ಸೋಮವಾರ, ಅಕ್ಟೋಬರ್ 27, 2025

ಅ.೩೧ರಂದು ಇಂದಿರಾಗಾಂಧಿ ಪುಣ್ಯ ತಿಥಿ ಆಚರಣೆ : ಒಳರೋಗಿಗಳಿಗೆ ಹಣ್ಣು-ಬ್ರೆಡ್ ವಿತರಣೆ

    ಭದ್ರಾವತಿ : ಜಿಲ್ಲಾ ಕಾಂಗ್ರೆಸ್ ಸಮಿತಿ ಸೇವಾದಳ ತಾಲೂಕು ಘಟಕದಿಂದ ಅ.೩೧ರಂದು ದೇಶದ ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿಯವರ ಪುಣ್ಯ ತಿಥಿ ಆಯೋಜಿಸಲಾಗಿದೆ. 
    ಪ್ರತಿ ವರ್ಷ ಸೇವಾದಳ ಘಟಕದಿಂದ ಇಂದಿರಾಗಾಂಧಿಯವರ ಪುಣ್ಯ ತಿಥಿ ಆಚರಿಸಿಕೊಂಡು ಬರಲಾಗುತ್ತಿದ್ದು, ಈ ಬಾರಿ ಸಹ ಅಂದು ಬೆಳಿಗ್ಗೆ ೯.೩೦ಕ್ಕೆ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಹಣ್ಣು ಮತ್ತು ಬ್ರೆಡ್ ವಿತರಣೆ ನಡೆಯಲಿದೆ. 
    ಪಕ್ಷದ ಮುಖಂಡರು, ಸೇವಾದಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಸೇವಾದಳ ತಾಲೂಕು ಘಟಕದ ಅಧ್ಯಕ್ಷ ಕೆ.ಜೆ ಹನುಮಂತಯ್ಯ ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಕುಮಾರ್ ಕೋರಿದ್ದಾರೆ. 

ಅ.೨೯ರಂದು ವಿದ್ಯುತ್ ವ್ಯತ್ಯಯ

    ಭದ್ರಾವತಿ : ಮೆಸ್ಕಾಂ ಮಾಚೇನಹಳ್ಳಿ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗ ನಿರ್ವಹಣೆ ಹಾಗು ಅಭಿವೃದ್ಧಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಘಟಕ-೫ರ ಶಾಖಾ ವ್ಯಾಪ್ತಿಯ ಪ್ರದೇಶಗಳಲ್ಲಿ ಅ.೨೯ರ ಬುಧವಾರ ಬೆಳಿಗ್ಗೆ ೯.೩೦ ರಿಂದ ಸಂಜೆ ೬ ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 
    ಮಾಚೇನಹಳ್ಳಿ ಕೈಗಾರಿಕಾ ಪ್ರದೇಶ, ಡೈರಿ ವೃತ್ತ, ಶಿವರಾಮನಗರ, ವಿಶ್ವೇಶ್ವರಾಯ ನಗರ, ಜೇಡಿಕಟ್ಟೆ, ಜೇಡಿಕಟ್ಟೆ-ಹೊಸೂರು, ಸಿರಿಯೂರು, ವೀರಾಪುರ, ಕಲ್ಲಹಳ್ಳಿ, ಸಂಕ್ಲೀಪುರ, ಹಾಗಲಮನೆ, ಹುಲಿರಾಮನಕೊಪ್ಪ, ಸಿರಿಯೂರು ತಾಂಡ, ಸಿರಿಯೂರು ಕ್ಯಾಂಪ್ ಸೇರಿದಂತೆ ಇತ್ಯಾದಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ. 

