುದು ಹೆಮ್ಮೆಯ ವಿಚಾರವಾಗಿದೆ. ಅಲ್ಲದೆ ತಮಗೆ ಪಾಠ ಹೇಳಿಕೊಟ್ಟ ಶಿಕ್ಷಕರ ಬಗ್ಗೆ ಹೊಂದಿರುವ ಕಾಳಜಿ ಅಭಿನಂದನಾರ್ಹ ಎಂದರು.  
    ಎಂಪಿಎಂ ಶಿಕ್ಷಣ ಸಂಸ್ಥೆಗಳ ಖಜಾಂಚಿ ಎಂ.ಡಿ ರವಿಕುಮಾರ್ ಮಾತನಾಡಿ, ಹಳೇಯ ವಿದ್ಯಾರ್ಥಿಗಳು ಶಾಲೆಯ ಅಭಿವೃದ್ಧಿಯಲ್ಲಿ ತೋರಿರುವ ಕಾಳಜಿಯಿಂದಾಗಿ ಅವರ ಮೇಲೆ ಗೌರವದ ಭಾವನೆಗಳು ಮೂಡುತ್ತಿವೆ. ಶಿಕ್ಷಕರನ್ನು ಗೌರವಿಸುವ ಅವರ ಕಾರ್ಯಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ. ಈ ಕಾರ್ಯಕ್ರಮ ನನ್ನ ಬಾಲ್ಯದ ಶಿಕ್ಷಣದ ನೆನಪುಗಳನ್ನು ಮರುಕಳುಹಿಸುವಂತೆ ಮಾಡಿದೆ ಎಂದರು.
    ಶಾಲೆಯ ಹಿರಿಯ ನಿವೃತ್ತ ಪ್ರಾಂಶುಪಾಲ ವೈ. ಶೇಷಾಚಲ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಂಶುಪಾಲ ಆರ್. ಸತೀಶ್ ಅಧ್ಯಕ್ಷತೆ ವಹಿಸಿದ್ದರು. ಕಾಗದನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಇ.ಓ ಮಂಜುನಾಥ್, ಕ್ಷೇತ್ರ ಶಿಕ್ಷಣ ಇಲಾಖೆ ಸಂಪನ್ಮೂಲ ವ್ಯಕ್ತಿ ಸಿ. ಚನ್ನಪ್ಪ, ಪಿಟಿಜೆಸಿ ಪ್ರಾಂಶುಪಾಲ ಲಕ್ಷ್ಮೀಕಾಂತ್, ಉಪಪ್ರಾಂಶುಪಾಲ ಡಿ. ನಾಗರಾಜ್, ಹಳೇಯ ವಿದ್ಯಾರ್ಥಿಗಳಾದ ಕಾರ್ಯಕ್ರಮದಲ್ಲಿ ಪ್ರಮುಖ ಪಾತ್ರ ವಹಿಸಿರುವ ವಿನೂತನ್, ಪ್ರೀತಮ್, ಅರುಣ್, ಎಚ್.ಆರ್ ಮಮತಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಹೊರ ರಾಜ್ಯ ಹಾಗು ರಾಜ್ಯದ ವಿವಿಧ ಮೂಲೆಗಳಿಂದ ಶಾಲೆಯಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸಿರುವ ಶಿಕ್ಷಕರು, ವ್ಯಾಸಂಗ ಮಾಡಿರುವ ಹಳೇಯ ವಿದ್ಯಾರ್ಥಿಗಳು, ಶಾಲೆಯ ಶಿಕ್ಷಕ ಹಾಗು ಸಿಬ್ಬಂದಿ ವರ್ಗದವರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ವೇದಿಕೆ ಕಾರ್ಯಕ್ರಮದ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ನಗರಸಭೆ ಅಧ್ಯಕ್ಷರಾಗಿ ಗೀತಾ ಕೆ.ಜಿ ರಾಜ್‌ಕುಮಾರ್, ಉಪಾಧ್ಯಕ್ಷರಾಗಿ ಚನ್ನಪ್ಪ ಆಯ್ಕೆ

