Friday, June 30, 2023

ವಿಕಲಚೇತನ ಮಕ್ಕಳೊಂದಿಗೆ ಸಂಭ್ರಮಿಸಿದ ಶ್ರೀ ದತ್ತಾವಧೂತ ವಿನಯ್‌ಗುರೂಜಿ

ಚಿಕ್ಕಮಗಳೂರು ಸ್ವರ್ಣಪೀಠಿಕಾಪುರ ಗೌರಿಗದ್ದೆ ಹರಿಹರಪುರದ ಶ್ರೀ ದತ್ತಾವಧೂತ ವಿನಯ್ ಗುರೂಜಿಯವರು  ವಿಕಲಚೇತನ ಮಕ್ಕಳೊಂದಿಗೆ ಕೆಲ ಕ್ಷಣ ಬೆರೆತು ಅವರೊಂದಿಗೆ ಮಕ್ಕಳಂತೆ  ಸಂಭ್ರಮಿಸಿದ ಘಟನೆ ಭದ್ರಾವತಿ ನ್ಯೂಟೌನ್‌ತರಂಗ ಕಿವುಡು ಮಕ್ಕಳ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ನಡೆಯಿತು.
    ಭದ್ರಾವತಿ, ಜೂ. ೩೦:  ಚಿಕ್ಕಮಗಳೂರು ಸ್ವರ್ಣಪೀಠಿಕಾಪುರ ಗೌರಿಗದ್ದೆ ಹರಿಹರಪುರದ ಶ್ರೀ ದತ್ತಾವಧೂತ ವಿನಯ್ ಗುರೂಜಿಯವರು  ವಿಕಲಚೇತನ ಮಕ್ಕಳೊಂದಿಗೆ ಕೆಲ ಕ್ಷಣ ಬೆರೆತು ಅವರೊಂದಿಗೆ ಮಕ್ಕಳಂತೆ  ಸಂಭ್ರಮಿಸಿದ ಘಟನೆ ನಗರದ ನ್ಯೂಟೌನ್‌ತರಂಗ ಕಿವುಡು ಮಕ್ಕಳ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ನಡೆಯಿತು.
    ವಿಶೇಷ ಎಂಬಂತೆ ವಿನಯ್‌ಗುರೂಜಿಯವರು ಶಾಸಕ ಬಿ.ಕೆ ಸಂಗಮೇಶ್ವರ್‌ಜೊತೆಗೆ ಶಾಲೆಗೆ ಆಗಮಿಸಿ ವಿಕಲಚೇತನ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಶ್ರಮಿಸುತ್ತಿರುವ ಶಿವಭದ್ರ ಟ್ರಸ್ಟ್‌ಆಡಳಿತ ಮಂಡಳಿಯನ್ನು ಅಭಿನಂದಿಸಿದರು.
    ಅಲ್ಲದೆ ಶಾಲೆಯ ಪ್ರಗತಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡುವ ಮೂಲಕ ಒಂದು ತಿಂಗಳಿಗೆ ಅಗತ್ಯವಿರುವಷ್ಟು ದವಸ-ಧಾನ್ಯದ ಜೊತೆಗೆ ಶಾಲೆಯ ಬಣ್ಣ ಬಳಿಯುವ ಕಾರ್ಯಕ್ಕೆ ನೆರವು ನೀಡುವುದಾಗಿ ಭರವಸೆ ನೀಡಿದರು.
    ಗುರೂಜಿಯವರು ಮಕ್ಕಳಿಗೆ ಸಿಹಿ ಹಾಗು ಹಣ್ಣು ವಿತರಿಸುವ ಮೂಲಕ ಮಕ್ಕಳೊಂದಿಗೆ ಸಂಭ್ರಮ ಹಂಚಿಕೊಂಡರು.


    ಶಾಸಕ ಬಿ.ಕೆ ಸಂಗಮೇಶ್ವರ್‌ರವರು ಶಾಲೆಗೆ ೫ ಲಕ್ಷ ರು. ನೆರವು ನೀಡುವುದಾಗಿ ಹಾಗು ಪ್ರತಿ ತಿಂಗಳು ೫ ಸಾವಿರ ರು. ನಗದು ನೀಡುವುದಾಗಿ ಭರವಸೆ ನೀಡಿದರು.
    ಕೇಸರಿ ಪಡೆ ಅಧ್ಯಕ್ಷ ಕೆ.ಪಿ ಗಿರೀಶ್‌ರವರು ಸ್ಥಳದಲ್ಲಿಯೇ ೧೦ ಸಾವಿರ ರು. ನಗದು ಧನಸಹಾಯ ನೀಡುವ ಮೂಲಕ ಮಾನವೀಯತೆ ಮೆರೆದರು. ಇದೆ ರೀತಿ ಬಿ.ಎಚ್‌ರಸ್ತೆ ರೀಸೆಂಟ್‌ಟೈಲರ್‌ಅಶೋಕ್‌ರವರು ಪ್ರತಿ ತಿಂಗಳು ೨ ಸಾವಿರ ರು. ನೀಡುವುದಾಗಿ ಘೋಷಿಸಿದರು.
    ಟ್ರಸ್ಟ್‌ಪದಾಧಿಕಾರಿ, ನಿವೃತ್ತ ಪಶುವೈದ್ಯ ಡಾ. ಜಿ.ಎಂ ನಟರಾಜ್‌ಮತ್ತು ಮುಖ್ಯ ಶಿಕ್ಷಕಿ ತಾರಾಮಣಿಯವರು ಶಾಲೆಯ ಪ್ರಗತಿ ಕುರಿತು ಮಾಹಿತಿ ನೀಡಿದರು.
    ಈ ಶಾಲೆಯಲ್ಲಿಯೇ ವ್ಯಾಸಂಗ ಮಾಡಿ, ಇಲ್ಲಿಯೇ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕರಕುಶಲ ಶಿಕ್ಷಕಿ ಎಂ.ಸಿ ಗಾಯತ್ರಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಡಾ. ನರೇಂದ್ರಭಟ್‌, ವೃಂದಭಟ್‌, ಅನಂತಕೃಷ್ಣನಾಯಕ್‌, ಮದಿಅಲಗನ್‌, ಎಸ್.ಎನ್‌ಸುಭಾಷ್‌ಸೇರಿದಂತೆ ಟ್ರಸ್ಟ್‌ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  ಶಿಕ್ಷಕರಾದ ಎಂ.ಜಿ ಬಸವರಾಜ ಸ್ವಾಗತಿಸಿದರು. ಅರುಣ್‌ಕುಮಾರ್‌ವಂದಿಸಿದರು.

ಜು.೨ರಂದು ಬಿ.ಕೃಷ್ಣಪ್ಪ ೮೬ನೇ ಜನ್ಮದಿನಾಚರಣೆ

ಪ್ರೊ. ಬಿ. ಕೃಷ್ಣಪ್ಪ 
    ಭದ್ರಾವತಿ, ಜೂ. ೩೦ : ಕರ್ನಾಟಕ ದಲಿತ ನೌಕರರ ಒಕ್ಕೂಟ ತಾಲೂಕು ಶಾಖೆ ವತಿಯಿಂದ ಪ್ರೊ. ಬಿ. ಕೃಷ್ಣಪ್ಪನವರ ೮೬ನೇ ಜನ್ಮದಿನಾಚರಣೆ ಜು.೨ರ ಭಾನುವಾರ ಬೆಳಿಗ್ಗೆ ೧೧ ಗಂಟೆಗೆ ಜೆಟಿಎಸ್‌ಶಾಲೆ ಸಮೀಪದಲ್ಲಿರುವ ಶುಗರ್‌ಟೌನ್‌ಲಯನ್ಸ್‌ಕ್ಲಬ್‌ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
    ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ ಉದ್ಘಾಟಿಸಲಿದ್ದು, ಒಕ್ಕೂಟದ ತಾಲೂಕು ಅಧ್ಯಕ್ಷೆ ಎಸ್.‌ ಉಮಾ ಅಧ್ಯಕ್ಷತೆ ವಹಿಸಲಿದ್ದಾರೆ.
    ಶಾಸಕ ಬಿ.ಕೆ ಸಂಗಮೇಶ್ವರ್‌ಪ್ರೊ. ಬಿ. ಕೃಷ್ಣಪ್ಪನವರ ಪ್ರಶಸ್ತಿ ಪ್ರದಾನ ಮಾಡಲಿದ್ದು, ತಹಸೀಲ್ದಾರ್‌ಟಿ.ಜಿ ಸುರೇಶ್‌ಆಚಾರ್‌,  ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ರಮೇಶ್‌ಮತ್ತು ನೌಕರರ ಒಕ್ಕೂಟದ ಪ್ರಭಾರ ಜಿಲ್ಲಾಧ್ಯಕ್ಷ ಸಿ.ಕೆ ಗಂಗಾಧರಮೂರ್ತಿ ಪ್ರತಿಭಾ ಪುರಸ್ಕಾರ ನೆರವೇರಿಸಲಿದ್ದಾರೆ.
    ನೌಕರರ ಒಕ್ಕೂಟದ ಗೌರವ ಸಲಹೆಗಾರ ಸಿ. ಜಯಪ್ಪ ಹೆಬ್ಬಳಗೆರೆ, ಪೌರಾಯುಕ್ತ ಮನುಕುಮಾರ್‌, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎನ್.‌ ಗೋಪಾಲಪ್ಪ, ಇಂದಿರಾ ಪ್ರೊ. ಕೃಷ್ಣಪ್ಪ, ನಗರಸಭೆ ಉಪಾಧ್ಯಕ್ಷ ಸರ್ವಮಂಗಳ ಭೈರಪ್ಪ, ಡಿಎಸ್‌ಎಸ್‌ಜಿಲ್ಲಾ ಸಂಚಾಲಕ ಚಿನ್ನಯ್ಯ, ಬಿ. ಸಿದ್ದಬಸಪ್ಪ, ಪಿ. ಸುರೇಶ್‌, ಎನ್.‌ ಉಮೇಶ್‌, ಕೆ.ಬಿ ಜುಂಜಾನಾಯ್ಕ್‌, ಕೆ.ಎನ್‌ಶ್ರೀಹರ್ಷ, ಡಾ. ವರ್ಷ ಮತ್ತು ರಂಗನಾಥ್‌ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.  

Thursday, June 29, 2023

ವಿಐಎಸ್‌ಎಲ್‌ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತ : ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಂಭಾಗ ಗುರುವಾರ ಗುತ್ತಿಗೆ ಕಾರ್ಮಿಕರು ಪ್ರತಿಭಟನೆ ನಡೆಸಿದರು.

    ಭದ್ರಾವತಿ, ಜೂ. ೨೯: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ದಿನ ಕಳೆದಂತೆ ಒಂದೊಂದು ಘಟಕಗಳು ಉತ್ಪಾದನೆ ಸ್ಥಗಿತಗೊಳ್ಳುತ್ತಿದ್ದು, ಇದನ್ನು ವಿರೋಧಿಸಿ ಗುರುವಾರ ಗುತ್ತಿಗೆ ಕಾರ್ಮಿಕ ಸಂಘಟನೆಗಳು ಕಾರ್ಖಾನೆ ಮುಂಭಾಗ ಪ್ರತಿಭಟನೆ ನಡೆಸಿದವು.

          ಕಳೆದ ದಿನಗಳ ಹಿಂದೆ ಶಾಸಕ ಬಿ.ಕೆ ಸಂಗಮೇಶ್ವರ್ಕಾರ್ಖಾನೆ ಆಡಳಿತ ಮಂಡಳಿ ಜೊತೆಗೆ ಚರ್ಚಿಸಿ ಉತ್ಪಾದನೆ ಸ್ಥಗಿತಗೊಳಿಸದೆ ಗುತ್ತಿಗೆ ಕಾರ್ಮಿಕರ ಹಿತಕಾಪಾಡುವಂತೆ ಆಗ್ರಹಿಸಿದ್ದರು. ಆದರೆ ಆಡಳಿತ ಮಂಡಳಿ ಅಸಹಾಯಕತೆ ವ್ಯಕ್ತಪಡಿಸಿದ್ದು, ಮೇಲಾಧಿಕಾರಿಗಳು ಈಗಾಗಲೇ ಉತ್ಪಾದನೆ ಸ್ಥಗಿತಗೊಳಿಸುವಂತೆ ಆದೇಶಿಸಿದ್ದಾರೆ. ಅಲ್ಲದೆ ಕಚ್ಚಾ ಸಾಮಾಗ್ರಿಗಳು ಸಹ ಸ್ಥಗಿತಗೊಂಡಿದ್ದು, ಹಿನ್ನಲೆಯಲ್ಲಿ ಉತ್ಪಾದನೆ ಮುಂದುವರೆಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

          ಹಿನ್ನಲೆಯಲ್ಲಿ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂಭಾಗ ಮಳೆಯಲ್ಲಿಯೇ ಪ್ರತಿಭಟನೆ ಮುಂದುವರೆಸಿದರು. ನಡುವೆ ಪ್ರತಿಭಟನೆ ತೀವ್ರಗೊಳ್ಳುತ್ತಿದೆ.  

ಹಿರಿಯ ವೈದ್ಯ ಡಾ.ಕೆ.ಜಿ ಭಟ್ ನಿಧನ



ಭದ್ರಾವತಿ, ಜೂ. 29: ಸಿದ್ದಾರೂಢ ನಗರದ ನಿವಾಸಿ, ವಿಐಎಸ್ಎಲ್ ಕಾರ್ಖಾನೆಯ ನಿವೃತ್ತ  ವೈದ್ಯ ಡಾ.ಕೆ.ಜಿ ಭಟ್(67) ನಿಧನ ಹೊಂದಿದ್ದರು.
   ಇವರಿಗೆ ಓರ್ವ ಪುತ್ರ ಇದ್ದು, ಅನಾರೋಗ್ಯಕ್ಕೆ ಒಳಗಾಗಿದ್ದ ಇವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮಧ್ಯ ರಾತ್ರಿ ಮೃತಪಟ್ಟಿದ್ದಾರೆ.   
      ಇವರ ಅಂತ್ಯಸಂಸ್ಕಾರ ಗುರುವಾರ ನಗರದ ಹಿಂದೂ ರುದ್ರ ಭೂಮಿಯಲ್ಲಿ ನೆರವೇರಿತು.
ಕೆ.ಜಿ. ಭಟ್ ಅವರು ವಿಐಎಸ್'ಎಲ್ ಆಸ್ಪತ್ರೆಯಲ್ಲಿ ವೈದ್ಯರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದರು. ನಂತರ ಖಾಸಗಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ಇವರ ಪತ್ನಿ ಡಾ.ಕವಿತಾ ಭಟ್ ಅವರು ಕಳೆದ  ವರ್ಷ ಡಿಸೆಂಬರ್ 26ರಂದು ಹೃದಯಾಘಾತದಿಂದ ನಿಧನರಾಗಿದ್ದರು.  
  ಇವರ ನಿಧನಕ್ಕೆ ನಗರದ ಅನೇಕ ಗಣ್ಯರು, ವೈದ್ಯರು ಸಂತಾಪ ಸೂಚಿಸಿದ್ದಾರೆ.

Wednesday, June 28, 2023

ವಿಐಎಸ್ಎಲ್ ಗುತ್ತಿಗೆ ಕಾರ್ಮಿಕ ಮಂಜುನಾಥ್ ನಿಧನ



ಭದ್ರಾವತಿ, ಜೂ. 28: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಗುತ್ತಿಗೆ ಕಾರ್ಮಿಕ ಬಿ. ಮಂಜುನಾಥ್(43) ಬುಧವಾರ ಬೆಳಗ್ಗೆ ನಿಧನ ಹೊಂದಿದರು.
          ಪತ್ನಿ, ಓರ್ವ ಪುತ್ರಿ ಇದ್ದರು. ಕಳೆದ ಸುಮಾರು ಒಂದು ವರ್ಷದಿಂದ ಜನ್ನಾಪುರ ಲಿ೦ಗಾಯತರ ಬೀದಿಯಲ್ಲಿ ವಾಸವಾಗಿದ್ದರು.   ಹಲವಾರು ವರ್ಷಗಳಿಂದ ವಿಐಎಸ್ಎಲ್ ಗುತ್ತಿಗೆ ಕಾರ್ಮಿಕರಾಗಿದ್ದು, ಬದುಕು ಸಾಗಿಸುತ್ತಿದ್ದರು. ಕಾರ್ಖಾನೆಯಲ್ಲಿ ಕೇವಲ 13 ದಿನ ಕೆಲಸ ನಿರ್ವಹಿಸಬೇಕಾದ ಹಿನ್ನೆಲೆಯಲ್ಲಿ ಹೊರಗೆ ಪೇಂಟಿಂಗ್ ಕೆಲಸ ಸಹ ನಿರ್ವಹಿಸುತ್ತಿದ್ದರು. ಪೇಂಟಿಂಗ್ ಕೆಲಸ ನಿರ್ವಹಿಸುವಾಗ ಕಟ್ಟಡದಿಂದ ಕೆಳಗೆ ಬಿದ್ದು ತೀವ್ರ ಗಾಯಗೊಂಡಿದ್ದು, ಇವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
     ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಯುವ ಘಟಕದ ನಿರ್ದೇಶಕರಾಗಿದ್ದರು. ಇವರ ನಿಧಾನಕ್ಕೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಯುವ ಘಟಕ ಮತ್ತು ಗುತ್ತಿಗೆ ಕಾರ್ಮಿಕರ ಸಂಘ ಸಂತಾಪ ಸೂಚಿಸಿವೆ.
  

