Tuesday, April 27, 2021

ಭದ್ರಾವತಿ ನಗರಸಭೆ ಚುನಾವಣೆ : ಶೇ.೬೨.೫ರಷ್ಟು ಮತದಾನ

ಭದ್ರಾವತಿ, ಏ. ೨೭: ಈ ಬಾರಿ ನಗರಸಭೆ ಚುನಾವಣೆಯಲ್ಲಿ ೧,೨೨,೯೭೪ ಮಂದಿ ಮತದಾನದ ಹಕ್ಕು ಹೊಂದಿದ್ದು, ಪೈಕಿ ೭೬,೮೬೪ ಮತದಾರರು ಹಕ್ಕು ಚಲಾಯಿಸಿದ್ದಾರೆ.
   ೩೮,೧೨೮ ಪುರುಷ, ೩೮,೭೩೬ ಮಹಿಳಾ ಮತದಾರರು ಹಕ್ಕು ಚಲಾಯಿಸಿದ್ದು, ಶೇ.೬೨.೫ರಷ್ಟು ಮತದಾನ ನಡೆದಿದೆ. ಮತದಾನದಲ್ಲೂ ಮಹಿಳೆಯರು ಮೇಲುಗೈ ಸಾಧಿಸಿದ್ದಾರೆ. ಹೊಸ ಸಿದ್ದಾಪುರ ವಾರ್ಡ್ ನಂ.೩೦ರ ಮತಗಟ್ಟೆ ೧೧೭ರಲ್ಲಿ  ಒಟ್ಟು ೧೨೪೧ ಮತದಾರರಿದ್ದು, ಈ ಪೈಕಿ ೧೦೯೫ ಮಂದಿ ಹಕ್ಕು ಚಲಾಯಿಸುವ ಮೂಲಕ ಅತಿ ಹೆಚ್ಚು ಮತದಾನವಾದ ಮತಗಟ್ಟೆಯಾಗಿದೆ. ಎಂಪಿಎಂ ಆಸ್ಪತ್ರೆ ವ್ಯಾಪ್ತಿಯ ವಾರ್ಡ್ ನಂ.೧೯ರ ಮತಗಟ್ಟೆ ೭೪ರಲ್ಲಿ ಒಟ್ಟು ೬೮೮ ಮತದಾರರಿದ್ದು, ಈ ಪೈಕಿ ೧೬೭ ಮಂದಿ ಹಕ್ಕು ಚಲಾಯಿಸುವ ಮೂಲಕ ಅತಿ ಕಡಿಮೆ ಮತದಾನವಾದ ಮತಗಟ್ಟೆಯಾಗಿದೆ.

ಮತದಾನ ಮುಗಿದ ತಕ್ಷಣ ಸೋಲು-ಗೆಲುವಿನ ಲೆಕ್ಕಾಚಾರ

ಭದ್ರಾವತಿ ಹಳೇನಗರ ಭೂತನಗುಡಿ ವ್ಯಾಪ್ತಿಯ ನಗರಸಭೆ ವಾರ್ಡ್ ನಂ.೧೩ರ ಮತಗಟ್ಟೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಮತದಾನ ಮಾಡಿದರು.
     ಭದ್ರಾವತಿ, ಏ. ೨೭: ಮತದಾನ ಮುಗಿದ ತಕ್ಷಣ ರಾಜಕೀಯ ಪಕ್ಷಗಳಲ್ಲಿ ಗೆಲುವಿನ ಲೆಕ್ಕಚಾರ, ಕೆಲವು ಅಭ್ಯರ್ಥಿಗಳಿಗೆ ಸೋಲಿನ ಭೀತಿ, ಮತ್ತೆ ಕೆಲವರಿಗೆ ಗೆಲುವಿನ ಉತ್ಸಾಹ ಕಂಡು ಬರುತ್ತಿದೆ.
   ಮಾಜಿ ಶಾಸಕ ಎಂ.ಜೆ ಅಪ್ಪಾಜಿ ನಿಧನ ಹೊಂದಿದ ನಂತರ ನಡೆದ ಮೊದಲ ನಗರಸಭೆ ಚುನಾವಣೆ ಇದಾಗಿದ್ದು, ಅಪ್ಪಾಜಿಯವರ ವರ್ಚಸ್ಸು, ಅಭಿವೃದ್ಧಿ ಕಾರ್ಯಗಳು ಹಾಗು ಅನುಕಂಪದ ಅಲೆಯಿಂದ ಈ ಬಾರಿ ಸಹ ಮತದಾರರು ಪಕ್ಷವನ್ನು ಬೆಂಬಲಿಸಿದ್ದಾರೆ. ಈ ಹಿನ್ನಲೆಯಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸುವ ವಿಶ್ವಾಸ ಜೆಡಿಎಸ್ ಹೊಂದಿದೆ.  ಮತ್ತೊಂದೆಡೆ ಶಾಸಕ ಬಿ.ಕೆ ಸಂಗಮೇಶ್ವರ್ ಅಭಿವೃದ್ಧಿ ಕಾರ್ಯಗಳು ಮತ್ತು ವರ್ಚಸ್ಸು ಮತಗಳಾಗಿ ಪರಿವರ್ತನೆಗೊಂಡಿವೆ. ಈ ಹಿನ್ನಲೆಯಲ್ಲಿ ಈ ಬಾರಿ ನಗರಸಭೆ ಅಧಿಕಾರ ಹಿಡಿಯುವ ತವಕ ಕಾಂಗ್ರೆಸ್ ಹೊಂದಿದೆ.
    ಇವೆಲ್ಲದರ ನಡುವೆ ಬಿಜೆಪಿ ಸುಮಾರು ೨ ತಿಂಗಳ ಹಿಂದೆ ಕನಕಮಂಟಪ ಮೈದಾನದಲ್ಲಿ ತಾಲೂಕು ಮಟ್ಟದ ಹೊನಲು ಬೆಳಗಿನ ಕಬಡ್ಡಿ ಪಂದ್ಯಾವಳಿ ವೇಳೆ ನಡೆದಿರುವ ಘಟನೆಯನ್ನು ಸವಾಲಾಗಿ ತೆಗೆದುಕೊಂಡು ಸಂಘಟನಾತ್ಮಕವಾಗಿ ಈ ಬಾರಿ ಚುನಾವಣೆಯನ್ನು ಎದುರಿಸಿದ್ದು, ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ ರಾಘವೇಂದ್ರ ಸೇರಿದಂತೆ ಇನ್ನಿತರರು ಚುನಾವಣೆ ನೇತೃತ್ವ ವಹಿಸಿರುವ ಹಿನ್ನಲೆಯಲ್ಲಿ ಈ ಬಾರಿ ಹೆಚ್ಚಿನ ಸ್ಥಾನಗಳೊಂದಿಗೆ ಅಧಿಕಾರ ಹೊಂದುವ ವಿಶ್ವಾಸ ಬಿಜೆಪಿ ಹೊಂದಿದೆ.
    ಪ್ರಮುಖ ರಾಜಕೀಯ ಪಕ್ಷಗಳಲ್ಲಿ ತೀವ್ರ ಪೈಪೋಟಿಯೊಂದಿಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಗಿಟ್ಟಿಸಿಕೊಂಡಿದ್ದ ಕೆಲವು ಅಭ್ಯರ್ಥಿಗಳಲ್ಲಿ ಸೋಲಿನ ಭೀತಿ ಎದ್ದು ಕಾಣುತ್ತಿದ್ದು, ಬಂಡಾಯ ಅಭ್ಯರ್ಥಿಗಳು ಮತಗಳನ್ನು ಕಸಿದಿರುವ ಭೀತಿ ಕಾಡುತ್ತಿದೆ. ಮಾತೃಪಕ್ಷದಲ್ಲಿ ಸ್ಪರ್ಧಿಸಲು ಅವಕಾಶ ಸಿಗದೆ ಬೇರೆ ಪಕ್ಷಗಳಿಂದ ಕಣಕ್ಕಿಳಿದಿರುವ ಕೆಲವು ಅಭ್ಯರ್ಥಿಗಳಲ್ಲಿ ಗೆಲುವಿನ ವಿಶ್ವಾಸ ಕಂಡು ಬರುತ್ತಿದೆ.



