Thursday, July 14, 2022

ಭಷ್ಟಾಚಾರ ನಿರ್ಮೂಲನೆಗೆ ಪೊರಕೆ ಹಿಡಿದು ಸ್ವಚ್ಛತೆಗೆ ಮುಂದಾಗಿರುವವರ ಕೈ ಬಲಪಡಿಸಿ : ವಿಜಯಶರ್ಮ

ಭದ್ರಾವತಿ ರಂಗಪ್ಪ ವೃತ್ತದ ಸಮೀಪದಲ್ಲಿರುವ ಮಾರುತಿ ಮೆಡಿಕಲ್ಸ್ ಬಿಲ್ಡಿಂಗ್‌ನಲ್ಲಿ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಾರ್ಟಿ ಕಾರ್ಯಾಲಯ ಉದ್ಘಾಟನೆ ಗುರುವಾರ ನಡೆಯಿತು.  
    ಭದ್ರಾವತಿ, ಜು. ೧೪: ರಾಜ್ಯದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಪೊರಕೆ ಹಿಡಿದು ಸ್ವಚ್ಛತೆ ಮುಂದಾಗಿರುವವರ ಕೈ ಬಲಪಡಿಸಬೇಕೆಂದು ಆಮ್ ಆದ್ಮಿ ಪಾರ್ಟಿ ರಾಜ್ಯ ಉಪಾಧ್ಯಕ್ಷ ವಿಜಯಶರ್ಮ ಮನವಿ ಮಾಡಿದರು.
      ಅವರು ಗುರುವಾರ ನಗರದ ರಂಗಪ್ಪ ವೃತ್ತದ ಸಮೀಪದಲ್ಲಿರುವ ಮಾರುತಿ ಮೆಡಿಕಲ್ಸ್ ಬಿಲ್ಡಿಂಗ್‌ನಲ್ಲಿ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಾರ್ಟಿ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದರು.
      ರಾಜ್ಯದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದ್ದು, ಅದರಲ್ಲೂ ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ ಭ್ರಷ್ಟಾಚಾರದಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಸಾಮಾಜಿಕ ಸೇವಾ ಮನೋಭಾವ ಹೊಂದಿರುವ ಮಾರುತಿ ಮೆಡಿಕಲ್ಸ್ ಆನಂದ್‌ರವರು ಪಕ್ಷಕ್ಕೆ ಸೇರ್ಪಡೆಗೊಂಡು ಇಲ್ಲಿನ ರಾಜಕಾರಣಕ್ಕೆ ಹೊಸ ತಿರುವು ನೀಡಲು ಮುಂದಾಗಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
