Tuesday, March 22, 2022

ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಗೆ ಬರಲು ಎಲ್ಲರ ಸಹಕಾರ ಅಗತ್ಯ : ಶೃತಿ

ಭದ್ರಾವತಿ ಉಜ್ಜನಿಪುರದ ಡಾನ್ ಬಾಸ್ಕೋ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಮಂಗಳವಾರ ಹೊಲಿಗೆ ತರಬೇತಿ ಸಮಾರೋಪ ಸಮಾರಂಭ ಹಾಗು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.  
    ಭದ್ರಾವತಿ, ಮಾ. ೨೨: ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಗೆ ಬರಬೇಕು. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಸಹಾಯವಾಣಿ ಕೇಂದ್ರದ ಶೃತಿ ಹೇಳಿದರು.
    ಅವರು ಮಂಗಳವಾರ ಉಜ್ಜನಿಪುರದ ಡಾನ್ ಬಾಸ್ಕೋ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಹೊಲಿಗೆ ತರಬೇತಿ ಸಮಾರೋಪ ಸಮಾರಂಭ ಹಾಗು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಮಹಿಳೆಯರು ಕೇವಲ ಮನೆಗೆ ಸೀಮಿತವಾಗದೆ ಸಮಾಜದ ಮುಖ್ಯ ವಾಹಿನಿನಲ್ಲಿ ಗುರುತಿಸಿಕೊಳ್ಳಬೇಕು. ಡಾನ್ ಬಾಸ್ಕೋ ಸಂಸ್ಥೆಯು ಮಹಿಳೆಯರಿಗೆ ವಿಶೇಷವಾಗಿ ಕೌಶಲ್ಯ ತರಬೇತಿ ಪ್ರಾರಂಭಿಸಿರುವುದು ಹೆಚ್ಚಿನ ಅನುಕೂಲವಾಗಿದ್ದು, ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
    ಡಾನ್ ಬಾಸ್ಕೋ ಸಂಸ್ಥೆಯ ನಿರ್ದೇಶಕ ಪಾದರ್ ಆರೋಗ್ಯ ರಾಜ್ ಮಾತನಾಡಿ, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮಹಿಳೆ ತನ್ನನ್ನು ತಾನು ಅರಿಯುವ ದಿನವಾಗಿದೆ. ಸಮಾಜದಲ್ಲಿ ಮಹಿಳೆಯರು ಸಹ ಘನತೆ, ಗೌರವದ ಬದುಕು ಕಟ್ಟಿಕೊಳ್ಳುವಂತಾಗಬೇಕು. ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಗೆ ಬರಬೇಕು. ಜೊತೆಗೆ ಕುಟುಂಬದಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದ್ದು, ಮನೆಯೇ ಮೊದಲ ಪಾಠ ಶಾಲೆಯಾಗಿದೆ. ಮಕ್ಕಳಿಗೆ ಉತ್ತಮ ಸಂಸ್ಕಾರದ ಜೊತೆಗೆ ಅವರನ್ನು ಭವಿಷ್ಯದ ಪ್ರಜೆಗಳಾಗಿ ರೂಪಿಸಬೇಕು. ಈ ನಿಟ್ಟಿನಲ್ಲೂ ಸಹ ಹೆಚ್ಚಿನ ಗಮನ ಹರಿಸಬೇಕು. ಪುರುಷರನ್ನು ತಪ್ಪಾಗಿ ಅರ್ಥೈಸಿಕೊಳ್ಳದೆ ಇಬ್ಬರು ಸಹ ಸರಿಸಮಾನವಾಗಿ ಮುನ್ನಡೆಯಬೇಕು. ಇಬ್ಬರು ತಮ್ಮ ಜವಾಬ್ದಾರಿ ಅರಿತುಕೊಳ್ಳಬೇಕು. ಆಗ ಮಾತ್ರ ಉತ್ತಮ ಸಮಾಜ ನಿರ್ಮಾಣಗೊಳ್ಳಲು ಸಾಧ್ಯ ಎಂದರು.
    ಆಶಾ ಕಾರ್ಯಕರ್ತೆ ರಾಜೇಶ್ವರಿ ಮಾತನಾಡಿ, ಡಾನ್ ಬಾಸ್ಕೋ ಸಂಸ್ಥೆಯು ಬಡ ವರ್ಗದ ಜನರ ಏಳಿಗೆಗೆ ಶ್ರಮಿಸುತ್ತಿದ್ದು, ವಿಶೇಷವಾಗಿ ಮಹಿಳೆಯರ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಿದೆ. ಕೋವಿಡ್-೧೯ರ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಜನರು ಸೋಂಕಿನಿಂದ ರಕ್ಷಿಸಿಕೊಳ್ಳಲು ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ ಆಶಾ ಕಾರ್ಯಕರ್ತೆಯರ ನೆರವಿಗೂ ಧಾವಿಸಿದೆ. ಈ ಹಿನ್ನಲೆಯಲ್ಲಿ ಸಂಸ್ಥೆಯ ಸೇವಾ ಕಾರ್ಯಕ್ಕೆ ಚಿರಋಣಿ ಎಂದರು.
    ಪ್ರಾಂಶುಪಾಲ ಪಾದರ್ ಜೋಮಿ, ಆಡಳಿತಾಧಿಕಾರಿ ಸೋನಿಜೆನ್ ಹಾಗು ತರಬೇತಿದಾರರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ೬ ಮಂದಿ ಆಶಾ ಕಾರ್ಯಕರ್ತೆಯರಿಗೆ ಗ್ರಾಮೀಣ ಪ್ರದೇಶದ ಜನರಿಗೆ ಉಚಿತವಾಗಿ ಸಕ್ಕರೆ ಖಾಯಿಲೆ ಪರೀಕ್ಷೆ ನಡೆಸಲು ಅನುಕೂಲವಾಗುವಂತೆ ಅಗತ್ಯವಿರುವ ಪರಿಕರ ವಿತರಿಸಲಾಯಿತು. ಡಾನ್ ಬಾಸ್ಕೋ ಸಂಸ್ಥೆ ಮೊದಲ ಬಾರಿಗೆ ಕಳೆದ ೩ ದಿನಗಳ ಹಿಂದೆ ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿ ಆರಂಭಿಸಿದ್ದು, ತರಬೇತಿ ಪಡೆದವರು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಮಾ.೨೩ರಂದು ಧರಣಿ ಸತ್ಯಾಗ್ರಹ


