Sunday, September 13, 2020

ಸಂವಿಧಾನದ ಆಶಯ ಅರಿತರೆ ಅದೇ ಬಹಿರಂಗ ಶುದ್ಧಿ, ಅದೇ ಅಂತರಂಗದ ಶುದ್ಧಿ : ಶ್ರೀ ಬಸವನಾಗಿದೇವ ಶರಣರು

ಭದ್ರಾವತಿಯಲ್ಲಿ ಭಾನುವಾರ ನ್ಯೂಟೌನ್ ಜಯಶ್ರೀ ವೃತ್ತದ ಸಮೀಪದಲ್ಲಿರುವ ತಾಲೂಕು ಛಲವಾದಿಗಳ (ಪರಿಶಿಷ್ಟ ಜಾತಿ) ಸಮಾಜದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಛಲವಾದಿ ಜಗದ್ಗುರು ಶ್ರೀ ಬಸವನಾಗಿದೇವ ಶರಣರು  ಪಾಲ್ಗೊಂಡಿದ್ದರು.
ಭದ್ರಾವತಿ, ಸೆ. ೧೩: ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಸಂವಿಧಾನವನ್ನು ಕೇವಲ ಅಸ್ಪೃಶ್ಯರು, ದಲಿತರು, ಶೋಷಿತರಿಗಾಗಿ ರಚಿಸಿಲ್ಲ. ಅವರು ಬರೆದಿರುವ ಸಂವಿಧಾನ ದೇಶದ ಪ್ರತಿಯೊಬ್ಬ ಪ್ರಜೆಗೂ ಅನ್ವಯವಾಗುತ್ತದೆ. ಇದನ್ನು ಎಲ್ಲರೂ ಅರಿತುಕೊಂಡಾಗ ಮಾತ್ರ ಸಂವಿಧಾನದ ರಕ್ಷಣೆ ಸಾಧ್ಯ ಎಂದು ಚಿತ್ರದುರ್ಗದ ಛಲವಾದಿ ಜಗದ್ಗುರು ಶ್ರೀ ಬಸವನಾಗಿದೇವ ಶರಣರು ತಿಳಿಸಿದರು.
      ಅವರು ಭಾನುವಾರ ನ್ಯೂಟೌನ್ ಜಯಶ್ರೀ ವೃತ್ತದ ಸಮೀಪದಲ್ಲಿರುವ ತಾಲೂಕು ಛಲವಾದಿಗಳ (ಪರಿಶಿಷ್ಟ ಜಾತಿ) ಸಮಾಜದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
      ಜಗಜ್ಯೋತಿ ಬಸವಣ್ಣನವರ ಆದರ್ಶಗಳು ಸಂವಿಧಾನದಲ್ಲಿ ಅಡಗಿವೆ. ಸಮಾಜದಲ್ಲಿ ಪ್ರತಿಯೊಂದು ಸಮುದಾಯಗಳಿಗೂ ಒಂದೊಂದು ಇತಿಹಾಸ, ಗುರು ಪರಂಪರೆ ಇದೆ. ಆ ಸಮುದಾಯಗಳನ್ನು ಅವುಗಳ ನೆಲೆಗಟ್ಟಿನಲ್ಲಿ ಮಠಾಧೀಶರುಗಳು ನೋಡುತ್ತಿದ್ದಾರೆ. ಆದರೆ ಸಂವಿಧಾನದ ಆಶಯವನ್ನು ತಾಳಿ ಮಾಡಿ ನೋಡುತ್ತಿಲ್ಲ. ಈ ಹಿನ್ನಲೆಯಲ್ಲಿ ಚಿತ್ರದುರ್ಗದ ಮುರುಘ ಶರಣರ ಮಾರ್ಗಸೂಚಿಯಂತೆ ಸಂವಿಧಾನದ ಆಶಯಗಳನ್ನು ಅರಿಯುವ ನಿಟ್ಟಿನಲ್ಲಿ ಪರಿವರ್ತನ ಮಠಾಧೀಶರ ಒಕ್ಕೂಟ ರಚಿಸಲಾಗಿದೆ. ಈ ಒಕ್ಕೂಟ ಅಂಬೇಡ್ಕರ್‌ರವರ ಸಂವಿಧಾನದ ಆಶಯಗಳ ಈಡೇರಿಕೆಗಾಗಿ ಹೋರಾಟ ನಡೆಸಲಿದೆ. ಸಂವಿಧಾನದ ಆಶಯಗಳನ್ನು ಸಮುದಾಯಗಳು ಅರಿತು ಮುನ್ನಡೆದಾಗ ಬಸವಣ್ಣನವರ ವಚನದಂತೆ ಅದೇ ಬಹಿರಂಗ ಶುದ್ಧಿ, ಅದೇ ಅಂತರಂಗದ ಶುದ್ಧಿ ಎಂದರು.
     ಛಲವಾದಿ ಗುರುಪೀಠ ೨೦೦೨ರಲ್ಲಿ ಅಸ್ತಿತ್ವಕ್ಕೆ ಬಂದ ನಂತರ ಸಮುದಾಯವನ್ನು ಸಂಘಟಿಸುವ ಕಾರ್ಯದಲ್ಲಿ ಮಠ ತೊಡಗಿದ್ದು,  ಯಾವುದೇ ಅಸ್ಪೃಶ್ಯ ಸಮುದಾಯ ಶೋಷಣೆಗೆ ಒಳಗಾದಲ್ಲಿ ತಕ್ಷಣ ಸ್ಪಂದಿಸುತ್ತಿದೆ. ಸಮುದಾಯದಿಂದ ಎಂದಿಗೂ ಪೀಠ ದೂರ ಉಳಿದಿಲ್ಲ. ತಾಲೂಕಿನಲ್ಲಿ ಸಮುದಾಯದಲ್ಲಿ ಯಾವುದೇ ಭಿನ್ನಾಭಿಪ್ರಾಯ ಮೂಡಬಾರದು. ಎಲ್ಲರೂ ಒಗ್ಗಟ್ಟಾಗಿ ಸಂಘಟನೆಗೆ ಮುಂದಾಗಬೇಕು. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಸಂವಿಧಾನದ ಆಶಯಗಳನ್ನು ಅರಿತು ಮುನ್ನಡೆಯಬೇಕೆಂದರು.
      ಹಿರಿಯೂರು ಅಚಲ ಸದ್ಗುರು ಆಶ್ರಮದ ಶ್ರೀ ಲಕ್ಷ್ಮಣಾರ್ಯ ಸ್ವಾಮೀಜಿ, ಸಮಾಜದ ಪ್ರಮುಖರಾದ ಸುರೇಶ್, ಎಸ್.ಎಸ್ ಭೈರಪ್ಪ, ಮಾದಿಗ ಸಮಾಜದ ರಾಜ್ಯಾಧ್ಯಕ್ಷ ಮಂಜುನಾಥ್, ಬದರಿನಾರಾಯಣ, ಜಯರಾಜ್, ಮಹಾದೇವಯ್ಯ, ಹುಚ್ಚಯ್ಯ, ಈ.ಪಿ ಬಸವರಾಜ್, ಲೋಕೇಶ್, ಮಹೇಶ್, ಸತೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
   ಸಮಾಜದ ಅಧ್ಯಕ್ಷ ಚನ್ನಪ್ಪ ಅಧ್ಯಕ್ಷತೆ ವಹಸಿದ್ದರು. ಸಮಾಜದ ಮಾಜಿ ಅಧ್ಯಕ್ಷ ಡಿ. ನರಸಿಂಹಮೂರ್ತಿ ಸ್ವಾಗತಿಸಿದರು. ಶಿಕ್ಷಕ ಎ. ತಿಪ್ಪೇಸ್ವಾಮಿ ನಿರೂಪಿಸಿದರು.