      ಶಿವಮೊಗ್ಗ-ಚಿಕ್ಕಮಗಳೂರು-ಹಾಸನ ಜಿಲ್ಲಾ ವಲಯ ಉಸ್ತುವಾರಿ ದಿವಾಕರ ಮಾತನಾಡಿ, ಈ ಕ್ಷೇತ್ರದಲ್ಲಿನ ರಾಜಕಾರಣವನ್ನು ಬಹಳ ವರ್ಷಗಳಿಂದ ಗಮನಿಸಿದ್ದೇನೆ. ಒಂದು ಬಾರಿ ಪಕ್ಷದ ಅಭ್ಯರ್ಥಿಗೆ ಅವಕಾಶ ಕೊಡಿ. ನಾವು ಈ ಕ್ಷೇತ್ರದ ಸಂಪೂರ್ಣ ಚಿತ್ರಣ ಬದಲಾಯಿಸುತ್ತೇವೆ. ಎರಡು ಕಾರ್ಖಾನೆಗಳನ್ನು ಅಭಿವೃದ್ಧಿಪಡಿಸುತ್ತೇವೆ. ಭ್ರಷ್ಟಾಚಾರ ಮುಕ್ತ ಕ್ಷೇತ್ರವನ್ನಾಗಿಸುತ್ತೇವೆ ಎಂದರು.
      ಜಂಟಿ ಕಾರ್ಯದರ್ಶಿ ದರ್ಶನ್ ಜೈನ್ ಮಾತನಾಡಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಶಾಸಕರ ಕಛೇರಿಯನ್ನೂ ಸಹ ತೆರೆಯುವ ವಿಶ್ವಾಸ ಹೊಂದಿದ್ದೇವೆ.
      ಪಕ್ಷದ ಮುಖಂಡ, ಉದ್ಯಮಿ ಮೆಡಿಕಲ್ ಆನಂದ್ ಮಾತನಾಡಿ, ಒಂದು ಒಳ್ಳೆಯ ಮಾರ್ಗದಲ್ಲಿ ನಡೆಯಬೇಕೆಂಬ ಆಶಯ ಹೊಂದಿದ್ದೇನೆ. ಇದಕ್ಕೆ ಪೂರಕವಾದ ಪಕ್ಷ ಆಮ್ ಆದ್ಮಿ ಪಾರ್ಟಿಯಾಗಿದ್ದು, ಪಕ್ಷದ ತತ್ವ, ಸಿದ್ದಾಂತಗಳಿಗೆ ಬದ್ಧನಾಗಿದ್ದೇನೆ ಎಂದರು.
      ಜಿಲ್ಲಾ ವಲಯ ಉಸ್ತುವಾರಿ ಗೋಪಾಲ, ಜಿಲ್ಲಾ ಮುಖಂಡ ಎಚ್. ರವಿಕುಮಾರ್, ತಾಲೂಕು ಅಧ್ಯಕ್ಷ ಬಿ.ಕೆ ರಮೇಶ್, ತಾಲೂಕು ಪ್ರಮುಖರಾದ ಪರಮೇಶ್ವರಚಾರ್, ಎನ್.ಪಿ ಜೋಸೆಫ್, ಎ. ಮಸ್ತಾನ್, ಅಬ್ದುಲ್ ಖದೀರ್, ಜಾವಿದ್, ರೇಷ್ಮಬಾನು, ಜೋಸೆಫ್, ನಾಗಮಣಿ, ಜ್ಯೋತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಭದ್ರಾವತಿ ರಂಗಪ್ಪ ವೃತ್ತದ ಸಮೀಪದಲ್ಲಿರುವ ಮಾರುತಿ ಮೆಡಿಕಲ್ಸ್ ಬಿಲ್ಡಿಂಗ್‌ನಲ್ಲಿ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಾರ್ಟಿ ಕಾರ್ಯಾಲಯ ಉದ್ಘಾಟನೆ ಸಮಾರಂಭದಲ್ಲಿ ಪಕ್ಷದ ಪ್ರಮುಖರು ಸಂಭ್ರಮಿಸಿದರು.  



