Friday, February 21, 2025

ಫೆ.೨೭ರಂದು ಸಂವಿಧಾನ ಹಕ್ಕುಗಳ ಮಾನವ ಹಕ್ಕುಗಳ ಜಾಗೃತಿ ಕಾರ್ಯಕ್ರಮ

ಭದ್ರಾವತಿಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಮಾತನಾಡಿದರು. 
    ಭದ್ರಾವತಿ: ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಫೆ.೨೭ರಂದು ಸಂಜೆ ೪ ಗಂಟೆಗೆ ನ್ಯೂಟೌನ್ ರೋಟರಿ ಸಮುದಾಯ ಭವನದಲ್ಲಿ ಸಂವಿಧಾನ ಹಕ್ಕುಗಳ ಮಾನವ ಹಕ್ಕುಗಳ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಹೇಳಿದರು. 
    ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಿ.ಪಿ.ಐ ರಾಜ್ಯ ಮಂಡಳಿ ಸದಸ್ಯರು, ಹಿರಿಯ ಕಾರ್ಮಿಕ ಮುಖಂಡರಾದ ಡಿ.ಸಿ ಮಾಯಣ್ಣ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ನಿವೃತ್ತ ಪ್ರಾಧ್ಯಾಪಕ ಪ್ರೊ. ಎಂ. ಚಂದ್ರಶೇಖರಯ್ಯ ಉಪನ್ಯಾಸ ನೀಡಲಿದ್ದು, ಮಲೆನಾಡು ರೈತರ ಹೋರಾಟ ಸಮಿತಿ ಸಂಚಾಲಕ ತಿ.ನಾ ಶ್ರೀನಿವಾಸ್, ಸಮಾಜ ಕಲ್ಯಾಣ ಇಲಾಖೆ ನಿವೃತ್ತ ವ್ಯವಸ್ಥಾಪಕ ಎನ್. ಕೃಷ್ಣಪ್ಪ, ಡಿಎಸ್‌ಎಸ್ ಜಿಲ್ಲಾ ಪ್ರಧಾನ ಸಂಚಾಲಕ ಟಿ.ಎಚ್ ಹಾಲೇಶಪ್ಪ, ನ್ಯಾಯವಾದಿ ಟಿ. ಚಂದ್ರೇಗೌಡ, ಎಂಪಿಎಂ ನೊಂದ ಕಾರ್ಮಿಕರ ಹೋರಾಟ ಸಮಿತಿ ಅಧ್ಯಕ್ಷ ಟಿ.ಜಿ ಬಸವರಾಜಯ್ಯ, ಮಾನವ ಹಕ್ಕುಗಳ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಐ.ಎಲ್ ಅರುಣ್ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. 
    ಉಳಿದಂತೆ ಡಿಎಸ್‌ಎಸ್ ರಾಜ್ಯ ಮುಖಂಡರಾದ ಸತ್ಯ ಭದ್ರಾವತಿ ಮತ್ತು ಜ್ಯೂನಿಯರ್ ವಿಷ್ಣುವರ್ಧನ್ ಎಂದೇ ಗುರುತಿಸಿಕೊಂಡಿರುವ ಕಲಾವಿದ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಅಪೇಕ್ಷ ಮಂಜುನಾಥ್ ಅವರ ೬೦ನೇ ವರ್ಷದ ಜನ್ಮ ದಿನಾಚರಣೆ ಅಂಗವಾಗಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು. ಅಲ್ಲದೆ ನಗರದ ಸುಮಾರು ೩೦ಕ್ಕೂ ಹೆಚ್ಚು ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದರು. 
    ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಐ.ಎಲ್ ಅರುಣ್ ಕುಮಾರ್, ಬ್ರಹ್ಮಲಿಂಗಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಡಿಎಫ್‌ಓ ಕಛೇರಿ ಮುಂಭಾಗ ಜೆಡಿಎಸ್ ಪ್ರತಿಭಟನೆ

ಅರಣ್ಯ ಇಲಾಖೆ ವತಿಯಿಂದ ರೈತರನ್ನು ಒಕ್ಕಲೆಬ್ಬಿಸುವುದನ್ನು ವಿರೋಧಿಸಿ ಭದ್ರಾವತಿಯಲ್ಲಿ ಜಾತ್ಯತೀತ ಜನತಾದಳ ತಾಲೂಕು ಶಾಖೆ ವತಿಯಿಂದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. 
    ಭದ್ರಾವತಿ : ಅರಣ್ಯ ಇಲಾಖೆ ವತಿಯಿಂದ ರೈತರನ್ನು ಒಕ್ಕಲೆಬ್ಬಿಸುವುದನ್ನು ವಿರೋಧಿಸಿ ಜಾತ್ಯತೀತ ಜನತಾದಳ ತಾಲೂಕು ಶಾಖೆ ವತಿಯಿಂದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.  
    ತಾಲೂಕಿನ ರೈತರು ಕಳೆದ ಸುಮಾರು ೫೦-೬೦ ವರ್ಷಗಳಿಂದ ಎಲ್ಲಾ ದಾಖಲೆಗಳನ್ನು ಹೊಂದಿ ಸಾಗುವಳಿ ಮಾಡಿಕೊಂಡು ಬರುತ್ತಿದ್ದು, ಇದೀಗ ಅರಣ್ಯ ಇಲಾಖೆಯವರು ನೋಟಿಸ್ ನೀಡುವ ಮೂಲಕ ವಿನಾಕಾರಣ ಉಪವಿಭಾಗೀಯ ದಂಡಾಧಿಕಾರಿಗಳ ನ್ಯಾಯಾಲಯಕ್ಕೆ ಅಲೆದಾಡುವಂತೆ ಮಾಡಿದ್ದು, ಇದರಿಂದ ರೈತರು ಆತಂಕಗೊಂಡಿದ್ದಾರೆ. ತಕ್ಷಣ ರೈತರಿಗೆ ನೀಡಿರುವ ನೋಟಿಸ್ ಹಿಂಪಡೆಯಬೇಕೆಂದು ಆಗ್ರಹಿಸಲಾಯಿತು. 
    ಸರ್ವೋಚ್ಛ ನ್ಯಾಯಾಲಯವೇ ರೈತರಿಗೆ ಯಾವುದೇ ತೊಂದರೆ ಕೊಡಬಾರದು ಎಂದು ಹೇಳಿದೆ. ಹೀಗಿರುವಾಗ ೫೦ ವರ್ಷಗಳಿಂದ ಸುಮ್ಮನೆ ಇದ್ದು, ಇದೀಗ ಏಕಾಏಕಿ ನೋಟಿಸ್ ನೀಡುವ ಮೂಲಕ ಒಕ್ಕಲೆಬ್ಬಿಸಲು ಯತ್ನಿಸುತ್ತಿರುವುದು ಸರಿಯಲ್ಲ. ಅರಣ್ಯ ಮತ್ತು ಕಂದಾಯ ಇಲಾಖೆಗಳ ಜಾಣ ಕುರುಡುತನಕ್ಕೆ ರೈತರೇ ತಕ್ಕ ಪಾಠ ಕಲಿಸಲಿದ್ದಾರೆ. ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ರೈತರಿಗೆ ನೀಡಿರುವ ನೋಟಿಸ್ ಹಿಂಪಡೆಯುವ ಮೂಲಕ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಲಾಯಿತು. 
