ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯಸಭೆ
![](https://blogger.googleusercontent.com/img/a/AVvXsEielei2TOK-BnRBm0LlZUkkhxtyrzlIYFRrCCEchgj9mapY51OFCSUcVJnHYLmQ51fK_dgV2WFK40TYKB2zoqyXXM-9Tv0aFnA_MmJlloZWD5xra_g71jnhBqeLTrpn46N104LdC6iGRfi9kXu9tlyz0062421u537b-X5CJBZCTih2KDyAMnAfUyF_Xw=w400-h220-rw)
ಮುಖ್ಯಾಂಶಗಳು : - ಪಿಡಬ್ಲ್ಯೂಡಿ ಅಧಿಕಾರಿಗಳ ವರ್ತನೆಗೆ ಜೆಡಿಎಸ್ ಸದಸ್ಯರ ಆಕ್ರೋಶ
- ಎಲ್ಲಾ ಕೆರೆಗಳ ಬೌಂಡರಿ ನಿಗದಿಪಡಿಸಿ, ತೆರವು ಕಾರ್ಯಾಚರಣೆ ಕೈಗೊಳ್ಳಿ
- ನಾಮನಿರ್ದೇಶನ ಸದಸ್ಯರು ಕೇವಲ ಸಲಹೆಗಳನ್ನು ನೀಡಿ.
- ಮನೆ, ನೀರಿನ ಕಂದಾಯ ಕಡಿಮೆಗೊಳಿಸಿ.
-ಟೆಂಡರ್ ಸಲ್ಲಿಕೆಯಲ್ಲಿನ ಲೋಪದೋಷ ಸರಿಪಡಿಸಿಕೊಳ್ಳಿ.
- ದೇವಸ್ಥಾನಗಳಿಗೆ ಜಾಗ, ಮೀನು ಮಾರುಕಟ್ಟೆ ನಿರ್ಮಾಣ ಸೇರಿದಂತೆ ೩೩ ಪ್ರಸ್ತಾವನೆಗಳ ಕುರಿತು ಚರ್ಚೆ
ಭದ್ರಾವತಿ, ಮೇ. ೩೦: ಸದಸ್ಯರ ಗಮನಕ್ಕೆ ಬಾರದೆ ವಾರ್ಡ್‌ಗಳಲ್ಲಿ ಕಾಮಗಾರಿಗಳು ನಡೆಯುತ್ತಿದ್ದು, ಅಲ್ಲದೆ ಗುದ್ದಲಿ ಪೂಜೆ ಕಾರ್ಯಕ್ರಮಗಳಿಗೂ ನಮ್ಮನ್ನು ಆಹ್ವಾನಿಸುತ್ತಿಲ್ಲ ಎಂದು ಜೆಡಿಎಸ್ ನಗರಸಭಾ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಸೋಮವಾರ ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯಸಭೆಯಲ್ಲಿ ಮಾತನಾಡಿದ ಜೆಡಿಎಸ್ ನಗರಸಭಾ ಸದಸ್ಯರಾದ ಬಸವರಾಜ ಬಿ. ಆನೇಕೊಪ್ಪ ಹಾಗು ಸದಸ್ಯೆ ಪಲ್ಲವಿ, ವಾರ್ಡ್‌ಗಳಲ್ಲಿ ಸದಸ್ಯರ ಗಮನಕ್ಕೆ ಬಾರದೆ ಕಾಮಗಾರಿಗಳು ಆರಂಭಗೊಳ್ಳುತ್ತಿವೆ. ವಾರ್ಡ್‌ಗಳಲ್ಲಿ ಜವಾಬ್ದಾರಿ ಹೊಂದಿರುವ ನಮಗೆ ೨ ದಿನಗಳ ನಂತರ ಮಾಹಿತಿ ತಿಳಿಯುತ್ತಿದೆ. ನಮಗಿಂತ ಮೊದಲೇ ಬೇರೆಯವರಿಗೆ ಮಾಹಿತಿ ತಿಳಿದಿರುತ್ತದೆ. ಕನಿಷ್ಠ ಪಕ್ಷ ನಮ್ಮನ್ನು ಗುದ್ದಲಿ ಪೂಜೆ ಕಾರ್ಯಕ್ರಮಕ್ಕೂ ಆಹ್ವಾನಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಉತ್ತರಿಸಿದ ಉಪಾಧ್ಯಕ್ಷ ಚನ್ನಪ್ಪ ನಗರಸಭೆ ವತಿಯಿಂದ ನಡೆಯುವ ಕಾಮಗಾರಿಗಳ ಬಗ್ಗೆ ಆಯಾ ವಾರ್ಡ್‌ಗಳ ಸದಸ್ಯರ ಗಮನಕ್ಕೆ ತರಲಾಗುತ್ತಿದೆ. ಬೇರೆ ಇಲಾಖೆಗಳಿಂದ ನಡೆಯುವ ಕಾಮಗಾರಿಗಳ ಬಗ್ಗೆ ನಮಗೆ ಮಾಹಿತಿ ಇಲ್ಲ. ಆ ವಿಚಾರಗಳ ಬಗ್ಗೆ ಆಯಾ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿ ಎಂದರು.
