Thursday, February 23, 2023

ಶ್ರೀ ಮಾರಿಯಮ್ಮ ದೇವಿ ದೇವಸ್ಥಾನದಲ್ಲಿ ನೂತನ ವಿಗ್ರಹ, ಗೋಪುರ ಕಳಶ ಪ್ರತಿಷ್ಠಾಪನೆ

ಭದ್ರಾವತಿ ಬಿ.ಎಚ್ ರಸ್ತೆ ವಾರ್ಡ್ ನಂ.೩ರ ಚಾಮೇಗೌಡ ಏರಿಯಾದಲ್ಲಿರುವ ಶ್ರೀ ಮಾರಿಯಮ್ಮ ದೇವಿ ದೇವಸ್ಥಾನದಲ್ಲಿ ನೂತನ ವಿಗ್ರಹ ಹಾಗು ಗೋಪುರ ಕಳಶ ಪ್ರತಿಷ್ಠಾಪನೆ ಅಂಗವಾಗಿ ಗುರುವಾರ ಶ್ರೀ ಮಾರಿಯಮ್ಮ ದೇವಿಯ ನೂತನ ವಿಗ್ರಹ ಮತ್ತು ಗೋಪುರ ಕಲಶ ಮೆರವಣಿಗೆ ನಡೆಯಿತು.
    ಭದ್ರಾವತಿ, ಫೆ. ೨೩: ನಗರದ ಬಿ.ಎಚ್ ರಸ್ತೆ ವಾರ್ಡ್ ನಂ.೩ರ ಚಾಮೇಗೌಡ ಏರಿಯಾದಲ್ಲಿರುವ ಶ್ರೀ ಮಾರಿಯಮ್ಮ ದೇವಿ ದೇವಸ್ಥಾನದಲ್ಲಿ ನೂತನ ವಿಗ್ರಹ ಹಾಗು ಗೋಪುರ ಕಳಶ ಪ್ರತಿಷ್ಠಾಪನೆ ಶುಕ್ರವಾರ ನಡೆಯಲಿದೆ.
    ಪ್ರತಿಷ್ಠಾಪನೆ ಅಂಗವಾಗಿ ಗುರುವಾರ ಬೆಳಿಗ್ಗೆ ಪ್ರಾರ್ಥನೆ, ಗಣಪತಿ ಪೂಜೆ, ಮಧ್ಯಾಹ್ನ ಕಂಕಣ ಧಾರಣೆ, ಅಂಕುರಾರ್ಪಣೆ, ಧ್ವಜಸ್ಥಾಪನೆ, ನಂತರ ಮಹಾಮಂಗಳಾರತಿ, ಸಂಜೆ ಗಂಗೆಪೂಜೆ ವಿಗ್ರಹ ಮೆರವಣಿಗೆ ನಂತರ ದೇವಾಲಯ ಪ್ರವೇಶ, ಬಿಂಬಶುದ್ಧಿ, ಅಧಿವಾಸಂಗ, ಪೂಜಾ ಹೋಮ ಪ್ರಸಾದ ವಾಸ್ತು ಹೋಮ, ರಾಕ್ಷೋಜ್ಞ ಹೋಮ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
    ಶುಕ್ರವಾರ ಬ್ರಾಹ್ಮೀ ಮುಹೂರ್ತದಲ್ಲಿ ವಿಗ್ರಹ ಪ್ರತಿಷ್ಠಾಪನೆ, ಕಲಾ ಪ್ರತಿಷ್ಠಾಪನೆ, ನೇತ್ರೋನ್ಮಿಲನ ಪ್ರತಿಷ್ಠಾಪನಾಂಗ ಹೋಮ, ಪೂರ್ಣಾಹುತಿ, ನವಕಲಾಶಾಭಿಷೇಕ, ಮಹಾ ಮಂಗಳಾರತಿಯೊಂದಿಗೆ ತೀರ್ಥಪ್ರಸಾದ ವಿನಿಯೋಗ ಹಾಗು ಅನ್ನಸಂತರ್ಪಣೆ ಕಾರ್ಯಕ್ರಮಗಳು ನಡೆಯಲಿವೆ.