    ಭದ್ರಾವತಿ, ಮಾ. ೨೨: ನಗರದ ಜನ್ನಾಪುರ ವಾಣಿಜ್ಯ ರಸ್ತೆಯಲ್ಲಿರುವ ರೆಸ್ಟೋರೆಂಟ್‌ಗಳು ಮತ್ತು ಮದ್ಯದಂಗಡಿಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಹಿನ್ನಲೆಯಲ್ಲಿ ಇವುಗಳನ್ನು ಸ್ಥಳಾಂತರಗೊಳಿಸುವಂತೆ ಆಗ್ರಹಿಸಿ ಮಾ.೨೩ರಂದು ಬೆಳಿಗ್ಗೆ ೧೧ ಗಂಟೆಗೆ ವಿಶ್ವೇಶ್ವರಯ್ಯ ಆಟೋ ನಿಲ್ದಾಣದ ಸಮೀಪ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
    ರೆಸ್ಟೋರೆಂಟ್‌ಗಳು ಮತ್ತು ಮದ್ಯದಂಗಡಿಗಳಿಂದ ಈ ಭಾಗದಲ್ಲಿ ಮದ್ಯವ್ಯಸನಿಗಳ ಹಾವಳಿ ಹೆಚ್ಚಾಗಿದ್ದು, ಇದರಿಂದಾಗಿ ಮಕ್ಕಳು, ಮಹಿಳೆಯರು ಮತ್ತು ವಯೋವೃದ್ಧರು ಓಡಾಡಲು ತೊಂದರೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಇವುಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಜನ್ನಾಪರ ಸುತ್ತಮುತ್ತಲ ವಾರ್ಡ್‌ಗಳ ಜನಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಸ್ಥಳೀಯ ಮುಖಂಡರಾದ ಶಶಿಕುಮಾರ್ ಎಸ್ ಗೌಡ ಹಾಗು ಮಂಜುನಾಥ್ ಕೋರಿದ್ದಾರೆ.