ಈ ಹಿನ್ನಲೆಯಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಜೆಡಿಎಸ್ ಸದಸ್ಯರು ತರಾಟೆಗೆ ತೆಗೆದುಕೊಂಡರು. ಸೂಕ್ತ ಉತ್ತರ ನೀಡುವಂತೆ ಆಗ್ರಹಿಸಿ ಪ್ರತಿಭಟನೆಗೆ ಮುಂದಾದರೂ ಈ ನಡುವೆ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಕೆಲ ಸಮಯ ಮಾತಿನ ಚಕಮಕಿ ನಡೆಸಿದರು.
ಸದಸ್ಯ ಬಿ.ಕೆ ಮೋಹನ್ ಮಾತನಾಡಿ, ನಗರಸಭಾ ಸದಸ್ಯರು, ಶಾಸಕರು ಮತ್ತು ಲೋಕಸಭಾ ಸದಸ್ಯರು ತಮ್ಮ ಅಧಿಕೃತ ಲೆಟರ್‌ಹೆಡ್‌ಗಳಲ್ಲಿ ಸಲ್ಲಿಸುವ ಪ್ರಸ್ತಾವನೆಗಳನ್ನು ಮಾತ್ರ ಪರಿಶೀಲಿಸಿ ಸಾಮಾನ್ಯಸಭೆಗೆ ತರಬೇಕು. ಬೇರೆ ಯಾವುದೇ ಪ್ರಸ್ತಾವನೆಗಳಿಗೆ ಅವಕಾಶ ನೀಡಬಾರದೆಂದು ಒತ್ತಾಯಿಸಿದರು.
ಸದಸ್ಯ ಕೋಟೇಶ್ವರರಾವ್ ಮಾತನಾಡಿ, ವಾರ್ಡ್ ವ್ಯಾಪ್ತಿಯಲ್ಲಿರುವ ಕೆರೆಗಳ ಬೌಂಡರಿ ನಿಗದಿ ಮಾಡಿ ಒತ್ತುವರಿ ತೆರವು ಕಾರ್ಯಾಚರಣೆನಡೆಸಬೇಕೆಂದು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ನಗರಸಭೆ ವ್ಯಾಪ್ತಿಯಲ್ಲಿರುವ ಎಲ್ಲಾ ಕೆರೆಗಳು ನಗರಸಭೆಗೆ ಸೇರಿಲ್ಲ. ಆದರೆ ಬೌಂಡರಿ ಮಾತ್ರ ಗುರುತಿಸಲಾಗಿದೆ. ಸಂಪೂರ್ಣವಾಗಿ ನಗರಸಭೆ ಸೇರಿರುವ ಕೆರೆಗಳ ಒತ್ತುವರಿ ಕಾರ್ಯಾಚರಣೆಯನ್ನು ಕೈಗೊಳ್ಳಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು. ಈ ನಡುವೆ ಬಹುತೇಕ ಸದಸ್ಯರು ಮಾತನಾಡಿ, ಮೊದಲು ತಾಲೂಕು ಆಡಳಿತದ ಸಹಕಾರದೊಂದಿಗೆ ನಗರಸಭೆ ವ್ಯಾಪ್ತಿಯಲ್ಲಿರುವ ಎಲ್ಲಾ ಕೆರೆಗಳ ಬೌಂಡರಿ ನಿಗದಿಪಡಿಸುವ ಕಾರ್ಯ ಕೈಗೊಳ್ಳಿ ಆನಂತರ ಸಂಬಂಧಿಸಿದ ಇಲಾಖೆಗಳಿಗೆ ಮಾಹಿತಿ ನೀಡಿ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳಿ. ಈಗಾಗಲೇ ಹಲವು ಕಡೆ ಕೆರೆ ಜಾಗ ಒತ್ತುವರಿಯಾಗಿ ಅಕ್ರಮವಾಗಿ ಕೋಟ್ಯಾಂತರ ರು. ವಹಿವಾಟು ನಡೆಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಮೊದಲು ತೆರವು ಕಾರ್ಯಾಚರಣೆ ಕೈಗೊಳ್ಳಿ ನಂತರ ಜಾಗವನ್ನು ನಗರಸಭೆಗೆ ಹಸ್ತಾಂತರಿಸಿಕೊಳ್ಳಿ. ಇದರಿಂದ ಮುಂದಿನ ದಿನಗಳಲ್ಲಿ ನಗರಸಭೆಗೆ ಆದಾಯ ಬರುವ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಹುದಾಗಿದೆ ಎಂದು ಸಲಹೆ ನೀಡಿದರು.