Tuesday, June 27, 2023

ಉತ್ಪಾದನೆ ಸ್ಥಗಿತಗೊಳಿಸದೆ ಗುತ್ತಿಗೆ ಕಾರ್ಮಿಕರ ಹಿತ ಕಾಪಾಡಿ

ವಿಐಎಸ್‌ಎಲ್ ಆಡಳಿತ ಮಂಡಳಿ ಜೊತೆಗೆ ಶಾಸಕ ಸಂಗಮೇಶ್ವರ್ ಚರ್ಚೆ

ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತಗೊಳಿಸದೆ ಗುತ್ತಿಗೆ ಕಾರ್ಮಿಕರಿಗೆ ಉದ್ಯೋಗ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳವಾರ ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಖಾನೆ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿದರು.
    ಭದ್ರಾವತಿ, ಜೂ. ೨೭: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತಗೊಳಿಸದೆ ಗುತ್ತಿಗೆ ಕಾರ್ಮಿಕರಿಗೆ ಉದ್ಯೋಗ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳವಾರ ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಖಾನೆ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿದರು.
    ಕಾರ್ಖಾನೆ ಮುಚ್ಚುವ ಆದೇಶ ಹಿಂಪಡೆಯುವಂತೆ ಹಾಗು ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸುವಂತೆ ಮತ್ತು ಗುತ್ತಿಗೆ ಕಾರ್ಮಿಕರ ಹಿತಕಾಪಾಡುವಂತೆ ಆಗ್ರಹಿಸಿ ಕಳೆದ ಸುಮಾರು ೬ ತಿಂಗಳಿನಿಂದ ನಿರಂತರವಾಗಿ ಹೋರಾಟ ನಡೆಸುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ಆರಂಭದಿಂದಲೂ ಶಾಸಕ ಬಿ.ಕೆ ಸಂಗಮೇಶ್ವರ್ ಬೆಂಬಲ ಸೂಚಿಸಿಕೊಂಡು ಬಂದಿದ್ದು, ಈ ನಡುವೆ ವಿಧಾನಸಭಾ ಚುನಾವಣೆ ಎದುರಾದ ಹಿನ್ನಲೆಯಲ್ಲಿ ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಸ್ಪಂದಿಸಲು ಅವರಿಗೆ ಸಾಧ್ಯವಾಗಿರಲಿಲ್ಲ.
    ಕಳೆದ ತಿಂಗಳು ಚುನಾವಣೆ ಮುಕ್ತಾಯಗೊಂಡಿದ್ದು, ೪ನೇ ಬಾರಿಗೆ ಕ್ಷೇತ್ರದ ಶಾಸಕರಾಗಿ ಸಂಗಮೇಶ್ವರ್ ಆಯ್ಕೆಯಾಗಿದ್ದಾರೆ. ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ಬೆಂಗಳೂರಿನಲ್ಲಿಯೇ ಉಳಿದುಕೊಂಡಿದ್ದ ಇವರು ಕಳೆದ ೪ ತಿಂಗಳ ಹಿಂದೆ ನಗರಕ್ಕೆ ಆಗಮಿಸಿದ್ದು, ಈ ಹಿನ್ನಲೆಯಲ್ಲಿ ಮಂಗಳವಾರ ಕಾರ್ಖಾನೆ ಆಡಳಿತ ಮಂಡಳಿ ಜೊತೆ ಪ್ರಸ್ತುತ ಬೆಳವಣಿಗೆಗಳ ಕುರಿತು ಮಾಹಿತಿ ಪಡೆದು ಗುತ್ತಿಗೆ ಕಾರ್ಮಿಕರ ಹಿತಕಾಪಾಡುವ ನಿಟ್ಟಿನಲ್ಲಿ ಮುಂದಿನ ಕ್ರಮಗಳನ್ನು ಚರ್ಚಿಸಿದರು.
    ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ, ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್. ಪ್ರವೀಣ್‌ಕುಮಾರ್ ಹಾಗು ಕಾಯಂ ಮತ್ತು ಗುತ್ತಿಗೆ ಕಾರ್ಮಿಕರ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸದೃಢ ಸಮಾಜ ನಿರ್ಮಾಣಕ್ಕೆ ಯುವ ಸಮೂಹ ಪಾತ್ರ ಅಗತ್ಯ : ಶಾಂತಲಾ

ಮಾದಕ ವಸ್ತುಗಳ ಸಾಗಣಿಕೆ, ಸೇವನೆ ವಿರೋಧ ದಿನದ ಪ್ರಯುಕ್ತ ಭದ್ರಾವತಿ ತರೀಕೆರೆ ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಜೂ. ೨೭: ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುಗಳ ಸೇವನೆ ಹೆಚ್ಚಾಗುತ್ತಿದ್ದು, ಇದರಿಂದ ಯುವ ಸಮೂಹ ದಾರಿ ತಪ್ಪುತ್ತಿದೆ. ಸದೃಢ ಸಮಾಜ ನಿರ್ಮಾಣಕ್ಕೆ ಯುವ ಸಮೂಹ ಎಚ್ಚೆತ್ತುಕೊಳ್ಳಬೇಕೆಂದು ನಗರದ ಸಂಚಾರಿ ಪೊಲೀಸ್ ಠಾಣಾಧಿಕಾರಿ ಶಾಂತಲಾ ಹೇಳಿದರು.
    ಅವರು ಜಿಲ್ಲಾ ಪೊಲೀಸ್ ಮಾರ್ಗದರ್ಶನದಲ್ಲಿ ಸಂಚಾರಿ ಠಾಣೆ ವತಿಯಿಂದ ಮಾದಕ ವಸ್ತುಗಳ ಸಾಗಣಿಕೆ, ಸೇವನೆ ವಿರೋಧ ದಿನದ ಪ್ರಯುಕ್ತ ನಗರದ ತರೀಕೆರೆ ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.
    ವಿದ್ಯಾರ್ಥಿಗಳಿಗೆ ಮಾದಕ ವಸ್ತು  ಸೇವನೆಯಿಂದ ಉಂಟಾಗುವ ದುಷ್ಪಾರಿಣಾಮಗಳು ಹಾಗೂ ಸಂಚಾರ ನಿಯಮ ಪಾಲನೆ ಮತ್ತು ಅಪಘಾತ ನಿಯಂತ್ರಣ ಕುರಿತು ಜಾಗೃತಿ ಮೂಡಿಸಿದರು. ಕಾಲೇಜಿನ ಪ್ರಾಂಶುಪಾಲ ಹಿರಿಯಣ್ಣ ಮತ್ತು ಉಪನ್ಯಾಸಕ ವೃಂದದವರು ಹಾಗು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಬದುಕು ಸಾರ್ಥಕಗೊಳ್ಳಲು ಮಹಾನ್ ವ್ಯಕ್ತಿಗಳ ಆದರ್ಶತನ ಮೈಗೂಡಿಸಿಕೊಳ್ಳಿ

ನಾಡಪ್ರಭು ಕೆಂಪೇಗೌಡರ ಜಯಂತ್ಯೋತ್ಸವದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್

ಭದ್ರಾವತಿ ನಗರಸಭೆ ವ್ಯಾಪ್ತಿಯ ಅಪ್ಪರ್ ಹುತ್ತಾದಲ್ಲಿ ನಾಡಪ್ರಭು ಕೆಂಪೇಗೌಡ ಹಿತರಕ್ಷಣಾ ವೇದಿಕೆ ವತಿಯಿಂದ ಮಂಗಳವಾರ ಕೆಂಪೇಗೌಡರ ಜಯಂತ್ಯೋತ್ಸವ ಹಮ್ಮಿಕೊಳ್ಳಲಾಗಿತ್ತು. ಶಾಸಕ ಬಿ.ಕೆ ಸಂಗಮೇಶ್ವರ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
     ಭದ್ರಾವತಿ, ಜೂ. ೨೭ : ನಾಡಪ್ರಭು ಕೆಂಪೇಗೌಡರ ಕೊಡುಗೆ ಅಪಾರವಾಗಿದ್ದು, ಅವರ ಆದರ್ಶತನಗಳು ನಮಗೆ ದಾರಿದೀಪವಾಗಿವೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
    ಅವರು ಮಂಗಳವಾರ ನಗರಸಭೆ ವ್ಯಾಪ್ತಿಯ ಅಪ್ಪರ್ ಹುತ್ತಾದಲ್ಲಿ ನಾಡಪ್ರಭು ಕೆಂಪೇಗೌಡ ಹಿತರಕ್ಷಣಾ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಮನುಷ್ಯನ ಹುಟ್ಟು-ಸಾವು ಸಹಜ. ಆದರೆ ಈ ನಡುವೆ ಸಮಾಜಕ್ಕೆ ನಾವು ಏನು ಕೊಡುಗೆ ನೀಡುತ್ತೇವೆ ಎಂಬುದು ಮುಖ್ಯವಾಗಿದೆ. ನಾಡಪ್ರಭು ಕೆಂಪೇಗೌಡರು ಸೇರಿದಂತೆ ಅನೇಕ ಮಹಾನ್ ನಾಯಕರು ಸಮಾಜಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಅವರು ಬದುಕಿಲ್ಲದಿದ್ದರೂ ಸಹ ಮಾನಸಿಕವಾಗಿ ನಮ್ಮೆಲ್ಲರ ಮುಂದೆ ಇಂದಿಗೂ ಉಳಿದುಕೊಂಡಿದ್ದಾರೆ ಎಂದರು.
    ಕೆಂಪೇಗೌಡರು ಅಂದು ನಿರ್ಮಿಸಿರುವ ಕೆರೆಕಟ್ಟೆಗಳು, ಅದರಲ್ಲೂ ವಿಶೇಷವಾಗಿ ಪ್ರಸ್ತುತ ಜಗತ್ತಿನ ಎಲ್ಲಾ ರಾಷ್ಟ್ರಗಳ ಗಮನ ಸೆಳೆಯುತ್ತಿರುವ ಬೆಂಗಳೂರು ನಿರ್ಮಾಣ ಕೆಂಪೇಗೌಡರು ಹೊಂದಿರುವ ಜನಪರ ಕಾಳಜಿಗಳು, ದೂರದೃಷ್ಟಿ ಚಿಂತನೆಗಳು ನಮ್ಮೆಲ್ಲರಿಗೂ ಮಾದರಿಯಾಗಿದೆ. ಈ ಹಿನ್ನಲೆಯಲ್ಲಿ ಕೆಂಪೇಗೌಡರನ್ನು ಸ್ಮರಿಸಿಕೊಳ್ಳುವುದು ನಾಡಿನ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
    ಹಿತರಕ್ಷಣಾ ವೇದಿಕೆ ಪ್ರಮುಖರಾದ ಎಸ್. ಕುಮಾರ್, ಬಾಲಕೃಷ್ಣ, ಟಿ. ಚಂದ್ರೇಗೌಡ, ವೆಂಕಟೇಶ್, ನಗರಸಭಾ ಸದಸ್ಯರಾದ ಬಿ.ಕೆ ಮೋಹನ್, ಲತಾ ಚಂದ್ರಶೇಖರ್, ಮಣಿ ಎಎನ್‌ಎಸ್, ಆರ್. ಮೋಹನ್‌ಕುಮಾರ್, ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ, ಜಿಲ್ಲಾ ಸಂಚಾಲಕ ಚಿನ್ನಯ್ಯ, ದೇವಾಂಗ ಸಮಾಜದ ತಾಲೂಕು ಅಧ್ಯಕ್ಷ ಎಂ. ಪ್ರಭಾಕರ್, ಪ್ರಜಾಪ್ರತಿನಿಧಿ ಸುರೇಶ್, ಎಂ.ಎಸ್ ಸುಧಾಮಣಿ, ಚನ್ನಪ್ಪ, ಕಬಡ್ಡಿ ಕೃಷ್ಣೇಗೌಡ, ಮಹೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ವೇದಿಕೆ ವತಿಯಿಂದ ಸಿಹಿ ಹಂಚಲಾಯಿತು. ಅಲ್ಲದೆ ಸಾವಿರಾರು ಮಂದಿಗೆ ಬಾಡೂಟದ ವ್ಯವಸ್ಥೆ ಕೈಗೊಳ್ಳಲಾಗಿತ್ತು.

ಭದ್ರಾವತಿ ವಿವಿಧೆಡೆ ನಾಡಪ್ರಭು ಕೆಂಪೇಗೌಡರ ಜಯಂತ್ಯೋತ್ಸವ

ಭದ್ರಾವತಿಯಲ್ಲಿ ನಾಡಹಬ್ಬ ಜಯಂತ್ಯೋತ್ಸವದ ಅಂಗವಾಗಿ ಮಂಗಳವಾರ ತಾಲೂಕು ಒಕ್ಕಲಿಗರ ಸಂಘದ ನೇತೃತ್ವದಲ್ಲಿ ಒಕ್ಕಲಿಗ ಸಮುದಾಯದ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಮೆರವಣಿಗೆಗೆ ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ ಚಾಲನೆ ನೀಡಿದರು.
    ಭದ್ರಾವತಿ, ಭದ್ರಾವತಿ, ಜೂ. ೨೭: ನಗರದ ವಿವಿಧೆಡೆ  ಮಂಗಳವಾರ ನಾಡಪ್ರಭು ಕೆಂಪೇಗೌಡ ಜಯಂತ್ಯೋತ್ಸವ  ವಿಜೃಂಭಣೆಯಿಂದ ಆಚರಿಸಲಾಯಿತು.
    ತಾಲೂಕು ಒಕ್ಕಲಿಗರ ಸಂಘದ ನೇತೃತ್ವದಲ್ಲಿ ಒಕ್ಕಲಿಗ ಸಮುದಾಯದ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಮೆರವಣಿಗೆಗೆ ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ ಚಾಲನೆ ನೀಡಿದರು.
    ನಗರದ ಬಿ.ಎಚ್ ರಸ್ತೆ, ಹುತ್ತಾ ಕಾಲೋನಿ ಬಸ್ ನಿಲ್ದಾಣದಿಂದ ವಿವಿಧ ಕಲಾತಂಡಗಳೊಂದಿಗೆ ಆರಂಭಗೊಂಡ ಮೆರವಣಿಗೆ ಕೆಎಸ್‌ಆರ್ ಟಿಸಿ ಮುಖ್ಯ ಬಸ್ ನಿಲ್ದಾಣ, ಡಾ. ಬಿ.ಆರ್ ಅಂಬೇಡ್ಕರ್ ವೃತ್ತ, ಹಾಲಪ್ಪ ವೃತ್ತ, ರಂಗಪ್ಪ ವೃತ್ತ ಮೂಲಕ ತಾಲೂಕು ಕಛೇರಿವರೆಗೂ ತಲುಪಿತು.
    ಮೆರವಣಿಗೆಯಲ್ಲಿ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಟಿ ರವಿ ಹಾಗೂ ಪದಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಸ್. ಮಣಿಶೇಖರ್, ಒಕ್ಕಲಿಗ ಸಮುದಾಯದ ವಿವಿಧ ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದರು.
    ಆಟೋ ಚಾಲಕರು ಮತ್ತು ಸ್ನೇಹ ಜೀವಿ ಬಳಗದಿಂದ ಜಯಂತಿ ಆಚರಣೆ :
    ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಮುಂಭಾಗ ಈ ಬಾರಿ ಸಹ ಸರ್.ಎಂ ವಿಶ್ವೇಶ್ವರಾಯ ಆಟೋ ಚಾಲಕರು, ಮಾಲೀಕರ ಸಂಘ ಹಾಗು ಸ್ನೇಹ ಜೀವಿ ಬಳಗದಿಂದ ನಾಡಪ್ರಭು ಕೆಂಪೇಗೌಡರ ಜಯಂತ್ಯೋತ್ಸವ ಆಚರಿಸಲಾಯಿತು.
    ಶಾಸಕ ಬಿ.ಕೆ ಸಂಗಮೇಶ್ವರ್ ಸರ್.ಎಂ ವಿಶ್ವೇಶ್ವರಾಯ ಪ್ರತಿಮೆಗೆ ಹಾಗು ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಒಕ್ಕಲಿಗ ಸಮಾಜದ ಮುಖಂಡ ಅರುಣ್‌ಗೌಡ ಸಾವಿರಾರು ಮಂದಿಗೆ ಮೈಸೂರು ಪ್ಯಾಕ್ ವಿತರಿಸಿದರು. ಅಲ್ಲದೆ ಸುಮಾರು ೩ ಸಾವಿರ ಮಂದಿಗೆ ಬಾಡೂಟದ ವ್ಯವಸ್ಥೆ ಕೈಗೊಳ್ಳಲಾಗಿತ್ತು.


ಭದ್ರಾವತಿ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಮುಂಭಾಗ ಈ ಬಾರಿ ಸಹ ಸರ್.ಎಂ ವಿಶ್ವೇಶ್ವರಾಯ ಆಟೋ ಚಾಲಕರು, ಮಾಲೀಕರ ಸಂಘ ಹಾಗು ಸ್ನೇಹ ಜೀವಿ ಬಳಗದಿಂದ ನಾಡಪ್ರಭು ಕೆಂಪೇಗೌಡರ ಜಯಂತ್ಯೋತ್ಸವ ಆಚರಿಸಲಾಯಿತು. ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಸಿಹಿ ತಿನಿಸುವ ಮೂಲಕ ಸಂಭ್ರಮಿಸಲಾಯಿತು.
    ಪ್ರಮುಖರಾದ ಸ್ನೇಹ ಜೀವಿ ಬಳಗದ ಪೊಲೀಸ್ ಉಮೇಶ್, ಹ ಸರ್.ಎಂ ವಿಶ್ವೇಶ್ವರಾಯ ಆಟೋ ಚಾಲಕರು, ಮಾಲೀಕರ ಸಂಘದ ಅಧ್ಯಕ್ಷ ಲಕ್ಷ್ಮಣ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್, ನಗರಸಭಾ ಸದಸ್ಯ ಮಣಿ ಎಎನ್‌ಎಸ್, ಅರುಣ್‌ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ತಾಲೂಕು ಕಛೇರಿಯಲ್ಲಿ ಕೆಂಪೇಗೌಡ ಜಯಂತಿ :
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಕಛೇರಿ ಸಭಾಂಗಣದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಿಸಲಾಯಿತು.


ಭದ್ರಾವತಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಕಛೇರಿ ಸಭಾಂಗಣದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಿಸಲಾಯಿತು. ತಾಲೂಕು ಆಡಳಿತ ವತಿಯಿಂದ ಶಾಸಕ ಬಿ.ಕೆ ಸಂಗಮೇಶ್ವರನ್ನು ಅಭಿನಂದಿಸಲಾಯಿತು.
ಶಾಸಕರಾದ ಬಿ.ಕೆ ಸಂಗಮೇಶ್ವರ್ ಮತ್ತು ಶಾರದಪೂರ‍್ಯಾನಾಯ್ಕ ಕಾರ್ಯಕ್ರಮದಲ್ಲಿ ಒಟ್ಟಿಗೆ ಪಾಲ್ಗೊಂಡು ಗಮನ ಸೆಳೆದರು. ತಹಸೀಲ್ದಾರ್ ಸುರೇಶ್ ಆಚಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಟಿ ರವಿ, ಕಾರ್ಯದರ್ಶಿ ಪ್ರಭಾಕರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್, ನಗರಸಭಾ ಸದಸ್ಯ ಮಣಿ ಎಎನ್‌ಎಸ್ ಸೇರಿದಂತೆ ತಾಲೂಕು ಕಛೇರಿ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.