ಧಾನ್ಯಕ್ಕೆ ಶೇ.5 ಜಿಎಸ್ ಟಿ ವಿರೋಧಿಸಿ 2 ದಿನ ಹೋರಾಟ

 


ಭದ್ರಾವತಿ, ಜು. ೧೪: ಕೇಂದ್ರ ಸರ್ಕಾರ ಧಾನ್ಯಕ್ಕೆ ಶೇ.೫ರಷ್ಟು ಜಿಎಸ್‌ಟಿ ವಿಧಿಸಿರುವುದು ಸರಿಯಲ್ಲ. ತಕ್ಷಣ ಹಿಂಪಡೆದುಕೊಳ್ಳುವಂತೆ ಆಗ್ರಹಿಸಿ ದೇಶಾದ್ಯಂತ ಜು.೧೫ ಮತ್ತು ೧೬ ಎರಡು ದಿನ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ರೈಸ್‌ಮಿಲ್ ಮಾಲೀಕರ ಸಂಘ ಹಾಗು ದವಸ ಧಾನ್ಯ, ಅಕ್ಕಿ ವರ್ತಕರ ಸಂಘದ ಪ್ರಮುಖರು ತಿಳಿಸಿದರು.

      ಗುರುವಾರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶೇ.೫ರಷ್ಟು ಜಿಎಸ್‌ಟಿ ಪರಿಣಾಮ ರೈತರು, ವರ್ತಕರು ಮತ್ತು ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ. ಈ ಹಿಂದೆ ಧಾನ್ಯಕ್ಕೆ ಯಾವುದೇ ಜಿಎಸ್‌ಟಿ ವಿಧಿಸದ ಕಾರಣ ಅಕ್ಕಿ, ಬೇಳೆಕಾಳು ಸೇರಿದಂತೆ ಜನಸಾಮಾನ್ಯರಿಗೆ ಅತಿ ಅಗತ್ಯವಿರುವ ಧ್ಯಾನ ಕಡಿಮೆ ಬೆಲೆಯಲ್ಲಿ ತಲುಪಿಸಲು ಸಾಧ್ಯವಾಗುತ್ತಿತ್ತು. ಇದೀಗ ಜಿಎಸ್‌ಟಿ ವಿಧಿಸಿರುವುದರಿಂದ ಧಾನ್ಯ ಮಾರಾಟ ಉದ್ಯಮಗಳು, ಧಾನ್ಯ ಉತ್ಪಾದಿಸುವ ರೈತರು ಹಾಗು ಧಾನ್ಯ ಕೊಂಡುಕೊಳ್ಳುವ ಜನ ಸಾಮಾನ್ಯರು ಸಂಕಷ್ಟ ಎದುರಿಸುವಂತಾಗಿದೆ ಎಂದರು.

       ಜಿಎಸ್‌ಟಿ ಪರಿಣಾಮ ಈಗಾಗಲೇ ರೈಸ್‌ಮಿಲ್ ಮಾಲೀಕರು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದ್ದು, ಬಹಳಷ್ಟು ರೈಸ್ ಮಿಲ್‌ಗಳು ಮುಚ್ಚಿ ಹೋಗಿವೆ. ಇದೀಗ ರೈತರು, ಜನಸಾಮಾನ್ಯರು ಸಹ ಸಂಕಷ್ಟಕ್ಕೆ ಒಳಗಾಗುವಂತಾಗಿದೆ. ಈ ಹಿನ್ನಲೆಯಲ್ಲಿ ವರ್ತಕರು ಹಾಗು ಮಿಲ್ ಮಾಲೀಕರು ಸ್ವಯಂ ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.
      ಪ್ರಮುಖರಾದ ರೈಸ್ ಮಾಲೀಕರ ಸಂಘದ ಅಧ್ಯಕ್ಷ ಡಾ. ಎನ್‌ಟಿಸಿ ನಾಗೇಶ್, ಗಿರಿರಾಜ್, ಹರೀಶ್‌ಬಾಬು, ಅಭಯ್‌ರಾಜ್, ಮಹಮದ್ ಖಲೀಲ್, ದಿಲೀಪ್‌ಕುಮಾರ್ ಜೈನ್, ಸಂದೇಶ್ ಮೆಹ್ತಾ, ಭರತ್‌ಕುಮಾರ್, ಶಂಕರ್, ಸತ್ಯನಾರಾಯಣ್, ಧನಂಜಯ ಮತ್ತು ರಂಗನಾಥ್ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಭದ್ರಾ ಜಲಾಶಯದಿಂದ ನದಿಗೆ ನೀರು ಬಿಡುಗಡೆ

 


ಭದ್ರಾವತಿ, ಜು.14: ತಾಲೂಕಿನ ಜೀವನದಿ ಭದ್ರಾ ನದಿ ಜಲಾಶಯ 41ನೇ ಬಾರಿಗೆ ಪೂರ್ಣಗೊಂಡಿದ್ದು, ಗುರುವಾರ ಮಧ್ಯಾಹ್ನ 12 ಗಂಟೆಗೆ ಜಲಾಶಯದಿಂದ ನೀರು ನದಿಗೆ ಬಿಡಲಾಯಿತು.