ಈ ನಡುವೆ ನಾಮನಿರ್ದೇಶಿತ ಸದಸ್ಯ ಕರೀಗೌಡ ಕೆಲವು ಪ್ರಸ್ತಾವನೆಗಳ ಬಗ್ಗೆ ಪ್ರಶ್ನಿಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದರು. ಇದರಿಂದ ಅಸಮಾಧಾನಗೊಂಡ ಸದಸ್ಯ ಬಿ.ಕೆ ಮೋಹನ್, ನಾಮನಿರ್ದೇಶನ ಸದಸ್ಯರು ತಮ್ಮ ಅಧಿಕಾರ ವ್ಯಾಪ್ತಿಯನ್ನು ಅರ್ಥ ಮಾಡಿಕೊಳ್ಳಿ. ನಿಮಗೆ ಕೇವಲ ಸಲಹೆ ನೀಡುವ ಅಧಿಕಾರವಿದ್ದು, ಆಗ್ರಹಿಸುವ ಅಧಿಕಾರವಿಲ್ಲ ಎಂದರು.
ಹಳೇನಗರದ ಶ್ರೀ ಹಳದಮ್ಮ ದೇವಸ್ಥಾನಕ್ಕೆ ನ್ಯಾಯಾಲಯದ ಮುಂಭಾಗದಲ್ಲಿರುವ ನಗರಸಭೆಗೆ ಸೇರಿದ ದೊಡ್ಡಿ ಜಾಗವನ್ನು ರಿಯಾಯಿತಿ ದರದಲ್ಲಿ ನೀಡುವ ಸಂಬಂಧ ಸಲ್ಲಿಕೆಯಾಗಿದ್ದ ಪ್ರಸ್ತಾವನೆ ಕುರಿತು ಚರ್ಚೆ ನಡೆಸಿದ ಸದಸ್ಯರು ಜಾಗವನ್ನು ಯಾರಿಗೂ ನೀಡುವುದಿಲ್ಲ. ನಗರಸಭೆಯೇ ಜಾಗವನ್ನು ಉಳಿಸಿಕೊಳ್ಳಲಿದೆ ಎಂಬ ನಿರ್ಣಯ ಕೈಗೊಂಡರು.
ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಸೂಕ್ತ ಜಾಗ ಕಲ್ಪಿಸಿಕೊಡುವ ಸಂಬಂಧ ಚರ್ಚೆ ನಡೆದು ಕವಲಗುಂದಿ ಭಾಗದಲ್ಲಿ ಈಗಾಗಲೇ ಸ್ಮಶಾನ ಭೂಮಿ ಇರುವ ಹಿನ್ನಲೆಯಲ್ಲಿ ಸ್ಮಶಾನಕ್ಕಾಗಿ ಮಂಜೂರಾತಿಯಾಗಿರುವ ೩ ಎಕರೆ ಹೆಚ್ಚುವರಿ ಜಾಗವನ್ನು ಬಿಟ್ಟುಕೊಡುವ ನಿರ್ಣಯ ಕೈಗೊಳ್ಳಲಾಯಿತು.