    ಪ್ರಮುಖರಾದ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಶಾರದ ಪೂರ್‍ಯಾನಾಯ್ಕ, ಪಕ್ಷದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಸತೀಶ್, ನಗರ ಅಧ್ಯಕ್ಷ ಆರ್. ಕರುಣಾಮೂರ್ತಿ, ಗ್ರಾಮಾಂತರ ಅಧ್ಯಕ್ಷ ಧರ್ಮಕುಮಾರ್, ಮುಖಂಡರಾದ ಟಿ. ಚಂದ್ರೇಗೌಡ, ಸುರೇಶ್, ಜಯರಾಮ್, ಡಿ. ಆನಂದ್, ಎಂ.ಎ ಅಜಿತ್, ಗೊಂದಿ ಜಯರಾಮ್ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು, ರೈತರು, ಕೃಷಿ ಕೂಲಿ ಕಾರ್ಮಿಕರು, ಸ್ಥಳೀಯ ಸಂಸ್ಥೆಗಳ ಹಾಲಿ ಮತ್ತು ಮಾಜಿ ಚುನಾಯಿತ ಪ್ರತಿನಿಧಿಗಳು, ಮಹಿಳೆಯರು, ಮುಖಂಡರು, ಅಭಿಮಾನಿಗಳು ಪಾಲ್ಗೊಂಡಿದ್ದರು. 

ಅಧಿಕೃತ, ಅನಧಿಕೃತ ಆಸ್ತಿಗಳಿಗೆ ಇ-ಖಾತಾ ಅಭಿಯಾನ

ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಜೆ.ಸಿ ಗೀತಾ ರಾಜ್‌ಕುಮಾರ್ ಅಧ್ಯಕ್ಷತೆಯಲ್ಲಿ ಧಿಕೃತ, ಅನಧಿಕೃತ ಆಸ್ತಿಗಳಿಗೆ ಇ-ಖಾತಾ ಅಭಿಯಾನ ಕುರಿತು ಸಭೆ ನಡೆಯಿತು. 
    ಭದ್ರಾವತಿ : ಸರ್ಕಾರ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅನಧಿಕೃತ ಆಸ್ತಿಗಳಿಗೆ ಖಾತಾ ನೀಡಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕಾಯ್ದೆಗಳಿಗೆ ತಿದ್ದುಪಡಿ ಮಾಡಿದ್ದು, ಈ ಹಿನ್ನಲೆಯಲ್ಲಿ ಇ-ಖಾತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಮೂಲಕ ನಗರಸಭೆ ವ್ಯಾಪ್ತಿಯಲ್ಲಿ ಅಧಿಕೃತ ಮತ್ತು ಅನಧಿಕೃತ ಆಸ್ತಿಗಳಿಗೆ ತಂತ್ರಾಂಶದಲ್ಲಿ ಇ-ಖಾತಾ ನೀಡಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳುವಂತೆ ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜ್‌ಕುಮಾರ್ ಮನವಿ ಮಾಡಿದರು. 
    ಈ ಕುರಿತು ಗುರುವಾರ ನಗರಸಭೆ ಅಧ್ಯಕ್ಷರ ಕಛೇರಿ ನಡೆದ ಸಭೆಯಲ್ಲಿ ಮಾಹಿತಿ ನೀಡಿದ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್, ನಗರಸಭೆ ವ್ಯಾಪ್ತಿಯಲ್ಲಿ ೧೦ ಸೆಪ್ಟಂಬರ್ ೨೦೨೪ರ ಪೂರ್ವದಲ್ಲಿ ನೋಂದಣಿಯಾದ ಅನಧಿಕೃತ ಆಸ್ತಿಗಳಿಗೆ ಇ-ಖಾತಾ ನೀಡಲು ಅವಕಾಶ ನೀಡಲಾಗಿದೆ. ಅಧಿಕೃತ ಆಸ್ತಿಗಳಿಗೆ ಎ-ರಿಜಸ್ಟರ್ ಮತ್ತು ಅನಧಿಕೃತ ಆಸ್ತಿಗಳಿಗೆ ಬಿ-ರಿಜಿಸ್ಟರ್ ನಿರ್ವಹಿಸಲಾಗುವುದು. ೧೦ ಸೆಪ್ಟಂಬರ್ ೨೦೨೪ರ ಪೂರ್ವದಲ್ಲಿ ವಹಿವಾಟು ಮಾಡಲಾದ ಅನಧಿಕೃತ ಆಸ್ತಿಗಳಿಗೆ (ಖಾಲಿ ನಿವೇಶನಗಳು ಸೇರಿ) ನಮೂನೆ ೨ಎ/೩ಎ ನೀಡಲಾಗುವುದು. ಅನಧಿಕೃತ ಆಸ್ತಿಗಳಿಗೆ ಮೊದಲನೇ ಬಾರಿಗೆ ತೆರಿಗೆಯ ಎರಡು ಪಟ್ಟು ಶುಲ್ಕ ವಿಧಿಸಲಾಗುವುದು ಎಂದರು. 