       4 ಕ್ರಸ್ಟ್ ಗೇಟ್ ಗಳ ಮೂಲಕ ನದಿಗೆ ನೀರು ಬಿಡಲಾಯಿತು. ಜಲಾಶಯದಿಂದ ಹಾಲ್ನೊರೆಯಂತೆ ನೀರು ಧುಮುಕುವ ದೃಶ್ಯ ಕಣ್ತುಂಬಿಕೊಳ್ಳಲು ತಾಲೂಕಿನ ವಿವಿಧತೆಗಳಿಂದ ಜನರು ಆಗಮಿಸಿದ್ದರು. ಕೆಲವರು ವಿಡಿಯೋ ಚಿತ್ರೀಕರಣ ಮಾಡಿಕೊಂಡರು, ಇನ್ನೂ ಕೆಲವರು ಸೆಲ್ಫಿ ತೆಗೆದುಕೊಳ್ಳುವ ಮೂಲಕ ಸಂಭ್ರಮಿಸಿದರು.


Wednesday, July 13, 2022

ಭದ್ರಾ ಜಲಾಶಯದಿಂದ ಬೆಳಗ್ಗೆ 11 ಗಂಟೆಯೊಳಗೆ ನೀರು ಬಿಡುಗಡೆ

ಭದ್ರಾವತಿ, ಜು.14: ತಾಲೂಕಿನ ಜೀವನದಿ ಭದ್ರಾ ನದಿ ಜಲಾಶಯ 41ನೇ ಬಾರಿಗೆ ಪೂರ್ಣಗೊಂಡಿದ್ದು, ಗುರುವಾರ ಬೆಳಿಗ್ಗೆ 11 ಗಂಟೆಯೊಳಗೆ ಜಲಾಶಯದಿಂದ ನೀರು ನದಿಗೆ ಬಿಡುಗಡೆಯಾಗಲಿದೆ.
       ಜಲಾಶಯದ ಗರಿಷ್ಠ ಮಟ್ಟ 186 ಅಡಿಯಾಗಿದ್ದು, ಗುರುವಾರ ಬೆಳಗ್ಗೆ 6 ಗಂಟೆ ಮಾಹಿತಿಯಂತೆ 183.2 ಅಡಿ ತಲುಪಿದೆ. ಈ ಹಿನ್ನೆಲೆಯಲ್ಲಿ 4 ಕ್ರಸ್ಟ್ ಗೇಟ್ ಗಳ ಮೂಲಕ ನದಿಗೆ ನೀರು ಬಿಡಲಾಗುವುದು. ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಹಾಗೂ ಜಾನುವಾರುಗಳನ್ನು ನದಿ ತೀರದ ಪ್ರದೇಶಗಳಿಗೆ ಬಿಡದಂತೆ ಮತ್ತು ಸಾರ್ವಜನಿಕರು ತಿರುಗಾಡದಂತೆ ಮುನ್ನೆಚ್ಚರಿಕೆ ವಹಿಸುವಂತೆ ತಹಸೀಲ್ದಾರ್  ಆರ್ ಪ್ರದೀಪ್ ತಿಳಿಸಿದ್ದಾರೆ. 
     ಮಲೆನಾಡಿನ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಭದ್ರಾ ಜಲಾಶಯ 1962ರಲ್ಲಿ ನಿರ್ಮಾಣಗೊಂಡಿದ್ದು, ಇರುವವರೆಗೆ 41 ಬಾರಿ ಪೂರ್ಣಗೊಂಡಿದೆ. ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಹಾವೇರಿ, ಬಳ್ಳಾರಿ ಮತ್ತು ಗದಗ ಸೇರಿದಂತೆ ಒಟ್ಟು 8 ಜಿಲ್ಲೆಗಳಿಗೆ ನೀರಾವರಿ ಸೌಲಭ್ಯಗಳನ್ನು ಹೊಂದಿದೆ. ಬೃಹತ್ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ. ಭದ್ರ ನದಿ ರೈತರು, ಕಾರ್ಮಿಕರ ಜೀವನದಿಯಾಗಿದೆ. ಜಲಾಶಯ ಪೂರ್ಣ ಪ್ರಮಾಣದಲ್ಲಿ ಭರ್ತಿಯಾದಾಗ  ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಪ್ರವಾಸಿಗರು ಆಗಮಿಸಿ ಇದರ ಸೌಂದರ್ಯ ಕಣ್ತುಂಬಿ ಕೊಳ್ಳುತ್ತಿದ್ದಾರೆ.