ಎರಡೂವರೆ ವರ್ಷಗಳ ನಂತರ ಜನಪ್ರತಿನಿಧಿಗಳ ಆಡಳಿತ


ಭದ್ರಾವತಿ ನಗರಸಭೆ ಅಧ್ಯಕ್ಷರಾಗಿ ಗೀತಾ ಕೆ.ಜಿ ರಾಜ್‌ಕುಮಾರ್ ಮತ್ತು ಉಪಾಧ್ಯಕ್ಷರಾಗಿ ಚನ್ನಪ್ಪ ಶನಿವಾರ ನಡೆದ ಚುನಾವಣೆ ಆಯ್ಕೆಯಾದರು. ಚುನಾವಣಾಧಿಕಾರಿ ಟಿ.ವಿ ಪ್ರಕಾಶ್, ಶಾಸಕ ಬಿ.ಕೆ ಸಂಗಮೇಶ್ವರ್, ಪೌರಾಯುಕ್ತ ಕೆ. ಪರಮೇಶ್ ಅಭಿನಂದಿಸಿದರು.
    ಭದ್ರಾವತಿ, ಅ. ೧೬: ನಗರಸಭೆ ನೂತನ ಅಧ್ಯಕ್ಷರಾಗಿ ವಾರ್ಡ್ ನಂ.೨ರ ಸದಸ್ಯೆ ಗೀತಾ ಕೆ.ಜಿ ರಾಜ್‌ಕುಮಾರ್ ಹಾಗು ಉಪಾಧ್ಯಕ್ಷರಾಗಿ ಚನ್ನಪ್ಪ ಆಯ್ಕೆಯಾಗಿದ್ದಾರೆ.
ಶನಿವಾರ ನಡೆದ ಚುನಾವಣೆಯಲ್ಲಿ ಗೀತಾ ಕೆ.ಜಿ ರಾಜ್‌ಕುಮಾರ್ ಮತ್ತು ಚನ್ನಪ್ಪ ತಲಾ ೮ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಸಾಮಾನ್ಯ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಗೀತಾ ಕೆ.ಜಿ ರಾಜ್‌ಕುಮಾರ್, ಜೆಡಿಎಸ್ ಪಕ್ಷದಿಂದ ವಾರ್ಡ್ ನಂ.೧೫ರ ಮಂಜುಳ ಬಿ.ಎಸ್ ಸುಬ್ಬಣ್ಣ ಹಾಗು ಬಿಜೆಪಿ ಪಕ್ಷದಿಂದ ವಾರ್ಡ್ ನಂ.೫ರ ಶಶಿಕಲಾ ಬಿ.ಎಸ್ ನಾರಾಯಣಪ್ಪ ಸ್ಪರ್ಧಿಸಿದ್ದು, ಈ ಪೈಕಿ ಗೀತಾ ೨೦, ಮಂಜುಳ ೧೨ ಮತ್ತು ಶಶಿಕಲಾ ೪ ಮತಗಳನ್ನು ಪಡೆದುಕೊಂಡರು.
    ಪರಿಶಿಷ್ಟ ಜಾತಿಗೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ವಾರ್ಡ್ ನಂ.೯ರ ಚನ್ನಪ್ಪ ಮತ್ತು  ಜೆಡಿಎಸ್ ಪಕ್ಷದಿಂದ ವಾರ್ಡ್ ನಂ. ೨೫ರ ಕೆ. ಉದಯ ಕುಮಾರ್ ಸ್ಪರ್ಧಿಸಿದ್ದು, ಈ ಪೈಕಿ ಚನ್ನಪ್ಪ ೨೦ ಮತಗಳನ್ನು ಹಾಗು ಕೆ. ಉದಯ ಕುಮಾರ್ ೧೨ ಮತಗಳನ್ನು ಪಡೆದುಕೊಂಡರು. ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ೪ ಸದಸ್ಯರು ತಟಸ್ಥವಾಗಿ ಉಳಿದುಕೊಂಡರು.
    ಒಟ್ಟು ೩೪ ಸದಸ್ಯರಿದ್ದು, ಈ ಪೈಕಿ ಶಾಸಕ ಬಿ.ಕೆ ಸಂಗಮೇಶ್ವರ್ ೧ ಮತ ಹೊಂದಿದ್ದಾರೆ. ಒಟ್ಟು ೩೬ ಮತಗಳು ಚಲಾವಣೆಗೊಂಡಿವೆ. ನಗರಸಭೆಯಲ್ಲಿ ಕಾಂಗ್ರೆಸ್ ೧೮, ಜೆಡಿಎಸ್ ೧೨, ಬಿಜೆಪಿ ೪ ಮತ್ತು ೧ ಪಕ್ಷೇತರ ಸದಸ್ಯರಿದ್ದಾರೆ.
ಚುನಾವಣಾಧಿಕಾರಿಯಾಗಿ ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್ ಕರ್ತವ್ಯ ನಿರ್ವಹಿಸಿದರು. ನಗರಸಭೆ ಪೌರಾಯುಕ್ತ ಕೆ. ಪರಮೇಶ್, ಶಾಸಕ ಬಿ.ಕೆ ಸಂಗಮೇಶ್ವರ್ ಉಪಸ್ಥಿತರಿದ್ದರು.