ಭಾನುವಾರ, ಅಕ್ಟೋಬರ್ 26, 2025

ಮಹಾದ್ವಾರದ ಮೇಲ್ಭಾಗದಲ್ಲಿ ಗಣಪತಿ ಮೂರ್ತಿ ನಿರ್ಮಾಣಕ್ಕೆ ೫ ಲಕ್ಷ ರು. ಅನುದಾನ

ಭದ್ರಾವತಿ ನಗರದ ಹೊಸಮನೆ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರಸೇನಾ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ರಂಗಪ್ಪ ವೃತ್ತದಲ್ಲಿ ನಿರ್ಮಿಸಲಾಗಿರುವ ಮಹಾದ್ವಾರದ ಮೇಲ್ಭಾಗದಲ್ಲಿ ಗಣಪತಿ ಮೂರ್ತಿ ನಿರ್ಮಾಣ ಕಾರ್ಯಕ್ಕೆ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ೫ ಲಕ್ಷ ರು. ಅನುದಾನ ನೀಡಿದ್ದಾರೆ. 
    ಭದ್ರಾವತಿ: ನಗರದ ಹೊಸಮನೆ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರಸೇನಾ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ರಂಗಪ್ಪ ವೃತ್ತದಲ್ಲಿ ನಿರ್ಮಿಸಲಾಗಿರುವ ಮಹಾದ್ವಾರದ ಮೇಲ್ಭಾಗದಲ್ಲಿ ಗಣಪತಿ ಮೂರ್ತಿ ನಿರ್ಮಾಣ ಕಾರ್ಯಕ್ಕೆ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ೫ ಲಕ್ಷ ರು. ಅನುದಾನ ನೀಡಿದ್ದಾರೆ. 
    ಶಾಸಕರ ಗೃಹ ಕಚೇರಿಯಲ್ಲಿ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರಸೇನಾ ಶ್ರೀ ವಿನಾಯಕ ಸೇವಾ ಸಮಿತಿ ಅಧ್ಯಕ್ಷ ಹಾಗೂ ನಗರಸಭೆ ಹಿರಿಯ ಸದಸ್ಯ ವಿ. ಕದೀರೇಶ್ ಮತ್ತು ಮಹಾಸಭಾ ಪದಾಧಿಕಾರಿಗಳಿಗೆ ಶಾಸಕರು ೫ ಲಕ್ಷ ರು. ಚೆಕ್ ವಿತರಿಸಿದರು. 
ಚೆಕ್ ಸ್ವೀಕರಿಸಿದ ವಿ.ಕದೀರೇಶ್ ಮತ್ತು ಪದಾಧಿಕಾರಿಗಳು ಸಂಗಮೇಶ್ವರ್ ಅವರಿಗೆ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಬಿ. ಎಸ್ ಗಣೇಶ್, ನಗರಸಭೆ ಸದಸ್ಯ ಚನ್ನಪ್ಪ, ಬ್ಲಾಕ್ ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಎಚ್ ಎಲ್ ಷಡಾಕ್ಷರಿ, ನಗರ ಓಬಿಸಿ ಅಧ್ಯಕ್ಷ ಬಿ. ಗಂಗಾಧರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷರಾಗಿ ಕುಮಾರಸ್ವಾಮಿ ಎರಡನೇ ಬಾರಿಗೆ ಆಯ್ಕೆ

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವಿಐಎಸ್‌ಎಲ್ ಎಂಪ್ಲಾಯಿಸ್ ಅಸೋಸಿಯೇಷನ್(ಎಐಟಿಯುಸಿ) ಗುತ್ತಿಗೆ ಕಾರ್ಮಿಕರ ಸಂಘಟನೆಗೆ ಭಾನುವಾರ ನಡೆದ ಚುನಾವಣೆಯಲ್ಲಿ ನೂತನ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ. 
    ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವಿಐಎಸ್‌ಎಲ್ ಎಂಪ್ಲಾಯಿಸ್ ಅಸೋಸಿಯೇಷನ್(ಎಐಟಿಯುಸಿ) ಗುತ್ತಿಗೆ ಕಾರ್ಮಿಕರ ಸಂಘಟನೆಗೆ ಭಾನುವಾರ ನಡೆದ ಚುನಾವಣೆಯಲ್ಲಿ ನೂತನ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ. 
    ಸಂಘಟನೆಯ ನ್ಯೂಟೌನ್ ಕಛೇರಿಯಲ್ಲಿ ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೪ ಗಂಟೆವರೆಗೆ ಮತದಾನ ನಡೆದಿದ್ದು, ನಂತರ ಮತ ಎಣಿಕೆ ನಡೆಯಿತು. ಮುಂದಿನ ೩ ವರ್ಷಗಳ ಅವಧಿಗೆ ಎರಡನೇ ಬಾರಿಗೆ ಅಧ್ಯಕ್ಷರಾಗಿ ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿಯಾಗಿ ಸತೀಶ ಅರುಣಾಚಲಂ, ಕಾರ್ಯದರ್ಶಿಯಾಗಿ ಐಸಾಕ್ ಲಿಂಕನ್ ಮತ್ತು ಖಜಾಂಚಿಯಾಗಿ ಎಂ. ಶಿವನಾಗು ಹಾಗು ಮೊದಲ ಬಾರಿಗೆ ಉಪಾಧ್ಯಕ್ಷರಾಗಿ ದೇವೇಂದ್ರ ಹಾಗು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಚ್. ವೆಂಕಟೇಶ್ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. 