ಹಾಳಾದ ರಸ್ತೆ ಪೊಲೀಸರಿಂದ ದುರಸ್ತಿ

ಭದ್ರಾವತಿ ಬಿ.ಎಚ್ ರಸ್ತೆ ಬಾರಂದೂರು ಚೆಕ್ ಪೋಸ್ಟ್ ಬಳಿ ಹಾಳಾದ ರಸ್ತೆಯನ್ನು ಕಾಗದನಗರ ಠಾಣೆ ಪೊಲೀಸರು ದುರಸ್ತಿ ಪಡಿಸುತ್ತಿರುವುದು.
ಭದ್ರಾವತಿ, ಸೆ. ೧೩: ರಸ್ತೆಗಳು ಹಾಳಾದ್ದಲ್ಲಿ ಅವುಗಳನ್ನು ಸಂಬಂಧಿಸಿದ ಇಲಾಖೆಗಳೇ ಬಂದು ದುರಸ್ತಿಪಡಿಸಬೇಕೆಂಬ ಧೋರಣೆ ಹೊಂದಿರುವ ಇಂದಿನ ದಿನಗಳಲ್ಲಿ ಸಾಮಾಜಿಕ ಕಾಳಜಿ ಹೊಂದಿ    ಪೊಲೀಸರೇ ರಸ್ತೆ ದುರಸ್ತಿ ಕಾರ್ಯಗೊಂಡು ಗಮನ ಸೆಳೆದಿರುವ ಘಟನೆ ನಡೆದಿದೆ.
        ನಗರದ  ಬಿ.ಎಚ್ ರಸ್ತೆ ಬಾರಂದೂರು ಚೆಕ್ ಪೋಸ್ಟ್ ಬಳಿ ರಸ್ತೆ ಹಾಳಾಗಿದ್ದು, ಈ ಭಾಗದಲ್ಲಿ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ. ಪ್ರತಿದಿನ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಆದರೆ ಯಾರು ಸಹ ರಸ್ತೆಯನ್ನು ದುರಸ್ತಿ ಪಡಿಸುವ ಗೋಜಿಗೆ ಹೋಗುವುದಿಲ್ಲ. ಬದಲಿಗೆ ಅಪಘಾತಗಳು ನಡೆದಾಗ ಸಂಬಂಧಿಸಿದ ಇಲಾಖೆಗಳನ್ನು ದೂರುತ್ತಾರೆ.
     ಈ ಭಾಗ ಕಾಗದನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಹಿನ್ನಲೆಯಲ್ಲಿ ಈ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗಳಾದ ಮಹೇಶ್, ಅಶೋಕ್, ನಟರಾಜ್, ಮೋಹನ್ ಮತ್ತು ವೆಂಕಟೇಶ್ ಇವರುಗಳು ರಸ್ತೆ ದುರಸ್ತಿ ಕೈಗೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಪರ್ಯಾಯ ನಾಯಕನ ಘೋಷಣೆಗೆ ಆಗ್ರಹ : ಸೂಕ್ಷ್ಮತೆ ಕಾಯ್ದುಕೊಂಡ ಕುಮಾರಸ್ವಾಮಿ