Friday, October 15, 2021

ಅ.೧೬ರಂದು ಕಾಗದನಗರ ಆಂಗ್ಲಶಾಲೆಯಲ್ಲಿ ಹಳೇಯ ವಿದ್ಯಾರ್ಥಿಗಳಿಂದ ವಿಶಿಷ್ಟ ಕಾರ್ಯಕ್ರಮ



    ಭದ್ರಾವತಿ, ಅ. ೧೫:ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾಗಿರುವ ಎಂಪಿಎಂ ಶಿಕ್ಷಣ ಸಂಸ್ಥೆಯ ಕಾಗದನಗರ ಆಂಗ್ಲ ಶಾಲೆ ೪೦ ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ಶಾಲೆಯ ಹಳೇಯ ವಿದ್ಯಾರ್ಥಿಗಳು ಒಂದೆಡೆ ಸಂಘಟಿತರಾಗಿ ಶಾಲೆಯ ಭವ್ಯ ಪರಂಪರೆಯನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ಮುಂದಾಗಿದ್ದಾರೆ.
    ಈ ನಿಟ್ಟಿನಲ್ಲಿ ಅ.೧೬ರಂದು     UDHYATHA ಎಂಬ ಬೃಹತ್ ಕಾರ್ಯಕ್ರಮವನ್ನು ೧೯೮೮ ರಿಂದ ೨೦೨೦ರ ವರೆಗೆ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಸುಮಾರು ೬೦೦ ರಿಂದ ೭೦೦ ಮಂದಿ ಹಳೇಯ ವಿದ್ಯಾರ್ಥಿಗಳು ಸಂಘಟಿತರಾಗಿ ಆಯೋಜಿಸಿದ್ದು, ಇದೊಂದು ವಿಶಿಷ್ಟ ಕಾರ್ಯಕ್ರಮವಾಗಿದೆ. ಒಂದೆಡೆ ಶಾಲೆಯ ೪೦ ವರ್ಷಗಳ ಇತಿಹಾಸವನ್ನು ಇಂದಿನ ಜನರಿಗೆ ಅನಾವರಣಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದು, ಮತ್ತೊಂದೆಡೆ ತಮಗೆ ಪಾಠ ಕಲಿಸಿಕೊಟ್ಟ ಶಿಕ್ಷಕರನ್ನು ಒಂದೇ ವೇದಿಕೆಯಲ್ಲಿ ಕರೆ ತರುವ ಪ್ರಯತ್ನ ಇದಾಗಿದ್ದು, ಇನ್ನೊಂದೆಡೆ ಹಳೇಯ ವಿದ್ಯಾರ್ಥಿಗಳು ಸಂಘಟಿತರಾಗಿ ತಮ್ಮ ಸ್ವಂತ ಹಣದಲ್ಲಿ ಶಾಲೆಯನ್ನು ನವೀಕರಣಗೊಳಿಸಿರುವ ಸಂಭ್ರಮ ಕ್ಷಣ ಸಹ ಇದಾಗಿದೆ. ಇವೆಲ್ಲದರ ಉದ್ದೇಶ ಪ್ರಸ್ತುತ ಎಂಪಿಎಂ ಕಾರ್ಖಾನೆ ಸಂಪೂರ್ಣವಾಗಿ ಮುಚ್ಚಿಹೋಗಿದ್ದು, ಕಾರ್ಮಿಕರು, ಕುಟುಂಬ ವರ್ಗದವರಿಲ್ಲದೆ ಬಿಕೋ ಎನ್ನುತ್ತಿರುವ ಕಾಗದನಗರದಲ್ಲಿ ಈ ಶಾಲೆಗೆ ಪುನಃ ಮರುಜೀವ ತುಂಬುವುದಾಗಿದೆ. ಒಟ್ಟಾರೆ ಈ ಕಾರ್ಯಕ್ರಮ ಆಯೋಜನೆಗಾಗಿ ಕಳೆದ ೩-೪ ತಿಂಗಳುಗಳಿಂದ ಹಳೇಯ ವಿದ್ಯಾರ್ಥಿಗಳು ಶ್ರಮಿಸುತ್ತಿದ್ದಾರೆ.
    ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಸಹ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮ ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೬ ಗಂಟೆವರೆಗೆ ನಡೆಯಲಿದ್ದು, ಯಶಸ್ವಿಗೊಳಿಸುವಂತೆ ಅರುಣ್, ವಿನೂತನ್, ಪ್ರೀತಮ್ ಮತ್ತು ಎಚ್.ಆರ್ ಮಮತ ಸೇರಿದಂತೆ ಹಳೇಯ ವಿದ್ಯಾರ್ಥಿಗಳು ಕೋರಿದ್ದಾರೆ.