    ಇ-ಖಾತಾ ಪಡೆಯಲು ಸ್ವೀಕೃತವಾದ ಅರ್ಜಿಯನ್ನು ಇ-ಆಸ್ತಿ ತಂತ್ರಾಂಶದಲ್ಲಿ ಸಂಗ್ರಹಣೆ ಮಾಡಿಕೊಂಡು ೭ ದಿನಗಳೊಳಗಾಗಿ ತಂತ್ರಾಂಶದಲ್ಲಿ ನಿಗದಿಪಡಿಸಲಾಗಿರುವ ಕಾರ್ಯ ಹರಿವಿನಲ್ಲಿ ನಿರ್ವಹಿಸಿ ಇ-ಖಾತಾ ನೀಡಲಾಗುವುದು. ಇ-ಖಾತಾ ನಮೂನೆ ೨/೩ ಹಾಗು ೨ಎ/೩ಎ ನೀಡಲು ನಿಗದಿಪಡಿಸಲಾಗಿರುವ ಶುಲ್ಕ ಮಾತ್ರ ಪಾವತಿಸಬೇಕಾಗಿದೆ. ಈ ಪ್ರಕಟಣೆ ದಿನಾಂಕದಿಂದ ಮೂರು ತಿಂಗಳೊಳಗೆ ದಾಖಲೆಗಳನ್ನು ಸಲ್ಲಿಸಿ ಇ-ಖಾತಾ ಪಡೆಯಬಹುದಾಗಿದೆ ಎಂದರು. 
    ಅಧಿಕೃತ ಆಸ್ತಿಗೆ ಇ-ಖಾತಾ ಪಡೆಯಲು ಆಸ್ತಿಗೆ ಸಂಬಂಧಿಸಿದ ಸ್ವತ್ತಿನ ಮಾಲೀಕತ್ವ ಸಾಬೀತುಪಡಿಸುವ ನೋಂದಾಯಿತ ಮಾರಾಟ ಪತ್ರಗಳು/ದಾನ ಪತ್ರ/ವಿಭಾಗ ಪತ್ರಗಳು/ಸರ್ಕಾರ ಅಥವಾ ಸರ್ಕಾರದ ನಿಗಮ ಮಂಡಳಿಗಳಿಂದ ನೀಡಲಾದ ಹಕ್ಕುಪತ್ರಗಳು/ ಮಂಜೂರಾತಿ ಪತ್ರಗಳು/ ಕಂದಾಯ ಇಲಾಖೆಯಿಂದ ೯೪ ಸಿ.ಸಿ. ಅಡಿ ನೀಡಲಾದ ಹಕ್ಕುಪತ್ರ. ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾದ ದೃಢೀಕೃತ ಪ್ರತಿ ಮತ್ತು ನಿವೇಶನ ಬಿಡುಗಡೆ ಪತ್ರ. ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ. ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಶೀದಿ. ಮಾಲೀಕರ ಫೋಟೋ ಮತ್ತು ಸ್ವತ್ತಿನ ಫೋಟೋ ಹಾಗು ಮಾಲೀಕರ ಗುರುತಿನ ದಾಖಲೆ ಪ್ರತಿ ಸಲ್ಲಿಸಬೇಕು ಎಂದರು. 