ಭಾನುವಾರ ನಗರದಲ್ಲಿ ನಡೆದ ಅಪ್ಪಾಜಿಯವರ ಶ್ರದ್ದಾಂಜಲಿ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಕಾರ್ಯಕರ್ತರು, ಅಭಿಮಾನಿಗಳ ಆಗ್ರಹಕ್ಕೆ ಉತ್ತರಿಸಿದರು.
ಭದ್ರಾವತಿ, ಸೆ. ೧೩: ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರ ಸ್ಥಾನಕ್ಕೆ ಪರ್ಯಾಯ ನಾಯಕನನ್ನು ಘೋಷಿಸಲು ಹಾಗು ನಗರದ ಕೆಎಸ್‌ಆರ್ ಟಿಸಿ ಮುಖ್ಯ ಬಸ್ ನಿಲ್ದಾಣಕ್ಕೆ ಅವರ ಹೆಸರನ್ನು ನಾಮಕರಣಗೊಳಿಸಲು ಭಾನುವಾರ ಅಪ್ಪಾಜಿ ಅಭಿಮಾನಿಗಳು ಹಾಗು ಕಾರ್ಯಕರ್ತರು ಮಾಜಿ ಮುಖ್ಯಮಂತ್ರಿಗೆ ಕುಮಾರಸ್ವಾಮಿಗೆ ಒತ್ತಾಯಿಸಿದರು.
    ಅಪ್ಪಾಜಿ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿದ್ದ ಕುಮಾರಸ್ವಾಮಿಯವರಿಗೆ ವೇದಿಕೆಯಲ್ಲಿ ಅಭಿಮಾನಿಗಳು ಹಾಗು ಕಾರ್ಯಕರ್ತರು ತಕ್ಷಣವೇ ಪರ್ಯಾಯ ನಾಯಕನನ್ನು ಘೋಷಿಸಬೇಕೆಂದು ಆಗ್ರಹಿಸಿದರು.
       ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿಯವರು ಈಗಾಗಲೇ ತಮ್ಮ ಭಾಷಣದಲ್ಲಿ ಈ ವಿಚಾರವನ್ನು ಸೂಕ್ಷ್ಮವಾಗಿ ತಿಳಿಸಿದ್ದೇನೆ. ಇದನ್ನು ಅರ್ಥಮಾಡಿಕೊಳ್ಳಬೇಕು. ಇಲ್ಲಿನ ಜನರ ತೀರ್ಮಾನವೇ ಅಂತಿಮ ಎಂದರು.
        ಇದಕ್ಕೂ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅಪ್ಪಾಜಿ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಪ್ರಬಲ ನಾಯಕರಾಗಿದ್ದರು. ಅವರ ನಿಧನ ಮನಸ್ಸಿಗೆ ತುಂಬ ನೋವುಂಟು ಮಾಡಿದೆ. ಈ ದುಃಖದ ಪರಿಸ್ಥಿತಿಯಲ್ಲಿ ಪರ್ಯಾಯ ನಾಯಕನ ಬಗ್ಗೆ ಚಿಂತಿಸುವುದು ಸರಿಯಲ್ಲ. ಸೂಕ್ತ ಸಮಯದಲ್ಲಿ ಈ ಬಗ್ಗೆ ಚಿಂತಿಸಲಾಗುವುದು ಎಂದರು.
       ಅಪ್ಪಾಜಿಯವರ ನಿಧನ ಅಕಾಲಿಕವಾಗಿದ್ದು, ಅವರು ವಿಧಿಯಾಟಕ್ಕೆ ಬಲಿಯಾಗಿದ್ದಾರೆ. ಜಿಲ್ಲಾಡಳಿತ ಕೋವಿಡ್ ತುರ್ತು ಸಂದರ್ಭದಲ್ಲಿ ತುರ್ತು ಕ್ರಮ ಕೈಗೊಳ್ಳಬೇಕು. ಯಾವುದೇ ಕೊರತೆಗಳು ಕಂಡು ಬರದಂತೆ ಎಚ್ಚರ ವಹಿಸಬೇಕು. ಅಪ್ಪಾಜಿಯವರು ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಉಂಟಾದ ಎಲ್ಲಾ ಸಮಸ್ಯೆಗಳನ್ನು ತಿಳಿದುಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ನೋಡಿಕೊಳ್ಳಬೇಕೆಂದು ಸಲಹೆ ವ್ಯಕ್ತಪಡಿಸಿದರು.
      ಇದೆ ಸಂದರ್ಭದಲ್ಲಿ ಅಪ್ಪಾಜಿ ಪತ್ನಿ ಶಾರದ ಅಪ್ಪಾಜಿ ಮತ್ತು ಪುತ್ರ ಎಂ.ಎ ಅಜಿತ್ ಮಾತನಾಡಿ, ನಮ್ಮ ಕುಟುಂಬ ಎಂದಿಗೂ ಜನರ ಸೇವೆಯಲ್ಲಿರುತ್ತದೆ. ನೀವು ಬೆಂಬಲ ನೀಡಿದರೆ ನಿಮ್ಮೊಂದಿಗೆ  ಇರುತ್ತೇವೆ. ಅಪ್ಪಾಜಿಯವರ ಆದರ್ಶತನದಲ್ಲಿ ಮುಂದುವರೆಯುತ್ತೇವೆ. ಕಷ್ಟಸುಖ ಎರಡರಲ್ಲೂ ನಾವು ಪಾಲ್ಗೊಳ್ಳುತೇವೆ ಎಂದರು.