Monday, June 26, 2023

ದುರ್ವಾಸನೆ, ರೋಗರುಜಿನ ಹರಡುವ ಭೀತಿ : ಕೋಳಿ ಪಾರಂ ತೆರವುಗೊಳಿಸಿ

ಬಸವನಗುಡಿ ಗ್ರಾಮಸ್ಥರಿಂದ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ

ಭದ್ರಾವತಿ ತಾಲೂಕಿನ ಎರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಗುಡಿ ವ್ಯಾಪ್ತಿಯಲ್ಲಿರುವ ಕೋಳಿ ಪಾರಂ ತೆರವುಗೊಳಿಸುವಂತೆ ಆಗ್ರಹಿಸಿ ಅಲ್ಲಿನ ನಿವಾಸಿಗಳು ಸೋಮವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
    ಭದ್ರಾವತಿ, ಜೂ. ೨೬: ತಾಲೂಕಿನ ಎರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಗುಡಿ ವ್ಯಾಪ್ತಿಯಲ್ಲಿರುವ ಕೋಳಿ ಪಾರಂ ತೆರವುಗೊಳಿಸುವಂತೆ ಆಗ್ರಹಿಸಿ ಅಲ್ಲಿನ ನಿವಾಸಿಗಳು ಸೋಮವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
    ಗ್ರಾಮದ ಪಕ್ಕದಲ್ಲಿಯೇ ಕಡಿಮೆ ಅಂತರದಲ್ಲಿ ಕೋಳಿ ಪಾರಂ ಇದ್ದು, ಇದರಿಂದ ಈ ಭಾಗದಲ್ಲಿ ದುರ್ವಾಸನೆ ಹೆಚ್ಚಾಗುತ್ತಿದೆ. ಕಪ್ಪು ನೊಣಗಳ ಕಾಟ ಹೆಚ್ಚಾಗಿದ್ದು, ರೋಗರುಜಿನಗಳು ಹರಡುವ ಭೀತಿ ಎದುರಾಗಿದೆ. ಮನೆಗಳಲ್ಲಿ ಊಟ ಮಾಡಲು ಸಾಧ್ಯವಾಗುತ್ತಿಲ್ಲ. ಮಕ್ಕಳಲ್ಲಿ ಆಗಾಗ ವಾಂತಿ ಕಾಣಿಸಿಕೊಳ್ಳುತ್ತಿದ್ದು, ಅಲ್ಲದೆ ಸುತ್ತಮುತ್ತಲ ಪರಿಸರದಲ್ಲಿ ಸ್ವಚ್ಛತೆ ಇಲ್ಲದಂತಾಗಿದೆ. ಎಲ್ಲಿಬೇಕೆಂದರಲ್ಲಿ ಕೋಳಿ ತ್ಯಾಜ್ಯ ಕಂಡು ಬರುತ್ತಿದ್ದು, ನಾಯಿಗಳ ಹಾವಳಿ ಹೆಚ್ಚಾಗಿದೆ. ನಾಯಿಗಳು ಮಕ್ಕಳ ಮೇಲೆ ದಾಳಿ ನಡೆಸುತ್ತಿರುವ ಘಟನೆಗಳು ನಡೆಯುತ್ತಿವೆ. ಇದರಿಂದ ಒಂದೆಡೆ ಭಯದ ವಾತಾವರಣ ನಿರ್ಮಾಣವಾಗಿದ್ದು, ಬಡವರ್ಗಕ್ಕೆ ಸೇರಿರುವ ನಾವುಗಳು ಸಂಕಷ್ಟಕ್ಕೆ ಒಳಗಾಗುವಂತಾಗಿದೆ ಎಂದು ಅಳಲು ತೋರ್ಪಡಿಸಿಕೊಂಡರು.
    ಈಗಾಗಲೇ ಹಲವಾರು ಬಾರಿ ಈ ಸಂಬಂಧ ಮನವಿ ಸಲ್ಲಿಸಲಾಗಿದ್ದು, ಯಾವುದೇ ಪ್ರಯೋಜನವಾಗಿಲ್ಲ. ತಕ್ಷಣ ಕೋಳಿ ಪಾರಂ ತೆರವುಗೊಳಿಸಬೇಕು. ಅಲ್ಲಿಯವರೆಗೂ ಪ್ರತಿಭಟನೆ ಮುಂದುವರೆಸುವುದಾಗಿ ಎಚ್ಚರಿಸಿದರು.
    ಮನವಿ ಆಲಿಸಿದ ತಹಸೀಲ್ದಾರ್‌ರವರು ತಕ್ಷಣ ಸ್ಥಳ ಪರಿಶೀಲನೆಗೆ ತೆರಳಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ನಡುವೆ ಕೋಳಿ ಪಾರಂ ಮಾಲೀಕರಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ಸಹ ತೆರವುಗೊಳಿಸುವಂತೆ ಸೂಚಿಸಿದ್ದಾರೆ.

ಪ್ರತಿಯೊಬ್ಬರಲ್ಲೂ ಮಾನವೀಯ ಮೌಲ್ಯಗಳು ಅತ್ಯವಶ್ಯಕ : ಡಾ. ಗುರುಪಾದ ಎಸ್. ಮರಿಗುದ್ದಿ

ಭದ್ರಾವತಿ ಸಿದ್ಧಾರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವಗುರು ಬಸವಣ್ಣನವರ ಜಯಂತ್ಯೋತ್ಸವ ಹಾಗೂ ಅಭಿನಂದನೆ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
    ಭದ್ರಾವತಿ, ಜೂ. ೨೬ : ಪ್ರತಿಯೊಬ್ಬರಲ್ಲೂ ಮಾನವೀಯ ಮೌಲ್ಯಗಳು ಅತ್ಯವಶ್ಯಕವಾಗಿದ್ದು, ೧೨ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರು ಈ ನಿಟ್ಟಿನಲ್ಲಿಯೇ ಸಮಾಜ ನಿರ್ಮಾಣಕ್ಕೆ ಮುಂದಾಗಿದ್ದರು ಎಂದು ಸಂಕೇಶ್ವರದ ವಿಶ್ರಾಂತ ಪ್ರಾಧ್ಯಾಪಕ ಡಾ. ಗುರುಪಾದ ಎಸ್. ಮರಿಗುದ್ದಿ ಹೇಳಿದರು.
    ಅವರು ಸಿದ್ಧಾರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವಗುರು ಬಸವಣ್ಣನವರ ಜಯಂತ್ಯೋತ್ಸವ ಹಾಗೂ ಅಭಿನಂದನೆ ಕಾರ್ಯಕ್ರಮದಲ್ಲಿ 'ಮಾನವತೆಯ ಮಹಾಯಾನಿ ಬಸವಣ್ಣ' ವಿಷಯ ಮಾತನಾಡಿದರು.
    ಜಗಜ್ಯೋತಿ ಬಸವಣ್ಣನವರ ವಚನಗಳು ಮಾನವತೆಯ ನೆಲೆಗಟ್ಟಿನ ಮೇಲೆ ರೂಪುಗೊಂಡಿವೆ. ಧರ್ಮ, ಜಾತಿ, ಲಿಂಗ ತಾರತಮ್ಯವಿಲ್ಲದೆ ಭೂಮಿ ಮೇಲೆ ಪ್ರತಿಯೊಬ್ಬರನ್ನು ಸಮಾನವಾಗಿ ಕಾಣುವ, ಪ್ರೀತಿಸುವ, ಗೌರವಿಸುವ, ಸಹಬಾಳ್ವೆ ಬದುಕು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಮಾನವೀಯ ಮೌಲ್ಯಗಳು ಸಹಕಾರಿಯಾಗಿವೆ. ನುಡಿದಂತೆ ನಡೆವ ಬಸವಣ್ಣನವರ ಬದುಕು, ವಚನಗಳು ಇಂದಿಗೂ ನಮ್ಮೆಲ್ಲರಿಗೂ ಆದರ್ಶತನವಾಗಿದೆ. ವಚನಗಳಲ್ಲಿನ ಪ್ರತಿಯೊಂದು ಮೌಲ್ಯಗಳನ್ನು ಅರ್ಥಮಾಡಿಕೊಂಡು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು.
    ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಎನ್ ಮಹಾರುದ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಸವಣ್ಣನವರ ಬದುಕೇ ನಮ್ಮೆಲ್ಲರಿಗೂ ದಾರಿದೀಪವಾಗಿದೆ. ಅವರ ಆಶಯದಂತೆ ನಾವೆಲ್ಲರೂ ಮುನ್ನಡೆಯಬೇಕಾಗಿದೆ ಎಂದರು.
    ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶಾಸಕ ಬಿ.ಕೆ ಸಂಗಮೇಶ್ವರ್, ೪ನೇ ಬಾರಿಗೆ ಕ್ಷೇತ್ರದ ಶಾಸಕರನ್ನಾಗಿ ಆಯ್ಕೆ ಮಾಡಿರುವ ಕ್ಷೇತ್ರದ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ರಾಜ್ಯದಲ್ಲಿ ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು,  ಪ್ರತಿಯೊಬ್ಬರ ಏಳಿಗೆಗಾಗಿ ಶ್ರಮಿಸುತ್ತಿದೆ. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ನಾನು ಬದ್ಧನಾಗಿದ್ದು, ಈಗಾಗಲೇ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ಸಾವಿರಾರು ಕೋ.ರು. ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲಿವೆ. ಕ್ಷೇತ್ರದ ಜನರು ನನ್ನ ಮೇಲೆ ಹೊಂದಿರುವ ವಿಶ್ವಾಸಕ್ಕೆ ಚಿರಋಣಿಯಾಗಿರುವೆ ಎಂದರು.
    ಚಿಕ್ಕಮಗಳೂರು ಶ್ರೀ ಬಸವತತ್ವ ಪೀಠ ಹಾಗು ಶಿವಮೊಗ್ಗ ಬಸವಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ದಿವ್ಯಸಾನಿಧ್ಯ ವಹಿಸಿದ್ದರು.
    ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿ ಧನಂಜಯ ಅಭಿನಂದನಾ ನುಡಿಗಳನ್ನಾಡಿದರು. ಪರಿಷತ್ ತಾಲೂಕು ಅಧ್ಯಕ್ಷ ಎನ್.ಎಸ್ ಮಲ್ಲಿಕಾರ್ಜುನಯ್ಯ ಅಧ್ಯಕ್ಷತೆ ವಹಿಸಿದ್ದರು.  ಎಂ. ವಿರುಪಾಕ್ಷಪ್ಪ ಕಾರ್ಯಕ್ರಮ ನಿರೂಪಿಸಿದರು. ವಚನ ಗಾಯನ ನಡೆಯಿತು.

ಮಂತ್ರಿಗಿರಿ ಬೇಡ, ಊರಿನ ಅಭಿವೃದ್ಧಿ ಮುಖ್ಯ : ಬಿ.ಕೆ ಸಂಗಮೇಶ್ವರ್

ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರನ್ನು ಭಾನುವಾರ ಶಾಸಕರ ಗೃಹ ಕಛೇರಿಯಲ್ಲಿ ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
    ಭದ್ರಾವತಿ, ಜು. ೨೬ : ನನಗೆ ಯಾವುದೇ ಮಂತ್ರಿಗಿರಿ ಅಗತ್ಯವಿಲ್ಲ. ಅಧಿಕಾರಕ್ಕಿಂತ ಊರಿನ ಅಭಿವೃದ್ಧಿಯೇ ನನಗೆ ಮುಖ್ಯ. ಆದರೂ ಜು.೨೦ರೊಳಗಾಗಿ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ಸಿಗುವ ವಿಶ್ವಾಸವಿದೆ ಎಂದು  ಶಾಸಕ ಬಿ.ಕೆ.ಸಂಗಮೇಶ್ವರ್ ಹೇಳಿದರು.
    ಅವರು ಭಾನುವಾರ ಶಾಸಕರ ಗೃಹ ಕಛೇರಿಯಲ್ಲಿ ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಸನ್ಮಾನ, ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
    ಕ್ಷೇತ್ರಕ್ಕೆ ಅನುದಾನ ತರುವ ನಿಟ್ಟಿನಲ್ಲಿ ಇಷ್ಟು ದಿನಗಳ ಕಾಲ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದು, ನನ್ನ ವಿರುದ್ಧ ಅಪಪ್ರಚಾರ ನಡೆಸಲಾಗಿದೆ. ಯಾವುದೇ ಅಪಪ್ರಚಾರಕ್ಕೆ ಕ್ಷೇತ್ರದ ಜನರು ಕಿವಿಗೊಡಬಾರದು ಎಂದರು.
    ಆರೋಗ್ಯ ಸರಿ ಇಲ್ಲ. ಚಿಕಿತ್ಸೆಗಾಗಿ ಲಂಡನ್‌ಗೆ ತೆರಳಿದ್ದಾರೆ, ಸಿಂಗಾಪುರಕ್ಕೆ ತೆರಳಿದ್ದಾರೆ ಎಂದು ವಿರೋಧಿಗಳು ಅಪಪ್ರಚಾರ ಮಾಡುತ್ತ ಅದರಲ್ಲಿಯೂ ರಾಜಕಾರಣ ಮಾಡಲು ಹೊರಟಿದ್ದಾರೆ. ಕ್ಷೇತ್ರದ ಜನರು ಬೆಂಗಳೂರಿಗೆ ಬಂದು ನನ್ನೊಡನೆ ಮಾತನಾಡಿಕೊಂಡು ಊರಿನ ಕೆಲಸ ಮಾಡಿಸಿಕೊಂಡು ಹೋಗುತ್ತಿದ್ದರು. ಊರಿನ ಅಭಿವೃದ್ಧಿ ಆಗಬೇಕು ಎನ್ನುವುದು ನನ್ನ ಮುಖ್ಯ ಉದ್ದೇಶವಾಗಿದ್ದು,  ಎಲ್ಲಾ ಮಂತ್ರಿಗಳು ಸುಲಭವಾಗಿ ಸಿಗುತ್ತಿದ್ದ ಕಾರಣ ಯಾರೂ ಪ್ರಸ್ತಾವನೆ ಸಲ್ಲಿಸಲು ಮುಂದೆ ಬಾರದ ಸಂದರ್ಭದಲ್ಲಿ ಅಲ್ಲಿಯೇ ಇದ್ದು ಅವಕಾಶ ಸದುಪಯೋಗಪಡಿಸಿಕೊಂಡಿದ್ದೇನೆ ಎಂದರು.
    ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರಕ್ಕೆ ೨ ಸಾವಿರ ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದ್ದೇನೆ. ಎಂಪಿಎಂ ಕಾರ್ಖಾನೆ ಪುನರಾರಂಭಿಸಲು ಎಲ್ಲ ರೀತಿಯ ಪ್ರಯತ್ನ ನಡೆಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಎಂ.ಬಿ. ಪಾಟೀಲ್ ಮತ್ತು ಕಾರ್ಖಾನೆ ಅಧ್ಯಕ್ಷರ ಜೊತೆ ಮಾತನಾಡಲಾಗಿದೆ. ವಿಐಎಸ್‌ಎಲ್ ಕಾರ್ಖಾನೆಯನ್ನು ರಾಜ್ಯ ಸರ್ಕಾರಕ್ಕೆ ವಾಪಸ್ ನೀಡುವಂತೆ ಕೇಳಲಾಗಿದೆ. ವಾಪಸ್ ಕೊಡದಿದ್ದರೆ ಬಂಡವಾಳ ತೊಡಗಿಸಿ ಅಭಿವೃದ್ಧಿಪಡಿಸುವಂತೆ ಸಂಬಂಧಪಟ್ಟ ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದರು.
    ಹೊಸ ಸೇತುವೆಗಳ ನಿರ್ಮಾಣ, ರಿಂಗ್ ರೋಡ್ ಕಾಮಗಾರಿ, ಭದ್ರಾ ಕಾಲೋನಿಯಲ್ಲಿರುವ ೧೦ ಎಕರೆ ಜಾಗದಲ್ಲಿ ೧೫೦ ಬೆಡ್‌ಗಳ ಆಸ್ಪತ್ರೆ, ಸುಸಜ್ಜಿತ ಶಸ್ತ್ರಚಿಕಿತ್ಸಾ ಯಂತ್ರೋಪಕರಣಗಳ ಅಳವಡಿಕೆ, ಚನ್ನಗಿರಿ ರಸ್ತೆ ಅಗಲೀಕರಣ, ಮಾಧವಾಚಾರ್ ವೃತ್ತದಿಂದ ಭದ್ರಾ ಕಾಲೋನಿವರೆಗೂ ಹಾಗೂ ಅನ್ವರ್ ಕಾಲೋನಿಯಿಂದ ಬಾಬಳ್ಳಿವರೆಗೂ ೧೦೦ ಅಡಿ ಅಗಲವಾದ ರಸ್ತೆ ಕಾಮಗಾರಿ ಶೀಘ್ರ ಕೈಗೊಳ್ಳಲಾಗುವುದು. ತಕ್ಕಂತೆ ಸಂಬಂಧಪಟ್ಟ ಎಲ್ಲ ಇಲಾಖೆಗಳಿಗೂ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.
    ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಕಣ್ಣಪ್ಪ, ಪ್ರತಕರ್ತರಾದ ಎನ್. ಬಾಬು, ಬಸವರಾಜ್, ಫಿಲೋಮಿನಾ, ಕಿರಣ್, ಮಹಾಲಿಂಗಪ್ಪ, ಕೆ.ಆರ್ ಶಂಕರ್, ಸುಭಾಷ್‌ರಾವ್ ಸಿಂಧ್ಯಾ, ಬಿ.ಆರ್ ಬದರಿನಾರಾಯಣ ಶ್ರೇಷ್ಠಿ, ಶೈಲೇಶ್ ಕೋಠಿ, ಸುದರ್ಶನ್, ರವೀಂದ್ರನಾಥ್(ಬ್ರದರ್), ರಾಬರ್ಟ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Sunday, June 25, 2023

ಬಿಜೆಪಿಯಿಂದ ತುರ್ತು ಪರಿಸ್ಥಿತಿಯ ಕರಾಳ ದಿನ ಆಚರಣೆ

ಭದ್ರಾವತಿ ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ ತುರ್ತು ಪರಿಸ್ಥಿತಿಯ ಕರಾಳ ದಿನ ಆಚರಿಸಲಾಯಿತು.
    ಭದ್ರಾವತಿ, ಜೂ. ೨೫ : ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ ಅಂದಿನ ಪ್ರಧಾನಿ ಮಂತ್ರಿ ಇಂದಿರಾಗಾಂಧಿಯವರ ಸರ್ವಾಧಿಕಾರಿ ಧೋರಣೆ ಖಂಡಿಸಿ ಭಾನುವಾರ ಬಿಜೆಪಿ ತಾಲೂಕು ಮಂಡಲ ವತಿಯಿಂದ ಕರಾಳ ದಿನ ಆಚರಿಸಲಾಯಿತು.  
    ಮಂಡಲ ತಾಲೂಕು ಅಧ್ಯಕ್ಷ ಜಿ. ಧರ್ಮಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರು ಮಾತನಾಡಿ, ತುರ್ತು ಪರಿಸ್ಥಿತಿ ಇಂದಿರಾಗಾಂಧಿ ಸರ್ಕಾರದ ದುರಾಡಳಿತದ ಕರಾಳ ದಿನಗಳ ಕಹಿ ನೆನಪು. ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಭವಿಷ್ಯದಲ್ಲಿ ಆ ರೀತಿಯ ಸಂದರ್ಭ ದೇಶ ಎದುರಿಸುವ ಸ್ಥಿತಿ ಬರಬಾರದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಜಾಗೃತರಾಗಬೇಕು ಎಂದರು.
  ಡಾ. ಧನಂಜಯ ಸರ್ಜಿ, ಬಿ.ಕೆ ಶ್ರೀನಾಥ್, ಎಂ. ಪ್ರಭಾಕರ್, ವಿ. ಕದಿರೇಶ್, ನಾಗಭೂಷಣ್, ರಾಘವೇಂದ್ರ, ರಂಗಸ್ವಾಮಿ, ರಾಮಲಿಂಗಯ್ಯ, ಮಧುಕರ್ ಕಾನಿಟ್ಕರ್, ಕೊಟ್ರಪ್ಪ ರೆಡ್ಡಿ,  ಬಿ.ಎಚ್ ರುದ್ರಪ್ಪ, ಭಾರತಮ್ಮ, ಶ್ರೀಧರ್ ಮಾರ್ಷಮ್, ರಂಗಪ್ಪ ಹೊಳೆಹೊನ್ನೂರು, ಕೃಷ್ಣ ಹೊಳೆಹೊನ್ನೂರು. ಪರಶುರಾಮ್ ಹರಿರಾವ್ ಕದಂ,  ಕೇಶವ ಸಾಗರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಹಳೇಯ ವಿದ್ಯಾರ್ಥಿಗಳು ತಾವು ಓದಿದ ಶಾಲೆಯ ಭವಿಷ್ಯಕ್ಕೆ ಮುನ್ನುಡಿಯಾಗಲಿ