ವೈಭವಯುತವಾಗಿ ಜರುಗಿದ ನಾಡಹಬ್ಬ ದಸರಾ ಮೆರವಣಿಗೆ

ಬನ್ನಿ ಮುಡಿದ ತಹಸೀಲ್ದಾರ್ ಆರ್. ಪ್ರದೀಪ್


ಭದ್ರಾವತಿಯಲ್ಲಿ ನಾಡಹಬ್ಬ ದಸರಾ ಮೆರವಣಿಗೆಗೆ ಚಾಲನೆ ನೀಡಿದ ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ನಗರಸಭೆ ಆಡಳಿತಾಧಿಕಾರಿ ಟಿ.ವಿ ಪ್ರಕಾಶ್ ಸೇರಿದಂತೆ ಇನ್ನಿತರರು ನಗರದ ಹಿರಿಯ ಕುಸ್ತಿಗಳನ್ನು ಸನ್ಮಾನಿಸಿ ಗೌರವಿಸಿದರು.
    ಭದ್ರಾವತಿ, ಅ. ೧೫: ನಗರಸಭೆ ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ನಾಡಹಬ್ಬ ದಸರಾ ಮೆರವಣಿಗೆ ಕೋವಿಡ್-೧೯ರ ನಡುವೆಯೂ ವೈಭವಯುತವಾಗಿ ನಡೆಯಿತು.
    ನಗರದ ಬಿ.ಎಚ್ ರಸ್ತೆ, ಲೋಯರ್‌ಹುತ್ತಾ ಶ್ರೀ ತಿರುಮಲ ದೇವಸ್ಥಾನದ ಬಳಿ ಶಾಸಕ ಬಿ.ಕೆ ಸಂಗಮೇಶ್ವರ್ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿ ಹಾಗು ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.