ಅಪ್ಪಾಜಿ ಕಳೆದುಕೊಂಡಿರುವುದು ಉಕ್ಕಿನ ನಗರಕ್ಕೆ ತುಂಬಲಾರದ ನಷ್ಟ : ಎಚ್.ಡಿ ಕುಮಾರಸ್ವಾಮಿ

ಪ್ರಾಮಾಣಿಕತೆ, ಬದ್ಧತೆ, ಸಾಮಾಜಿಕ ಕಳಕಳಿ ಹೊಂದಿದ್ದ ಧೀಮಂತ ರಾಜಕಾರಣಿ

ಭದ್ರಾವತಿಯಲ್ಲಿ ಭಾನುವಾರ ನಡೆದ ಅಪ್ಪಾಜಿ ಶ್ರದ್ದಾಂಜಲಿ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮಾತನಾಡಿದರು.
ಭದ್ರಾವತಿ: ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರನ್ನು ಕಳೆದುಕೊಂಡಿರುವುದು ಕೈಗಾರಿಕಾ ನಗರಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ವಿಷಾದ ವ್ಯಕ್ತಪಡಿಸಿದರು.
      ಅವರು ಭಾನುವಾರ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಎಂ.ಜೆ ಅಪ್ಪಾಜಿಯವರ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಅಪ್ಪಾಜಿಯವರು ಮಂಡ್ಯ ಜಿಲ್ಲೆಯಲ್ಲಿ ಹುಟ್ಟಿ ನಂತರ ಜೀವನ ನಿರ್ವಹಣೆಗಾಗಿ ಭದ್ರಾವತಿ ನಗರಕ್ಕೆ ಬರುವ ಮೂಲಕ ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಸಾಮಾನ್ಯ ಕಾರ್ಮಿಕನಾಗಿ ದುಡಿಯುತ್ತಿದ್ದರು. ಮಂಡ್ಯ ಜಿಲ್ಲೆಯ ಪಾಂಡವಪುರ, ನಾಗಮಂಗಲ ಸೇರಿದಂತೆ ವಿವಿಧೆಡೆಗಳಿಂದ ಅವರೊಂದಿಗೆ ಬಂದವರು ಕಾರ್ಖಾನೆಯಲ್ಲಿ ಕಾರ್ಮಿಕರಾಗಿ ಹಾಗೂ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಶ್ರಮ ಜೀವನ ನಡೆಸುತ್ತಿದ್ದರು. ಇವರ ನಾಯಕರಾಗಿ ಗುರುತಿಸಿಕೊಂಡು ಕಾರ್ಮಿಕರ ಹಾಗು ರೈತರ ಮತ್ತು ಬಡವರ, ದೀನದಲಿತರ         ಧ್ವನಿಯಾದವರು ಅಪ್ಪಾಜಿ. ಇದನ್ನು ಈ ಕ್ಷೇತ್ರದ ಜನರು ಎಂದಿಗೂ ಮರೆಯುವುದಿಲ್ಲ ಎಂದರು.
       ಅಪ್ಪಾಜಿ ಒಬ್ಬ ಪ್ರಾಮಾಣಿಕ ರಾಜಕಾರಣಿಯಾಗಿದ್ದರು. ೩ ಬಾರಿ ಶಾಸಕರಾದರೂ ವೈಯಕ್ತಿಕವಾಗಿ ಯಾವುದಕ್ಕೂ ಆಸೆ ಪಡಲಿಲ್ಲ. ಹಣ, ಅಂತಸ್ತು, ಅಧಿಕಾರದ ಹಿಂದೆ ಬೀಳಲಿಲ್ಲ. ಬದಲಿಗೆ ಸದಾ ಜನರ ಮಧ್ಯೆ ಇದ್ದು, ಅವರೊಂದಿಗೆ ಬೆಳೆಯಬೇಕೆಂಬ ಹಂಬಲ ಹೊಂದಿದ್ದರು. ಈ ಕಾರಣದಿಂದ ಇಂದು ನಮ್ಮೆಲ್ಲರಿಗೂ ಹತ್ತಿರವಾಗಿ ಉಳಿದುಕೊಂಡಿದ್ದಾರೆ.  ಅವರಲ್ಲಿನ ಬದ್ಧತೆ, ಸಾಮಾಜಿಕ ಕಳಕಳಿ ಮತ್ತೊಬ್ಬ ವ್ಯಕ್ತಿಯಲ್ಲಿ ಕಾಣಲು ಸಾಧ್ಯವಿಲ್ಲ. ತಮ್ಮ ಕೊನೆಯ ಅವಧಿಯಲ್ಲೂ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ಕೋವಿಡ್ ಸಂದಿಗ್ದ ಪರಿಸ್ಥಿತಿಯಲ್ಲಿ ಲಕ್ಷಾಂತರ ರು. ಸಾಲಸೋಲ ಮಾಡಿ ಬಡವರ ನೆರವಿಗೆ ಮುಂದಾಗಿದ್ದರು. ವಿಐಎಸ್‌ಎಲ್ ಕಾರ್ಖಾನೆ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದರು. ಎಚ್.