ಭದ್ರಾವತಿ ನಗರಸಭೆ ವಾರ್ಡ್ ನಂ.೩೨ರ ಜೆಡಿಯು ಬೆಂಬಲಿತ ಪಕ್ಷೇತರ ಅಭ್ಯರ್ಥಿ ದಿವ್ಯಶ್ರೀ ಶಶಿಕುಮಾರ್ ಗೌಡ ಜಯಶ್ರೀ ವೃತ್ತದಲ್ಲಿರುವ ಮತಗಟ್ಟೆಯೊಂದರಲ್ಲಿ ಮತದಾನ ಮಾಡಿದರು.

ಕೊರೋನ ೨ನೇ ಅಲೆ ಭೀತಿ ನಡುವೆಯೂ ಶೇ.೬೦ಕ್ಕೂ ಹೆಚ್ಚು ಮತದಾನ

ಭದ್ರಾವತಿ ನಗರಸಭೆ ಚುನಾವಣೆ ಮತದಾನ ಮಂಗಳವಾರ ನಡೆದಿದ್ದು, ಮತಗಟ್ಟೆಗಳ ಬಳಿ ಕೋವಿಡ್ ಮಾರ್ಗಸೂಚಿಗಳನ್ನು ಮೀರಿ ಗುಂಪು ಸೇರಿರುವುದು.
     ಭದ್ರಾವತಿ, ಏ. ೨೭: ಮಂಗಳವಾರ ನಡೆದ ನಗರಸಭೆ ೩೪ ವಾರ್ಡ್‌ಗಳ ಚುನಾವಣೆಯಲ್ಲಿ ಸಂಜೆ ೫ ಗಂಟೆ ವೇಳೆಗೆ ಶೇ.೬೦.೫೫ರಷ್ಟು ಮತದಾನ ನಡೆದಿದ್ದು, ಕೊರೋನಾ ೨ನೇ ಅಲೆ ಭೀತಿ ನಡುವೆಯೂ ಮತದಾರರು ನಿರ್ಭೀತಿಯಿಂದ ಮತಗಟ್ಟೆಗಳಿಗೆ ಆಗಮಿಸಿ ಮತದಾನ ಮಾಡುವ ಮೂಲಕ ಗಮನ ಸೆಳೆದರು.
     ಕೊರೋನಾ ಭೀತಿಯಿಂದಾಗಿ ಮತದಾರರು ಮತಗಟ್ಟೆಗಳಿಗೆ ಬರಲು ನಿರಾಕರಿಸುವ ಸಾಧ್ಯತೆ ಹೆಚ್ಚು ಎಂಬ ಆತಂಕ ಅಭ್ಯರ್ಥಿಗಳನ್ನು ಕಾಡುತ್ತಿತ್ತು. ಆದರೆ ಅಭ್ಯರ್ಥಿಗಳ ಆತಂಕ ಬೆಳಿಗ್ಗೆಯಿಂದಲೇ ದೂರವಾಯಿತು. ಬಹುತೇಕ ಮತದಾರರು ಉತ್ಸಾಹದಿಂದ ಮತಗಟ್ಟೆಗಳಿಗೆ ಆಗಮಿಸಿ ಮತ ಚಲಾಯಿಸಿದರು. 
    ಮಧ್ಯಾಹ್ನ ೧ ಗಂಟೆ ವೇಳೆಗೆ ಬಹುತೇಕ ಮತಗಟ್ಟೆಗಳಲ್ಲಿ ಶೇ.೩೬.೩೨ರಷ್ಟು ಹಾಗು ೩ ಗಂಟೆ ವೇಳೆಗೆ ಶೇ.೪೭.೦೧ರಷ್ಟು ಮತದಾನ ನಡೆದಿದ್ದು, ಸಂಜೆ ೫ ಗಂಟೆ ವೇಳೆಗೆ ಶೇ.೬೦ಕ್ಕೆ ಏರಿಕೆಯಾಗಿದೆ. ಕೆಲವು ವಾರ್ಡ್‌ಗಳಲ್ಲಿ ಶೇ.೭೦ಕ್ಕೂ ಹೆಚ್ಚು ಮತದಾನ ನಡೆದಿದೆ. ಇದರಿಂದಾಗಿ ಮತದಾರರು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹೆಚ್ಚು ಆಸಕ್ತಿ ಹೊಂದಿರುವುದು ಸ್ಪಷ್ಟವಾಗಿದೆ.
    ಸಂಜೆ ೫ರ ವೇಳೆಗೆ ವಾರ್ಡ್ ನಂ.೧ರಲ್ಲಿ ೬೩.೯೬, ೨ರಲ್ಲಿ ೬೪.೪೧, ೩ರಲ್ಲಿ ೫೮.೬೧, ೪ರಲ್ಲಿ ೫೯.೨೯, ೫ರಲ್ಲಿ ೬೨.೨೪, ೬ರಲ್ಲಿ ೫೭.೪೭, ೭ರಲ್ಲಿ ೪೭.೪೮, ೮ರಲ್ಲಿ ೫೯.೭೯, ೯ರಲ್ಲಿ ೬೨.೪೯, ೧೦ರಲ್ಲಿ ೫೭.೫೪, ೧೧ರಲ್ಲಿ ೬೦.೪೫, ೧೨ರಲ್ಲಿ ೬೦.೯೮, ೧೩ರಲ್ಲಿ ೫೭.೧೧, ೧೪ರಲ್ಲಿ ೬೯.೪೪, ೧೫ರಲ್ಲಿ ೬೫.೦೮, ೧೬ರಲ್ಲಿ ೬೧.೫೬, ೧೭ರಲ್ಲಿ ೬೬.೯೯, ೧೮ರಲ್ಲಿ ೭೨.೮೫, ೧೯ರಲ್ಲಿ ೩೮.೭೮, ೨೦ರಲ್ಲಿ ೬೩.೬೫, ೨೧ರಲ್ಲಿ ೫೭.೮೭, ೨೨ರಲ್ಲಿ ೬೩.೦೩, ೨೩ರಲ್ಲಿ ೭೧.೦೨, ೨೪ರಲ್ಲಿ ೭೦.೬೫, ೨೫ರಲ್ಲಿ ೬೩.೨೪, ೨೬ರಲ್ಲಿ ೪೫.೦೪, ೨೭ರಲ್ಲಿ ೫೮.೮೪, ೨೮ರಲ್ಲಿ ೫೩.೪೧, ೩೦ರಲ್ಲಿ ೭೪, ೩೧ರಲ್ಲಿ ೬೩.೫೬, ೩೨ರಲ್ಲಿ ೫೪.೨೨, ೩೩ರಲ್ಲಿ ೫೮.೮೫, ೩೪ರಲ್ಲಿ ೪೮.೨೨ ಮತ್ತು ೩೫ರಲ್ಲಿ ೬೮.೦೯ರಷ್ಟು ಮತದಾನ ನಡೆದಿದೆ.