ಪುನರ್ ಮಿಲನ-ಗುರುವಂದನೆ ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯಶಿಕ್ಷಕ ಭೈರಪ್ಪ

ಭದ್ರಾವತಿ ತಾಲೂಕಿನ ಸೀತಾರಾಮಪುರ ಲೇಪಾಕ್ಷಸ್ವಾಮಿ ಪ್ರೌಢಶಾಲೆಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ೧೯೮೨-೮೩ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪುನರ್ ಮಿಲನ ಹಾಗು ಗುರುವಂದನಾ ಕಾರ್ಯಕ್ರಮ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಭೈರಪ್ಪ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
    ಭದ್ರಾವತಿ, ಜೂ. ೨೫ : ಯಾವುದೇ ವಿದ್ಯಾಸಂಸ್ಥೆಯಾಗಿರಲಿ ಹಳೇಯ ವಿದ್ಯಾರ್ಥಿಗಳು ತಾವು ಓದಿದ ಶಾಲೆಯ ಭವಿಷ್ಯಕ್ಕೆ ಮುನ್ನುಡಿ ಬರೆಯುವಂತಾಗಬೇಕು ಎಂದು ತಾಲೂಕಿನ ಸೀತಾರಾಮಪುರ ಲೇಪಾಕ್ಷಸ್ವಾಮಿ ಪ್ರೌಢಶಾಲೆ ನಿವೃತ್ತ ಮುಖ್ಯ ಶಿಕ್ಷಕ ಭೈರಪ್ಪ ಹೇಳಿದರು.
    ಅವರು ಭಾನುವಾರ ಶಾಲೆಯಲ್ಲಿ ೧೯೮೨-೮೩ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪುನರ್ ಮಿಲನ ಹಾಗು ಗುರುವಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಒಂದು ವಿದ್ಯಾಸಂಸ್ಥೆ ಆರಂಭಿಸಿ ಅದನ್ನು ಮುನ್ನಡೆಸಿಕೊಂಡು ಹೋಗುವುದು ಸುಲಭದ ಕೆಲಸವಲ್ಲ. ಹಲವಾರು ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಈ ವಿದ್ಯಾಸಂಸ್ಥೆಯನ್ನು ಇಂದಿಗೂ ಮುನ್ನಡೆಸಿಕೊಂಡು ಬರಲಾಗುತ್ತಿದೆ. ಹಳೇಯ ವಿದ್ಯಾರ್ಥಿಗಳು ಇದನ್ನು ನೆನಪಿನಲ್ಲಿಟ್ಟುಕೊಂಡು ವಿದ್ಯಾಸಂಸ್ಥೆಗೆ ನೆರವಾಗಬೇಕು. ಆಗಮಾತ್ರ ಶಿಕ್ಷಣ ನೀಡಿದ ಗುರುಗಳಿಗೆ, ಶಿಕ್ಷಣ ಸಂಸ್ಥೆಗೆ ಗೌರವ ನೀಡಿದಂತಾಗುತ್ತದೆ ಎಂದರು.
    ಇದಕ್ಕೂ ಮೊದಲು ಪ್ರಾಸ್ತಾವಿಕವಾಗಿ ಮಾತನಾಡಿದ ಹಳೇಯವಿದ್ಯಾರ್ಥಿ, ದಾವಣಗೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್, ಸುಮಾರು ೪೦ ವರ್ಷಗಳ ನಂತರ ಹಳೇಯ ವಿದ್ಯಾರ್ಥಿಗಳು ಒಂದೆಡೆ ಸೇರಿ ತಮಗೆ ವಿದ್ಯೆ ಹೇಳಿಕೊಟ್ಟ ಗುರುಗಳಿಗೆ ಗುರುವಂದನೆ ಸಲ್ಲಿಸುತ್ತಿರುವುದು ವಿಶೇಷತೆಯಿಂದ ಕೂಡಿದೆ. ಈ ಕಾರ್ಯಕ್ರಮ ಆಯೋಜನೆಗಾಗಿ ಸುಮಾರು ೬ ವರ್ಷಗಳಿಂದ ರೂಪುರೇಷೆ ಸಿದ್ದಪಡಿಸಿಕೊಂಡು ಬರಲಾಗಿದೆ. ಈ ಶಾಲೆಯ ಹಳೇಯ ವಿದ್ಯಾರ್ಥಿಗಳು ಇಂದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ಮಾದರಿಯಾಗಿದ್ದಾರೆ. ಇದಕ್ಕೆ ಕಾರಣೀಭೂತರಾದ ಗುರುಗಳನ್ನು ಗೌರವಿಸುವುದು ಹಾಗು ಅವರ ಆಶೀರ್ವಾದ ಪಡೆಯುವುದು ಮತ್ತು ಭವಿಷ್ಯದ ಸಮಾಜಕ್ಕೆ ನಾವು ಮಾದರಿಯಾಗುವ ನಿಟ್ಟಿನಲ್ಲಿ ಮುನ್ನಡೆಯುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
    ಗುರುಗಳಾದ ಭೈರಪ್ಪ, ರಾಜಣ್ಣ, ಎ.ಸಿ ಚನ್ನಬಸಪ್ಪ, ನಟರಾಜ್, ದಿವಂಗತ ಕೆ.ಎಸ್ ರುದ್ರಪ್ಪ ಮತ್ತು  ಮುರುಗೇಂದ್ರಪ್ಪ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಶಾಲೆಯ ಮುಖ್ಯ ಶಿಕ್ಷಕ ಪರಮೇಶ್ವರಪ್ಪ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಕಾರ್ಯಕ್ರಮ ಕಾರ್ಯಕಾರಿ ಸಮಿತಿ ಅಧ್ಯಕ್ಷ ಮಂಜುನಾಥ್ ಹಾಗು ಶಾಲೆಯ ಶಿಕ್ಷಕ ವೃಂದವನ್ನು  ಸನ್ಮಾನಿಸಿ ಅಭಿನಂದಿಸಲಾಯಿತು.


ಭದ್ರಾವತಿ ತಾಲೂಕಿನ ಸೀತಾರಾಮಪುರ ಲೇಪಾಕ್ಷಸ್ವಾಮಿ ಪ್ರೌಢಶಾಲೆಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ೧೯೮೨-೮೩ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪುನರ್ ಮಿಲನ ಹಾಗು ಗುರುವಂದನಾ ಕಾರ್ಯಕ್ರಮ ಯಶಸ್ವಿ ಹಿನ್ನಲೆಯಲ್ಲಿ ಹಳೇಯ ವಿದ್ಯಾರ್ಥಿಗಳು ಕಾರ್ಯಕ್ರಮ ಕಾರ್ಯಕಾರಿ ಸಮಿತಿ ಅಧ್ಯಕ್ಷ ಮಂಜುನಾಥ್ ಅವರನ್ನು ಸನ್ಮಾನಿಸಿ ಸಂಭ್ರಮಿಸಿದರು.

    ಶಾಲೆಯ ಹಳೇಯ ವಿದ್ಯಾರ್ಥಿಗಳಾದ ಸಿದ್ದಯ್ಯ, ಸಾಗರ್, ಮಂಜುನಾಥ್, ತೋಟಯ್ಯ, ರಾಜಪ್ಪ, ಎಸ್.ವಿ ರಾಮಚಂದ್ರ, ಜಗದೀಶ್, ಪ್ರಮೀಳಾ, ನಂಜುಂಡಪ್ಪ, ಉಮೇಶ್, ಮಹೇಶ್ವರಯ್ಯ, ನಾಗರತ್ನ, ಭಾರತಿ, ಕುಮಾರ್ ಸೇರಿದಂತೆ ಇನ್ನಿತರರು ಕಾರ್ಯಕ್ರಮ ಆಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
    ಭಾರತಿ ಪ್ರಾರ್ಥಿಸಿ, ನಿತ್ಯಾನಂದ ಸ್ವಾಗತಿಸಿ, ಮುರುಳಿ ನಿರೂಪಿಸಿದರು. ರಾಜ್ಯದ ವಿವಿಧೆಡೆಗಳಿಂದ ಹಾಗು ಹೊರರಾಜ್ಯದಿಂದ ಹಳೇಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮ ಆರಂಭದಲ್ಲಿ ನಿಧನ ಹೊಂದಿದ ಗುರುಗಳಿಗೆ ಹಾಗು ಹಳೇಯ ವಿದ್ಯಾರ್ಥಿಗಳಿಗೆ ಸಂತಾಪ ಸೂಚಿಸಿ ಮೌನಾಚರಣೆ ನಡೆಸಲಾಯಿತು.

Saturday, June 24, 2023

ಕೇಸರಿಪಡೆಯಿಂದ ಜೆಪಿಎಸ್ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಲೇಖನ ಸಾಮಾಗ್ರಿ ವಿತರಣೆ

ಭದ್ರಾವತಿ ನಗರದಲ್ಲಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಕೇಸರಿ ಪಡೆ ವತಿಯಿಂದ ಶನಿವಾರ ಜೆಪಿಎಸ್ ಕಾಲೋನಿ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ಲೇಖನ ಸಾಮಾಗ್ರಿಗಳನ್ನು ವಿತರಿಸಲಾಯಿತು.
    ಭದ್ರಾವತಿ, ಜೂ. ೨೪ : ಹಲವಾರು ವರ್ಷಗಳಿಂದ ನಗರದಲ್ಲಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಕೇಸರಿ ಪಡೆ ವತಿಯಿಂದ ಶನಿವಾರ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ಲೇಖನ ಸಾಮಾಗ್ರಿಗಳನ್ನು ವಿತರಿಸಲಾಯಿತು.
    ನಗರಸಭೆ ವ್ಯಾಪ್ತಿಯ ಜೆಪಿಎಸ್ ಕಾಲೋನಿ ಸರ್ಕಾರಿ ಶಾಲೆಯ ಸುಮಾರು ೪೦ ಮಕ್ಕಳಿಗೆ ಪ್ರಸಕ್ತ ಸಾಲಿಗೆ ಅಗತ್ಯವಿರುವಷ್ಟು ಪುಸ್ತಕ, ಪೆನ್ನು, ಪೆನ್ಸಿಲ್, ಶಾಲಾ ಬ್ಯಾಗ್ ಸೇರಿದಂತೆ ಲೇಖನ ಸಾಮಾಗ್ರಿಗಳನ್ನು ವಿತರಿಸುವ ಮೂಲಕ ಮಕ್ಕಳನ್ನು ಪ್ರೋತ್ಸಾಹಿಸಲಾಯಿತು.
    ಯುನೈಟೆಡ್ ಇನ್ಸೂರೆನ್ಸ್ ವಿ. ಪ್ರಕಾಶ್ ಶೆಟ್ಟಿ, ಶಾಲೆಯ ಶಿಕ್ಷಕ ವೃಂದದವರು, ಸಿಬ್ಬಂದಿ ವರ್ಗದವರು, ಸ್ಥಳೀಯ ಮುಖಂಡರು, ಶಾಲೆಯ ಮಕ್ಕಳ ಪೋಷಕರು, ಕೇಸರಿ ಪಡೆ ಪ್ರಮುಖರು ಉಪಸ್ಥಿತರಿದ್ದರು.

೧೪ ಸೆಕೆಂಡ್‌ನಲ್ಲಿ ದೇಶದ ಎಲ್ಲಾ ರಾಜ್ಯಗಳ ಹೆಸರು

ಸಿ. ವೀರ್‌ನಾರಾಯಣ್‌ಸಿಂಗ್ ಓಎಂಜಿ ಬುಕ್ ಆಫ್ ರೆಕಾರ್ಡ್ಸ್


ಭದ್ರಾವತಿ ಪೂರ್ಣಪ್ರಜ್ಞ ವಿದ್ಯಾಸಂಸ್ಥೆ ೨ನೇ ತರಗತಿ ವಿದ್ಯಾರ್ಥಿ ಸಿ. ವೀರ್‌ನಾರಾಯಣ್‌ಸಿಂಗ್ ಓಎಂಜಿ ಬುಕ್ ಆಫ್ ರೆಕಾರ್ಡ್ಸ್ ಸಾಧನೆಗೆ ಪಾತ್ರನಾಗಿದ್ದಾನೆ.
    ಭದ್ರಾವತಿ, ಜೂ. ೨೪ : ನಗರದ ಪೂರ್ಣಪ್ರಜ್ಞ ವಿದ್ಯಾಸಂಸ್ಥೆ ೨ನೇ ತರಗತಿ ವಿದ್ಯಾರ್ಥಿ ಸಿ. ವೀರ್‌ನಾರಾಯಣ್‌ಸಿಂಗ್ ಓಎಂಜಿ ಬುಕ್ ಆಫ್ ರೆಕಾರ್ಡ್ಸ್ ಸಾಧನೆಗೆ ಪಾತ್ರನಾಗಿದ್ದು, ಕುಟುಂಬ ವರ್ಗದಲ್ಲಿ ಸಂತಸ ಮನೆ ಮಾಡಿದೆ.
    ೭ ವರ್ಷ ೩ ತಿಂಗಳು ವಯಸ್ಸಿನ ಸಿ. ವೀರ್‌ನಾರಾಯಣ್‌ಸಿಂಗ್ ಕೇವಲ ೧೪ ಸೆಕೆಂಡ್‌ಗಳಲ್ಲಿ ಅತಿ ಕಡಿಮೆ ಅವಧಿಯಲ್ಲಿ ದೇಶದ ಎಲ್ಲಾ ರಾಜ್ಯಗಳ ಹೆಸರನ್ನು ಹೇಳುವ ಮೂಲಕ ಬೆರಗುಗೊಳಿಸಿದ್ದಾನೆ. ಈ ಮೂಲಕ ಓಎಂಜಿ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಗೊಂಡಿದ್ದಾನೆ. ಬಾಲಕನ ಬುದ್ದಿಮತ್ತೆ, ಕ್ರಿಯಾಶೀಲತೆಗೆ ಓಎಂಜಿ ಪ್ರಶಂಸೆ ವ್ಯಕ್ತಪಡಿಸಿದೆ. ಈ ಸಾಧನೆ ಏಪ್ರಿಲ್ ತಿಂಗಳಿನಲ್ಲಿ ನಡೆದಿದ್ದು, ಇದೀಗ ಪೋಷಕರಿಗೆ ಸಾಧನೆಯ ಪ್ರಮಾಣಪತ್ರ ಹಾಗು ಪದಕ ಬಂದು ತಲುಪಿದೆ.


    ಸಿ. ವೀರ್‌ನಾರಾಯಣ್‌ಸಿಂಗ್ ತಾಲೂಕಿನ ದೇವರನರಸೀಪುರ ಗ್ರಾಮದ ನಿವಾಸಿಗಳಾದ ಸಿ. ಚರಣ್‌ಸಿಂಗ್ ಮತ್ತು ಆರ್. ದಿವ್ಯರಾಣಿ ದಂಪತಿ ಪುತ್ರನಾಗಿದ್ದಾನೆ. ಬಾಲಕನ ಸಾಧನೆಗೆ ಕುಟುಂಬ ವರ್ಗದವರು, ಗ್ರಾಮಸ್ಥರು, ಶಿಕ್ಷಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