ಡಿ ದೇವೇಗೌಡರು ಪ್ರಧಾನಿಯಾಗಿದ್ದಾಗ ಕಾರ್ಖಾನೆಯನ್ನು ಸೈಲ್ ಅಧೀನಕ್ಕೆ ಸೇರಿಸಲು ಅವರು ನಡೆಸಿದ ಹೋರಾಟ ಇಂದಿಗೂ ಸ್ಮರಣೀಯವಾಗಿದೆ ಎಂದರು.
      ಪ್ರಸ್ತುತ ಅಪ್ಪಾಜಿ ನಮ್ಮೊಂದಿಗೆ ಇಲ್ಲದಿರಬಹುದು. ಆದರೆ ಅವರ ಹೋರಾಟ, ಆದರ್ಶಗಳು ನಮ್ಮೊಂದಿಗಿವೆ. ಅವರ ಕುಟುಂಬ ವರ್ಗ ಎಂದಿಗೂ ಅನಾಥ ಎಂಬ ಭಾವನೆ ಬೆಳೆಸಿಕೊಳ್ಳಬಾರದು. ಸದಾ ಕಾಲ ಕುಟುಂಬದ ಜೊತೆ ಒಬ್ಬ ಸಹೋದರನಾಗಿ ಇರುತ್ತೇನೆ. ಅಲ್ಲದೆ ಕ್ಷೇತ್ರದ ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು ಕುಟುಂಬ ಜೊತೆ ಇದ್ದಾರೆ. ಮುಂದಿನ ದಿನಗಳಲ್ಲಿ ಈ ಕ್ಷೇತ್ರವನ್ನು ಮುನ್ನಡೆಸುವ ಜವಾಬ್ದಾರಿ ಎಲ್ಲರೂ ಹೊರಬೇಕಾಗಿದೆ ಎಂದರು.
     ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಕಾರ್ಯದರ್ಶಿ ಶ್ರೀ ಪ್ರಸನ್ನನಾಥಸ್ವಾಮೀಜಿ, ಶಿವಮೊಗ್ಗ ಬಸವಕೇಂದ್ರದ ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ, ಚಿತ್ರದುರ್ಗದ ಛಲವಾದಿ ಜಗದ್ಗುರು ಶ್ರೀ ಬಸವನಾಗಿದೇವ ಶರಣರು, ಚಿತ್ರದುರ್ಗ ಬಂಜಾರ ಪೀಠದ ಶ್ರೀ ಸರದಾರ ಸೇವಲಾಲ ಸ್ವಾಮೀಜಿ, ಸಿಎಸ್‌ಐ ವೇನ್ಸ್ ಮೆಮೊರಿಯಲ್ ಚರ್ಚ್ ಶಿವಮೊಗ್ಗ ವಲಯಾಧ್ಯಕ್ಷ ರೆವರೆಂಡ್ ಜಿ. ಸ್ಟ್ಯಾನ್ಲಿ ಮತ್ತು ಶಿವಮೊಗ್ಗ ದಾರುಲ್ ಇ-ಹಸನ್ ಮದರಸ ಪ್ರಿನ್ಸಿಪಲ್ ಮೌಲಾನ ಶಾಹುಲ್ ಹಮೀದ್ ಉಪಸ್ಥಿತರಿದ್ದು ಮಾತನಾಡಿದರು.
       ಮಾಜಿ ಶಾಸಕರಾದ ವೈ.ಎಸ್.ವಿ ದತ್ತಾ, ಶಾರದ ಪೂರ‍್ಯಾನಾಯ್ಕ, ಜೆಡಿಎಸ್ ಪಕ್ಷದ ಮುಖಂಡ ಎಂ. ಶ್ರೀಕಾಂತ್, ಎಂ.ಜೆ ಅಪ್ಪಾಜಿ ಪತ್ನಿ ಶಾರದ ಅಪ್ಪಾಜಿ, ಪುತ್ರ ಎಂ.ಎ ಅಜಿತ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಸ್. ಮಣಿಶೇಖರ್, ಜೆ.ಪಿ ಯೋಗೇಶ್, ಮಾಜಿ ಸದಸ್ಯ ಎಸ್. ಕುಮಾರ್, ತಾಲೂಕು ಪಂಚಾಯಿತಿ ಡಿ. ಲಕ್ಷ್ಮೀದೇವಿ, ಜೆಡಿಎಸ್ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
     ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ವಿವಿಧ  ಸಂಘ-ಸಂಸ್ಥೆಗಳ ಪ್ರಮುಖರು, ಕಾರ್ಯಕರ್ತರು, ಅಭಿಮಾನಿಗಳು ಸೇರಿದಂತೆ ಸಾವಿರಾರು ಮಂದಿ ಪಾಲ್ಗೊಂಡಿದ್ದರು.