ಮಾ.೨೩ ಜನಸಂಪರ್ಕ, ಅಹವಾಲು ಸ್ವೀಕಾರ ಸಭೆ

    ಭದ್ರಾವತಿ, ಮಾ. ೨೨: ತಾಲೂಕು ಕಛೇರಿ ಸಭಾಂಗಣದಲ್ಲಿ ಮಾ.೨೩ರಂದು ಮಧ್ಯಾಹ್ನ ೧೨ ಗಂಟೆಗೆ ಭ್ರಷ್ಟಾಚಾರ ನಿಗ್ರಹ ದಳ ವತಿಯಿಂದ ಜನಸಂಪರ್ಕ ಮತ್ತು ಅಹವಾಲು ಸ್ವೀಕಾರ ಸಭೆ ಹಮ್ಮಿಕೊಳ್ಳಲಾಗಿದೆ.
    ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಉಪಾಧೀಕ್ಷಕರು ಅಧ್ಯಕ್ಷತೆ ವಹಿಸಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಹಸೀಲ್ದಾರ್ ಆರ್. ಪ್ರದೀಪ್ ಕೋರಿದ್ದಾರೆ.

ಮಾ.೨೫ರಂದು ಯುಗಾದಿ ಕವಿಗೋಷ್ಠಿ

    ಭದ್ರಾವತಿ, ಮಾ. ೨೨: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಾ.೨೫ರ ಮಧ್ಯಾಹ್ನ ೩ ಗಂಟೆಗೆ ನಗರದ ಬಿ.ಎಚ್ ರಸ್ತೆ ಹಾಲಪ್ಪ ವೃತ್ತದಲ್ಲಿರುವ ಭದ್ರಾ ಪ್ರೌಢಶಾಲೆಯಲ್ಲಿ ಯುಗಾದಿ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ.
    ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಕವಿಗೋಷ್ಠಿ ಉದ್ಘಾಟಿಸಲಿದ್ದು, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಕೆ.ಎಚ್ ತೀರ್ಥಯ್ಯ, ಮುಖ್ಯೋಪಾಧ್ಯಾಯ ಬಿ.ಎಚ್ ವಿರುಪಾಕ್ಷಪ್ಪ, ಕರ್ನಾಟಕ ಜಾನಪದ ಪರಿಷತ್ ತಾಲೂಕು ಶಾಖೆ ಅಧ್ಯಕ್ಷ ಕೋಡ್ಲುಯಜ್ಞಯ್ಯ, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ, ಕಸಾಪ ಹಿರಿಯೂರು ಹೋಬಳಿ ಘಟಕದ ಅಧ್ಯಕ್ಷ ಸಿದ್ದೋಜಿರಾವ್, ಹೊಳೆಹೊನ್ನೂರು ಹೋಬಳಿ ಘಟಕದ ಅಧ್ಯಕ್ಷ ಎಸ್.ಬಿ ಸಿದ್ದಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.