ನಾನೊಬ್ಬ ಶಸ್ತ್ರಚಿಕಿತ್ಸಕ ಎನ್ನಲು ಹೆಮ್ಮೆ


    ೨೫ ಜೂನ್, ಅಂತರರಾಷ್ಟ್ರೀಯ ಶಸ್ತ್ರಚಿಕಿತ್ಸಾ ತಜ್ಞರ ದಿನ. ಇದು ಶಸ್ತ್ರಚಿಕಿತ್ಸಾ ತಜ್ಞರು ಸಂಭ್ರಮಿಸುವ ದಿನವಾದರೂ ಸಮಾಜಕ್ಕೆ ಇವರ ಕುರಿತ ಕೆಲವೊಂದು ವಿಶಿಷ್ಠವಾದ ವಿಷಯಗಳು ತಿಳಿಸಬೇಕಾಗಿದೆ. ಯಾರು ಶಸ್ತ್ರಗಳನ್ನ ಉಪಯೋಗಿಸಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೋ ಅವರೆಲ್ಲ ಶಸ್ತ್ರಚಿಕಿತ್ಸಕರೆಂದು ಕರೆಸಿಕೊಳ್ಳುತ್ತಾರೆ. ಸುಶ್ರುತರು ದೇಶದ ಮೊದಲ ಶಸ್ತ್ರಚಿಕಿತ್ಸಕ(ಸರ್ಜನ್), ಕ್ರಿ.ಪೂ ೮೦೦ರಲ್ಲಿ ಅವರು ಬರೆದಿರುವ ಸುಶ್ರುತ ಸಂಹಿತೆ ಇಂದಿಗೂ ಉಪಯುಕ್ತವಾಗಿದೆ.
    ಶಸ್ತ್ರಚಿಕಿತ್ಸಕ ಎಂದರೆ ಸಾಮಾನ್ಯ ಶಸ್ತ್ರಚಿಕಿತ್ಸಕರು, ಹೆರಿಗೆ, ಮೂಳೆ, ಕಿವಿ-ಮೂಗು-ಗಂಟಲು, ನೇತ್ರ ತಜ್ಞರು, ಕ್ಯಾನ್ಸರ್, ಕಿಡ್ನಿ ಹಾಗೂ ಮೂತ್ರ ರೋಗದ ತಜ್ಞರು, ನರ, ಹೃದಯ, ಜಠರ ಹಾಗೂ ಕರಳಿನ ತಜ್ಞರು, ದಂತ ತಜ್ಞರು ಹೀಗೆ ನಾನಾ ವಿಶೇಷತೆಯುಳ್ಳ ತಜ್ಞರುಗಳೆಲ್ಲ ಪಟ್ಟಿಯಲ್ಲಿ ಬರುತ್ತಾರೆ. ಈ ಎಲ್ಲಾ ತಜ್ಞರುಗಳಿಗೂ ಅರವಳಿಕೆ ತಜ್ಞರ ಸಹಾಯ ಹಾಗೂ ಸಹಕಾರ ಬಹಳ ಮುಖ್ಯ. ಎಂತಹ ಶಸ್ತ್ರಚಿಕಿತ್ಸೆ ಮಾಡಿ ಹೆಸರು ಮಾಡಿದರೂ ಅದರ ಹಿಂದೆ ಅರಿವಳಿಕೆ ತಜ್ಞರು ಬೆನ್ನೆಲುಬಾಗಿ ಇದ್ದೇ ಇರುತ್ತಾರೆ. ಹಾಗೇಯೇ, ಶಸ್ತ್ರಚಿಕಿತ್ಸಕರು ರೋಗಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡುವ ಮೊದಲು ಇನ್ನಿತರ ವಿಶೇಷ ಪರಿಣಿತರ ಸಹಕಾರ ಬಹಳ ಮುಖ್ಯ. ಫಿಸಿಷಿಯನ್, ಹೃದಯ, ಮಕ್ಕಳ ತಜ್ಞರು ಹಾಗೂ ಇನ್ನಿತರರ ಸಹಾಯ ಬೇಕಾಗುತ್ತದೆ. ಶಸ್ತ್ರಚಿಕಿತ್ಸೆಗೆ ತಯಾರು ಮಾಡಲು ಇವರೆಲ್ಲರ ಸಹಕಾರ ಬಹಳ ಮುಖ್ಯ.
    ಮೊದಲೆಲ್ಲ ಸಿಟಿ ಸ್ಕ್ಯಾನ್, ಹೊಟ್ಟೆ ಸ್ಕ್ಯಾನಿಂಗ್, ರಕ್ತ ನಾಳಗಳ ಸ್ಕ್ಯಾನಿಂಗ್, ಪಿಇಟಿ ಸ್ಕ್ಯಾನಿಂಗ್ ಇನ್ನಿತರ ಅತ್ಯಾಧುನಿಕ ಉಪಕರಣಗಳು ಇರದಿದ್ದ ಕಾಲದಲ್ಲಿ ಶಸ್ತ್ರಚಿಕಿತ್ಸಕರಿಗೆ ಬಹಳ ಕಠಿಣವಾದ ದಿನಗಳಿದ್ದವು. ಡಯಾಗ್ನೊಸಿಸ್ ಒಂದಾಗಿದ್ದರೆ ಒಳಗಡೆ ಖಾಯಿಲೆ ಇನ್ನೊಂದು ಆಗಿರುತಿತ್ತು. Chest is a  music box and Abdomen is a  magic box ಅನ್ನುವ ಮಾತಿತ್ತು.  ಇತ್ತೀಚಿನ ದಿನಗಳಲ್ಲಿ ಆಧುನಿಕ ಉಪಕರಣಗಳು ಬಂದ ಮೇಲೆ ರೋಗಿಗಳಿಗೆ ಸರಿಯಾದ ಡಯಾಗ್ನೊಸಿಸ್ ಹಾಗೂ ಚಿಕಿತ್ಸೆ ಕೊಡಲು ಸಾದ್ಯವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿಯೂ ಕೆಲವೊಮ್ಮೆ ಕ್ಲಿಷ್ಟಕರವಾದ ಸಮಯದಲ್ಲಿ ಶಸ್ತ್ರ ಚಿಕಿತ್ಸಕರು ಹೆಣಗಾಡಬೇಕಾಗುತ್ತೆ.
    ಎಷ್ಟೇ ಅನುಭವ ಇರುವ ಶಸ್ತ್ರಚಿಕಿತ್ಸಕ ಆಗಿದ್ದರೂ ಪ್ರತೀ ರೋಗಿಗೂ ಅವನು ಅಷ್ಟೇ ಕಾಳಜಿ ಕೊಡಬೇಕಾಗುತ್ತೆ. ಪ್ರತೀ ರೋಗಿಯಲ್ಲೂ ಏನಾದರೂ ಹೊಸ ಅನುಭವ ಆಗುತ್ತಲೇ ಇರುತ್ತದೆ. ನಾನು ಸಾವಿರಾರು ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದೇನೆಂದು ಅಹಂಕಾರ ಪಡುವ ಹಾಗಿಲ್ಲ ಹಾಗೂ ಪ್ರತೀ  ಶಸ್ತ್ರಚಿಕಿತ್ಸೆ  ಪ್ರಾರಂಬಿಸುವಾಗ ಶಸ್ತ್ರಚಿಕಿತ್ಸಕರ ಹೃದಯ ಬಡಿತ ಹೆಚ್ಚಾಗುತ್ತೆ.  ಆಮೇಲೆ ಸರಿಯಾಗುತ್ತೆ. ಏಕೆಂದರೆ ನಾವು ಕೆಲಸ ಮಾಡುತ್ತಿರುವ ವ್ಯಕ್ತಿಯ ಜೀವ ಬಹುಮುಖ್ಯ. ಕೆಲವೊಮ್ಮೆ ಅನಿರೀಕ್ಷಿತ ಘಟನೆಗಳು ಸಂಬವಿಸುವ ಭಯ ನಮ್ಮೊಳಗೆ ಇದ್ದೇ ಇರುತ್ತೆ. ಶಸ್ತ್ರ ಚಿಕಿತ್ಸೆ ಸಮಯದಲ್ಲಿ ಒಂದೆರಡು ಹನಿ ರೋಗಿಯ ರಕ್ತ ಹೋದರೂ ಶಸ್ತ್ರಚಿಕಿತ್ಸಕರ  ದೇಹದಿಂದ ಅಷ್ಟೇ  ಬೆವರು ಇಳಿದಿರುತ್ತೆ.

೨೫ ಜೂನ್, ಅಂತರರಾಷ್ಟ್ರೀಯ ಶಸ್ತ್ರಚಿಕಿತ್ಸಾ 

ತಜ್ಞರ ದಿನದ ಅಂಗವಾಗಿ ಲೇಖನ


    ಶಸ್ತ್ರಚಿಕಿತ್ಸೆ  ಅಂದರೆ ಅದಕ್ಕೆ ಬಹಳಷ್ಟು ತಯಾರಿ ಇರಬೇಕು. ಒಳ್ಳೆಯ ಶಸ್ತ್ರಚಿಕಿತ್ಸಾ ಕೊಠಡಿ, ಆಧುನಿಕ ಅರಿವಳಿಕೆ ಯಂತ್ರೋಪಕರಣಗಳು, ಎಲ್ಲಾ ತುರ್ತು ಚಿಕಿತ್ಸೆಗೆ ಬೇಕಾದ ಔಷಧಗಳು(ಅನಿರೀಕ್ಷಿತವಾಗಿ ಬರುವ ಅಪಾಯಗಳಿಗೂ ಮುಂಜಾಗ್ರತೆ), ಕೆಲವೊಮ್ಮೆ ರಕ್ತದ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತೆ. ಒಟ್ಟಿನಲ್ಲಿ ರೋಗಿಯ ಜೀವಕ್ಕೆ ಅಪಾಯವಾಗದ ಹಾಗೆ, ರೋಗಿಗೆ ಸೋಂಕು ಆಗದಂತೆ ಮುನ್ನಚ್ಚರಿಕೆ ಬಹಳ ಮುಖ್ಯ. ಅದಕ್ಕೆ ಓಟಿ ಸಿಬ್ಬಂದಿಗಳು ಬಹಳಷ್ಟು ಎಚ್ಚರಿಕೆಯಿಂದ ರೋಗಿಗೆ ಸೋಂಕು ಆಗದಂತೆ  ಶಿಷ್ಟಾಚಾರವನ್ನು ಪಾಲಿಸಬೇಕಾಗುತ್ತೆ. ಒಂದು ಶಸ್ತ್ರಚಿಕಿತ್ಸೆ ಆದಮೇಲೆ ಇನ್ನೊಂದು ಶಸ್ತ್ರಚಿಕಿತ್ಸೆಗೆ ಅಷ್ಟೇ ವೇಗವಾಗಿ ಕೊಠಡಿ ಸಜ್ಜುಗೊಳಿಸಬೇಕು. ಶಸ್ತ್ರಚಿಕಿತ್ಸೆ ಶಸ್ತ್ರಚಿಕಿತ್ಸಕ ಒಬ್ಬನೇ ಮಾಡಲು ಸಾದ್ಯವಿಲ್ಲ, ಅದಕ್ಕೆ ನುರಿತ ಶುಶ್ರೂಷಕ ಅಥವಾ ಶುಶ್ರೂಷಕಿಯರ ಉಪಸ್ಥಿತಿ ಬಹಳ ಮುಖ್ಯ. ಅವರು ಸರಿಯಾಗಿ ಸಹಕಾರ ನೀಡಿದ್ದಲ್ಲಿ ಮಾತ್ರ ಶಸ್ತ್ರಚಿಕಿತ್ಸೆ ಸರಾಗವಾಗಿ ನೆಡೆಯಬಲ್ಲದು. ಶಸ್ತ್ರಚಿಕಿತ್ಸಾ ಕೊಠಡಿ ತಂತ್ರಜ್ಞರು ಬಹಳ ಕಡೆ ಸಿಗುವುದು ಕಷ್ಟ. ಅವರಿದ್ದರೆ ಇನ್ನೂ ಸಹಾಯಕ್ಕೆ ಬರ್ತಾರೆ. ಕೊಠಡಿಯ ಸ್ವಚ್ಚತಾ ಕೆಲಸ ಬಹಳ ಮುಖ್ಯ ಅದಕ್ಕೆಲ್ಲಾ ಕೊಠಡಿ ಶಿಷ್ಟಾಚಾರಗಳು ಇರುತ್ತವೆ. ಶಸ್ತ್ರಚಿಕಿತ್ಸೆಗೂ ಮೊದಲು ಆಕ್ಸಿಜನ್ ಹಾಗೂ ಇನ್ನಿತರ ಅನಿಲಗಳ ಪರಿಶೀಲಿಸಬೇಕು. ಒಟ್ಟಾರೆಯಾಗಿ ಹೇಳಬೇಕೆಂದರೆ ಶಸ್ತ್ರಚಿಕಿತ್ಸೆ ನಡೆಸುವ ಮೊದಲು ಬಹಳಷ್ಟು ತಯಾರಿ ಇರಬೇಕು. ಒಮ್ಮೆ ಶಸ್ತ್ರಚಿಕಿತ್ಸೆ ಆರಂಭಗೊಂಡರೆ ಕೊಠಡಿಯಲ್ಲಿ ಎಲ್ಲಾ ವ್ಯವಸ್ಥಿತವಾಗಿರಬೇಕು. ಏಕೆಂದರೆ ರೋಗಿಯ ಜೀವ ಹಾಗೂ ಜೀವನ ಬಹು ಮುಖ್ಯ.


      ಒಬ್ಬ ವ್ಯಕ್ತಿ ತನ್ನನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿಕೊಳ್ಳಬೇಕೆಂದರೆ ಅವನಿಗೆ ವೈದ್ಯನ ಮೇಲೆ ಅಪಾರವಾದ ನಂಬಿಕೆ ಇರಬೇಕು ಮತ್ತು ನಂಬಿಕೆ ಇರುತ್ತೆ ಕೂಡ. ರೋಗಿಯು ನಾಲ್ಕಾರು ಜನರಲ್ಲಿ ವಿಚಾರಿಸಿ ಹಾಗೂ ಇತರೆ ವೈದ್ಯರ ಸಲಹೆ ಪಡೆದು ಶಸ್ತ್ರಚಿಕಿತ್ಸಕರ ಹತ್ತಿರ ಬರುವುದು ಸಾಮಾನ್ಯ. ಆಗ ಶಸ್ತ್ರಚಿಕಿತ್ಸಕ ಕೂಡ ತನ್ನೆಲ್ಲಾ ಅನುಭವ ಹಾಗೂ ನಿಪುಣತೆ ಉಪಯೋಗಿಸಿ ಚಿಕಿತ್ಸೆ ಕೊಡಲು ಪ್ರಯತ್ನಿಸುತ್ತಾನೆ. ಒಮ್ಮೊಮ್ಮೆ ಕೆಲವು ಕಣ್ಣಿಗೆ ಕಾಣದ ಅಥವಾ ಅನಿರೀಕ್ಷಿತ ಆಘಾತಕಾರಿ ಘಟನೆಯು ಸಂಭವಿಸಿದಾಗ ವೈದ್ಯರ ಮೇಲೆ ಆರೋಪಿಸೋದು ಸರ್ವೇಸಾಮಾನ್ಯ. ಅವರವರ ವಿಶೇಷತೆಗೆ ತಕ್ಕ ಹಾಗೆ ಕೆಲಸದಲ್ಲಿ ಮಾನಸಿಕ ಹಾಗೂ ದೈಹಿಕವಾಗಿ ಒತ್ತಡ ವಿಪರೀತವಾಗಿ ಇರುತ್ತೆ. ಎಷ್ಟೇ ಕಷ್ಟಕರವಾದ ಶಸ್ತ್ರಚಿಕಿತ್ಸೆ ಮಾಡಿದ್ರೂ ಒಮ್ಮೆ ರೋಗಿಯು ಗುಣಮುಖವಾದಲ್ಲಿ ಎಲ್ಲಾ ಕಷ್ಟಗಳು ಮರೆತು ಹೋಗುತ್ತೆ.  
    ನಮ್ಮ ಶಸ್ತ್ರಚಿಕಿತ್ಸೆ ವಿಭಾಗದಲ್ಲಿ ಅತ್ಯಂತ ದೊಡ್ಡ ಮಟ್ಟದಲ್ಲಿ ಅವಿಷ್ಕಾರಗಳಾಗಿದ್ದು, ಇನ್ನೂ ಹೆಚ್ಚಿನ ಅವಿಷ್ಕಾರಗಳಾಗುತ್ತಿವೆ. ಜನರಿಗೆ ಬಹಳ ಸರಳವಾಗಿ ಚಿಕಿತ್ಸೆ ಸಿಗುತ್ತಿದೆ. ಲ್ಯಾಪರೊಸ್ಕೋಪ್, ಎಂಡೋಸ್ಕೋಪ್, ಲೇಸರ್ ಹಾಗೂ ಕಾಟರಿ(ಹಾರ್ಮೋನಿಕ್) ಇನ್ನೂ ಹಲವು ಅತ್ಯಾಧುನಿಕ ಉಪಕರಣಗಳು ಶಸ್ತ್ರಚಿಕಿತ್ಸೆಯಲ್ಲಿ ಬಹಳ ದೊಡ್ಡ ಅವಿಷ್ಕಾರ. ಒಂದು  ಸಣ್ಣ ಪೆನ್ಸಿಲ್ ಗಾತ್ರದ ಉಪಕರಣ ಹೊಟ್ಟೆ, ಕೀಲು, ಬೆನ್ನೆಲುಬು ಹಾಗೂ ಎದೆ ಒಳಗೆ ತೂರಿಸಿ ಟಿವಿ ಪರದೆ ಮೇಲೆ ನೋಡಿಕೊಂಡು ಬಹಳಷ್ಟು ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆಗಳನ್ನು ಬಹಳ ಸುಲಭವಾಗಿ ಮಾಡಬಹುದಾಗಿದೆ. ಇದಕ್ಕೆ ಬಹಳ ತರಬೇತಿ, ನಿಪುಣತೆ, ಜಾಣ್ಮೆ ಹಾಗೂ ತಾಳ್ಮೆಬೇಕು.
    ಇದೆಲ್ಲದರ ಮಧ್ಯೆ ಶಸ್ತ್ರಚಿಕಿತ್ಸಕರಿಗೆ ವಿಶೇಷವಾದ ಸಮಸ್ಯೆಗಳಿವೆ. ಕೆಲವೊಮ್ಮೆ ಶಸ್ತ್ರಚಿಕಿತ್ಸೆ ಆರಂಭವಾದಾಗ ಅನಿರೀಕ್ಷಿತವಾಗಿ ಸಮಯ ಮಿತಿಮೀರಬಹುದು. ಊಟ ತಿಂಡಿ ಸಮಯಕ್ಕೆ ಸರಿಯಾಗಿ ಮಾಡಲು ಆಗದೆ ಇರಬಹುದು. ಇದರಿಂದ ಆರೋಗ್ಯ ಕೆಡಬಹುದು. ಕೆಲವೊಮ್ಮೆ ರೋಗಿಯಿಂದ ಶಸ್ತ್ರಚಿಕಿತ್ಸಕರಿಗೆ ವೈರಸ್ ರೋಗ ಹರಡಬಹುದು (ಬಹಳಷ್ಟು  ಉದಾಹರಣೆಗಳಿವೆ). ಶಸ್ತ್ರ ಚಿಕಿತ್ಸಕರು ಬಹಳಷ್ಟು ಹೊತ್ತು ನಿಲ್ಲಬೇಕಾದ್ದರಿಂದ ಕೆಲವೊಮ್ಮೆ ವೆರಿಕೋಸ್ ಖಾಯಿಲೆಯಿಂದ ಬಳಲಬೇಕಾಗುತ್ತದೆ. ಶಸ್ತ್ರಚಿಕಿತ್ಸಕರಿಗೆ ಬೇರೆ ವೈದ್ಯರ ಹೋಲಿಕೆ ಮಾಡಿದ್ದಲ್ಲಿ ವಿಪರೀತವಾದ ಒತ್ತಡ ಇರುತ್ತದೆ. ಇದರಿಂದ ರಕ್ತದೊತ್ತಡ ಹಾಗೂ ಸಕ್ಕರೆ ಖಾಯಿಲೆಗಳಿಗೆ ತುತ್ತಾಗಬಹುದು. ಹಗಲು ರಾತ್ತಿ ಎನ್ನದೆ ಯಾವಾಗ ಬೇಕಾದರೂ ತುರ್ತು ಕರೆ ಬರಬಹುದು. ಕೆಲವೊಮ್ಮೆ ಶಸ್ತ್ರಚಿಕಿತ್ಸೆ ಅನಿರೀಕ್ಷಿತವಾಗಿ ಆಘಾತಕಾರಿ ಘಟ್ಟಕ್ಕೆ ತಲುಪಬಹುದು. ಇದರಿಂದ ವೈಯಕ್ತಿಕ ಬದುಕು ಕೂಡ ಹಾಳಾಗಬಹುದು. ಇದಕ್ಕೆಲ್ಲ ಕುಟುಂಬದ ಸಹಕಾರ ಬಹಳ ಮುಖ್ಯ. ಕೆಲವೊಮ್ಮೆ ರೋಗಿಯು ಶಸ್ತ್ರಚಿಕಿತ್ಸೆ ಮುಗಿದ ನಂತರ ಯಾವುದೋ ಇತರ ರೋಗದಿಂದ ಅಕಸ್ಮಾತ್ ಮರಣ ಹೊಂದಿದರೆ ವೈದ್ಯ ಮಾನಸಿಕ ಖಿನ್ನತೆಗೆ ಒಳಗಾಗಬಹುದು. ಇದರಿಂದ ಸಂಪೂರ್ಣ ಹೊರಬರಲು ಬಹಳಷ್ಟು ಸಮಯ ಬೇಕಾಗಬಹುದು. ಕೆಲವೊಮ್ಮೆ ಕೆಲವರು ಶಸ್ತ್ರಚಿಕಿತ್ಸಕ ವೃತ್ತಿಯನ್ನೇ ಬಿಟ್ಟಿರುವ ಉದಾಹರಣೆ ಇವೆ.
    ಶಸ್ತ್ರಚಿಕಿತ್ಸಕ ಆಗ ಬೇಕಾದರೆ LADIES FINGER ,EAGLE'S EYE AND LIONS HEART  ಇರಬೇಕು ಅನ್ನೋ ಮಾತಿದೆ. ಶಸ್ತ್ರಚಿಕಿತ್ಸೆ ಮಾಡಿ ಹೊಲಿಗೆ ತೆಗೆದು ಗಾಯ ಒಣಗಿದ ಮೇಲೆ ಎಲ್ಲಾವೂ ಮುಗಿಯುವುದಿಲ್ಲ. ರೋಗಿಯು ತನ್ನ ಮುಂದಿನ ಆಗು ಹೋಗು ಗಳಿಗೂ ಶಸ್ತ್ರಚಕಿತ್ಸಕ ಕಾರಣ ಅನ್ನೋ ಅಭಿಪ್ರಾಯಕ್ಕೆ ಬರಬಹುದು. ಎಷ್ಟೋ ಕಷ್ಟಕರವಾದ ಶಸ್ತ್ರಚಿಕಿತ್ಸೆ ಮುಗಿದ ನಂತರ ಕೊಠಡಿಯಿಂದ ಶಸ್ತ್ರಚಿಕಿತ್ಸಕ ಹೊರಬಂದ ಮೇಲೆ ರೋಗಿಯ ಕಡೆಯವರಿಗೆ ಮನಸ್ಸಿನಲ್ಲಿ ಮೂಡುವ ಕಟ್ಟ ಕಡೆಯ ಪ್ರಶ್ನೆ ಎಷ್ಟು ಹೊಲಿಗೆ ಹಾಕಿರಬಹುದು? ಕೆಲವೊಮ್ಮೆ  ಅತೀ ಬುದ್ದಿವಂತರು ಎಲ್ಲಾ ಸರ್ಜರಿಯನ್ನು ಲ್ಯಾಪರೊಸ್ಕೋಪಿಕ್‌ನಲ್ಲಿ ಬಯಸುತ್ತಾರೆ.
        ಗ್ರಾಮಾಂತರ ಹಾಗೂ ತಾಲ್ಲೂಕು ಪ್ರದೇಶಗಳಲ್ಲಿ ಕೆಲಸ ಮಾಡುವ ಶಸ್ತ್ರಚಿಕಿತ್ಸಕರುಗಳಿಗೆ ಅವರದ್ದೇ ಆದ ಸಮಸ್ಯೆಗಳಿರುತ್ತವೆ. ತುರ್ತು ಸಮಯದಲ್ಲಿ ಇನ್ನೊಬ್ಬ ಶಸ್ತ್ರಚಿಕಿತ್ಸಕ ಸಹಾಯಕ್ಕೆ ಬೇಕಾದಾಗ  ಬಹಳ ಕಷ್ಟವಾಗುತ್ತೆ.  ದೊಡ್ಡ ಪಟ್ಟಣಗಳಲ್ಲಿ ಇರುವ ಉಪಕರಣಗಳು ಹಾಗೂ ವ್ಯವಸ್ಥೆಗಳು ಗ್ರಾಮಾಂತರ ಪ್ರದೇಶಗಳಲ್ಲಿ ಸಿಗುವುದು ಕಷ್ಟ.ನಮ್ಮಲ್ಲಿ ಎಷ್ಟೋ ಬಾರಿ  ಇರುವ ವ್ಯವಸ್ಥೆಯಲ್ಲೇ ದೊಡ್ಡ ಶಸ್ತ್ರಚಿಕಿತ್ಸೆ ಮಾಡಿರುವ ಉದಾಹರಣೆಗಳಿವೆ.
      ನಾನೊಬ್ಬ ಶಸ್ತ್ರಚಿಕಿತ್ಸಕ ಎನ್ನಲು ಹೆಮ್ಮೆ ಇದೆ. ಪ್ರತಿಯೊಬ್ಬ ಶಸ್ತ್ರಚಿಕಿತ್ಸಕನಿಗೂ ಕೆಲವೊಂದು ಸನ್ನಿವೇಶದಲ್ಲಿ ಏಕಾದರೂ ನಾನು ಶಸ್ತ್ರಚಿಕಿತ್ಸಕ ಆದೆನೋ ಅನ್ನೋ ಮನೋಭಾವ ಮನಸ್ಸಲ್ಲಿ ಬಂದು ಹೋಗಿರುತ್ತೆ. ರೋಗಿಯು ಗುಣವಾದ ಮೇಲೆ ನಗು ಮುಖ ನೋಡಿದಾಗ ಎಲ್ಲಾ ಮರೆತು ಹೋಗುತ್ತೆ. ಸ್ಮಶಾನ ವೈರಾಗ್ಯ, ಪ್ರಸವ ವೈರಾಗ್ಯ ತರಹ ಓಟಿ ವೈರಾಗ್ಯ ಕೂಡ ಕ್ಷಣಿಕ.
        ನಮ್ಮ ಶಸ್ತ್ರಚಿಕಿತ್ಸಕರ ಸಂಘ (ASI) ರಾಷ್ಟ್ರ ಮಟ್ಟದಲ್ಲಿ ಅತ್ಯಂತ ದೊಡ್ಡ ಮಟ್ಟದಲ್ಲಿ ಯುವ ಶಸ್ತ್ರಚಿಕಿತ್ಸಕರಿಗೆ ನಿರಂತರ ಕಾರ್ಯಾಗಾರಗಳ ಮೂಲಕ ತರಬೇತಿ ನೀಡುತ್ತಿದ್ದು,  ಸಮಾಜಕ್ಕೆ ಬಹಳಷ್ಟು ಉಪಯೋಗವಾಗಿದೆ. ಅದೇ ರೀತಿಯಲ್ಲಿ ರಾಜ್ಯಮಟ್ಟದಲ್ಲಿ ನಮ್ಮ ಸಂಘ ( KSC ASI) ಉತ್ತಮರ ಸಾರಥ್ಯದಲ್ಲಿ ಆಧುನಿಕ ಶಸ್ತ್ರಚಿಕಿತ್ಸಾ ವಿದಾನಗಳನ್ನ ಕಾಲಕಾಲಕ್ಕೆ ಉಣಬಡಿಸುತ್ತಿದೆ. ಜೂನ್ ೨೫ರ  ಶಸ್ತ್ರಚಿಕಿತ್ಸಕರ ದಿನಾಚರಣೆ ಪರವಾಗಿ ಎಲ್ಲಾ ಶಸ್ತ್ರಚಿಕಿತ್ಸಕರಿಗೂ ಶುಭಾಶಯಗಳು.