    ಕೆಲವು ಮತಗಟ್ಟೆಗಳ ಬಳಿ ಜನರು ಕೋವಿಡ್-೧೯ ಮಾರ್ಗ ಸೂಚಿಗಳನ್ನು ಮೀರಿ ಗುಂಪು ಸೇರಿರುವುದು ಕಂಡು ಬಂದಿತು.  ಸ್ಯಾನಿಟೈಜರ್, ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಯಾವುದೂ ಸಹ ಕಂಡು ಬರಲಿಲ್ಲ. ಈ ನಡುವೆ ಪೊಲೀಸರು ಆಗಾಗ ಗುಂಪು ಸೇರದಂತೆ ಎಚ್ಚರವಹಿಸಿರುವುದು ಸಹ ಕಂಡು ಬಂದಿತು.
    ವಾರ್ಡ್ ನಂ.೧೯, ೨೦, ೨೧ ಮತ್ತು ೨೨ರ ಮತದಾರರು ಕಾಗದನಗರದ ವಿವಿಧ ಮತಗಟ್ಟೆಗಳಲ್ಲಿ ಮತ ಚಲಾಯಿಸಿದರು. ಈ ನಡುವೆ ವಾರ್ಡ್ ನಂ.೨೧ರ ಮತದಾರರ ಪಟ್ಟಿಯಲ್ಲಿ ಅದಲು ಬದಲು ಆಗಿದ್ದು, ಈ ಕುರಿತು ಜೆಡಿಎಸ್ ಅಭ್ಯರ್ಥಿ ಬೆಂಬಲಿಗ ಅಶೋಕ್‌ಕುಮಾರ್ ಆರೋಪಿಸಿದರು. ಮತಯಂತ್ರಗಳಲ್ಲಿ ಯಾವುದೇ ತಾಂತ್ರಿಕ ದೋಷಗಳು ಕಂಡು ಬರಲಿಲ್ಲ. ನಿಗದಿತ ಸಮಯಕ್ಕೆ ಸರಿಯಾಗಿ ಮತದಾನ ಆರಂಭಗೊಂಡಿತು.
    ಗ್ರಾಮೀಣ ಪರಿಸರ ಹೊಂದಿರುವ ತಿಮ್ಲಾಪುರ-ದೊಡ್ಡಗೊಪ್ಪೇನ ಹಳ್ಳಿ ವ್ಯಾಪ್ತಿಯ ವಾರ್ಡ್ ನಂ.೨೩ರ ಮತದಾರರು ತಿಮ್ಲಾಪುರ, ದೊಡ್ಡಗೊಪ್ಪೇನಹಳ್ಳಿ ಮತ್ತು ಬುಳ್ಳಾಪುರದ ವಿವಿಧ ಮತಗಟ್ಟೆಗಳಲ್ಲಿ ಮತ ಚಲಾಯಿಸಿದರು. ಬೊಮ್ಮನಕಟ್ಟೆ ವ್ಯಾಪ್ತಿಯ ವಾರ್ಡ್ ನಂ.೨೪ರ ಮತದಾರರು ಒಂದೇ ಮತಗಟ್ಟೆಯ ೪ ವಿಭಾಗಗಳಲ್ಲಿ ಮತಚಲಾಯಿಸಿದರು. ಹುಡ್ಕೋ-ಹೊಸಬುಳ್ಳಾಪುರ ವ್ಯಾಪ್ತಿಯ ವಾರ್ಡ್ ನಂ.೨೫ರ ಮತದಾರರು ೨ ಮತಗಟ್ಟೆಗಳಲ್ಲಿ ಮತಚಲಾಯಿಸಿದರು.
    ಮತಗಟ್ಟೆಗಳ ಬಳಿ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ನಾನಾ ರೀತಿಯ ಕಸರತ್ತುಗಳನ್ನು ನಡೆಸುತ್ತಿರುವುದು ಕಂಡು ಬಂದಿತು. ಕೆಲವು ಮತಗಟ್ಟೆಗಳ ಬಳಿ ಮತದಾರರಿಗೆ ಮೊಸರನ್ನ, ಚಿತ್ರನ್ನ, ಮಜ್ಜಿಗೆ, ಕುಡಿಯುವ ನೀರಿನ ಬಾಟಲ್‌ಗಳನ್ನು ವಿತರಿಸುತ್ತಿರುವುದು ಕಂಡು ಬಂದಿತು.
ಕಾಂಗ್ರೆಸ್-ಜೆಡಿಎಸ್ ನಡುವೆ ಪೈಪೋಟಿ:
    ಬಹುತೇಕ ವಾರ್ಡ್‌ಗಳಲ್ಲಿ ಈ ಬಾರಿ ಸಹ ಈ ಹಿಂದಿನಂತೆ ಕಾಂಗ್ರೆಸ್-ಜೆಡಿಎಸ್ ನಡುವೆ ಪೈಪೋಟಿ ಇರುವುದು ಕಂಡು ಬಂದಿತು. ಈ ನಡುವೆ ಕೆಲವು ವಾರ್ಡ್‌ಗಳಲ್ಲಿ ಬಿಜೆಪಿ ಸಹ ಸಮರ್ಥವಾಗಿ ಪೈಪೋಟಿ ನೀಡಿರುವುದು ಕಂಡು ಬಂದಿದೆ. ಕಳೆದ ಬಾರಿ ಜೆಡಿಎಸ್ ಅತಿಹೆಚ್ಚು ೨೩ ಸ್ಥಾನಗಳೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಕಾಂಗ್ರೆಸ್ ಕೇವಲ ೬ ಸ್ಥಾನಗಳನ್ನು, ಬಿಜೆಪಿ ೨ ಸ್ಥಾನಗಳನ್ನು ಹಾಗು ಕೆಜೆಪಿ ೨ ಸ್ಥಾನಗಳನ್ನು ತಮ್ಮದಾಗಿಸಿಕೊಂಡಿದ್ದವು. ಉಳಿದಂತೆ ೨ ಸ್ಥಾನಗಳಲ್ಲಿ ಪಕ್ಷೇತರರು ಆಯ್ಕೆಯಾಗಿದ್ದರು.  