    ಉಳಿದಂತೆ ಎಚ್. ಹರೀಶ್, ಜಿ. ಮಂಜುನಾಥ್, ಎಚ್.ಎಸ್ ಜಗದೀಶ್, ಅರುಣ, ಮಂಜುನಾಥ್, ಕುಮಾರ್ ಮತ್ತು ಎಲ್.ಪಿ ನವೀನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 
    ನ್ಯಾಯವಾದಿ ಎಸ್. ರವಿಕುಮಾರ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಅಂತಿಮವಾಗಿ ಫಲಿತಾಂಶ ಘೋಷಿಸಿದರು. ಫಲಿತಾಂಶ ಪ್ರಕಟಗೊಂಡ ನಂತರ ವಿಜೇತರ ಪರವಾಗಿ ಗುತ್ತಿಗೆ ಕಾರ್ಮಿಕರು ಪಟಾಕಿ ಸಿಡಿಸಿ ಸಂಭ್ರಮಿಸಿದರು. 

ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಕೇರಳ ಸಮಾಜಂ ಸನ್ಮಾನ

ಭದ್ರಾವತಿಯಲ್ಲಿ ಕೇರಳ ಸಮಾಜಂ ವತಿಯಿಂದ ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಅವರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು. 
    ಭದ್ರಾವತಿ : ನಗರದಲ್ಲಿ ಕೇರಳ ಸಮಾಜಂ ಹಲವಾರು ವರ್ಷಗಳಿಂದ ಯಶಸ್ವಿಯಾಗಿ ತನ್ನ ಕಾರ್ಯ ಚಟುವಟಿಕೆಗಳನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದು, ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಎಲ್ಲಾ ಕಾರ್ಯಗಳಿಗೂ ನಿರಂತರವಾಗಿ ಪ್ರೋತ್ಸಾಹ ನೀಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಸಮಾಜದ ವತಿಯಿಂದ ಅವರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು. 
    ಕೇರಳ ಸಮಾಜಂ ವತಿಯಿಂದ ಇತ್ತೀಚೆಗೆ ನಗರದ ಬಿ.ಎಚ್ ರಸ್ತೆ, ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಓಣಂ ಹಬ್ಬ ಯಶಸ್ವಿಯಾಗಿ ನೆರವೇರಿಸಲಾಗಿತ್ತು. ಈ ಸಂಭ್ರಮದ ಹಿನ್ನಲೆಯಲ್ಲಿ ಸಂಗಮೇಶ್ವರ್‌ರವರ ನಿವಾಸಕ್ಕೆ ತೆರಳಿ ಸಮಾಜಂ ಅಧ್ಯಕ್ಷ ಗಂಗಾಧರ್ ನೇತೃತ್ವದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಕೇರಳ ಸಮಾಜಂ ಮತ್ತು ಮಹಿಳಾ ಘಟಕ ಹಾಗು ಯುವ ಘಟಕದ ಪದಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು. 