Saturday, September 12, 2020

ಅಪ್ಪಾಜಿ ಎಂಬ ಆಕಾಶ... ಕತ್ತಲಿನಿಂದ ಬೆಳಕಿನೆಡೆಗೆ.

..
* ಅನಂತಕುಮಾರ್
ಹೌದು.. ಭದ್ರಾವತಿ ಕ್ಷೇತ್ರದ ಜನತೆಯ ಪಾಲಿಗೆ ಅಪ್ಪಾಜಿ ಎಂದಿಗೂ ಆಕಾಶ.  ಅಪ್ಪ ಎಂಬ ಮತ್ತೊಂದು ಹೆಸರು ಆಕಾಶ. ಮಕ್ಕಳ ಪಾಲಿಗೆ ಅಪ್ಪನಂತೆ ಕ್ಷೇತ್ರದ ಜನತೆಯ ಪಾಲಿಗೆ ಅಪ್ಪಾಜಿ ಕಂಡು ಬರುತ್ತಿದ್ದರು. ಕೇವಲ ರಾಜಕಾರಣಿಯಾಗಿ ಮಾತ್ರವಲ್ಲ, ಹೃದಯ ಶ್ರೀಮಂತಿಕೆಯ ವ್ಯಕ್ತಿಯಾಗಿ ಕಂಡು ಬರುತ್ತಿದ್ದರು. ಕ್ಷೇತ್ರದ ಜನರ ನೋವು-ನಲಿವುಗಳಿಗೆ ಸ್ಪಂದಿಸುವ ಜೊತೆಗೆ ಅವರೊಟ್ಟಿಗೆ ನಾನು ಒಬ್ಬ ಎಂಬ ನಂಬಿಕೆ ಮೇಲೆ ಬೆಳೆದು ಬಂದವರು. ಈ ಹಿನ್ನಲೆಯಲ್ಲಿ ಜನಮಾನಸದಲ್ಲಿ ಅಚ್ಚಳಿಯದಂತೆ ಉಳಿದುಕೊಂಡಿದ್ದಾರೆ.
        ಚುನಾವಣೆ ಎಂದರೆ ಕೇವಲ ಹಣ, ಜಾತಿ ಬಲದ ಮೇಲೆ ನಡೆಯುವ ಸ್ಪರ್ಧೆ ಎಂಬ ಕಾಲಘಟ್ಟದಲ್ಲಿ ಕೇವಲ ಸಾಮಾನ್ಯ ಕಾರ್ಮಿಕನಾಗಿ ದುಡಿಯುತ್ತಿದ್ದ ಅಪ್ಪಾಜಿ ಜನರ ಮೇಲೆ ವಿಶ್ವಾಸವಿಟ್ಟು ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದವರು. ಈ ಹಿನ್ನಲೆಯಲ್ಲಿ ಅವರು ಯಾವಾಗಲೂ ಸಭೆ, ಸಮಾರಂಭಗಳಲ್ಲಿ ತಮ್ಮ ಭಾಷಣದಲ್ಲಿ  'ನಾನು ಕಳೆದುಕೊಂಡಿದ್ದು ಏನು ಇಲ್ಲ, ಸಂಪಾದಿಸಿದ್ದು ಏನು ಇಲ್ಲ, ಕಳೆದು ಕೊಳ್ಳುವುದಾದರೆ ಅದು ಜನರ ವಿಶ್ವಾಸ ಮಾತ್ರ. ಆದರೆ ಕ್ಷೇತ್ರದ ಜನರು ಎಂದಿಗೂ ನನ್ನನ್ನು ಕೈಬಿಡುವುದಿಲ್ಲ' ಎಂಬ ಮಾತುಗಳನ್ನು ಹೇಳುತ್ತಿದ್ದರು. ಅಪ್ಪಾಜಿಯವರ ಮಾತು ೧೦೦ಕ್ಕೆ ೧೦೦ ಸತ್ಯ. ಅವರು ೩ ಬಾರಿ ನಿರಾಳವಾಗಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರವೂ ಚುನಾವಣೆ ಸ್ಪರ್ಧಿಸುವ ಉತ್ಸಾಹ ಹೆಚ್ಚಿಸಿಕೊಂಡಿದ್ದರು. ಸೋಲಿನಿಂದ ಎಂದಿಗೂ ಹತಾಶರಾಗಿರಲಿಲ್ಲ. ಸೋತಾಗ, ಗೆದ್ದಾಗ ಜನರ ಸಮಸ್ಯೆಗಳಿಗೆ ಒಂದೇ ರೀತಿಯಲ್ಲಿ ಸ್ಪಂದಿಸುತ್ತಿದ್ದರು. ಒಕ್ಕಲಿಗ ಸಮುದಾಯಕ್ಕೆ ಸೇರಿದ್ದರೂ ಸಹ ಹಿಂದುಳಿದ, ಅಲ್ಪಸಂಖ್ಯಾತ, ದಲಿತ ಸಮುದಾಯಗಳ ಮೇಲೆ ಹೆಚ್ಚಿನ ಪ್ರೀತಿ ಹೊಂದಿದ್ದರು. ಕ್ಷೇತ್ರದಲ್ಲಿ ತಮ್ಮದೇ ಆದ ವರ್ಚಸ್ಸು, ಮತ ಬ್ಯಾಂಕ್, ಅಭಿಮಾನಿ ಬಳಗ ಹೊಂದಿದ್ದರು.  ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಕತ್ತಲಿನಿಂದ ಕ್ಷೇತ್ರದ ಜನತೆಯನ್ನು ಬೆಳಕಿನೆಡೆಗೆ ಕೊಂಡೊಯ್ದಿದ್ದರು. ಇವರನ್ನು ಕಳೆದುಕೊಂಡಿರುವುದು ಕ್ಷೇತ್ರದ ಜನತೆಗೆ ಆಕಾಶವೇ ಕಳಚಿ ಬಿದ್ದಂತಾಗಿದೆ.
        