                                                                                     - ಡಾ. ಡಿ.ಎಸ್ ಶಿವಪ್ರಕಾಶ್, 
ಶಸ್ತ್ರಚಿಕಿತ್ಸಾ ತಜ್ಞರು, ಭದ್ರಾವತಿ



Friday, June 23, 2023

ಸರ್‌ಎಂವಿ ಕಾಲೇಜಿನ ವಿದ್ಯಾರ್ಥಿನಿಯರಿಗೆ ಪ್ರಶಸ್ತಿ

ಕುವೆಂಪು ವಿಶ್ವವಿದ್ಯಾನಿಲಯದ ಅಂತರ ಕಾಲೇಜು ಮಹಿಳಾ ಕ್ರೀಡಾ ಕೂಟದಲ್ಲಿ ಭದ್ರಾವತಿ ನ್ಯೂಟೌನ್ ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
    ಭದ್ರಾವತಿ, ಜೂ. ೨೩ : ಶೃಂಗೇರಿ ಜೆಸಿಬಿಎಂ ಪ್ರಥಮ ದರ್ಜೆ ಕಾಲೇಜಿನಲ್ಲಿ ಜೂ.೨೧ರವರೆಗೆ ಜರುಗಿದ ಕುವೆಂಪು ವಿಶ್ವವಿದ್ಯಾನಿಲಯದ ಅಂತರ ಕಾಲೇಜು ಮಹಿಳಾ ಕ್ರೀಡಾ ಕೂಟದಲ್ಲಿ ನಗರದ ನ್ಯೂಟೌನ್ ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
    ಕಾಲೇಜಿನ ೩೦ ವಿದ್ಯಾರ್ಥಿನಿಯರು ಭಾಗವಹಿಸಿದ್ದು, ಸಾಫ್ಟ್‌ಬಾಲ್‌ನಲ್ಲಿ ದ್ವಿತೀಯ ಹಾಗು ಬಾಲ್‌ಬ್ಯಾಡ್ಮಿಂಟನ್‌ನಲ್ಲಿ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ. ಕಾಲೇಜಿಗೆ ಕೀರ್ತಿ ತಂದಿರುವ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲ ಡಾ. ಬಿ.ಎಂ ನಾಸಿರ್‌ಖಾನ್, ಕ್ರೀಡಾ ವಿಭಾಗದ ಮುಖ್ಯಸ್ಥ ಡಾ. ಎಚ್.ಎಸ್ ಶಿವರುದ್ರಪ್ಪ ಹಾಗು ದೈಹಿಕ ಶಿಕ್ಷಣ ವಿಭಾಗದ ಉಪನ್ಯಾಸಕರು, ಅಧ್ಯಾಪಕ ಹಾಗು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.  

ಜೂ.೨೭ರಂದು ನಾಡಪ್ರಭು ಕೆಂಪೇಗೌಡ ಜಯಂತಿ

    ಭದ್ರಾವತಿ, ಜೂ. ೨೩ : ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ಜೂ.೨೭ರಂದು ನಾಡಪ್ರಭು ಕೆಂಪೇಗೌಡರ ಜಯಂತ್ಯೋತ್ಸವ ಹಮ್ಮಿಕೊಳ್ಳಲಾಗಿದೆ.
    ಬೆಳಿಗ್ಗೆ ೯.೩೦ಕ್ಕೆ ಬಿ.ಎಚ್ ರಸ್ತೆ ಹುತ್ತಾ ಬಸ್ ನಿಲ್ದಾಣದಿಂದ ತಾಲೂಕು ಕಛೇರಿವರೆಗೂ ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಯಲಿದ್ದು, ಮಧ್ಯಾಹ್ನ ಅಪ್ಪರ್ ಹುತ್ತಾದಲ್ಲಿರುವ ಕೆಂಪೇಗೌಡ ಸಮುದಾಯ ಭವನದಲ್ಲಿ ವೇದಿಕೆ ಕಾರ್ಯಕ್ರಮ ಆರಂಭಗೊಳ್ಳಲಿದೆ.
    ಒಕ್ಕಲಿಗ ಸಮುದಾಯದ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ದಿವ್ಯ ಸಾನಿಧ್ಯ ವಹಿಸಲಿದ್ದು, ಸಂಘದ ಅಧ್ಯಕ್ಷ ಎ.ಟಿ ರವಿ ಅಧ್ಯಕ್ಷತೆ ವಹಿಸಲಿದ್ದಾರೆ. ಒಕ್ಕಲಿಗ ಸಮುದಾಯದವರು ಸೇರಿದಂತೆ ಸಮಸ್ತ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಭಂಡಾರಹಳ್ಳಿ ಕೋರಿದ್ದಾರೆ.  

ಚಿಕ್ಕಮ್ಮ ನಿಧನ

ಚಿಕ್ಕಮ್ಮ
    ಭದ್ರಾವತಿ, ಜೂ. ೨೩ : ತಾಲೂಕಿನ ಕಲ್ಲಳ್ಳಿ ನಿವಾಸಿ ದಿವಂಗತ ಮುದ್ದೆಗೌಡರ ಪತ್ನಿ ಚಿಕ್ಕಮ್ಮ(೯೦) ಶುಕ್ರವಾರ ಬೆಳಿಗ್ಗೆ ನಿಧನ ಹೊಂದಿದರು.
    ತಾಲೂಕು ಪಂಚಾಯತಿ ಮಾಜಿ ಉಪಾಧ್ಯಕ್ಷ ನಂಜುಂಡೇಗೌಡ ಸೇರಿದಂತೆ ೪ ಗಂಡು, ೧ ಹೆಣ್ಣು ಮಕ್ಕಳು ಇದ್ದರು. ಇವರ ಅಂತ್ಯಕ್ರಿಯೆ ಸಂಜೆ ಇವರ ತೋಟದಲ್ಲಿ ನೆರವೇರಿತು.
    ಸಂತಾಪ : ಜೆಡಿಎಸ್ ಮುಖಂಡರಾದ ಶಾರದಾ ಅಪ್ಪಾಜಿ, ಕರ್ನಾಟಕ ಸರ್ಕಾರಿ ಪಡಿತರ ವಿತರಕರ ಸಂಘದ ಜಿಲ್ಲಾಧ್ಯಕ್ಷ ಸಿದ್ದಲಿಂಗಯ್ಯ, ನಗರಸಭೆ ಮಾಜಿ ಉಪಾಧ್ಯಕ್ಷ ಚನ್ನಪ್ಪ, ಸದಸ್ಯ ಮಣಿ ಎಎನ್‌ಎಸ್, ಒಕ್ಕಲಿಗ ಸಂಘದ ಅಧ್ಯಕ್ಷ ಎ.ಟಿ ರವಿ, ಖಜಾಂಚಿ ಆರ್. ನಾಗೇಶ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಗ್ರಾಮ ಪಂಚಾಯತಿ, ನಗರಸಭಾ ಸದಸ್ಯರು ಸಂತಾಪ ಸೂಚಿಸಿದ್ದಾರೆ.

ಜನಸಂಘ ಸಂಸ್ಥಾಪಕ ಡಾ. ಶಾಮ್‌ಪ್ರಸಾದ್ ಮುಖರ್ಜಿ ಬಲಿದಾನ ದಿನ

ಜನಸಂಘದ ಸಂಸ್ಥಾಪಕರಾದ ಡಾ. ಶಾಮ್‌ಪ್ರಸಾದ್ ಮುಖರ್ಜಿಯವರ ಬಲಿದಾನ ದಿನ ಭಾರತೀಯ ಜನತಾ ಪಕ್ಷ ಭದ್ರಾವತಿ ತಾಲೂಕು ಮಂಡಲ ವತಿಯಿಂದ ಶುಕ್ರವಾರ ಆಚರಿಸಲಾಯಿತು.
    ಭದ್ರಾವತಿ, ಜೂ. ೨೩ : ಜನಸಂಘದ ಸಂಸ್ಥಾಪಕರಾದ ಡಾ. ಶಾಮ್‌ಪ್ರಸಾದ್ ಮುಖರ್ಜಿಯವರ ಬಲಿದಾನ ದಿನ ಭಾರತೀಯ ಜನತಾ ಪಕ್ಷ ತಾಲೂಕು ಮಂಡಲ ವತಿಯಿಂದ ಶುಕ್ರವಾರ ಆಚರಿಸಲಾಯಿತು.
    ಪಕ್ಷದ ಕಾರ್ಯಾಲಯದಲ್ಲಿ ಬೆಳಿಗ್ಗೆ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಸಂಸ್ಥಾಪಕರ ತ್ಯಾಗ ಬಲಿದಾನಗಳನ್ನು ಸ್ಮರಿಸಿ ಪುಷ್ಪ ನಮನ, ನುಡಿ ನಮನ ಸಲ್ಲಿಸಲಾಯಿತು.
    ಶ್ಯಾಮ್‌ಪ್ರಸಾದ್ ಮುಖರ್ಜಿಯವರ ಭಾವಚಿತ್ರ ಬಿಡುಗಡೆ ಮಾಡಿ ಎಲ್ಲಾ ಬೂತ್‌ಗಳಲ್ಲಿ ಕಾರ್ಯಕ್ರಮ ಆಯೋಜಿಸುವಂತೆ ಮಹಾಶಕ್ತಿ ಕೇಂದ್ರಗಳಿಗೆ ಕರೆ ನೀಡಲಾಯಿತು.
    ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಂ. ಪ್ರಭಾಕರ್, ತಾಲೂಕು ಮಂಡಲ ಪ್ರಧಾನ ಕಾರ್ಯದರ್ಶಿ ಚನ್ನೇಶ್. ಪ್ರಮುಖರಾದ ನಗರಸಭೆ ಹಿರಿಯ ಸದಸ್ಯ ವಿ. ಕದಿರೇಶ್, ಮಂಗೋಟೆ ರುದ್ರೇಶ್, ಕೂಡ್ಲಿಗೆರೆ ಹಾಲೇಶ್. ಎಂ. ಮಂಜುನಾಥ್, ಎಂ.ಎಸ್ ಸುರೇಶಪ್ಪ. . ರಾಮಲಿಂಗಯ್ಯ. ಟಿ.ವಿ ವೆಂಕಟೇಶ್, ಮಹಾಶಕ್ತಿ ಕೇಂದ್ರ ಸೇರಿದಂತೆ ಪಕ್ಷದ ವಿವಿಧ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು, ಸಂಘ ಪರಿವಾರದ ಹಿರಿಯ ಕಾರ್ಯಕರ್ತರು ಉಪಸ್ಥಿತರಿದ್ದರು.

