ಭಾನುವಾರ, ಅಕ್ಟೋಬರ್ 26, 2025

ಮಹಾದ್ವಾರದ ಮೇಲ್ಭಾಗದಲ್ಲಿ ಗಣಪತಿ ಮೂರ್ತಿ ನಿರ್ಮಾಣಕ್ಕೆ ೫ ಲಕ್ಷ ರು. ಅನುದಾನ

ಭದ್ರಾವತಿ ನಗರದ ಹೊಸಮನೆ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರಸೇನಾ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ರಂಗಪ್ಪ ವೃತ್ತದಲ್ಲಿ ನಿರ್ಮಿಸಲಾಗಿರುವ ಮಹಾದ್ವಾರದ ಮೇಲ್ಭಾಗದಲ್ಲಿ ಗಣಪತಿ ಮೂರ್ತಿ ನಿರ್ಮಾಣ ಕಾರ್ಯಕ್ಕೆ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ೫ ಲಕ್ಷ ರು. ಅನುದಾನ ನೀಡಿದ್ದಾರೆ. 
    ಭದ್ರಾವತಿ: ನಗರದ ಹೊಸಮನೆ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರಸೇನಾ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ರಂಗಪ್ಪ ವೃತ್ತದಲ್ಲಿ ನಿರ್ಮಿಸಲಾಗಿರುವ ಮಹಾದ್ವಾರದ ಮೇಲ್ಭಾಗದಲ್ಲಿ ಗಣಪತಿ ಮೂರ್ತಿ ನಿರ್ಮಾಣ ಕಾರ್ಯಕ್ಕೆ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ೫ ಲಕ್ಷ ರು. ಅನುದಾನ ನೀಡಿದ್ದಾರೆ. 
    ಶಾಸಕರ ಗೃಹ ಕಚೇರಿಯಲ್ಲಿ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರಸೇನಾ ಶ್ರೀ ವಿನಾಯಕ ಸೇವಾ ಸಮಿತಿ ಅಧ್ಯಕ್ಷ ಹಾಗೂ ನಗರಸಭೆ ಹಿರಿಯ ಸದಸ್ಯ ವಿ. ಕದೀರೇಶ್ ಮತ್ತು ಮಹಾಸಭಾ ಪದಾಧಿಕಾರಿಗಳಿಗೆ ಶಾಸಕರು ೫ ಲಕ್ಷ ರು. ಚೆಕ್ ವಿತರಿಸಿದರು. 
ಚೆಕ್ ಸ್ವೀಕರಿಸಿದ ವಿ.ಕದೀರೇಶ್ ಮತ್ತು ಪದಾಧಿಕಾರಿಗಳು ಸಂಗಮೇಶ್ವರ್ ಅವರಿಗೆ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಬಿ. ಎಸ್ ಗಣೇಶ್, ನಗರಸಭೆ ಸದಸ್ಯ ಚನ್ನಪ್ಪ, ಬ್ಲಾಕ್ ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಎಚ್ ಎಲ್ ಷಡಾಕ್ಷರಿ, ನಗರ ಓಬಿಸಿ ಅಧ್ಯಕ್ಷ ಬಿ. ಗಂಗಾಧರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷರಾಗಿ ಕುಮಾರಸ್ವಾಮಿ ಎರಡನೇ ಬಾರಿಗೆ ಆಯ್ಕೆ