ಭದ್ರಾವತಿಯಲ್ಲಿ ನಗರಸಭೆ ವತಿಯಿಂದ ನಾಡಹಬ್ಬ ದಸರಾ ಹಿನ್ನಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮೆರವಣಿಗೆಯಲ್ಲಿ ನಗರದ ವಿವಿಧೆಡೆಗಳಿಂದ ಅಲಂಕೃತಗೊಂಡ ದೇವಾನುದೇವತೆಗಳು ಪಾಲ್ಗೊಂಡಿರುವುದು.
    ಮೆರವಣಿಗೆಯಲ್ಲಿ ಲಕ್ಷ್ಮೀನರಸಿಂಹಸ್ವಾಮಿ, ಕೆರೆಕೋಡಮ್ಮ, ಅಂತರಘಟ್ಟಮ್ಮ, ಕಾಳಿಕಾಂಬ, ವಿಶ್ವಸ್ವರೂಪಿಣಿ ಮಾರಿಯಮ್ಮ, ಏಳುಕೋಟಿ ಮೈಲಾರಲಿಂಗೇಶ್ವರ, ಸಿಗಂದೂರು ಚೌಡೇಶ್ವರಿ, ಸವದತ್ತಿ ಯಲ್ಲಮ್ಮ, ದುರ್ಗಾ ಪರಮೇಶ್ವರಿ, ಎಲ್ಲಮ್ಮ ದೇವಿ. ಕುಕ್ಕುವಾಡೇಶ್ವರಿ ಸೇರಿದಂತೆ ನಗರದ ವಿವಿಧೆಡೆಗಳಿಂದ ಅಲಂಕೃತಗೊಂಡ ದೇವಾನುದೇವತೆಗಳು ಹಾಗು ತಾಲೂಕು ಆರೋಗ್ಯ ಇಲಾಖೆ ಮತ್ತು ನಗರಸಭೆ ವತಿಯಿಂದ ಕೊರೋನಾ ಸೋಂಕು ಜಾಗೃತಿ ಹಾಗು ಸ್ವಚ್ಚತೆ ಅರಿವು ಮೂಡಿಸುವ ಸ್ತಬ್ದ ಚಿತ್ರ, ನ್ಯೂಟೌನ್ ಶ್ರೀ ಸತ್ಯಸಾಯಿಬಾಬಾ ಸಮಗ್ರ ಶಿಕ್ಷಣ ಸಂಸ್ಥೆವತಿಯಿಂದ ಆಕರ್ಷಕವಾದ ಮಹಿಷಾಸುರ ಮರ್ದಿನಿ ಸ್ತಬ್ದ ಚಿತ್ರ, ಡೊಳ್ಳುಕುಣಿತ, ವೀರಗಾಸೆ, ಕೋಲಾಟ, ಗೊಂಬೆಗಳು, ಲಂಬಾಣಿ ನೃತ್ಯ, ಕೀಲು ಕುದುರೆ, ಯಕ್ಷಗಾನ ಗೊಂಬೆಗಳ ತಂಡಗಳು ನೋಡುಗರ ಕಣ್ಮನ ಸೆಳೆದವು. ಮೆರವಣಿಗೆ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತ, ಹಾಲಪ್ಪವೃತ್ತ, ಮಾಧವಚಾರ್ ವೃತ್ತ ಮತ್ತು ರಂಗಪ್ಪ ವೃತ್ತ ಮೂಲಕ ಕನಕ ಮಂಟಪ ಮೈದಾನ ತಲುಪಿತು.
    ಹಳೇನಗರದ ಕನಕಮಂಟಪ ಮೈದಾನದಲ್ಲಿ ತಾಲೂಕು ದಂಡಾಧಿಕಾರಿ, ತಹಸೀಲ್ದಾರ್ ಆರ್. ಪ್ರದೀಪ್ ಧಾರ್ಮಿಕ ಆಚರಣೆಗಳೊಂದಿಗೆ ಬನ್ನಿ ಮುಡಿಯುವ ಮೂಲಕ ದಸರಾ ನಾಡಹಬ್ಬಕ್ಕೆ ತೆರೆ ಎಳೆದರು. ಕೊನೆಯಲ್ಲಿ ಪಟಾಕಿ ಸಿಡಿಮದ್ದುಗಳ ಮೂಲಕ ರಾವಣನ ಸಂಹಾರ ನಡೆಯಿತು. ಹಳೇನಗರದ  ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ವೇದಬ್ರಹ್ಮ ಶ್ರೀ ರಂಗನಾಥಶರ್ಮ ನೇತೃತ್ವದಲ್ಲಿ ಧಾರ್ಮಿಕ ಪೂಜಾ ವಿಧಿವಿಧಾನಗಳು ಜರುಗಿದವು.