ಸ್ನೇಹ ಜೀವಿ ಬಳಗದ ಮುಂಚೂಣಿ ನಾಯಕ ಎಸ್. ಸತೀಶ್ ಕೊರೋನಾ ಸೋಂಕಿಗೆ ಬಲಿ

ಎಸ್. ಸತೀಶ್
   ಭದ್ರಾವತಿ, ಏ. ೨೭: ನಗರದ ಸ್ನೇಹ ಜೀವಿ ಬಳಗದ ಸಮಾಜ ಸೇವೆಯ ಮುಂಚೂಣಿ ನಾಯಕ, ಪೊಲೀಸ್ ಉಮೇಶ್ ಸಹೋದರ ಎಸ್. ಸತೀಶ್ ಮಂಗಳವಾರ ನಿಧನ ಹೊಂದಿದರು.
    ಕೆಲವು ದಿನಗಳ ಹಿಂದೆ ಕೊರೋನಾ ೨ನೇ ಅಲೆ ಸೋಂಕಿಗೆ ಒಳಗಾಗಿದ್ದ ಎಸ್. ಸತೀಶ್(49) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ೩೨ನೇ ವಾರ್ಡ್ ಪಕ್ಷೇತರ ಅಭ್ಯರ್ಥಿಯಾಗಿರುವ ಪತ್ನಿ ಲತಾ, ಇಬ್ಬರು ಗಂಡು ಮಕ್ಕಳು, ತಂದೆ ಹಾಗು ಸಹೋದರನ್ನು ಹೊಂದಿದ್ದರು. ಇವರ ಅಂತ್ಯಕ್ರಿಯೆ ಹುತ್ತಾಕಾಲೋನಿ ಹಿಂದೂ ರುದ್ರಭೂಮಿಯಲ್ಲಿ ಸಂಜೆ ನೆರವೇರಿತು. 
       ಸತೀಶ್‌ರವರು ಸಹೋದರ ಪೊಲೀಸ್ ಉಮೇಶ್ ನೇತೃತ್ವದಲ್ಲಿ ಸ್ನೇಹ ಜೀವಿ ಬಳಗ ಹುಟ್ಟು ಹಾಕುವ ಮೂಲಕ ಹಲವಾರು ಸಾಮಾಜಿಕ ಸೇವಾ ಕಾರ್ಯಗಳನ್ನು ನೆರವೇರಿಸಿಕೊಂಡು ಬಂದಿದ್ದರು. ಅಲ್ಲದೆ ಕೊರೋನಾ ಸಂದರ್ಭದಲ್ಲಿ ಸಂಕಷ್ಟಕ್ಕೆ ಒಳಗಾದವರ ನೆರವಿಗೆ ಮುಂದಾಗಿದ್ದರು. ಇವರ ನಿಧನಕ್ಕೆ ನಗರದ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.