    ಅನಧಿಕೃತ ಆಸ್ತಿಗೆ ಇ-ಖಾತಾ ಪಡೆಯಲು ಆಸ್ತಿಗೆ ಸಂಬಂಧಿಸಿದ ಸ್ವತ್ತಿನ ಮಾಲೀಕತ್ವ ಸಾಬೀತು ಪಡಿಸುವ ೧೦ ಸೆಪ್ಟಂಬರ್ ೨೦೨೪ರ ಪೂರ್ವದಲ್ಲಿ ನೋಂದಾಯಿತ ಮಾರಾಟ ಪತ್ರಗಳು/ ದಾನ ಪತ್ರ/ವಿಭಾಗ ಪತ್ರಗಳು/ಹಕ್ಕು ಖುಲಾಸೆ ಪತ್ರಗಳು. ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ. ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಶೀದಿ. ಮಾಲೀಕರ ಫೋಟೋ ಮತ್ತು ಸ್ವತ್ತಿನ ಫೋಟೋ. ಮಾಲೀಕರ ಗುರುತಿನ ದಾಖಲೆ ಪ್ರತಿಗಳನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ನಗರಸಭೆ ಕಛೇರಿಯ ಕೆಲಸದ ವೇಳೆಯಲ್ಲಿ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದರು. 
    ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ಕಂದಾಯಾಧಿಕಾರಿ ರಮೇಶ್ ಉಪಸ್ಥಿತರಿದ್ದರು.

ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನ : ಆರೋಪಿ ಕಾಲಿಗೆ ಗುಂಡು

ಆರೋಪಿ, ರೌಡಿ ಶೀಟರ್ ಗುಂಡಾ ಅಲಿಯಾಸ್ ರವಿ 
    ಭದ್ರಾವತಿ :  ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯೋರ್ವನ ಕಾಲಿಗೆ ಗುಂಡು ಹಾರಿಸಿರುವ ಘಟನೆ ಶುಕ್ರವಾರ ನಡೆದಿದೆ. 
    ನಗರದ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸರು ಆರೋಪಿ, ರೌಡಿ ಶೀಟರ್ ಗುಂಡಾ ಅಲಿಯಾಸ್ ರವಿ ಬಂಧಿಸಲು ತೆರಳಿದ್ದಾಗ ಈತ ಪೊಲೀಸ್ ಸಿಬ್ಬಂದಿ(ಕಾನ್ಸ್‌ಸ್ಟೇಬಲ್) ಆದರ್ಶ್ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಈ ಸಂದರ್ಭದಲ್ಲಿ ಠಾಣೆ ಉಪ ನಿರೀಕ್ಷಕ ಕೃಷ್ಣ ಕುಮಾರ್ ಮಾನೆ  ಕಾಲಿಗೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. 
    ಗಾಯಗೊಂಡಿರುವ ಆರೋಪಿ ಗುಂಡಾ ಮತ್ತು ಹಲ್ಲೆಗೊಳಗಾಗಿರುವ ಪೊಲೀಸ್ ಸಿಬ್ಬಂದಿ ಆದರ್ಶ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಗುಂಡಾ ವಿರುದ್ಧ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯಲ್ಲಿ ೩೦೭ ಸೆಕ್ಷನ್ ಅಡಿ ೪ ಪ್ರಕರಣಗಳು ದಾಖಲಾಗಿವೆ. 

Thursday, February 20, 2025

ಹಾಡುಹಗಲೇ ಮನೆ ಬೀಗ ಮುರಿದು ಲಕ್ಷಾಂತರ ರು. ಚಿನ್ನಾಭರಣ, ನಗದು ಕಳ್ಳತನ

    ಭದ್ರಾವತಿ: ಹಾಡುಹಗಲೇ ಮನೆಯ ಬೀಗ ಮುರಿದು ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ಹಾಗು ನಗದು ಕಳ್ಳತನ ಮಾಡಿರುವ ಘಟನೆ ನಗರದ ಬಿ.ಎಚ್ ರಸ್ತೆ, ಜೇಡಿಕಟ್ಟೆಯಲ್ಲಿ ನಡೆದಿದೆ. 