ಶನಿವಾರ, ಅಕ್ಟೋಬರ್ 25, 2025

ಪಿಡಬ್ಲ್ಯೂಡಿ ನಿವೃತ್ತ ಇಂಜಿನಿಯರ್ ಬಿ.ಆರ್ ದಯಾನಂದ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಭದ್ರಾವತಿಯಲ್ಲಿ ಲೋಕೋಪಯೋಗಿ ಇಲಾಖೆ ನಿವೃತ್ತ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಬಿ.ಆರ್ ದಯಾನಂದರವರು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. 
    ಭದ್ರಾವತಿ: ಲೋಕೋಪಯೋಗಿ ಇಲಾಖೆ ನಿವೃತ್ತ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಬಿ.ಆರ್ ದಯಾನಂದರವರು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. 
    ಉದ್ಯಮಿ ಬಿ.ಕೆ ಜಗನ್ನಾಥ್‌ರವರ ನಿವಾಸದಲ್ಲಿ ಬಿ.ಕೆ ಸಂಗಮೇಶ್ವರ್ ಧಜ್ವ ನೀಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸಿದರು. ಬ್ಲಾಕ್ ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ಬಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ನಗರಸಭೆ ಸದಸ್ಯರಾದ ಬಿ.ಟಿ ನಾಗರಾಜ್, ಚನ್ನಪ್ಪ, ಓಬಿಸಿ ಘಟಕದ ಅಧ್ಯಕ್ಷ ಬಿ. ಗಂಗಾಧರ್, ನಗರ ಆಶ್ರಯ ಸಮಿತಿ ಅಧ್ಯಕ್ಷ ಬಿ.ಎಸ್ ಗೋಪಾಲ್, ಲೋಕೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಮೂಲತಃ ನಗರದ ನಿವಾಸಿಯಾಗಿರುವ ಬಿ.ಆರ್ ದಯಾನಂದರವರು ಹಳೇನಗರದ ದಿವಂಗತ ಶಾಮಿಯಾನ ಹಾಲಪ್ಪರವರ ಮೊಮ್ಮಗನಾಗಿದ್ದು, ಲೋಕೋಪಯೋಗಿ ಇಲಾಖೆಯಲ್ಲಿ ಕರ್ತವ್ಯಕ್ಕೆ  ಸೇರ್ಪಡೆಗೊಂಡು ನಗರದ ಲೋಕೋಪಯೋಗಿ ಇಲಾಖೆ ಕಛೇರಿ ಸೇರಿದಂತೆ ವಿವಿಧ ಕಾರ್ಯಪಾಲಕ ಇಂಜಿನಿಯರ್ ಹುದ್ದೆ ನಿರ್ವಹಿಸಿ ಇತ್ತೀಚಿಗೆ ನಿವೃತ್ತಿ ಹೊಂದಿದ್ದರು. 
    ದಯಾನಂದರವರು ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ಪಕ್ಷ ಸಂಘಟನೆಗೆ ಮತ್ತಷ್ಟು ಬಲ ಬಂದಂತಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ. 

ಅ.೨೭ರಂದು ವಿದ್ಯುತ್ ವ್ಯತ್ಯಯ

    ಭದ್ರಾವತಿ :  ಮೆಸ್ಕಾಂ ಗ್ರಾಮೀಣ ಉಪವಿಭಾಗದ ಲಕ್ಕವಳ್ಳಿ ೬೬/೧೧ ಕೆವಿ ವಿದ್ಯುತ್ ವಿತರಣಾ ಕೇಂದ್ರದ ಹತ್ತಿರ ವಾಹಕ ಬದಲಾವಣೆ ತುರ್ತು ಕಾಮಗಾರಿ ಕಾರ್ಯ ಹಮ್ಮಿಕೊಂಡಿರುವುದರಿಂದ ಅ.೨೭ರಂದು ಬೆಳಿಗ್ಗೆ ೯.೩೦ ರಿಂದ ಸಂಜೆ ೬ ಗಂಟೆವರೆಗೆ ೧೧ ಕೆವಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 
    ವದಿಯೂರು, ಗ್ಯಾರೇಜ್ ಕ್ಯಾಂಪ್, ಸಿಂಗನಮನೆ, ಶಂಕರಘಟ್ಟ, ಕುವೆಂಪು ವಿಶ್ವ ವಿದ್ಯಾನಿಲಯ, ನಲ್ಲಿಸರ, ಮಾಳೇನಹಳ್ಳಿ, ಗೋಣಿಬೀಡು, ಶಾಂತಿನಗರ, ತಾವರಘಟ್ಟ, ಮಲ್ಲಿಗೇನಹಳ್ಳಿ, ತಮ್ಮಡಿಹಳ್ಳಿ, ಜಂಕ್ಷನ್, ರಂಗನಾಥಪುರ, ಹುಣಸೇಕಟ್ಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.