ಕೊರೋನ ೨ನೇ ಅಲೆ ಭೀತಿ ನಡುವೆಯೂ ಬಹುತೇಕ ಮತಗಟ್ಟೆಗಳಲ್ಲಿ ಬಿರುಸಿನ ಮತದಾನ

ಭದ್ರಾವತಿ ನಗರಸಭೆ ವಾರ್ಡ್ ನಂ.೨೪ರ ಜೆಡಿಎಸ್ ಅಭ್ಯರ್ಥಿ ಕೋಟೇಶ್ವರರಾವ್ ಬೊಮ್ಮನಕಟ್ಟೆಯೊಂದರ ಮತಗಟ್ಟೆ ಬಳಿ ಮತಯಾಚನೆ ನಡೆಸಿದರು.
    ಭದ್ರಾವತಿ, ಏ. ೨೭: ನಗರಸಭೆ ೩೪ ವಾರ್ಡ್‌ಗಳ ಚುನಾವಣೆಯಲ್ಲಿ ಮಧ್ಯಾಹ್ನ ೧ ಗಂಟೆ ವೇಳೆಗೆ ಬಹುತೇಕ ಮತಗಟ್ಟೆಗಳಲ್ಲಿ ಶೇ.೪೦ರಷ್ಟು ಮತದಾನ ನಡೆದಿದ್ದು, ಕೊರೋನಾ ೨ನೇ ಅಲೆ ಭೀತಿ ನಡುವೆಯೂ ಮತದಾರರು ನಿರ್ಭೀತಿಯಿಂದ ಮತಗಟ್ಟೆಗಳಿಗೆ ಆಗಮಿಸಿ ಮತದಾನ ಮಾಡುವ ಮೂಲಕ ಗಮನ ಸೆಳೆದರು.
   ಕೊರೋನಾ ಭೀತಿಯಿಂದಾಗಿ ಮತದಾರರು ಮತಗಟ್ಟೆಗಳಿಗೆ ಬರಲು ನಿರಾಕರಿಸುವ ಸಾಧ್ಯತೆ ಹೆಚ್ಚು ಎಂಬ ಆತಂಕ ಅಭ್ಯರ್ಥಿಗಳನ್ನು ಕಾಡುತ್ತಿತ್ತು. ಆದರೆ ಅಭ್ಯರ್ಥಿಗಳ ಆತಂಕ ಬೆಳಿಗ್ಗೆಯಿಂದಲೇ ದೂರವಾಯಿತು. ಬಹುತೇಕ ಮತದಾರರು ಉತ್ಸಾಹದಿಂದ ಮತಗಟ್ಟೆಗಳಿಗೆ ಆಗಮಿಸಿ ಮತ ಚಲಾಯಿಸಿದರು. ಕೆಲವು ಮತಗಟ್ಟೆಗಳ ಬಳಿ ಜನರು ಕೋವಿಡ್-೧೯ ಮಾರ್ಗ ಸೂಚಿಗಳನ್ನು ಮೀರಿ ಗುಂಪು ಸೇರಿರುವುದು ಕಂಡು ಬಂದಿತು.  ಸ್ಯಾನಿಟೈಜರ್, ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಯಾವುದೂ ಸಹ ಕಂಡು ಬರಲಿಲ್ಲ. ಈ ನಡುವೆ ಪೊಲೀಸರು ಆಗಾಗ ಗುಂಪು ಸೇರದಂತೆ ಎಚ್ಚರವಹಿಸಿರುವುದು ಸಹ ಕಂಡು ಬಂದಿತು.
     ವಾರ್ಡ್ ನಂ.೧೯, ೨೦, ೨೧ ಮತ್ತು ೨೨ರ ಮತದಾರರು ಕಾಗದನಗರದ ವಿವಿಧ ಮತಗಟ್ಟೆಗಳಲ್ಲಿ ಮತ ಚಲಾಯಿಸಿದರು. ಈ ನಡುವೆ ವಾರ್ಡ್ ನಂ.೨೧ರ ಮತದಾರರ ಪಟ್ಟಿಯಲ್ಲಿ ಅದಲು ಬದಲು ಆಗಿದ್ದು, ಈ ಕುರಿತು ಜೆಡಿಎಸ್ ಅಭ್ಯರ್ಥಿ ಬೆಂಬಲಿಗ ಅಶೋಕ್‌ಕುಮಾರ್ ಆರೋಪಿಸಿದರು. ಮತಯಂತ್ರಗಳಲ್ಲಿ ಯಾವುದೇ ತಾಂತ್ರಿಕ ದೋಷಗಳು ಕಂಡು ಬರಲಿಲ್ಲ. ನಿಗದಿತ ಸಮಯಕ್ಕೆ ಸರಿಯಾಗಿ ಮತದಾನ ಆರಂಭಗೊಂಡಿತು.
    ಗ್ರಾಮೀಣ ಪರಿಸರ ಹೊಂದಿರುವ ತಿಮ್ಲಾಪುರ-ದೊಡ್ಡಗೊಪ್ಪೇನ ಹಳ್ಳಿ ವ್ಯಾಪ್ತಿಯ ವಾರ್ಡ್ ನಂ.೨೩ರ ಮತದಾರರು ತಿಮ್ಲಾಪುರ, ದೊಡ್ಡಗೊಪ್ಪೇನಹಳ್ಳಿ ಮತ್ತು ಬುಳ್ಳಾಪುರದ ವಿವಿಧ ಮತಗಟ್ಟೆಗಳಲ್ಲಿ ಮತ ಚಲಾಯಿಸಿದರು. ಬೊಮ್ಮನಕಟ್ಟೆ ವ್ಯಾಪ್ತಿಯ ವಾರ್ಡ್ ನಂ.೨೪ರ ಮತದಾರರು ಒಂದೇ ಮತಗಟ್ಟೆಯ ೪ ವಿಭಾಗಗಳಲ್ಲಿ ಮತಚಲಾಯಿಸಿದರು. ಹುಡ್ಕೋ-ಹೊಸಬುಳ್ಳಾಪುರ ವ್ಯಾಪ್ತಿಯ ವಾರ್ಡ್ ನಂ.೨೫ರ ಮತದಾರರು ೨ ಮತಗಟ್ಟೆಗಳಲ್ಲಿ ಮತಚಲಾಯಿಸಿದರು.
     ಮತಗಟ್ಟೆಗಳ ಬಳಿ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ನಾನಾ ರೀತಿಯ ಕಸರತ್ತುಗಳನ್ನು ನಡೆಸುತ್ತಿರುವುದು ಕಂಡು ಬಂದಿತು. ಕೆಲವು ಮತಗಟ್ಟೆಗಳ ಬಳಿ ಮತದಾರರಿಗೆ ಮೊಸರನ್ನ, ಚಿತ್ರನ್ನ, ಮಜ್ಜಿಗೆ, ಕುಡಿಯುವ ನೀರಿನ ಬಾಟಲ್‌ಗಳನ್ನು ವಿತರಿಸುತ್ತಿರುವುದು ಕಂಡು ಬಂದಿತು.



ಭದ್ರಾವತಿ ನಗರಸಭೆ ಚುನಾವಣೆ ಹಿನ್ನಲೆಯಲ್ಲಿ ಬೆಳಿಗ್ಗೆಯಿಂದಲೇ ಬಿರುಸಿನ ಮತದಾನ ನಡೆಯಿತು.