    ಶ್ರೀ ಮಾರಿಯಮ್ಮ ದೇವಿಯ ನೂತನ ವಿಗ್ರಹ ಮತ್ತು ಗೋಪುರ ಕಲಶ ಮೆರವಣಿಗೆಯಲ್ಲಿ ಡಾ. ರಾಜ್‌ಕುಮಾರ್, ಡಾ. ಪುನೀತ್‌ರಾಜ್‌ಕುಮಾರ್ ಅಭಿಮಾನಿಗಳ ಸಂಘ ಮತ್ತು ನೃಪತುಂಗ ಆಟೋ ಮಾಲೀಕರ ಮತ್ತು ಚಾಲಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ದೇವಸ್ಥಾನ ಸಮಿತಿಯ ಅಧ್ಯಕ್ಷ ಪುಟ್ಟಸ್ವಾಮಿ, ಉಪಾಧ್ಯಕ್ಷರಾದ ಎಂ.ಪಿ ಉಮೇಶ್, ಬಿ.ಎಂ ಮಹಾದೇವಯ್ಯ, ಶ್ರೀನಿವಾಸ್ ನಾಯ್ಡ್, ಕಾರ್ಯದರ್ಶಿ ಗೋವಿಂದಪ್ಪ, ಖಜಾಂಚಿ ಮಾಣಿಕ್ಯಂ, ಸದಸ್ಯರಾದ ಜಾರ್ಜ್(ನಗರಸಭಾ ಸದಸ್ಯ), ದೇವು, ಬಿ.ಎನ್ ವಾಸು, ಎಂ. ಮಹಾದೇವ, ಗುರುಸ್ವಾಮಿ, ಎಂ.ಪಿ ಕೃಷ್ಣ, ತಿಮ್ಮಯ್ಯ, ಭೂಮಿನಾಥನ್, ಶರವಣ, ಮಂಜುನಾಥ್, ಎಸ್. ಕುಮಾರ ಮತ್ತು ಬಿ.ಎನ್ ರವಿ ಹಾಗು ವಾರ್ಡ್ ಹಿರಿಯ ಮುಖಂಡರು ಮತ್ತು ನಿವಾಸಿಗಳು ಪಾಲ್ಗೊಂಡಿದ್ದರು.
    ಮಂಗಳವಾದ್ಯ ಸೇರಿದಂತೆ ಕಲಾತಂಡಗಳು ಹಾಗು ಪೂರ್ಣಕುಂಭಗಳೊಂದಿಗೆ ನೂತನ ವಿಗ್ರಹ ಮತ್ತು ಗೋಪುರ ಕಲಶ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು. ಸಿಡಿಮದ್ದು ಪ್ರದರ್ಶನ ನಡೆಯಿತು. ಶಂಕರಮಠದ ಅರ್ಚಕ ಗಣೇಶ್ ಪ್ರಸಾದ್ ನೇತೃತ್ವದ ತಂಡದಿಂದ ಧಾರ್ಮಿಕ ಆಚರಣೆಗಳು ಜರುಗುತ್ತಿವೆ.  

ಫೆ.೨೪ರ ಭದ್ರಾವತಿ ಬಂದ್‌ಗೆ ಬೆಂಬಲಿಸಿ : ಶಾರದ ಅಪ್ಪಾಜಿ

ಭದ್ರಾವತಿಯಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಪಕ್ಷದ ವಿಧಾನಸಭಾ ಕ್ಷೇತ್ರದ ಅಧ್ಯರ್ಥಿ ಶಾರದ ಅಪ್ಪಾಜಿ ಮಾತನಾಡಿದರು.
    ಭದ್ರಾವತಿ, ಫೆ. ೨೩ : ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟದಲ್ಲಿ ಪಕ್ಷ ರಾಜಕಾರಣ ಮಾಡುವುದಿಲ್ಲ. ಹೋರಾಟ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಹಕಾರ ನೀಡುವ ಜೊತೆಗೆ ಕ್ಷೇತ್ರದ ಸಮಸ್ತ ನಾಗರೀಕರು ಸಹ ಫೆ.೨೪ರಂದು ಹಮ್ಮಿಕೊಳ್ಳಲಾಗಿರುವ ಭದ್ರಾವತಿ ಬಂದ್ ಹೋರಾಟ ಬೆಂಬಲಿಸುವಂತೆ ಮನವಿ ಮಾಡುವುದಾಗಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಾರದ ಅಪ್ಪಾಜಿ ಹೇಳಿದರು.
    ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಶಾಸಕರಾದ ದಿವಂಗತ ಎಂ.ಜೆ ಅಪ್ಪಾಜಿಯವರು ಕಾರ್ಮಿಕನಾಗಿ ದುಡಿಯುವ ಜೊತೆಗೆ ಕಾರ್ಮಿಕರ ಪರವಾಗಿ ನಿರಂತರವಾಗಿ ಹೋರಾಟ ನಡೆಸಿಕೊಂಡು ಬಂದಿದ್ದರು. ಒಬ್ಬ ಕಾರ್ಮಿಕನ ಹೆಂಡತಿಯಾಗಿರುವ ನಾನು ಸಹ ಈ ಕಾರ್ಖಾನೆ ಉಳಿಯಬೇಕೆಂಬ ಹೋರಾಟದಲ್ಲಿ ತೊಡಗಿಸಿಕೊಂಡಿದ್ದೇನೆ. ಪಕ್ಷದ ವತಿಯಿಂದ ಸಹ ಹೋರಾಟ ನಡೆಸಲಾಗುತ್ತಿದ್ದು, ಗುತ್ತಿಗೆ ಕಾರ್ಮಿಕರ ಹೋರಾಟಕ್ಕೂ ಸಂಪೂರ್ಣ ಬೆಂಬಲ ನೀಡಿದ್ದೇವೆ. ವಿಐಎಸ್‌ಎಲ್ ಕಾರ್ಖಾನೆ ವಿಚಾರದಲ್ಲಿ ಯಾವುದೇ ರೀತಿ ರಾಜಕಾರಣ ಮಾಡುವುದಿಲ್ಲ. ಕ್ಷೇತ್ರದ ನಾಗರೀಕರು ಸ್ವಯಂ ಪ್ರೇರಣೆಯಿಂದ ಹೋರಾಟದಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
    ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಈ ಕಾರ್ಖಾನೆ ಅಭಿವೃದ್ಧಿಗಾಗಿ ಶ್ರಮಿಸಿದ್ದರು. ಅಂದು ಕಾರ್ಖಾನೆಯನ್ನು ಉಕ್ಕು ಪ್ರಾಧಿಕಾರಕ್ಕೆ ವಹಿಸಿಕೊಡುವ ಮೂಲಕ ಕಾರ್ಮಿಕರ ಹಿತ ಕಾಪಾಡುವಲ್ಲಿ ಯಶಸ್ವಿಯಾಗಿದ್ದರು. ಶಿವಮೊಗ್ಗ ನಗರಕ್ಕೆ ಫೆ.೨೭ರಂದು ನೂತನ ವಿಮಾನ ನಿಲ್ದಾಣ ಉದ್ಘಾಟನೆಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರಮೋದಿಯವರು ಈ ಕಾರ್ಖಾನೆ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಹೆಚ್ಚಿನ ಆಸಕ್ತಿ ತೋರಿಸುವ ಮೂಲಕ ಕ್ಷೇತ್ರದ ಜನತೆಗೆ ಶುಭ ಸಂದೇಶ ನೀಡಬೇಕೆಂದು ಮನವಿ ಮಾಡಿದರು.
    ಕಳೆದ ದಿನಗಳ ಹಿಂದೆ ಕ್ಷೇತ್ರಕ್ಕೆ ಆಗಮಿಸಿದ್ದ ಪಂಚರತ್ನ ಯಾತ್ರೆ ಯಶಸ್ವಿಯಾಗಿದೆ. ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರಲ್ಲಿ ಮತ್ತಷ್ಟು ಆತ್ಮ ವಿಶ್ವಾಸ ಹೆಚ್ಚಿಸಿದ್ದು, ಯಶಸ್ವಿ ಕಾರಣಕರ್ತರಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.  
    ಪಕ್ಷದ ರಾಜ್ಯ ಕಾರ್ಯದರ್ಶಿ ಜೆ.ಪಿ ಯೋಗೇಶ್ ಮಾತನಾಡಿ, ವಿಐಎಸ್‌ಎಲ್ ಉಳಿಸುವ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರು ತಮ್ಮ ನಿಲುವು ಈಗಾಗಲೇ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ನಾವೆಲ್ಲರೂ ಪಕ್ಷದ ತೀರ್ಮಾನಕ್ಕೆ ಬದ್ಧರಾಗಿದ್ದೇವೆ. ನಮ್ಮ ಹೋರಾಟ ಈ ನಿಟ್ಟಿನಲ್ಲಿ ದಾರಿಯಲ್ಲಿಯೇ ಸಾಗಲಿದೆ ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಅಧ್ಯಕ್ಷರುಗಳಾದ ಆರ್. ಕರುಣಾಮೂರ್ತಿ, ಧರ್ಮಕುಮಾರ್, ಯುವ ಘಟಕದ ಜಿಲ್ಲಾಧ್ಯಕ್ಷ ಮಧುಕುಮಾರ್, ಪ್ರಮುಖರಾದ ತಿಮ್ಮೇಗೌಡ, ಕರಿಯಪ್ಪ, ಮೈಲಾರಪ್ಪ, ಉಮೇಶ್, ಮಧುಸೂದನ್, ಲೋಕೇಶ್ವರ್‌ರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನೂತನ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಹೆಸರು ಸೂಚಿಸಿ

ಭದ್ರಾವತಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಮಾತನಾಡಿದರು.
    ಭದ್ರಾವತಿ, ಫೆ. ೨೩ ; ಶಿವಮೊಗ್ಗ ಸೋಗಾನೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪುರವರ ಹೆಸರು ಸೂಚಿಸುವಂತೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ ಎಂದು ಪರಿಷತ್ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಹೇಳಿದರು.
    ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಸಂಸದ ಬಿ.ವೈ ರಾಘವೇಂದ್ರರವರ ಪರಿಶ್ರಮದ ಫಲವಾಗಿ ಸಹ್ಯಾದ್ರಿ ಗಿರಿಶೃಂಗಗಳ ತಪ್ಪಲಿನಲ್ಲಿರುವ ಮಲೆನಾಡಿನ ಹೆಬ್ಬಾಗಿಲೆಂದೇ ಪ್ರಖ್ಯಾತವಾಗಿರುವ ಶಿವಮೊಗ್ಗದ ಸೋಗಾನೆಯಲ್ಲಿ ನೂತನ ವಿಮಾನ ನಿಲ್ದಾಣ ನಿರ್ಮಾಣಗೊಂಡಿದೆ. ಈ ಹಿನ್ನಲೆಯಲ್ಲಿ ಪರಿಷತ್ ವತಿಯಿಂದ ಇವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು.
    ನಿಲ್ದಾಣಕ್ಕೆ ಹೆಸರನ್ನು ನಾಮಕರಣ ಮಾಡುವ ವಿಷಯದಲ್ಲಿ ಹಲವರ ಹೆಸರುಗಳು ಪ್ರಸ್ತಾಪವಾಗಿದ್ದು, ಈ ಹೆಸರುಗಳ ಪೈಕಿ ಸ್ವತಃ ಬಿ.ಎಸ್ ಯಡಿಯೂರಪ್ಪನವರು ತಮ್ಮ ಹೆಸರಿನ ಬದಲಿಗೆ ರಾಷ್ಟ್ರಕವಿ ಕುವೆಂಪುರವರ ಹೆಸರಿನ್ನಿಡಲು ಸೂಚಿಸಿರುತ್ತಾರೆ. ಅನೇಕ ಕವಿವರ್ಯರು ಹುಟ್ಟಿ ಮೆರೆದ ಹಾಗೂ ಶಿವಪ್ಪನಾಯಕರಂತಹ ಹಲವು ರಾಜಮಹಾರಾಜರುಗಳು ಆಳಿದ ಇಂತಹ ಮಲೆನಾಡಿನಲ್ಲಿ ಜನಿಸಿದಂತಹ ಕುವೆಂಪುರವರು ಸಾಹಿತ್ಯ ಕ್ಷೇತ್ರದಲ್ಲಿ ದಿಗ್ಗಜರೆನಿಸಿಕೊಂಡು, ಶ್ರೀ ರಾಮಾಯಣ
ದರ್ಶನಂ ಮಹಾಕಾವ್ಯವನ್ನು ರಚಿಸಿ ಕನ್ನಡದ ಸರ್ವಶ್ರೇಷ್ಟ ಸಾಹಿತಿ ಹಾಗೂ ಕವಿ ಎಂದು ಖ್ಯಾತಿಗೊಳಗಾಗಿ, ನಾಡಿಗೆ ಪ್ರಪ್ರಥಮ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ
ಮಹಾನ್ ವ್ಯಕ್ತಿಯಾಗಿದ್ದಾರೆ ಎಂದರು.