ಭದ್ರಾವತಿಯಲ್ಲಿ ನಗರಸಭೆ ವತಿಯಿಂದ ನಾಡಹಬ್ಬ ದಸರಾ ಹಿನ್ನಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಪಾಲ್ಗೊಂಡಿರುವುದು.

    ನಗರಸಭೆ ಆಡಳಿತಾಧಿಕಾರಿ, ಉಪವಿಭಾಗಾಧಿಕಾರಿ  ಟಿ.ವಿ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಪೌರಾಯುಕ್ತ ಕೆ. ಪರಮೇಶ್, ಕಂದಾಯಾಧಿಕಾರಿ ರಾಜ್‌ಕುಮಾರ್, ಪರಿಸರ ಅಭಿಯಂತರ ಪ್ರಭಾಕರ್, ಸಮುದಾಯ ಸಂಘಟನಾ ಅಧಿಕಾರಿ ಸುಹಾಸಿನಿ, ಪೌರಸೇವಾ ನೌಕರರ ಸೇವಾ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು ಪೌರಕಾರ್ಮಿಕರು, ನಗರಸಭೆ ನೂತನ ಸದಸ್ಯರು, ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಆಶೋಕ್, ಕಂದಾಯಾಧಿಕಾರಿ ಪ್ರಶಾಂತ್, ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರಾದ ಹಾ. ರಾಮಪ್ಪ, ನರಸಿಂಹಚಾರ್, ರಮಾಕಾಂತ್, ಆರ್. ಕರುಣಾಮೂರ್ತಿ, ಬದರಿನಾರಾಯಣ, ಆಂಜನಪ್ಪ, ವಿಶಾಲಾಕ್ಷಿ ಸೇರಿದಂತೆ ನಗರದ ವಿವಿಧೆಡೆಗಳಿಂದ ನೂರಾರು ಮಂದಿ ಪಾಲೊಂಡಿದ್ದರು. ಈ ಬಾರಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಅವರ ಪತ್ನಿ ಶಾರದ ಅಪ್ಪಾಜಿ ಶ್ರೀ ಚಾಮುಂಡೇಶ್ವರಿ ದೇವಿಗೆ ಮಾಲಾರ್ಪಣೆ ಮಾಡಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದರು.