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವಿಐಎಸ್‌ಎಲ್ ಎಂಪ್ಲಾಯಿಸ್ ಅಸೋಸಿಯೇಷನ್(ಎಐಟಿಯುಸಿ) ಗುತ್ತಿಗೆ ಕಾರ್ಮಿಕರ ಸಂಘಟನೆಗೆ ಭಾನುವಾರ ನಡೆದ ಚುನಾವಣೆಯಲ್ಲಿ ನೂತನ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ. 
    ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವಿಐಎಸ್‌ಎಲ್ ಎಂಪ್ಲಾಯಿಸ್ ಅಸೋಸಿಯೇಷನ್(ಎಐಟಿಯುಸಿ) ಗುತ್ತಿಗೆ ಕಾರ್ಮಿಕರ ಸಂಘಟನೆಗೆ ಭಾನುವಾರ ನಡೆದ ಚುನಾವಣೆಯಲ್ಲಿ ನೂತನ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ. 
    ಸಂಘಟನೆಯ ನ್ಯೂಟೌನ್ ಕಛೇರಿಯಲ್ಲಿ ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೪ ಗಂಟೆವರೆಗೆ ಮತದಾನ ನಡೆದಿದ್ದು, ನಂತರ ಮತ ಎಣಿಕೆ ನಡೆಯಿತು. ಮುಂದಿನ ೩ ವರ್ಷಗಳ ಅವಧಿಗೆ ಎರಡನೇ ಬಾರಿಗೆ ಅಧ್ಯಕ್ಷರಾಗಿ ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿಯಾಗಿ ಸತೀಶ ಅರುಣಾಚಲಂ, ಕಾರ್ಯದರ್ಶಿಯಾಗಿ ಐಸಾಕ್ ಲಿಂಕನ್ ಮತ್ತು ಖಜಾಂಚಿಯಾಗಿ ಎಂ. ಶಿವನಾಗು ಹಾಗು ಮೊದಲ ಬಾರಿಗೆ ಉಪಾಧ್ಯಕ್ಷರಾಗಿ ದೇವೇಂದ್ರ ಹಾಗು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಚ್. ವೆಂಕಟೇಶ್ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. 


    ಉಳಿದಂತೆ ಎಚ್. ಹರೀಶ್, ಜಿ. ಮಂಜುನಾಥ್, ಎಚ್.ಎಸ್ ಜಗದೀಶ್, ಅರುಣ, ಮಂಜುನಾಥ್, ಕುಮಾರ್ ಮತ್ತು ಎಲ್.ಪಿ ನವೀನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 
    ನ್ಯಾಯವಾದಿ ಎಸ್. ರವಿಕುಮಾರ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಅಂತಿಮವಾಗಿ ಫಲಿತಾಂಶ ಘೋಷಿಸಿದರು. ಫಲಿತಾಂಶ ಪ್ರಕಟಗೊಂಡ ನಂತರ ವಿಜೇತರ ಪರವಾಗಿ ಗುತ್ತಿಗೆ ಕಾರ್ಮಿಕರು ಪಟಾಕಿ ಸಿಡಿಸಿ ಸಂಭ್ರಮಿಸಿದರು. 

ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಕೇರಳ ಸಮಾಜಂ ಸನ್ಮಾನ

ಭದ್ರಾವತಿಯಲ್ಲಿ ಕೇರಳ ಸಮಾಜಂ ವತಿಯಿಂದ ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಅವರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು. 
    ಭದ್ರಾವತಿ : ನಗರದಲ್ಲಿ ಕೇರಳ ಸಮಾಜಂ ಹಲವಾರು ವರ್ಷಗಳಿಂದ ಯಶಸ್ವಿಯಾಗಿ ತನ್ನ ಕಾರ್ಯ ಚಟುವಟಿಕೆಗಳನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದು, ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಎಲ್ಲಾ ಕಾರ್ಯಗಳಿಗೂ ನಿರಂತರವಾಗಿ ಪ್ರೋತ್ಸಾಹ ನೀಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಸಮಾಜದ ವತಿಯಿಂದ ಅವರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು. 
    ಕೇರಳ ಸಮಾಜಂ ವತಿಯಿಂದ ಇತ್ತೀಚೆಗೆ ನಗರದ ಬಿ.ಎಚ್ ರಸ್ತೆ, ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಓಣಂ ಹಬ್ಬ ಯಶಸ್ವಿಯಾಗಿ ನೆರವೇರಿಸಲಾಗಿತ್ತು. ಈ ಸಂಭ್ರಮದ ಹಿನ್ನಲೆಯಲ್ಲಿ ಸಂಗಮೇಶ್ವರ್‌ರವರ ನಿವಾಸಕ್ಕೆ ತೆರಳಿ ಸಮಾಜಂ ಅಧ್ಯಕ್ಷ ಗಂಗಾಧರ್ ನೇತೃತ್ವದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಕೇರಳ ಸಮಾಜಂ ಮತ್ತು ಮಹಿಳಾ ಘಟಕ ಹಾಗು ಯುವ ಘಟಕದ ಪದಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು. 