    ದೇಶಕ್ಕೆ ವಿಶ್ವಮಾನವ ಸಂದೇಶ ಸಾರಿದ ಮಹಾನ್ ಚೇತನ, ಕವಿ ಕುವೆಂಪುರವರ ಹೆಸರನ್ನು ನಿರ್ಮಾಣಕ್ಕೆ ನಾಮಕರಣ ಮಾಡುವುದು ಸೂಕ್ತವಾಗಿದ್ದು, ಈ ಹಿನ್ನಲೆಯಲ್ಲಿ ಪರಿಷತ್ ವತಿಯಿಂದ ಹಕ್ಕೊತ್ತಾಯ ಮಾಡುವ ಮೂಲಕ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುತ್ತಿದೆ ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಎಚ್. ತಿಮ್ಮಪ್ಪ, ಸಂಘಟನಾ ಕಾರ್ಯದರ್ಶಿ ಬಿ. ಕಮಲಾಕರ್, ಕಾರ್ಯಕಾರಿ ಸಮಿತಿ ಸದಸ್ಯೆ ಎಂ.ಎಸ್ ಸುಧಾಮಣಿ, ಕೋಡ್ಲುಯಜ್ಞಯ್ಯ, ರೇವಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Wednesday, February 22, 2023

ಕುಮಾರಸ್ವಾಮಿ-ಸಿದ್ದರಾಮಯ್ಯ ಅಭಿಮಾನಿಗಳ ನಡುವೆ ಮಾತಿನಚಕಮಕಿ : ವ್ಯಕ್ತಿಯೋರ್ವನ ಮೇಲೆ ಹಲ್ಲೆ


    ಭದ್ರಾವತಿ, ಫೆ. ೨೨ : ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗು ಎಚ್.ಡಿ ಕುಮಾರಸ್ವಾಮಿ ಅಭಿಮಾನಿಗಳ ನಡುವೆ ಮಾತಿನ ಚಕಮಕಿ ನಡೆದು ವ್ಯಕ್ತಿಯೋರ್ವನ ಮೇಲೆ ನಡೆಸಿರುವ ಘಟನೆ ನಡೆದಿದೆ.
    ತಾಲೂಕಿನ ಮಲ್ಲಿಗೇನಹಳ್ಳಿ ಕ್ಯಾಂಪ್‌ನಲ್ಲಿ ಉದ್ಯಮಿ ಆಕಾಶ್‌ಗೆ ಗೋಣಿಬೀಡು ನಿವಾಸಿಗಳಾದ ದಿನೇಶ್, ಯೋಗೇಶ್ ಮತ್ತು ಇತರೆ ಮೂವರು ಅಡ್ಡಗಟ್ಟಿದ್ದಾರೆ. ಈ ಹಿಂದೆ ಆಕಾಶ್ ೨೦೧೩ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು ಹಾಗಾಗಿ ೨೦೨೩ ರಲ್ಲಿಯೂ ಸಿದ್ದರಾಮಯ್ಯನೇ ಮುಖ್ಯಮಂತ್ರಿ ಆಗೋದು ಎಂದು ಹೇಳಿದ್ದರು.
    ಇದೇ ವಿಚಾರವಾಗಿ ದಿನೇಶ್, ಯೋಗೀಶ್ ಮತ್ತು ಇತರೆ ಮೂವರು ಕುಮಾರ ಸ್ವಾಮಿಯವರೇ ಈ ಬಾರಿ ಮುಖ್ಯಮಂತ್ರಿಯಾಗೋದು ಎಂದು ಮಾತಿನ ಚಕಮಕಿ ನಡೆಸಿ ಆಕಾಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ಸಂದರ್ಭದಲ್ಲಿ ಕೊರಳಿನಲ್ಲಿ ಇದ್ದ ಬಂಗಾರದ ಸರ ಕಳುವಾಗಿದೆ ಎಂದು ಆಕಾಶ್ ದೂರಿನಲ್ಲಿ ದಾಖಲಿಸಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೆ.ಎಂ ಶೋಭ ನಿಧನ

ಕೆ.ಎಂ ಶೋಭ
    ಭದ್ರಾವತಿ, ಫೆ. ೨೨ : ನಗರದ ಹಿರಿಯ ಪತ್ರಕರ್ತ ಕೆ.ಎನ್ ರವೀಂದ್ರನಾಥ್(ಬ್ರದರ್)ರವರ ಅತ್ತಿಗೆ ಹುತ್ತಾ ಕಾಲೋನಿ ಚಂದ್ರಾಲಯ ಹಿಂಭಾಗದ ನಿವಾಸಿ ಕೆ.ಎಂ ಶೋಭ(೬೪) ನಿಧನ ಹೊಂದಿದರು.