ಸುಮಾರು ಎರಡೂವರೆ ವರ್ಷಗಳ ನಂತರ ಅಸ್ತಿತ್ವಕ್ಕೆ ಬರುತ್ತಿದೆ ಜನಪ್ರತಿನಿಧಿಗಳ ಆಡಳಿತ

ಅ.೧೬ರಂದು ಭದ್ರಾವತಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ

ಭದ್ರಾವತಿ ನಗರಸಭೆ
   
    ಭದ್ರಾವತಿ, ಅ. ೧೫: ಸುಮಾರು ಎರಡೂವರೆ ವರ್ಷಗಳ ನಂತರ ನಗರಸಭೆಯಲ್ಲಿ ಜನಪ್ರತಿನಿಧಿಗಳ ಆಡಳಿತ ಅಸ್ತಿತ್ವಕ್ಕೆ ಬರುತ್ತಿದ್ದು, ಈ ಬಾರಿ ಅತಿಹೆಚ್ಚು ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲು ಮುಂದಾಗಿದೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆ ಅ.೧೬ರಂದು ನಡೆಯುತ್ತಿದೆ.
    ಒಟ್ಟು ೩೫ ಸ್ಥಾನಗಳನ್ನು ಹೊಂದಿರುವ ನಗರಸಭೆಯಲ್ಲಿ ಕಾಂಗ್ರೆಸ್-೧೮, ಜೆಡಿಎಸ್-೧೨, ಬಿಜೆಪಿ-೪ ಹಾಗು ೧-ಪಕ್ಷೇತರ ಸದಸ್ಯರಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿದ್ದು, ಉಪಾಧ್ಯಕ್ಷ ಸ್ಥಾನ ಎಸ್‌ಸಿ ಮೀಸಲಾತಿ ಹೊಂದಿದೆ.
    ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಒಟ್ಟು ೪ ಮಹಿಳೆಯರು ಪೈಪೋಟಿಗೆ ಮುಂದಾಗಿದ್ದು, ವಾರ್ಡ್ ನಂ.೨ರ ಗೀತಾ ರಾಜ್‌ಕುಮಾರ್, ವಾರ್ಡ್ ನಂ.೧೩ರ ಅನುಸುಧಾ ಮೋಹನ್, ವಾರ್ಡ್ ನಂ.೩೪ರ ಲತಾ ಚಂದ್ರಶೇಖರ್ ಮತ್ತು ವಾರ್ಡ್ ನಂ.೩೫ರ ಶೃತಿ ವಸಂತಕುಮಾರ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅರ್ಹರಾಗಿದ್ದು, ಈ ನಾಲ್ವರು ಮೊದಲ ಬಾರಿಗೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಈ ಪೈಕಿ ಮೊದಲು ಯಾರಿಗೆ ಅವಕಾಶ ನೀಡಲಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಈ ಸಂಬಂಧ ಶನಿವಾರ ಬೆಳಿಗ್ಗೆ ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆಯಲ್ಲಿ ಮಾತಕತೆ ನಡೆಯಲಿದೆ ಎನ್ನಲಾಗಿದೆ.
    ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಒಟ್ಟು ೩ ಮಂದಿ ಅರ್ಹರಿದ್ದು, ಈ ಪೈಕಿ ವಾರ್ಡ್ ನಂ.೯ರ ಚನ್ನಪ್ಪ ಉಪಾಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ. ಉಳಿದಂತೆ ವಾರ್ಡ್ ನಂ.೧೪ರ ಸದಸ್ಯ ಬಿ.ಟಿ ನಾಗರಾಜ್ ಮತ್ತು ವಾರ್ಡ್ ನಂ.೨೬ರ ಸದಸ್ಯೆ ಸರ್ವಮಂಗಳ ಭೈರಪ್ಪ ಸಹ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬಹುದಾಗಿದೆ. ಈಗಾಗಲೇ ಹಿರಿಯ ಸದಸ್ಯ ಬಿ.ಟಿ ನಾಗರಾಜ್ ಈ ಹಿಂದೆ ನಗರಸಭೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಈ ಹಿನ್ನಲೆಯಲ್ಲಿ ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎನ್ನಲಾಗಿದೆ. ಉಳಿದಂತೆ ಅಧ್ಯಕ್ಷ ಸ್ಥಾನ ಮಹಿಳೆಯರಿಗೆ ಮೀಸಲಾಗಿರುವ ಹಿನ್ನಲೆಯಲ್ಲಿ ಉಪಾಧ್ಯಕ್ಷ ಸ್ಥಾನ ಪುರುಷರಿಗೆ ಬಿಟ್ಟುಕೊಡುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಮೊದಲ ಬಾರಿಗೆ ಆಯ್ಕೆಯಾಗಿರುವ ಸರ್ವಮಂಗಳ ಭೈರಪ್ಪ ಅವರ ಸ್ಪರ್ಧೆಗೆ ಅವಕಾಶ ಸಿಗದಿರಬಹುದು ಎನ್ನಲಾಗಿದೆ.  
       ನಾಲ್ವರು ಮಹಿಳೆಯರಿಗೂ ಸಮಾನ ಅವಕಾಶ :
   ವಾರ್ಡ್ ನಂ.೨೨ರ ಸದಸ್ಯ, ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಪತ್ರಿಕೆಯೊಂದಿಗೆ ಮಾತನಾಡಿ, ಅಧ್ಯಕ್ಷ ಸ್ಥಾನಕ್ಕೆ ಅರ್ಹರಾಗಿರುವ ನಾಲ್ವರು ಮಹಿಳೆಯರಿಗೂ ಅವಕಾಶ ಕಲ್ಪಿಸಿಕೊಡಲಾಗುವುದು. ಯಾವುದೇ ರೀತಿ ತಾರತಮ್ಯ ಮಾಡದೆ ಅಧಿಕಾರವನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುವ ನಿಟ್ಟಿನಲ್ಲಿ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗುವುದು. ಉಳಿದಂತೆ ಉಪಾಧ್ಯಕ್ಷ ಸ್ಥಾನಕ್ಕೆ ಯಾವುದೇ ಸಮಸ್ಯೆ ಎದುರಾಗಿಲ್ಲ. ಒಂದು ವೇಳೆ ಸಮಸ್ಯೆ ಕಂಡು ಬಂದಲ್ಲಿ ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಸರಿಪಡಿಸಿಕೊಳ್ಳಲಾಗುವುದು. ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂಬುದು ನಮ್ಮ ಆಶಯವಾಗಿದೆ ಎಂದರು.
      ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನೋಟಿಸ್ :
    ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ೯ನೇ ಅವಧಿಗೆ ಮೀಸಲಾತಿ ನಿಗದಿಪಡಿಸಲಾಗಿದ್ದು, ಈ ಸಂಬಂಧ ಅ.೧೬ರಂದು ಸಾಮಾನ್ಯ ಮಹಿಳೆಯರಿಗೆ ಮೀಸಲಾಗಿರುವ ಅಧ್ಯಕ್ಷ ಸ್ಥಾನಕ್ಕೆ ಹಾಗು ಪರಿಜಾತಿ ಮೀಸಲಾಗಿರುವ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವುದಾಗಿ ಚುನಾವಣಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್ ನೋಟಿಸ್ ಹೊರಡಿಸಿದ್ದಾರೆ.
ಅದರಂತೆ ಬೆಳಿಗ್ಗೆ ೧೦ ಗಂಟೆಯಿಂದ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆ ನಂತರ ನಾಮಪತ್ರಗಳ ಪರಿಶೀಲನೆ, ಹಿಂಪಡೆಯುವಿಕೆ ನಡೆಯದೆ. ಮಧ್ಯಾಹ್ನ ೧ ಗಂಟೆಗೆ ಸಭೆ ನಡೆಯಲಿದ್ದು,  ಅಗತ್ಯವಿದ್ದಲ್ಲಿ ಚುನಾವಣೆ ನಡೆಯಲಿದೆ.