Monday, March 21, 2022

ಅಖಿಲ ಭಾರತ ವಿಶ್ವವಿದ್ಯಾಲಯ ಸೇಪಕ್ ಟಕ್ರಾ ಪಂದ್ಯಾವಳಿಗೆ ಸುಂದರೇಶ್, ಕುಂಬರೇಶ್ ಆಯ್ಕೆ

ಪಿ. ಸುಂದರೇಶ್
    ಭದ್ರಾವತಿ, ಮಾ. ೨೧: ಉತ್ತರ ಪ್ರದೇಶದ ಬರೇಲಿ ಎಂಜೆಪಿ ರೋಹಿಲ್‌ಖಾಂಡ್ ವಿಶ್ವ ವಿದ್ಯಾಲಯದಲ್ಲಿ ಮಾ.೨೬ರ ವರೆಗೆ ನಡೆಯಲಿರುವ ಅಖಿಲ ಭಾರತ ವಿಶ್ವ ವಿದ್ಯಾಲಯ ಮಟ್ಟದ ಸೇಪಕ್ ಟಕ್ರಾ ಪಂದ್ಯಾವಳಿಗೆ ನಗರದ ಹೊಸಮನೆ ಪ್ರಥಮ ದರ್ಜೆ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
    ಕಾಲೇಜಿನ ದ್ವಿತೀಯ ಬಿ.ಎ ವಿದ್ಯಾರ್ಥಿಗಳಾದ ಪಿ. ಸುಂದರೇಶ್ ಮತ್ತು  ಪಿ. ಕುಂಬರೇಶ್ ಅಖಿಲ ಭಾರತ ವಿಶ್ವವಿದ್ಯಾಲಯ ಮಟ್ಟದ ಸೇಪಕ್ ಟಕ್ರಾ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.
    ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್, ಕಾಲೇಜಿನ ಪ್ರಾಂಶುಪಾಲರು, ದೈಹಿಕ ಶಿಕ್ಷಣ ನಿರ್ದೇಶಕರು, ಅಧ್ಯಾಪಕ ಮತ್ತು ಅಧ್ಯಾಪಕೇತರ ಹಾಗು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ. ಪಿ. ಸುಂದರೇಶ್ ಪರಮೇಶ್ ಮತ್ತು ಸೆಲ್ವಿ ಹಾಗು ಪಿ. ಕುಂಬರೇಶ್ ಪಾಂಡು ಮತ್ತು ಮಣಿ ದಂಪತಿ ಪುತ್ರರಾಗಿದ್ದಾರೆ.


 ಪಿ. ಕುಂಬರೇಶ್

ವಿಲಾಸರಾವ್ ಗಾಯಗ್ವಾಡ್ ನಿಧನ


ವಿಲಾಸರಾವ್ ಗಾಯಗ್ವಾಡ್
    ಭದ್ರಾವತಿ, ಮಾ. ೨೧: ತಾಲೂಕಿನ ದೇವರಹಳ್ಳಿ ಗ್ರಾಮದ ನಿವಾಸಿ ವಿಲಾಸರಾವ್ ಗಾಯಗ್ವಾಡ್(೫೫) ಸೋಮವಾರ ಬೆಳಿಗ್ಗೆ ನಿಧನ ಹೊಂದಿದರು.
    ಇವರ ಅಂತ್ಯಕ್ರಿಯೆ ಸಂಜೆ ಗ್ರಾಮದಲ್ಲಿರುವ ಇವರ ಜಮೀನಿನಲ್ಲಿ ನೆರವೇರಿತು. ಇವರ ನಿಧನಕ್ಕೆ ಮರಾಠ ಸಮಾಜದ ಪ್ರಮುಖರು, ಗಣ್ಯರು, ಗ್ರಾಮಸ್ಥರು ಸಂತಾಪ ಸೂಚಿಸಿದ್ದಾರೆ.