    ೩ ಪುತ್ರರು, ಇಬ್ಬರು ಸೊಸೆಯಂದಿರು, ಮೊಮ್ಮಕ್ಕಳು ಇದ್ದರು. ಕೆ.ಎಂ ಶೋಭರವರು ಬಾಂಬೆ ಟೈಲರ್ ಎಂದು ಕರೆಯಲ್ಪಡುತ್ತಿದ್ದ ದಿವಂಗತ ಕೆ.ಎನ್ ಮಹೇಂದ್ರನಾಥ್‌ರವರ ಪತ್ನಿಯಾಗಿದ್ದಾರೆ. ಇವರ ಅಂತ್ಯಕ್ರಿಯೆ ಗುರುವಾರ ಬೆಳಿಗ್ಗೆ ಹುತ್ತಾ ಕಾಲೋನಿ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ. ಇವರ ನಿಧನಕ್ಕೆ ನಗರದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಅರಣ್ಯ ಇಲಾಖೆ ಮಣ್ಣು ದರ ನಿಗದಿಯಲ್ಲಿ ಕೋಟ್ಯಾಂತರ ರು. ಭ್ರಷ್ಟಾಚಾರ

ಮುಖ್ಯಸ್ಥರ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸಲು ಅನುಮತಿ ನೀಡಿ

ಶಿವಕುಮಾರ್, ಸಾಮಾಜಿಕ ಹೋರಾಟಗಾರ
    ಭದ್ರಾವತಿ, ಫೆ. ೨೨:  ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಅರಣ್ಯಪಡೆ ಮುಖ್ಯಸ್ಥರು) ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸಲು ಅನುಮತಿ ನೀಡುವಂತೆ ತಾಲೂಕಿನ ಉಕ್ಕುಂದ ಗ್ರಾಮದ ನಿವಾಸಿ, ಸಾಮಾಜಿಕ ಹೋರಾಟಗಾರ ಶಿವಕುಮಾರ್ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಿದ್ದಾರೆ.
    ಅರಣ್ಯ ಇಲಾಖೆಯ ಮುಂಗಡ ಗುಂಡಿ ತೆಗೆಯುವ ಕಾಮಗಾರಿಯಲ್ಲಿ ಎಸ್.ಎಸ್.ಆರ್ ದರದಲ್ಲಿ ಯಾವುದೇ ರೀತಿಯ ಮಣ್ಣು ಪರೀಕ್ಷೆ ಮಾಡಿಸದೇ ಗಟ್ಟಿ ಮಣ್ಣು ಎಂದು ಹೆಚ್ಚಿನ ದರ ಅಳವಡಿಸಿಕೊಂಡು ರಾಜ್ಯದ ಬೊಕ್ಕಸಕ್ಕೆ ಪ್ರತಿ ವರ್ಷ ನೂರಾರು ಕೋಟಿ ನಷ್ಟ ಉಂಟುಮಾಡುತ್ತಿದ್ದು, ಇದನ್ನು ಆಯಾ ವಿಭಾಗದ ಮತ್ತು ಸರ್ಕಲ್ ವ್ಯಾಪ್ತಿಯ ಸಿಸಿಎಫ್ ಮತ್ತು ಡಿಸಿಎಫ್ ಗಳನ್ನು ಮಾಹಿತಿ ಹಕ್ಕಿನಡಿ ದಾಖಲಾತಿಗಳನ್ನು ಕೇಳಿದರೆ ಮುಂಗಡ ಕಾಮಾಗಾರಿಯನ್ನು ಕೈಗೊಳ್ಳಲು ಪ್ರಧಾನ ಮುಖ್ಯ ಅರಣ್ಯ
    ಸಂರಕ್ಷಣಾಧಿಕಾರಿ(ಅರಣ್ಯ ಪಡೆ ಮುಖ್ಯಸ್ಥರು), ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಅಭಿವೃದ್ಧಿ) ಹಾಗೂ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಸಿಇಓ(ಕಾಂಪಾ), ಅರಣ್ಯ ಭವನ ಬೆಂಗಳೂರುರವರು ನಿಗದಿಪಡಿಸಿರುವ ದತ್ತಪತ್ರಗಳನ್ವಯ ದರಗಳನ್ನು ಅಳವಡಿಸಿಕೊಂಡು ಕಾಮಗಾರಿಗಳನ್ನು ನಿರ್ವಹಿಸಲಾಗಿರುತ್ತದೆ ಎಂದು ಐಎಫ್‌ಎಸ್ ಅಧಿಕಾರಿಯಾದ ಶಿವಶಂಕರ್ ಡಿಸಿಎಫ್, ಶಿವಮೊಗ್ಗ ಹಾಗೂ ಶಿವಮೊಗ್ಗ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಟಿ ಹನುಮಂತಪ್ಪರವರು ಮಾಹಿತಿ ನೀಡಿರುತ್ತಾರೆ.