Thursday, June 22, 2023

ಜೂ.೨೫ರಂದು ವಿಶ್ವಗುರು ಬಸವಣ್ಣನವರ ಜಯಂತ್ಯೋತ್ಸವ-ಅಭಿನಂದನೆ

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎನ್.ಎಸ್ ಮಲ್ಲಿಕಾರ್ಜುನಯ್ಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
    ಭದ್ರಾವತಿ, ಜೂ. ೨೨ : ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ಶ್ರೀ ಬಸವೇಶ್ವರ ಧರ್ಮಸಂಸ್ಥೆ ಹಾಗು ತಾಲೂಕಿನ ವಿವಿಧ ಸಂಘ-ಸಂಸ್ಥೆಗಳು ಮತ್ತು ಬಸವಾಭಿಮಾನಿಗಳ ಸಹಯೋಗದೊಂದಿಗೆ ಜೂ. ೨೫ರಂದು ಸಂಜೆ ೬ ಗಂಟೆಗೆ ಹೊಸಸೇತುವೆ ರಸ್ತೆಯಲ್ಲಿರುವ ಶ್ರೀ ಬಸವೇಶ್ವರ ಸಭಾಭವನದಲ್ಲಿ ವಿಶ್ವಗುರು ಬಸವಣ್ಣನವರ ಜಯಂತ್ಯೋತ್ಸವ ಹಾಗು ಅಭಿನಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎನ್.ಎಸ್ ಮಲ್ಲಿಕಾರ್ಜುನಯ್ಯ ಹೇಳಿದರು.
    ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪರಿಷತ್ ವತಿಯಿಂದ ವಿಶ್ವಗುರು ಬಸವಣ್ಣನವರ ಜಯಂತ್ಯೋತ್ಸವ ವಿಶೇಷವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಶ್ರೀ ಬಸವತತ್ವ ಪೀಠ, ಚಿಕ್ಕಮಗಳೂರು, ಬಸವಕೇಂದ್ರ, ಶಿವಮೊಗ್ಗ ಡಾ. ಶ್ರೀ ಬಸವ ಮರುಳಸಿದ್ದ ಸಾಮೀಜಿ ದಿವ್ಯ ಸಾನಿಧ್ಯವಹಿಸಲಿದ್ದು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಎನ್ ಮಹಾರುದ್ರ ಉದ್ಘಾಟಿಸಲಿದ್ದಾರೆ ಎಂದರು.
    ಶಾಸಕ ಬಿ.ಕೆ ಸಂಗಮೇಶ್ವರ್ ಅವರಿಗೆ ಅಭಿನಂದನೆ ಸಲ್ಲಿಸಲಿದ್ದು, ತಹಸೀಲ್ದಾರ್ ಟಿ.ಜಿ ಸುರೇಶ್ ಆಚಾರ್ ಮತ್ತು ಶ್ರೀ ಬಸವೇಶ್ವರ ಧರ್ಮಸಂಸ್ಥೆ ಶಿವಕುಮಾರ್ ಉಪಸ್ಥಿತರಿರುವರು. ಮಾನವತೆಯ ಮಹಾಯಾನಿ ಬಸವಣ್ಣ ವಿಷಯ ಕುರಿತು ವಿಶ್ರಾಂತ ಪ್ರಾಧ್ಯಾಪಕ ಡಾ. ಗುರುಪಾದ ಎಸ್. ಮರಿಗುದ್ದಿ ಉಪನ್ಯಾಸ ನೀಡಲಿದ್ದು, ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾ ಡಾ. ಬಿ.ಜಿ ಧನಂಜಯ ಅಭಿನಂದನಾ ನುಡಿಗಳನ್ನಾಡಲಿದ್ದಾರೆ ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಡಾ. ಬಿ.ಜಿ ಧನಂಜಯ, ಎಚ್.ಎನ್ ಮಹಾರುದ್ರ, ಬಾರಂದರೂ ಪ್ರಕಾಶ್, ನಂದಿನಿ, ಮಲ್ಲಿಕಾರ್ಜುನ್, ಎಂ. ವಿರುಪಾಕ್ಷಪ್ಪ, ಅರಳಿಹಳ್ಳಿ ಅಣ್ಣಪ್ಪ, ಮಲ್ಲಿಕಾಂಬ ವಿರುಪಾಕ್ಷಪ್ಪ, ರಾಜಶೇಖರ್, ಸದಾಶಿವಪ್ಪ, ಚಿಗಟೇರಪ್ಪ, ನಾಗರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಭದ್ರಾವತಿ ೩೯ ಗ್ರಾಮ ಪಂಚಾಯಿತಿಗೆ ೨ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿ

    ಭದ್ರಾವತಿ, ಜೂ. ೨೨ : ರಾಜ್ಯ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ತಾಲೂಕಿನ ೩೯ ಗ್ರಾಮ ಪಂಚಾಯಿತಿಗಳ ೩೦ ತಿಂಗಳ ೨ನೇ ಅವಧಿಗೆ  ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ನಿಗದಿಪಡಿಸಲಾಗಿದೆ.
    ನಗರದ ಚನ್ನಗಿರಿ ರಸ್ತೆಯ ವೆಂಕಟೇಶ್ವರ ಚಿತ್ರಮಂದಿರದಲ್ಲಿ ಆಯೋಜಿಸಲಾಗಿದ್ದ ಮೀಸಲಾತಿ ನಿಗದಿ ಸಭೆಯಲ್ಲಿ ತಾಲೂಕಿನ ೩೯ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಹಾಗು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣಾ ಆಯೋಗ ರೂಪಿಸಿರುವ ತಂತ್ರಾಂಶ ಹಾಗು ಲಾಟರಿ ಪ್ರಕ್ರಿಯೆ ಬಳಸಿ ಮೀಸಲಾತಿ ನಿಗದಿಪಡಿಸಲಾಗಿದೆ.
    ೧. ಸೈದರಕಲ್ಲಹಳ್ಳಿ ಅಧ್ಯಕ್ಷ-ಪರಿಶಿಷ್ಟ ಜಾತಿ, ಉಪಾಧ್ಯಕ್ಷ-ಹಿಂದುಳಿದ ವರ್ಗ(ಎ) ಮಹಿಳೆ ೨. ನಿಂಬೆಗೊಂದಿ ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ ೩. ಆನವೇರಿ ಅಧ್ಯಕ್ಷ-ಸಾಮಾನ್ಯ. ಉಪಾಧ್ಯಕ್ಷ-ಸಾಮಾನ್ಯ ಮಹಿಳೆ ೪. ಗುಡುಮಘಟ್ಟ ಅಧ್ಯಕ್ಷ-ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ ೫. ಮಂಗೋಟೆ ಅಧ್ಯಕ್ಷ-ಹಿಂದುಳಿದ ವರ್ಗ(ಎ), ಉಪಾಧ್ಯಕ್ಷ-ಸಾಮಾನ್ಯ ಮಹಿಳೆ ೬. ಸಿದ್ಲಿಪುರ ಅಧ್ಯಕ್ಷ-ಪರಿಶಿಷ್ಟ ಜಾತಿ, ಉಪಾಧ್ಯಕ್ಷ-ಹಿಂದುಳಿದ ವರ್ಗ(ಎ) ಮಹಿಳೆ ೭. ಸನ್ಯಾಸಿಕೊಡಮಗ್ಗೆ ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಪರಿಶಿಷ್ಟ ಜಾತಿ ೮. ಅಗರದಹಳ್ಳಿ ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ ೯. ಯಡೇಹಳ್ಳಿ ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ ೧೦. ಅರಹತೊಳಲು ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ ೧೧. ಹನುಮಂತಾಪುರ ಅಧ್ಯಕ್ಷ-ಹಿಂದುಳಿದ ವರ್ಗ(ಎ) ಮಹಿಳೆ, ಉಪಾಧ್ಯಕ್ಷ-ಪರಿಶಿಷ್ಟ ಜಾತಿ ೧೨. ಕಲ್ಲಿಹಾಳ್ ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ ೧೩. ದಾಸರಕಲ್ಲಹಳ್ಳಿ ಅಧ್ಯಕ್ಷ-ಪರಿಶಿಷ್ಟ ಪಂಗಡ ಮಹಿಳೆ, ಉಪಾಧ್ಯಕ್ಷ-ಹಿಂದುಳಿದ ವರ್ಗ(ಬಿ) ಮಹಿಳೆ ೧೪. ಮಾರಶೆಟ್ಟಿಹಳ್ಳಿ ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಪರಿಶಿಷ್ಟ ಜಾತಿ ಮಹಿಳೆ ೧೫. ಅರಕೆರೆ ಅಧ್ಯಕ್ಷ-ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ -ಹಿಂದುಳಿದ ವರ್ಗ(ಎ) ೧೬. ಅರಬಿಳಚಿ ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ ೧೭. ನಾಗತಿಬೆಳಗಲು ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ -ಸಾಮಾನ್ಯ ಮಹಿಳೆ ೧೮. ಕೂಡ್ಲಿಗೆರೆ ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ ೧೯. ಅತ್ತಿಗುಂದ ಅಧ್ಯಕ್ಷ-ಹಿಂದುಳಿದ ವರ್ಗ(ಎ), ಉಪಾಧ್ಯಕ್ಷ-ಸಾಮಾನ್ಯ ಮಹಿಳೆ ೨೦. ಕೊಮಾರನಹಳ್ಳಿ ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ ೨೧. ತಡಸ ಅಧ್ಯಕ್ಷ-ಪರಿಶಿಷ್ಟ ಜಾತಿ, ಉಪಾಧ್ಯಕ್ಷ ಹಿಂದುಳಿದ ವರ್ಗ(ಎ) ಮಹಿಳೆ ೨೨. ದೊಣಬಘಟ್ಟ ಅಧ್ಯಕ್ಷ-ಹಿಂದುಳಿದ ವರ್ಗ(ಬಿ) ಮಹಿಳೆ, ಉಪಾಧ್ಯಕ್ಷ-ಹಿಂದುಳಿದ ವರ್ಗ(ಎ) ಮಹಿಳೆ ೨೩. ಬಿಳಿಕಿ ಅಧ್ಯಕ್ಷ-ಹಿಂದುಳಿದ ವರ್ಗ(ಎ), ಉಪಾಧ್ಯಕ್ಷ-ಪರಿಶಿಷ್ಟ ಜಾತಿ ಮಹಿಳೆ ೨೪. ಕಾಗೆಕೊಡಮಗ್ಗಿ ಅಧ್ಯಕ್ಷ-ಹಿಂದುಳಿದ ವರ್ಗ(ಬಿ), ಉಪಾಧ್ಯಕ್ಷ-ಹಿಂದುಳಿದ ವರ್ಗ(ಎ) ಮಹಿಳೆ ೨೫. ಅರಳಿಹಳ್ಳಿ ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಪರಿಶಿಷ್ಟ ಪಂಗಡ(ಮಹಿಳೆ) ೨೬. ವೀರಾಪುರ ಅಧ್ಯಕ್ಷ-ಹಿಂದುಳಿದ ವರ್ಗ(ಎ) ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ ೨೭. ಕಲ್ಲಹಳ್ಳಿ ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಸಾಮಾನ್ಯ, ೨೮. ಅಂತರಗಂಗೆ ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ ೨೯. ದೊಡ್ಡೇರಿ ಅಧ್ಯಕ್ಷ-ಹಿಂದುಳಿದ ವರ್ಗ(ಎ) ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ ೩೦. ಯರೇಹಳ್ಳಿ ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಹಿಂದುಳಿದ ವರ್ಗ(ಎ) ೩೧. ಮಾವಿನಕೆರೆ ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಪರಿಶಿಷ್ಟ ಜಾತಿ ಮಹಿಳೆ ೩೨. ಬಾರಂದೂರು ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಹಿಂದುಳಿದ ವರ್ಗ(ಬಿ) ೩೩. ಕಂಬದಾಳ್ ಹೊಸೂರು ಅಧ್ಯಕ್ಷ-ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ ಹಿಂದುಳಿದ ವರ್ಗ(ಎ) ೩೪. ಕಾರೆಹಳ್ಳಿ ಅಧ್ಯಕ್ಷ-ಹಿಂದುಳಿದ ವರ್ಗ(ಎ), ಉಪಾಧ್ಯಕ್ಷ-ಪರಿಶಿಷ್ಟ ಜಾತಿ ಮಹಿಳೆ ೩೫. ಅರಳಿಕೊಪ್ಪ ಅಧ್ಯಕ್ಷ-ಹಿಂದುಳಿದ ವರ್ಗ(ಎ) ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ ೩೬. ಸಿಂಗನಮನೆ ಅಧ್ಯಕ್ಷ-ಹಿಂದುಳಿದ ವರ್ಗ(ಎ) ಮಹಿಳೆ, ಉಪಾಧ್ಯಕ್ಷ-ಪರಿಶಿಷ್ಟ ಜಾತಿ ೩೭. ಹಿರಿಯೂರು ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ ೩೮. ಮೈದೊಳಲು ಅಧ್ಯಕ್ಷ-ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ-ಹಿಂದುಳಿದ ವರ್ಗ(ಎ) ಮತ್ತು ೩೯. ತಾವರಘಟ್ಟ ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ ಮೀಸಲಾಗಿ ನಿಗದಿಪಡಿಸಲಾಗಿದೆ.
    ಮೀಸಲಾತಿ ನಿಗದಿ ಪ್ರಕ್ರಿಯೆಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಎಸ್ ಬಿರಾದಾರ್ ನಡೆಸಿಕೊಟ್ಟರು. ಆರಂಭದಲ್ಲಿ ಮೀಸಲಾತಿ ನಿಗದಿ ಸಂಬಂಧ ಚುನಾವಣಾ ಆಯೋಗ ನಿಗದಿಪಡಿಸಿರುವ ತಂತ್ರಾಂಶ ಕುರಿತು ಗ್ರಾಮ ಪಂಚಾಯಿತಿ ಸದಸ್ಯರಿಗೆ ಮಾಹಿತಿ ನೀಡಿದರು. ೩೯ ಗ್ರಾಮ ಪಂಚಾಯಿತಿಗಳ ಪೈಕಿ ತಂತ್ರಾಂಶಕ್ಕೆ ಒಳಪಡದ ೨ ಗ್ರಾಮ ಪಂಚಾಯಿತಿಗಳಿಗೆ ಲಾಟರಿ ಮೂಲಕ ಮೀಸಲಾತಿ ನಿಗದಿಪಡಿಸಲಾಯಿತು.  
    ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ, ತಹಸೀಲ್ದಾರ್ ಸುರೇಶ್ ಆಚಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Wednesday, June 21, 2023

ಬಕ್ರೀದ್ ಹಬ್ಬ ಶಾಂತಿ, ಸಂಭ್ರಮದ ಆಚರಣೆಗೆ ಸಹಕಾರ ನೀಡಿ

ಶಾಂತಿಸಭೆಯಲ್ಲಿ ಮುಸ್ಲಿಂ ಮುಖಂಡರ ಮನವಿ

ಭದ್ರಾವತಿ ರೋಟರಿ ಕ್ಲಬ್ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ಕುಮಾರ್ ನೇತೃತ್ವದಲ್ಲಿ ಶಾಂತಿ ಸಭೆ ನಡೆಯಿತು.
    ಭದ್ರಾವತಿ, ಜೂ. ೨೧ : ತಾಲೂಕಿನಾದ್ಯಂತ ಈ ಬಾರಿ ಬಕ್ರೀದ್ ಹಬ್ಬ ಶಾಂತಿ, ಸಂಭ್ರಮದಿಂದ ಆಚರಿಸಲು ಹೆಚ್ಚಿನ ಸಹಕಾರ ನೀಡಬೇಕೆಂದು ಬುಧವಾರ ರೋಟರಿ ಕ್ಲಬ್ ಸಭಾಂಗಣದಲ್ಲಿ ನಡೆದ ಶಾಂತಿಸಭೆಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಮನವಿ ಮಾಡಿದರು.
    ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಬಹುತೇಕ ಮುಸ್ಲಿಂ ಸಮುದಾಯದ ಮುಖಂಡರು, ಜೂ.೨೮ರಿಂದ ೩ ದಿನಗಳ ಕಾಲ ಹಬ್ಬದ ಆಚರಣೆ ನಡೆಯಲಿದೆ. ಮೊದಲ ದಿನ ನಗರಸಭೆ ವ್ಯಾಪ್ತಿಯ ತರೀಕೆರೆ ರಸ್ತೆಯ ಈದ್ಗಾ ಮೈದಾನ ಸೇರಿದಂತೆ ೪ ಖಬರ್‌ಸ್ತಾನ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಿದ್ದಾರೆ. ನಂತರ ತಮ್ಮ ತಮ್ಮ ಮನೆಗಳಿಗೆ ತೆರಳಿ ೩ ದಿನಗಳ ಕಾಲ ಹಬ್ಬದ ಸಂಭ್ರಮದಲ್ಲಿ ತೊಡಗಲಿದ್ದಾರೆ. ಈ ಸಂದರ್ಭದಲ್ಲಿ ಎಲ್ಲಾ ಧರ್ಮದವರು ಸಹ ಹೆಚ್ಚಿನ ಸಹಕಾರ ನೀಡುವಂತೆ ಮನವಿ ಮಾಡಿದರು.
    ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು. ಪೊಲೀಸ್ ಇಲಾಖೆ ಹೆಚ್ಚಿನ ಸಹಕಾರ ನೀಡಬೇಕು. ಎಲ್ಲಾ ಧರ್ಮದವರೊಂದಿಗೆ ಸೌಹಾರ್ದಯುತವಾಗಿ ಹಬ್ಬ ಆಚರಿಸುವಂತಹ ವಾತಾವರಣಕ್ಕೆ ಅವಕಾಶ ಕಲ್ಪಿಸಿಕೊಡಬೇಕೆಂದರು.
    ಸಭೆಯಲ್ಲಿ ಪ್ರಮುಖರಾದ ಅಂಜುಮಾನ್ ಇಸ್ಲಾಹುಲ್ ಮುಸ್ಲಿಮೀನ್ ಅಧ್ಯಕ್ಷ ಮುರ್ತುಜಾ ಖಾನ್, ಮಾಜಿ ಉಪಮೇಯರ್ ಮಹಮದ್ ಸನ್ನಾವುಲ್ಲಾ, ಅಮೀರ್‌ಜಾನ್, ಫೀರ್‌ಷರೀಫ್, ಮಸ್ತಾನ್, ದಿಲ್‌ದಾರ್, ಖಾದರ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಸದಸ್ಯರಾದ ಟಿಪ್ಪುಸುಲ್ತಾನ್, ಸೈಯದ್ ರಿಯಾಜ್, ವಿ. ಕದಿರೇಶ್, ಪ್ರಜಾಪ್ರತಿನಿಧಿ ಸುರೇಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
    ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್‌ಕುಮಾರ್ ಭೂಮಾರೆಡ್ಡಿ, ಹಿರಿಯ ಪೊಲೀಸ್ ಉಪಾಧೀಕ್ಷಕ ಜಿತೇಂದ್ರಕುಮಾರ್ ದಯಾಮ ಸೇರಿದಂತೆ ವೃತ್ತ ನಿರೀಕ್ಷಕರು, ವಿವಿಧ ಠಾಣೆಗಳ ಠಾಣಾಧಿಕಾರಿಗಳು ಉಪಸ್ಥಿತರಿದ್ದರು.