    ಜೇಡಿಕಟ್ಟೆ ವೇಬ್ರಿಡ್ಜ್ ಜಂಡಾಕಟ್ಟೆ ಸಮೀಪದ ಪೆಟ್ರೋಲ್ ಟ್ಯಾಂಕರ್ ಚಾಲಕ ತಾಜುದ್ದೀನ್ ಎಂಬುವರ ಮನೆಯ ಬಾಗಿಲಿನ ಬೀಗ ಮುರಿದು ಕಳ್ಳತನ ಮಾಡಲಾಗಿದೆ. ತಾಜುದ್ದೀನ್ ಕೆಲಸದ ನಿಮಿತ್ತ ಹೊರಹೋಗಿದ್ದು, ಉಳಿದಂತೆ ಇವರ ಪುತ್ರಿ ಶಾಲೆಗೆ ಹೋಗಿದ್ದು, ಮನೆಯ ಒಡತಿ ಅಮೀನಾ ಬುಧವಾರ ಮಧ್ಯಾಹ್ನ ೧೨.೩೦ರ ಸಮಯದಲ್ಲಿ ಮನೆಗೆ ಬೀಗ ಹಾಕಿಕೊಂಡು ಪೇಟೆಗೆ ಹೋಗಿದ್ದರು. ಸಂಜೆ ಮನೆಗೆ ವಾಪಸ್ ಬಂದಾಗ ಗೇಟ್‌ಗೆ ಹಾಕಿದ್ದ ಬೀಗ ಹಾಗೇ ಇದೆ. ಒಳ ಪ್ರವೇಶಿಸಿದಾಗ ಮುಂಬಾಗಿಲ ಬೀಗವನ್ನು ಒಡೆದು ಹಾಕಿ ಕಳ್ಳತನ ಮಾಡಿರುವುದು ಕಂಡು ಬಂದಿದೆ. 
    ಸುಮಾರು ೫೪ ಗ್ರಾಂ ತೂಕದ ನಕ್ಲೇಸ್, ಲಾಂಗ್ ಚೈನ್, ಜುಮ್ಕಿ ಮತ್ತು ಕಿವಿ ಓಲೆ ಸೇರಿದಂತೆ ಚಿನ್ನದ ಆಭರಣಗಳು ಮತ್ತು ಸುಮಾರು ೮೦ ಗ್ರಾಂ. ತೂಕದ ಬೆಳ್ಳಿಯ ಆಭರಣಗಳು ಹಾಗೂ ೮೦ ಸಾವಿರ ನಗದು ಕಳ್ಳತನ ಮಾಡಿರುವುದಾಗಿ ತಿಳಿದು ಬಂದಿದೆ. 
    ಸ್ಥಳಕ್ಕೆ ಶ್ವಾನದಳ ಹಾಗು ಬೆರಚ್ಚು ತಜ್ಞರು ತೆರಳಿ ತಪಾಸಣೆ ನಡೆಸಿದ್ದು, ನಗರದ ವೃತ್ತ ನಿರೀಕ್ಷಕ ಶ್ರೀಶೈಲಕುಮಾರ್ ಮತ್ತು ನ್ಯೂಟೌನ್ ಠಾಣೆ ಉಪ ನಿರೀಕ್ಷಕ ರಮೇಶ್ ಪರಿಶೀಲನೆ ನಡೆಸಿದರು. ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.  