ಶನಿವಾರ, ಅಕ್ಟೋಬರ್ 25, 2025

ಪಿಡಬ್ಲ್ಯೂಡಿ ನಿವೃತ್ತ ಇಂಜಿನಿಯರ್ ಬಿ.ಆರ್ ದಯಾನಂದ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಭದ್ರಾವತಿಯಲ್ಲಿ ಲೋಕೋಪಯೋಗಿ ಇಲಾಖೆ ನಿವೃತ್ತ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಬಿ.ಆರ್ ದಯಾನಂದರವರು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. 
    ಭದ್ರಾವತಿ: ಲೋಕೋಪಯೋಗಿ ಇಲಾಖೆ ನಿವೃತ್ತ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಬಿ.ಆರ್ ದಯಾನಂದರವರು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. 
    ಉದ್ಯಮಿ ಬಿ.ಕೆ ಜಗನ್ನಾಥ್‌ರವರ ನಿವಾಸದಲ್ಲಿ ಬಿ.ಕೆ ಸಂಗಮೇಶ್ವರ್ ಧಜ್ವ ನೀಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸಿದರು. ಬ್ಲಾಕ್ ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ಬಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ನಗರಸಭೆ ಸದಸ್ಯರಾದ ಬಿ.ಟಿ ನಾಗರಾಜ್, ಚನ್ನಪ್ಪ, ಓಬಿಸಿ ಘಟಕದ ಅಧ್ಯಕ್ಷ ಬಿ. ಗಂಗಾಧರ್, ನಗರ ಆಶ್ರಯ ಸಮಿತಿ ಅಧ್ಯಕ್ಷ ಬಿ.ಎಸ್ ಗೋಪಾಲ್, ಲೋಕೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಮೂಲತಃ ನಗರದ ನಿವಾಸಿಯಾಗಿರುವ ಬಿ.ಆರ್ ದಯಾನಂದರವರು ಹಳೇನಗರದ ದಿವಂಗತ ಶಾಮಿಯಾನ ಹಾಲಪ್ಪರವರ ಮೊಮ್ಮಗನಾಗಿದ್ದು, ಲೋಕೋಪಯೋಗಿ ಇಲಾಖೆಯಲ್ಲಿ ಕರ್ತವ್ಯಕ್ಕೆ  ಸೇರ್ಪಡೆಗೊಂಡು ನಗರದ ಲೋಕೋಪಯೋಗಿ ಇಲಾಖೆ ಕಛೇರಿ ಸೇರಿದಂತೆ ವಿವಿಧ ಕಾರ್ಯಪಾಲಕ ಇಂಜಿನಿಯರ್ ಹುದ್ದೆ ನಿರ್ವಹಿಸಿ ಇತ್ತೀಚಿಗೆ ನಿವೃತ್ತಿ ಹೊಂದಿದ್ದರು. 
    ದಯಾನಂದರವರು ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ಪಕ್ಷ ಸಂಘಟನೆಗೆ ಮತ್ತಷ್ಟು ಬಲ ಬಂದಂತಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ. 

ಅ.೨೭ರಂದು ವಿದ್ಯುತ್ ವ್ಯತ್ಯಯ

    ಭದ್ರಾವತಿ :  ಮೆಸ್ಕಾಂ ಗ್ರಾಮೀಣ ಉಪವಿಭಾಗದ ಲಕ್ಕವಳ್ಳಿ ೬೬/೧೧ ಕೆವಿ ವಿದ್ಯುತ್ ವಿತರಣಾ ಕೇಂದ್ರದ ಹತ್ತಿರ ವಾಹಕ ಬದಲಾವಣೆ ತುರ್ತು ಕಾಮಗಾರಿ ಕಾರ್ಯ ಹಮ್ಮಿಕೊಂಡಿರುವುದರಿಂದ ಅ.೨೭ರಂದು ಬೆಳಿಗ್ಗೆ ೯.೩೦ ರಿಂದ ಸಂಜೆ ೬ ಗಂಟೆವರೆಗೆ ೧೧ ಕೆವಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 
    ವದಿಯೂರು, ಗ್ಯಾರೇಜ್ ಕ್ಯಾಂಪ್, ಸಿಂಗನಮನೆ, ಶಂಕರಘಟ್ಟ, ಕುವೆಂಪು ವಿಶ್ವ ವಿದ್ಯಾನಿಲಯ, ನಲ್ಲಿಸರ, ಮಾಳೇನಹಳ್ಳಿ, ಗೋಣಿಬೀಡು, ಶಾಂತಿನಗರ, ತಾವರಘಟ್ಟ, ಮಲ್ಲಿಗೇನಹಳ್ಳಿ, ತಮ್ಮಡಿಹಳ್ಳಿ, ಜಂಕ್ಷನ್, ರಂಗನಾಥಪುರ, ಹುಣಸೇಕಟ್ಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ. 