ಗಿರಿಯಮ್ಮ ನಿಧನ

ಗಿರಿಯಮ್ಮ
    ಭದ್ರಾವತಿ, ಅ. ೧೫: ನಗರಸಭೆ ವಾರ್ಡ್ ನಂ.೧೯ರ ನಗರಸಭಾ ಸದಸ್ಯ, ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಬಸವರಾಜ ಬಿ. ಆನೇಕೊಪ್ಪ ಅವರ ತಾಯಿ ಗಿರಿಯಮ್ಮ(೭೫) ಶುಕ್ರವಾರ ಬೆಳಿಗ್ಗೆ ನಿಧನ ಹೊಂದಿದರು.
    ಪುತ್ರ ಬಸವರಾಜ್ ಹಾಗು ಸೊಸೆ ಮತ್ತು ಮೊಮ್ಮಕ್ಕಳನ್ನು ಹೊಂದಿದ್ದರು. ಗಿರಿಯಮ್ಮ ಅವರು ಎಂಪಿಎಂ ಬಡಾವಣೆಯ ಆನೇಕೊಪ್ಪದಲ್ಲಿರುವ ತೋಟದ ಮನೆಯಲ್ಲಿ ವಾಸವಾಗಿದ್ದರು. ಇವರ ಅಂತ್ಯಕ್ರಿಯೆ ಮಧ್ಯಾಹ್ನ ತೋಟದಲ್ಲಿ ನೆರವೇರಿಸಲಾಯಿತು. ಇವರ ನಿಧನಕ್ಕೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ನಗರಸಭಾ ಸದಸ್ಯರು ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.