ಯಾವುದೇ ಕ್ಷಣದಲ್ಲಿ ಭದ್ರಾ ನದಿಗೆ ನೀರು


ಭದ್ರಾವತಿ, ಜು. ೧೩: ಭದ್ರಾ ಜಲಾಶಯ ಸುತ್ತಮುತ್ತಲಿನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಜಲಾಶಯದಿಂದ ಯಾ
ವುದೇ ಕ್ಷಣದಲ್ಲಿ ನೀರನ್ನು ನದಿಗೆ ಬಿಡುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಉಂಟಾಗಬಹುದಾದ ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಅಗತ್ಯವಿರುವ ತುರ್ತು ಕ್ರಮಗಳನ್ನು ಕೈಗೊಳ್ಳಬೇಕೆಂದು ನೂತನ ಉಪವಿಭಾಗಾಧಿಕಾರಿ ಎಸ್.ಬಿ ದೊಡ್ಡಗೌಡರ್ ಹೇಳಿದರು.
ಅವರು ಬುಧವಾರ ಸಂಜೆ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ, ಭದ್ರಾ ಜಲಾಶಯದಿಂದ ನೀರು ಹೊರಬಿಡುವ ಹಿನ್ನಲೆಯಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗುವ ಸ್ಥಳಗಳಲ್ಲಿ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಯಾವುದೇ ಜೀವಹಾನಿ ಸಂಭವಿಸದಂತೆ ಎಚ್ಚರವಹಿಸಬೇಕು. ಪ್ರವಾಹದಿಂದ ಉಂಟಾಗುವ ಹೆಚ್ಚಿನ ಹಾನಿಯನ್ನು ತಪ್ಪಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕು. ಸಂತ್ರಸ್ಥರಿಗೆ ಸರ್ಕಾರದಿಂದ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ತ್ವರಿತ ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೆ ನಿರ್ಲಕ್ಷ್ಯತನ ವಹಿಸಬಾರದು.
ಕಾಳಜಿ ಕೇಂದ್ರ ತೆರೆದು ತಗ್ಗು ಪ್ರದೇಶದಲ್ಲಿನ ನಿವಾಸಿಗಳನ್ನು ತಕ್ಷಣ ಸ್ಥಳಾಂತರಿಸಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಸಹಕಾರ ಪಡೆದುಕೊಳ್ಳಬೇಕು. ಸಂತ್ರಸ್ಥರಿಗೆ ಊಟದ ವ್ಯವಸ್ಥೆ, ಆರೋಗ್ಯ ಇಲಾಖೆಯಿಂದ ಆರೋಗ್ಯ ತಪಾಸಣೆ ನಡೆಸಬೇಕು. ನಗರಸಭೆ ವ್ಯಾಪ್ತಿಯಲ್ಲಿ ನರಗಸಭೆ ಆಡಳಿತ ಹೆಚ್ಚಿನ ನಿಗಾ ವಹಿಸಬೇಕೆಂದರು. ಇದೆ ರೀತಿ ಅಗ್ನಿಶಾಮಕ ಇಲಾಖೆ ತುರ್ತು ಸೇವೆ ಒದಗಿಸಲು ಸಿದ್ದವಿರುವಂತೆ ಸೂಚಿಸಿದರು.