ಶುಕ್ರವಾರ, ಅಕ್ಟೋಬರ್ 24, 2025

ಅರಣ್ಯೀಕರಣ ಪ್ರಯತ್ನಗಳನ್ನು ಪ್ರೋತ್ಸಾಹಿಸುವ ಕಾರ್ಯ ಶ್ಲಾಘನೀಯ : ಕೆ.ಟಿ ಹನುಮಂತಪ್ಪ

ಹಸಿರೀಕರಣದೆಡೆಗೆ ಅರಣ್ಯ ಇಲಾಖೆಯೊಡನೆ ಸೈಲ್-ವಿಐಎಸ್‌ಎಲ್ ನಡಿಗೆ 

ಭದ್ರಾವತಿ ಸೈಲ್-ವಿಐಎಸ್‌ಎಲ್ ಕಾರ್ಖಾನೆಯ 'ಹಸಿರೀಕರಣದೆಡೆಗೆ' ಮತ್ತು 'ಸ್ವಚ್ಛತಾ ಹಿ ಸೇವಾ' ಉಪಕ್ರಮದ ಭಾಗವಾಗಿ ಸಾಮಾಜಿಕ ಅರಣ್ಯೀಕರಣದ ಅಡಿಯಲ್ಲಿ ಅರಣ್ಯ ಇಲಾಖೆಗೆ ಹೊಂಗೆ, ಹಲಸು, ಮಾವು ಮತ್ತು ಜಂಬೂ ನೇರಳೆ ೧೧೦೦ ಸಸಿಗಳನ್ನು ಹಸ್ತಾಂತರಿಸಲಾಯಿತು. 
    ಭದ್ರಾವತಿ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಅರಣ್ಯೀಕರಣ ಪ್ರಯತ್ನಗಳನ್ನು ಪ್ರೋತ್ಸಾಹಿಸುವ ಕಾರ್ಯ ಶ್ಲಾಘನೀಯ ಎಂದು ಶಿವಮೊಗ್ಗ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಟಿ. ಹನುಮಂತಪ್ಪ ಪ್ರಶಂಸೆ ವ್ಯಕ್ತಪಡಿಸಿದರು. 
    ಕಾರ್ಖಾನೆಯ 'ಹಸಿರೀಕರಣದೆಡೆಗೆ' ಮತ್ತು 'ಸ್ವಚ್ಛತಾ ಹಿ ಸೇವಾ' ಉಪಕ್ರಮದ ಭಾಗವಾಗಿ ಸಾಮಾಜಿಕ ಅರಣ್ಯೀಕರಣದ ಅಡಿಯಲ್ಲಿ ಅರಣ್ಯ ಇಲಾಖೆಗೆ ಹೊಂಗೆ, ಹಲಸು, ಮಾವು ಮತ್ತು ಜಂಬೂ ನೇರಳೆ ೧೧೦೦ ಸಸಿಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು. 
    ಕಾರ್ಖಾನೆ ಆವರಣ ಮತ್ತು ನಗರ ಪ್ರದೇಶದಲ್ಲಿ ಅರಣ್ಯೀಕರಣಕ್ಕೆ ವಿಐಎಸ್‌ಎಲ್ ಕೊಡುಗೆ ನೀಡುವುದಲ್ಲದೆ, ಗಣರಾಜ್ಯೋತ್ಸವ, ಸೈಲ್ ದಿನಾಚರಣೆ, ಸಂಸ್ಥಾಪಕರ ದಿನಾಚರಣೆ, ಸ್ವಾತಂತ್ರ್ಯ ದಿನಾಚರಣೆ ಸೇರಿದಂತೆ ವಿಶೇಷ ಕಾರ್ಯಕ್ರಮಗಳ/ ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವಂತಹ ನುಗ್ಗೆ, ಪಪ್ಪಾಯಿ, ಕರಿಬೇವು ಸಸಿಗಳನ್ನು ಉಚಿತವಾಗಿ ವಿತರಿಸುವ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕೆ ಅಡಿಯಲ್ಲಿ ಆಯೋಜಿಸಲಾದ ಉಚಿತ ಆರೋಗ್ಯ ತಪಾಸಣಾ ಶಿಬಿರಗಳಲ್ಲಿ ಉಚಿತ ಬೀಜಗಳು/ಸಸಿಗಳ ವಿತರಣೆಯ ಮೂಲಕ ಈ ವರ್ಷ ಸುಮಾರು ೮,೫೦೦ ಸಸಿಗಳನ್ನು ೩,೦೦೦ ಬೀಜಗಳನ್ನು ವಿತರಿಸಿ, ಅರಣ್ಯೀಕರಣ ಪ್ರಯತ್ನಗಳನ್ನು ಪ್ರೋತ್ಸಾಹಿಸುವ ಕಾರ್ಖಾನೆಯ ಕಾರ್ಯ ಶ್ಲಾಘನೀಯ ಎಂದರು. 