    ೨೦೧೮ ರಿಂದ ೨೦೨೧ರವರೆಗಿನ ಎ.ಜೆ ಆಡಿಟ್ ವರದಿಯಲ್ಲಿ ಯಾವುದೇ ರೀತಿಯ ಮಣ್ಣು ಪರೀಕ್ಷೆ ಮಾಡದೇ ರಾಜ್ಯದ ಬೊಕ್ಕಸಕ್ಕೆ ಶಿವಮೊಗ್ಗ ಸಿಸಿಎಫ್ ವಿಭಾಗಗಳಲ್ಲಿ ಅಧಿಕಾರಿಗಳು ೨-೩ ಕೋಟಿ ಹಣ ದುರುಪಯೋಗಪಡಿಸಿಕೊಂಡಿರುವುದು ರುಜುವಾಗಿದೆ. ಅರಣ್ಯ ಇಲಾಖೆಯಲ್ಲಿ ಈ ಹಿಂದಿನಿಂದ ಸಾವಿರಾರು ಕೋಟಿ ಹಣ ದಾಖಲೆಗಳಿಲ್ಲದೆ ಅಧಿಕಾರಿಗಳು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ನಿರಂತರವಾಗಿ ನಡೆಯುತ್ತಿದೆ. ಇದನ್ನು ಸರ್ಕಾರ ಸಿಬಿಐ ತನಿಖೆಗೆ ವಹಿಸಬೇಕೆಂದು ದೂರನ್ನು ನೀಡಿದ್ದು, ಇದುವರೆಗೂ ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆಯಾಗಿಲ್ಲದಿರುವುದು ವಿಪರ್ಯಾಸದ ಸಂಗತಿಯಾಗಿದೆ.  
    ಪುನಃ ೨೦೨೨-೨೩ನೇ ಸಾಲಿನಲ್ಲಿ ಮುಂಗಡ ಗುಂಡಿ ತೆಗೆಯುವ ಕಾಮಗಾರಿಯಲ್ಲಿ ಗಟ್ಟಿ ಮಣ್ಣು ಎಂದು ನಮೂದಿಸಿಕೊಂಡು ಮಣ್ಣು ಪರೀಕ್ಷೆ ಮಾಡಿಸದೇ ಸರ್ಕಾರಿ ಹಣ ಹೆಚ್ಚಿನ ದರ ನಿಗದಿಪಡಿಸಿಕೊಂಡು ಹಣ ಲಪಟಾಯಿಸಿರುತ್ತಾರೆ. ರಾಜ್ಯದ ಅರಣ್ಯ ಇಲಾಖೆಯಲ್ಲಿ ೧೩ ಸರ್ಕಲ್‌ಗಳು ಇದ್ದು, ಇದೇ ರೀತಿಯ ಗಟ್ಟಿ ಮಣ್ಣಿನ ದರ ಅಳವಡಿಸಿಕೊಂಡಿರುವುದು ಮಾಹಿತಿ ಹಕ್ಕಿನಡಿ ದಾಖಲಾತಿಯನ್ನು ಪಡೆದಿರುತ್ತೇನೆ. ರಾಜ್ಯದ ಅರಣ್ಯ ಇಲಾಖೆಯಲ್ಲಿ ಎಸ್‌ಎಸ್‌ಆರ್ ದರ ಉಲ್ಲಂಘನೆ ಮಾಡಿ ಕರ್ನಾಟಕ ಆರ್ಥಿಕ ಸಂಹಿತೆಯ ವಿರುದ್ಧವಾಗಿ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದರೂ ಇವರದೆ ಡಾಟ ಶೀಟಿನಂತೆ ಹೆಚ್ಚಿನ ದರ ಅಳವಡಿಸಿಕೊಂಡಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳದ ರಾಜ್ಯದ ಎಲ್ಲಾ ಅಧಿಕಾರಿಗಳು ಇವರ ಆದೇಶದ ಮೇರೆಗೆ ಕೆಲಸ ನಿರ್ವಹಿಸುತ್ತಿರುವುದರಿಂದ ೨೦೨೧-೨೨-೨೩ನೇ ಸಾಲಿನ ಈ ಅಕ್ರಮಗಳಿಗೆ ಇವರೇ ನೇರ ಕಾರಣಕರ್ತರಾಗಿದ್ದು, ಅರಣ್ಯ ಪಡೆ ಮುಖ್ಯಸ್ಥರ ವಿರುದ್ಧ ಮಾನ್ಯ ಘನ ನ್ಯಾಯಾಲಯದಲ್ಲಿ ಪ್ರಶ್ನಿಸಲು ಇವರ ವಿರುದ್ಧ ದೂರು ದಾಖಲಿಸಲು ತುರ್ತಾಗಿ ಅನುಮತಿ ನೀಡುವಂತೆ ಕೋರಿದ್ದಾರೆ.  