Monday, April 26, 2021

ಅಭ್ಯರ್ಥಿಗಳಿಂದ ಕೊನೆಯ ಕಸರತ್ತು : ಮನೆ ಮನೆ ಮತಯಾಚನೆ

ಭದ್ರಾವತಿ, ಏ. ೨೬: ನಗರಸಭೆ ೩೪ ವಾರ್ಡ್‌ಗಳ ಚುನಾವಣೆ ಹಿನ್ನಲೆಯಲ್ಲಿ ಅಭ್ಯರ್ಥಿಗಳಿಂದ ಸೋಮವಾರ ಮತಯಾಚನೆಯ ಕೊನೆಯ ಕಸರತ್ತು ನಡೆಯಿತು. ಶನಿವಾರ ಮತ್ತು ಭಾನುವಾರ ವೀಕ್ ಎಂಡ್ ಲಾಕ್‌ಡೌನ್ ಹಿನ್ನಲೆಯಲ್ಲಿ ಬಹಿರಂಗ ಪ್ರಚಾರ ನಡೆಸಲು ಸಾಧ್ಯವಾಗಲಿಲ್ಲ. ಈ ನಡುವೆ ಭಾನುವಾರ ಸಂಜೆ ಬಹಿರಂಗ ಪ್ರಚಾರ ಮುಕ್ತಾಯಗೊಂಡಿತು. ಈ ಹಿನ್ನಲೆಯಲ್ಲಿ ಸೋಮವಾರ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು.
      ಬಿ.ಎಚ್ ರಸ್ತೆಗೆ ಹೊಂದಿಕೊಂಡಿರುವ  ಹೆಬ್ಬಂಡಿ ಮತ್ತು ಜೇಡಿಕಟ್ಟೆ ವ್ಯಾಪ್ತಿಯ ವಾರ್ಡ್ ನಂ.೧ರಲ್ಲಿ ಒಟ್ಟು ೩೯೨೧ ಮತದಾರರಿದ್ದು,  ಒಟ್ಟು  ೪ ಮಂದಿ  ಕಣದಲ್ಲಿದ್ದಾರೆ.  ಬಿಜೆಪಿ ಪಕ್ಷದಿಂದ  ಬಿ.ಎಸ್ ಉಮಾವತಿ,  ಕಾಂಗ್ರೆಸ್ ಪಕ್ಷದಿಂದ ಮೀನಾಕ್ಷಿ , ಜೆಡಿಎಸ್ ಪಕ್ಷದಿಂದ ಟಿ. ರೇಖಾ ಹಾಗು ಒಬ್ಬರು ಪಕ್ಷೇತರ ಅಭ್ಯರ್ಥಿ ಸ್ಪರ್ಧೆಯಲ್ಲಿದ್ದಾರೆ. ಈ ವಾರ್ಡ್‌ನಲ್ಲಿ ಕಳೆದ ೨ ಅವಧಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಅವರ ಪುತ್ರ ಎಂ.ಎ ಅಜಿತ್ ಜೆಡಿಎಸ್ ಪಕ್ಷದಿಂದ  ಆಯ್ಕೆಯಾಗಿದ್ದರು.
    ಬಿ.ಎಚ್ ರಸ್ತೆಗೆ ಹೊಂದಿಕೊಂಡಿರುವ ಲೋಯರ್‌ಹುತ್ತಾ ವ್ಯಾಪ್ತಿಯ ವಾರ್ಡ್ ನಂ.೨ರಲ್ಲಿ ಒಟ್ಟು ೩೩೧೮ ಮತದಾರರಿದ್ದು, ಈ ಬಾರಿ ೬ ಮಂದಿ ಚುನಾವಣಾ ಕಣದಲ್ಲಿದ್ದಾರೆ. ಜೆಡಿಎಸ್ ಪಕ್ಷದಿಂದ ನಗರಸಭೆ ಮಾಜಿ ಸದಸ್ಯ ಎಸ್.ಪಿ ಮೋಹನ್‌ರಾವ್ ಈ ಬಾರಿ ತಮ್ಮ ಪತ್ನಿ ಶಾಂತ ಅವರನ್ನು ಜೆಡಿಎಸ್ ಪಕ್ಷದಿಂದ ಕಣಕ್ಕಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಲಿಂಗಾಯಿತ ಸಮುದಾಯದ ಗೀತಾ ರಾಜ್‌ಕುಮಾರ್ ಅವರನ್ನು ಕಣಕ್ಕಿಳಿಸಲಾಗಿದೆ. ಬಿಜೆಪಿ ಪಕ್ಷದಿಂದ ಒಕ್ಕಲಿಗ ಸಮುದಾಯದ ಕೆ. ಲತಾ ಅವರನ್ನು ಕಣಕ್ಕಿಳಿಸಲಾಗಿದೆ. ಈ ವಾರ್ಡ್‌ನಲ್ಲಿ ಕಳೆದ ಬಾರಿ ಕೆಜೆಪಿ ಪಕ್ಷದಿಂದ ಸಹಕಾರಿ ಧುರೀಣ ಕೆ.ಎನ್ ಭೈರಪ್ಪಗೌಡ ಆಯ್ಕೆಯಾಗಿದ್ದರು.
      ವರ್ತಕರು, ತಮಿಳರು, ಗೌಳಿಗರು, ಮುಸ್ಲಿಂ ಸಮುದಾಯದವರು ಹೆಚ್ಚಾಗಿರುವ ಬಿ.ಎಚ್ ರಸ್ತೆ ಎಡ ಮತ್ತು ಮತ್ತು ಬಲಭಾಗ, ಚಾಮೇಗೌಡ ಏರಿಯಾ ವ್ಯಾಪ್ತಿಯನ್ನು ಒಳಗೊಂಡಿರುವ ವಾರ್ಡ್ ನಂ.೩ರಲ್ಲಿ ಒಟ್ಟು ೪೩೬೭ ಮತದಾರರಿದ್ದು, ಈ ಬಾರಿ ಒಟ್ಟು ೯ ಮಂದಿ ಕಣದಲ್ಲಿದ್ದಾರೆ. ಬಿಜೆಪಿ ಪಕ್ಷದ ವತಿಯಿಂದ ಯುವ ಮೋರ್ಚಾ ಕಾರ್ಯದರ್ಶಿ ನಕುಲ್ ಜೆ ರೇವಣಕರ್ ಅವರನ್ನು, ಕಾಂಗ್ರೆಸ್ ಪಕ್ಷದಿಂದ ಈ ಬಾರಿ ಕ್ರಿಶ್ಚಿಯನ್ ಸಮುದಾಯದ ಜಾರ್ಚ್ ಅವರನ್ನು ಕಣಕ್ಕಿಳಿಸಲಾಗಿದೆ. ಜೆಡಿಎಸ್ ಪಕ್ಷದ ವತಿಯಿಂದ ನಗರಸಭೆ ಮಾಜಿ ಉಪಾಧ್ಯಕ್ಷೆ ಬಿ.ಕೆ ದೇವಿಕಾ ಹಾಗು ನಗರಸಭೆ ಮಾಜಿ ಸದಸ್ಯ ರಮೇಶ್ ದಂಪತಿ ಪುತ್ರ ಬಿ.ಆರ್ ಉಮೇಶ್ ಅವರನ್ನು ಕಣಕ್ಕಿಳಿಸಲಾಗಿದೆ. ಪಕ್ಷೇತರ ಅಭ್ಯರ್ಥಿಗಳಾಗಿ ಸ್ನೇಹ ಜೀವಿ ಬಳಗದ ಸದಸ್ಯ ಯೋಗೀಶ್, ಮುಖಂಡ ಸ್ಟೀಲ್‌ಟೌನ್ ರಮೇಶ್, ನವೀನ್‌ಕುಮಾರ್ ಸೇರಿದಂತೆ ೬ ಮಂದಿ ಸ್ಪರ್ಧೆಯಲ್ಲಿದ್ದಾರೆ. ಈ ವಾರ್ಡ್‌ನಲ್ಲಿ ಕಳೆದ ಬಾರಿ ಜೆಡಿಎಸ್ ಪಕ್ಷದಿಂದ ಎಸ್. ಮೀನಾಕ್ಷಿ ಆಯ್ಕೆಯಾಗಿದ್ದರು.
     ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ,  ಗ್ರಾಮದೇವತೆ ಶ್ರೀ ಹಳದಮ್ಮ ದೇವಿ ದೇವಸ್ಥಾನ ಸೇರಿದಂತೆ ಇನ್ನಿತರ ಧಾರ್ಮಿಕ ಪುಣ್ಯ ಕ್ಷೇತ್ರಗಳನ್ನು ಹೊಂದಿರುವ ಕನಕಮಂಟಪ ಮೈದಾನ ವ್ಯಾಪ್ತಿಯ ವಾರ್ಡ್ ನಂ. ೪ರಲ್ಲಿ ಒಟ್ಟು ೪೪೦೯ ಮತದಾರರಿದ್ದು, ೬ ಮಂದಿ ಚುನಾವಣಾ ಕಣದಲ್ಲಿದ್ದಾರೆ.  ಶಾಸಕ ಬಿ ಕೆ ಸಂಗಮೇಶ್ವರ್ ಕುಟುಂಬ ಸಂಬಂಧಿ ಎಚ್. ವಿದ್ಯಾ ಕಾಂಗ್ರೆಸ್ ಪಕ್ಷದಿಂದ, ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ಚನ್ನೇಶ್ ರವರ ಪತ್ನಿ ಅನುಪಮಾ, ಜೆಡಿಎಸ್ ಪಕ್ಷದ ಮುಖಂಡ ಹರೀಶ್ ರವರ ಪತ್ನಿ ಉಷಾ ಜೆಡಿಎಸ್ ಅಭ್ಯರ್ಥಿಯಾಗಿ, ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಗೀತಾ ಬಸವರಾಜ್ ಹಾಗು ಇಬ್ಬರು ಪಕ್ಷೇತರರು ಸ್ಪರ್ಧೆಯಲ್ಲಿದ್ದಾರೆ. ಕಳೆದ ಬಾರಿ ಈ ವಾರ್ಡ್ ನಲ್ಲಿ ಜೆಡಿಎಸ್ ಪಕ್ಷದಿಂದ ಕೆ.ಎನ್ ವಿದ್ಯಾಶ್ರೀ ಆಯ್ಕೆಯಾಗಿದ್ದರು. ಈ ಬಾರಿ ಈ ವಾರ್ಡ್  ಹೆಚ್ಚು ಗಮನ ಸೆಳೆಯುತ್ತಿದ್ದು, ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಕಂಡು ಬರುತ್ತಿದೆ.