ಮಳಿಗೆಗಳ ಬಾಡಿಗೆಯನ್ನು ಪಾವತಿಸದೆ, ನ್ಯಾಯಾಲಯದಲ್ಲಿ ದಾವೆ ಹೂಡಿರುವ ಸಂತೆ ಮೈದಾನದಲ್ಲಿರುವ ವಾಣಿಜ್ಯ ಮಳಿಗೆಗಳ ಬಾಡಿಗೆದಾರರೊಂದಿಗೆ ಸಂಧಾನ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಲಾಯಿತು.
ಉಳಿದಂತೆ ವಾರ್ಡ್ ನಂ.೨೨ರ ಉಜ್ಜನಿಪುರದ ಎನ್.ಎಚ್ ೨೦೬ರ ಚತುಷ್ಪಥ ರಸ್ತೆಯ ಪಕ್ಕದಲ್ಲಿರುವ ಸರ್ವೇ ನಂ.೧೩ರ ೬.೧೮ ಎಕರೆ ವಿಸ್ತೀರ್ಣದ ಬಿಳಕಟ್ಟೆ ಕೆರೆ ಮತ್ತು ಸರ್ವೇ ನಂ.೧೬ರ ೪.೦೧ ಎಕರೆ ವಿಸ್ತೀರ್ಣದ ಬಳಸಕಟ್ಟೆ ಕೆರೆಗಳನ್ನು ಅಭಿವೃದ್ಧಿಪಡಿಸಿ ದೋಣಿ ವಿಹಾರ ನಿರ್ಮಿಸಿ ಪ್ರವಾಸಿ ತಾಣವಾಗಿ ಪರಿವರ್ತಿಸುವುದು ಸೇರಿದಂತೆ ಸಲ್ಲಿಕೆಯಾಗಿದ್ದ ಸುಮಾರು ೩೩ ಪ್ರಸ್ತಾವನೆಗಳ ಬಗ್ಗೆ ಚಿರ್ಚಿಸಲಾಯಿತು.
ಮನೆ ಹಾಗು ನೀರಿನ ಕಂದಾಯ ವಸೂಲಾತಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದ ಸದಸ್ಯರು, ಈಗಾಗಲೇ ಶಿವಮೊಗ್ಗದಲ್ಲಿ ಮನೆ ಹಾಗು ನೀರಿನ ಕಂದಾಯ ಕಡಿಮೆ ಮಾಡಲಾಗಿದೆ. ಅದರಂತೆ ಇಲ್ಲೂ ಸಹ ಕಡಿಮೆ ಮಾಡಬೇಕು. ಒಂದೊಂದು ಕಡೆ ಒಂದೊಂದು ರೀತಿಯಾಗಿ ಕಾನೂನು ಮಾಡುವುದು ಬೇಡ. ಈ ಸಂಬಂಧ ಮಾಹಿತಿಯನ್ನು ಸರ್ಕಾರದ ಗಮನಕ್ಕೆ ತಂದು ಕಂದಾಯ ಕಡಿಮೆ ಮಾಡುವಂತೆ ಆಗ್ರಹಿಸಿದರು.
ಟೆಂಡರ್ ಸಲ್ಲಿಕೆಯಲ್ಲಿನ ಲೋಪದೋಷಗಳ ಕುರಿತು ತೀವ್ರ ಚರ್ಚೆ ನಡೆಯಿತು. ಈ ನಡುವೆ ಸದಸ್ಯ ಟಿಪ್ಪು ಸುಲ್ತಾನ್ ಹಾಗು ಉಪಾಧ್ಯಕ್ಷ ಚನ್ನಪ್ಪ ನಡುವಿನ ವಾಕ್ಸಮರ ಕೆಲ ಸಮಯ ಬಿಗುವಿನ ವಾತಾವರಣಕ್ಕೆ ಸಾಕ್ಷಿಯಾಯಿತು. ಕೆಲವು ಸದಸ್ಯರು ಟೆಂಡರ್ ಸಲ್ಲಿಕೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಿಕೊಳ್ಳುವಂತೆ ಸಲಹೆ ನೀಡಿದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ನೂತನ ಪೌರಾಯುಕ್ತ ಮನುಕುಮಾರ್ ಉಪಸ್ಥಿತರಿದ್ದರು. ಬಹುತೇಕ ನಗರಸಭಾ ಸದಸ್ಯರು, ವಿವಿಧ ವಿಭಾಗಗಳ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಭದ್ರಾವತಿ ನಗರಸಭೆ ಸಾಮಾನ್ಯ ಸಭೆ ಸೋಮವಾರ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.