ತಾಲೂಕು ಪಂಚಾಯಿತಿ ಬೂತ್ ಮಟ್ಟದಲ್ಲಿ ಇವಿಎಂ, ವಿವಿ ಪ್ಯಾರ್ಡ್‌ಗಳ ಜಾಗೃತಿ ಕಾರ್ಯಕ್ರಮ

ಭದ್ರಾವತಿ ತಾಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇವಿಎಂ ಮತ್ತು ವಿವಿ ಪ್ಯಾಡ್‌ಗಳ ಕಾರ್ಯವೈಕರಿ ಮತ್ತು ಉಪಯೋಗಿಸುವಿಕೆ ಕುರಿತು ಜಾಗೃತಿ ಮತ್ತು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಕಲ್ಲಹಳ್ಳಿ ಗ್ರಾಮಪಂಚಾಯಿತಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಇವಿಎಂ ಮತ್ತು ವಿವಿ ಪ್ಯಾಡ್‌ಗಳ ಪ್ರಾತ್ಯಕ್ಷತೆ ಮೂಲಕ ಮತದಾನ ಮಾಡಿಸಿ ಜಾಗೃತಿ ಮೂಡಿಸಲಾಯಿತು.
    ಭದ್ರಾವತಿ, ಫೆ. ೨೨: ರಾಜ್ಯ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ತಾಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇವಿಎಂ ಮತ್ತು ವಿವಿ ಪ್ಯಾಡ್‌ಗಳ ಕಾರ್ಯವೈಕರಿ ಮತ್ತು ಉಪಯೋಗಿಸುವಿಕೆ ಕುರಿತು ಜಾಗೃತಿ ಮತ್ತು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.
    ತಾಲೂಕಿನಲ್ಲಿ ನಗರ ಹಾಗು ಗ್ರಾಮಾಂತರ ಸೇರಿ ಒಟ್ಟು ೨೫೩ ಬೂತ್‌ಗಳಿದ್ದು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಯಾ ಬೂತ್‌ಗಳಲ್ಲಿ ಕಾರ್ಯಕ್ರಮ ಆಯೋಜಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಹಾಗು ಅರಿವು ಮೂಡಿಸಲಾಗುತ್ತಿದೆ. ಫೆ. ೯ರಿಂದ ಕಾರ್ಯಕ್ರಮ ಆಯೋಜಿಸಿಕೊಂಡು ಬರಲಾಗುತ್ತಿದ್ದು, ತಾಲೂಕಿನಲ್ಲಿ ಒಟ್ಟು ೩೯ ಗ್ರಾಮ ಪಂಚಾಯಿತಿಗಳಿವೆ. ಕಾರ್ಯಕ್ರಮ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳು, ಸಹಾಯಕ ನಿರ್ದೇಶಕರು ಹಾಗು ಚುನಾವಣಾಧಿಕಾರಿಗಳು ಮತ್ತು ಸಿಬ್ಬಂದಿಗಳು ಮುಂದಾಗಿದ್ದಾರೆ.
    ತಾಲೂಕಿನ ಕಲ್ಲಹಳ್ಳಿ ಗ್ರಾಮಪಂಚಾಯಿತಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಇವಿಎಂ ಮತ್ತು ವಿವಿ ಪ್ಯಾಡ್‌ಗಳ ಪ್ರಾತ್ಯಕ್ಷತೆ ಮೂಲಕ ಮತದಾನ ಮಾಡಿಸಿ ಜಾಗೃತಿ ಮೂಡಿಸಲಾಯಿತು. ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಅಭಿವೃದ್ಧಿ ಅಧಿಕಾರಿ ಸವಿತಾ ಮತ್ತು ಪಂಚಾಯಿತಿ ಸದಸ್ಯರು, ಕೈಗಾರಿಕಾ ತರಬೇತಿ ಸಂಸ್ಥೆಯ ಲಿಂಗರಾಜು, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.