ಮಳೆಯಿಂದ ಉಂಟಾಗಿರುವ ಸಮಸ್ಯೆಗಳ ಕುರಿತು ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಯಿಂದ ಮಾಹಿತಿ ಪಡೆದುಕೊಂಡರು.
ಸಭೆಯಲ್ಲಿ ಪ್ರೊಬೇಷನರಿ ಉಪವಿಭಾಗಾಧಿಕಾರಿ ಕಾಂತರಾಜ್, ತಹಸೀಲ್ದಾರ್ ಆರ್. ಪ್ರದೀಪ್, ಗ್ರೇಡ್-೧ ತಹಸೀಲ್ದಾರ್ ರಂಗಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್, ಕೃಷಿ ಸಹಾಯಕ ನಿರ್ದೇಶಕ ಶಶಿಧರ್, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಕಾಂತರಾಜ್, ನಗರಸಭೆ ಪರಿಸರ ಅಭಿಯಂತರ ಪ್ರಭಾಕರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
ಜಲಾಶಯ ಭರ್ತಿಯಾಗಲು ಕ್ಷಣಗಣನೆ : ಮಧ್ಯ ರಾತ್ರಿ ನೀರು ಬಿಡುವ ಸಾಧ್ಯತೆ ?
ಗರಿಷ್ಠ ೧೮೬ ಅಡಿ ಎತ್ತರ ಹೊಂದಿರುವ ಜಲಾಶಯ ಈ ಬಾರಿ ಬಹುತೇಕ ಪೂರ್ಣಗೊಂಡಿದ್ದು, ಬುಧವಾರ ಮಧ್ಯ ರಾತ್ರಿ ನೀರು ಬಿಡುವ ಸಾಧ್ಯತೆ ಹೆಚ್ಚಾಗಿದೆ.
ಬೆಳಿಗ್ಗೆ ೬ ಗಂಟೆ ಮಾಹಿತಿಯಂತೆ ಜಲಾಶಯದ ನೀರಿನ ಮಟ್ಟ ೧೮೦.೨ ಅಡಿಗೆ ಏರಿಕೆಯಾಗಿದೆ. ಭರ್ತಿಗೆ ಕೇವಲ ೬ ಅಡಿ ಮಾತ್ರ ಬಾಕಿ ಉಳಿದಿದ್ದು, ೩೫.೩೨೧ ಕ್ಯೂಸೆಕ್ ಒಳಹರಿವು ಹೊಂದಿದೆ. ಈ ಹಿನ್ನಲೆಯಲ್ಲಿ ಮಧ್ಯ ರಾತ್ರಿ ವೇಳೆಗೆ ಜಲಾಶಯ ಭರ್ತಿಯಾಗಲಿದ್ದು, ನೀರು ಬಿಡುವ ಸಾಧ್ಯತೆ ಹೆಚ್ಚಾಗಿದೆ.
ಕಳೆದ ವರ್ಷ ಕೇವಲ ೧೫೬.೮ ಅಡಿಯಷ್ಟು ನೀರು ಸಂಗ್ರಹವಾಗಿತ್ತು. ಪ್ರಸ್ತುತ ಕಳೆದ ವರ್ಷಕ್ಕಿಂತ ೨೪ ಅಡಿಗೂ ಹೆಚ್ಚಿನ ನೀರು ಸಂಗ್ರಹವಾಗಿದೆ. ಈಗಾಗಲೇ ಕಾಲುವೆಗಳಿಗೆ ೧೦ ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ. ಹೆಚ್ಚುವರಿ ನೀರನ್ನು ನದಿಗೆ ಬಿಡುವ ಸಾಧ್ಯತೆ ಕಂಡು ಬರುತ್ತಿದೆ. ನದಿಗೆ ನೀರು ಬಿಟ್ಟ ಸಂದರ್ಭದಲ್ಲಿ ಪ್ರತಿವರ್ಷ ನಗರ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗುವುದು ಸಾಮಾನ್ಯವಾಗಿದೆ.