      ಮುಸ್ಲಿಂ, ಕುರುಬರು, ಮರಾಠಿಗರು ಹೆಚ್ಚಾಗಿರುವ ಕೋಟೆ ಏರಿಯಾ ವ್ಯಾಪ್ತಿಯ ವಾರ್ಡ್ ನಂ.೫ರಲ್ಲಿ ಒಟ್ಟು ೩೪೦೫ ಮತದಾರರಿದ್ದು, ಈ ಬಾರಿ ಒಟ್ಟು ೬ ಮಂದಿ ಚುನಾವಣಾ ಕಣದಲ್ಲಿದ್ದಾರೆ. ನಗರಸಭೆ ಮಾಜಿ ಅಧ್ಯಕ್ಷೆ ವೈ. ರೇಣುಕಾ ಕಾಂಗ್ರೆಸ್ ಪಕ್ಷದಿಂದ ಕಣದಲ್ಲಿದ್ದು, ಬಿಜೆಪಿ ಪಕ್ಷದಿಂದ ಮುಖಂಡ ಬಿ.ಎಸ್ ನಾರಾಯಣಪ್ಪನವರ ಪತ್ನಿ ಬಿ. ಶಶಿಕಲಾ ಅವರನ್ನು ಕಣಕ್ಕಿಳಿಸಲಾಗಿದೆ. ಹಾಲಿ ನಗರಸಭಾ ಸದಸ್ಯ ಮುರ್ತುಜಾ ಖಾನ್ ತಮ್ಮ ಪತ್ನಿ ತಬಸುಮ್ ಸುಲ್ತಾನ್ ಅವರನ್ನು ಜೆಡಿಎಸ್  ಪಕ್ಷದಿಂದ ಕಣಕ್ಕಿಳಿಸಿದ್ದು, ಆಮ್ ಆದ್ಮಿ ಪಾರ್ಟಿಯಿಂದ ರೇಷ್ಮಬಾನು, ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ವತಿಯಿಂದ ನಸೀಮಾ ಖಾನಂ ಹಾಗು ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಸಹ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ. ಕಳೆದ ಬಾರಿ ಈ ವಾರ್ಡ್‌ನಲ್ಲಿ ಕಾಂಗ್ರೆಸ್ ಪಕ್ಷದಿಂದ ಮುರ್ತುಜಾ ಖಾನ್ ಆಯ್ಕೆಯಾಗಿದ್ದರು.
     ಶ್ರೀಮಂತ ವರ್ಗದವರು ಹೆಚ್ಚಾಗಿ  ವಾಸಿಸುತ್ತಿರುವ ಸಿದ್ಧಾರೂಢ ನಗರ ವ್ಯಾಪ್ತಿಯ ವಾರ್ಡ್ ನಂ.೬ರಲ್ಲಿ  ಒಟ್ಟು ೩೮೭೫ ಮತದಾರರಿದ್ದು, ಒಟ್ಟು ೪ ಮಂದಿ ಚುನಾವಣಾ ಕಣದಲ್ಲಿದ್ದಾರೆ.  ಆರ್‌ಎಸ್‌ಎಸ್ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಎಚ್ ರಾಮಪ್ಪ ಪುತ್ರ, ಬಿಜೆಪಿ  ಮಂಡಲ   ಕಾರ್ಯದರ್ಶಿ ಕೆ.ಆರ್ ಸತೀಶ್ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ, ನಿವೃತ್ತ ಅಧಿಕಾರಿ ರಾಮಕೃಷ್ಣಪ್ಪ ಅವರ ಪುತ್ರ ಆರ್. ಶ್ರೇಯಸ್ ಕಾಂಗ್ರೆಸ್ ಅಭ್ಯರ್ಥಿಯಾಗಿ, ತಾಲೂಕು  ಪಂಚಾಯಿತಿ ಮಾಜಿ ಅಧ್ಯಕ್ಷ  ಚನ್ನಪ್ಪ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಹಾಗು  ಕುವೆಂಪು ಪ್ರವಾಸಿ ವಾಹನ ಚಾಲಕರ ಮತ್ತು ಮಾಲೀಕರ ಸಂಘದ ಡಿ. ರಾಜು  ಅವರ ಪತ್ನಿ ಸುಕನ್ಯಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಯಲ್ಲಿದ್ದಾರೆ. ಕಳೆದ ಬಾರಿ ಈ ವಾರ್ಡ್ ನಲ್ಲಿ ಜೆಡಿಎಸ್ ಪಕ್ಷದಿಂದ  ಶಿವರಾಜ್ ಆಯ್ಕೆಯಾಗಿದ್ದರು.
     ಬಹುತೇಕ ಮುಸ್ಲಿಂ ಸಮುದಾಯದವರು ಹೆಚ್ಚಾಗಿರುವ ದುರ್ಗಿಗುಡಿ ಹಾಗು ಖಲಂದರ್ ನಗರ ವ್ಯಾಪ್ತಿಯ ವಾರ್ಡ್ ನಂ.೭ರಲ್ಲಿ ಒಟ್ಟು ೩೭೦೩ ಮತದಾರರಿದ್ದು, ಈ ಬಾರಿ ೪ ಮಂದಿ ಚುನಾವಣಾ ಕಣದಲ್ಲಿದ್ದಾರೆ. ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರ, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಪುತ್ರ ಬಿ.ಎಂ ಮಂಜುನಾಥ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಸಲಾಗಿದೆ. ಈ ಹಿನ್ನಲೆಯಲ್ಲಿ ಈ ವಾರ್ಡ್ ಹೆಚ್ಚು ಗಮನ ಸೆಳೆಯುತ್ತಿದೆ. ಹಾಲಿ ನಗರಸಭಾ ಸದಸ್ಯ ಶಿವರಾಜ್ ತಮ್ಮ ಪತ್ನಿ ಎಂ. ರೇಣುಕರನ್ನು, ಬಿಜೆಪಿ ಪಕ್ಷದಿಂದ  ಆಟೋ ಮೂರ್ತಿ ಅವರನ್ನು ಹಾಗು , ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ವತಿಯಿಂದ ದೇವೇಂದ್ರ ಪಾಟೀಲ್ ಅವರನ್ನು ಕಣಕ್ಕಿಳಿಸಲಾಗಿದೆ. ಕಳೆದ ಬಾರಿ ಈ ವಾರ್ಡ್‌ನಲ್ಲಿ ಟಿಪ್ಪು ಸುಲ್ತಾನ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದರು.