೧೨ನೇ ಶತಮಾನದಲ್ಲಿ ಮಾನವನ ಇತಿಹಾಸದ ಮಹತ್ತರ ಬದಲಾವಣೆ : ಆರ್. ಪ್ರದೀಪ್

ಭದ್ರಾವತಿ ಹೊಸಮನೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಮೈಸೂರು ಹಾಗೂ ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಸೋಮವಾರ ಹಮ್ಮಿಕೊಳ್ಳಲಾಗಿದ್ದ ೬೨೩ನೇ ವಚನಮಂಟಪ ಮತ್ತು  ಕವಿ ಸುವರ್ಣಮ್ಮ ಕೆ. ಸದಾಶಿವಪ್ಪ ದತ್ತಿ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಆರ್. ಪ್ರದೀಪ್‌ರನ್ನು ಸನ್ಮಾನಿಸಿ ಗೌರವಿಸಲಾಯಿತು.  
    ಭದ್ರಾವತಿ, ಮಾ. ೨೧: ೧೨ನೇ ಶತಮಾನ ಕೇವಲ ಧಾರ್ಮಿಕ ಹಾಗೂ ಸಾಮಾಜಿಕ ಸುಧಾರಣೆ ಮಾತ್ರವಲ್ಲ. ಅದು ಮಾನವನ ಇತಿಹಾಸದ ಮಹತ್ತರ ಬದಲಾವಣೆಯಾಗಿದೆ ಎಂದು ತಹಸೀಲ್ದಾರ್ ಆರ್. ಪ್ರದೀಪ್ ಹೇಳಿದರು.
    ಅವರು ಸೋಮವಾರ ಹೊಸಮನೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಮೈಸೂರು ಹಾಗೂ ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೬೨೩ನೇ ವಚನಮಂಟಪ ಮತ್ತು  ಕವಿ ಸುವರ್ಣಮ್ಮ ಕೆ. ಸದಾಶಿವಪ್ಪ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಇಂದು ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾತ್ಯಾತೀತ ನೆಲೆಗಟ್ಟಿನಲ್ಲಿ ಬದುಕುತ್ತಿದ್ದೇವೆ ಎಂದರೆ ಅದಕ್ಕೆ ಬುನಾದಿ ೧೨ನೇ ಶತಮಾನ ಎಂದರೆ ತಪ್ಪಾಗಲಾರದು. ಶರಣರ ಸ್ವಂತ ಜ್ಞಾನ, ಅನುಭವದ ಮೇಲೆ ಬರೆದ ವಚನಗಳ ಸಾಲು ಜೀವನದ ಮೌಲ್ಯಗಳನ್ನು ತಿಳಿಸುತ್ತವೆ. ಅಂದು ಜಾರಿಗೆ ತಂದ ಧಾರ್ಮಿಕ ಹಾಗು ಸಾಮಾಜಿಕ ಸುಧಾರಣೆಗಳ ಪರಿಣಾಮ ಶಿವಶರಣರು ಇಂದಿಗೂ ನಮ್ಮೊಂದಿಗೆ ಉಳಿದುಕೊಂಡಿದ್ದಾರೆ. ಇವರು ತೋರಿಸಿಕೊಟ್ಟಿರುವ ದಾರಿಯಲ್ಲಿ ಪ್ರಸ್ತುತ ನಾವೆಲ್ಲರೂ ಸಾಗಬೇಕಾಗಿದೆ ಎಂದರು.
    ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿ ಧನಂಜಯ ಅಧ್ಯಕ್ಷತೆ ವಹಿಸಿದ್ದರು. ಶರಣ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಎಚ್.ಎನ್ ಮಹಾರುದ್ರ. ದತ್ತಿದಾನಿ ಜಗದೀಶ್ ಕವಿ, ಕತ್ತಲಗೆರೆ ತಿಮ್ಮಪ್ಪ, ಪ್ರಾಧ್ಯಾಪಕ ಮಲ್ಲಪ್ಪ ಸೇರಿದಂತೆ ಅಧ್ಯಾಪಕ ಮತ್ತು ಅಧ್ಯಾಪಕೇತರ ಸಿಬ್ಬಂದಿ ವರ್ಗದವರು, ಕದಳಿ ಮಹಿಳಾ ವೇದಿಕೆ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಸುಮಿಯಾ ತಾಜ್. ಆಯಿಶಾ ಸಿದ್ದಿಕಾ. ರೇವತಿ, ಕಾವ್ಯ ಸೇರಿದಂತೆ ಇನ್ನಿತರರು ವಚನಗಳ ವಿಶ್ಲೇಷಣೆ ಹಾಗೂ ಶರಣರ ಚಿಂತನೆ ಕುರಿತು ಮಾತನಾಡಿದರು.