ಶಿವಸಾಯಿ ಕೃಪಾಧಾಮದಲ್ಲಿ ವಿಜೃಂಭಣೆಯಿಂದ ಜರುಗಿದ ಗುರು ಪೂರ್ಣಿಮೆ

ಪ್ರತಿ ವರ್ಷದಂತೆ ಈ ಬಾರಿ ಸಹ ಭದ್ರಾವತಿ ನ್ಯೂಟೌನ್ ಶ್ರೀ ಸತ್ಯಸಾಯಿ ಸೇವಾ ಸಮಿತಿ, ಪ್ರಶಾಂತಿ ಸೇವಾ ಟ್ರಸ್ಟ್ ಹಾಗು ಶಿವಸಾಯಿ ಕೃಪಾಧಾಮ ಟ್ರಸ್ಟ್ ವತಿಯಿಂದ ಗುರು ಪೂರ್ಣಿಮೆ ಹಲವು ಧಾರ್ಮಿಕ ಆಚರಣೆಗಳೊಂದಿಗೆ ವಿಜೃಂಭಣೆಯಿಂದ ಜರುಗಿತು. ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಶಿಕ್ಷಕರ ಪಾದ ಪೂಜೆ ನೆರವೇರಿಸುವ ಮೂಲಕ ಗಮನ ಸೆಳೆದರು.
    ಭದ್ರಾವತಿ, ಜು. ೧೩: ಪ್ರತಿ ವರ್ಷದಂತೆ ಈ ಬಾರಿ ಸಹ ನ್ಯೂಟೌನ್ ಶ್ರೀ ಸತ್ಯಸಾಯಿ ಸೇವಾ ಸಮಿತಿ, ಪ್ರಶಾಂತಿ ಸೇವಾ ಟ್ರಸ್ಟ್ ಹಾಗು ಶಿವಸಾಯಿ ಕೃಪಾಧಾಮ ಟ್ರಸ್ಟ್ ವತಿಯಿಂದ ಗುರು ಪೂರ್ಣಿಮೆ ಹಲವು ಧಾರ್ಮಿಕ ಆಚರಣೆಗಳೊಂದಿಗೆ ವಿಜೃಂಭಣೆಯಿಂದ ಜರುಗಿತು.
      ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಶಿಕ್ಷಕರ ಪಾದ ಪೂಜೆ ನೆರವೇರಿಸುವ ಮೂಲಕ ಗಮನ ಸೆಳೆದರು. ಇದಕ್ಕೂ ಮೊದಲು ಓಂಕಾರ, ಜ್ಯೋತಿರ್ಧ್ಯಾನ, ಸುಪ್ರಭಾತ, ನಗರ ಸಂಕೀರ್ತನೆ, ಮಂಗಳಾರತಿ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
      ಸಂಜೆ ಲಲಿತಸಹಸ್ರ ನಾಮಾರ್ಚನೆ, ವೇದಪಾರಾಯಣ, ಭಜನೆ, ಚಿಂತನ, ನಾದಸ್ವರ ಸೇವೆ, ಮಹಾಮಂಗಳಾರತಿ, ಪಾದುಕ ದರ್ಶನ ಮತ್ತು ಪ್ರಸಾದ ವಿತರಣೆ ಆಚರಣೆಗಳು ಜರುಗಿದವು.
      ಶಿವಸಾಯಿ ಕೃಪಾಧಾಮದಲ್ಲಿ ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಶ್ರೀ ಸತ್ಯನಾರಾಯನ ಪೂಜೆ, ಗುರು ಪಾದುಕಾ ಪೂಜೆ, ಮಂಗಳಾರತಿ ಮತ್ತು ಪ್ರಸಾದ ವಿತರಣೆ, ಪಲ್ಲಕ್ಕಿ ಉತ್ಸವ, ಮಹಾಮಂಗಳಾರತಿ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಮಂಜುನಾಥ್ ಐತಾಳ್ ಅವರ ನೇತೃತ್ವದಲ್ಲಿ ನಡೆದವು.  
      ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಕಾಗದನಗರ, ಸುರಗಿತೋಪು, ನ್ಯೂಟೌನ್, ಆಂಜನೇಯ ಅಗ್ರಹಾರ, ವಿದ್ಯಾಮಂದಿರ, ಗಣೇಶ್‌ಕಾಲೋನಿ, ಹಾಲಪ್ಪಶೆಡ್, ಜನ್ನಾಪುರ ಸೇರಿದಂತೆ ವಿವಿಧೆಡೆಗಳಿಂದ ಭಕ್ತಾಧಿಗಳು ಆಗಮಿಸಿ ಸ್ವಾಮಿಯ ದರ್ಶನ ಪಡೆದರು.
      ಶ್ರೀ ಸತ್ಯಸಾಯಿ ಸೇವಾ ಕ್ಷೇತ್ರದ ಪ್ರಮುಖರಾದ ಡಿ. ಪ್ರಭಾಕರ ಬೀರಯ್ಯ, ಸೌಮ್ಯ ಪ್ರಭಾಕರ ಬೀರಯ್ಯ, ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಪ್ರಾಂಶುಪಾಲ ಮೃತ್ಯುಂಜಯ ಕಾನಿಟ್ಕರ್, ಶ್ಯಾಮರಾಯ ಆಚಾರ್, ಉಪಪ್ರಾಂಶುಪಾಲ ಪ್ರಸನ್ನ, ಪರಮೇಶ್ವರಪ್ಪ ಹಾಗು ಮುಖ್ಯ ಶಿಕ್ಷಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಶಿಕ್ಷಣ ಸಂಸ್ಥೆಯ ಎಲ್ಲಾ ಶಿಕ್ಷಕರು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.