ಶಾಂತಿಯುತ ಮತದಾನಕ್ಕೆ ನಾವಿದ್ದೇವೆ : ಪೊಲೀಸ್ ಇಲಾಖೆಯಿಂದ ಜಾಗೃತಿ

ನಗರದ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ


ಭದ್ರಾವತಿ ನಗರಸಭೆ ೩೪ ವಾರ್ಡ್‌ಗಳ ಚುನಾವಣೆ ಹಿನ್ನಲೆಯಲ್ಲಿ ಸೋಮವಾರ ಸಂಜೆ ಪೊಲೀಸ್ ಇಲಾಖೆ ವತಿಯಿಂದ ಶಾಂತಿಯುತ ಮತದಾನ ಕುರಿತು ಜಾಗೃತಿ ಮೂಡಿಸಲು ನಗರದ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ ನಡೆಸಲಾಯಿತು.
    ಭದ್ರಾವತಿ, ಏ. ೨೬:  ನಗರಸಭೆ ೩೪ ವಾರ್ಡ್‌ಗಳ ಚುನಾವಣೆ ಹಿನ್ನಲೆಯಲ್ಲಿ ಸೋಮವಾರ ಸಂಜೆ ಪೊಲೀಸ್ ಇಲಾಖೆ ವತಿಯಿಂದ ಶಾಂತಿಯುತ ಮತದಾನ ಕುರಿತು ಜಾಗೃತಿ ಮೂಡಿಸಲು ನಗರದ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ ನಡೆಸಲಾಯಿತು.
     ಮತಗಟ್ಟೆಗಳಿಗೆ ಮತದಾರರು ನಿರ್ಭೀತಿಯಿಂದ ಆಗಮಿಸುವ ಜೊತೆಗೆ ಮಾಸ್ಕ್, ಸ್ಯಾನಿಟೈಜರ್ ಬಳಕೆ, ಸಾಮಾಜಿಕ ಅಂತರ ಸೇರಿದಂತೆ  ಕೋವಿಡ್ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಮತದಾನ ಯಶಸ್ವಿಗೊಳಿಸುವಂತೆ ಇಲಾಖೆ ವತಿಯಿಂದ ಮನವಿ ಮಾಡಲಾಯಿತು.    
        ಚುನಾವಣಾ ಹಿನ್ನಲೆಯಲ್ಲಿ ಭದ್ರತೆಗಾಗಿ ೨-ಡಿವೈಎಸ್‌ಪಿ,  ೪-ಸರ್ಕಲ್ ಇನ್ಸ್‌ಪೆಕ್ಟರ್, ೧೬-ಸಬ್ ಇನ್ಸ್‌ಪೆಕ್ಟರ್, ೩೭-ಎಎಸ್‌ಐ ಮತ್ತು ೨೩೧-ಪೊಲೀಸ್ ಕಾನ್ಸ್‌ಟೇಬಲ್‌ಗಳನ್ನು  ನಿಯೋಜಿಸಲಾಗಿದೆ.