ಡಿಎಫ್‌ಓ ಕಛೇರಿ ಮುಂಭಾಗ ಫೆ.೨೧ರಂದು ಜೆಡಿಎಸ್ ಪ್ರತಿಭಟನೆ

ಆರ್. ಕರುಣಾಮೂರ್ತಿ 
    ಭದ್ರಾವತಿ : ಅರಣ್ಯ ಇಲಾಖೆ ವತಿಯಿಂದ ರೈತರನ್ನು ಒಕ್ಕಲೆಬ್ಬಿಸುವುದನ್ನು ವಿರೋಧಿಸಿ ಫೆ.೨೧ರಂದು ಬೆಳಿಗ್ಗೆ ೧೦.೩೦ಕ್ಕೆ ಜಾತ್ಯತೀತ ಜನತಾದಳ ತಾಲೂಕು ಶಾಖೆ ವತಿಯಿಂದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. 
    ತಾಲೂಕಿನ ರೈತರು ಕಳೆದ ಸುಮಾರು ೫೦-೬೦ ವರ್ಷಗಳಿಂದ ಎಲ್ಲಾ ದಾಖಲೆಗಳನ್ನು ಹೊಂದಿ ಸಾಗುವಳಿ ಮಾಡಿಕೊಂಡು ಬರುತ್ತಿದ್ದು, ಇದೀಗ ಅರಣ್ಯ ಇಲಾಖೆಯವರು ನೋಟಿಸ್ ನೀಡುವ ಮೂಲಕ ವಿನಾಕಾರಣ ಉಪವಿಭಾಗೀಯ ದಂಡಾಧಿಕಾರಿಗಳ ನ್ಯಾಯಾಲಯಕ್ಕೆ ಅಲೆದಾಡುವಂತೆ ಮಾಡಿದ್ದು, ಇದರಿಂದ ರೈತರು ಆತಂಕಗೊಂಡಿದ್ದಾರೆ. 
    ರೈತರನ್ನು ಒಕ್ಕಲೆಬ್ಬಿಸುವುದನ್ನು ವಿರೋಧಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು, ರೈತರು, ಕೃಷಿ ಕೂಲಿ ಕಾರ್ಮಿಕರು, ಸ್ಥಳೀಯ ಸಂಸ್ಥೆಗಳ ಹಾಲಿ ಮತ್ತು ಮಾಜಿ ಚುನಾಯಿತ ಪ್ರತಿನಿಧಿಗಳು, ಮಹಿಳೆಯರು, ಮುಖಂಡರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರತಿಭಟನೆ ಯಶಸ್ವಿಗೊಳಿಸುವಂತೆ ಪಕ್ಷದ ಹಿರಿಯ ಮುಖಂಡ, ನಗರ ಘಟಕದ ಅಧ್ಯಕ್ಷ ಆರ್. ಕರುಣಾಮೂರ್ತಿ ಕೋರಿದ್ದಾರೆ. 

ದ್ವಿಚಕ್ರ ವಾಹನದಲ್ಲಿ ಮಕ್ಕಳನ್ನು ಕರೆದೊಯ್ಯಲು ಕಡ್ಡಾಯವಾಗಿ ಸುರಕ್ಷತಾ ಕ್ರಮಗಳನ್ನು ಪಾಲಿಸಿ : ಶಾಂತಲ

ದ್ವಿಚಕ್ರ ವಾಹನದಲ್ಲಿ ಮಕ್ಕಳನ್ನು ಸುರಕ್ಷಿತವಾಗಿ ಕರೆದೊಯ್ಯುವ ಸಂಬಂಧ ಭದ್ರಾವತಿ ನ್ಯೂಟೌನ್ ಸೆಂಟ್ ಚಾರ್ಲ್ಸ್ ಕಿಂಡರ್ ಗಾರ್ಡನ್ ಶಾಲೆಯಲ್ಲಿ ಶಾಲೆಯ ಶಿಕ್ಷಕರು ಮತ್ತು ಮಕ್ಕಳಿಗೆ ಠಾಣೆ ಉಪ ನಿರೀಕ್ಷಕಿ ಶಾಂತಲ ಜಾಗೃತಿ ಮೂಡಿಸಿದರು.