 ಭದ್ರಾವತಿ ನ್ಯೂಟೌನ್ .ಶಿವಸಾಯಿ ಕೃಪಾಧಾಮದಲ್ಲಿ ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಶ್ರೀ ಸತ್ಯನಾರಾಯನ ಪೂಜೆ, ಗುರು ಪಾದುಕಾ ಪೂಜೆ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು. ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಭಕ್ತಾಧಿಗಳು ಪಾಲ್ಗೊಂಡು ಸ್ವಾಮಿಯ ದರ್ಶನ ಪಡೆದರು.


ಸರ್ಕಾರಿ ಶಾಲೆಗೆ ಆಟದ ಮೈದಾನಕ್ಕೆ ಜಾಗ ಕಲ್ಪಿಸಲು ಮನವಿ

ಭದ್ರಾವತಿ ತಾಲೂಕಿನ ಕಲ್ಪನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಆಟದ ಮೈದಾನಕ್ಕೆ ಜಾಗ ಕಲ್ಪಿಸಿಕೊಡುವಂತೆ ಒತ್ತಾಯಿಸಿ ಬುಧವಾರ ಉಪವಿಭಾಗಾಧಿಕಾರಿ ಎಸ್.ಬಿ ದೊಡ್ಡಗೌಡರ್ ಅವರ ಮೂಲಕ ತಾಲೂಕು ಆಡಳಿತಕ್ಕೆ ಜೈ ಸೇವಾಲಾಲ್ ಯುವಕರ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಜು. ೧೩: ತಾಲೂಕಿನ ಕಲ್ಪನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಆಟದ ಮೈದಾನಕ್ಕೆ ಜಾಗ ಕಲ್ಪಿಸಿಕೊಡುವಂತೆ ಒತ್ತಾಯಿಸಿ ಬುಧವಾರ ಉಪವಿಭಾಗಾಧಿಕಾರಿ ಎಸ್.ಬಿ ದೊಡ್ಡಗೌಡರ್ ಅವರ ಮೂಲಕ ತಾಲೂಕು ಆಡಳಿತಕ್ಕೆ ಜೈ ಸೇವಾಲಾಲ್ ಯುವಕರ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.
      ಶಾಲೆಗೆ ಯಾವುದೇ ಆಟದ ಮೈದಾನ ಇಲ್ಲದ ಕಾರಣ ಮಕ್ಕಳು ತೊಂದರೆ ಅನುಭವಿಸುವಂತಾಗಿದೆ. ಅದರಲ್ಲೂ ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಜನರು ಹೆಚ್ಚಾಗಿ ವಾಸಿಸುತ್ತಿದ್ದು, ಆಟದ ಮೈದಾನ ಕಲ್ಪಿಸಿ ಕೊಡುವಂತೆ ಕೋರಲಾಗಿದೆ. ಮನವಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೂ ಸಲ್ಲಿಸಲಾಯಿತು.
      ತಹಸೀಲ್ದಾರ್ ಆರ್. ಪ್ರದೀಪ್, ಸಂಘದ ಅಧ್ಯಕ್ಷ ಪ್ರವೀಣ್‌ನಾಯ್ಕ, ಉಪಾಧ್ಯಕ್ಷ ಗುಂಡಾ, ಪ್ರಧಾನ ಕಾರ್ಯದರ್ಶಿ ಪವನ್‌ಕುಮಾರ್, ಪದಾಧಿಕಾರಿಳಾದ ರಾಕೇಶ್, ರಮೇಶ್, ಕಿರಣ್ ಮತ್ತು ಕುಮಾರ್ ನಾಯ್ಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.