        ಅಪ್ಪಾಜಿಯೇ ಸ್ಟಾರ್...
      ಅಪ್ಪಾಜಿ ಅಧಿಕಾರದ ಹಿಂದೆ ಹೋದವರಲ್ಲ. ಈ ಹಿನ್ನಲೆಯಲ್ಲಿ ಎಂದಿಗೂ ಅವಕಾಶ ರಾಜಕಾರಣ ಮಾಡಲಿಲ್ಲ. ಜಿಲ್ಲಾಮಟ್ಟದಲ್ಲಿ, ರಾಜ್ಯಮಟ್ಟದಲ್ಲಿ ಹಾಗು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಬೇಕೆಂಬ ಹಂಬಲಕ್ಕೂ ಬಿದ್ದವರಲ್ಲ. ಕ್ಷೇತ್ರದ ಮಟ್ಟಿಗೆ ಅವರೊಬ್ಬರೇ ಸ್ಟಾರ್.  ಅಪ್ಪಾಜಿಗೆ ರಾಜಕೀಯವಾಗಿ ಯಾರು ಸಹ ಗಾಡ್‌ಫಾದರ್ ಇಲ್ಲ. ಇದೆ ರೀತಿ ಕ್ಷೇತ್ರದ ಜನತೆಗೂ ಅಪ್ಪಾಜಿ ಬಿಟ್ಟು ಬೇರೆ ರಾಜಕಾರಣಿಗಳ ಮೇಲೆ ಒಲವಿರಲಿಲ್ಲ. 'ಮುಖ್ಯಮಂತ್ರಿ, ಸಚಿವರು, ಸಂಸದರು ಸೇರಿದಂತೆ ಎಲ್ಲರಿಗಿಂತ ಅಪ್ಪಾಜಿಯೇ ನಮಗೆ ಮುಖ್ಯ. ಏಕೆಂದರೆ ಸ್ಥಳೀಯವಾಗಿ ನಮ್ಮ ಜೊತೆ ಸದಾ ಕಾಲ ಇದ್ದು, ನಮ್ಮ ನೋವು ನಲಿವುಗಳಿಗೆ ಸ್ಪಂದಿಸುವವರು ಅಪ್ಪಾಜಿ ಮಾತ್ರ. ಈ ಹಿನ್ನಲೆಯಲ್ಲಿ ಅವರೇ ನಮಗೆ ಸ್ಟಾರ್ ನಾಯಕ' ಎಂಬುದು ಕೆಲವರ ಅಭಿಮಾನದ ಮಾತುಗಳಾಗಿವೆ.
         ಇದಕ್ಕೆ ಪೂರಕ ಎಂಬಂತೆ ಅಪ್ಪಾಜಿ ಸಹ ಚುನಾವಣೆ ಸಂದರ್ಭದಲ್ಲಿ ಇತರೆ ರಾಜಕಾರಣಿಗಳಂತೆ ಸ್ಟಾರ್ ನಾಯಕರ ಮೊರೆ ಹೋಗಿರಲಿಲ್ಲ. ಯಾರನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸುತ್ತಿರಲಿಲ್ಲ. ಈ ಹಿನ್ನಲೆಯಲ್ಲಿ ಅಪ್ಪಾಜಿ ಕ್ಷೇತ್ರದ ಮಟ್ಟಿಗೆ ಒಬ್ಬ ವಿಶಿಷ್ಟ ರಾಜಕಾರಣಿಯಾಗಿ ಗುರುತಿಸಲ್ಪಡುತ್ತಾರೆ.  
           ೩ ದಶಕಗಳ ಪ್ರಬಲ ಪ್ರತಿಸ್ಪರ್ಧಿ:
        ಅಪ್ಪಾಜಿ ಕ್ಷೇತ್ರದ ಮಟ್ಟಿಗೆ ೩ ದಶಕಗಳ ಪ್ರಬಲ ಪ್ರತಿಸ್ಪರ್ಧಿಯಾಗಿ ಗಮನ ಸೆಳೆದಿದ್ದರು. ಪ್ರತಿಸ್ಪರ್ಧಿ ಇಲ್ಲದ ರಾಜಕಾರಣ ಎಂದಿಗೂ ರಾಜಕಾರಣವಲ್ಲ. ರಾಜಕೀಯವಾಗಿ ಶಾಸಕ ಬಿ.ಕೆ ಸಂಗಮೇಶ್ವರ್ ವಿರುದ್ಧ ಪ್ರಬಲ ಪ್ರತಿಸ್ಪರ್ಧಿಯಾಗಿದ್ದವರು ಅಪ್ಪಾಜಿ ಮಾತ್ರ. ಸದ್ಯದ ಮಟ್ಟಿಗೆ ಇವರ ಹೊರತಾಗಿ ಯಾರನ್ನು ಸಹ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಎಲ್ಲಾ ಸವಾಲುಗಳನ್ನು ಯಾವುದೇ ಸಂದರ್ಭದಲ್ಲಿ ಸ್ವೀಕರಿಸುವ ಎದೆಗಾರಿಕೆ ಅಪ್ಪಾಜಿಯವರದ್ದು. ಕ್ಷೇತ್ರದ ಅಭಿವೃದ್ಧಿ ವಿಚಾರಗಳು, ಭ್ರಷ್ಟಾಚಾರ, ದೌರ್ಜನ್ಯ, ದಬ್ಬಾಳಿಕೆ ಪರವಾಗಿ ಎಂದಿಗೂ ರಾಜಿ ಮಾಡಿಕೊಂಡವರಲ್ಲ.
       ಜೆಡಿಎಸ್ ಪಕ್ಷಕ್ಕೆ ಶಕ್ತಿ ತುಂಬಿದ ನಾಯಕ:
ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಮತಗಳೊಂದಿಗೆ ೩ನೇ ಬಾರಿಗೆ ಆಯ್ಕೆಯಾಗಿದ್ದ ಅಪ್ಪಾಜಿ ಜಿಲ್ಲೆಯಲ್ಲಿ ಪಕ್ಷಕ್ಕೆ ಶಕ್ತಿಯಾಗಿ ರೂಪುಗೊಂಡಿದ್ದರು. ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾರಣಕರ್ತರಾಗಿದ್ದರು. ಶಾಸಕರಾಗಿ ಆಯ್ಕೆಯಾಗದಿದ್ದರೂ ತಮ್ಮ ಪ್ರಭಾವ ಏನೆಂಬುದನ್ನು ಎದುರಾಳಿಗಳಿಗೆ ತೋರಿಸಿ ಕೊಟ್ಟಿದ್ದರು.
      ಕಠಿಣ ಹೋರಾಟಗಳು:
    ಅಪ್ಪಾಜಿ ಯಾವುದೇ ರೀತಿಯ ಹೋರಾಟಕ್ಕೂ ಸಿದ್ದರಾಗಿದ್ದರು. ಬಿಸಿಲು, ಮಳೆ, ಚಳಿ, ಗಾಳಿ ಯಾವುದಕ್ಕೂ ಜಗ್ಗದೆ ಕಾರ್ಮಿಕರ ಪರ, ರೈತರ ಪರ, ದಲಿತರ ಪರ, ಶೋಷಿತರ ಪರ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಹಲವು ಬಾರಿ ಅನಿಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಸೇರಿದಂತೆ ಕಠಿಣ ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ತಮ್ಮ ಆರೋಗ್ಯವನ್ನು ಸಹ ಲೆಕ್ಕಿಸುತ್ತಿರಲಿಲ್ಲ. ಇಂತಹ ಹೋರಾಟಗಾರರು ಸಿಗುವುದೇ ಅಪರೂಪ .