    ಭದ್ರಾವತಿ : ಇತ್ತೀಚೆಗೆ ರಸ್ತೆ ಅಪಘಾತಗಳು ಹೆಚ್ಚಾಗುತ್ತಿದ್ದು, ಅಪಘಾತದಲ್ಲಿ ತೀವ್ರ ಗಾಯಗೊಂಡು ಸಾವನ್ನಪ್ಪಿತ್ತಿರುವವರ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಅದರಲ್ಲೂ ದ್ವಿಚಕ್ರ ವಾಹನದಲ್ಲಿ ಸಂಚರಿಸುವಾಗ ಅಪಘಾತಗಳು ಸಂಭವಿಸಿ ಹೆಚ್ಚಾಗಿ ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಇದನ್ನು ತಪ್ಪಿಸಲು ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಸಂಚಾರಿ ಠಾಣೆ ಉಪ ನಿರೀಕ್ಷಕಿ ಶಾಂತಲ ಮನವಿ ಮಾಡಿದ್ದಾರೆ. 
    ಅವರು ನಗರದ ನ್ಯೂಟೌನ್ ಸೆಂಟ್ ಚಾರ್ಲ್ಸ್ ಕಿಂಡರ್ ಗಾರ್ಡನ್ ಶಾಲೆಯಲ್ಲಿ ಈ ಕುರಿತು ಶಾಲೆಯ ಶಿಕ್ಷಕರು ಮತ್ತು ಮಕ್ಕಳಿಗೆ ಜಾಗೃತಿ ಮೂಡಿಸಿದರು. ದ್ವಿಚಕ್ರ ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಬಳಸುವಂತೆ ಕಾನೂನು ರೂಪಿಸಲಾಗಿದೆ. ಈ ನಡುವೆ ಮಕ್ಕಳ ಸುರಕ್ಷತೆ ಸಹ ಬಹಳ ಮುಖ್ಯವಾಗಿದ್ದು, ೯ ತಿಂಗಳಿನಿಂದ ೪ ವರ್ಷದೊಳಗಿನ ಮಕ್ಕಳಿಗೂ ಸಹ ಕಡ್ಡಾಯವಾಗಿ ಹೆಲ್ಮೆಟ್ ಬಳಸಬೇಕು. ಜೊತೆಗೆ ದೊಡ್ಡವರು ಮಕ್ಕಳನ್ನು ಸುತ್ತಿಕೊಂಡು ಕಟ್ಟಿಕೊಳ್ಳುವ ಸುರಕ್ಷತಾ ವಿಧಾನ (ಸೇಫ್ಟಿ ಹಾರ್ನೆಸ್) ಬಳಸಬೇಕು.  ಇದರಿಂದ ಅಪಘಾತ ಪ್ರಕರಣಗಳಲ್ಲಿ ಮಕ್ಕಳು ಸಾವನ್ನಪ್ಪುವುದು ಕಡಿಮೆಯಾಗಲಿದೆ ಎಂದರು. 
    ದ್ವಿಚಕ್ರ ವಾಹನದಲ್ಲಿ ಮಕ್ಕಳನ್ನು ಸುರಕ್ಷಿತವಾಗಿ ಕರೆದೊಯ್ಯುವ ಸಂಬಂಧ ಇಲಾಖೆಗೆ ಮಾರ್ಗದರ್ಶಿ ಸೂಚಿ ಬಂದಿದ್ದು, ಅದರಂತೆ ಎಲ್ಲೆಡೆ ಜಾಗೃತಿ ಮೂಡಿಸಲಾಗುತ್ತಿದೆ. ಸಾರ್ವಜನಿಕರು ಈ ಮಾರ್ಗಸೂಚಿಯಂತೆ ನಡೆದುಕೊಳ್ಳುವ ಮೂಲಕ ಅಪಘಾತ ಪ್ರಕರಣಗಳನ್ನು ನಿಯಂತ್ರಿಸುವ ಕಾರ್ಯದಲ್ಲಿ ಕೈಜೋಡಿಸುವಂತೆ ಕೋರಿದ್ದಾರೆ.