ವಿಐಎಸ್‌ಎಲ್ ಶತಮಾನೋತ್ಸವ ಸಂಭ್ರಮದ ಆಚರಣೆಗೆ ಸಿದ್ದತೆ

ನಿವೃತ್ತ ನೌಕರ, ಹಿರಿಯ ಚಲನಚಿತ್ರ ನಟ ದೊಡ್ಡಣ್ಣ ನೇತೃತ್ವದಲ್ಲಿ ಸಭೆ

ಭಾರತೀಯ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಶತಮಾನೋತ್ಸವ ಸಂಭ್ರಮದ ಆಚರಣೆಗಾಗಿ ಸಭೆ ನಡೆಸಲು ಬುಧವಾರ ನಗರಕ್ಕೆ ಆಗಮಿಸಿದ ಕಾರ್ಖಾನೆ ನಿವೃತ್ತ ನೌಕರ, ಹಿರಿಯ ಚಲನಚಿತ್ರ ನಟ ದೊಡ್ಡಣ್ಣ.  
    ಭದ್ರಾವತಿ, ಜೂ. ೨೧ : ಭಾರತೀಯ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಒಂದೆಡೆ ಗುತ್ತಿಗೆ ಕಾರ್ಮಿಕರು ಕಳೆದ ಸುಮಾರು ೫ ತಿಂಗಳಿನಿಂದ ಹೋರಾಟ ನಡೆಸುತ್ತಿದ್ದು, ಮತ್ತೊಂದೆಡೆ ಕಾರ್ಖಾನೆ ಶತಮಾನೋತ್ಸವ ಸಂಭ್ರಮದಿಂದ ಆಚರಿಸಲು ಸಿದ್ದತೆಗಳು ನಡೆಯುತ್ತಿವೆ.
    ಕಾರ್ಖಾನೆಯ ನಿವೃತ್ತ ನೌಕರ, ಹಿರಿಯ ಚಲನಚಿತ್ರ ನಟ ದೊಡ್ಡಣ್ಣ ನೇತೃತ್ವದಲ್ಲಿ ಕಾರ್ಖಾನೆಗೆ ಇತಿಹಾಸದ ವೈಭವ ಮರುಕಳುಹಿಸುವಂತೆ ಮಾಡಲು ಇದೀಗ ಕಾರ್ಖಾನೆ ಶತಮಾನೋತ್ಸವ ವಿಜೃಂಭಣೆಯಿಂದ ಆಚರಿಸಲು ಕಾರ್ಖಾನೆಯ ಕಾಯಂ, ಗುತ್ತಿಗೆ ಕಾರ್ಮಿಕ ಸಂಘಟನೆಗಳು ಹಾಗು ಅಧಿಕಾರಿಗಳ ಸಂಘ ಮುಂದಾಗಿವೆ. ಈ ಸಂಬಂಧ ಬುಧವಾರ ದೊಡ್ಡಣ್ಣ ನೇತೃತ್ವದಲ್ಲಿ ಸಭೆ ನಡೆದಿದ್ದು, ಸಭೆಯಲ್ಲಿ ಶತಮಾನೋತ್ಸವ ಸಂಭ್ರಮದಿಂದ ಆಚರಿಸುವ ಸಂಬಂಧ ಒಮ್ಮತದ ತಿರ್ಮಾನಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
    ಶತಮಾನೋತ್ಸವ ಆಚರಣೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಸಚಿವರನ್ನು ಆಹ್ವಾನಿಸುವ ಕುರಿತು ಚರ್ಚಿಸಲಾಗಿದ್ದು, ಈ ಸಂಬಂಧ ಮತ್ತೊಮ್ಮೆ ಸಭೆ ನಡೆಯುವ ಸಾಧ್ಯತೆ ಕಂಡು ಬರುತ್ತಿದೆ.  ನಂತರ ಶತಮಾನೋತ್ಸವದ ಅಂತಿಮ ರೂಪುರೇಷೆಗಳು ಹೊರ ಬೀಳಲಿವೆ ಎನ್ನಲಾಗಿದೆ.
    ಸಭೆಯಲ್ಲಿ ಹಿರಿಯ ಕಾರ್ಮಿಕ ಮುಖಂಡ ಡಿ.ಸಿ ಮಾಯಣ್ಣ, ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಅಧ್ಯಕ್ಷ ರಾಮಲಿಂಗಯ್ಯ, ಕಾಯಂ ಮತ್ತು ಗುತ್ತಿಗೆ ಕಾರ್ಮಿಕರ ಹಾಗು ಅಧಿಕಾರಿಗಳ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ಭದ್ರಾವತಿ ವಿವಿಧೆಡೆ ೯ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಭದ್ರವತಿಯಲ್ಲಿ ಪತಂಜಲಿ ಯೋಗ ಸಮಿತಿ ಹಾಗೂ ಶುಗರ್ ಟೌನ್ ಲಯನ್ ಕ್ಷಬ್, ಅಂತರಾಷ್ಟ್ರೀಯ ಯೋಗ ದಿನಾಚರಣೆ ಸಮಿತಿ ಹಾಗು ವಿವಿಧ ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ಪ್ರತಿವರ್ಷದಂತೆ ಈ ಬಾರಿ ಸಹ ಯೋಗ ದಿನಾಚರಣೆ ನ್ಯೂಟೌನ್ ಜೆಟಿಎಸ್ ಶಾಲೆ ಸಮೀಪದ ಲಯನ್ಸ್ ಕಣ್ಣಿನ ಆಸ್ಪತ್ರೆಯಲ್ಲಿ ಆಚರಿಸಲಾಯಿತು.
    ಭದ್ರಾವತಿ, ಜೂ. ೨೧ : ೯ನೇ ವರ್ಷದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಬುಧವಾರ ನಗರದ ವಿವಿಧೆಡೆ ಶಾಲಾ-ಕಾಲೇಜುಗಳು, ಸರ್ಕಾರಿ ಕಛೇರಿಗಳು, ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಆಚರಿಸಲಾಯಿತು.
        ಪತಂಜಲಿ ಯೋಗ ಸಮಿತಿ ಹಾಗೂ ಶುಗರ್ ಟೌನ್ ಲಯನ್ ಕ್ಷಬ್, ಅಂತರಾಷ್ಟ್ರೀಯ ಯೋಗ ದಿನಾಚರಣೆ ಸಮಿತಿ ಹಾಗು ವಿವಿಧ ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ಪ್ರತಿವರ್ಷದಂತೆ ಈ ಬಾರಿ ಸಹ ಯೋಗ ದಿನಾಚರಣೆ ನ್ಯೂಟೌನ್ ಜೆಟಿಎಸ್ ಶಾಲೆ ಸಮೀಪದ ಲಯನ್ಸ್ ಕಣ್ಣಿನ ಆಸ್ಪತ್ರೆಯಲ್ಲಿ ಆಚರಿಸಲಾಯಿತು.
    ಪ್ರಮುಖರಾದ ಪತಂಜಲಿ ಯೋಜ ಸಮಿತಿ ಜಿಲ್ಲಾ ಪ್ರಭಾರಿ ಅನ್ನಪೂರ್ಣ ಸತೀಶ್, ತಾಲೂಕು ಪ್ರಭಾರಿ ಚನ್ನಪ್ಪ, ಯುವ ಪ್ರಭಾರಿ ಮಲ್ಲಿಕಾರ್ಜುನ, ಅಂತರಾಷ್ಟ್ರೀಯ ಯೋಗ ದಿನಾಚರಣೆ ಸಮಿತಿ ಅಧ್ಯಕ್ಷ ಪಿ. ವೆಂಕಟರಮಣ ಶೇಟ್, ಜಿಲ್ಲಾ ಸಂರಕ್ಷಕ್ ವೀಣಾ ಎಸ್. ಭಟ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.


೯ನೇ ವರ್ಷದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಭದ್ರಾವತಿ ನಗರಸಭೆ ವತಿಯಿಂದ ಆಚರಿಸಲಾಯಿತು.

    ನಗರಸಭೆಯಲ್ಲಿ ಯೋಗ ದಿನಾಚರಣೆ:

    ೯ನೇ ವರ್ಷದ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಗರಸಭೆ ವತಿಯಿಂದ ಆಚರಿಸಲಾಯಿತು. ನಗರಸಭೆ ಪ್ರಭಾರಿ ಅಧ್ಯಕ್ಷೆ ಸರ್ವಮಂಗಳ ಭೈರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಉಪಾಧ್ಯಕ್ಷ ಚನ್ನಪ್ಪ, ಆರೋಗ್ಯ ನಿರೀಕ್ಷಕರಾದ ಆರ್.ಬಿ ಸತೀಶ್, ಶೃತಿ ಸೇರಿದಂತೆ ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು ಹಾಗು ಪೌರಾಕಾರ್ಮಿಕರು ಪಾಲ್ಗೊಂಡಿದ್ದರು.


೯ನೇ ವರ್ಷದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಭದ್ರಾವತಿ ನಗರದ ನ್ಯೂಟೌನ್ ಲಿಟ್ಲ್ ಫ್ಲವರ್ ಆಂಗ್ಲ ಶಾಲೆಯಲ್ಲಿ ಆಚರಿಸಲಾಯಿತು.

    ಲಿಟ್ಲ್ ಫ್ಲವರ್ ಆಂಗ್ಲ ಶಾಲೆ :

    ೯ನೇ ವರ್ಷದ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಗರದ ನ್ಯೂಟೌನ್ ಲಿಟ್ಲ್ ಫ್ಲವರ್ ಆಂಗ್ಲ ಶಾಲೆಯಲ್ಲಿ ಆಚರಿಸಲಾಯಿತು.
    ಜನ್ನಾಪುರ ಹ್ಯಾಪಿ ಲಿವಿಂಗ್ ಲೈಫ್ ಯೋಗ ಸೆಂಟರ್ ಯೋಗ ಗುರು ಮಹೇಶ್ ಮತ್ತು ಯೋಗ ಶಿಕ್ಷಕಿ ದಾಕ್ಷಾಯಿಣಿ ಯೋಗ ಪ್ರದರ್ಶನದ ಮೂಲಕ ಮಕ್ಕಳಿಗೆ ಯೋಗ ಮಹತ್ವ ವಿವರಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಆರ್. ರಿಚಿ ರೋಹಿತ್ ಡಿಸೋಜಾ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಹಾಗು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


೯ನೇ ವರ್ಷದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಭದ್ರಾವತಿ ನಗರದ ಬೈಪಾಸ್ ರಸ್ತೆ, ಉಜ್ಜನಿಪುರದಲ್ಲಿರುವ ಡಾನ್ ಬೋಸ್ಕೊ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಆಚರಿಸಲಾಯಿತು.

    ಡಾನ್ ಬೋಸ್ಕೊ ಕೈಗಾರಿಕಾ ತರಬೇತಿ ಸಂಸ್ಥೆ:

    ೯ನೇ ವರ್ಷದ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಗರದ ಬೈಪಾಸ್ ರಸ್ತೆ, ಉಜ್ಜನಿಪುರದಲ್ಲಿರುವ ಡಾನ್ ಬೋಸ್ಕೊ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಆಚರಿಸಲಾಯಿತು.
    ನ್ಯೂಟೌನ್ ಶ್ರೀ ಅನ್ನಪೂರ್ಣೇಶ್ವರಿ ವಿವೇಕಾನಂದ ಯೋಗ ಅಸೋಸಿಯೇಷನ್ ಕೆ.ಎಂ ಮಾಲತೇಶ್ ಯೋಗ ಪ್ರದರ್ಶನದ ಮೂಲಕ ಯೋಗ ಮಹತ್ವ ವಿವರಿಸಿದರು. ಸಂಸ್ಥೆಯ ನಿರ್ದೇಶಕ ರೆವರೆಂಡ್ ಫಾಸ್ಟರ್ ಕ್ರಿಸ್ತುರಾಜ್ ನಿಲಗಲ್ ಅಧ್ಯಕ್ಷತೆ ವಹಿಸಿದ್ದರು.
    ಸಂಸ್ಥೆಯ ವಿದ್ಯಾರ್ಥಿಗಳೊಂದಿಗೆ ಸಮೀಪದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ(ಪಶ್ಚಿಮ)ಯ ವಿದ್ಯಾರ್ಥಿಗಳು ಸಹ ಪಾಲ್ಗೊಂಡು ಯೋಗ ದಿನಾಚರಣೆಯಲ್ಲಿ ಸಂಭವಿಸಿದರು.
    ಪತ್ರಿಕಾ ವಿತರಕ ಮಹಮದ್ ರಫಿ, ಪತ್ರಕರ್ತ ಅನಂತಕುಮಾರ್, ಶಿಕ್ಷಕಿಯರಾದ ಜ್ಯೋತಿ, ಸುಮತಿ ಕಾರಂತ್, ಸವಿತ, ಸಂಸ್ಥೆಯ ಆಡಳಿತಾಧಿಕಾರಿ ಪಾದರ್ ಸೋನಿ ಮ್ಯಾಥ್ಯೋ ಜೆನ್ ಹಾಗು ಸಿಬ್ಬಂದಿ ವರ್ಗದವರಾದ ಕೊಂಡಯ್ಯ, ಲಕ್ಷ್ಮೀ ಹಾಗು ಜಾರ್ಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


೯ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಬಿಜೆಪಿ ಭದ್ರಾವತಿ ತಾಲೂಕು ಮಂಡಲದಿಂದ ಈ ಬಾರಿ ವಸುದೈವ ಕುಟುಂಬಕಂ ಎಂಬ ಧ್ಯೇಯ ಘೋಷದೊಂದಿಗೆ ಆಚರಿಸಲಾಯಿತು. 

    ಬಿಜೆಪಿ ತಾಲೂಕು ಮಂಡಲದಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ :

    ೯ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಬಿಜೆಪಿ ತಾಲೂಕು ಮಂಡಲದಿಂದ ಈ ಬಾರಿ ವಸುದೈವ ಕುಟುಂಬಕಂ ಎಂಬ ಧ್ಯೇಯ ಘೋಷದೊಂದಿಗೆ ಆಚರಿಸಲಾಯಿತು.  ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್  ಅಧ್ಯಕ್ಷತೆ ವಹಿಸಿದ್ದರು.
    ಯೋಗ ಗುರುಗಳಾದ ಚನ್ನಪ್ಪ, ಜಂಗಮಪ್ಪ. ಲಕ್ಷ್ಮೀ, ತೃಪ್ತಿ, ಸತ್ಯ ಮತ್ತು ಆರ್. ಉಮಾಪತಿ ಯೋಗ ಪ್ರದರ್ಶನದ ಮೂಲಕ ಯೋಗ ಮಹತ್ವ ವಿವರಿಸಿದರು. ಶಿವರಾಜ್ ಯೋಗ ಕುರಿತು ಉಪನ್ಯಾಸ ನೀಡಿದರು.
    ಪಕ್ಷದ ಮಂಡಲ ಕಾರ್ಯದರ್ಶಿ ಚನ್ನೇಶ್. ಎಂ. ಮಂಜುನಾಥ್, ಎಂ.ಎಸ್ ಸುರೇಶಪ್ಪ, ಜಯಲಕ್ಷ್ಮಿ, ಸುಲೋಚನಪ್ರಕಾಶ್, ಸರಸ್ವತಿ, ಮಂಜುಳಾ, ಉಷಾ ವೀರಶೇಖರ್, ಶ್ಯಾಮಲ, ಪರಮೇಶ್ವರಪ್ಪ, ರಘು ರಾವ್, ರಾಜಶೇಖರ್, ಚಂದ್ರಪ್ಪ,  ಕಾ.ರಾ ನಾಗರಾಜ್, ಧರ್ಮೋಜಿರಾವ್, ಸಾಗರ್, ಕವಿತಾ ರಾವ್ ಹಾಗೂ ಸಂಘ ಪರಿವಾರದ ಕಾರ್ಯಕರ್ತರು ಹಾಗೂ ಯೋಗ ಆಸಕ್ತರು ಪಾಲ್ಗೊಂಡಿದ್ದರು.


ಭದ್ರಾವತಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಪ್ರತಿವರ್ಷದಂತೆ ಈ ಬಾರಿ ಸಹ ೯ನೇ ವರ್ಷದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ವಿಶೇಷವಾಗಿ ಆಚರಿಸಲಾಯಿತು. ಡಾ. ವೀಣಾ ಎಸ್ ಭಟ್, ಪ್ರಭು ಹಾಗು ಎ.ಕೆ ನಾಗೇಂದ್ರಪ್ಪರನ್ನು ಸನ್ಮಾನಿಸಿ ಗೌರವಿಸಲಾಯಿತು.

ವಿಶ್ವೇಶ್ವರಾಯ ವಿದ್ಯಾಸಂಸ್ಥೆ:

    ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಪ್ರತಿವರ್ಷದಂತೆ ಈ ಬಾರಿ ಸಹ ೯ನೇ ವರ್ಷದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ವಿಶೇಷವಾಗಿ ಆಚರಿಸಲಾಯಿತು.
     ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಡಾ. ಎಸ್.ಪಿ ರಾಕೇಶ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾ ಸಂಸ್ಥೆಯ ಸಂಸ್ಥಾಪಕ, ಕಾರ್ಯಾಧ್ಯಕ್ಷ ಬಿ.ಎಲ್ ರಂಗಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು.
    ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಹಾಗೂ ವಿದ್ಯಾಸಂಸ್ಥೆ ಅಧ್ಯಕ್ಷ  ಬಿ. ಸಿದ್ದಬಸಪ್ಪ, ತಹಸೀಲ್ದಾರ್ ಟಿ.ಜಿ ಸುರೇಶ್ ಆಚಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಭು ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
    ಸ್ತ್ರೀ ರೋಗ ತಜ್ಞೆ, ಯೋಗ ಶಿಕ್ಷಕಿ ಡಾ. ವೀಣಾ ಎಸ್. ಭಟ್ ಮತ್ತು ರಾಷ್ಟ್ರೀಯ ಯೋಗ ಕ್ರೀಡಾಪಟು ಪಾಲಾಕ್ಷಪ್ಪ ಯೋಗ ಪ್ರದರ್ಶನದ ಮೂಲಕ ಯೋಗ ಮಹತ್ವ ವಿವರಿಸಿದರು.  
    ವಿದ್ಯಾಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಶಿಕ್ಷಕ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ನಿರ್ದೇಶಕ ಶಿವಲಿಂಗೇಗೌಡ ನಿರೂಪಿಸಿದರು.  ಶಿಕ್ಷಕರಾದ ಕವಿತಾ ಪ್ರಾರ್ಥಿಸಿ, ಎಂ.ಎಸ್ ಮಂಜುನಾಥ್ ಸ್ವಾಗತಿಸಿ, ರೇಣುಕಪ್ಪ ವಂದಿಸಿದರು.


ಯೋಗ ದಿನಾಚರಣೆ ವಿಶೇಷವಾಗಿ ಆಚರಿಸಲಾಯಿತು. ವಿವೇಕಾನಂದ ಯೋಗ ಟ್ರಸ್ಟ್ ಅಧ್ಯಕ್ಷ ಡಿ. ನಾಗರಾಜ್‌ರವರನ್ನು ಕಾಲೇಜು ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು :

    ನಗರದ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವಣದಲ್ಲಿ ೯ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ವಿಶೇಷವಾಗಿ ಆಚರಿಸಲಾಯಿತು.
    ನಗರದ ಅಂತರಾಷ್ಟ್ರೀಯ ಯೋಗ ಪಟು, ವಿವೇಕಾನಂದ ಯೋಗ ಟ್ರಸ್ಟ್ ಅಧ್ಯಕ್ಷ ಡಿ. ನಾಗರಾಜ್‌ರವರನ್ನು ಕಾಲೇಜು ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಯುವ ಯೋಗಪಟು ಬಿ.ಆರ್ ಧನುಷ್ ಯೋಗ ಪ್ರದರ್ಶನ ನಡೆಸಿಕೊಟ್ಟರು.
    ಪ್ರಾಂಶುಪಾಲ ಡಾ. ಮಂಜುನಾಥ ಸಕ್ಲೇಶ್, ಐಕ್ಯೂಎಸಿ ಸಂಚಾಲಕ ಡಾ.ಟಿ. ಪ್ರಸನ್ನ, ಸಂಚಾಲಕ, ದೈಹಿಕ ಶಿಕ್ಷಣ ನಿರ್ದೇಶಕ ಎಂ.ಡಿ ವಿಶ್ವನಾಥ್ ಮತ್ತು ಅಧ್ಯಾಪಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಶಾರದಾ ಪ್ರಾರ್ಥಿಸಿ,  ಚಂದನ ನಿರೂಪಿಸಿ, ಪ್ರಭಾಕರ್ ವಂದಿಸಿದರು.