ವಿವಿಧೆಡೆ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಶ್ರದ್ದಾಂಜಲಿ ಸಭೆ

 ಭದ್ರಾವತಿ, ಸೆ. ೧೨:  ಇತ್ತೀಚೆಗೆ ನಿಧನ ಹೊಂದಿದ ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರಿಗೆ ನಗರದ ವಿವಿಧೆಡೆ ಶ್ರದ್ದಾಂಜಲಿ ಸಭೆ ಹಮ್ಮಿಕೊಳ್ಳುವ ಮೂಲಕ ಸಂತಾಪದೊಂದಿಗೆ ಗೌರವ ಸೂಚಿಸಲಾಯಿತು.
ತಾಲೂಕಿನ ಶಂಕರಘಟ್ಟದಲ್ಲಿ ಎಂ.ಜೆ ಅಪ್ಪಾಜಿ ಗೌಡರ ಅಭಿಮಾನಿ ಬಳಗ ಹಾಗು ಗ್ರೀನ್ ಫೌಂಡೇಷನ್ ವತಿಯಿಂದ ಸಸಿ ನೆಡುವ ಮತ್ತು ವಿತರಿಸುವ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು. ಜಿಲ್ಲಾ ಪಂಚಾಯಿತಿ ಸದಸ್ಯ ಎಸ್. ಮಣಿಶೇಖರ್ ಸೇರಿದಂತೆ ಅಭಿಮಾನಿ ಬಳಗ ಹಾಗು ಗ್ರೀನ್ ಫೌಂಡೇಷನ್‌ನ ಅಧ್ಯಕ್ಷರು, ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
ತಾಲೂಕು ಒಕ್ಕಲಿಗರ ಮಹಿಳಾ ವೇದಿಕೆ ವತಿಯಿಂದ ಅಪ್ಪರ್ ಹುತ್ತಾದಲ್ಲಿರುವ ಒಕ್ಕಲಿಗರ ಸಮುದಾಯ ಭವನದಲ್ಲಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಅಪ್ಪಾಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೌನಾಚರಣೆ ನಡೆಸುವ ಮೂಲಕ ಗೌರವ ಸೂಚಿಸಲಾಯಿತು. ವೇದಿಕೆ ಅಧ್ಯಕ್ಷೆ ಅನ್ನಪೂರ್ಣ ಸತೀಶ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಶ್ರೀ ಮೈಸೂರು ಕಾಗದ ಕಾರ್ಖಾನೆ ನೌಕರರ ಸಂಘದ ವತಿಯಿಂದ ಕಾಗದನಗರದ ವನಿತಾ ಸಮಾಜದ ಕಟ್ಟಡದಲ್ಲಿರುವ ಸಂಘದ ಕಛೇರಿಯಲ್ಲಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರ ಶ್ರದ್ದಾಂಜಲಿ ಸಭೆ ನಡೆಯಿತು.
ಸಂಘದ ಅಧ್ಯಕ್ಷ ಎಸ್. ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ನಗರದ ಹಿಂದೂ ಪಡೆ ವತಿಯಿಂದ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ನಿವಾಸಕ್ಕೆ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸೂಚಿಸಲಾಯಿತು.
ನಗರಸಭಾ ಸದಸ್ಯ, ಅಪ್ಪಾಜಿ ಪುತ್ರ ಎಂ.ಎ ಅಜಿತ್‌ರವರಿಗೆ ಸಾಂತ್ವಾನ ಹೇಳುವ ಮೂಲಕ ಕುಟುಂಬ ವರ್ಗಕ್ಕೆ, ಕಾರ್ಯಕರ್ತರಿಗೆ ಹಾಗು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲೆಂದು ಪ್ರಾರ್ಥಿಸಲಾಯಿತು.
ಚಿತ್ರ: ಡಿ೧೨-ಬಿಡಿವಿಟಿ೬
ಭದ್ರಾವತಿ ಶಂಕರಘಟ್ಟದಲ್ಲಿ ಎಂ.ಜೆ ಅಪ್ಪಾಜಿ ಸ್ಮರಣಾರ್ಥ ಸಸಿಗಳನ್ನು ನೆಡುವ ಹಾಗು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಚಿತ್ರ: ಡಿ೧೨-ಬಿಡಿವಿಟಿ೭
ಭದ್ರಾವತಿ ತಾಲೂಕು ಒಕ್ಕಲಿಗರ ಮಹಿಳಾ ವೇದಿಕೆ ವತಿಯಿಂದ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಶ್ರದ್ದಾಂಜಲಿ ಸಭೆ ಜರುಗಿತು.

ಚಿತ್ರ: ಡಿ೧೨-ಬಿಡಿವಿಟಿ೮
ಭದ್ರಾವತಿ ಶ್ರೀ ಮೈಸೂರು ಕಾಗದ ಕಾರ್ಖಾನೆ ನೌಕರರ ಸಂಘದ ವತಿಯಿಂದ ಕಾಗದನಗರದ ವನಿತಾ ಸಮಾಜದ ಕಟ್ಟಡದಲ್ಲಿರುವ ಸಂಘದ ಕಛೇರಿಯಲ್ಲಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರ ಶ್ರದ್ದಾಂಜಲಿ ಸಭೆ ನಡೆಯಿತು.

ಚಿತ್ರ: ಡಿ೧೨-ಬಿಡಿವಿಟಿ೯
ಭದ್ರಾವತಿಯಲ್ಲಿ ಹಿಂದೂ ಪಡೆ ವತಿಯಿಂದ ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸೂಚಿಸಲಾಯಿತು.


ಧನಂಜಯ ನಿಧನ

ಧನಂಜಯ
ಭದ್ರಾವತಿ, ಸೆ. ೧೨: ನಗರದ ಮೈಸೂರು ಕಾಗದ ಕಾರ್ಖಾನೆಯ ನೌಕರರ ಧನಂಜಯ(೪೨) ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.
     ಪತ್ನಿ, ಓರ್ವ ಪುತ್ರ ಹೊಂದಿದ್ದು, ಕಾಗದನಗರದ ೧ನೇ ವಾರ್ಡ್‌ನ ಕಾರ್ಖಾನೆಯ ವಸತಿ ಗೃಹದಲ್ಲಿ ವಾಸಿಸುತ್ತಿದ್ದರು. ಎಂಪಿಎಂ ಕಾರ್ಖಾನೆಯ ಟಿ.ಜಿ ಹೌಸ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಧನಂಜಯ ಅವರನ್ನು ವಾರ್ತಾ ಇಲಾಖೆಯ ಬಳ್ಳಾರಿ ಕಛೇರಿಯ ಎಂಸಿಎ(ಮಾರ್ಕೇಟಿಂಗ್ ಕನ್ಸಲ್ಟೆನ್ಸಿ ಏಜೆನ್ಸಿ) ವಿಭಾಗದಲ್ಲಿ ನಿಯೋಜನೆ ಮೇಲೆ ನೇಮಕಗೊಳಿಸಲಾಗಿತ್ತು.
    ದ್ವಿಚಕ್ರವಾಹನದಲ್ಲಿ ಭದ್ರಾವತಿ ಬರುವಾಗ ಚಿತ್ರದುರ್ಗದ ಹೊಳಲ್ಕೆರೆ ಬಳಿ ಅಘಘಾತಗೊಂಡು ಮೃತಪಟ್ಟಿದ್ದಾರೆ. ಮೃತರ ನಿಧನಕ್ಕೆ ಎಂಪಿಎಂ ಕಾರ್ಮಿಕರು ಸಂತಾಪ ಸೂಚಿಸಿದ್ದಾರೆ.