    ಸೈಲ್ ಮತ್ತು ಅರಣ್ಯ ಇಲಾಖೆಯ ನಡುವಿನ ಸಂಬಂಧ ನಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಹಸಿರು ಮತ್ತು ಸ್ವಚ್ಛವಾಗಿಡುವಲ್ಲಿ ಬಹಳ ದೂರ ಸಾಗುತ್ತದೆ ಎಂದು ಅವರು ಆಶಿಸಿದರು. ಅಲ್ಲದೆ ಈ ನಿಟ್ಟಿನಲ್ಲಿ ಕಾರ್ಖಾನೆಯ ಭದ್ರತಾ ಇಲಾಖೆಯ ಪ್ರಯತ್ನಗಳನ್ನು ಅವರು ಪ್ರಶಂಸಿದರು.
    ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ ಅರಣ್ಯ ಇಲಾಖೆಗೆ ಸಸಿಗಳನ್ನು ಹಸ್ತಾಂತರಿಸಿದರು. ಮುಖ್ಯ ಮಹಾಪ್ರಬಂಧಕ(ಸ್ಥಾವರ) ಕೆ.ಎಸ್. ಸುರೇಶ್,  ಮಹಾಪ್ರಬಂಧಕ(ಹೆಚ್.ಆರ್ & ಪಿ.ಆರ್) ಎಲ್. ಪ್ರವೀಣ್ ಕುಮಾರ್,  ಮಹಾಪ್ರಬಂಧಕ (ಪರಿಸರ ನಿರ್ವಹಣಾ ಇಲಾಖೆ) ಮುತ್ತಣ್ಣ ಸುಬ್ಬರಾವ್, ಕಾರ್ಮಿಕರ ಸಂಘದ ಅಧ್ಯಕ್ಷ ಜೆ. ಜಗದೀಶ್, ಅಧ್ಯಕ್ಷರು, ಅಧಿಕಾರಿಗಳ ಸಂಘದ ಉಪಾಧ್ಯಕ್ಷ ಡಾ. ಎಸ್.ಎನ್ ಸುರೇಶ್ ಮತ್ತು ಖಜಾಂಚಿ ಇಳಯರಾಜ, ಅರಣ್ಯ ಇಲಾಖೆ ಉಪ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರಕುಮಾರ್,  ಚನ್ನಗಿರಿ ಉಪ ವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರತ್ನಪ್ರಭಾ,  ತರೀಕೆರೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಉಮರ್ ಭಾಷಾ,  ಉಂಬ್ಳೆಬೈಲು ವಲಯ ಅರಣ್ಯಾಧಿಕಾರಿ ಪ್ರದೀಪ್.ಎಂ.ಎಸ್.,  ಲಕ್ಕವಳ್ಳಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಕೆ.ಬಿ. ಹಾಗು ವಲಯ ಅರಣ್ಯಾಧಿಕಾರಿ, ಬಿ.ಆರ್ ದಿನೇಶ್ ಕುಮಾರ್ ಮತ್ತು  ಉಪ ವಲಯ ಅರಣ್ಯಾಧಿಕಾರಿ ಶಫಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಹೃದಯಾಘಾತ : ಕಾರ್ಮಿಕ ಸಾವು

ಪ್ರಕಾಶ್ 
    ಭದ್ರಾವತಿ: ನಗರದ ಜನ್ನಾಪುರ ನಿವಾಸಿ, ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದ ಈಶ್ವರ್ ಇಂಡಸ್ಟ್ರಿ ಕಾರ್ಮಿಕ ಪ್ರಕಾಶ್(೪೪) ಕರ್ತವ್ಯ ನಿರ್ವಹಿಸುತ್ತಿದ್ದಾಗ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ. 
    ಪತ್ನಿ, ಪುತ್ರ ಹಾಗು ಪುತ್ರಿ ಇಬ್ಬರು ಸಣ್ಣ ಮಕ್ಕಳು ಇದ್ದಾರೆ. ಪ್ರಕಾಶ್ ಗ್ಯಾಸ್ ಕಟ್ಟಿಂಗ್ ಕೆಲಸದಲ್ಲಿ ತೊಡಗಿರುವಾಗ ಬೆಳಿಗ್ಗೆ ಹೃದಯಾಘಾತವಾಗಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪರೀಕ್ಷೆ ನಡೆಸಿದ ವೈದ್ಯರು ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ನಡುವೆ ಮೃತದೇಹದ ಶವ ಪರೀಕ್ಷೆ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಿ ನಂತರ ಕುಟುಂಬಸ್ಥರಿಗೆ ಹಿಂದಿರುಗಿಸಲಾಗಿದೆ. ಶುಕ್ರವಾರ ಮಧ್ಯಾಹ್ನ ನಗರದ ಬೈಪಾಸ್ ರಸ್ತೆ, ಬಾಳೆಮಾರನಹಳ್ಳಿ ರಸ್ತೆಯಲ್ಲಿರುವ ಶ್ರೀ ಸತ್ಯಹರಿಶ್ಚಂದ್ರ ಹಿಂದೂ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿತು. 
    ಶಾಸಕರ ನೇತೃತ್ವದಲ್ಲಿ ಪರಿಹಾರ :
    ಮೃತ ಕಾರ್ಮಿಕ ಪ್ರಕಾಶ್ ಕುಟುಂಬಕ್ಕೆ ಪರಿಹಾರ ನೀಡುವಂತೆ ಗುತ್ತಿಗೆದಾರರ ಜೊತೆ ಶಾಸಕ ಬಿ.ಕೆ ಸಂಗಮೇಶ್ವರ್ ಮತ್ತು ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಬಿ.ಎಸ್ ಗಣೇಶ್‌ರವರು ಮಾತುಕತೆ ನಡೆಸಿದ್ದು, ಅಂತಿಮವಾಗಿ ೩ ಲಕ್ಷ ರು. ಪರಿಹಾರ ನೀಡಲಾಗಿದೆ. 
    ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆಯಲ್ಲಿ ಪ್ರಕಾಶ್ ಈ ಹಿಂದೆ ಗುತ್ತಿಗೆ ಕಾರ್ಮಿಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಕಾರ್ಖಾನೆಯಲ್ಲಿ ಕೆಲಸದ ದಿನ ಕಡಿತಗೊಳಿಸಿದ ಹಿನ್ನಲೆಯಲ್ಲಿ ಈಶ್ವರ್ ಇಂಡಸ್ಟ್ರಿಯಲ್ಲಿ ಕೆಲಸಕ್ಕೆ ಸೇರ್ಪಡೆಗೊಂಡಿದ್ದರು. 
ಶಾಸಕ ಬಿ.ಕೆ ಸಂಗಮೇಶ್ವರ್, ಬಿ.ಎಸ್ ಗಣೇಶ್, ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರು ಹಾಗು ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ಪ್ರಕಾಶ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.